ಸೊಲ್ಲಾಪುರ: ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಕನ್ನಡ ಹಾಗೂ ಉರ್ದು ಮಾಧ್ಯಮ ಶಾಲೆಗಳಲ್ಲಿ ಕೆಲವು ವರ್ಷಗಳಿಂದ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.
ಇನ್ಮುಂದೆ ಶಾಲೆಗಳ ಬೋಧನಾ ಮಾಧ್ಯಮಕ್ಕೆ ಅನುಗುಣವಾಗಿಯೇ ಮಹಾರಾಷ್ಟ್ರ ಶಿಕ್ಷಣ ಇಲಾಖೆಯ ‘ಪವಿತ್ರ ಪೋರ್ಟಲ್’ ತಂತ್ರಾಂಶದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಶಿಕ್ಷಕರ ನೇಮಕಾತಿ ನಡೆಸಲು ತೀರ್ಮಾನಿಸಿದೆ.
ಇದನ್ನೂ ಓದಿ : ಇಂಡಿ| ಅಭಿರುಚಿ ಆಧಾರಿತ ಶಿಕ್ಷಣವೇ ಭವಿಷ್ಯದ ದಾರಿ: ಯಶವಂತರಾಯಗೌಡ ಪಾಟೀಲ
ಹಿಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ‘ಪವಿತ್ರ’ ಪೋರ್ಟಲ್ ಮೂಲಕ ಕನ್ನಡ ಹಾಗೂ ಉರ್ದು ಮಾಧ್ಯಮ ಶಾಲೆಗಳಿಗೆ ಮರಾಠಿ ಮಾಧ್ಯಮದ ಶಿಕ್ಷಕರನ್ನು ನಿಯೋಜಿಸ ಲಾಗಿತ್ತು. ಇದರಿಂದ ಗಡಿಭಾಗದ ಕನ್ನಡಿಗರು ಹಾಗೂ ಭಾಷಾ ಹೋರಾಟಗಾರರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಮರಾಠಿ ಮಾತ್ರ ಬಲ್ಲ ಶಿಕ್ಷಕರು ಕನ್ನಡ ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಬೋಧನೆ ನಡೆಸಲು ಸಾಧ್ಯವಿಲ್ಲ ಎಂಬ ಆಕ್ಷೇಪ ಕೇಳಿಬಂದಿತ್ತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಭೇಟಿ ನೀಡಿ, ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ವಿಷಯ ತಂದಿದ್ದರು. ಈ ಬಗ್ಗೆ ಜತ್ತ ತಾಲ್ಲೂಕಿನ ಮಾಜಿ ಶಾಸಕ ವಿಕ್ರಮಸಿಂಹ ಸಾವಂತ ನೇತೃತ್ವದಲ್ಲಿ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರವು ಹೋರಾಟ ನಡೆಸಿತ್ತು.
‘ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕ ಹಕ್ಕುಗಳನ್ನು ಒದಗಿಸುವುದು ಆಯಾ ರಾಜ್ಯ ಸರ್ಕಾರಗಳ ಪ್ರಮುಖ ಜವಾಬ್ದಾರಿ’ ಎಂದು ಸೋಮಣ್ಣ ಬೇವಿನಮರದ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ನೋಡಿ : ಲಾಲ್ಬಾಗ್ ಫ್ಲವರ್ ಶೋ| ಬಣ್ಣಬಣ್ಣದ ಹೂಗಳ ಚಿತ್ತಾರದಲ್ಲಿ ‘ತೇಜಸ್ವಿ ವಿಸ್ಮಯ’ Janashakthi Media
