ಮೋದಿ ಸರಕಾರ ನವ-ಉದಾರವಾದಿ ಧೋರಣೆಗಳಿಗೆ ಮತ್ತು ಖಾಸಗೀಕರಣಕ್ಕೆ ಹೆಚ್ಚು ಉಗ್ರವಾದ ಒತ್ತು ನೀಡಿರುವುದರಿಂದ ಭ್ರಷ್ಟಾಚಾರ ಮತ್ತು ಲೂಟಿಗೆ ಅವಕಾಶ ಹಲವು ಪಟ್ಟು ಹೆಚ್ಚಿದೆ.
ನರೇಂದ್ರ ಮೋದಿ ಬೇಕೆಂದೇ ಈ ವಿದ್ಯಮಾನಕ್ಕೆ ಕುರುಡಾಗಿದ್ದಾರೆ. ಇದಕ್ಕೆ ಅವರು ಮುಂಬರುವ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಚಮಚಾ ಬಂಡವಾಳಶಾಹಿಯ ಕಳಂಕ ಮೋದಿ ಸರಕಾರ ಮತ್ತು ಬಿಜೆಪಿ ರಾಜ್ಯಸರಕಾರಗಳನ್ನು ಆವರಿಸಿಕೊಳ್ಳುತ್ತಿದೆ. ನರೇಂದ್ರ ಮೋದಿ ಮತ್ತು ಬಿಜೆಪಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಯುಪಿಎ ಸರಕಾರದ ಅಡಿಯಲ್ಲಿ ನಡೆದ ಬೃಹತ್ ಸ್ವರೂಪದ ಭ್ರಷ್ಟಾಚಾರವನ್ನು ಪ್ರಧಾನ ಪ್ರಶ್ನೆಯಾಗಿ ಮಾಡಿದ್ದರು. ಕಾಂಗ್ರೆಸ್ ಆಳ್ವಿಕೆಯಲ್ಲಿನ ಲೂಟಿ ಮತ್ತು ಭ್ರಷ್ಟಾಚಾರವನ್ನು ಕೊನೆಗೊಳಿಸುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದ್ದರು.
ಬಿಜೆಪಿ ಸರಕಾರದ ಒಂದು ವರ್ಷದ ನಂತರ ಮಥುರಾ ಜಿಲ್ಲೆಯಲ್ಲಿ ಒಂದು ರ‍್ಯಾಲಿಯಲ್ಲಿ ಮಾತಾಡುತ್ತ ತಾನು ’ಅಚ್ಚೇ ದಿನ್’(ಒಳ್ಳೆಯ ದಿನಗಳ) ಭರವಸೆ ನಿಡಿದ್ದು ದೇಶವನ್ನು ಲೂಟಿ ಹೊಡೆದವರಿಗೆ ಅಲ್ಲ, ಅವರಿಗೆ ಇವು ’ಬುರೇ ದಿನ್’(ಕೆಟ್ಟ ದಿನಗಳು) ಎಂದರು. ಮುಂದುವರೆದು, ಕಳೆದ ಒಂದು ವರ್ಷದಲ್ಲಿ ಹಗರಣಗಳ, ಸ್ವಜನಪಕ್ಷಪಾತದ ಒಂದಾದರೂ ಸುದ್ದಿ ಕೇಳಿದ್ದೀರಾ? ಎಂದು ಗಟ್ಟಿಯಾಗಿ ಕೇಳಿದರು.
