ಹಲವು ‘ಬಲಿಷ್ಠ’ ನಾಯಕರುಗಳ ಬಲಹೀನತೆ: ಕೋವಿಡ್ 19 ಬಿಕ್ಕಟ್ಟಿನಲ್ಲಿ ಬಯಲಿಗೆ

ಈ ಮೂರೂ ‘ ಬಲಿಷ್ಠ’ ನಾಯಕರು ಹಲವು ಸಾಮ್ಯತೆ ಹೊಂದಿದ್ದಾರೆ. ಈ ಮೂವರೂ ಸಹ ಕೋವಿಡ್ 19 ರ ಅಪಾಯವನ್ನ ಗಂಭೀರ ವಾಗಿ ಪರಿಗಣಿಸಲಿಲ್ಲ.  ಈ ಬಲಿಷ್ಠ ನಾಯಕರ ಧೋರಣೆಯಿಂದಾಗಿಯೇ  ಇಲ್ಲೀವರೆಗೆ ಬ್ರೆಜಿಲ್ ನಲ್ಲಿ 54, 043 ಕೋವಿಡ್ 19 ಕೇಸ್ ಗಳು ಮತ್ತು 3, 704 ಸಾವುಗಳು ಸಂಭವಿಸಿರೋದು; 1, 43, 464 ಸೋಂಕಿತರು ಇದ್ದು,  ಇವರಲ್ಲಿ 19, 506 ಜನ ಸಾವನ್ನಪ್ಪಿರೋದು, ಮತ್ತು ವಿಶ್ವದಲ್ಲೇ ಅತ್ಯಂತ  ಶ್ರೀಮಂತ, ಬಲಾಢ್ಯ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಈ ಹೊತ್ತಿಗೆ  8, 26, 024 ಕೇಸ್ ಗಳು, ಸುಮಾರು 75, 405 ಸಾವುಗಳು ಆಗಿರುವುದು. ಮತ್ತೊಂದು ಅಂಶ ಗಮನಿಸಿ. ಈ ಮೂವರು ಬಲಿಷ್ಠ ನಾಯಕರು ಜನರೆದುರು ವಿವೇಚನಾರಹಿತ ಹಾಗೂ ಅವೈಜ್ಞಾನಿಕ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಹುಸಿ ನಗೆಯನ್ನೂ ಬೀರುತ್ತಾರೆ. ಆದರೆ, ಖಾಸಗಿ ಬಂಡವಾಳದ ಹಿತಾಸಕ್ತಿಯ ಪ್ರಶ್ನೆ ಬಂದಾಗ,  ಇವರುಗಳು ಪೂರ್ಣ ಶ್ರದ್ಧೆ, ನಿಗಾ ವಹಿಸುತ್ತಾರೆ ಮತ್ತು ತಮ್ಮ ಅಣಕ ನಿಯಂತ್ರಿಸುತ್ತಾರೆ.

                                                                                                                    ಶೃಂಶನಾ

ಒಬ್ಬ ಏಕೈಕ ಬಲಿಷ್ಠ ನಾಯಕನಿದ್ದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂದು ಹಲವರು ನಂಬಿದ್ದಾರೆ.  ಯಾರಿಗೂ ತಲೆ ಬಾಗುವುದಿಲ್ಲ ಎಂದು ಹೇಳುವವನು, ಎಲ್ಲ ವಿರೋಧಿಗಳನ್ನು ಸೋಲಿಸುವ ವನು,  ಎಲ್ಲರಿಗಿಂತಲೂ ಹೆಚ್ಚು ರಾಷ್ಟ್ರಭಕ್ತ ಮತ್ತು ಪ್ರತಿಯೊಬ್ಬ ದ್ರೋಹಿಯನ್ನು  ಗುರುತಿಸುವವನು,  ಇತ್ಯಾದಿ ಇತ್ಯಾದಿ..

 ಇಂದು ವಿಶ್ವದಲ್ಲಿ ಇಂತಹ ಅನೇಕ ನಾಯಕರು ಗಳಿದ್ದಾರೆ. ಕೆಲವರ್ಷಗಳ ಹಿಂದೆ, ವಿಶ್ವಶಾಂತಿ ಮತ್ತು ಪ್ರಜಾಸತ್ತೆಯ ಬಗ್ಗೆ ಮಾತನಾಡುವವರನ್ನು ಹೊಗಳಲಾಗುತ್ತಿತ್ತು.  ಆದರೆ, ಈಗ ಈ ಮೌಲ್ಯ ಗಳು ಅವಗಣನೆ ಯಾಗುತ್ತಿದೆ, ಈ ನಾಯಕರುಗಳು ವಿನಾಕಾರಣ ಉದಾರವಾಗಿದ್ದರು ಎಂದು ನಂಬಲಾಗುತ್ತಿದೆ,  “ಬಲಿಷ್ಠ ನಾಯಕರ” ಅಗತ್ಯತೆ ಕುರಿತು ಪ್ರಚಾರ ನಡೆದಿದೆ.

