ಹರಾಜಿನಲ್ಲಿ ಖರೀದಿಸಿದ ನಂತರ ತಂಡದ ಪರ ಆಡದ ವಿದೇಶೀ ಆಟಗಾರರಿಗೆ 2 ವರ್ಷ ನಿಷೇಧ ವಿಧಿಸುವಂತೆ ಐಪಿಎಲ್ ಫ್ರಾಂಚೈಸಿಗಳು ಒತ್ತಡ ಹೇರಿವೆ.
ಹರಾಜಿನಲ್ಲಿ ಖರೀದಿಸಿದ ನಂತರ ಬಲವಾದ ಅಥವಾ ಅನಿರ್ವಾಯ ಕಾರಣಗಳಿಲ್ಲದೇ ಇದ್ದರೂ ತಂಡದ ಪರ ಆಡಲು ಹಿಂದೇಟು ಹಾಕುವ ವಿದೇಶೀ ಆಟಗಾರರಿಗೆ ಐಪಿಎಲ್ ಟೂರ್ನಿಯಿಂದ ಎರಡು ವರ್ಷ ನಿಷೇಧ ಹೇರುವ ನಿಯಮ ಜಾರಿಗೆ ತರುವಂತೆ ಫ್ರಾಂಚೈಸಿಗಳು ಆಗ್ರಹಿಸಿವೆ.
ಇತ್ತೀಚೆಗೆ ನಡೆದ ಐಪಿಎಲ್ ಸಭೆಯಲ್ಲಿ ಫ್ರಾಂಚೈಸಿಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದು, ಇದರಲ್ಲಿ ವಿದೇಶೀ ಆಟಗಾರರು ಹರಾಜಿನಲ್ಲಿ ಖರೀದಿಸಿದ ನಂತರವೂ ಕುಂಟು ನೆಪ ಹೇಳಿ ತಂಡದ ಪರ ಆಡಲು ನಿರಾಕರಿಸುತ್ತಿದ್ದಾರೆ. ಇಂತಹ ಆಟಗಾರರನ್ನು ನಿಷೇಧಿಸಬೇಕು ಎಂದು ಒತ್ತಡ ಹೇರಿವೆ.
ಐಪಿಎಲ್ ಕಿರು ಹರಾಜಿನ ವೇಳೆ ವಿದೇಶೀ ಆಟಗಾರರು ತಮ್ಮ ಮೌಲ್ಯವನ್ನು ಹೆಚ್ಚು ತೋರಿಸಬಾರದು. ನಿವೃತ್ತಿಗೊಂಡ ಆಟಗಾರರನ್ನು ಅಂತಾರಾಷ್ಟ್ರೀಯ ಪಂದ್ಯ ಆಡದ ಆಟಗಾರರ ಪಟ್ಟಿಗೆ ಸೇರಿಸಬೇಕು. ಈ ಮೂಲಕ ಅವರ ಮೌಲ್ಯ ಕಡಿಮೆ ಮಾಡಬೇಕು ಎಂದು ಫ್ರಾಂಚೈಸಿಗಳು ಬೇಡಿಕೆ ಇಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಹರಾಜಿನಲ್ಲಿ ಖರೀದಿಸಿದ ನಂತರ ವಿದೇಶೀ ಆಟಗಾರರು ವೈಯಕ್ತಿಕ ಕಾರಣವೊಡ್ಡಿ ಕೊನೆಯ ಗಳಿಗೆಯಲ್ಲಿ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ತಂಡದ ತಂತ್ರಗಾರಿಕೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಫ್ರಾಂಚೈಸಿಗಳು ವಿವರಿಸಿದ್ದು, ವಿದೇಶೀ ಆಟಗಾರರ ನಿಷೇಧ ಕುರಿತ ವಾದಕ್ಕೆ ಎಲ್ಲಾ 10 ತಂಡಗಳು ಸಹಮತ ವ್ಯಕ್ತಪಡಿಸಿವೆ ಎಂದು ತಿಳಿದು ಬಂದಿದೆ.
ವಿದೇಶೀ ಆಟಗಾರರು ದೇಶದ ಪರ ಆಡುವುದು, ಗಾಯದ ಸಮಸ್ಯೆ ಅಥವಾ ಗಂಭೀರವಾಗಿ ವೈಯಕ್ತಿಕ ಕಾರಣ ನೀಡಿದರೆ ನಾವು ಪುರಸ್ಕರಿಸಬಹುದು. ಅಲ್ಲದೇ ಅವರ ಬದ್ಧತೆಯನ್ನು ಗೌರವಿಸಬಹುದು. ಆದರೆ ಕೆಲವು ವಿದೇಶೀ ಆಟಗಾರರು ತಮಗೆ ಇಷ್ಟವಿಲ್ಲದ ತಂಡ ಖರೀದಿಸಿದ್ದರಿಂದ ಕುಂಟು ನೆಪವೊಡ್ಡಿ ಟೂರ್ನಿಯಿಂದ ಕೊನೆ ಗಳಿಗೆಯಲ್ಲಿ ಹಿಂದೆ ಸರಿಯುತ್ತಿದ್ದಾರೆ ಎಂದು ಫ್ರಾಂಚೈಸಿಗಳು ಆರೋಪಿಸಿವೆ.