ಡಿಸೆಂಬರ್ 17 ರಿಂದ 20 ರವರೆಗೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದ ಸಿಐಟಿಯು ಅಖಿಲ ಭಾರತ ಜನರಲ್ ಕೌನ್ಸಿಲ್ ನಾಲ್ಕು ದಿನಗಳ ಸಭೆಯು ದೇಶದ ಕಾರ್ಮಿಕ ವರ್ಗವು ದೇಶವಿರೋಧಿ ಹಾಗೂ ಜನವಿರೋಧಿ ನವ ಉದಾರೀಕರಣ ನೀತಿಗಳ ವಿರುದ್ದ ನಡೆಸಲಾಗುತ್ತಿರುವ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ ಅವುಗಳನ್ನು ಹಿಮ್ಮೆಟ್ಟಿಸುವಂತೆ ಚಳವಳಿ ನಡೆಸಲು ಕರೆ ನೀಡಿದೆ.
ಎಡಶಕ್ತಿಗಳ ಪರವಾಗಿ ಬದ್ದತೆ ಘೋಷಣೆ
ಇದೇ ಸಂದರ್ಭದಲ್ಲಿ, ಮುಂಬರುವ ದಿನಗಳಲ್ಲಿ ವಿಶೇಷವಾಗಿ ಪ.ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಹಾಗೂ ಪಾಂಡಿಚೇರಿಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳಲ್ಲಿ ದುಡಿಯುವ ವರ್ಗದ ಹಿತಾಸಕ್ತಿಗೆ ವಿರುದ್ದವಾಗಿ ಇದೇ ಉದಾರೀಕರಣ ನೀತಿಗಳನ್ನು ಜಾರಿ ಮಾಡುತ್ತಿರುವ ಪಕ್ಷಗಳನ್ನು ಹಾಗೂ ಕೋಮು ಹೆಸರಿನಲ್ಲಿ ದುಡಿಯುವ ವರ್ಗವನ್ನು ವಿಭಜಿಸಲು ಪ್ರಯತ್ನಿಸುವ ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಮತ್ತು ಅಲ್ಲೆಲ್ಲಾ ಎಡ ಪ್ರಜಾಸತ್ತಾತ್ಮಕ ಶಕ್ತಿಗಳ ಗೆಲುವಿಗೆ ಕಾರ್ಮಿಕ ವರ್ಗಧೃಢವಾಗಿ ನಿಲ್ಲಬೇಕೆಂಬ ಕರೆಯನ್ನು ಸಿಐಟಿಯು ಜನರಲ್ ಕೌನ್ಸಿಲ್ ಸಭೆ ನೀಡಿದೆ.
ಕೋಮುಶಕ್ತಿಗಳ ಅಪಾಯ
ಕಾರ್ಮಿಕ ವರ್ಗದ ಐಕ್ಯತೆಗೆ ಭಂಗವನ್ನುಂಟು ಮಾಡಿ ಶೋಷಿತ ಜನರ ಚಳಿವಳಿಯನ್ನು ಹಾಳು ಮಾಡಲು ಕೋಮುವಾದಿ ಶಕ್ತಿಗಳು ನಡೆಸುತ್ತಿರುವ ಪಿತೂರಿಗಳ ಬಗ್ಗೆ ದುಡಿಯುವ ವರ್ಗ ಎಚ್ಚರಿಕೆಯಿಂದ ಇರಬೇಕೆಂಬ ಸಂದೇಶವನ್ನು ನೀಡಿರುವ ಸಭೆಯು ಆ ಮೂಲಕ ದೇಶೀಯ ಹಾಗೂ ವಿದೇಶಿ ಬಹುರಾಷ್ಟ್ರೀಯ ಕಾರ್ಪೋರೇಟ್ಗಳ ಹಿತಾಸಕ್ತಿಗಳ ರಕ್ಷಣೆಗಾಗಿ ನಡೆಯುತ್ತಿರುವ ಎಲ್ಲಾ ರೀತಿಯ ಯೋಜಿತ ಹುನ್ನಾರಗಳನ್ನು ಸೋಲಿಸಿ ಕಾರ್ಮಿಕ ವರ್ಗ ತನ್ನ ಐಕ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಬೇಕೆಂದು ಕರೆ ನೀಡಿದೆ.
