“ಸ್ಪರ್ಧಾತ್ಮಕ ಬೆಲೆಗಳು”ಎಂಬ ದಾರಿ ತಪ್ಪಿಸುವ ತರ್ಕ

ಸ್ಥಳೀಯ ದುಬಾರಿ ಉತ್ಪಾದಕರನ್ನು ಸಹಿಸಿಕೊಳ್ಳುವ ಸಲುವಾಗಿ ಅಗ್ಗದ ಆಮದು ವಸ್ತುಗಳನ್ನು ತಡೆಗಟ್ಟುವುದರಿಂದಾಗಿ ಬಳಕೆದಾರರು ದುಬಾರಿ ಬೆಲೆ ತೆರುವಂತೆ ಮಾಡುವುದು ಸರಿಯೇ ಎಂಬ ಪ್ರಶ್ನೆಯನ್ನು ಆರ್.ಸಿ.ಇ.ಪಿ. ಒಪ್ಪಂದಕ್ಕೆ ಮೋದಿ ಸರಕಾರ ಸಹಿ ಹಾಕದಂತೆ ಮಾಡಿರುವ ಹಿನ್ನೆಲೆಯಲ್ಲಿ ಎತ್ತಲಾಗಿದೆ. ನಿಜವಾಗಿ ಈ ಸ್ಪರ್ಧಾತ್ಮಕ ಬೆಲೆಗಳು ಎಂದರೇನು? ನಿರುದ್ಯೋಗಕ್ಕೆ ಇದರ ಕೊಡುಗೆ ಇಲ್ಲವೇ?

ನಿರುದ್ಯೋಗ ಉಂಟಾಗಲು  ಒಂದು ದೊಡ್ಡ ಕಾರಣವೆಂದರೆ, ಕೆಲವರು ತಮ್ಮ ಗುಂಪಿನ ಇತರರು ಏನನ್ನು ಉತ್ಪಾದಿಸುತ್ತಾರೊ ಅದನ್ನು ಕೊಳ್ಳಲು ಇಷ್ಟಪಡದೆ, ತಮ್ಮ ಗುಂಪಿನ ಹೊರಗಿನವರು ಉತ್ಪಾದಿಸುವುದನ್ನು ಕೊಳ್ಳಲು, ಅವರು ತಮ್ಮ ಗುಂಪಿನ ಯಾವ ಉತ್ಪಾದನೆಯನ್ನು ಕೊಳ್ಳದಿದ್ದರೂ ಸಹ, ಬಯಸುತ್ತಾರೆ. ಇಂತಹ ನಿರುದ್ಯೋಗದ ಸೃಷ್ಟಿಯನ್ನು ತಡೆಗಟ್ಟಲೇ ಬೇಕು    ಎನ್ನುತ್ತಾರೆ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್

ಏಷ್ಯಾ-ಶಾಂತ ಸಾಗರದ ಹದಿನಾರು ದೇಶಗಳ ನಡುವಿನ ಆರ್.ಸಿ.ಇ.ಪಿ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತವು ನವೆಂಬರ್ ನಾಲ್ಕರಂದು ಬ್ಯಾಂಕಾಕ್‌ನಲ್ಲಿ ಸಹಿ ಹಾಕುವ ಕಾರ್ಯಕ್ರಮವಿತ್ತು. ಈ ಒಪ್ಪಂದಕ್ಕೆ ವಿರೋಧ ವ್ಯಾಪಕವಾಗಿ ವ್ಯಕ್ತವಾಗಿತ್ತು. ಸಾರ್ವಜನಿಕ ಒತ್ತಾಯಕ್ಕೆ ಮಣಿದ ಮೋದಿ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ಹಿಂದೆ ಸರಿಯಿತು. ನಂತರ, ಒಂದು ವಾದ ವಿವಾದ ಎದ್ದಿದೆ: ಭಾರತ ಉತ್ಪಾದಿಸುವ ವಸ್ತುಗಳು ಬೇರೆ ದೇಶಗಳಿಗಿಂತ ದುಬಾರಿಯಾಗಿರುವ ಕಾರಣದಿಂದ, ನಮ್ಮ ದೇಶದ ಉತ್ಪಾದಕರು ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದವನ್ನು ವಿರೋಧಿಸಿದರು. ಹಾಗಾದರೆ, ಈ ದುಬಾರಿ ವಸ್ತುಗಳನ್ನು ಭಾರತವು ಯಾಕೆ ಉತ್ಪಾದಿಸಬೇಕು ಎಂಬ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ಅವರು ಇನ್ನೊಂದು ಪ್ರಶ್ನೆಯೊಂದಿಗೆ ತಮ್ಮ ವಾದವನ್ನು ಹೀಗೆ ಪುಷ್ಟೀಕರಿಸುತ್ತಾರೆ: ದೇಶವು ಇಂತಹ ಸ್ಪರ್ಧಾತ್ಮಕವಲ್ಲದ ಉತ್ಪಾದಕರನ್ನು ರಕ್ಷಿಸುವ ಮೂಲಕ, ಬಳೆಕೆದಾರರಿಗೆ ಅಗ್ಗದ ಆಮದು ವಸ್ತುಗಳು ದೊರಕದಂತೆ ಮಾಡಿ ಅವರನ್ನು ದಂಡಿಸುತ್ತಿದೆ, ಇದು ಅನ್ಯಾಯವಲ್ಲವೆ?