ಕೆಲವು “ಬಲಿಷ್ಠ ನಾಯಕರು” ಗಳ ಕೊಡುಗೆ ಯನ್ನು ಪರಾಮರ್ಶಿಸಲು  ಕೊರೊನ ಬಿಕ್ಕಟ್ಟು ಸರಿಯಾದ ಸಂದರ್ಭ,  ಏನಂತೀರಾ?

ಇಂದಿನ ಸಂದರ್ಭ ದಲ್ಲಿ ಯಾರಾದರೂ ಮೂವರು ಬಲಿಷ್ಠ ನಾಯಕರು ಗಳನ್ನು ನೆನಪಿಸಿಕೊಳ್ಳೋಣ. ಆ ದೇಶಗಳ ಅಧಿಕಾರದ ಗದ್ದುಗೆ ಹಿಡಿದಿರುವವರು ಅವರು.

ಮೊದಲನೆಯವರು, ಬ್ರೆಜಿಲ್ ನ ಅಧ್ಯಕ್ಷರಾದ ಜೈರ್ ಬೊಲ್ಸೋನಾರೋ. ತುಂಬಾ ಜನ ಇವ್ರ ಹೆಸ್ರು ಕೇಳಿರಲ್ಲ. ಇವ್ರು  ನಮ್ಮ  ದೇಶದ ಗಣರಾಜ್ಯೋತ್ಸವ ದಿನದಂದು ವಿಶೇಷ ಅತಿಥಿ ಯಾಗಿ ಬಂದಿದ್ರು ಕಣ್ರೀ. ನೆನಪಾಯ್ತಾ..  ಹೋಗ್ಲಿ ಬಿಡಿ. ಅವ್ರ ಬಗ್ಗೆ ಏನು ಹೇಳ್ತಾರೆ ಅನ್ನೋದನ್ನ ಪಕ್ಕಕ್ಕಿಟ್ಟು ಕೋವಿಡ್ 19 ಸಾಂಕ್ರಾಮಿಕ ಬಂದಾಗ ಇವ್ರ ಧೋರಣೆ ಹೇಗಿತ್ತು ಅಂತ ನೋಡೋಣ್ವಾ?

 ಇನ್ನೊಬ್ರು ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್. ಇವರು ಬ್ರೆಕ್ಸಿಟ್ ವಿಷಯದ ಮೇಲೆ ಉಪ ಚುನಾವಣೆ ನಡೆಸಿ, ಗೆಲುವನ್ನೂ ಪಡೆದರು. ಅಲ್ಲಿನ ವಿರೋಧ ಪಕ್ಷವಾದ  ಲೇಬರ್ ಪಕ್ಷ ವು ಈ ಚುನಾವಣೆ ಗೆ ಮುಂಚೆ ಭಾರತ ದ ಸಿ ಎ ಎ-ಎನ್ ಪಿ ಆರ್ -ಎನ್ ಆರ್ ಸಿ ಯನ್ನು ವಿರೋಧಿಸಿತ್ತು.  ಭಾರತ ಸರ್ಕಾರಕ್ಕೆ ಇದು ಸಹಿಸಕ್ಕೆ  ಆಗ್ಲಿಲ್ಲ ಮತ್ತು ಈ ಸರ್ಕಾರ ನ ಬೆಂಬಲಿಸೋ  ಬ್ರಿಟನ್ ನಲ್ಲಿರೋ ಭಾರತೀಯ ಮೂಲದ ಜನ ತಮ್ಮ ಮನ -ಧನ ಕೊಟ್ಟು ಜಾನ್ಸನ್ ಗೆಲ್ಲುವಂತೆ ಮಾಡಿದ್ರು.

ಮೂರನೇ ಯವ್ರು ಅಮೇರಿಕಾ ದ ಅಧ್ಯಕ್ಷ ರಾಗಿರೋ  ಡೊನಾಲ್ಡ್ ಟ್ರಂಪ್.  ಇವ್ರಿಗೆ ನಮ್ ಪ್ರಧಾನ ಮಂತ್ರಿ ಅಂದ್ರೆ ಇಷ್ಟ. ನಮ್ ಪ್ರಧಾನ ಮಂತ್ರಿಗಳು ಮತ್ತವರ ಸರ್ಕಾರ ಫೆಬ್ರವರಿ ಪೂರ್ತಿ ಇವ್ರನ್ನ ಭಾರತಕ್ಕೆ ಸ್ವಾಗತಿಸಕ್ಕೇನೆ ತಯಾರಿ ಮಾಡಿದ್ರು.

ಈ ಮೂರೂ ಬಲಿಷ್ಠ  ನಾಯಕರು ಹಲವು ಸಾಮ್ಯತೆ ಹೊಂದಿದ್ದಾರೆ. ಈ ಮೂವರೂ ಸಹ ಕೋವಿಡ್ 19 ರ ಅಪಾಯವನ್ನ ಗಂಭೀರ ವಾಗಿ ಪರಿಗಣಿಸಲಿಲ್ಲ.