ಈ ಜಂಭದ ಮಾತುಗಳನ್ನು ಕೇಳಿದ ಕೆಲವೇ ದಿನಗಳಲ್ಲಿ ಈ ಸ್ವಚ್ಛ ಮತ್ತು ಸನ್ನಡತೆಯ ಸರಕಾರದ ಬಲೂನು ಒಡೆದಿದೆ. ಕೇಂದ್ರ ಸಂಪುಟದ ಒಬ್ಬ ಹಿರಿಯ ಮಂತ್ರಿ, ಸುಷ್ಮಾ ಸ್ವರಾಜ್‌ರವರ ಒಂದು ದೊಡ್ಡ ಅನುಚಿತ ಕೃತ್ಯ ಬಯಲಿಗೆ ಬಂದಿದೆ. ಮಂತ್ರಿಗಳ ಉದಾರತೆಯ ಫಲಾನುಭವಿ ಮತ್ತಾರೂ ಅಲ್ಲ, ಐಪಿಎಲ್ ಹಗರಣದ ಕುಖ್ಯಾತಿಯ ಲಲಿತ್ ಮೋದಿ. ಆತನ ಬಗ್ಗೆ ಬ್ರಿಟಿಶ್ ಸರಕಾರಕ್ಕೆ ಶಿಫಾರಸು ಮಾಡುವಾಗ ಈ ಮಂತ್ರಿಗಳು ಎಲ್ಲ ಔಪಚಾರಿಕ ಮತ್ತು ಸಾಂಸ್ಥಿಕ ವಿಧಿ-ವಿಧಾನಗಳನ್ನು ಗಾಳಿಗೆ ತೂರಿದ್ದಷ್ಟೇ ಅಲ್ಲ, ಇದರಲ್ಲಿ ಹಿತಾಸಕ್ತಿಗಳ ತಾಕಲಾಟವೂ ಇತ್ತು, ಏಕೆಂದರೆ ಅವರ ಗಂಡ ಮತ್ತು ಮಗಳು ಇಬ್ಬರೂ ಲಲಿತ್ ಮೋದಿಯ ವಕೀಲರಾಗಿದ್ದವರು. ಪ್ರಧಾನ ಮಂತ್ರಿಗಳು ತಮ್ಮ ಸಂಪುಟ ಸಹೋದ್ಯೋಗಿಯ ಮೇಲಿನ ಆಪಾದನೆಯ ಬಗ್ಗೆ ಮೌನ ತಳೆದಿದ್ದಾರೆ, ಮತ್ತು ಪ್ರಧಾನ ಮಂತ್ರಿಗಳೂ, ಬಿಜೆಪಿ ಮುಖಂಡತ್ವವೂ ಆಕೆಯನ್ನು ರಕ್ಷಿಸಲು ಮತ್ತು ಆಕೆಯ ತಪ್ಪು ಕೃತ್ಯವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ.
ಲಲಿತ್ ಮೋದಿ ಪ್ರಕರಣ ರಾಜಸ್ತಾನದ ಮುಖ್ಯಮಂತ್ರಿ ವಸುಂಧರ ರಾಜೇ ಹೇಗೆ ಆತನನ್ನು ರಕ್ಷಿಸಲು ಕೆಲಸ ಮಾಡಿದ್ದಾರೆ ಎಂಬುದು ಬಯಲಿಗೆ ಬಂದು ಇನ್ನಷ್ಟು ರಾಡಿಯೆದ್ದಿದೆ. ಆಕೆ ಆಗ ಪ್ರತಿಪಕ್ಷದ ಮುಖಂಡರ ಸ್ಥಾನದಲ್ಲಿದ್ದು, ಲಲಿತ್ ಮೋದಿ ಬ್ರಿಟನ್ನಿನಲ್ಲಿ ಇರಲು ಸಲ್ಲಿಸಿದ ಅರ್ಜಿಯ ಶಿಫಾರಸಿಗೆ ಸಾಕ್ಷಿಯಾಗಿ ಸಹಿ ಹಾಕಿದ್ದರು. ಇದೂ ಸಾಲದೆಂಬಂತೆ ಈ ಸಾಕ್ಷ್ಯವನ್ನು ಭಾರತೀಯ ಅಧಿಕಾರಿಗಳಿಂದ ಮುಚ್ಚಿಡಬೇಕು ಎಂದೂ ಹೇಳಿದ್ದರು.
ವಸುಂಧರಾ ರಾಜೇ ಮತ್ತು ಸಂಸತ್ ಸದಸ್ಯನಾಗಿರುವ ಆಕೆಯ ಮಗ ದುಷ್ಯಂತ ಸಿಂಗ್ ಹಾಗೂ ಲಲಿತ್ ಮೋದಿಯ ನಡುವಿನ ಕೊಂಡಿಗಳು ಚಮಚಾ ಬಂಡವಾಳಶಾಹಿ ನಂಟಿನ ಎಲ್ಲ ಲಕ್ಷಣಗಳನ್ನೂ ಹೊಂದಿವೆ. ದುಷ್ಯಂತ ಸಿಂಗ್ ಕಂಪನಿಯ ಶೇರುಗಳನ್ನು ಅದರ ಮುಖ ಬೆಲೆಯ ೧೦,೦೦೦ ಪಟ್ಟು ಹಣ ಕೊಟ್ಟು ಖರೀದಿಸಿರುವುದು ಇದನ್ನು ಬಯಲಿಗೆಳೆದಿದೆ.