ಮೊದಲನೆಯ ಪ್ರಶ್ನೆಗೆ ತಕ್ಷಣದ ಮತ್ತು ಸಹಜ ಉತ್ತರವೆಂದರೆ, ಯಾವುದೇ ಒಂದು ವಸ್ತುವಿನ ಬೆಲೆಯು ಸ್ಪರ್ಧಾತ್ಮಕವಾಗಿ, ಅಗ್ಗವಾಗಿ ಕಾಣುವುದು, ಸಾಮಾನ್ಯವಾಗಿ, ವಿದೇಶಿ ಮಾರುಕಟ್ಟೆಗಳನ್ನು ತಮ್ಮ ಹಿಡಿತಕ್ಕೆ ಪಡೆಯುವ ಉದ್ದೇಶದಿಂದ ತಮ್ಮ ಕರೆನ್ಸಿಯನ್ನು ಅಪಮೌಲ್ಯಕ್ಕೊಳಪಡಿಸುವ ಮೂಲಕ ಅಥವಾ ಸರ್ಕಾರೀ ಸಬ್ಸಿಡಿಯೊಂದಿಗೆ ಒಂದು ಮುನ್ನುಗ್ಗುವ ವ್ಯಾಪಾರೀ  ಮನೋಭಾವದ ಕ್ರಮವನ್ನು ಅಳವಡಿಸಿಕೊಂಡಿರುವದನ್ನು ಬಿಂಬಿಸುತ್ತದೆ. ಉದಾಹರಣೆಗೆ, ಅಮೇರಿಕಾ ಮತ್ತು ಯೂರೋಪಿನ ದೇಶಗಳು ರೈತರಿಗೆ ಅಪಾರ ಸಬ್ಸಿಡಿ ಒದಗಿಸುವುದರಿಂದ, ಆ ದೇಶಗಳ ಕೃಷಿ ಉತ್ಪಾದನೆಗಳು ಅಗ್ಗವಾಗಿ ಕಾಣುತ್ತವೆ.  ಅದೇ ರೀತಿಯಲ್ಲಿ, ತಯಾರಿಕಾ ವಲಯದ ಉತ್ಪನ್ನಗಳಿಗೂ ಸಹ ಅನೇಕ ಪೂರ್ವ ಏಷ್ಯಾದ ದೇಶಗಳು (ವಿಶೇಷವಾಗಿ, ಆರ್.ಸಿ.ಇ.ಪಿ. ಸದಸ್ಯ ದೇಶಗಳು) ಸಬ್ಸಿಡಿ ಒದಗಿಸುತ್ತವೆ. ಹಾಗಾಗಿ, ಸ್ಪರ್ಧಾತ್ಮಕ ಬೆಲೆ ಎಂಬ ಪರಿಕಲ್ಪನೆಯು ನಮ್ಮನ್ನು ದಾರಿ ತಪ್ಪಿಸುತ್ತದೆ, ಏಕೆಂದರೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಹಣಕಾಸಿನ ನೆರವು, ಸಬ್ಸಿಡಿ ಮತ್ತು ವಿದೇಶಿ ವಿನಿಮಯ ದರ ನೀತಿಗಳು ಧಾರಾಳವಾಗಿ ಅಡಗಿಕೊಂಡಿವೆ. ಹಾಗಾಗಿ, ಮಾರುಕಟ್ಟೆಯಲ್ಲಿ ಆಮದು ವಸ್ತುಗಳು ಅಗ್ಗದ ಬೆಲೆಯಲ್ಲಿ ಸಿಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ವಿದೇಶಿ ಉತ್ಪಾದಕರೊಂದಿಗೆ ಭಾರತದ ಉತ್ಪಾದಕರನ್ನು ಪೈಪೋಟಿಗೆ ಇಳಿಸಿದರೆ ನಮ್ಮ ಉತ್ಪಾದಕರಿಗೆ ಅಸಮಾಧಾನ ಉಂಟಾಗುವುದು ಸಹಜವೇ.