ಬ್ರೆಜಿಲ್ ನಲ್ಲಿ ಒಂದು ಸಾವಿರ ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು, ನೂರಾರು ಜನ ಸಾವನ್ನು ಅಪ್ಪಿದ್ದ ಸಮಯದಲ್ಲಿ ಮಾರ್ಚ್ 24ಕ್ಕೆ ಬೊಲ್ಸನಾರೋ  ಆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ್ರು. ಏನಂದಿದ್ರು ಗೊತ್ತಾ -ಈ  ಕ್ವಾರಂಟೈನ್, ಪ್ರವಾಸ ನಿರ್ಬಂಧ ಎಲ್ಲಾ ಹುಚ್ಚುತನ, ಜನ ಅವ್ರವ್ರ ಕೆಲ್ಸಕ್ಕೆ, ಶಾಲೆಗೆ ಹೋಗಬೋದು ಅಂತ !! ಅವ್ರ ಸರ್ಕಾರ ದ ಆರೋಗ್ಯ ಇಲಾಖೆ ಎಚ್ಚರಿಕೆ ಕೊಟ್ಟಿದ್ರೂ ಸಹ,   ಬೊಲ್ಸನಾರೋ ಸಾಮಾಜಿಕ ಅಂತರ ಕಾಪಾಡಿಕೊಳ್ಳೊದೇನೂ ಬೇಡಾ, ಇದೊಂದು “ಸಣ್ಣ ಫ್ಲೂ “ಅಷ್ಟೇನೆ, ವೈರಸ್ ಅಲ್ಲ ಅಂದ್ರು. ಆಮೇಲೆ, ಏಪ್ರಿಲ್ 17ಕ್ಕೆ ತಮ್ಮ ಆರೋಗ್ಯ ಮಂತ್ರಿ ಯನ್ನ ತೆಗೆದು ಹಾಕಿ,  ಖಾಸಗಿ ಅರೋಗ್ಯ ಸಂಸ್ಥೆ ಗಳಲ್ಲಿ ಹಿತಾಸಕ್ತಿ ಹೊಂದಿರೋ ವ್ಯಕ್ತಿ ಯನ್ನ ಹೊಸ ಮಂತ್ರಿ ಯಾಗಿ ಮಾಡಿದ್ರು.  ಆಗ್ಲೂ ಸಹ ಬೊಲ್ಸನಾರೋ, ಉದ್ದಿಮೆಗಳು ನಡೆಯುವುದು ಮುಖ್ಯ ನೇ ವಿನಃ ನಿರ್ಬಂಧ ವಿಧಿಸೋದು ಅಲ್ಲ ಅಂದಿದ್ರು.

ಈ ಬಲಿಷ್ಠ ನಾಯಕರ ಧೋರಣೆಯಿಂದಾಗಿಯೇ  ಇಲ್ಲೀವರೆಗೆ ಬ್ರೆಜಿಲ್ ನಲ್ಲಿ 54, 043 ಕೋವಿಡ್ 19 ಕೇಸ್ ಗಳು ಮತ್ತು 3, 704 ಸಾವುಗಳು ಸಂಭವಿಸಿರೋದು.

ಈಗ ಬ್ರಿಟನ್ ನಲ್ಲಿ ಏನಾಯ್ತು ಅಂತ ನೋಡೋಣ್ವಾ?  ತಾವು ಗೆದ್ದ ಮೇಲೆ, ಪ್ರಧಾನಿ ಬೋರಿಸ್ ಜಾನ್ಸನ್ ರಜೆ ಮೇಲೆ ಹೋದ್ರು.  ವಾಪಸ್  ಬಂದಾಗ, ಚೀನಾ ದಲ್ಲಿ ಮೊದಲ ಕೋವಿಡ್ 19 ಕೇಸ್ ಬಂದಿತ್ತು.  ಇವ್ರು ಇದ್ರ ಬಗ್ಗೆ ತಲೆ ಕೆಡಿಸಿಕೊಳ್ದೆ, ಸಂಪುಟ ವಿಸ್ತರಣೆ ಹಾಗೂ ಬ್ರೆಕ್ಸಿಟ್ ನಿಂದ ಹೊರ ಹೋಗಿರೋ ಸಂಭ್ರಮ ಆಚರಣೆ ತಯಾರಿ ಮಾಡ್ತಿದ್ರು. ಇಂಗ್ಲೆಂಡ್ ನಲ್ಲಿ ಜನವರಿ 29ಕ್ಕೆ ಮೊದಲ ಕೇಸ್ ಬಂತು,  ಜಾಸ್ತಿ ಆಗ್ತಾ ಹೋಯ್ತು, ಆದ್ರೂ ಇವ್ರು ಯೋಚನೆ ಮಾಡ್ಲಿಲ್ಲ. ಫೆಬ್ರವರಿ 3ನೇ ತಾರೀಕು, ರಾಷ್ಟ್ರ ಉದ್ದೇಶಿಸಿ ಮಾತನಾಡೋವಾಗ, ಕೋವಿಡ್ 19 ರ ಅಪಾಯದ ಬಗ್ಗೆ ಆತಂಕ ಪಡೋದೇನು ಬೇಡಾ, ಆರ್ಥಿಕ ಪರಿಸ್ಥಿತಿ ನ ಸುಧಾರಿಸಕ್ಕೆ ಕ್ರಮ ತೆಗೆದುಕೊಳ್ಳೋದು ಮುಖ್ಯ ಅಂದ್ರು.

