ಭಾರತದಂತಹ ಮೂರನೇ ಜಗತ್ತಿನ ದೇಶಗಳಿಂದ ಹಣಕಾಸು ಬಂಡವಾಳ ಗುಳೆ ಹೋಗುತ್ತಿರುವುದು ಈಗ ಕರೋನಾ ವೈರಸ್ ಸೋಂಕಿನಿಂದ ಜರ್ಝರಿತವಾಗಿರುವ ಅಮೇರಿಕಾ ದೇಶಕ್ಕೇ ಎಂಬುದೊಂದು ವಿಪರ್ಯಾಸ. ಈ ವಿಪರ್ಯಾಸವು ಜಾಗತಿಕ ಅರ್ಥವ್ಯವಸ್ಥೆಯ ಆಳದಲ್ಲಿರುವ ವಾಸ್ತವವನ್ನು ತೋರಿಸುತ್ತದೆ. ಕೊರೊನ ಬಿಕ್ಕಟ್ಟಿನಿಂದ ಹೊರ ಬರಲು ಹೊಸ ಎಸ್‌ಡಿಆರ್‌ಗಳನ್ನು ನೀಡುವಂತೆ ಮತ್ತು ಈ ಬಗ್ಗೆ ದೇಶ ದೇಶಗಳ ನಡುವೆ ಅಮೇರಿಕಾ ಬಯಸುವ ತಾರತಮ್ಯವನ್ನು ವಿರೋಧಿಸುವ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ. ಜತೆಗೆ ವಿದೇಶಿ ಸಾಲಗಳ ಮರು ಪಾವತಿಯ ಮುಂದೂಡುವಿಕೆ ಮತ್ತು ವಿದೇಶಿ ಬಂಡವಾಳ ಹೊರ ಹೋಗದಂತೆ ಅದರ ಮೇಲೆ ಮೂರನೆಯ ಜಗತ್ತಿನ ದೇಶಗಳು ನಿಯಂತ್ರಣ ಹೇರಬೇಕಾಗುತ್ತದೆ. ಐಎಂಎಫ್‌ನ ಹಣಕಾಸು ಸಮಿತಿಯ ಸಭೆಯಲ್ಲಿ ಅಮೆರಿಕಾಕ್ಕೆ ತನ್ನ ಸ್ವಾಮಿ-ನಿಷ್ಠೆಯನ್ನು ತೋರಿಸಲಿಕ್ಕಾಗಿ ಮೂರನೆಯ ಜಗತ್ತಿನ ದೇಶಗಳ ಜನತೆಯ ಮತ್ತು ಭಾರತದ ಜನತೆಯ ಹಿತಾಸಕ್ತಿಗಳನ್ನು ಬಲಿ ಕೊಟ್ಟಿರುವ ಹುಸಿ ರಾಷ್ಟ್ರೀಯವಾದಿ ಮೋದಿ ಸರಕಾರದಿಂದ ಇದನ್ನು ನಿರೀಕ್ಷಿಸಬಹುದೇ?
ಇಂದಿನ ದಿನಗಳಲ್ಲಿ ಮೂರನೆಯ ಜಗತ್ತಿನ ದೇಶಗಳಿಂದ ಹಣಕಾಸು ಬಂಡವಾಳವು ಗುಳೆ ಹೋಗುತ್ತಿದೆ. ೨೦೦೮ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರ ಹೊರ ಹರಿದ ಪ್ರಮಾಣಕ್ಕಿಂತಲೂ ದೊಡ್ಡ ಪ್ರಮಾಣದ ಹಣ ಈಗ ಹೊರ ಹರಿಯುತ್ತಿದೆ. ಬಂಡವಾಳದ ಈ ಹೊರ ಹರಿವಿಗಿಂತಲೂ ಬಹಳ ಮುಖ್ಯವಾದ ಅಂಶವೆಂದರೆ, ಮೂರನೆಯ ಜಗತ್ತಿನಿಂದ ಕಾಲು ಕಿತ್ತು ಅಮೇರಿಕಾ ಅಥವಾ ಡಾಲರ್ ಕರೆನ್ಸಿಯ ಆಸ್ತಿಗಳತ್ತ ಚಲಿಸಬೇಕೆಂಬ ಅದರ ಬಯಕೆ. ಈ ವಿದ್ಯಮಾನದಿಂದಾಗಿ ಮೂರನೆಯ ಜಗತ್ತಿನ ದೇಶಗಳ ಕರೆನ್ಸಿಗಳು ಡಾಲರ್ ಎದುರು ಅಪಮೌಲ್ಯಗೊಂಡಿವೆ. ಭಾರತದ ರೂಪಾಯಿ ಇದಕ್ಕೊಂದು ಎದ್ದುಕಾಣುವ ಉದಾಹರಣೆ.