ಅದರ ಜೊತೆಗೆ, ಈ ವಿಷಯದಲ್ಲಿ ಒಂದು ತಾತ್ವಿಕ ಅಂಶವೂ ಅಡಕವಾಗಿದೆ ಮತ್ತು ಅದು ಮುಕ್ತ ವ್ಯಾಪಾರವಾದಕ್ಕೆ ಸಂಬಂಧಿಸುತ್ತದೆ. ಈ ಅಂಶದ ಬಗ್ಗೆ ಚರ್ಚೆಯಾಗುವುದೇ ಇಲ್ಲ. ಈ ಮುಕ್ತ ವ್ಯಾಪಾರವಾದವು ಒಂದು ಮೋಸದ ಮೇಲೆ ನಿಂತಿದೆ: ಈ ವಾದವು, ಮುಕ್ತ ವ್ಯಾಪಾರಕ್ಕೆ ತೆರೆದುಕೊಂಡ ಎಲ್ಲ ಅರ್ಥವ್ಯವಸ್ಥೆಗಳೂ ಪೂರ್ಣ ಉದ್ಯೋಗ ಸಮಸ್ಥಿತಿಯಲ್ಲಿರುತ್ತವೆ (ಶ್ರಮಶಕ್ತಿಯೂ ಸೇರಿದಂತೆ ಅದರ ಎಲ್ಲ ಸಂಪನ್ಮೂಲಗಳೂ ಪೂರ್ಣವಾಗಿ ಬಳಕೆಯಾಗಿವೆ) ಎಂದು ಊಹಿಸಿಕೊಳ್ಳುತ್ತದೆ. ಅಂದರೆ, ತನ್ನಿಂದಾಗಿ ನಿರುದ್ಯೋಗ ಸೃಷ್ಠಿಯಾಗುವ ಸಾಧ್ಯತೆಯೇ ಇಲ್ಲ ಎಂಬುದಾಗಿ ಮುಕ್ತ ವ್ಯಾಪಾರ ವ್ಯವಸ್ಥೆ ಊಹಿಸಿಕೊಳ್ಳುತ್ತದೆ. ಇದೊಂದು ಅಸಂಬದ್ಧ ಊಹೆ ಎಂಬುದನ್ನು ವಸಾಹತುಕಾಲದ ನಮ್ಮ ಅನುಭವವೇ ತಿಳಿಸುತ್ತದೆ. ವಸಾಹತುಕಾಲದಲ್ಲಿ ಇಂಗ್ಲೆಂಡಿನೊಂದಿಗಿನ ಮುಕ್ತ ವ್ಯಾಪಾರದಿಂದಾಗಿಯೇ ನಮ್ಮ ದೇಶದ ಕೈಗಾರಿಕೆಗಳು ನಾಶಗೊಂಡವು. ಕೈಗಾರಿಕೆಗಳನ್ನು ನಾಶಪಡಿಸುವ ಈ ಪ್ರಕ್ರಿಯೆಯನ್ನೇ ನಮ್ಮ ದೇಶದ ಆಧುನಿಕ ಕಾಲದ ಬೃಹತ್ ಬಡತನದ ಆದಿ ಪ್ರವರ್ತಕ ಎಂದು ಗುರುತಿಸಲಾಗಿದೆ. 

ವಿಶ್ವದಲ್ಲೇ ಒಟ್ಟಾರೆಯಾಗಿ, ಎಲ್ಲ ದೇಶಗಳಲ್ಲಿರುವ ಎಲ್ಲಾ ಸಂಪನ್ಮೂಲಗಳೂ ಸಂಪೂರ್ಣವಾಗಿ ಬಳಕೆಯಾಗುವ ಮಟ್ಟಕ್ಕೆ ವಿಶ್ವದ ಒಟ್ಟಾರೆ ಬೇಡಿಕೆಯನ್ನು ಎತ್ತರಿಸುತ್ತಾ ಹೋಗುವಂತೆ  ನೋಡಿಕೊಳ್ಳುವಂತಹ ಒಂದು ವ್ಯವಸ್ಥೆ ಇದ್ದಾಗ ನಿರುದ್ಯೋಗ ಇರುವುದಿಲ್ಲ. ಆದರೆ, ಬೇಡಿಕೆಯಲ್ಲಿ ಕೊರತೆ ಬೀಳದಂತೆ ನೋಡಿಕೊಳ್ಳುವಂತಹ ಯಾವ ವ್ಯವಸ್ಥೆಯೂ ಅಸ್ತಿತ್ವದಲ್ಲಿಲ್ಲ.  ಹಾಗಾಗಿ, ಒಂದು ಮಟ್ಟದ ನಿರುದ್ಯೋಗ ಯಾವಾಗಲೂ ಇದ್ದೇ ಇರುತ್ತದೆ. ಆದರೂ, ಒಂದು ಮುಕ್ತ ವ್ಯಾಪಾರ ಒಪ್ಪಂದದ ಪರಿಣಾಮ ಏನಾಗುತ್ತದೆ ಎಂದರೆ, ಈ ನಿರುದ್ಯೋಗವನ್ನು ಯಾವುದೊ ಒಂದು ದೇಶದಿಂದ ಮತ್ತಾವುದೊ ಒಂದು ದೇಶಕ್ಕೆ ವರ್ಗಾಯಿಸಲಾಗುತ್ತದೆ.

