‘ಸಹಸ್ರಮಾನ ಅಭಿವೃದ್ಧಿ ಗುರಿ’ಗಳಿಗೆ ವಿದಾಯ, ‘ಸುಸ್ಥಿರ ಅಭಿವೃದ್ಧಿ ಗುರಿ’ಗಳಿಗೆ ಸ್ವಾಗತ! ಐಎಂಎಫ್-ವಿಶ್ವ ಬ್ಯಾಂಕ್ ಉಪದೇಶ

 

ಕುರುಡು ಕಾಂಚಾಣ – ಕೆ.ಎಂ. ನಾಗರಾಜ್

ಸಂಪುಟ 9 ಸಂಚಿಕೆ 47, 22 ನವೆಂಬರ್ 2015

ಸಹಸ್ರಮಾನದ ಗುರಿಗಳು ವಿಫಲವಾಗಿರುವ ಸಂದರ್ಭದಲ್ಲಿ ಐಎಂಎಫ್ ಮತ್ತು ವಿಶ್ವಬ್ಯಾಂಕ್ ತಮ್ಮ ಮಾನ ಮುಚ್ಚಿಕೊಳ್ಳಲು ಅದೇ ಹಳಸಲು ಪದಾರ್ಥಕ್ಕೆ ವಗ್ಗರಣೆ ಹಾಕಿ ‘ಸುಸ್ಥಿರ ಅಭಿವೃದ್ಧಿ ಗುರಿಗಳು’ ಎಂದು ನಾಮಕರಣಮಾಡಿವೆ. ಇದೇ ಸಂದರ್ಭವನ್ನು ಬಳಸಿ ಬಡವರಿಗೆ ಒದಗಿಸುವ ಪರಿಹಾರ ಮತ್ತು ಜನ ಕಲ್ಯಾಣ ಯೋಜನೆಗಳನ್ನು ಕಡಿತ ಮಾಡಿ ‘ಮಿತವ್ಯಯ’ ಪಾಲಿಸಬೇಕೆಂಬ ತಮ್ಮ ಉಪದೆಶವನ್ನು ಸೇರಿಸಿವೆ.

ಈ ಸಹಸ್ರಮಾನದ ಆರಂಭದಲ್ಲಿ ಅಂದರೆ 2000 ಇಸ್ವಿಯಲ್ಲಿ ರೂಪಿಸಿದ ‘ಸಹಸ್ರಮಾನ ಅಭಿವೃದ್ಧಿ ಗುರಿಗಳು’(ಎಂಡಿಜಿ) 2015ರಲ್ಲಿ ಸಮಾಪ್ತಿಯಾಗುತ್ತವೆ. ಅದರ ಅರ್ಥ ಗುರಿ ತಲುಪಿವೆ ಎಂದಲ್ಲ. ಮೈಲಿಕಲ್ಲು ಮತ್ತು ಹೆಸರು ಬದಲಾಗಿ ಈಗ ಅವು ಸುಸ್ಥಿರ ಅಭಿವೃದ್ಧಿ ಗುರಿಗಳು’(ಎಸ್‍ಡಿಜಿ) ಆಗಿವೆ.

ಗ್ಲೋಬಲ್ ಮಾನಿಟೊರಿಂಗ್ ರಿಪೋರ್ಟ್ 2015/2016 ವರದಿ ಮಾಡಿರುವ ಕೆಲವು ಅಂಶಗಳು ಹೀಗಿವೆ:

  • 2012ರಲ್ಲಿ 90 ಕೋಟಿ ಜನರು ಬಡತನ ರೇಖೆಯ ಕೆಳಗಿದ್ದರು. (ದಿನವೊಂದಕ್ಕೆ 1.9 ಡಾಲರ್‍ಗಿಂತ ಕಡಿಮೆ ಹಣದಲ್ಲಿ ಜೀವನ ಮಾಡುತ್ತಿದ್ದವರು). ಅವರ ಸಂಖ್ಯೆ 2015ರಲ್ಲಿ 70 ಕೋಟಿಗೆ ಇಳಿಯತ್ತದೆಂದು ಅಂದಾಜು ಮಾಡಲಾಗಿದೆ. (ಭಾರತಕ್ಕೆ ಸಂಬಂಧಿಸಿದಂತೆ ಈ ಅಂಕಿ ಅಂಶಗಳು ವಿಶ್ವಾಸಾರ್ಹವಲ್ಲ ಎಂದು ಪ್ರೊ. ಪ್ರಭಾತ್ ಪಟ್ನಾಯಕ್ ಅಭಿಪ್ರಾಯಪಟ್ಟಿದ್ದಾರೆ.)