ಒಂದು ಶಾಸಕಾಂಗದಲ್ಲಿ ಪ್ರತಿಪಕ್ಷದ ನಾಯಕರಾಗಿರುವವರು ಒಂದು ದಸ್ತಾವೇಜಿಗೆ ಸಾಕ್ಷಿಯಾಗಿ ಸಹಿ ಹಾಕುತ್ತಾರೆ, ಮತ್ತು ಅದನ್ನು ಭಾರತೀಯ ಅಧಿಕಾರಿಗಳಿಂದ ಗುಟ್ಟಾಗಿಡಬೇಕು ಎನ್ನುತ್ತಾರೆ ಎಂಬುದು ನಿಜಕ್ಕೂ ಆಘಾತಕಾರಿ ಸಂಗತಿ. ಬಿಜೆಪಿ ’ರಾಷ್ಟ್ರವಾದಿ’ಗಳು ಸಾಮಾನ್ಯವಾಗಿ ದೇಶದ್ರೋಹಿ ಎಂದು ಕರೆಯುವ ಕೃತ್ಯವಿದು. ಇಲ್ಲಿಯೂ ಬಿಜೆಪಿ ಮುಖಂಡತ್ವ ಮತ್ತು ಪ್ರಧಾನ ಮಂತ್ರಿಗಳು ಆಕೆಯೇನೂ ತಪ್ಪು ಮಾಡಿಲ್ಲ ಎಂದು ಭಂಡತನದಿಂದ ಹೇಳುತ್ತಿದ್ದಾರೆ. ಇಲ್ಲಿರುವ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಅವರು ’ಕುಟುಂಬದ ಸಂಬಂಧಗಳು’ ಮತ್ತು ’ಖಾಸಗಿ ಸಾಲ ವ್ಯವಹಾರಗಳು’ ಎಂದು ಹೇಳಿಕೊಳ್ಳುತ್ತಾರೆ.
ಈ ಇಬ್ಬರು ಹಿರಿಯ ಬಿಜೆಪಿ ಮುಖಂಡರ-ಒಬ್ಬರು ಕೇಂದ್ರ ಸಂಪುಟದಲ್ಲಿ ಮಂತ್ರಿಗಳು, ಇನ್ನೊಬ್ಬರು ಮುಖ್ಯಮಂತ್ರಿಗಳು-ಉದಾಹರಣೆಗಳು ಕೇಂದ್ರದಲ್ಲಿ ಬಿಜೆಪಿ ಸರಕಾರ ಅದಿಕಾರಕ್ಕೆ ಬಂದಂದಿನಿಂದ ಒಂದು ಭ್ರಷ್ಟಾಚಾರ-ಮುಕ್ತ ಸರಕಾರ ನೀಡಿದೆ ಎಂಬ ಮಾತಿನ ಮಂಟಪವನ್ನು ನುಷ್ಷು ನೂರು ಮಾಡಿವೆ.
ಭ್ರಷ್ಟಾಚಾರದ ಹಗರಣ ತಟ್ಟಿರುವುದು ರಾಜಸ್ತಾನದ ಬಿಜೆಪಿ ಸರಕಾರದ ಮುಖ್ಯಮಂತ್ರಿಗಳನ್ನು ಮಾತ್ರವೇ ಅಲ್ಲ. ಶಿವರಾಜ್ ಚವ್ಹಾಣ್ ನೇತೃತ್ವದ ಮಧ್ಯಪ್ರದೇಶದ ಬಿಜೆಪಿ ಸರಕಾರ ಬುಸುಗುಡುತ್ತಿರುವ ವ್ಯಾಪಂ ಹಗರಣವನ್ನು ಮುಚ್ಚಿ ಹಾಕುವ ಹತಾಶ ಪ್ರಯತ್ನ ನಡೆಸಿದ್ದಾರೆ. ಆ ರಾಜ್ಯದ ವೃತ್ತಿ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಗಳಲ್ಲಿ ನಕಲು ಮಾಡಲು ಮತ್ತು ಪರೀಕ್ಷೆಗಳನ್ನು ಸುಳ್ಳಾಗಿಸಲು ಅನುಕೂಲ ಕಲ್ಪಿಸಿ ಕೊಡುವ ಒಂದು ಉನ್ನತ ಮಟ್ಟದ ಜಾಲಕ್ಕೆ ಸಂಬಂಧಪಟ್ಟ ಸಂಗತಿ ಇದು. ಇದನ್ನು ಮಧ್ಯಪ್ರದೇಶ ಹೈಕೋರ್ಟಿನ ಉಸ್ತುವಾರಿಯಲ್ಲಿ ಒಂದು ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆ ಮಾಡುತ್ತಿದೆ. ಈ ತನಿಖೆ ನಡೆಯುತ್ತಿರುವಾಗಲೇ ಈ ಹಗರಣಕ್ಕೆ ಆಪಾದಿತರಾಗಿಯೋ, ಸಾಕ್ಷಿಗಳಾಗಿಯೋ ಸಂಬಂಧಪಟ್ಟ ೪೦ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ ಎಂಬುದು ಊಹೆಗೂ ನಿಲುಕದ ಸಂಗತಿ. ಏನೇ ಆದರೂ ಇದನ್ನು ಹೂತು ಬಿಡಲು ಬಿಜೆಪಿ ಸರಕಾರ ಅಚಲ ನಿರ್ಧಾರ ಮಾಡಿದಂತಿದೆ.