ಫೆಬ್ರವರಿ ಪೂರ್ತಿ ಈ ವೈರಸ್, ಪ್ರಮುಖ ವಾಗಿ ಹಿರಿಯ ನಾಗರಿಕರ ನಡುವೆ  ತುಂಬಾ ಹರಡ್ತಾ  ಇತ್ತು.  ಆದ್ರೆ, ಮಾರ್ಚ್ 7 ಕ್ಕೆ ಇಂಗ್ಲೆಂಡ್ -ವೇಲ್ಸ್ ಮಧ್ಯೆ ನಡೆದ rugby ಪಂದ್ಯ ನೋಡಕ್ಕೆ ಜಾನ್ಸನ್ ಹೋದ್ರು. ಬರೀ ನೋಡಿದ್ದಷ್ಟೇ ಅಲ್ಲ, ಅಲ್ಲಿದ್ದವರಿಗೆಲ್ಲ ಹಸ್ತಲಾಘವ ಮಾಡಿದ್ರು ಕಣ್ರೀ.  ಹಸ್ತಲಾಘವ ಮೂಲಕ ಈ ರೋಗವನ್ನ ಹೇಗೆ ಓಡಿಸಬಹುದು ಅಂತಾನೂ ಗೊತ್ತಿತ್ತಂತೆ ಅವ್ರಿಗೆ !  ಆಮೇಲೆ, ಒಂದು ಹಬ್ಬದ ಸಂದರ್ಭದಲ್ಲಿ ಎರಡೂವರೆ ಲಕ್ಷ ಓಟಗಾರ ರನ್ನ ಭಾಗವಹಿಸಕ್ಕೆ ಅನುಮತಿ ನೂ ಕೊಟ್ಟಿದ್ರು.

ಯಾವಾಗ ಸಾವಿನ ಪ್ರಮಾಣ ಜಾಸ್ತಿ ಆಗಕ್ಕೆ ಶುರು ಆಯ್ತೋ ಮತ್ತು ದೇಶದ ಆರೋಗ್ಯ ಮಂತ್ರಿಗಳೇ ಈ ವೈರಸ್ ಗೆ ಸಿಲುಕುದ್ರೊ, ಆಗ ಸರ್ಕಾರ ದ ಧೋರಣೆ ಸ್ವಲ್ಪ ಬದಲಾಯ್ತು, ಆದ್ರೆ ಸಮಯ ಮೀರಿತ್ತು.  ಅದ್ಭುತ ವಾಗಿದ್ದ ರಾಷ್ಟ್ರೀಯ ಅರೋಗ್ಯ ಯೋಜನೆ (NHS ) ಯನ್ನು ಎಲ್ಲಾ ಸರ್ಕಾರಗಳೂ ಖಾಸಗಿ ಬಂಡವಾಳಕ್ಕೆ ಒತ್ತು ಕೊಟ್ಟು ದುರ್ಬಲ ಗೊಳ್ಸಿದ್ರು. ಹೀಗಾಗಿ, ಈ ಸಾಂಕ್ರಾಮಿಕ ಎದುರಿಸಲು ಸಾಮಗ್ರಿ, ಸಂಪನ್ಮೂಲ ಕೊರತೆ ಯಾಗಿತ್ತು.  ಚಿಕಿತ್ಸೆ ಯೇ ದೊರೆಯದ ಪರಿಸ್ಥಿತಿ ಬಂತು. ಜಾನ್ಸನ್ ರವರ ಗರ್ಭಿಣಿ ಗೆಳತಿ ಗೆ ಸೋಂಕು ಬಂತು. ಜಾನ್ಸನ್ ರವರಿಗೇ ಸೋಂಕು ಮುಟ್ಟಿತು. ತಾವೂ ಕಡೆಗಣಿಸಿದ್ದ NHS ಚಿಕಿತ್ಸೆ ಯನ್ನೇ ಅವರು ಪಡೆದು, ಈಗ ನನ್ನ ಪ್ರಾಣ ಉಳಿದಿದ್ದು NHS ನಿಂದ ಅಂತ ಹೇಳಿದ್ದಾರೆ.