  • ಜನಸಂಖ್ಯೆ ಪಿರಮಿಡ್‍ನ ತಳದ 40% ಜನರ ವರಮಾನದ ಬೆಳವಣಿಗೆ ದರ 4.6%ರಿಂದ 2.9%ಗೆ ಇಳಿದಿದೆ. ಇಡೀ ಜನಸಂಖ್ಯೆಯ ವರಮಾನದ ಬೆಳವಣಿಗೆ ದರ 3.0%ರಿಂದ 1.7%ಗೆ ಇಳಿದಿದೆ.

  • ‘ಬಡತನದ ಅಗಾಧತೆ’ ಮತ್ತು ‘ಏಳಿಗೆಯ ಹಂಚಿಕೆಯಲ್ಲಿನ ಅಸಮತೆ’ ವಿಶ್ವ ಎದುರಿಸುತ್ತಿರುವ ಎರಡು ಅತಿ ದೊಡ್ಡ ಸವಾಲುಗಳು.

  • 86 ಕೋಟಿ ಜನರು ಕೊಳೆಗೇರಿಗಳಲ್ಲಿ ವಾಸಮಾಡುತ್ತಿದ್ದಾರೆ.

  • ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ನರಳುತ್ತಿದೆ.

  • 60% HIV ಪೀಡಿತರಿಗೆ ಔಷಧೋಪಚಾರ ದೊರೆಯುತ್ತಿಲ್ಲ.

  • 2013ರಲ್ಲಿ 15 ಲಕ್ಷ ಮಂದಿ ಕ್ಷಯ ರೋಗದಿಂದ ಮತ್ತು 4,53,000 ಮಕ್ಕಳು ಮಲೇರಿಯಾದಿಂದ ಮೃತರಾಗಿದ್ದಾರೆ.

ಇದು ಸಹಸ್ರಮಾನ ಅಭಿವೃದ್ಧಿ ಗುರಿಗಳ ‘ಸಾಧನೆ’ಯ ಪಟ್ಟಿ. ಗುರಿ ತಲುಪುವ ಹೊಣೆಗಾರಿಕೆಯಲ್ಲಿ ವಿಫಲವಾಗಿರುವ ದೇಶಗಳ ಪೈಕಿ ಭಾರತ ಪ್ರಮುಖವಾಗಿದೆ. ಗುರಿ ಸಾಧನೆಯಲ್ಲಿ ವಿಫಲವಾಗಿರುವ ದೇಶಗಳನ್ನು ತರಾಟೆಗೆ ತೆಗೆದುಕೊಳ್ಳದ ಐಎಂಎಫ್ ಮತ್ತು ವಿಶ್ವಬ್ಯಾಂಕ್ ತಮ್ಮ ಮಾನ ಮುಚ್ಚಿಕೊಳ್ಳಲು ಅದೇ ಹಳಸಲು ಪದಾರ್ಥಕ್ಕೆ ವಗ್ಗರಣೆ ಹಾಕಿ ‘ಸುಸ್ಥಿರ ಅಭಿವೃದ್ಧಿ ಗುರಿಗಳು’ ಎಂದು ನಾಮಕರಣಮಾಡಿವೆ.

ಈ ಹೊಸ ಗುರಿಗಳು ಉದ್ಭವಿಸಿದ್ದು ಹೇಗೆ?

ಅಭಿಪ್ರಾಯಗಳನ್ನು 193 ದೇಶಗಳಿಂದ, ಪ್ರತಿಕ್ರಿಯೆ ವ್ಯಕ್ತಪಡಿಸುವ 70 ಲಕ್ಷ ಮಂದಿಯಿಂದ ಆನ್‍ಲೈನ್ ಮೂಲಕ ಮತ್ತು ವಿಶ್ವ ಸಂಸ್ಥೆಯ ಪಟ್ಟಿಯಲ್ಲಿರುವ ಗಣ್ಯ ವ್ಯಕಿಗಳಿಂದ ಸಂಗ್ರಹಿಸಲಾಗಿದೆ.

ಈ ಗುರಿಗಳನ್ನು ತಲುಪಲು ಹೂಡಿಕೆಯ ಮಟ್ಟ ಬಿಲಿಯನ್(ನೂರು ಕೋಟಿ)ಗಳಿಂದ ಟ್ರಿಲಿಯನ್(ಲಕ್ಷ ಕೋಟಿ)ಡಾಲರುಗಳಿಗೆ ಏರಿಸಬೇಕೆಂದು ಕರೆ ನೀಡಿರುವ ಐಎಂಎಫ್ ಮತ್ತು ವಿಶ್ವ ಬ್ಯಾಂಕ್, ಜಾಗತಿಕ ಬೆಳವಣಿಗೆಯ ವೇಗ ನಿಧಾನವಾಗುತ್ತಿದ್ದು ಅದು ಬಹಳ ಕಾಲ, ಅಂದರೆ, 2030ರವರೆಗೂ ಹಾಗೇ ಇರುತ್ತದೆಂದು ಮುನ್ಸೂಚನೆ ಕೊಟ್ಟಿವೆ. ಇಂತಹ ಪರಿಸ್ಥಿತಿಯಲ್ಲಿ ಆ ಪ್ರಮಾಣದ ಹೂಡಿಕೆಗೆ ಹಣ ಬರುವುದಾದರೂ ಎಲ್ಲಿಂದ?

