ಬೆಂಗಳೂರು: ಪ್ರಸ್ತುತ ಸಾಲಿನಲ್ಲಿ ಶೈಕ್ಷಣಿಕ ವರ್ಷದ ಶುಲ್ಕ ಹೆಚ್ಚಿಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ಖಾಸಗೀ ಶಾಲೆಗಳ ಸಮಿತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಸಲಾಗಿದ್ದು, ಸರಕಾರದ ವಿವರಣೆಯನ್ನು ಕೇಳಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ಕಳೆದ ವರ್ಷ ಸಂಗ್ರಹಿಸಿದ ಮೊತ್ತಕ್ಕಿಂತ ಕಡಿಮೆ ಶುಲ್ಕ ಸಂಗ್ರಹಿಸಬಹುದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಕಳೆದ ವರ್ಷದ ಬಾಕಿ ಶುಲ್ಕ ಹಾಗೂ ಪ್ರಸ್ತಕ ವರ್ಷದ ಶುಲ್ಕದಲ್ಲಿ ಶೇ.50 ರಷ್ಟನ್ನು ಸಂಗ್ರಹಿಸಲು ಮಧ್ಯಂತರ ಅನುಮತಿ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಶುಲ್ಕವನ್ನು ಸಂಗ್ರಹಿಸದಿದ್ದರೆ ಸಂಸ್ಥೆಗಳನ್ನು ಮುನ್ನಡೆಸುವುದು ಬಹಳ ಸಂಕಷ್ಟವಾಗುತ್ತದೆ. ಮದ್ರಾಸ್ ಹೈಕೋರ್ಟ್ ಶೇ.40 ರಷ್ಟು ಶುಲ್ಕ ಸಂಗ್ರಹಕ್ಕೆ ಅನುಮತಿ ನೀಡಿದೆ. ರಾಜ್ಯದಲ್ಲೂ ಶುಲ್ಕ ಸಂಗ್ರಹಕ್ಕೆ ಅನುಮತಿ ನೀಡಬೇಕಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರ್ಕಾರ ಮೊದಲು ವಿವರಣೆ ನೀಡಲಿ ಬಳಿಕ ಮಧ್ಯಂತರ ಪರಿಹಾರವನ್ನು ನ್ಯಾಯಾಲಯ ಪರಿಗಣಿಸಲಿದೆ ಎಂದು ತಿಳಿಸಿದೆ.
ಇನ್ನು ಈ ಶುಲ್ಕ ಹೆಚ್ಚಳಕ್ಕೆ ಕುರಿತಾಗಿ ಅನೇಕರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೊರೋನಾ ಹಾಗೂ ಲಾಕ್ ಡೌನ್ ನಿಂದಾಗಿ ಉಂಟಾದ ಅನೇಕ ಸಂಕಷ್ಟಗಳು ಉಂಟಾಗಿದ್ದು ಇದರಿಂದ ಪೋಷಕರು, ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ಪಡೆಯಬಾರದು ಎಂದು ಬೆಂಗಳೂರು ಎಸ್ ಎಫ್ ಐ ಜಿಲ್ಲಾಧ್ಯಕ್ಷರಾದ ದಿಲೀಪ್ ಶೆಟ್ಟಿ ಆಗ್ರಹಿಸಿದ್ದಾರೆ.
ಆಟೋವೃತ್ತಿಯನ್ನು ನಂಬಿ ನಾವು ಜೀವನ ನಡೆಸುತ್ತಿದ್ದೇವೆ. ಕಳೆದ 6 ತಿಂಗಳಿಂದ ಸರಿಯಾದ ಆದಾಯವಿಲ್ಲ, ಹಾಗಾಗಿ ಖಾಸಗೀ ಶಾಲೆಗಳ ಶುಲ್ಕ ಹೆಚ್ಚಿಸಬಾರದು ಎಂದು ARDUನ ಮುಖಂಡರಾದ ಎನ್ ಶ್ರೀನಿವಾಸ್ ತಿಳಿಸಿದ್ದಾರೆ.
ಸರ್ಕಾರಕ್ಕೆ ಕಾನೂನು ಈ ರೀತಿ ಹಲವಾರು ಬಾರಿ ಚಾಟಿ ಬೀಸಿದ್ದರೂ ಕೂಡ ಖಾಸಗಿ ಶಾಲೆಗಳು ಶುಲ್ಕವನ್ನು ಪಡೆಯುತ್ತಿವೆ ಎಂದು ಹೆಸರನ್ನು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು ಜನಶಕ್ತಿ ಮೀಡಿಯಾಕ್ಕೆ ತಿಳಿಸಿದ್ದಾರೆ.