ದೇಶ ದೇಶಗಳ ಶ್ರಮಿಕರ ಉತ್ಪಾದಕತೆಯ ನಡುವಿನ ವ್ಯತ್ಯಾಸಗಳು; ಅವರ ಕೂಲಿಯ ವ್ಯತ್ಯಾಸಗಳು ಮತ್ತು ವಿದೇಶಿ ವಿನಿಮಯ ದರದ ಹಾಲಿ ವ್ಯತ್ಯಾಸಗಳ ಕಾರಣಗಳಿಂದಾಗಿ, ಅಂದರೆ, ಸರಕುಗಳನ್ನು ತಂದು  ಸುರಿಯುವುದು ಅಥವಾ ಸಬ್ಸಿಡಿಗಳಿಂದಾಗಿ ಸರಕು ಸಾಮಗ್ರಿಗಳ ಬೆಲೆಗಳು ಸ್ಪರ್ಧಾತ್ಮಕವಾಗಿರುತ್ತವೆ ಎಂದುಕೊಂಡರೂ ಸಹ, ಮುಕ್ತ ವ್ಯಾಪಾರವು ಉತ್ಪಾದಕತೆ ಕಡಿಮೆ ಮಟ್ಟದಲ್ಲಿರುವ ದೇಶಗಳ ಕೆಲಸಗಾರರನ್ನು ಅವರ ಕೆಲಸದಿಂದ ಹೊರಹಾಕುತ್ತದೆ.

ಇಲ್ಲಿ ಎರಡು ಪ್ರಶ್ನೆಗಳು ತಕ್ಷಣ ಏಳುತ್ತವೆ: ಮೊದಲನೆಯದು, ಕಡಿಮೆ ಉತ್ಪಾದಕತೆ ಇರುವ ದೇಶಗಳು ತಮ್ಮ ಸರಕು ಸಾಮಗ್ರಿಗಳ ಬೆಲೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕ ಆಗುವವರೆಗೂ ತಮ್ಮ ವಿದೇಶಿ ವಿನಿಮಯ ದರದ ಅಪಮೌಲ್ಯ ಮಾಡಿಕೊಂಡು ನಿರುದ್ಯೋಗ ನಿವಾರಿಸಬಹುದಲ್ಲವೇ? ಈ ಪ್ರಶ್ನೆಯಲ್ಲಿ ಇಂಗಿತವಾಗಿರುವ ಅಂಶವೇನೆಂದರೆ, ವಿದೇಶಿ ವಿನಿಮಯ ದರದ ಅಪಮೌಲ್ಯ ಮಾಡಿದಾಗ ಅದರ ಅಗತ್ಯ ಭಾಗವಾಗಿಯೇ ನಿಜ ಕೂಲಿ ದರ ಇಳಿಯುವುದರಿಂದ, ಕಡಿಮೆ ಉತ್ಪಾದಕತೆ ಇರುವ ದೇಶಗಳು ತಮ್ಮ ಕೆಲಸಗಾರರ ನಿಜ ಕೂಲಿ ದರವನ್ನು ತಕ್ಕಷ್ಟು ಇಳಿಕೆಯಾಗುವಂತೆ ನೋಡಿಕೊಂಡರೆ ಅವರ ಸರಕು ಸಾಮಗ್ರಿಗಳ ಬೆಲೆಗಳು ಸ್ಪರ್ಧಾತ್ಮಕವಾಗುತ್ತವೆ. ಹಾಗಾಗಿ, ನಿರುದ್ಯೋಗದ ಹೊರೆ ಇಳಿಯುತ್ತದೆ ಎಂಬುದು.