ಸಬ್ಸಿಡಿಯ ಮೇಲೆ ಹಲ್ಲೆ

ಬಡತನ ಕೊನೆಗೊಳಿಸಲು ಮತ್ತು ಏಳಿಗೆಯ ಹಂಚಿಕೆಯಲ್ಲಿನ ಅಸಮತೆಯನ್ನು ಕೊನೆಗೊಳಿಸಲು ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಕೊಟ್ಟಿರುವ ಉಪದೇಶ ಬಹಳ ಸರಳವಾಗಿದೆ. ಎಲ್ಲ ರೀತಿಯ ಸಬ್ಸಿಡಿಗಳನ್ನು ನಿಲ್ಲಿಸುವುದೇ ಅವರ ಸಲಹೆ.

ತೈಲ ಬೆಲೆಗಳು ಕುಸಿದಿರುವ ಈ ಸಮಯವೇ ಸಬ್ಸಿಡಿಗಳನ್ನು ಕೊನೆಗೊಳಿಸಲು ಒಂದು ಸುವರ್ಣಾವಕಾಶ ಎಂದಿವೆ. ಸಬ್ಸಿಡಿಗಳನ್ನು ಕೊನೆಗೊಳಿಸುವ ಅವರ ಸಲಹೆ ಅಸಂಬದ್ಧವಾಗಿದೆ. ಸಬ್ಸಿಡಿ ಕೊನೆಗೊಳಿಸುವುದರಿಂದ ಹಸಿವು, ಬಡತನ ಹೆಚ್ಚುತ್ತದೆ ಎಂಬುದು ಬಡವರ ಜೊತೆ ಕೆಲಸ ಮಾಡಿದವರ ಅನುಭವ. ಹಲವು ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ಮತ್ತು ಚೀನಾದಲ್ಲಿ ಬಡತನ ನಿವಾರಣೆ ಮಾಡಲು ಸಾಧ್ಯವಾಗಿರುವುದು ಅಲ್ಲಿನ ಪ್ರಭುತ್ವವು ಮಾಡಿರುವ ಬೃಹತ್ ಪ್ರಮಾಣದ ಹೂಡಿಕೆ ಮತ್ತು ಸಬ್ಸಿಡಿಗಳ ಮೂಲಕವೇ.

ಸುಸ್ಥಿರ ಅಭಿವೃದ್ಧಿ ಗುರಿಗಳ ತಿರುಳೇನು?

ಬಡತನ ನಿವಾರಿಸಲು ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ತೋರಿಸುತ್ತಿರುವ ಆಸಕ್ತಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಉದ್ದೇಶ ಸ್ಫಷ್ಟವಾಗಿದೆ. ಉದಯೋನ್ಮುಖ ದೇಶಗಳು ತಮ್ಮ ಮಾರುಕಟ್ಟೆಯನ್ನು ಅಂತರಾಷ್ಟ್ರೀಯ ಹಣಕಾಸು ಬಂಡವಾಳದ ಶೋಷಣೆಗೆ ಮುಕ್ತವಾಗಿ ತೆರೆದು ಕೊಡಬೇಕು ಎಂಬುದು ಅವರ ಉದ್ದೇಶ. ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರಲು ಇದೊಂದು ನೆಚ್ಚಬಹುದಾದ ಹಾದಿ ಎಂದು ಅವರಿಗೆ ಖಾತ್ರಿಯಾಗಿದೆ. ಸಕ್ಕರೆ ಲೇಪನದ ಸೂಚನೆಗಳ ಮೂಲಕ ಬಂಡವಾಳಶಾಹಿಗೆ ರಕ್ಷಣೆ ಒದಗಿಸುವುದೇ ಅವರ ಅಜೆಂಡಾ. ಪ್ರಭುತ್ವವು ಬಡವರಿಗೆ ಒದಗಿಸುವ ಪರಿಹಾರ ಮತ್ತು ಜನ ಕಲ್ಯಾಣ ಯೋಜನೆಗಳನ್ನು ಕಡಿತ ಮಾಡಿ ‘ಮಿತವ್ಯಯ’ ಪಾಲಿಸಬೇಕೆಂಬುದೇ ಅವರ ಮಂತ್ರ.

(ಇದು ಪೀಪಲ್ಸ್ ಡೆಮಾಕ್ರಸಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಸಂಗ್ರಹಾನುವಾದ)

Donate Janashakthi Media

Leave a Reply

Your email address will not be published. Required fields are marked *