ಇದು ವಿಪರ್ಯಾಸಕರವಾಗಿದೆ. ಏಕೆಂದರೆ, ಹಣಕಾಸು ಬಂಡವಾಳ ಗುಳೆ ಹೋಗುತ್ತಿರುವುದು ಈಗ ಕರೋನಾ ವೈರಸ್ ಸೋಂಕಿನಿಂದ ಜರ್ಝರಿತವಾಗಿರುವ ಅಮೇರಿಕಾ ದೇಶಕ್ಕೆ. ಆದರೆ, ಇದೇ ರೀತಿಯ ಆಶ್ಚರ್ಯಕರ ವಿದ್ಯಮಾನವು ೨೦೦೮ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರವೂ ಘಟಿಸಿತ್ತು. ಆವಾಗಲೂ ಬಿಕ್ಕಟ್ಟಿನ ಕೇಂದ್ರ ಸ್ಥಾನ ಅಮೇರಿಕಾವೇ ಆಗಿತ್ತು. ಆಗ ಅಮೇರಿಕಾದ ಆರ್ಥಿಕ ಬಿಕ್ಕಟ್ಟಿನ ಮೂಲವಾಗಿದ್ದ ವಸತಿ ಸಾಲ ಗುಳ್ಳೆಯಿಂದ ಈ ದೇಶಗಳಿಗೆ ಯಾವ ತೊಂದರೆಯೂ ಆಗಿರಲಿಲ್ಲ. ಆದರೂ, ಈ ದೇಶಗಳಿಂದ ಹಣ ಹೊರ ಹರಿಯಿತು. ಈ ದೇಶಗಳ ಕರೆನ್ಸಿಗಳು ಅಪಮೌಲ್ಯಗೊಂಡವು ಮತ್ತು ಡಾಲರ್ ಮೌಲ್ಯ ವೃದ್ಧಿಸಿತು.
ಈ ವಿಪರ್ಯಾಸವು ಜಾಗತಿಕ ಅರ್ಥವ್ಯವಸ್ಥೆಯ ಆಳದಲ್ಲಿರುವ ವಾಸ್ತವವನ್ನು ತೋರಿಸುತ್ತದೆ. ಅದೇನೆಂದರೆ, ಹಣಕಾಸು ಯಾವಾಗ ಭಯಗ್ರಸ್ತವಾಗುತ್ತದೊ, ಆಗ, ಅದರ ಗೂಡಿಗೆ ಮರಳುವ ಪ್ರವೃತ್ತಿಯು ಅದನ್ನು ಮೂರನೆಯ ಜಗತ್ತಿನ ದೇಶಗಳಿಂದ ಜಾಗ ಖಾಲಿ ಮಾಡಿಸಿ ನಿರ್ದಿಷ್ಟವಾಗಿ ಅಮೇರಿಕಾದತ್ತಲೇ ಎಳೆದೊಯ್ಯುತ್ತದೆ. ಹಣಕಾಸಿನ ದೃಷ್ಟಿಯಿಂದ ಹೇಳುವುದಾದರೆ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಒಂದು ಮೂಲಭೂತ ಏರುಪೇರು ಇದೆ. ಹಾಗಾಗಿ, ಜಾಗತಿಕ ಹಣಕಾಸು ಹರಿವಿನ ಸುಳಿಗೆ ಮೂರನೆಯ ಜಗತ್ತಿನ ದೇಶಗಳು ತಮ್ಮನ್ನು ತಾವೇ ತೆರೆದುಕೊಂಡಿರುವುದು ಭಾರೀ ಅವಿವೇಕತನವೇ ಸರಿ.