ಆದರೆ, ಇದೊಂದು ತಪ್ಪು ಕಲ್ಪನೆ. ಏಕೆಂದರೆ, ಯಾವುದೊ ಒಂದು ದೇಶದಲ್ಲಿ ನಿಜ ಕೂಲಿ ದರ ಇಳಿಸುವುದರಿಂದಾಗಿಯೇ ಉಳಿದ ಎಲ್ಲ ದೇಶಗಳಲ್ಲಿ ಒಟ್ಟಾರೆ ಬೇಡಿಕೆ ವೃದ್ಧಿಯಾಗುವುದಿಲ್ಲ. ಆದ್ದರಿಂದ, ವಿದೇಶಿ ವಿನಿಮಯ ದರ ಅಪಮೌಲ್ಯಮಾಡಿಕೊಳ್ಳುವ ದೇಶದೊಳಗೆ ನಿರುದ್ಯೋಗದ ಪ್ರಮಾಣ ಇಳಿಯಬಹುದಾದರೂ,  ಅದು ಬೇರೆ ದೇಶಗಳಲ್ಲಿ ನಿರುದ್ಯೋಗವನ್ನು ಹೆಚ್ಚಿಸುವ ಮೂಲಕವೇ. ಅಂದರೆ, ರಫ್ತನ್ನು ಹೆಚ್ಚಿಸಿಕೊಳ್ಳುವ ದೇಶವು ನಿರುದ್ಯೋಗವನ್ನು ರಫ್ತು ಮಾಡುತ್ತದೆ. ಇಂತಹ ರಫ್ತುಗಳು ಅವಶ್ಯವಾಗಿ ಬೇರೆ ದೇಶಗಳ ಪ್ರತೀಕಾರವನ್ನು ಆಹ್ವಾನಿಸುತ್ತವೆ. ಹಾಗಾಗಿ, ಎಲ್ಲ ದೇಶಗಳೂ ಕರೆನ್ಸಿ ವಿನಿಮಯ ದರಯದ್ಧಕ್ಕೆ ಇಳಿಯುತ್ತವೆ. ಪರಿಣಾಮವಾಗಿ, ನಿಜ ಕೂಲಿಗಳನ್ನು ಪಾತಾಳಕ್ಕಿಳಿಸುವ ಸ್ಪರ್ಧೆಯಲ್ಲಿ ಸಿಕ್ಕಿ ಬೀಳುತ್ತವೆ. ಹಾಗಾಗಿ, ಮುಕ್ತ ವ್ಯಾಪಾರವು ಯಾವುದೇ ದೇಶದಲ್ಲಿ ಸೃಷ್ಠಿಸಿದ ನಿರುದ್ಯೋಗ ಸಮಸ್ಯೆಗೆ ಇಂತಹ ಕ್ರಮಗಳು ಪರಿಹಾರವಾಗುವುದಿಲ್ಲ.

ಅಷ್ಟೇ ಅಲ್ಲದೆ, ಇಂದಿನ ಜಗತ್ತಿನ ವಿದ್ಯಮಾನವಾಗಿರುವ ಹಣಕಾಸು ಬಂಡವಾಳದ ಆಧಿಪತ್ಯದಲ್ಲಿ, ವಿನಿಮಯ ದರದ  ಯಾವುದೇ ಅಪಮೌಲ್ಯವು, ಅಥವಾ ಅಪಮೌಲ್ಯವಾಗುವ ನಿರೀಕ್ಷೆಯೂ ಸಹ (ಈ ಕ್ರಮವನ್ನು ಮುಕ್ತ ವ್ಯಾಪಾರವು ಸೃಷ್ಠಿಸಿದ ನಿರುದ್ಯೋಗ ಸಮಸ್ಯೆಯಿಂದ ಬಾಧಿತವಾದ ಯಾವುದೇ ಸರ್ಕಾರವು ಕೈಗೊಳ್ಳುತ್ತದೆ) ಬಂಡವಾಳದ ಹೊರಗೆ ಹರಿದು ಹೋಗುವಂತೆ ಮಾಡುತ್ತದೆ. ಅದರಿಂದ ದೊಡ್ಡ ಮಟ್ಟದ ಅಸ್ಥಿರತೆ ಉಂಟಾಗಬಹುದು. ಹಾಗಾಗಿ, ಮುಕ್ತ ವ್ಯಾಪಾರವು ಸೃಷ್ಠಿಸಿದ ನಿರುದ್ಯೋಗ ಸಮಸ್ಯೆಗೆ ವಿನಿಮಯ ದರದ ಅಪಮೌಲ್ಯವು ಒಂದು ಪರಿಹಾರವೇ ಅಲ್ಲ.