ಈ ಹೊತ್ತಿಗೆ, ಆ ದೇಶದಲ್ಲಿ 1, 43, 464 ಸೋಂಕಿತರು ಇದ್ದು,  ಇವರಲ್ಲಿ 19, 506 ಜನ ಸಾವನ್ನಪ್ಪಿದ್ದಾರೆ.

ಇನ್ನು ಅಮೇರಿಕಾ.  ವಿಶ್ವದಲ್ಲೇ ಅತ್ಯಂತ  ಶ್ರೀಮಂತ, ಬಲಾಢ್ಯ ರಾಷ್ಟ್ರ ಅಲ್ವಾ?  ವಿಶ್ವದಾದ್ಯಂತ ಇದರ ಮಿಲಿಟರಿ base ಗಳಿವೆ. ಇಡೀ ಭೂಖಂಡವನ್ನೇ ಧ್ವಂಸ ಮಾಡುವಷ್ಟು ಶಸ್ತ್ರಗಳು, ಮಿಲಿಟರಿ ಉಪಕರಣ ಇವೆ. ಅಧ್ಯಕ್ಷ ಟ್ರಂಪ್ ಸಹ ತಾನು ವಿಶ್ವದ ಅತಿ ಬಲಿಷ್ಠ ಮತ್ತು ಪ್ರಭಾವೀ ನಾಯಕ ಎಂದು ಹೇಳಿಕೊಳ್ಳುತ್ತಲೇ ಇರುತ್ತಾರೆ. ಆದರೆ ಈ ಕೋರೋನ ವೈರಸ್ ಬಂದು, ಈ ಬಂಡವಾಳ ಶಾಹಿ ವ್ಯವಸ್ಥೆ ಯ ದೌರ್ಬಲ್ಯ ಗಳನ್ನು  ಮುಚ್ಚಿದ್ದ ಪರದೆ ಯನ್ನು ಕಿತ್ತೆಸೆದಿದೆ.

ಟ್ರಂಪ್ ಸಹ ಕೋರೋನ ವೈರಸ್ ಬಗ್ಗೆ ಅವೈಜ್ಞಾನಿಕ ಧೋರಣೆ ಹೊಂದಿದ್ದರು. ಮಾರ್ಚ್ ಮೊದಲ ವಾರದಲ್ಲಿ 149 ಕೇಸ್ ಗಳು ಬಂದಿದ್ದರೂ, 11ಜನ ಸತ್ತಿದ್ದರೂ ಜನರೆದುರು ಈ ಬಿಕ್ಕಟ್ಟಿನ ನೈಜ ಚಿತ್ರಣ ನೀಡಲಿಲ್ಲ.  ಅಲ್ಲಿನ ತಜ್ಞರು ಟೆಸ್ಟಿಂಗ್ ನ ಅವಶ್ಯಕತೆ ಯನ್ನು ಒತ್ತಿ ಹೇಳಿದ್ರೂ, ಟ್ರಂಪ್ ಅದನ್ನ ಕೇಳದೆ, ಯಾವುದೋ ಒಂದು ಮಾಂತ್ರಿಕ ಔಷಧಿ ಸಿಗುತ್ತೆ ಎಂದು ಜನತೆಗೆ ಹೇಳ್ತಿದ್ರು!

ಪಾಸಿಟಿವ್ ಕೇಸ್ ಗಳು, ಸಾವುಗಳು ಹೆಚ್ಚುತ್ತಲೇ ಹೋಗ್ತಿದ್ರು, ಟ್ರಂಪ್ ಪ್ರತಿಕ್ರಿಯೆ ಬದಲಾಗಲಿಲ್ಲ.  ಮೊದಲು  ಅವರು ಇದು ಚೀನಾ ಪಿತೂರಿ ಎಂದು ಹೇಳುತ್ತಾ,  ಚೀನಾ ವೈರಸ್ ಅಂತ ಹೇಳಕ್ಕೆ ಶುರು ಮಾಡಿದ್ರು.  ಜೊತೆಗೆ, ಅಮೇರಿಕಾ ಗೆ ಬರ್ತಿದ್ದ  ವಲಸಿಗರ ಮೇಲೆ ದಾಳಿ  ಜಾಸ್ತಿ ಮಾಡಿದ್ರು. ಈ ನಡುವೆ, ಅಮೇರಿಕಾ ರಾಜ್ಯಗಳು ಫೆಡರಲ್ ದುಡ್ಡು ಸಹಾಯ ಕೇಳೋ ಹೊತ್ತಿಗೆ, ವೈರಸ್ ಗೆ ಸಿಲುಕಿದ ಸಾವಿನ ಪ್ರಮಾಣ 27, 000 ದಾಟಿತ್ತು. ಈಗ ಟ್ರಂಪ್ ಅಮೇರಿಕಾ ಹಾಗೂ ಮೆಕ್ಸಿಕೋ ಮಧ್ಯೆ ಗೋಡೆ ನಿರ್ಮಿಸಲು 5 ದಶ ಕೋಟಿ ಡಾಲರ್ ಮೊತ್ತದ ಗುತ್ತಿಗೆ ಯನ್ನು  ರಾಜಕೀಯ ವಾಗಿ ಸಂಬಂಧ ಹೊಂದಿರುವ ಸಂಸ್ಥೆ ಗೆ ನೀಡಿದ್ದಾರೆ.