ಮೂರನೆಯ ಜಗತ್ತಿನ ದೇಶಗಳಲ್ಲಿಯೇ ಹೂಡಿಕೆಯನ್ನು ಮುಂದುವರೆಸಲು ಬಯಸದ ಅಥವಾ ಅಲ್ಲಿಗೆ ಬಂದು ನೆಲಸಲು ಬಯಸದ ಹಣಕಾಸು ಬಂಡವಾಳವು, ಈ ದೇಶಗಳು ತಮ್ಮ ಆಮದು ಮತ್ತು ಹೊರಗಿನ ಸಾಲ ಮರುಪಾವತಿ ಉದ್ದೇಶಗಳಿಗೆ ವಿದೇಶಿ ವಿನಿಮಯವನ್ನು ಹೊಂದಿಸಿಕೊಳ್ಳುವ ಸಾಮರ್ಥ್ಯವನ್ನೇ ಉಡುಗಿಸುತ್ತದೆ. ಇಂತಹ ಒಂದು ಸಂಕಷ್ಟದಿಂದ ಪಾರಾಗಲು ಇತ್ತೀಚಿನ ಎಣಿಕೆಯಲ್ಲಿ ೧೦೨ ದೇಶಗಳು ಸಹಾಯ ಯಾಚಿಸಿ ಐಎಂಎಫ್‌ನ ಮೊರೆಹೊಕ್ಕಿವೆ. ಕೋರಿಕೆ ಸಲ್ಲಿಸಿರುವ ಎಲ್ಲರನ್ನೂ ಒಂದೇ ರೀತಿಯಲ್ಲಿ ಐಎಂಎಫ್ ಕಾಣುವಂತಿಲ್ಲ ಎಂದು ಐಎಂಎಫ್‌ನ ವ್ಯವಹಾರಗಳಲ್ಲಿ ಹಿಡಿತ ಹೊಂದಿರುವ ಅಮೇರಿಕಾ ಒತ್ತಾಯ ಹೇರಿದೆ. ಹಾಗಾಗಿ, ಅಮೇರಿಕಾಗೆ ಸೊಪ್ಪು ಹಾಕದ ವೆನಿಜುವೇಲಾದ ಮದುರೊ ಸರ್ಕಾರಕ್ಕೆ ಕೊರೊನ ಸಂದರ್ಭದಲ್ಲಿಯೂ ಸಾಲ ಕೊಡಲು ಐಎಂಎಫ್ ನಿರಾಕರಿಸಿತು.
ಸದಸ್ಯ ದೇಶಗಳಿಗೆ ಐಎಂಎಫ್ ಒದಗಿಸುವ ಸಾಲ ಸೌಕರ್ಯದ ಹೊರತಾಗಿ, ಅಮೇರಿಕಾ ತನ್ನದೇ ಆದ, ಒಬ್ಬರಿಗೆ ಒಂದು ಮತ್ತೊಬ್ಬರಿಗೆ ಇನ್ನೊಂದು ಎನ್ನುವ ರೀತಿಯ, ವಿದೇಶಿ ವಿನಿಮಯ ಅದಲು ಬದಲು ಮಾಡಿಕೊಳ್ಳುವ ಏರ್ಪಾಟು ಕಲ್ಪಿಸಿ ಕೊಂಡಿದೆ. ಅದರ ಪ್ರಕಾರ, ಅಮೇರಿಕಾದ ಫೆಡರಲ್ ರಿಸರ್ವ್ (ಫೆಡ್), ಬೇಕಾದ ಕೆಲವು ದೇಶಗಳಿಗೆ ಅವುಗಳ ಕರೆನ್ಸಿಗೆ ಬದಲಾಗಿ ಡಾಲರ್‌ಗಳನ್ನು ಒದಗಿಸುತ್ತದೆ. ಅದನ್ನು ಈ ದೇಶಗಳು ತರುವಾಯ ಬಡ್ಡಿ ಸಮೇತ ಡಾಲರ್‌ನಲ್ಲಿ ಹಿಂತಿರುಗಿಸುತ್ತವೆ. ೨೦೦೮ರ ಬಿಕ್ಕಟ್ಟಿನ ಸಂದರ್ಭದಲ್ಲಿ ನಿರ್ಮಿಸಿಕೊಂಡಿದ್ದ ಈ ಏರ್ಪಾಟನ್ನು ಅಮೇರಿಕಾ ಈಗ ಮತ್ತೊಮ್ಮೆ ಬಳಕೆಗೆ ತಂದಿದೆ. ಯೂರೋಪಿಯನ್ ಯೂನಿಯನ್ ಕೇಂದ್ರ ಬ್ಯಾಂಕ್, ಬ್ರಿಟನ್, ಜಪಾನ್, ಕೆನಡಾ ಮತ್ತು ಸ್ವಿಜ಼ರ್‌ಲ್ಯಾಂಡ್ ದೇಶಗಳ ಕೇಂದ್ರ ಬ್ಯಾಂಕುಗಳಿಗೆ ಎಷ್ಟು ಬೇಕೊ ಅಷ್ಟು ಡಾಲರ್‌ಗಳನ್ನು ಫೆಡ್ ಒದಗಿಸುತ್ತದೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸಿಂಗಾಪುರ, ಬ್ರೆಜಿಲ್, ಮೆಕ್ಸಿಕೊ. ದಕ್ಷಿಣ ಕೊರಿಯಾ, ಸ್ವೀಡನ್, ಡೆನ್ಮಾರ್ಕ್ ಮತ್ತು ನಾರ್ವೆ ದೇಶಗಳಿಗೆ ಬೇಕಾಗುವ ಡಾಲರ್‌ಗಳನ್ನು ಒಂದು ಮಿತಿಗೆ ಒಳಪಟ್ಟು ಒದಗಿಸುವ ಏರ್ಪಾಟನ್ನೂ ಅಮೇರಿಕಾ ಕಲ್ಪಿಸಿದೆ. ಭೇದ ಭಾವದ ಈ ಏರ್ಪಾಟು ಉಳಿದ ದೇಶಗಳ ಅಸಮಾಧಾನಕ್ಕೆ ಕಾರಣವಾಗುತ್ತದೆ.