ಈ ಹಂತದಲ್ಲಿ ಎರಡನೆಯ ಪ್ರಶ್ನೆ ಕಾಣಿಸಿಕೊಳ್ಳುತ್ತದೆ: ಮುಕ್ತ ವ್ಯಾಪಾರದ ಮೂಲಕ ದುಬಾರಿ ಉತ್ಪಾದಕರನ್ನು ನೆಲೆದಪ್ಪಿಸುವುದರಲ್ಲಿ ತಪ್ಪೇನಿದೆ? ಹೇಗಿದ್ದರೂ ಅವರ ಉತ್ಪಾದನಾ ವೆಚ್ಚ ದುಬಾರಿ ಇರುವುದರಿಂದ ಅವರ ಉತ್ಪಾದನೆಯನ್ನು ಕೊನೆಗೊಳಿಸುವುದೇ ಒಳಿತು. ಇದಕ್ಕೆ ಉತ್ತರ ಸರಳವಾಗಿದೆ: ತಮ್ಮ ಉತ್ಪಾದನಾ ಚಟುವಟಿಕೆಗಳಿಂದ ನೆಲೆದಪ್ಪಿಸಿದವರನ್ನು ಬೇರೆ ಯಾವುದೇ ಚಟುವಟಿಕೆಯಲ್ಲಿ ತೊಡಗಿಸುವುದಾದರೆ, ಆತಂಕವಿಲ್ಲ. ಆದರೆ, ಇದು ವಾಸ್ತವಿಕವಾಗಿ ಅಸಂಭವ. ಈ ಕಾರಣದಿಂದಾಗಿ, ನಿರುದ್ಯೋಗ ಸೃಷ್ಠಿಸುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದು ಖಂಡಿತವಾಗಿಯೂ ಸಮರ್ಥನೀಯವಲ್ಲ. ಈ ಅಂಶವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದು ದೇಶವು ಉದ್ಯೋಗದ ದೃಷ್ಠಿಯಿಂದ ಅಗತ್ಯವಾದ ವ್ಯಾಪಾರ ನಿರ್ಬಂಧ ಕ್ರಮಗಳನ್ನು ಹೇರಬೇಕು ಮತ್ತು ಅಂತಹ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಕೇಳುವ ಉತ್ಪಾದಕರ ಮಾತುಗಳು ಸಂಪೂರ್ಣವಾಗಿ ಸಮರ್ಥನೀಯವಾಗಿವೆ.

ಇಂತಹ ಅಭಿಪ್ರಾಯವು ಮೇಲ್ನೋಟದಲ್ಲಿ ದಕ್ಷತೆಯ ವಿರುದ್ಧವಾಗಿ ಕಾಣುತ್ತದೆ, ಏಕೆಂದರೆ, ದಕ್ಷತೆಯಿಂದ ಕೂಡಿದ್ದಾಗ ಮಾತ್ರ ಉತ್ಪಾದನೆ ಫಲಕಾರಿಯಾಗುತ್ತದೆ. ಆದರೆ, ಮುಕ್ತ ವ್ಯಾಪಾರದ ಸನ್ನಿವೇಶದಲ್ಲಿ ಎಲ್ಲ ಸಂಪನ್ಮೂಲಗಳೂ ಸಂಪೂರ್ಣವಾಗಿ ಬಳಕೆಯಾಗಿವೆ ಎಂಬುದಾಗಿ ಮೊದಲೇ ಭಾವಿಸಿಕೊಂಡು ದಕ್ಷತೆಯ ವಾದವನ್ನು ಮುಂದಿಡಲಾಗುತ್ತಿದೆ. ಅಂತಹ ಮಾದರಿ ಪರಿಸ್ಥಿತಿ ವಾಸ್ತವವಾಗಿ ಇಲ್ಲದಿರುವಾಗ, ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಒಂದು ಹರವಿನ ಉತ್ಪಾದನಾ ಚಟುವಟಿಕೆಗಳನ್ನು ದಕ್ಷತೆಯ ಹೆಸರಿನಲ್ಲಿ ನೆಲೆದಪ್ಪಿಸುವುದು ಅವಿವೇಕದ ಕೆಲಸವಾಗುತ್ತದೆ.

ಇಲ್ಲಿ ಏಳುವ ಪ್ರಶ್ನೆ ಎಂದರೆ: ಸ್ಥಳೀಯ ದುಬಾರಿ ಉತ್ಪಾದಕರನ್ನು ಸಹಿಸಿಕೊಳ್ಳುವ ಸಲುವಾಗಿ ಅಗ್ಗದ ಆಮದು ವಸ್ತುಗಳನ್ನು ತಡೆಗಟ್ಟುವುದರಿಂದಾಗಿ ಬಳಕೆದಾರರು ದುಬಾರಿ ಬೆಲೆ ತೆರಬೇಕೇ? ಈ ವಾದದಲ್ಲಿ ಸ್ವಲ್ಪ ಔಚಿತ್ಯವಿರುವುದು ಮೇಲ್ನೋಟದಲ್ಲಿ ಕಾಣುತ್ತದೆ. ಆದರೆ, ಈ ವಾದವು ಉತ್ಪಾದಕರು ಮತ್ತು ಬಳಕೆದಾರರ ನಡುವೆ ಮಾಡುವ ಒಂದು ಅಕ್ರಮ ಬೇಧ ಭಾವದ ಮೇಲೆ ನಿಂತಿದೆ.