ಇಷ್ಟೇ ಅಲ್ಲಾರೀ, ಇಷ್ಟೊಂದು ಸಾವು, ನೋವುಗಳು ಹರಡ್ತಾ ಇದ್ರೂ, ಟ್ರಂಪ್ ಜನಕ್ಕೆ ಓಡಾಡಿಕೊಂಡಿರಿ ಅಂತಿದ್ರು,  ಉದ್ದಿಮೆಗಳಿಗೆ ಮತ್ತು ವ್ಯವಹಾರ ಕ್ಕೆ ನಿರ್ಬಂಧ ಇರಬಾರದು ಅಂತಿದ್ರು. ಕಳೆದ ವಾರ ನಿರ್ಬಂಧ ಗಳ ವಿರುದ್ಧ ಡೆಮೋಕ್ರಾಟ್ ಪಕ್ಷದ ವರಿಂದ 3 ರಾಜ್ಯಗಳಲ್ಲಿ ಪ್ರತಿಭಟನೆ ನೂ ನಡೀತು !!

ಇನ್ನೊಂದು ಅಂಶ ಗಮನಿಸಿ. ಟ್ರಂಪ್ ನ ಬೆಂಬಲಿಸೋ ಕ್ರಿಶ್ಚಿಯನ್ ಮೂಲಭೂತವಾದಿಗಳು ಸಹ ಈ ಪ್ರತಿಭಟನೆಲಿ ಇದ್ರು. ಇದಾದ ಮೇಲೆ  ಟ್ರಂಪ್ ಒಂದು ಕಡೆ ಜನರ ಸ್ವಾತಂತ್ರ ದ ಬಗ್ಗೆ ಮಾತನಾಡಿದ್ರೆ, ಇನ್ನೊಂದು ಕಡೆ ಸಾಂಕ್ರಾಮಿಕ ತಡೆ ಬಗ್ಗೆ ಹೇಳ್ತಿದ್ರು ! ಒಟ್ಟಿನಲ್ಲಿ, ಇವರ ನಡೆ, ಧೋರಣೆಯಿಂದಾಗಿ, ಈ ಹೊತ್ತಿಗೆ ಆ ದೇಶದಲ್ಲಿ 8, 26, 024 ಕೇಸ್ ಗಳು, ಸುಮಾರು 75, 405 ಸಾವುಗಳು ಆಗಿವೆ.

ಮತ್ತೊಂದು ಅಂಶ ಗಮನಿಸಿ. ಈ ಮೂವರು ಬಲಿಷ್ಠ ನಾಯಕರು ಜನರೆದುರು ವಿವೇಚನಾರಹಿತ ಹಾಗೂ ಅವೈಜ್ಞಾನಿಕ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಹುಸಿ ನಗೆಯನ್ನೂ ಬೀರುತ್ತಾರೆ. ಆದರೆ, ಖಾಸಗಿ ಬಂಡವಾಳದ ಹಿತಾಸಕ್ತಿಯ ಪ್ರಶ್ನೆ ಬಂದಾಗ,  ಇವರುಗಳು ಪೂರ್ಣ ಶ್ರದ್ಧೆ, ನಿಗಾ ವಹಿಸುತ್ತಾರೆ ಮತ್ತು ತಮ್ಮ ಅಣಕ ನಿಯಂತ್ರಿಸುತ್ತಾರೆ.

ಕೊರೊನ ಬಿಕ್ಕಟ್ಟಿನ ನಡುವೆಯೂ ಬೊಲ್ಸನಾರೋ ಅಮೆಝನ್ ಅರಣ್ಯ ಗಳ ಮೇಲೆ ದಾಳಿ ಜಾಸ್ತಿ ಮಾಡಿದ್ದಾರೆ. ಮಾನವ ಜನಾಂಗ ಕ್ಕೆ ಭವಿಷ್ಯ ದಲ್ಲಿ ಅವಶ್ಯವಿದ್ದ ವನರಾಶಿಯನ್ನು ಭಸ್ಮ ಮಾಡಲಾಗಿದೆ. ಅಲ್ಲಿರುವ ಸಾವಿರಾರು ಗುಡ್ಡಗಾಡು ಜನರ ಜೀವ, ಜೀವನ ಮೂರಾಬಟ್ಟೆ ಯಾಗಿದೆ. ಇದಕ್ಕೆ ಇವರು ಕೊಡ್ತಿರೋ ಜಾಣ ಪ್ರತಿಕ್ರಿಯೆ  ಏನು ಗೊತ್ತಾ?  ಹೀಗೆ ನಾಶ ಮಾಡೋ ಮೂಲಕ ಅರಣ್ಯ ವಾಸಿಗಳು ಪಳೆಯುಳಿಕೆ ಜೀವಿಗಳ ಥರ ಇರ್ದೆ ಇರೋ ಹಾಗೆ ಮಾಡ್ತಿದೀವಿ ಅಂತ !!