ಮೋದಿ ಸರಕಾರದ ಅಪಾಯದ ನಡೆ
ಸೆಪ್ಟೆಂಬರ್ 2 ರಂದು ದೇಶದ ದುಡಿಯುವ ಜನರು ತೀವ್ರ ರೀತಿಯ ಪ್ರತಿರೊಧವನ್ನು ವ್ಯಕ್ತಪಡಿಸಿದ್ದಾಗ್ಯೂ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ನವ ಉದಾರವಾದಿ ನೀತಿಗಳನ್ನು ಮತ್ತಷ್ಟು ತೀವ್ರಗತಿಯಲ್ಲಿ ಹರಿಯ ಬಿಡುತ್ತಿರುವ ಕ್ರಮವನ್ನು ಜನರಲ್ ಕೌನ್ಸಿಲ್ ಸಭೆ ತೀವ್ರವಾಗಿ ಖಂಡಿಸಿದೆ. ಮೋದಿ ಸರಕಾರದ ವಿರುದ್ದ ಕಾರ್ಮಿಕ ವರ್ಗ ನಡೆಸುತ್ತಿರುವ ಜಂಟಿ ಹೋರಾಟವನ್ನು ಮತ್ತಷ್ಟು ಮುಂದುವರೆಸಲು ನಿರ್ಧರಿಸಿ 2016 ಫ್ರೆಬ್ರವರಿ 5 ರಂದು ಕೇಂದ್ರ ಕಾರ್ಮಿಕ ಸಂಘಗಳು ಜಂಟಿಯಾಗಿ ಕರೆ ನೀಡಿರುವ ದೇಶದ್ಯಾಂತ ಜಂಟಿ ಕಾರ್ಯಚರಣೆ ಹಾಗೂ ಪ್ರಚಾರಾಂದೋಲನವನ್ನು ಯಶಸ್ವಿಗೊಳಿಸಲು ಕರೆ ನೀಡಿದೆ.
ಜಂಟಿ ಕಾರ್ಯಚರಣೆ ತೀವ್ರಗೊಳಿಸಿ
ಕೇಂದ್ರ ಕಾರ್ಮಿಕ ಸಂಘಗಳು ಜಂಟಿಯಾಗಿ ಮಂಡಿಸಿರುವ 12 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಕೋಮುವಾದದ ಅಪಾಯಗಳ ಕುರಿತಾಗಿತನ್ನ ಸ್ವತಂತ್ರ ಕಾರ್ಯಚರಣೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಿಐಟಿಯು ನಿರ್ಧರಿಸಿದೆ. ಸ್ವತಂತ್ರ ಹಾಗೂ ಜಂಟಿ ಚಳವಳಿ ರೂಪಿಸಲು ವಿಪುಲ ಅವಕಾಶಗಳು ನಮ್ಮ ಚಳುವಳಿ ಮುಂದಿವೆ. ಈಗಾಗಲೇ ಕಲ್ಲಿದ್ದಲು, ಸಾರಿಗೆ, ಬಂದರು, ವಿದ್ಯುತ್, ಹಾಗೂ ಅಂಗನವಾಡಿ ನೌಕರರು ಜಂಟಿ ಚಳುವಳಿಗೆ ಧುಮುಕಿದ್ದಾರೆ. ಇಂತಹ ಎಲ್ಲಾ ಚಳವಳಿಗೆ ಸಿಐಟಿಯುವಿನ ಎಲ್ಲಾ ಹಂತದ ಸಮಿತಿಗಳು ಸಂಪೂರ್ಣ ಬೆಂಬಲ ನೀಡಿ ಆ ಚಳುವಳಿಗಳನ್ನು ಮತ್ತಷ್ಟು ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೂ ವಿಸ್ತಾರಗೊಳ್ಳುವಂತೆ ಸಭೆಯು ಕರೆ ನೀಡಿದೆ.
ರೈತ-ಕೂಲಿಕಾರ-ಕಾರ್ಮಿಕ ಸಖ್ಯತೆ
ಮುಂಬರುವ ದಿನಗಳಲ್ಲಿ ರೈತ ಕಾರ್ಮಿಕರ ಸಖ್ಯತೆಯೊಂದಿಗೆ ವಿಶಾಲ ತಳಹದಿಯ ಹೋರಾಟ ರೂಪಿಸಲು ನಿರ್ಧರಿಸಿರುವ ಸಿಐಟಿಯು ಅದಕ್ಕಾಗಿ 1982 ಜನವರಿ 19 ರಂದು ದೇಶದಲ್ಲಿ ಮೊಟ್ಟಮೊದಲ ಸಾರ್ವತ್ರಿಕ ಮುಷ್ಕರ ನಡೆಸಿ 10 ಜನ ಹೋರಾಟಗಾರರು ಹುತಾತ್ಮರಾದ ದಿನವಾದ 19 ಜನವರಿ 2016 ರಂದು ದೇಶದ್ಯಾಂತ ರೈತ-ಕೂಲಿಕಾರರು ಹಾಗೂ ಕಾರ್ಮಿಕರ ದಿನವನ್ನಾಗಿ ಆಚರಿಸಲು ಕರೆ ನೀಡಿದೆ.
ಬೀಡಿ-ತೋಟೊದ್ಯಮ ಅಪಾಯದಲ್ಲಿ
ಬೀಡಿ ಉಧ್ಯಮದ ಬೆಳವಣಿಗೆ ಹಾಗೂ ಪ. ಬಂಗಾಳದ ಟೀ ತೋಟಗಳಲ್ಲಿ ಕಾರ್ಮಿಕರ ನಿರಂತರ ಸಾವುಗಳ ಬಗ್ಗೆ ತನ್ನ ತೀವ್ರ ಆತಂಕವನ್ನು ಸಭೆ ವ್ಯಕ್ತಪಡಿಸಿತು. ತಂಬಾಕು ನಿಷೇಧದ ಬಗ್ಗೆ ವ್ಯಾಪಕ ಚರ್ಚೆಗಳನ್ನು ಸರಕಾರಗಳು ಹುಟ್ಟು ಹಾಕಿವೆ, ಆದರೆ ಭಾರತದಲ್ಲಿ ಬೀಡಿ ಉದ್ಯಮ ಒಂದನ್ನೇ ನಂಬಿ ಸುಮಾರು 2 ಕೋಟಿ ಕುಟುಂಬಗಳು ಜೀವನ ನಡೆಸಿವೆ. ಆದರೆ ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಪರ್ಯಾಯ ಉದ್ಯೋಗಗಳನ್ನು ನೀಡದೆ ಅವರ ಬದುಕಿನ ಮೇಲೆ ಗದಾ ಪ್ರಹಾರ ನಡೆಸಲು ಸರಕಾರಗಳು ಹೊರಟಿರುವುದನ್ನು ಸಭೆ ಖಂಡಿಸಿ ಪರ್ಯಾಯ ಉದ್ಯೋಗಕ್ಕಾಗಿ ಅಗತ್ಯವಿರುವ ಹಣಕಾಸು ನೆರವನ್ನು ಸರಕಾರ ಪ್ರಕಟಿಸಬೇಕೆಂದು ಸಭೆ ಆಗ್ರಹಪಡಿಸಿತು. ಅಲ್ಲದೇ ಪ.ಬಂಗಾಳದ ಟೀಗಾರ್ಡನ್ ನಲ್ಲಿ ಸಂಭವಿಸಿರುವ ಹಸಿವಿನ ಸಾವಿಗೆ ಮತ್ತು ಇತ್ತೀಚಿಗೆ ಚೆನ್ನೈನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಲ್ಲಿ ಸಾವನಪ್ಪಿದ ಹಾಗೂ ತೀವ್ರ ಸಂಕಷ್ಟಕ್ಕೊಳಗಾದ ಜನರಿಗೆ ಅಗತ್ಯ ನೆರವು ನೀಡಲು ಸಿಐಟಿಯು ಸಮಿತಿಗಳಿಗೆ ಸಭೆ ಕರೆ ನೀಡಿದೆ.