ಈ ವಾದವು, ಅಗ್ಗದ ಆಮದುಗಳಿಂದಾಗಿ ಶ್ರಮಿಕರು ಮತ್ತು ರೈತರನ್ನೊಳಗೊಂಡ ಉತ್ಪಾದಕ ಸಮುದಾಯವು ತಮ್ಮ ವರಮಾನವನ್ನು ಕಳೆದುಕೊಂಡಾಗ, ಇನ್ನೊಂದು ಗುಂಪಿನ ವ್ಯಕ್ತಿಗಳು, ಅಂದರೆ, ಬಳಕೆದಾರರ ಸ್ಥಿತಿ-ಗತಿ ಉತ್ತಮವಾಗಿರುತ್ತದೆ ಎಂದು ಭಾವಿಸುತ್ತದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಮುಕ್ತ ವ್ಯಾಪಾರದಿಂದಾಗಿ ಉತ್ಪಾದಕ ಸಮುದಾಯದ ವರಮಾನವು ಇಳಿದರೂ ಸಹ ಅದು ಬಳಕೆದಾರರ ವರಮಾನವನ್ನು ತಟ್ಟುವುದಿಲ್ಲ ಎಂಬುದು ಈ ವಾದದ ಭಾವನೆ.

ಈ ವಾದವು ದೋಷಯುತವಾಗಿದೆ. ಏಕೆಂದರೆ, ಉತ್ಪಾದಕ ಸಮುದಾಯದ ವರಮಾನ ಇಳಿದಾಗ ಬಳಕೆದಾರರ ವರಮಾನವೂ ಇಳಿಯುತ್ತದೆ. ಉತ್ಪಾದಕರನ್ನು ನೆಲೆದಪ್ಪಿಸಿದ ಪರಿಣಾಮಗಳು ಇಡೀ ಅರ್ಥವ್ಯವಸ್ಥೆಯನ್ನೇ ತಟ್ಟುವ ಕಾರಣದಿಂದ ಅದರ ಪರಿಣಾಮಗಳಿಂದ ಬಳಕೆದಾರರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ವಸಾಹತು ಭಾರತದ ಉದಾಹರಣೆ ಸ್ಪಷ್ಟಪಡಿಸುತ್ತದೆ.

ಇಂಗ್ಲೆಂಡಿನ ಯಂತ್ರ ತಯಾರಿತ ಅಗ್ಗದ ವಸ್ತುಗಳನ್ನು ಆಮದು ಮಾಡಿಕೊಂಡ ಪರಿಣಾಮವಾಗಿ ಭಾರತದ ಕೈಕಸುಬುಗಾರಿಕೆ ನಾಶಗೊಂಡಿತು. ಪರಿಣಾಮವಾಗಿ, ಅಗಾಧ ಪ್ರಮಾಣದ ನಿರುದ್ಯೋಗ ಮತ್ತು ಬಡತನಗಳು ಉಂಟಾದವು. ಆರಂಭದಲ್ಲಿ, ಅಗ್ಗದ ಆಮದು ವಸ್ತುಗಳಿಂದ ರೈತರಿಗೆ ಅನುಕೂಲವೇ ಆಗಿತ್ತು ಎನ್ನಬಹುದು ಮತ್ತು ಕೈಕಸುಬುಗಳ ನಾಶವು ಅವರನ್ನು ತಟ್ಟಲಿಲ್ಲ. ಆದರೆ, ಕ್ರಮೇಣ, ನೆಲೆದಪ್ಪಿದ ಕೈಕಸುಬುದಾರರು ಜೀವನೋಪಾಯಕ್ಕಾಗಿ ಗ್ರಾಮೀಣ ಪ್ರದೇಶಗಳಿಗೆ ನುಗ್ಗಿದ ಪರಿಣಾಮವಾಗಿ ಕೃಷಿ ಕೂಲಿಗಾರರ ಕೂಲಿ ಇಳಿಯಿತು ಮತ್ತು ಭೂಮಿಯ ಮೇಲಿನ ಗೇಣಿಯೂ ಏರಿತು. ಈ ಎಲ್ಲ ವಿದ್ಯಮಾನಗಳಿಂದಾಗಿ, ಅಗ್ಗದ ಆಮದು ವಸ್ತುಗಳಿಂದ ಆರಂಭದಲ್ಲಿ ಅನುಕೂಲ ಪಡೆದವರೆಂದು ಭಾವಿಸಲಾಗಿದ್ದ ರೈತರ ವರಮಾನಗಳೂ ಇಳಿದವು. ಹಾಗಾಗಿ, ವಸಾಹತುಶಾಹಿ ಕಾಲದ ಕೈಗಾರಿಕೆಗಳ ವಿನಾಶವು, ಅಲೆಗಳು ಅಪ್ಪಳಿಸುವ ರೀತಿಯಲ್ಲಿ ಎಲ್ಲ ದುಡಿಮೆಗಾರರ ವರಮಾನಗಳನ್ನೂ ತಟ್ಟಿತು. ವಸಾಹತುಶಾಹಿಗಳು ತಮ್ಮ ವಸಾಹತುವಾದಿ ಆಳ್ವಿಕೆಯ ರಕ್ಷಣೆಗಾಗಿ ಸಾಕಿಕೊಂಡಿದ್ದ ಕೆಲವು ಮಂದಿ ಭೂ ಮಾಲೀಕರು ಮಾತ್ರ ಕೈಗಾರಿಕೆಗಳ ವಿನಾಶದ ಲಾಭ ಪಡೆದರು.