ಈ ಅರಣ್ಯ ವಾಸಿಗಳ ಆರೋಗ್ಯ ರಕ್ಷಣೆಗೆ ನೇಮಿಸಿದ್ದ ಕ್ಯೂಬಾ ದೇಶದ ನರ್ಸ್ ಗಳನ್ನು 2019 ರಲ್ಲೇ ಬೊಲ್ಸನಾರೋ ವಾಪಸ್ ಕಳಿಸಿದ್ದರು. ಇಲ್ಲಿನ  ಮಕ್ಕಳಿಗೆ ಪಾಠ ಹೇಳಿ ಕೊಡಲು ಬರುತ್ತಿದ್ದ ಶಿಕ್ಷಕರಿಗೆ ವೇತನ ಕೊಡದೆ ಇರೋದ್ರಿಂದ ಅವ್ರು ಈಗ ಬರ್ತಿಲ್ಲ.  ಈ ಎಲ್ಲದರ ಫಲ  ಗೊತ್ತಾಗಿದ್ದು ಏಪ್ರಿಲ್ 2ನೇ ತಾರೀಕು ಈ ಅರಣ್ಯ ದ ಗುಡ್ಡಗಾಡು ಮಹಿಳೆಗೆ ಕೊರೊನ ಸೋಂಕು ತಗುಲಿದಾಗ!

ಟ್ರಂಪ್ ಕೂಡ ಹೀಗೆಯೇ ಯಾವುದೇ ಸಾರ್ವಜನಿಕ ಒಳಿತಿನ ಯೋಜನೆ ವಿರೋಧಿ ಮತ್ತು ಖಾಸಗಿ ಬಂಡವಾಳದ ರಕ್ಷಕ ರಾಗಿದ್ದಾರೆ. ತಮ್ಮ ಅಧಿಕಾರದ ಮೊದಲೆರಡು ವರ್ಷಗಳಲ್ಲಿ ಸರ್ಕಾರಿ ಪ್ರಾಯೋಜಿತ ವೈಜ್ಞಾನಿಕ ಸಂಸ್ಥೆ ಗಳ ಸಾವಿರಾರು ಉದ್ಯೋಗಿಗಳನ್ನು ತೆಗೆದು ಹಾಕಿದ್ರು, 1600 ವಿಜ್ಞಾನಿಗಳು ಕೆಲಸ ಬಿಟ್ರು. ಇಷ್ಟೇ ಅಲ್ಲ. ಕೊರೊನ ಬಂದ ಮೇಲೆ, 2021 ರ ಬಜೆಟ್ ನಲ್ಲಿ ರೋಗ ನಿಯಂತ್ರಣ ಮತ್ತು ನಿವಾರಣೆ ಕೇಂದ್ರಕ್ಕೆ ನೀಡುವ ಮೊತ್ತದಲ್ಲಿ ಶೇ. 16 ಕಡಿತ ಮಾಡಿದ್ದಾರೆ.

ತಮ್ಮ ಚುನಾವಣೆ ಭಾಷಣದಲ್ಲಿ ಇವರು ಒಬಾಮ ಕೇರ್ ನೀತಿಯನ್ನು ಕಟುವಾಗಿ ಟೀಕಿಸಿದ್ದರು. ಈಗ ಈ ಯೋಜನೆ ಯನ್ನೇ ಬಲಹೀನ ಗೊಳಿಸಿದ್ದಾರೆ. 2018ರಲ್ಲೇ ಅಮೇರಿಕಾ ದ ಸುಮಾರು 3ಕೋಟಿ ಜನ ಆರೋಗ್ಯ ವಿಮೆ ವಂಚಿತರಾಗಿದ್ರು. ಕಳೆದ ಕೆಲವೇ ವಾರಗಳಲ್ಲಿ ನಿರುದ್ಯೋಗ ಪ್ರಮಾಣ 1.5 ಕೋಟಿ ಜಾಸ್ತಿ ಯಾಗಿದ್ದು,  ಸಹಜವಾಗಿಯೇ ಪ್ರತಿ ಕೋವಿಡ್ ರೋಗಿ ತಮ್ಮ ಚಿಕಿತ್ಸೆ ವೆಚ್ಚ ಭರಿಸೋದು ಯಾರು ಅಂತ ಪ್ರಶ್ನೆ ಮಾಡ್ತಾ ಇದಾರೆ.  ಚಿಕಿತ್ಸೆ ವೆಚ್ಚಕ್ಕೆ ಹೆದರಿ ಚಿಕಿತ್ಸೆ ಪಡೆಯಕ್ಕೆ ಹೋಗಕ್ಕೆ ಹಿಂಜರಿತಾ ಇದಾರೆ. ಹೀಗೇ ಮುಂದುವರಿದ್ರೆ, ಇವರುಗಳು ಕೋವಿಡ್ 19 ಕ್ಕೆ ಚಿಕಿತ್ಸೆ ಪಡೆಯಲ್ಲ ಮತ್ತು ಇದರಿಂದ  ಸಾಂಕ್ರಾಮಿಕ ವನ್ನು ತಡೆಯಲು ಕಷ್ಟ ಆಗುತ್ತೆ ಅಂತ ಅಲ್ಲಿನ ವೈದ್ಯರು ಎಚ್ಚರಿಕೆ ಕೊಡ್ತಿದಾರೆ.