ವ್ಯಾಪಂ ವ್ಯವಹಾರ ಬಹಳ ಕಾಲದಿಂದ ಇರುವ ಒಂದು ಬಿಜೆಪಿ ಸರಕಾರವನ್ನು ತಟ್ಟಿದ ಹಗರಣವಾದರೆ, ಹೊಸದಾಗಿ ರಚನೆಗೊಂಡ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರವನ್ನು ಎರಡು ಮಂತ್ರಿಗಳ ಎರಡು ಹಗರಣಗಳು ತಟ್ಟಿವೆ. ಮಂತ್ರಿಗಳಾದ ಪಂಕಜಾ ಮುಂಡೆಯವರು ಮತ್ತು ವಿನೋದ್ ತಾವ್ಡೆಯವರು ಅನುಕ್ರಮವಾಗಿ ೨೦೬ ಕೋಟಿ ರೂ.ಗಳು ಮತ್ತು ೧೯೧ ಕೋಟಿ ರೂ.ಗಳ ಕಾಂಟ್ರಾಕ್ಟುಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿರುವ ಹಗರಣಗಳು ಇವು.
ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಬಿಜೆಪಿ ನೇತೃತ್ವದ ಸರಕಾರಗಳಲ್ಲಿ ಇಷ್ಟೊಂದು ತ್ವರಿತವಾಗಿ ಹಗರಣಗಳು ಬೆಳಕಿಗೆ ಬಂದಿರುವುದರಲ್ಲಿ ಆಶ್ಚರ್ಯವೇನಿಲ್ಲ. ದೊಡ್ಡ ಬಂಡವಳಿಗರು-ರಾಜಕಾರಣಿಗಳು-ಅಧಿಕಾರಶಾಹಿಗಳ ಕೂಟವನ್ನು ಹುಟ್ಟು ಹಾಕುವ ನವ-ಉದಾರವಾದಿ ವ್ಯವಸ್ಥೆಯಲ್ಲೇ ಭ್ರಷ್ಟಾಚಾರ ಅಡಕವಾಗಿದೆ. ಚಮಚಾ ಬಂಡವಾಳಶಾಹಿ ಇಂತಹ ಒಂದು ವ್ಯವಸ್ಥೆಯಲ್ಲಿಯೇ ಅಂತರ್ಗತವಾಗಿರುವಂತದ್ದು. ಸರಕಾರ ಬದಲಾದರೂ ಈ ಕೂಟದ ಕಾರ್ಯಾಚರಣೆಯ ವಿಧಾನ ಬದಲಾಗಿಲ್ಲೆಂಬುದಕ್ಕೆ ಗೌತಮ್ ಅದಾನಿಗೆ ಕೊಡಮಾಡಲಾದ ಅನುಕೂಲಗಳೇ ಉದಾಹರಣೆ. ನಿಜ ಹೇಳಬೇಕಾದರೆ, ನವ-ಉದಾರವಾದಿ ಧೋರಣೆಗಳಿಗೆ ಮತ್ತು ಖಾಸಗೀಕರಣಕ್ಕೆ ಹೆಚ್ಚು ಉಗ್ರವಾದ ಒತ್ತು ನೀಡಿರುವುದರಿಂದ ಭ್ರಷ್ಟಾಚಾರ ಮತ್ತು ಲೂಟಿಗೆ ಅವಕಾಶ ಹಲವು ಪಟ್ಟು ಹೆಚ್ಚಿದೆ.
ನರೇಂದ್ರ ಮೋದಿ ಬೇಕೆಂದೇ ಈ ವಿದ್ಯಮಾನಕ್ಕೆ ಕುರುಡಾಗಿದ್ದಾರೆ. ಇದಕ್ಕೆ ಅವರು ಮುಂಬರುವ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ.