ಶ್ರೀಲಂಕಾ ಚುನಾವಣೆ : ರಾಜಪಕ್ಷ ಸಹೋದರರಿಗೆ ಭಾರೀ ಬಹುಮತ

– ನಾಗರಾಜ ನಂಜುಂಡಯ್ಯ

ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಅವರ ಸಹೋದರ ಮಹಿಂದ ರಾಜಪಕ್ಷ ರವರು ಸ್ಥಾಪಿಸಿದ ಹೊಸ ಪಕ್ಷ  ಎಸ್ ಎಲ್ ಪಿ ಪಿ ( ಶ್ರೀಲಂಕಾ ಪೀಪಲ್ಸ್ ಪ್ರಂಟ್- ಶ್ರೀಲಂಕಾ ಪೊದುಜನ ಪೆರಮುನ) ಯು  ಶ್ರೀಲಂಕಾದ 16 ನೇ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಒಟ್ಟು  225 ಸ್ಥಾನಗಳ ಸದಸ್ಯರಲ್ಲಿ 145 ಸ್ಥಾನಗಳನ್ನು ಗೆದ್ದುಕೊಂಡಿದೆ. ಇವರ ಮೈತ್ರಿ ಕೂಟದ ಐದು ಮಿತ್ರ ಪಕ್ಷಗಳ ಬೆಂಬಲದೊಂದಿಗೆ,  ಒಟ್ಟು 150 ಸ್ಥಾನಗಳನ್ನು ಪಡೆದು ಮೂರನೇ ಎರಡರಷ್ಟು ಸ್ಥಾನಗಳನ್ನು ಸುಲಭವಾಗಿ ತಲುಪಿದೆ. ಇದು ಶ್ರೀಲಂಕಾದ ಪ್ರಮಾಣಾತ್ಮಕ ಪ್ರಾತಿನಿಧ್ಯ ವ್ಯವಸ್ಥೆಯಲ್ಲಿನ ರಾಜಕೀಯದ ಅತ್ಯುತ್ತಮ ಸಾಧನೆ ಎಂದು ಪರಿಗಣಿಸಲಾಗಿದೆ.

ಕಳೆದ ಭಾನುವಾರ ಮಹಿಂದಾ ರಾಜಪಕ್ಷ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಎಲ್ಲಾ ಬೆಳವಣಿಗೆಗಳು ಕೋವಿಡ್-19 ರ ಮಹಾಮಾರಿ  ಹರಡುವಿಕೆಯ ಅಪಾಯಕಾರಿ ವಾತಾವರಣದಲ್ಲಿಯೇ ನಡೆಯಿತು.

ಚುನಾವಣಾ ಫಲಿತಾಂಶವು ಎಸ್ ಎಲ್ ಪಿಪಿ ಗೆ ಸೂಪರ್ ಬಹುಮತ ತಂದು ಕೊಟ್ಟಿದೆ ಎಂಬುದು ವಾಸ್ತವಿಕ. ಆದರೆ, ಈಗಾಗಲೇ ಪ್ರತಿಪಕ್ಷಗಳಿಗೆ ಸಂದೇಹ ಮತ್ತು ಕಳವಳ ಉಂಟಾಗಿದೆ.  2/3 ರಷ್ಟು ‘ ‘ಬಹುಮತ ಕೆಟ್ಟದನ್ನು ನೀರಿಕ್ಷಿಸಬಹುದು ಅಥವಾ ಉತ್ತಮವಾದುದ್ದನ್ನು ಆಶಿಸಲುಬಹುದು ? ಇದನ್ನು ಸಾಭೀತು ಪಡಿಸಿ ಮಿಸ್ಟರ್ ಪ್ರೆಸಿಡೆಂಟ್ ಎಂದು ಯು.ಎನ್.ಪಿ ಪಕ್ಷದ ಮಾಜಿ ಮಂತ್ರಿ ಮಂಗಳ ಸಮರವೀರ ಆತಂಕದಿಂದ ಟ್ವೀಟ್ ಮಾಡಿದ್ದಾರೆ.

ಭಾರೀ ಬಹುಮತ ಏಕೆ?

ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆರ ಯುಎನ್ ಪಿ  ಪಕ್ಷವು ಕೇವಲ ಒಂದು ಸ್ಥಾನವನ್ನು ಮಾತ್ರ ಗಳಿಸಿ ಹೀನಾಯ ಸೋಲನ್ನು ಅನುಭವಿಸಿದೆ. ಭ್ರಷ್ಟಾಚಾರ ಮುಕ್ತ ಉತ್ತಮ ಆಡಳಿತ ನೀಡುವುದಾಗಿ ಭರವಸೆ ಮೂಡಿಸಿದ್ದ ವಿಕ್ರಮಸಿಂಘೆ ಸರ್ಕಾರದ ಆಡಳಿತವು ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿತ್ತು.

ಪ್ರಮುಖವಾಗಿ, 2019 ರ ಏಪ್ರಿಲ್‍ನಲ್ಲಿ ನಡೆದ ‘ಈಸ್ಟರ್ ಸಂಡೇ’ ಘಟನೆಯಲ್ಲಿ,  ಕೊಲೊಂಬೊ ನಗರದಲ್ಲಿ ನ ಮೂರು ಚರ್ಚ್ ಗಳು ಮತ್ತು ಮೂರು ಸುಸಜ್ಜಿತ ಹೋಟೆಲ್ ಗಳ ಮೇಲೆ ಉಗ್ರರ ದಾಳಿಯಿಂದಾಗಿ 260 ಕ್ಕೂ ಹೆಚ್ಚು ಜನರ ಸಾವು ಸಂಭವಿಸಿತ್ತು. ಈ ದಾಳಿ ಕುರಿತಂತೆ ಮುಂಜಾಗ್ರತಾ ಮಾಹಿತಿಗಳು ಲಭ್ಯವಿದ್ದಾಗ್ಯೂ ಪರಿಣಾಮಕಾರಿ ಕ್ರಮ ವಹಿಸುವಲ್ಲಿ ವಿಫಲವಾಗಿದ್ದು, ವಿಕ್ರಮಸಿಂಘೆ ಪಕ್ಷದ ಹೀನಾಯ ಸೋಲಿಗೆ ಕಾರಣವೆನ್ನಲಾಗಿದೆ.

ಇದರೊಂದಿಗೆ ಉಂಟಾದ ಪಕ್ಷ ದೊಳಗಿನ ಒಳಜಗಳ ದಿಂದಾಗಿ, ಸಜಿತ್ ಪ್ರೇಮದಾಸ ಅವರು ಯು ಎನ್ ಪಿ ಪಕ್ಷದಿಂದ ಹೊರಹೋಗಿ, ಎಸ್ ಜೆ ಪಿ ಪಕ್ಷ ಕಟ್ಟಿಕೊಂಡರು. ಇದೀಗ ಈ ಚುನಾವಣೆಯಲ್ಲಿ 54 ಸ್ಥಾನಗಳನ್ನು ಇವರ ಪಕ್ಷ ಗೆದ್ದು ಪ್ರಮುಖ ಪ್ರತಿ ಪಕ್ಷವಾಗಿದೆ.

ಪ್ರಸ್ತುತ ಅಧ್ಯಕ್ಷರಾದ,  ಗೊತಬಯ ರಾಜಪಕ್ಷೆ 2009 ರಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿದ್ದರು. ಆಗ ತಮಿಳು ಟೈಗರ್’  ಪ್ರತ್ಯೇಕತಾವಾದಿ ಬಂಡುಕೋರರನ್ನು ಹತ್ತಿಕ್ಕಿದ್ದರು. ಹೀಗಾಗಿ, ಶ್ರೀಲಂಕಾ ಜನರ ಮದ್ಯೆ ಜನಪ್ರಿಯರಾಗಿದ್ದರು. ಕಳೆದ ನವೆಂಬರ್ ನಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ, ‘ಕೋವಿಡ್-19 ರ ಹರಡುವಿಕೆಯನ್ನು ತಡೆಯುವಲ್ಲಿ, ಏಕಾಂಗಿಯಾಗಿ ಸ್ಥಿರತೆಯನ್ನು ತಂದುಕೊಟ್ಟಿದ್ದಾರೆ ಎಂದು ಬಹುತೇಕ ಮತದಾರರು ಇವರ ಆಡಳಿತಕ್ಕೆ ಮನ್ನಣೆ ನೀಡಿದ್ದಾರೆ ಎನ್ನಲಾಗಿದೆ.