ಅಷ್ಟೇ ಅಲ್ಲ. ಈ ಸಮಯದಲ್ಲಿ ಲಾಭ ಕಡಿಮೆ ಆಗ್ತಿರೋ ಕಾರಣಕ್ಕೆ ಖಾಸಗಿ ಆರೋಗ್ಯ ಸಂಸ್ಥೆ ಗಳು ತಮ್ಮ ನೌಕರರನ್ನು ವಜಾ ಮಾಡ್ತಿರೋ ದನ್ನು ನೋಡಬಹುದು. ಒಂದು ಕಡೆ ಆರೋಗ್ಯ ಸಿಬ್ಬಂದಿ ಗಳು ಸೋಂಕಿಗೆ ಸಿಲುಕೋ ಸಂದರ್ಭ ಜಾಸ್ತಿ ಆಗ್ತಾ ಇದೆ. ಇನ್ನೊಂದು ಕಡೆ, ಅಮೇರಿಕಾ ದ ಖಾಸಗಿ ಆರೋಗ್ಯ ವಿಮಾ ಕಂಪನಿ ಗಳು ತಮ್ಮ ಲಾಭ ಹೆಚ್ಚಿಸಿ ಕೊಳ್ಳುತ್ತಿವೆ. ಯಾಕೆ ಅಂದ್ರೆ, ಒಂದು ಕಡೆ  ಪ್ರೀಮಿಯಂ ಬರ್ತಿದೆ, ಜನ ಕೊರೊನ ಚಿಕಿತ್ಸೆ ಗೆ ಭಯ ಪಡ್ತಿರೋದ್ರಿಂದ ದಾವೆ ಪ್ರಮಾಣ ಕಡಿಮೆ ಆಗ್ತಿದೆ.

ಒಂದು ಒಳ್ಳೆಯ ಸುದ್ದಿ ಅಂದ್ರೆ ಒಂದು ವಿಭಿನ್ನ ವಾದ ಬಲಿಷ್ಠ ನಾಯಕರು ನಮ್ಮ ದೇಶದಲ್ಲಿ ಇದ್ದಾರೆ. ಕೇರಳ ರಾಜ್ಯದ ಮುಖ್ಯಮಂತ್ರಿ ಗಳನ್ನು  ಸಹ ಬಲಿಷ್ಠ ನಾಯಕ ಎನ್ನುತ್ತಾರೆ. ವ್ಯತ್ಯಾಸ ಏನೂ ಅಂದ್ರೆ,  ಇವರ ಶಕ್ತಿ ಇರೋದು  ಜನರ ಜೊತೆ, ಪ್ರಮುಖವಾಗಿ ಹೆಚ್ಚು ಶ್ರಮ ಹಾಕುವ  ಬಡವರ ಜೊತೆ ಬೆಸೆದಿರುವ ಭಾಂದವ್ಯ ದಿಂದ.  ಜೊತೆಗೆ ಎಡ ಸಿದ್ಧಾಂತವು ಈ ರಾಜ್ಯದಲ್ಲಿ ಒಂದು ಸದೃಢ ಆರೋಗ್ಯ ವ್ಯವಸ್ಥೆ ಯನ್ನು ಉಳಿದ ವ್ಯವಸ್ಥೆ ಜೊತೆಯಲ್ಲಿ ಬುನಾದಿ ಯಾಗಿಸಿದೆ.

ಹೀಗಾಗಿಯೇ, ಜನವರಿ 30ರಂದು ಕೇರಳ ರಾಜ್ಯದಲ್ಲಿ ಮೊದಲ ಕೋವಿಡ್ ಕೇಸ್ ಬಂದ ತಕ್ಷಣ ದಿಂದಲೇ,ಅಲ್ಲಿನ  ಬಲಿಷ್ಠ  ನಾಯಕ, ಈ ರಾಜ್ಯದ ಬಲಿಷ್ಠ ಜನರು ಮತ್ತು ಬಲಿಷ್ಠ ಆರೋಗ್ಯ ವ್ಯವಸ್ಥೆ ಈ ಹೊಸ ಸವಾಲು ಎದುರಿಸಲು ಸಜ್ಜಾಗಿತ್ತು.

Donate Janashakthi Media

Leave a Reply

Your email address will not be published. Required fields are marked *