ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ; ನಾಳೆ ಚರ್ಚೆಗೆ ಅವಕಾಶ ಸಾಧ್ಯತೆ

 

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‍ ಪಕ್ಷ  ಬಿಎಸ್‍ವೈ ಸರ್ಕಾರದ ವಿರುದ್ಧ ಮಂಡಿಸಿರುವ ಅವೀಶ್ವಾಸ ನಿರ್ಣಯ ಕುರಿತ ಚರ್ಚೆಗೆ ಗುರುವಾರ ಸ್ಪೀಕರ್‍ ವಿಶ್ವೇಶ್ವರ ಹೆಗಡೆ ಕಾಗೇರಿ ಚರ್ಚೆಗೆ ಅವಕಾಶ ನಿರಾಕರಿಸಿದರು. ಆದರೆ ಗುರುವಾರ ಅಥವಾ ಶುಕ್ರವಾರ ಅವಕಾಶ ನೀಡುವ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಇವತ್ತು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ಆದರೆ, ಅಗತ್ಯ ಸಂಖ್ಯೆ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಆಡಳಿತ ಪಕ್ಷದ ಕೆಲ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಿರ್ಣಯದ ಮೇಲೆ ಇವತ್ತೇ ಚರ್ಚೆಗೆ ಅವಕಾಶ ಕೊಡಬೇಕೆಂದು ಕಾಂಗ್ರೆಸ್ ಪಕ್ಷದ ಸದಸ್ಯರ ಬೇಡಿಕೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕರಿಸಿದರು. ಇವತ್ತು ವಿಧೇಯಕಗಳ ಮಂಡನೆಯಾಗಬೇಕಿದ್ದು, ನಾಳೆ ಅಥವಾ ನಾಳಿದ್ದು ತಮ್ಮ ನಿರ್ಣಯದ ಮೇಲಿನ ಚರ್ಚೆಗೆ ಅವಕಾಶ ಕೊಡುವುದಾಗಿ ವಿಧಾನಸಭಾಧ್ಯಕ್ಷರು ತಿಳಿಸಿದರು. ಆದರೆ, ಅವಿಶ್ವಾಸ ನಿರ್ಣಯ ಮಂಡನೆಯಾದ ಮೇಲೆ ಬೇರೆ ಯಾವುದೇ ಸರ್ಕಾರಿ ವಿಷಯ ಪ್ರಸ್ತಾಪ ಆಗಬಾರದು. ಹಾಗೆ ಮಾಡಿ ಗೌರವಕ್ಕೆ ಧಕ್ಕೆ ತರಬೇಡಿ ಎಂದು ಕಾಂಗ್ರೆಸ್ ಸದಸ್ಯ ಹೆಚ್.ಕೆ. ಪಾಟೀಲ್ ಕುಟುಕಿದರು. ಆದರೂ ಅದಕ್ಕೆ ಬಗ್ಗದ ಸ್ಪೀಕರ್ ಅವರು ಕೆಲ ವಿಧೇಯಕಗಳ ಮಂಡನೆಗೆ ಅವಕಾಶ ಕೊಟ್ಟರು. ಬಳಿಕ ಸದನವನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದರು.

ಅವಿಶ‍್ವಾಸಕ್ಕೆ ಜೆಡಿಎಸ್‍ ಅಸಹಕಾರ
ಇದಕ್ಕೂ ಮುನ್ನ, ಅವಿಶ್ವಾಸ ನಿರ್ಣಯ ಮಂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, 367ರ ಅಡಿಯಲ್ಲಿ ಒಂದು ನೋಟೀಸ್ ನೀಡಿದ್ದೇನೆ. ಯಡಿಯೂರಪ್ಪನವರ ಮಂತ್ರಿಮಂಡಲದ ಮೇಲೆ ವಿಶ್ವಾಸ ಇಲ್ಲ ಎಂದು ಹೇಳಿದರು. ಅವಿಶ್ವಾಸ ನಿರ್ಣಯದ ಮೇಲೆ ಒಪ್ಪಿಗೆ ಇರುವ ಸದಸ್ಯರು ಎದ್ದು ನಿಲ್ಲುವಂತೆ ಸ್ಪೀಕರ್ ಸೂಚಿಸಿದಾಗ ಕಾಂಗ್ರೆಸ್​ನ 23 ಸದಸ್ಯರು ಎದ್ದು ನಿಂತರು. ಕುತೂಹಲವೆಂದರೆ ಜೆಡಿಎಸ್ ಪಕ್ಷದ ಸದಸ್ಯರು ಎದ್ದುನಿಲ್ಲಲಿಲ್ಲ. ಅವಿಶ್ವಾಸದ ಸಹವಾಸವೇ ಬೇಡ ಎಂದು ಜೆಡಿಎಸ್ ಸದಸ್ಯರು ನಿರುಮ್ಮಳರಾಗಿ ಕೂತಿದ್ದರು.
ಇನ್ನೂ ಕುತೂಹಲವೆಂದರೆ, ಆಡಳಿತ ಪಕ್ಷ ಮತ್ತು ವಿಪಕ್ಷಗಳ ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಿರುವಾಗ ಸರ್ಕಾರದ ಪರವಾಗಿ ಆರ್ ಅಶೋಕ್ ಮತ್ತು ರಾಮದಾಸ್ ಅವರೇ ಹೆಚ್ಚಾಗಿ ಮಾತನಾಡುತ್ತಿದ್ದರು. ಉಳಿದಂತೆ ವಿಪಕ್ಷ ಸದಸ್ಯರ ವಾಗ್ದಾಳಿಗೆ ಉತ್ತರ ನೀಡುವವರ ಸಂಖ್ಯೆ ತೀರಾ ಕಡಿಮೆಯಾಗಿಹೋಗಿತ್ತು. ಯಾರೂ ಕೂಡ ಸದ್ದಿಲ್ಲದೆ ಕೂತಿದ್ದರು. ಸಿಎಂ ಮೇಲೆ ಕೆಲ ಬಿಜೆಪಿ ಶಾಸಕರು ಮುನಿಸಿಕೊಂಡಂತೆ ತೋರಿತ್ತು. ಈ ಮೂಲಕ ಕಾಂಗ್ರೆಸ್​ನ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿಯ ಕೆಲ ಶಾಸಕರು ಪರೋಕ್ಷವಾಗಿ ಸಹಮತ ಹೊಂದಿದ್ದಾರಾ ಎಂಬ ಪ್ರಶ್ನೆ ಮೂಡದೇ ಇರದು. ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಸರ್ಕಾರದ ಹಗರಣಗಳ ಬಗ್ಗೆ ಸದನದಲ್ಲಿ ತಿವಿಯುತ್ತಿದ್ದಾಗಲೂ ಬಹುತೇಕ ಬಿಜೆಪಿ ಶಾಸಕರು ಮೌನವಾಗಿದ್ದರು. ಡಾ. ಸುಧಾಕರ್ ಒಬ್ಬರೇ ಏಕಾಂಗಿಯಾಗಿ ವಿಪಕ್ಷಗಳ ದಾಳಿಯನ್ನು ಎದುರಿಸುತ್ತಿದ್ದರು. ಬಿಜೆಪಿ ಸದಸ್ಯರ ಈ ಮೌನ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುವಂತಿದೆ.
ಇದೇ ವೇಳೆ, ಅವಿಶ್ವಾಸ ನಿರ್ಣಯದ ಮೇಲಿನ ಹಗ್ಗ ಜಗ್ಗಾಟದ ಮಧ್ಯೆ ಮೂರು ವಿಧೇಯಕಗಳು ಮಂಡನೆಯಾದವು. ರಾಜ್ಯ ಸಾದಿಲ್ವಾರು ನಿಧಿ ತಿದ್ದುಪಡಿ ವಿಧೇಯ, ಭೂ ಕಂದಾಯದ ಮೂರನೇ ತಿದ್ದುಪಡಿ ವಿಧೇಯಕ, ಕೈಗಾರಿಕಾ ವಿವಾದಗಳ ತಿದ್ದುಪಡಿ ವಿಧೇಯಕಗಳು ಮಂಡನೆಯಾಗಿ ಅನುಮೋದನೆ ಪಡೆದವು.
ಇವತ್ತಿನ ಅಧಿವೇಶನದ ಪ್ರಾರಂಭದಲ್ಲಿ ಕೊರೋನಾದಿಂದ ಮೃತಪಟ್ಟ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಸದನದಲ್ಲಿ ಸದಸ್ಯರು ಗೌರವ ಸೂಚಿಸಿದರು. ಕೊರೋನಾ ಕಾರಣದಿಂದ ಮೊಟಕುಗೊಂಡಿರುವ ಈ ಬಾರಿಯ ಮುಂಗಾರು ಅಧಿವೇಶನದ ಅವಧಿ ಇನ್ನು ಮೂರು ದಿನ ಮಾತ್ರ ಇದೆ. ಶನಿವಾರ ಅಧಿವೇಶನ ಮುಗಿಯಲಿದೆ.

Donate Janashakthi Media

Leave a Reply

Your email address will not be published. Required fields are marked *