ಈ ಪರಿಸ್ಥಿತಿಗೆ ವಿರುದ್ಧವಾಗಿ, ಐಎಂಎಫ್ ಎಸ್‌ಡಿಆರ್(ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಅಂದರೆ ಪಡೆಯುವ ವಿಶೇಷ ಹಕ್ಕುಗಳು-ಅನು)ಗಳನ್ನು ನೀಡಿಕೆ ಮಾಡಿ ಅವುಗಳನ್ನು ಸದಸ್ಯ ದೇಶಗಳು ಐಎಂಎಫ್‌ನಲ್ಲಿ ಹೊಂದಿರುವ ಮತದಾನದ ಹಕ್ಕಿನ ಬಲಕ್ಕೆ ಅನುಗುಣವಾಗಿ ಅವುಗಳಿಗೆ ಹಂಚಬೇಕೆಂಬ ಬೇಡಿಕೆ ಬಂದಿದೆ. ಈ ಎಸ್‌ಡಿಆರ್‌ಗಳು ಸದಸ್ಯ ದೇಶಗಳ ವಿದೇಶಿ ವಿನಿಮಯದ ಮೀಸಲಿಗೆ ಪುಷ್ಠಿ ಕೊಡುತ್ತವೆ ಮತ್ತು ದೇಶ ದೇಶಗಳ ನಡುವೆ ಬೇದ ಭಾವ ಮಾಡುವುದಿಲ್ಲ. ಆದರೆ, ಹೊಸ ಎಸ್‌ಡಿಆರ್‌ಗಳ ನೀಡಿಕೆ ಮಾಡಿದಾಗ ಅದರ ೭೦% ಪ್ರಯೋಜನ ಮುಂದುವರೆದ ದೇಶಗಳಿಗೆ ದಕ್ಕುತ್ತದೆ, ಕಡು ಬಡವ ದೇಶಗಳಿಗೆ ಕೇವಲ ೩% ಪ್ರಯೋಜನ ಲಭಿಸುತ್ತದೆ ಎಂಬ ನೆಲೆಯಲ್ಲಿ ಅಮೇರಿಕಾ ಈ ಪ್ರಯತ್ನವನ್ನು ವಿರೋಧಿಸಿದೆ. ಅದರ ಬದಲಾಗಿ, ಹಿಂದೆ ತೈಲ ಆಘಾತದ ಸಂದರ್ಭದಲ್ಲಿ ಮಾಡಿದ್ದ ವಿಶೇಷ ಏರ್ಪಾಟಿನ ರೀತಿಯಲ್ಲಿ ಒಂದು ಹೊಸ ವ್ಯವಸ್ಥೆ ಕಲ್ಪಿಸುವ ಮೂಲಕ ಬಡ ದೇಶಗಳಿಗೆ ಸಹಾಯ ಮಾಡಬಹುದು ಎಂಬುದು ಅಮೇರಿಕಾದ ವರಸೆ.
ಇಂತಹ ಒಂದು ವಿಶೇಷ ವ್ಯವಸ್ಥೆ ಮತ್ತು ಹೊಸ ಎಸ್‌ಡಿಆರ್‌ಗಳ ನೀಡಿಕೆಯ ನಡುವೆ ಮೂರು ಮುಖ್ಯವಾದ ಮತ್ತು ನಿರ್ಣಾಯಕ ವ್ಯತ್ಯಾಸಗಳಿವೆ. ಮೊದಲನೆಯದು, ವಿಶೇಷ ವ್ಯವಸ್ಥೆಯಡಿ ಕೊಡುವ ಸಾಲಗಳು ಅಗತ್ಯವಾಗಿ ತಾರತಮ್ಯತೆಯಿಂದ ಕೂಡಿರುತ್ತವೆ; ಎಸ್‌ಡಿಆರ್‌ಗಳ ನೀಡಿಕೆಯಲ್ಲಿ ಆ ತಾರತಮ್ಯತೆಯ ಪ್ರಶ್ನೆಯೇ ಇಲ್ಲ. ಎರಡನೆಯದು, ವಿಶೇಷ ವ್ಯವಸ್ಥೆಯಡಿ ಕೊಡುವ ಯಾವುದೇ ಸಾಲವನ್ನು ಬಡ್ಡಿ ಸಮೇತ ತೀರಿಸಬೇಕಾಗುತ್ತದೆ; ಎಸ್‌ಡಿಆರ್‌ಗಳನ್ನು ಮರು ಪಾವತಿಸುವ ಅವಶ್ಯಕತೆಯೇ ಇಲ್ಲ. ಮೂರನೆಯದು, ಮರು ಪಾವತಿ ಮಾಡಲೇಬೇಕಾದ ನಿಖರ ಕಾರಣದಿಂದಾಗಿಯೇ ವಿಶೇಷ ವ್ಯವಸ್ಥೆಯಡಿ ಕೊಡುವ ಯಾವುದೇ ಸಾಲದೊಂದಿಗೆ ಅಸಹ್ಯಕರ ಶರತ್ತುಗಳನ್ನು ವಿಧಿಸಲಾಗುತ್ತದೆ; ಎಸ್‌ಡಿಆರ್‌ಗಳ ನೀಡಿಕೆಯಲ್ಲಿ ಶರತ್ತುಗಳು ಇರುವುದೇ ಇಲ್ಲ.
ಈ ಕಾರಣಗಳಿಂದಾಗಿಯೇ ಹೊಸ ಎಸ್‌ಡಿಆರ್‌ಗಳನ್ನು ನೀಡಲು ಐಎಂಎಫ್‌ನ ಹಣಕಾಸು ಸಮಿತಿಯ ಸಭೆಯಲ್ಲಿ ಭಾರಿ ಬೆಂಬಲ ವ್ಯಕ್ತವಾಗಿತ್ತು. ಅದನ್ನು ಅಮೇರಿಕಾ ವಿರೋಧಿಸಿದ್ದದು ನಿರೀಕ್ಷಿತವೇ. ಅದರ ಜೊತೆಯಲ್ಲಿ ಭಾರತವೂ ಹೊಸ ಎಸ್‌ಡಿಆರ್‌ಗಳ ನೀಡಿಕೆಯನ್ನು ವಿರೋಧಿಸಿತ್ತು. ತಾನು ಪ್ರಖರ ರಾಷ್ಟ್ರೀಯವಾದಿ ಎಂದು ಮಾಳಿಗೆಯ ಮೇಲೆ ನಿಂತು ಶಂಖ ಊದುವ ಮತ್ತು ಬಡವರ ಹೀನಾಯ ಪರಿಸ್ಥಿತಿಗಳ ಬಗ್ಗೆ ಮಾತಾಡುವ ನಾಗರಿಕ ಹಕ್ಕುಗಳ ಕಾರ್ಯಕರ್ತರನ್ನು ರಾಷ್ಟ್ರ-ವಿರೋಧಿಗಳೆಂದು ಜೈಲಿಗಟ್ಟುವಲ್ಲಿ ನಿರತವಾಗಿರುವ ಭಾರತದ ಹಿಂದುತ್ವವಾದಿ ಸರ್ಕಾರವು ಅಮೇರಿಕಾದ ಕಾಲಿಗೆ ಬೀಳಲು ಸಿಗುವ ಯಾವುದೇ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಅವಕಾಶ ಸಿಕ್ಕಿದ್ದೇ ತಡ, ಐಎಂಎಫ್‌ನ ಹಣಕಾಸು ಸಮಿತಿಯ ಸಭೆಯಲ್ಲಿ ತನ್ನ ಸ್ವಾಮಿ-ನಿಷ್ಠೆಯನ್ನು ತೋರಿಸುವ ಮೂಲಕ ಮೂರನೆಯ ಜಗತ್ತಿನ ದೇಶಗಳ ಜನತೆಯ ಮತ್ತು ಭಾರತದ ಜನತೆಯ ಹಿತಾಸಕ್ತಿಗಳನ್ನು ಬಲಿ ಕೊಟ್ಟಿತು.
ಕೊರೊನ ಬಿಕ್ಕಟ್ಟಿನಿಂದ ಹೊರ ಬರಲು ಹೊಸ ಎಸ್‌ಡಿಆರ್‌ಗಳನ್ನು ನೀಡುವಂತೆ ಮತ್ತು ಈ ಬಗ್ಗೆ ದೇಶ ದೇಶಗಳ ನಡುವೆ ಅಮೇರಿಕಾ ಬಯಸುವ ತಾರತಮ್ಯವನ್ನು ವಿರೋಧಿಸುವ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಹೊಸ ಎಸ್‌ಡಿಆರ್‌ಗಳು ದೊರೆತರೆ, ಮೂರನೆಯ ಜಗತ್ತಿನ ದೇಶಗಳು ಈಗ ಒಳಗಾಗಿರುವ ಬಿಕ್ಕಟ್ಟಿನಿಂದ ಪಾರಾಗುತ್ತವೆ ಎಂಬ ಭ್ರಮೆಗೂ ಬೀಳುವಂತಿಲ್ಲ. ಈ ದೇಶಗಳ ವಿದೇಶಿ ವಿನಿಮಯದ ಮೀಸಲು ಸಂಗ್ರಹಕ್ಕೆ ಹೊಸ ಎಸ್‌ಡಿಆರ್‌ಗಳ ಮೂಲಕ ಸಂಚಯವಾಗುತ್ತದೆ ಎಂದೇನೂ ಈ ದೇಶಗಳಿಂದ ಈಗ ಹೊರ ಹೋಗುತ್ತಿರುವ ವಿದೇಶಿ ಬಂಡವಾಳವನ್ನು ಹಿಡಿದು ನಿಲ್ಲಸಲಾಗದು. ಭಾರತದ ಬಳಿ ಸುಮಾರು ಐದು ನೂರು ಬಿಲಿಯನ್ ಡಾಲರ್‌ಗಳಷ್ಟು ವಿದೇಶಿ ವಿನಿಮಯದ ಮೀಸಲು ಸಂಗ್ರಹವಿದೆ. ಆದರೆ, ಅಷ್ಟು ದೊಡ್ಡ ಮೀಸಲು ಸಂಗ್ರಹದ ಬಲವಿದ್ದರೂ ದೇಶದಿಂದ ಹೊರ ಹೋಗುತ್ತಿರುವ ಬಂಡವಾಳದ ಹರಿವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ ಮತ್ತು ಡಾಲರ್ ವಿರುದ್ದ ದಿನೇ ದಿನೇ ಕುಸಿಯುತ್ತಿರುವ ರೂಪಾಯಿಯ ಮೌಲ್ಯವನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಇಂತಹ ಪರಿಸ್ಥಿತಿಯಲ್ಲಿ, ಹೊಸ ಎಸ್‌ಡಿಆರ್‌ಗಳು, ಗುಳೆ ಹೋಗುತ್ತಿರುವ ವಿದೇಶಿ ಬಂಡವಾಳಕ್ಕೆ ಬೇಕಾಗುವ ವಿದೇಶಿ ವಿನಿಮಯ ಹೊಂದಿಸಬಹುದಲ್ಲದೆ ಮೂರನೆಯ ಜಗತ್ತಿನ ದೇಶಗಳು ಕೊರೋನಾ ಬಿಕ್ಕಟ್ಟನ್ನು ಎದುರಿಸಲು ನೆರವಾಗುವುದಿಲ್ಲ. ಆದರೂ, ಬರಿಗೈಯಲ್ಲಿರುವುದಕ್ಕಿಂತ ಒಂದಿಷ್ಟು ಹೊಸ ಎಸ್‌ಡಿಆರ್‌ಗಳನ್ನು ಹೊಂದುವುದು ಎಷ್ಟೋ ಉತ್ತಮ. ಹೊಸ ಎಸ್‌ಡಿಆರ್‌ಗಳು, ಕೊನೆಯ ಪಕ್ಷ, ಕೊರೋನಾ ವೈರಸ್ ಎದುರು ಜನತೆ ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವಾಗ, ಅವರ ನೆರವಿಗೆ ಏನೂ ಉಳಿಯದಂತೆ ಈ ದೇಶಗಳ ಅರ್ಥವ್ಯವಸ್ಥೆಗಳು ಕುಸಿದು ಬೀಳುವುದನ್ನು ಮುಂದೂಡುತ್ತವೆ.