ಶ್ರೀಲಂಕಾ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ‘ಮೂಲ ಕಾರಣಗಳು’ 1956, 1977 ಮತ್ತು 2010 ರಲ್ಲಿ ಸರ್ಕಾರಗಳು ಸದನದಲ್ಲಿ ಮೂರನೇ ಎರಡರಷ್ಟು, ಬಹುಮತಗಳನ್ನು ಹೊಂದಿದ್ದ ಸಂದರ್ಭ ಎಂದು ಗುರುತಿಸಬಹುದು. ಹಾಗಾಗಿ, ತಪ್ಪುಗಳು ಮತ್ತು ಅಪಘಾತಗಳು ಸಂಭವಿಸಬಹುದು ಎಂದು ಪ್ರತಿಪಕ್ಷಗಳು ಆತಂಕಿತರಾಗಿದ್ದಾರೆ. ಮತದಾನಕ್ಕೆ ಮುಂಚೆಯೇ, ರಾಜಪಕ್ಷೆ’ ಗಳು ಸಂವಿಧಾನದ 19 ನೇ ತಿದ್ದು ಪಡಿಯನ್ನು ಬದಲಾಯಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಸಂವಿಧಾನದ 19 ನೇ ತಿದ್ದುಪಡಿ

1948 ರಲ್ಲಿ ಸ್ವಾತಂತ್ರ್ಯ ಬಂದ ನಂತರ ಮೊದಲ ಗಣತಂತ್ರ ಸಂವಿಧಾನ ಜಾರಿಗೆ ಬಂದದ್ದು. ಎರಡನೇ ಬಾರಿಗೆ 1972 ರಲ್ಲಿ ಪುನಃ ರಚನೆಗೊಂಡ ಸಂವಿಧಾನವು, ‘ ಸಿಲೋನ್ ಎಂಬ ಹೆಸರನ್ನು ‘ ಶ್ರೀಲಂಕಾ’ ವೆಂದು ಬದಲಾಯಿಸಿತು. ಮೇ 22, 1972 ರಿಂದ ಹೊಸ ಸಂವಿಧಾನವಾಗಿ ಅನುಷ್ಟಾನಕ್ಕೆ ತರಲಾಯಿತು. ಅಲ್ಲಿಂದ ಇಲ್ಲಿಯವರೆಗೂ, ಸುಮಾರು 19 ತಿದ್ದುಪಡಿಗಳನ್ನು ಮಾಡಲಾಗಿದೆ.

2015 ರಲ್ಲಿ ವಿಕ್ರಮಸಿಂಘೆ ಆಡಳಿತದ ಸರ್ಕಾರವು ಸಂವಿಧಾನಕ್ಕೆ 19 ನೇ ತಿದ್ದುಪಡಿಯನ್ನು ತಂದಿತ್ತು. ಆ ಮೂಲಕ ಅವರ ಆಡಳಿತದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಯಿತು. ಒಬ್ಬ ಅಧ್ಯಕ್ಷ ಮತ್ತು ಪ್ರಧಾನಿಗೆ ಎರಡು ಬಾರಿ ಮಾತ್ರ ಅವಕಾಶ ನಿಗಧಿ ಪಡಿಸಿತ್ತು. ಹೊಸ ಸರ್ಕಾರ ಇದೀಗ ಇದನ್ನು ಬದಲಾಯಿಸುತ್ತದೆ. ಪ್ರಬಲ ಸರ್ಕಾರ ನೀಡುತ್ತೇವೆ ಎಂಬ ಚುನಾವಣಾ ಭರವಸೆಗೆ ಜನ ಮನ್ನಣೆ ಸಿಕ್ಕಿದೆ. ಸಿಂಹಳ ಬೌದ್ದ ರಾಷ್ಟ್ರೀಯತೆ ಚುನಾವಣಾ ಪ್ರಚಾರದಲ್ಲಿ ಪ್ರಮುಖವಾಗಿತ್ತು ಮತ್ತು ದ್ವೇಷದ ಪ್ರಚೋದಕ ಭಾಷಣಗಳು ಗಂಭೀರವಾಗಿ ಗಮನ ಸೆಳೆದಿದ್ದವು ಎಂದು ಸುದ್ದಿಯಾಗಿದೆ. ಇದೀಗ ಅಲ್ಪ ಸಂಖ್ಯಾತರಾದ ಮುಸ್ಲಿಂರು ಮತ್ತು ತಮಿಳರ ಪ್ರಾತಿನಿಧ್ಯ ಸಂಸತ್ತಿನಲ್ಲಿ ಕಡಿಮೆಯಾಗಿದೆ.

ಈ ಇಬ್ಬರು ಅಣ್ಣ ತಮ್ಮಂದಿರು ಸಂವಿಧಾನದ 19 ನೇ ತಿದ್ದುಪಡಿಗೆ ಮಾತ್ರ ಸೀಮಿತವಾಗಿಲ್ಲ. ಇವರ  ಆಡಳಿತದೊಂದಿಗೆ ಸಂಬಂಧ ಹೊಂದಿರುವ ರಾಜಕಾರಣಿಗಳು 13 ನೇ ತಿದ್ದುಪಡಿಯ ಅಗತ್ಯವನ್ನು ಪ್ರಶ್ನಿಸಿದ್ದಾರೆ ಇದನ್ನು ಇವರು ಕೆದಕುವ ಸಂಭವ ಇದೆ ಎಂದು ವರದಿಯಾಗಿದೆ. ಇದು ಇಂಡೋ-ಲಂಕಾ ಒಪ್ಪಂದದ ನಂತರ ಅಲ್ಪಸಂಖ್ಯಾತ ತಮಿಳರು ವಾಸಿಸುವಂತಹ ಪ್ರಾಂತ್ಯಗಳಿಗೆ ಸಂಬಂಧಿಸಿದ ತಿದ್ದುಪಡಿಯಾಗಿದೆ.

ಬಹು ಜನಾಂಗಗಳ ದ್ವೀಪ ರಾಷ್ಟ್ರ ವು ಧರ್ಮ ಮತ್ತು ಜನಾಂಗದ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಸೊರಗಿದೆ. ಇದೀಗ ಕೋವಿಡ್-19 ರಿಂದಾಗಿ ಪ್ರವಾಸೋದ್ಯಮ ಮತ್ತು ಒಟ್ಟಾರೆಯ ಆರ್ಥಿಕತೆ ಕುಸಿದಿದೆ. ಸಿಕ್ಕಿರುವ ಅವಕಾಶವನ್ನು ಬಳಸಿ ಈಗಿನ ಸರಕಾರ ಅಧಿಕಾರದ ಕೇಂದ್ರಿಕರಣ ಮಾಡಿಕೊಂಡು ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಬೈರುತ್ ನಲ್ಲಿ ಭಾರಿ ಸ್ಫೋಟ : ಸರಕಾರದ ರಾಜಿನಾಮೆ

ಲೆಬನಾನ್ ರಾಜಧಾನಿ ಬೈರುತ್ ನ ಬಂದರಿನ ಬಳಿಯಿರುವ ಶೇಖರಿಸಿರುವ ಗೋದಾಮಿನಲ್ಲಿ, ಅಗಸ್ಟ್ 4ರಂದು ಭಾರೀ ರಾಸಾಯನಿಕ ಸ್ಪೋಟ ಉಂಟಾಗಿತ್ತು. ಸರ್ಕಾರದ ನಿರ್ಲಕ್ಷ್ಯ ಮತ್ತು ಹೊಣೆಗಾರಿಕೆಯ ಕೊರತೆಯಿಂದಾಗಿ ನಡೆದಿರುವ ಈ ಭಾರಿ ಸ್ಫೋಟದ ವಿರುದ್ದ ಒಂದು ವಾರದಿಂದ ಎಡೆಬಿಡದೆ ಲೆಬನಾನಿನಾದ್ಯಂತ ಭಾರಿ ಪ್ರತಿಭಟನೆಗಳು ನಡೆದವು.  ಇದು ಸರ್ಕಾರದ ಭ್ರಷ್ಟಾಚಾರ ಮತ್ತು ಹದಗೆಟ್ಟ ಆರ್ಥಿಕ ರಾಜಕೀಯ ಪರಿಸ್ಥಿತಿಗಳ ವಿರುದ್ದ ಕಳೆದ ವರ್ಷ ಅಕ್ಟೋಬರ್ ನಲ್ಲಿ ಆರಂಭಗೊಂಡಿದ್ದ ಸರಣಿ ಆಂದೋಲನಗಳ ಮುಂದುವರಿದ ಭಾಗವಾಗಿತ್ತು. ಪ್ರಧಾನಿ  ಹಸನ್ ಡಯಾಬ್ ರ ರಾಜಿನಾಮೆಯು ಪ್ರತಿಭಟನಾಕಾರರ ಬೇಡಿಕೆಯಲ್ಲಿ ಒಂದಾಗಿತ್ತು.  ಹೀಗಾಗಿ, ಪ್ರತಿಭಟನೆಗಾರರ ಒತ್ತಡಕ್ಕೆ ಕೊನೆಗೂ ಮಣಿದು,  ಆಗಸ್ಟ್ 10 ರ ರಾತ್ರಿ  ಡಯಾಬ್ ತಮ್ಮ ರಾಜಿನಾಮೆಯನ್ನು ಘೋಷಿಸಿದ್ದಾರೆ. ಅವರ ಸಂಪುಟದ ಹಲವು ಮಂತ್ರಿಗಳು ಸಹ ತಮ್ಮ ಸ್ಥಾನಗಳನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.

ಬೈರುತ್ ನಗರ ಕೇಂದ್ರದಲ್ಲಿ ಆದ ಈ ರಾಸಾಯನಿಕ ಸ್ಪೋಟದಿಂದಾಗಿ  ಸುಮಾರು 200 ಜನರು ಸಾವನ್ನಪ್ಪಿದ್ದಾರೆ ಮತ್ತು 6000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 70 ಸಾವಿರ ಮನೆಗಳು ನಾಶವಾಗಿದ್ದು ವಾಸಯೋಗ್ಯವಾಗಿರದೆ ಲಕ್ಷಾಂತರ ಜನ ನಿರ್ಗತಿಕರಾಗಿದ್ದಾರೆ. ಸ್ಪೋಟದಿಂದ ಉಂಟಾದ ತರಂಗಗಳ ಅನುಭವ 15 ಕಿ.ಮಿ ದೂರದ ವರೆಗೆಯಿತು ಎಂದು ಹೇಳಲಾಗಿದೆ.  ಈಗಾಗಲೇ ದಿವಾಳಿತನ ಎದುರಿಸುತ್ತಿರುವ ಆರ್ಥಿಕತೆಗೆ, ಕೊವಿಡ್-19 ನಿಂದಾಗಿ ತೀವ್ರ ಸಂಕಷ್ಟ ಎದುರಾಗಿದ್ದು,  ಈ ಸ್ಪೋಟದಿಂದ ಶತಕೋಟಿ ಡಾಲರ್ ಮೌಲ್ಯದ ಹಾನಿಯುಂಟಾಗಿದೆ ಎಂದು ಅಂದಾಜಿಸಲಾಗಿದೆ.  ಇದರಿಂದ ದೇಶದ ಆರ್ಥಿಕತೆಗೆ ಮತ್ತಷ್ಟು ಹೊಡೆತ ಉಂಟಾಗಿ, ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಡಲಿದೆ. ಸುಮಾರು 7 ವರ್ಷಗಳಿಂದ 2750 ಟನ್ನುಗಳಷ್ಟು ಅಮೋನಿಯಂ ನೈಟ್ರೇಟ್ ಸ್ಫೋಟಕಗಳನ್ನು ಬಂದರದ ಕಸ್ಟಮ್ಸ್ ವಿಭಾಗದ ಗೋದಾಮಿನಲ್ಲಿ ಇಡಲಾಗಿತ್ತು. ಇದನ್ನು ಮೊಜಾಂಬಿಕ್ ಗೆ ಹೋಗುವ ಹಡಗದಿಂದ ವಶಪಡಿಸಿಕೊಳ್ಳಲಾಗಿತ್ತು. ಈ ಹಡಗು ಸಮುದ್ರಯಾನಕ್ಕೆ ಯೋಗ್ಯವಲ್ಲ ಎಂದು ಇದನ್ನು ಇಳಿಸಲಾಗಿತ್ತು. ಆದರೆ ಈ ಸ್ಫೋಟಕಗಳನ್ನು ವಿಲೇವಾರಿ ಹೇಗೆ ಮಾಡಬೇಕು ಎಂದು ಕಸ್ಟಮ್ಸ್ ವಿಭಾಗ ಸಂಬಂಧಪಟ್ಟ ಸಚಿವಾಲಯ, ಸಚಿವರು, ಅಧಿಕಾರಿಗಳು, ರಾಜಕೀಯ ನಾಯಕರು, ಪೋಲಿಸ್, ಮಿಲಿಟರಿ, ಕೋರ್ಟುಗಳು ಇತ್ಯಾದಿ ಎಲ್ಲರನ್ನು ಕೇಳಿದ್ದು, ಯಾವುದೇ ಉತ್ತರ/ನಿರ್ಣಯಗಳಿಲ್ಲದೆ ನೆನೆಗುದಿಗೆ ಬಿದ್ದಿತ್ತು. ಗೋದಾಮಿನಲ್ಲಿ ಬೆಂಕಿ ಹತ್ತಿಕೊಳ್ಳಬಲ್ಲ ಇತರ ಹಲವು ವಸ್ತುಗಳ ಜತೆ ಶೇಖರಿಸಲಾಗಿದ್ದು ಈ ಭೀಕರ ಸ್ಫೋಟ ಯಾವಾಗ ಬೇಕಾದರೂ ಸಂಭವಿಸಬಹುದೆಂದು ಎಲ್ಲರಿಗೂ ಗೊತ್ತಿದ್ದರೂ ಯಾವುದೇ ರೀತಿಯಲ್ಲಿ ಕ್ರಮ ಕೈಗೊಳ್ಳದಿರುವುದರಿಂದ ಜನತೆಯಲ್ಲಿ ಇಡೀ ವ್ಯವಸ್ಥೆಯ ಕುರಿತು ತೀವ್ರ ಆಕ್ರೋಶ ಉಂಟಾಗಿದೆ.

ಸ್ಪೋಟ ಸಂಭವಿಸಿದ ನಂತರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಹಸನ್ ಡಯಾಬ್ ತಾವು ಅಧಿಕಾರದಲ್ಲಿ ಮುಂದುವರಿಯಲು ಬಯಸಿದ್ದರು. ಆದರೆ, ಅವರ ಸರ್ಕಾರದೊಳಗಿನ ಮತ್ತು ಲೆಬಾನಾನ್ ನ  ಬೀದಿ ಬದಿಯಲೆಲ್ಲಾ ಜನರ ಪ್ರತಿಭಟನೆಗಳು ಮತ್ತು ನಾಗರಿಕ ಸಮಾಜದ ತೀವ್ರ ಒತ್ತಡವು, ಅವರು ರಾಜಿನಾಮೆ ನೀಡಲು ಕಾರಣವಾಯಿತು.  ಹೊಸ ಸರ್ಕಾರ ರಚನೆ ಯಾಗುವವರೆಗೂ, ಡಯಾಬ್ ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯಲ್ಲಿದ್ದಾರೆ.

ಮಾಜಿ ನಿವೃತ್ತ ಸೇನಾಧಿಕಾರಿಗಳ ಒಂದು ಗುಂಪು ಸೇರಿದಂತೆ, ಕೆಲವು ಪ್ರತಿಭಟನಾಕಾರರು, ಅಗಸ್ಟ್ 8ರಂದು, ಪ್ರಮುಖ ಸರ್ಕಾರಿ ಸಚಿವಲಾಯದ ಕಟ್ಟಡಗಳನ್ನು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳನ್ನು ಮತ್ತು ಬ್ಯಾಂಕುಗಳಿಗೆ ಸೇರಿದ್ದ ಕಟ್ಟಡಗಳ ಒಳಗೆ ನುಗ್ಗಿ ತಾತ್ಕಾಲಿಕವಾಗಿ ಆಕ್ರಮಿಸಿಕೊಂಡಿದ್ದರು. ಅಂತಿಮವಾಗಿ ಅವರನ್ನು ಮಿಲಿಟರಿ ಪೊಲೀಸರು ಮತ್ತು ಲೆಬನಾನ್ ನಿನ ಸೈನ್ಯ ಬಳಸಿ ಹೊರ ಹಾಕಲಾಯಿತು. ಕೆಲವು ಕಡೆ ಕಟ್ಟಡಗಳನ್ನು ಆಕ್ರಮಿಸಿದ್ದ ಸುಮಾರು 200-300 ಪ್ರತಿಭಟನಾಕಾರರನ್ನು ನಿಗ್ರಹಿಸಲು ಭದ್ರತಾ ಪಡೆಗಳು ಅಶ್ರುವಾಯ ಡಬ್ಬಿಗಳು ಮತ್ತು ರಬ್ಬರ್ ಲೇಪಿತ ಲೋಹದ ಗುಂಡುಗಳನ್ನು ಬಳಸಿದ್ದರು. ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು ಮತ್ತು ಪಟಾಕಿಗಳನ್ನು ಎಸೆಯುವ ಮೂಲಕ ಇಬ್ಬರ ನಡುವೆ ಹಿಂಸಾಚಾರ ನಡೆಯಿತು. ಇದರಿಂದಾಗಿ, ಸಾವಿರಾರು ಜನರು ಗಾಯಗೊಂಡರು. ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

3-4 ದಶಕಗಳ ಹಿಂದಿನ ವರೆಗೆ ಅರಬ್ ಪ್ರದೇಶಗಳಲ್ಲಿ ಅತ್ಯಂತ ಶ್ರೀಮಂತ ದೇಶವಾಗಿದ್ದ ಲೆಬನಾನಿನ ಆರ್ಥಿಕ ಪರಿಸ್ಥಿತಿ – ಅಮೆರಿಕ-ಇಸ್ರೇಲುಗಳ ದಾಳಿಗಳು, ಆಂತರಿಕ ಮತೀಯ ಸಂಘರ್ಷಗಳು, ಸಿರಿಯಾ/ಪ್ಯಾಲೆಸ್ಟೈನ್ ನಿರಾಶ್ರಿತರ ಒತ್ತಡ, ಚಮಚಾ ಬಂಡವಾಳಶಾಹಿಯ ಬೆಳವಣಿಗೆ, ನವ-ಉದಾರವಾದಿ ನೀತಿಗಳು– ಇವುಗಳಿಂದಾಗಿ ಆಗಲೇ ಹದಗೆಟ್ಟಿತ್ತು. ಶೇ. 40ರಷ್ಟು ಯುವ-ನಿರುದ್ಯೋಗ ಉಂಟಾಗಿತ್ತು ಮತ್ತು ದೇಶದ ಅರ್ಧದಷ್ಟು ಜನ ಬಡತನದ ರೇಖೆಯ ಕೆಳಗೆ ತಳ್ಳಲ್ಪಟ್ಟಿದ್ದರು. ಚಮಚಾ ಬಂಡವಾಳಶಾಹಿಯ ಅನುಕೂಲಕ್ಕಾಗಿ ರಾಜಕೀಯ ಆಡಳಿತದ ದುರುಪಯೋಗದ ವಿರುದ್ಧ ಕಳೆದ ಅಕ್ಟೋಬರ್ ನಲ್ಲಿ ಆರಂಭಗೊಂಡಿದ್ದ ಪ್ರತಿಭಟನೆಯಿಂದಾಗಿ, ಅಂದಿನ ಪ್ರಧಾನಿ ಸಾದ್ ಹರ್ರಿ ಅವರು ರಾಜೀನಾಮೆ ನೀಡಬೇಕಾಯಿತು. ತರುವಾಯ ಹಸನ್ ಡಯಾಬ್ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು, ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ. ಪ್ರತಿಭಟನೆಕಾರರ ಬೇಡಿಕೆಗಳನ್ನು ಪರಿಹರಿಸಲು ಡಯಾಬ್ ಸರ್ಕಾರದದಿಂದಲೂ ಸಾಧ್ಯವಾಗಲಿಲ್ಲ. ಈ ಮದ್ಯೆಲೊಂದು ಕಡೆ ಕೊವಿದ್-19, ಸಾಲದೆಂಬಂತೆ ರಾಸಾಯನಿಕ ಸ್ಪೋಟವು ಉಂಟಾಗಿ ನೂರಾರು ಜನರ ಸಾವಿಗೆ ಕಾರಣವಾಯಿತು. ಹಾಗಾಗಿ, ಪ್ರತಿಭಟನೆ ತೀವ್ರ ಸ್ವರೂಪ ತಳೆದು, ಇದೀಗ ಡಯಾಬ್ ಕೂಡ ರಾಜೀನಾಮೆ ನೀಡಬೇಕಾಯಿತು.

Donate Janashakthi Media

Leave a Reply

Your email address will not be published. Required fields are marked *