ಸಮಾಜವಾದಿ ಐಕ್ಯತೆ ಅಥವಾ ಬರ್ಬರತೆ- ಆಯ್ಕೆ ನಮ್ಮದು

ಪ್ರೊ. ವಿ. ಎನ್. ಲಕ್ಷ್ಮೀನಾರಾಯಣ

ಡಿಜಿಟಲೀಕರಣವೇ ಜೀವನ-ಸಂಜೀವನವಾಗಿರುವ ಹೊಸ ಬಂಡವಾಳಶಾಹಿಯ ಈ ಜಗತ್ತಿನಲ್ಲಿ ’ವಾಹನಗಳೇ ಇಲ್ಲದ ವಾಹನ ಕಂಪೆನಿಗಳೂ’, ’ರೂಮುಗಳೇ ಇಲ್ಲದ ಹೊಟೆಲ್ ಕಂಪೆನಿಗಳೂ’, ’ಗೋಡೆಗಳೇ ಇಲ್ಲದ ಶಾಲಾ ಕೊಠಡಿಗಳೂ’ ಹೀಗೆ ಇನ್ನೂ ಏನೇನೋ ಇಲ್ಲದ ಏನೇನೋ ಕಂಪೆನಿಗಳು ಸಾಧ್ಯವಾಗುತ್ತದೆ.

ಡಿಜಿಟಲೀಕರಣದ ವರ್ಚುಯಲ್ ಭಾರತದಲ್ಲಿ ಈ ಎಲ್ಲ ಬದಲಾವಣೆಗಳು ೨೦೨೬ರ ಹೊತ್ತಿಗೆ ಸಾಕಾರಗೊಳ್ಳಬೇಕೆಂದು ಕೋವಿಡ್ ಪೂರ್ವದ ದಿನಗಳಲ್ಲಿ ಯೋಜಿಸಲಾಗಿತ್ತು. ಇದೇ ಹೊತ್ತಿಗೆ, ದೇವರೇ ಕಳಿಸಿದಂತೆ ಕೋವಿಡ್ ೧೯ ಪ್ರತ್ಯಕ್ಷವಾಗಿದೆ. ದೇಶದ ಪ್ರಧಾನಿಯ ಪ್ರಾರ್ಥನೆ-ಸೂಚನೆಯಂತೆ ಹಣವಿದ್ದವರು ಮನೆಯಲ್ಲಿ ಕುಳಿತು ಡಿಜಿಟಲೀಕರಣದ ಬದಲಾವಣೆಗಳಿಗೆ, ಅಂದರೆ ಕೋವಿಡೋತ್ತರ ಜೀವನ ಪದ್ಧತಿಗೆ ಹೊಂದಿಕೊಳ್ಳಲು ತಾಲೀಮು ನಡೆಸುತ್ತಿದ್ದಾರೆ.

ಕೋವಿಡ್ ಭಯ ನಿವಾರಣೆಯಾದ ಮೇಲೆ, ಡಿಜಿಟಲೀಕರಣದ ಬೆಳಕಿನಲ್ಲಿ, (ಅಥವಾ ಫ್ಯಾಸಿಸ್ಟ್ ಧೋರಣೆಯ ಕತ್ತಲಿನಲ್ಲಿ) ಬಂಡವಾಳವಾದದ ಮುಖ ಸ್ಪಷ್ಟವಾಗಬಹುದು.  ಆಗ ನಮ್ಮೆಲ್ಲರಿಗೆ ಉಳಿಯುವ ಆಯ್ಕೆ ಎರಡೇ ಎರಡು: ಬರ್ಬರತೆಯೋ, ಇಲ್ಲ ಸಮಾಜವಾದವೋ?

ಜಾಗತಿಕವಾಗಿ ಇಂದು, ಬೆರಳೆಣಿಕೆಯ ಒಂದೆರಡು ದೇಶಗಳನ್ನುಳಿದು ವಿಶ್ವದ ಎಲ್ಲಾ ದೇಶಗಳಲ್ಲಿಯೂ ಇರುವುದು ಬಂಡವಾಳಶಾಹಿ ಆರ್ಥಿಕತೆಯೇ. ಅಮೆರಿಕಾ ಬೂರ್ಷ್ವಾ ಪ್ರಜಾಪ್ರಭುತ್ವವನ್ನು ತನ್ನ ರಾಷ್ಟ್ರೀಯ ಆಯ್ಕೆಯನ್ನಾಗಿ ಮಾಡಿಕೊಂಡಿದೆ. ಅಷ್ಟೇ ಆಗಿದ್ದಿದ್ದರೆ ಜಾಗತಿಕ ರಾಜಕೀಯಕ್ಕೆ ಏನೂ ತೊಂದರೆ ಇರಲಿಲ್ಲ. ಆದರೆ ಅಮೆರಿಕಾ ಸರ್ಕಾರ, ತನ್ನ ಬ್ರಾಂಡ್ ಪ್ರಜಾಪ್ರಭುತ್ವವನ್ನು ಒಪ್ಪದ ಅಥವಾ ವಿರೋಧಿಸುವ ಯಾವುದೇ ಸರ್ಕಾರ ವಿಶ್ವದ ಯಾವ ಮೂಲೆಯಲ್ಲಿದ್ದರೂ ಅದನ್ನು ಆರ್ಥಿಕ ನಿರ್ಬಂಧಗಳು, ಮತ್ತು ಮಿಲಿಟರಿ ಆಕ್ರಮಣ ಮುಂತಾದ ಪ್ರಜಾತಾಂತ್ರಿಕವಲ್ಲದ ವಿಧಾನಗಳಿಂದ ಬಗ್ಗಿಸುತ್ತದೆ. ಆಮೇಲೆ ತನ್ನ ನೀತಿಗೆ ಅನುಕೂಲಕರವಾಗಿರುವಂಥ ಕೈಗೊಂಬೆ ಸರ್ಕಾರವನ್ನು ಅಲ್ಲಿ ಪ್ರತಿಷ್ಠಾಪಿಸಿ, ಪ್ರಜಾಪ್ರಭುತ್ವವನ್ನು ನೆಲೆಗೊಳಿಸಿದ್ದಾಗಿ ಪ್ರಚಾರ ಮಾಡುತ್ತದೆ. ಅದು ಸಾಲದೆಂಬಂತೆ, ಸಾಮ್ಯವಾದಿ, ಸಮತಾವಾದಿ ಅಥವಾ ಸಮಾಜವಾದಿ ಸಿದ್ಧಾಂತದ ಅಡಿಯಲ್ಲಿ ಸಂಘಟಿತವಾದ ಸಮಾಜವು ಯಾವುದೇ ದೇಶದಲ್ಲಿದ್ದರೂ ಅದನ್ನು ವಿಘಟನೆಗೊಳಿಸುವುದನ್ನು ತನ್ನ ವಿದೇಶೀ ನೀತಿಯನ್ನಾಗಿ ಘೋಷಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಹಿಂದಿನ ಸಮಾಜವಾದೀ ಸೋವಿಯತ್ ಒಕ್ಕೂಟದ ಮೇಲೆ ೧೯೪೫ರಿಂದಲೂ ’ಶೀತಲ ಯುದ್ಧ’ ಮಾಡಿ ಅದರ ವಿಘಟನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿತು. ಮಾವೋ ಸಂಘಟಿಸಿದ ಸಮಾಜವಾದೀ ಕ್ರಾಂತಿಯ ಫಲವಾಗಿ ಅಸ್ತಿತ್ವಕ್ಕೆ ಬಂದ ಕಮ್ಯುನಿಸ್ಟ್ ಚೀನಾ ತನ್ನ ಜನಬಲ, ಅಗ್ಗದ ಶ್ರಮಬಲ, ಅದ್ವಿತೀಯ ತಾಂತ್ರಿಕ ಪರಿಣತಿ ಮತ್ತು ಸಂಘಟನಾ ಶಕ್ತಿಗಳಿಂದಾಗಿ ಇಡೀ ’ಜಗತ್ತಿನ ಫ್ಯಾಕ್ಟರಿ’ ಯಾಗಿ, ದೈತ್ಯ ಮಾರುಕಟ್ಟೆಯಾಗಿ ಬೆಳೆದ ಮೇಲೆ, ಅದನ್ನು ಬಗ್ಗಿಸಲು ನಾನಾ ರೀತಿಗಳಲ್ಲಿ ಅಮೇರಿಕಾ ಯತ್ನಿಸುತ್ತಲೇ ಇತ್ತು. ಕೋವಿಡ್ ೧೯ ಚೀನಾ ಮೂಲದ, ಅಗೋಚರ, ವಿಧ್ವಂಸಕ ಜಾಡ್ಯವಾಗಿ ಇಡೀ ಜಗತ್ತನ್ನೇ ವ್ಯಾಪಿಸಿದಾಗ ಅಮೆರಿಕಾ ಸರ್ಕಾರಕ್ಕೆ ಚೀನಾ ಸರ್ಕಾರದೊಂದಿಗೆ ವ್ಯಾಪಾರೀ ಯುದ್ಧವನ್ನು ಹೂಡಲು ಹೊಸ ಅಸ್ತ್ರವೊಂದು ಸಿಕ್ಕಂತಾಯಿತು.

’ದೇಶ ಎಂದರೆ ಅದರ ವ್ಯಾಪಾರಿಗಳು’ ಎಂದು ಪ್ರಸಿದ್ಧ ಬ್ರಿಟಿಷ್ ಕಾದಂಬರಿಕಾರ, ಮತ್ತು ’ಅರಾಜ್ಯವಾದಿ’ (ಅನಾರ್ಕಿಸ್ಟ್) ಡಿ.ಎಚ್.ಲಾರೆನ್ಸ್ ಹೇಳಿ ಒಂದು ಶತಮಾನವೇ ಕಳೆದಿದೆ. ಅಮೇರಿಕಾ, ಹೇಳಿಕೇಳಿ ಬಂಡವಳಿಗರ ಹಿಡಿತದಲ್ಲಿರುವ ಸರ್ಕಾರವು ಆಳುವ ದೇಶ. ಅದರ ಎರಡು ಪಕ್ಷಗಳಾದ ರಿಪಬ್ಲಿಕನ್ ಮತ್ತು ಡಮೊಕ್ರಾಟ್ ಪಕ್ಷಗಳಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಚೂರು ಪಾರು ಜನಪರವಾದ ಬದಲಾವಣೆಗಳನ್ನು ಅಮೆರಿಕಾದ ಸಮಾಜದಲ್ಲಿ ತರಬಹುದೇ ಹೊರತು ಅದರ ಬಂಡವಳಿಗ ಸ್ವರೂಪವನ್ನು ಬದಲಾಯಿಸುವುದು ಸಾಧ್ಯವಿಲ್ಲ.

ಯೂರೋಪಿನಲ್ಲಿ ೧೮ನೇ ಶತಮಾನದ ಆಸುಪಾಸಿನಲ್ಲಿ ಆವಿಷ್ಕಾರಗೊಳ್ಳಲು ಪ್ರಾರಂಭಿಸಿದ ಯಂತ್ರ ನಾಗರಿಕತೆಯ ಸಹಾಯದಿಂದ ಗಟ್ಟಿಗೊಂಡ ಬಂಡವಾಳಶಾಹಿಯು ಇಲ್ಲಿಯವರೆಗೂ ನಾಲ್ಕು ಪ್ರಮುಖ ಘಟ್ಟಗಳನ್ನು ಹಾದುಬಂದಿದೆ. ಮೈಬಲ ಮತ್ತು ಪ್ರಾಣಿಗಳ ಬಲದಿಂದ ನಡೆಯುತ್ತಿದ್ದ ಬಿಡಿ ಬಿಡಿ ಮನುಷ್ಯರ ಉತ್ಪಾದನೆಯು ಉಗಿಶಕ್ತಿ ಮತ್ತು ತೈಲ-ವಿದ್ಯುತ್ ಶಕ್ತಿಯ ಬಲದಿಂದ ಸಾಮೂಹಿಕವಾಗಿ ನಡೆಯುವ ಉತ್ಪಾದನೆಯಾಗಿದ್ದು ಮೊದಲನೆಯ ಘಟ್ಟ. ಸ್ವಯಂಚಾಲಿತ ಯಂತ್ರಗಳೊಂದಿಗೆ ಮನುಷ್ಯರೂ ಯಂತ್ರವಾಗಿ ದುಡಿದು ಬಂಡವಳಿಗರ ಸಂಪತ್ತನ್ನು ಹೆಚ್ಚಿಸುತ್ತ ಹೋಗಿದ್ದು ಎರಡನೆಯ ಘಟ್ಟ. ಕಂಪ್ಯೂಟರೀಕರಣ ಮತ್ತು ಕೇಂದ್ರೀಕೃತ ವ್ಯವಸ್ಥೆಗಳ ಮೂಲಕ ನಡೆಯುವ ಉತ್ಪಾದನೆಯು ಮೂರನೆಯ ಘಟ್ಟ. ಅಂತರ್ಜಾಲ, ಆನ್‌ಲೈನ್ ವ್ಯವಹಾರ, ದೂರಶಿಕ್ಷಣ ಕೃತಕ ಬುದ್ಧಿಮತ್ತೆ, ರೊಬೋಟ್‌ಗಳು ಮತ್ತು ತಂತ್ರಾಂಶಗಳ ಮೂಲಕ ಕೆಲವೇ ಕೆಲವು ಜನರಿಂದ ನಿರ್ವಹಿಸಬಹುದಾದ ಉತ್ಪಾದನೆಯ ಡಿಜಿಟಲೀಕರಣ ನಾಲ್ಕನೆಯ ಘಟ್ಟ.

ಬಂಡವಾಳಶಾಹಿಯು ಈ ಘಟ್ಟಗಳಲ್ಲಾದ ತಂತ್ರಜ್ಞಾನದ ಬದಲಾವಣೆಗಳ ಸೌಲಭ್ಯಗಳನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳುವ ಬದಲು ಅವನ್ನೂ ತನ್ನ ಲಾಭಗಳಿಕೆಗೆ ಬಳಸುತ್ತಾ ಬಂದಿರುವುದರಿಂದ ಪ್ರತಿಯೊಂದು ಘಟ್ಟದ ಬದಲಾವಣೆಯಲ್ಲೂ ಸಾಕಷ್ಟು ಸಂಖ್ಯೆಯ ದುಡಿಯುವ ಜನರು ಕೆಲಸ ಕಳೆದುಕೊಂಡು ಒಟ್ಟು ಜನಜೀವನವೇ ಹೆಚ್ಚು ಹೆಚ್ಚು ದುರ್ಭರವಾಗುತ್ತಾ ಸಾಗಿದೆ. ಅದರಿಂದ ಹುಟ್ಟುವ ಸಾಮಾಜಿಕ ವಿಷಮತೆಗಳು ಹೆಚ್ಚಾಗುತ್ತಲೇ ಇವೆ. ’ಷಾಕ್ ಡಾಕ್ಟ್ರಿನ್’ ಗ್ರಂಥಕರ್ತೆ ನೋಮೀ ಕ್ಲೀನ್ ಹೇಳುವಂತೆ, ನಾವು ’ಅನಾಹುತ ಬಂಡವಾಳವಾದ’z (ಡಿಸಾಸ್ಟರ್ ಕ್ಯಾಪಿಟಲಿಸಂ) ಕೈಗೆ ಸಿಕ್ಕು ನರಳುತ್ತಿದ್ದೇವೆ. ಅದರಂತೆ ಸತತವಾಗಿ ಹರಡುತ್ತಲೇ ಇರುವ  ಕೋವಿಡ್ ಕಷ್ಟಗಳಿಂದಾಗಿ ಜಾಗತಿಕ ಬಂಡವಾಳವಾದವು ಕೋವಿಡ್ ಬಂಡವಾಳವಾದವಾಗಿದೆ.

ಬಂಡವಾಳವಾದವು ಪ್ರತಿಯೊಂದು ಬದಲಾವಣೆಯನ್ನೂ ತನ್ನ ಲಾಭಕ್ಕೆ ಬಳಸಿಕೊಳ್ಳುವಂತೆ ಕೋವಿಡ್ ವೈರಸ್ಸನ್ನೂ ಬಳಸಿಕೊಳ್ಳುತ್ತಿದೆ. ಆಮೂಲಕ ತಾನೇ ವಿಶ್ವವ್ಯಾಪಿಯಾದ ವ್ಯಾಧಿಯಾಗಿದ್ದು ಕೋವಿಡ್‌ನಂತೆಯೇ ಅಗೋಚರವಾಗಿದೆ. ಇನ್ನೂ ದೊಡ್ಡ ದುರಂತವೆಂದರೆ, ಕೋವಿಡ್‌ಗೆ ಹೆದರಿ ಮನೆಯೊಳಗೇ ಇರಬೇಕಾಗಿ ಬಂದಿರುವ ಮಧ್ಯಮವರ್ಗದ ಜನರು, ತಮಗೆ ಬಂದೊದಗಿರುವ ಕಷ್ಟಗಳಿಗೆ ಬಂಡವಾಳವಾಳಶಾಹಿಯಲ್ಲೇ ಪರಿಹಾರವನ್ನು ಹುಡುಕುತ್ತಾ ನಾಲ್ಕನೆಯ ಘಟ್ಟದ ಡಿಜಿಟಲೀಕರಣದ ಸಾಮಾಜಿಕ ಜಾರಿಗಾಗಿ ಕಾಯುತ್ತಿದ್ದಾರೆ.

ಇದು ಹಾವಿನ ಹೆಡೆಯ ನೆರಳಿನಲ್ಲಿ ಕುಳಿತು ದಣಿವಾರಿಸಿಕೊಳ್ಳುವ ಕಪ್ಪೆಯನ್ನು ನೆನಪಿಗೆ ತರುತ್ತದೆ.

ಜಾಗತಿಕ ಬಂಡವಾಳವು ಡಿಜಿಟಲೀಕರಣದ ಮೂಲಕ ’ಪರಿಸರಸ್ನೇಹಿ’ ಎನ್ನುವ ವಿದ್ಯುತ್‌ಚಾಲಿತ ವಾಹನಗಳು, ಚಾಲಕರಹಿತ ಕಾರುಗಳು, ಹಣರಹಿತ ವ್ಯಹಾರಕ್ಕಾಗಿ ತಂತ್ರಾಂಶಗಳು, ’ಗೋಡೆರಹಿತ ತರಗತಿ’ಗಳಿಗಾಗಿ ಆನ್‌ಲೈನ್ ಶಾಲೆಗಳು, ಇ ಪುಸ್ತಕ, ಇ ಕಲಿಕೆಯ ಸಾಮಗ್ರಿಗಳು ಮತ್ತು ಹಲವು ವಿದ್ಯಾರ್ಥಿಗಳು ಒಟ್ಟಿಗೆ ಬಳಸಬಹುದಾದ ಸಣ್ಣ ಕಂಪ್ಯೂಟರ್‌ಗಳು, ಆನ್‌ಲೈನ್ ಮಿಲಿಟರಿ ಮತ್ತು ವೈದ್ಯೋಪಚಾರಕ್ಕಾಗಿ ಮಾತ್ರವಲ್ಲದೆ, ದಿನನಿತ್ಯದ ಸೌಲಭ್ಯಗಳಿಗಾಗಿ ರೊಬೋಟ್‌ಗಳು, ನಗರಪ್ರದೇಶಗಳಲ್ಲಿ ಮಾತ್ರವಲ್ಲದೆ ಅರೆಗ್ರಾಮೀಣ ಮತ್ತು ಗ್ರಾಮೀಣ ಪ್ರದೇಶಗಳ ಬಹುಸಂಖ್ಯಾತ ಗಿರಾಕಿಗಳ ಆನ್‌ಲೈನ್ ಖರೀದಿ-ಸೌಲಭ್ಯಗಳಿಗಾಗಿ ಅಂತರ್ಜಾಲ, ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳ ಸಂಪರ್ಕಗಳು, ಫ್ಲಿಪ್‌ಕಾರ್ಟ್, ಬಿಗ್ ಬಾಸ್ಕೆಟ್, ಮೆಡ್‌ಲೈಫ್, ಗ್ರೋಫರ‍್ಸ್ ಮೊದಲಾದ ವಾಣಿಜ್ಯ ಜಾಲತಾಣ ಕಂಪೆನಿಗಳು, ಸೊನ್ನೆ ಠೇವಣಿಯ ಬ್ಯಾಂಕ್‌ಅಕೌಂಟ್‌ಗಳು, ಈಗಾಗಲೇ ’ಗಿರಾಕಿಗಳ ಸೇವೆ’ಗೆ ಸನ್ನದ್ಧವಾಗಿವೆ. ಗ್ರಾಮೀಣ ಯುವಕ-ಯುವತಿಯರಿಗೆ ಮನರಂಜನೆ ಮತ್ತು ಆನ್‌ಲೈನ್ ಕ್ರೀಡೆ, ಸಂಗೀತ, ಸಿನೆಮಾಗಳನ್ನು ಒದಗಿಸಲು ನೆಟ್‌ಫ್ಲಿಕ್ಸ್, ಯೂಟ್ಯೂಬ್, ಗೂಗಲ್, ಟಿಕ್‌ಟಾಕ್ ವಾಟ್ಸ್‌ಆಪ್ ತುದಿಗಾಲಮೇಲೆ ನಿಂತಿವೆ. ಆನ್‌ಲೈನ್ ಖರೀದಿಯು, ಜನರಿಗೆ ಸುಲಭವಾಗಿ ಎಡತಾಗುವ ಕಿರಾಣಿ ಅಂಗಡಿಗಳಿಂದ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಅಂದರೆ, ಮನೆ ಸಾಮಾನುಗಳನ್ನು ಜನರು ಕೂತಲ್ಲಿಂದಲೇ ಖರೀದಿಸಲೆಂದೇ ರಿಲಯನ್ಸ್ ಕಂಪೆನಿಯು ವಾಟ್ಸ್ ಆಪ್ ಜೊತೆಗೆ ಕೈಜೋಡಿಸಿದೆ. ಅವನ್ನು ಮನೆಬಾಗಿಲಿಗೆ ತಲುಪಿಸಲು ಊಬರ್, ಮೆರು ವಾಹನಗಳು ಸಜ್ಜಾಗಿ ನಿಂತಿವೆ. ಭಾರಗಳನ್ನು ಎತ್ತಿ ಇಳಿಸಲು ವಲಸೆ ಕಾರ್ಮಿಕರು ಇದ್ದೇ ಇದ್ದಾರೆ. ಓಬೀರಾಯನ ಕಾಲದ ’ಸಗಟು ವ್ಯಾಪಾರಿ-ವಿತರಕ- ಚಿಲ್ಲರೆ ವ್ಯಾಪಾರಿ’ ಎಂಬ ಸರಪಳಿ ಹರಿದು ವ್ಯಾಪಾರಿ-ಗಿರಾಕಿ ಇಬ್ಬರೂ ’ಮುಕ್ತ’ರಾಗಿದ್ದಾರೆ. ಮೂರನೆಯ ಘಟ್ಟದ ಬದಲಾವಣೆಯ ’ತಂತ್ರಜ್ಞಾನದ ಕ್ರಾಂತಿ’ಯಲ್ಲಿ, ಬಂಡವಾಳಶಾಹಿಯ ಎಲ್‌ಪಿಜಿ ಕಾಲದಲಿ, ಹೊಸ ಪ್ಯಾರಡೈಮ್ ಷಿಫ್ಟ್ ಸಂಭವಿಸಿ ಜೀವ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನಗಳು ಮುನ್ನೆಲೆಗೆ ಬಂದಂತೆ, ನಾಲ್ಕನೆಯ ಘಟ್ಟದ ತಂತ್ರಜ್ಞಾನದ ಕ್ರಾಂತಿಯಲ್ಲಿ ’ಫಿಜಿಟಲೀಕರಣ’ ಮನಸ್ಸುಳ್ಳ ಮನುಷ್ಯ ಜೀವಿಗಳು ಮತ್ತು ಜೀವವಿಲ್ಲದ ವಸ್ತುಗಳ ನಡುವೆ ಇರುವ ಭೇದವನ್ನು ತೊಡೆದುಹಾಕುತ್ತಿದೆ. ಡಿಜಿಟಲೀಕರಣವೇ ಜೀವನ-ಸಂಜೀವನವಾಗಿರುವ ಹೊಸ ಬಂಡವಾಳಶಾಹಿಯ ಈ ಜಗತ್ತಿನಲ್ಲಿ ’ವಾಹನಗಳೇ ಇಲ್ಲದ ವಾಹನ ಕಂಪೆನಿಗಳೂ’, ’ರೂಮುಗಳೇ ಇಲ್ಲದ ಹೊಟೆಲ್ ಕಂಪೆನಿಗಳೂ’, ’ಗೋಡೆಗಳೇ ಇಲ್ಲದ ಶಾಲಾ ಕೊಠಡಿಗಳೂ’ ಹೀಗೆ ಇನ್ನೂ ಏನೇನೋ ಇಲ್ಲದ ಏನೇನೋ ಕಂಪೆನಿಗಳು ಈ ಹೊಸ ಪ್ಯಾರಡೈಮ್ ಷಿಫ್ಟ್‌ನಿಂದಾಗಿ ಸಾಧ್ಯವಾಗುತ್ತದೆ. ಜನರ ’ಮನುಷ್ಯತನ’ವನ್ನೇ ಅಳಿಸಿಹಾಕಿ ಡಿಜಿಟಲ್ ಐಡಿ, ಆಧಾರ ಸಂಖ್ಯೆ, ಪಾಸ್‌ವರ್ಡ್, ಹೆಬ್ಬೆಟ್ಟು ಗರುತು, ಪರೀಕ್ಷಿಸಿದ ಕಣ್ಣಿನಪಾಪೆಯ ಗುರುತು, ವಂಶವಾಹಿನಿಯ ಸರಪಳಿಯ ಗುರುತಿಗೆ ಮಾತ್ರ ಸಿಗುವ ಇ ಗಿರಾಕಿಗಳ ಸ್ಥಿತಿಗೆ ಇಳಿಸಲಾಗುತ್ತಿದೆ.  

ಸಾಮಾನ್ಯ ಜನರ ಆದಾಯ ಮೂಲಗಳ ಅಭಿವೃದ್ಧಿ ಹೇಗೆ, ಕೃಷಿ ಉತ್ಪಾದನೆಯ ಗತಿ ಏನು, ೪೦ ಕೋಟಿ ಉದ್ಯೋಗಿಗಳು ಮತ್ತು ಕಾರ್ಮಿಕರ ಜೀವನ ನಿರ್ವಹಣೆ ಹೇಗೆ, ಭೂತಾಪದ ಹೆಚ್ಚಳ ಮತ್ತು ಪರಿಸರ ನಾಶದ ಘೋರ ಪರಿಣಾಮಗಳನ್ನು ಎದುರಿಸುವ ಬಗೆ ಹೇಗೆ, ಇ ವ್ಯಾಪಾರಿಗಳು ತೋರಿಸುವ ಕೃತಕ ವಾಸ್ತವದ ಸಮೃದ್ಧಿಯನ್ನು ಅನುಭವಿಸಲು ಜನರಿಗೆ ಕೊಳ್ಳುವ ಶಕ್ತಿ ಎಲ್ಲಿಂದ ಬರುತ್ತದೆ, ಎಂಬ ಯಾವ ಗಂಭೀರ ಪ್ರಶ್ನೆಗೂ ಉತ್ತರವಿಲ್ಲದ ಡಿಜಿಟಲೀಕರಣದ  ಭಾರತದಲ್ಲಿ, ಒಟ್ಟು ೬ಕೋಟಿ, ೨೭ ಲಕ್ಷ ಜನರು ಈಗಾಗಲೇ ಅಂತರ್ಜಾಲವನ್ನು ಬಳಸುತ್ತಿದ್ದಾರೆ. ಗ್ರಾಮೀಣ ಭಾರತದಲ್ಲಿ ಪ್ರತಿವರ್ಷ ಶೇಕಡಾ ೩೫ ಜನರು ಅಂತರ್ಜಾಲ ಸಂಪರ್ಕವನ್ನು ಪಡೆದುಕೊಳ್ಳುತ್ತಿದ್ದಾರೆ. ಜನರು ಎಂದರೆ, ಯುವಜನರು, ಯುವಜನರೆಂದರೆ ದೈತ್ಯ ಇ ವಾಣಿಜ್ಯ ವ್ಯಾಪಾರಿಗಳಿಗೆ ಗಿರಾಕಿಗಳು ಎಂಬಂಥ ’ಇ ರೋಗ’ಕ್ಕೆ ಜನಸಾಮಾನ್ಯರನ್ನು ಒಡ್ಡುವ ಮೂಲಕ ಬಂಡವಾಳವಾದವೇ ಅತ್ಯಂತ ಸಾಂಕ್ರಾಮಿಕವಾದ ಜಾಡ್ಯವಾಗಿದೆ,

ನಿಮಗೆ ಮನೆಯಿಂದಲೇ ಕೆಲಸ ಮಾಡಲು ಇನ್ನಷ್ಟು ಮನೆಗಳನ್ನು ಕಟ್ಟಿಕೊಡಲಿಕ್ಕೆ ಮತ್ತೆ ಬರುತ್ತೇವೆ

ಡಿಜಿಟಲೀಕರಣದ ವರ್ಚುಯಲ್ ಭಾರತದಲ್ಲಿ ಈ ಎಲ್ಲ ಬದಲಾವಣೆಗಳು ೨೦೨೬ರ ಹೊತ್ತಿಗೆ ಸಾಕಾರಗೊಳ್ಳಬೇಕೆಂದು ಕೋವಿಡ್ ಪೂರ್ವದ ದಿನಗಳಲ್ಲಿ ಯೋಜಿಸಲಾಗಿತ್ತು. ’ಕಡಿಮೆ ಶ್ರಮದಲ್ಲಿ, ಹೆಚ್ಚಿನ ಉತ್ಪಾದನೆಯನ್ನು, ಶೀಘ್ರಗತಿಯಲ್ಲಿ ಮತ್ತು ಅತ್ಯಂತ ಕಡಿಮೆ ಕಾಲದಲ್ಲಿ’ ಸಾಧಿಸುವ  ಈ ಸ್ವರ್ಗವು ಭರತಭೂಮಿಗೆ ಇಳಿಸಲು  ಈಗಿರುವ ನೌಕರರ ಸಂಖ್ಯೆಯಲ್ಲಿ ಅರ್ಧಕ್ಕಿಂತ ಕಡಿಮೆ ಜನರು ಸಾಕಾಗುತ್ತಾರೆ. ಅಂದರೆ ಅರ್ಧಕ್ಕಿಂತಾ ಹೆಚ್ಚಿನ ಜನರು ಕೈಲಿರುವ ಉದ್ಯೋಗಗಳನ್ನು ಕಳೆದುಕೊಳ್ಳತ್ತಾರೆ.  ಹೊಸ ಹೊಸ ರೊಬೋಟ್‌ಗಳಿಗೆ ಅಗತ್ಯವಾದ ತಂತ್ರಾಶಗಳನ್ನು ಬರೆಯ ಬಲ್ಲ ಟೆಕ್ಕಿಗಳಿಗೆ ಮಾತ್ರ ಉದ್ಯೋಗ. ಉದ್ಯೋಗ ಕಳೆದುಕೊಳ್ಳುವ, ಅಥವಾ ಉದ್ಯೋಗವೇ ಇಲ್ಲದ ನಿರುದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳವ ಆ ಭಯವಿಲ್ಲ ಎಂದು ಧನಾತ್ಮಕವಾಗಿ ಯೋಚಿಸಬೇಕೆಂದು ಹೇಳುವ ಮನೋವಿಜ್ಞಾನಿಗಳು, ಆಪ್ತಸಮಾಲೋಚಕರು ಸಹಾಯಕ್ಕೆ ಇದ್ದಾರೆ. 

ಇದೇ ಹೊತ್ತಿಗೆ, ದೇವರೇ ಕಳಿಸಿದಂತೆ ಕೋವಿಡ್ ೧೯ ಪ್ರತ್ಯಕ್ಷವಾಗಿದೆ. ದೇಶದ ಪ್ರಧಾನಿಯ ಪ್ರಾರ್ಥನೆ-ಸೂಚನೆಯಂತೆ ಹಣವಿದ್ದವರು ಮನೆಯಲ್ಲಿ ಕುಳಿತು ನಾಲ್ಕನೆಯ ಘಟ್ಟದ ಬಂಡವಾಳಶಾಹಿ ಪ್ರಣೀತ ಡಿಜಿಟಲೀಕರಣದ ಬದಲಾವಣೆಗಳಿಗೆ, ಅಂದರೆ ಕೋವಿಡೋತ್ತರ ಜೀವನ ಪದ್ಧತಿಗೆ ಹೊಂದಿಕೊಳ್ಳಲು ತಾಲೀಮು ನಡೆಸುತ್ತಿದ್ದಾರೆ. ಕೋವಿಡ್ ಬಂದಿದ್ದು ಒಳ್ಳೆಯದೇ ಆಯಿತು ಎನ್ನುವ ಮನಸ್ಥಿತಿಯಲ್ಲಿ ಡಿಜಿಟಲೀಕರಣದ ಶಿಲ್ಪಿಗಳು, ಸಾಫ್ಟ್‌ವೇರ್ ಉದ್ಯಮಿಗಳು ಇದ್ದಾರೆ. ಮಾತ್ರವಲ್ಲ. ಆದಷ್ಟು ಬೇಗ ದೇಶಕ್ಕೆ ಹಾಕಿರುವ ’ಬೀಗಮುದ್ರೆ’ಯನ್ನು ತೆರವುಗೊಳಿಸಿ ’ನವನಾರ್ಮಲ್’ ಸ್ಥಿತಿಗೆ ಹೊಂದಿಕೊಳ್ಳಲು ಜನರನ್ನು ಬಿಡಬೇಕೆಂದು ಆಗ್ರಹಿಸುತ್ತಿದ್ದಾರೆ. 

ಆದರೆ, ವರ್ಚುಯಲ್ ಅಲ್ಲದ, ಡಿಜಿಟಲೀಕರಣಗೊಳ್ಳಲು ಎಂದೆಂದಿಗೂ ಅಸಾಧ್ಯವಾದ ಚಪಾತಿ, ಮುದ್ದೆ, ಅನ್ನ, ಬೇಳೆ, ತರಕಾರಿ, ಮಾಂಸ ಮೊಟ್ಟೆಗಳಿಗೆ ಹೊಂದಿಕೊಂಡಿರುವ ಜನಸಾಮಾನ್ಯರು  ಕೇಳಬಹುದಾದ ಭೌತಿಕ ಪ್ರಶ್ನೆಗಳು: ಈ ನಾಲ್ಕನೆಯ ಘಟ್ಟದ ಡಿಜಿಟಲೀಕರಣದ ಬದಲಾವಣೆಗಳು ಯಾರಿಗಾಗಿ? ಏತಕ್ಕಾಗಿ? ಸರ್ಕಾರವನ್ನು ಜನರು ಯಾಕಾಗಿ ಚುನಾಯಿಸುತ್ತಾರೆ? ತೆರಿಗೆಗಳನ್ನು ಯಾಕಾಗಿ ಸರ್ಕಾರಗಳಿಗೆ ಕೊಡುತ್ತಾರೆ? ಓ ಇವೆಲ್ಲಾ ಹಳೆಯ, ಚರ್ವಿತ ಚರ್ವಣವೆನಿಸಿರುವ, ಎಲ್ಲದಕ್ಕೂ ತಕರಾರು ತೆಗೆಯುವ ಪೆದ್ದು ಪ್ರಶ್ನೆಗಳು ಎಂದು ಪರಿಣಿತರು ಬೇಸರಿಸುತ್ತಾರೆ. ಆದರೆ ಏನು ಮಾಡುವುದು? ಹಸಿವು ಎಲ್ಲ ಜೀವಿಗಳ ಸನಾತನ ಸಮಸ್ಯೆ. ಆಹಾರವಿದ್ದರೆ ದೇಹ. ದೇಹವಿದ್ದರೆ ಶ್ರಮಶಕ್ತಿ. ಶ್ರಮವಿದ್ದರೆ ಜೀವನಾವಶ್ಯಕ ವಸ್ತುಗಳು. ಹೆಚ್ಚುವರಿ ಮೌಲ್ಯ. ಸಂಪತ್ತು. ರಾಜಕೀಯ. ಅಧಿಕಾರ ಎಲ್ಲಾ. ಆದರೆ ಬಂಡವಳಿಗರಿಗೆ ಈ ಪ್ರಶ್ನೆಗಳು ವಾಕರಿಕೆ ತರಿಸುತ್ತವೆ. ಬಂಡವಾಳವಾದಕ್ಕೆ ಲಾಭ ಬರುತ್ತಿರಬೇಕು. ಸಮಾಜವಾದವೊಂದನ್ನುಳಿದು ಮಿಕ್ಕೆಲ್ಲ ಬದಲಾವಣೆ ಅನಿವಾರ್ಯ. ಅದರ ಫಲಾನುಭವಿಗಳೂ, ಸಮರ್ಥಕರೂ ಆದ ಧರ್ಮೋದ್ಯಮಿಗಳು, ಸದ್ಗುರು, ಮಠಾಧಿಪತಿಗಳು, ನೊಂದ ಜನರಿಗೆ ಹೇಳುವ ಹಿತವಚನ: ಇನ್ನೊಬ್ಬರ ಉಸಾಬರಿಗೆ ಹೋಗಬಾರದು. ಅವರವರ ಪಾಡು ಅವರಿಗೆ, ಎಂದು ಧ್ಯಾನ, ಜಪ, ತಪ, ಯೋಗಾಸನಗಳಲ್ಲಿ ಕಾಲಕಳೆಯಬೇಕು.

ಕೋವಿಡ್ ಕಾಣಿಸಿಕೊಂಡಾಗ ಅದನ್ನು ಹರಡದಂತೆ ತಡೆಯಲು ಬಂಡವಳಿಗರು, ’ಸಾಮಾಜಿಕ ಅಂತರ’ ಕಾಯ್ದುಕೊಳ್ಳಬೇಕೆಂದರು. ಸಮಾಜವಾದಿಗಳು, ಅದನ್ನು ತಿದ್ದಿ ’ಸಾಮಾಜಿಕ ಅಂತರ’ ಅಲ್ಲ, ಬೇಕಾಗಿರುವುದು ’ಭೌತಿಕ ಅಂತರ, ಸಾಮಾಜಿಕ ಐಕ್ಯತೆ’ ಎಂದರು. ಸಾಮಾನ್ಯ ಜನರು ಬಂಡವಾಳವಾದ, ಸಮಾಜವಾದ ಎರಡರ ನಡುವಿನ ವ್ಯತ್ಯಾಸವನ್ನು ಅರಿಯದೆಯೋ ಅಥವಾ ಸದ್ಯಕ್ಕೆ ಉಪೇಕ್ಷಿಸಿಯೋ, ಫೋಟೋ, ವೀಡಿಯೋಗಳಿಗೆ ಕಾಯದೆ,  ಅವರ ಪಾಡಿಗೆ ಅವರು,  ’ಕೋವಿಡ್‌ನಿಂದ ಸತ್ತರೇನು?, ಹಸಿವಿನಿಂದ ಸತ್ತರೇನು?’ ಎಂದು  ಬೀದಿಗೆ ಬಂದವರಿಗೆ ತಮ್ಮ ಕೈಲಾದಮಟ್ಟಿಗೆ ಸಹಾಯಮಾಡಿ, ಸಮಾಜವಾದಿ ಐಕ್ಯತೆಯನ್ನು, ಮಾನವೀಯತೆಯನ್ನು ಮೆರೆದರು.

ಕೋವಿಡ್ ಭಯ ನಿವಾರಣೆಯಾದ ಮೇಲೆ, ಡಿಜಿಟಲೀಕರಣದ ಬೆಳಕಿನಲ್ಲಿ, (ಅಥವಾ ಫ್ಯಾಸಿಸ್ಟ್ ಧೋರಣೆಯ ಕತ್ತಲಿನಲ್ಲಿ) ಬಂಡವಾಳವಾದದ ಮುಖ ಸ್ಪಷ್ಟವಾಗಬಹುದು. (ಜಿಜೆಕ್ ಹೇಳುವಂತೆ) ಆಗ ನಮ್ಮೆಲ್ಲರಿಗೆ ಉಳಿಯುವ ಆಯ್ಕೆ ಎರಡೇ ಎರಡು: ಬರ್ಬರತೆಯೋ, ಇಲ್ಲ ಸಮಾಜವಾದವೋ?

Donate Janashakthi Media

Leave a Reply

Your email address will not be published. Required fields are marked *