ಕೊರೋನಾ ಬಿಕ್ಕಟ್ಟನ್ನು ಎದುರಿಸಲು ಅಧಿಕವಾಗಿ ಎರಡು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗುತ್ತದೆ. ಮೊದಲನೆಯದು, ವಿದೇಶಿ ಸಾಲಗಳ ಮರು ಪಾವತಿಯನ್ನು ಕನಿಷ್ಠ ಒಂದು ವರ್ಷದ ಅವಧಿಗೆ ಅಧಿಕೃತವಾಗಿ ಮುಂದೂಡಬೇಕಾಗುತ್ತದೆ. ಎರಡನೆಯದು, ವಿದೇಶಿ ಬಂಡವಾಳ ಹೊರ ಹೋಗದಂತೆ ಅದರ ಮೇಲೆ ಮೂರನೆಯ ಜಗತ್ತಿನ ದೇಶಗಳು ನಿಯಂತ್ರಣ ಹೇರಬೇಕಾಗುತ್ತದೆ. ಈ ಎರಡೂ ಅಧಿಕ ಕ್ರಮಗಳನ್ನು ಕೈಗೊಂಡಾಗ ಮಾತ್ರ ಹೊಸ ಎಸ್‌ಡಿಆರ್‌ಗಳನ್ನು ಅತ್ಯವಶ್ಯವಾದ ಔಷದಿ ಮತ್ತು ಇತರ ಅವಶ್ಯ ಆಮದುಗಳಿಗೆ ಬಳಸಿಕೊಳ್ಳಬಹುದು. ಅಂತಹ ಒಂದು ಸಂದರ್ಭದಲ್ಲಿ ಮಾತ್ರ ಎಸ್‌ಡಿಆರ್‌ಗಳಿಂದ ಪ್ರಯೋಜನವಾಗುತ್ತದೆ. ಹೇಗೆಂದರೆ, ಹೊಸ ಎಸ್‌ಡಿಆರ್‌ಗಳ ಮೊತ್ತದ ಅನೇಕ ಪಟ್ಟು ಮೌಲ್ಯದ ವಿದೇಶಿ ವಿನಿಮಯವನ್ನು (ಹಣವನ್ನು) ಸರ್ಕಾರವು ಕೊರೋನಾ ವೈರಸ್ ದಾಳಿಯಿಂದ ಜನತೆಯ ಜೀವ ಉಳಿಸಲು ಮತ್ತು ಹೇಳತೀರದ ಕಷ್ಟದಲ್ಲಿರುವ ಜನರಿಗೆ ನೆರವು ಒದಗಿಸಲು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎಸ್‌ಡಿಆರ್‌ಗಳು, ಸರ್ಕಾರವು ಖರ್ಚು ಮಾಡುವ ಸಾಮರ್ಥ್ಯವನ್ನು ಅವುಗಳ ಮುಖ ಬೆಲೆಗೆ ಸಮನಾದಷ್ಟೇ ಮೊತ್ತದಷ್ಟೇ ಹೆಚ್ಚಿಸುವುದಿಲ್ಲ; ಬದಲಿಗೆ, ಅವುಗಳ ಮೊತ್ತದ ಅನೇಕ ಪಟ್ಟು ಮೌಲ್ಯವನ್ನು ವಿತ್ತೀಯ ಕೊರತೆಯ ಮೂಲಕ ಸರ್ಕಾರದ ಖರ್ಚಿನ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧ್ಯತೆ ಹೊಂದಿವೆ.
ಈ ಅಂಶವನ್ನು ಒಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಬಹುದು. ಯಾವುದೇ ಒಂದು ಅರ್ಥವ್ಯವಸ್ಥೆಯಲ್ಲಿ, ಸರ್ಕಾರಿ ವಲಯ, ಖಾಸಗಿ ವಲಯ ಮತ್ತು ಉಳಿದ ವಿಶ್ವದೊಂದಿಗಿನ ವಲಯ ಈ ಮೂರೂ ವಲಯಗಳ ಒಟ್ಟು ಕೊರತೆಯ ಮೊತ್ತವನ್ನು ಕೂಡಿದರೆ ಅದು ಯಾವಾಗಲೂ ಸೊನ್ನೆಯೇ ಆಗಬೇಕು. ಒಂದು ದೇಶದಲ್ಲಿ ಇಂತಹದೇ ಒಂದು ಪರಿಸ್ಥಿತಿ ಇದೆ ಎಂದು ಭಾವಿಸೋಣ. ಈ ದೇಶಕ್ಕೆ ಈಗ ೩೦೦ ಎಸ್‌ಡಿಆರ್‌ಗಳನ್ನು ದೊರಕಿಸಲಾಗಿದೆ. ಅದೆಲ್ಲವೂ ಅಧಿಕ ಆಮದುಗಳಿಗೆ ದೊರಕಿದರೆ, (ಈ ದೇಶದ ರಫ್ತುಗಳು ಮತ್ತು ಖಾಸಗಿ ವಲಯದ ಹೂಡಿಕೆ ಯಥಾ ಸ್ಥಿತಿಯಲ್ಲಿವೆ ಎಂದುಕೊಳ್ಳೋಣ) ಮತ್ತು ಆಮದುಗಳ ಹಾಗೂ ಉತ್ಪತ್ತಿಯಾದ ಅಧಿಕ ವರಮಾನಗಳ ನಡುವಿನ ಅನುಪಾತವು ೧೫% ಇದ್ದರೆ ಮತ್ತು ಖಾಸಗಿ ಉಳಿತಾಯ ಹಾಗೂ ಉತ್ಪತ್ತಿಯಾದ ಅಧಿಕ ವರಮಾನಗಳ ನಡುವಿನ ಅನುಪಾತವು ೨೫% ಇದ್ದರೆ, ಆಗ, ಸರ್ಕಾರವು ಈ ೩೦೦ ಎಸ್‌ಡಿಆರ್‌ಗಳ ಆಧಾರದ ಮೇಲೆ ೮೦೦ ಎಸ್‌ಡಿಆರ್‌ಗಳ ಮೌಲ್ಯಕ್ಕೆ ಸಮನಾಷ್ಟು ಮೊತ್ತದ ವಿತ್ತೀಯ ಕೊರತೆಯಲ್ಲಿರಬಹುದು. ಈ ೮೦೦ ಎಸ್‌ಡಿಆರ್‌ಗಳಷ್ಟು ವಿತ್ತೀಯ ಕೊರತೆಯ ಮೂಲಕ ಸರ್ಕಾರವು ೨೦೦೦ ಎಸ್‌ಡಿಆರ್‌ಗಳಷ್ಟು ಅಧಿಕ ವರಮಾನ ಪಡೆದಿರುತ್ತದೆ. ಅದರಲ್ಲಿ, ಅಧಿಕ ಆಮದುಗಳು ೩೦೦ ಎಸ್‌ಡಿಆರ್‌ಗಳಷ್ಟು ಇರುತ್ತವೆ ಮತ್ತು ದೇಶಕ್ಕೆ ದೊರಕಿದ ೩೦೦ ಎಸ್‌ಡಿಆರ್‌ಗಳು ಈ ಆಮದುಗಳಿಗೆ ಸಾಕಾಗುತ್ತವೆ.
ಕ್ರಿಸ್ತಲೀನಾ ಜಾರ್ಜಿಯೇವಾ (ಐಎಂಎಫ್‌ನ ಎಂ.ಡಿ) ಅವರು ಮೂರನೆಯ ಜಗತ್ತಿನ ದೇಶಗಳಿಗೆ ಹೊಸ ಎಸ್‌ಡಿಆರ್‌ಗಳನ್ನು ನೀಡುವುದರ ಪರವಾಗಿದ್ದರು. ಅಮೇರಿಕಾ ಅದಕ್ಕೆ ಅಡ್ಡಗಾಲು ಹಾಕಿತು. ಆದರೆ, ವಿದೇಶಿ ಸಾಲಗಳ ಮರು ಪಾವತಿಯ ಮುಂದೂಡುವಿಕೆ ಮತ್ತು ವಿದೇಶಿ ಬಂಡವಾಳ ಹೊರ ಹೋಗದಂತೆ ಅದರ ಮೇಲೆ ಮೂರನೆಯ ಜಗತ್ತಿನ ದೇಶಗಳು ನಿಯಂತ್ರಣ ಹೇರದ ಹೊರತು, ಹೊಸ ಎಸ್‌ಡಿಆರ್‌ಗಳಷ್ಟರಿಂದಲೇ ಪ್ರಯೋಜನ ವಾಗುವುದಿಲ್ಲ.
ಅನು: ಕೆ.ಎಂ.ನಾಗರಾಜ್