ಆದ್ದರಿಂದ, ನಿರುದ್ಯೋಗ ಸೃಷ್ಠಿಸುವ ಅಥವಾ ರೈತರ ವರಮಾನಗಳನ್ನು ಇಳಿಸುವ ಮುಕ್ತ ವ್ಯಾಪಾರ ಒಪ್ಪಂದವನ್ನು ಯಾವುದೇ ಸಂದರ್ಭದಲ್ಲೂ ಸಮರ್ಥಿಸುವಂತಿಲ್ಲ. ಹಾಗಾಗಿ, ಮೋದಿ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ಹಿಂದೆ ಸರಿಯುವಂತೆ ಜನತೆ ಹೇರಿದ ಒತ್ತಾಯವು ಸರಿಯಾಗಿಯೇ ಇದೆ.

ದೇಶದ ಹಾಲಿ ಬೌದ್ಧಿಕ ಕಥನವನ್ನು ಬಂಡವಾಳಶಾಹಿಯು ತನ್ನ ಅಧೀನತೆಗೆ ಅದೆಷ್ಟು ಮಟ್ಟಿಗೆ ಒಳಪಡಿಸಿಕೊಂಡಿದೆ ಎಂದರೆ, ಪೂರ್ಣ ಉದ್ಯೋಗದ ಕಲ್ಪನೆಯನ್ನೂ ಮಾಡಿಕೊಳ್ಳುವಂತಿಲ್ಲ ಎನ್ನುವ ಮಟ್ಟಕ್ಕೆ ಅದು ಇಳಿದಿದೆ. ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯೂರೋಪಿನ ಸಮಾಜವಾದಿ ದೇಶಗಳು ಪೂರ್ಣ ಉದ್ಯೋಗ ಗುರಿ ಸಾಧಿಸಿದ್ದವು ಮಾತ್ರವಲ್ಲ, ವಾಸ್ತವವಾಗಿ ಕೆಲಸಗಾರರ ಅಭಾವವೂ ಅಲ್ಲಿತ್ತು ಎಂಬುದನ್ನು ಅವರು ಮರೆತರೇ?

ಈ ಎಲ್ಲವನ್ನೂ ಒಂದು ವಾಸ್ತವಾಂಶವಾಗಿ ಹೇಳುವುದಾದರೆ, ವ್ಯಕ್ತಿಗಳ ಒಂದು ಗುಂಪು ತಾವೇ ಏನನ್ನು ಉತ್ಪಾದಿಸುತ್ತಾರೊ ಮತ್ತು ಅದನ್ನು ಸುಮ್ಮನೇ ತಾವೇ ಬಳಸಿ ಉಳಿದದ್ದನ್ನು ಹೂಡಿಕೆ ಮಾಡಿದರೆ, ಅಲ್ಲಿ ನಿರುದ್ಯೋಗವೇ ಇರುವುದಿಲ್ಲ. ನಿರುದ್ಯೋಗ ಉಂಟು ಮಾಡುವ ಒಂದು ದೊಡ್ಡ ಕಾರಣ ಯಾವುದು ಎಂದರೆ, ಕೆಲವರು ತಮ್ಮ ಗುಂಪಿನ ಇತರರು ಏನನ್ನು ಉತ್ಪಾದಿಸುತ್ತಾರೊ ಅದನ್ನು ಕೊಳ್ಳಲು ಇಷ್ಟಪಡುವುದಿಲ್ಲ. ಬದಲಿಗೆ, ತಮ್ಮ ಗುಂಪಿನ ಹೊರಗಿನವರು ಉತ್ಪಾದಿಸುವುದನ್ನು ಕೊಳ್ಳಲು ಬಯಸುತ್ತಾರೆ, ಹೊರಗಿನವರು ಈ ಗುಂಪಿನ ಯಾವ ಉತ್ಪಾದನೆಯನ್ನು ಕೊಳ್ಳದಿದ್ದರೂ ಸಹ. ಅಂತಹ ನಿರುದ್ಯೋಗವನ್ನು ಸೃಷ್ಠಿಸುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್.ಸಿ.ಇ.ಪಿ.) ಒಪ್ಪಂದವನ್ನು ತಡೆಗಟ್ಟಲೇಬೇಕು.

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *