ಈ ಅಜೆಂಡಾಗೆ ಈಗ ಸೇರಿಕೊಂಡಿರುವ ಹೊಸ ಅಂಶವೆಂದರೆ ಐಐಟಿ, ಕೇಂದ್ರೀಯ ವಿಶ್ವವಿದ್ಯಾಲಯ ಇಂಥ ಮುಂಚೂಣಿ ಸಂಸ್ಥೆಗಳಲ್ಲಿ ಅಂಬೇಡ್ಕರ್‍ವಾದಿ ದಲಿತ ವಿದ್ಯಾರ್ಥಿಗಳ ಮೇಲೆ ಸಾಂಸ್ಥಿಕವಾದ ದೌರ್ಜನ್ಯವನ್ನು ನಡೆಸುವುದು. ಈ ಕೆಲಸದ ಎರಡು ಉದ್ದೇಶಗಳೆಂದರೆ ದಲಿತ ಯುವಜನತೆಯನ್ನು ಅತ್ಯುನ್ನತ ಶಿಕ್ಷಣದಿಂದ ಹೊರಗೆ ಹಾಕುವುದು ಮತ್ತು ಬಲಪಂಥೀಯ ಸಿದ್ಧಾಂತಕ್ಕೆ ಅತ್ಯಂತ ಪ್ರಬಲ ಸವಾಲಾಗಿರುವ ಅಂಬೇಡ್ಕರ್‍ವಾದವು ಕ್ಯಾಂಪಸ್‍ಗಳಲ್ಲಿ ಬೆಳೆಯದಂತೆ ಮಾಡುವುದು.
ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನ ಆತ್ಮಹತ್ಯೆಯನ್ನು ದಲಿತ ಹಾಗೂ ಪ್ರಗತಿಪರ ವಿದ್ಯಾರ್ಥಿಗಳು ಸಾಂಸ್ಥಿಕ ಕೊಲೆ (Institutional Murder) ಎಂದೇ ನೋಡುತ್ತಿರುವುದಕ್ಕೆ ಬಲವಾದ ಕಾರಣಗಳಿವೆ. ಒಂದು ಕಾರಣವೆಂದರೆ, ಭಾರತದ ಮುಂಚೂಣಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂಥ ಅನೇಕ ಆತ್ಮಹತ್ಯೆಗಳು ಆಗಿರುವುದರಿಂದ ಅವು ವೈಯಕ್ತಿಕ ಕಾರಣಗಳಿಂದಾಗಿ ಅಲ್ಲ, ನಮ್ಮ ಶಿಕ್ಷಣ ಸಂಸ್ಥೆಗಳ ರೋಗಗ್ರಸ್ತ ವಾತಾವರಣದಿಂದ ಎನ್ನಬಹುದಾಗಿದೆ. ಈ ಸಂಸ್ಥೆಗಳು ನಮ್ಮ ಸಂವಿಧಾನ ಮತ್ತು ಯಾವುದೇ ದೇಶದ ಶಿಕ್ಷಣ ನೀತಿಯು ಬಯಸುವ ಸಮಾನತೆ, ವೈಜ್ಞಾನಿಕ ಮನೋಭಾವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳಲ್ಲಿ ನಂಬಿಕೆಯನ್ನಿಟ್ಟು ಅವುಗಳನ್ನು ತಮ್ಮ ವಾತಾವರಣದಲ್ಲಿ, ಆಡಳಿತದಲ್ಲಿ ಹಾಗೂ ಕಾರ್ಯವಿಧಾನದಲ್ಲಿ ಅನುಷ್ಠಾನಕ್ಕೆ ತಂದಿಲ್ಲ. ಈ ಮೌಲ್ಯಗಳ ತದ್ವಿರುದ್ಧವಾಗಿ ದೇಶದ ವಿಶ್ವವಿದ್ಯಾಲಯಗಳು ಜಾತೀಯತೆ ಹಾಗೂ ಭ್ರಷ್ಟಾಚಾರದ ಪಾಪಕೂಪಗಳಾಗಿವೆ. ಉದಾಹರಣೆಗೆ ಕರ್ನಾಟಕ ರಾಜ್ಯದ ಯಾವುದೇ ಮೂಲೆಗೆ ನೀವು ಹೋದರೂ ಅಲ್ಲಿಯ ವಿಶ್ವವಿದ್ಯಾನಿಲಯದ ಕುಲಪತಿಗಳು ಯಾವ ಜಾತಿಯ ಆಧಾರದ ಮೇಲೆ ಹಾಗೂ ಎಷ್ಟು ಹಣವನ್ನು ತೆತ್ತು ಆ ಹುದ್ದೆಯನ್ನು ಪಡೆದುಕೊಂಡಿದ್ದಾರೆ ಎನ್ನುವುದನ್ನು ಜನರು ಮುಕ್ತವಾಗಿ ಚರ್ಚಿಸುವುದನ್ನು ಕಾಣುತ್ತೀರಿ. ಜಾತಿ ಹಾಗೂ ಹಣದ ಜೊತೆಗೆ ರಾಜಕೀಯ ಪ್ರಭಾವವೂ ಕೆಲಸ ಮಾಡುತ್ತದೆ. ಕುಲಪತಿಗಳ ಆಯ್ಕೆಯಿಂದ ಶುರುವಾದ ಜಾತೀಯತೆಯು ಅಲ್ಲಿಯ ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಆಶ್ಚರ್ಯವಲ್ಲ.
ಮೆರಿಟ್ ಹೆಸರಲ್ಲಿ ಅಕಾಡೆಮಿಕ್ ಬ್ರಾಹಣವಾದ
ಹೀಗೆ ಆಗುವುದಕ್ಕೆ ಪೂರಕವಾದ ಒಂದು ಕಾರಣವೆಂದರೆ ಉನ್ನತ ಶಿಕ್ಷಣವು ಜಾಗತೀಕರಣದಿಂದಾಗಿ ಒಂದು ವರ್ಗಕ್ಕೆ ತೆರೆದುಕೊಂಡಿರುವ ಅವಕಾಶಗಳಿಗೆ ರಹದಾರಿಯಾಗಿದೆ. ಹೀಗಾಗಿ ಎಲ್ಲಾ ಜಾತಿಗಳು ಶಿಕ್ಷಣದ ಮೂಲಕ ಅವಕಾಶಗಳನ್ನು ಪಡೆಯುವ ಸ್ಪರ್ಧೆಯಲ್ಲಿವೆ. ಆದರೆ, ಜಾತೀಯತೆಯ ಒಂದು ಲಕ್ಷಣವೆಂದರೆ ಅದು ವೈಯಕ್ತಿಕ ಬುದ್ಧಿ ಸಾಮಥ್ರ್ಯಗಳ ಬದಲಾಗಿ ಜಾತಿಬಾಂಧವ್ಯದ ಮೂಲಕ ಎಲ್ಲವನ್ನೂ ಪಡೆಯಲು ಪ್ರಯತ್ನಿಸುತ್ತದೆ. ಹೀಗಾಗಿ ವಿಶ್ವವಿದ್ಯಾನಿಲಯಗಳಲ್ಲಿ ಜಾತಿಗ್ರಸ್ತವಾದ ವಾತಾವರಣವು ಪ್ರಬಲವಾಗಿ ಬೆಳೆಯುತ್ತದೆ. ದೇಶದ ಮುಂಚೂಣಿ ಸಂಸ್ಥೆಗಳಾದ ಐಐಟಿ, ಐಐಎಂ ಹಾಗೂ ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಅಖಿಲ ಭಾರತೀಯ ಸ್ವರೂಪದ ಸಂಸ್ಥೆಗಳು ಹಾಗೂ ವಿಶ್ವದರ್ಜೆಯ ಶಿಕ್ಷಣಕ್ಕಾಗಿ ಸರಕಾರದಿಂದ ಅಪಾರವಾದ ಧನಸಹಾಯವನ್ನು ಮತ್ತು ಆಚೆ ಮೊನ್ನೆಯವರೆಗೂ ಸ್ವಾಯತ್ತತೆಯನ್ನು ಹೊಂದಿದ್ದವು ಎಂದು ನಂಬಲಾಗಿತ್ತು. ಅಂದರೆ, ಈ ಕಾರಣಗಳಿಂದಾಗಿ ಈ ಸಂಸ್ಥೆಗಳಲ್ಲಿ ಜಾತೀಯತೆಯನ್ನು ಮೀರಿದ ಸೆಕ್ಯುಲರ್ ಆದ ಹಾಗೂ ವೈಚಾರಿಕ ಸ್ವಾತಂತ್ರ್ಯ, ಸಮಾನತೆಗಳು ಇತರ ಸಂಸ್ಥೆಗಳಿಗಿಂತ ಮಿಗಿಲಾಗಿರುತ್ತವೆಯೆಂದು ನಂಬಲಾಗಿತ್ತು. ಇದು ತಕ್ಕಮಟ್ಟಿಗೆ ನಿಜವೂ ಆಗಿತ್ತು. ಆದರೆ, ನಮ್ಮ ದೇಶದಲ್ಲಿ ಸುಪ್ತವಾಗಿ ಕೆಲಸ ಮಾಡುವ ಜಾತೀಯತೆಯಿಂದಾಗಿ ಈ ಮುಂಚೂಣಿ ಸಂಸ್ಥೆಗಳಲ್ಲಿ ಒಂದು ಬಗೆಯ ಅಕಾಡೆಮಿಕ್ ಬ್ರಾಹ್ಮಣವಾದ ಬೆಳೆಯುತ್ತ ಬಂದಿತು. ಇದು ‘‘ಮೆರಿಟ್”ನ ಹೆಸರಿನಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳ ವಿರುದ್ಧ ಕೆಲಸ ಮಾಡುತ್ತ ಅವರಲ್ಲಿ ಕೀಳರಿಮೆ ಅಭದ್ರತೆಗಳನ್ನು ಹುಟ್ಟಿಸುತ್ತಿತ್ತು. ಈ ವಿದ್ಯಾರ್ಥಿಗಳ ಬೌದ್ಧಿಕ ಸಾಮಥ್ರ್ಯ ಕಡಿಮೆ ಇರುತ್ತದೆ, ಅವರಿಗೆ ಇಂಗ್ಲಿಷ್ ಬರುವುದಿಲ್ಲ, ಹೀಗಾಗಿ ಇಂಥ ‘‘ಇತರೇ” ವಿದ್ಯಾರ್ಥಿಗಳಿಂದಾಗಿ ಈ ಸಂಸ್ಥೆಗಳ ಗುಣಮಟ್ಟ ಕುಸಿಯುತ್ತಿದೆಯೆಂದು ಪ್ರಬಲವಾದ ಅಪನಂಬಿಕೆಗಳನ್ನು ಹುಟ್ಟಿಸಲಾಯಿತು. ಇದರ ಪರಿಣಾಮವಾಗಿ ಅನೇಕ ದಲಿತ ವಿದ್ಯಾರ್ಥಿಗಳು ಶಿಕ್ಷಣವನ್ನು ಪೂರೈಸದೇ ಹೊರಬರುತ್ತಿದ್ದರು.
ಆದರೆ, ಕ್ರಮೇಣವಾಗಿ ಇಂಥ ಜಾತೀಯತೆಯನ್ನು ವಿರೋಧಿಸುತ್ತಾ ಸಂಘಟಿತವಾಗುತ್ತ ಬಂದರು. ಇತ್ತೀಚಿನ ದಶಕಗಳಲ್ಲಿ ಈ ಮುಂಚೂಣಿ ಸಂಸ್ಥೆಗಳಲ್ಲಿ ಅಂಬೇಡ್ಕರ್‍ವಾದಿ, ಎಡಪಂಥೀಯ ಸಂಘಟನೆಗಳು ತೀವ್ರ ಪ್ರತಿಭಟನಾತ್ಮಕವಾದ ವೈಚಾರಿಕತೆ ಹಾಗೂ ಕಾರ್ಯವೈಖರಿಗಳನ್ನು ರೂಪಿಸಿಕೊಂಡವು. ಇದೇ ಹೊತ್ತಿಗೆ ದೇಶದ ಅನೇಕಾನೇಕ ಮೇಲು/ಮಧ್ಯಮ ಜಾತಿಗಳಿಂದ ಬಂದ ವಿದ್ಯಾರ್ಥಿಗಳು ಬಲಪಂಥೀಯ ಸಿದ್ಧಾಂತಗಳನ್ನು, ಆರ್‍ಎಸ್‍ಎಸ್ ನಂಟಿನ ವಿದ್ಯಾರ್ಥಿ ಸಂಘಟನೆಗಳನ್ನು ಒಪ್ಪಿಕೊಳ್ಳತೊಡಗಿದರು. ಈ ಜಾತಿಗಳನ್ನು ಒಳಗೊಂಡಿರುವ ಭಾರತದ ಶಿಕ್ಷಿತ ಮಧ್ಯಮವರ್ಗವು ಬಲಪಂಥೀಯ ಸಿದ್ಧಾಂತಗಳನ್ನು ನಂಬಿಕೊಂಡು ಬಲಪಂಥೀಯ ರಾಜಕೀಯದ ಪರವಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಎರಡು ಬೆಳವಣಿಗೆಗಳಿಂದಾಗಿ ಒಂದು ಕಡೆಗೆ ತೀವ್ರ ಪ್ರತಿಭಟನಾತ್ಮಕ ಧೋರಣೆಗಳ ದಲಿತ ವಿದ್ಯಾರ್ಥಿ ಸಂಘಟನೆಗಳು ಪ್ರಬಲವಾಗುತ್ತ ಬಂದು ಈಗ ನಿರಂತರ ಸಂಘರ್ಷದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ ಕೂಡಲೇ ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಮೊಟಕುಮಾಡಿ, ಅಧಿಕಾರಸ್ಥ ರಾಜಕೀಯವು ಈ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡಲು ಅನುಕೂಲವಾಗುವಂತೆ ಈ ಸಂಸ್ಥೆಗಳ ಸಂವಿಧಾನಗಳನ್ನೇ ಬದಲಿಸುತ್ತಿದೆ. ಬಹುಮುಖ್ಯವಾಗಿ ಈ ಸಂಸ್ಥೆಗಳಿಗೆ ಆರ್‍ಎಸ್‍ಎಸ್ ಬೆಂಬಲಿಗರನ್ನು ನೇಮಕ ಮಾಡುತ್ತಿದೆ. ಐ.ಸಿ.ಎಚ್.ಆರ್, ಎನ್.ಬಿ.ಟಿ, ಎಫ್.ಟಿ.ಐ.ಐ ಈ ಎಲ್ಲಾ ಸಂಸ್ಥೆಗಳಲ್ಲಿ ಇದನ್ನು ಮಾಡಲಾಗಿದೆ. ಅಲ್ಲದೇ ಯಾವ ಬಲಪಂಥೀಯ ರಾಜಕಾರಣಿಯು ಯಾವುದೇ ಶಿಕ್ಷಣ ಸಂಸ್ಥೆಯ ಬಗ್ಗೆ ಆಕ್ಷೇಪಿಸಿದರೆ ಅದನ್ನು ನೇರವಾಗಿ ಉನ್ನತ ಶಿಕ್ಷಣ ಸಚಿವಾಲಯವು ಪರಿಗಣಿಸಿ ಆ ಸಂಸ್ಥೆಯ ಮೇಲೆ ಒತ್ತಡಗಳನ್ನು ತರಲು ಆರಂಭಿಸುತ್ತದೆ. ಇದರ ಪ್ರಯೋಜನವನ್ನು ಅನೈತಿಕವಾಗಿ ಬಳಸಿಕೊಳ್ಳುತ್ತಿರುವುದು ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳು.
ಹುಸಿ ರಾಷ್ಟ್ರೀಯತೆ ಮೂಲಕ ದೌರ್ಜನ್ಯ
ರೋಹಿತ್ ವೇಮುಲ ಪ್ರಕರಣವನ್ನೇ ತೆಗೆದುಕೊಳ್ಳಿ. ರೋಹಿತ್ ಸೇರಿದಂತೆ ಹಲವು ದಲಿತ ವಿದ್ಯಾರ್ಥಿಗಳ ವಿರುದ್ಧ ವಿಶ್ವವಿದ್ಯಾಲಯವು ಕ್ರಮಕೈಗೊಳ್ಳಲು ಎರಡು ಕಾರಣಗಳನ್ನು ತೋರಿಸಲಾಗಿದೆ. ಒಂದು, ಅವರು ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿ ಧುರೀಣನ ಮೇಲೆ ದೈಹಿಕ ಹಲ್ಲೆ ಮಾಡಿದರು ಮತ್ತು ಅದರಿಂದಾಗಿ ಗಾಯಗೊಂಡು ಅವನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಎನ್ನುವುದು. ಅವನ ಜೊತೆಗೆ ಚಕಮಕಿ ನಡೆದಿರುವುದು ನಿಜ. ಆದರೆ ಅವನು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದು ಶುದ್ಧಸುಳ್ಳು ಎನ್ನುವುದನ್ನು ಪೊಲೀಸ್ ತನಿಖೆಯು ಸಾಬೀತುಮಾಡಿದೆ. ಆತನಿಗೆ ಸಣ್ಣಪುಟ್ಟ ಗಾಯಗಳಿದ್ದವು; ಅವನಿಗೆ ಅಪೆಂಡಿಸೈಟಿಸ್‍ಗಾಗಿ ಚಿಕಿತ್ಸೆ ನಡೆಯಿತು ಎನ್ನುವುದನ್ನು ಪೊಲೀಸ್ ವರದಿ ಖಚಿತವಾಗಿ ಹೇಳಿದ್ದನ್ನು ಎಲ್ಲಾ ಪ್ರಮುಖ ದಿನಪತ್ರಿಕೆಗಳು ದಾಖಲಿಸಿವೆ. ಅಂದರೆ, ದಲಿತ ವಿದ್ಯಾರ್ಥಿಗಳ ಮೇಲೆ ಬಂದ ಆಪಾದನೆ, ಅವರ ಮೇಲೆ ಕೈಕೊಂಡ ಶಿಸ್ತಿನ ಕ್ರಮಗಳಿಗೆ ಕಾರಣವಾದದ್ದು ಬಲಪಂಥೀಯ ವಿದ್ಯಾರ್ಥಿ ಸಂಸ್ಥೆಯ ಮುಖಂಡನೊಬ್ಬ ಹೇಳಿದ ಸುಳ್ಳು! ಹೀಗೆ ಮಾಡಿದ್ದು ಕ್ರಿಮಿನಲ್ ಕೆಲಸವಲ್ಲವೇ? ಅದು ಮುಂದೆ ರೋಹಿತ್‍ನ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣವಾಗಲಿಲ್ಲವೇ? ತನಿಖೆ ಆಗಬೇಕಾಗಿರುವುದು ಈ ವಿಷಯದ ಬಗ್ಗೆ.
ಇನ್ನೊಂದು ಕಾರಣವೆಂದು ಹೇಳಲಾಗುತ್ತಿರುವುದು ದಲಿತ ವಿದ್ಯಾರ್ಥಿಗಳು ಯಾಕೂಬ್ ಮೆಮನ್‍ನ ಪರವಾಗಿ ಅಂದರೆ ರಾಷ್ಟ್ರಕ್ಕೆ ವಿರೋಧಿಯಾಗಿ ವರ್ತಿಸಿದರು ಎನ್ನುವುದು. ಈ ವಿಷಯದ ಬಗ್ಗೆ ಬಂಡಾರು ದತ್ತಾತ್ರೇಯ ಅವರು ಉನ್ನತ ಶಿಕ್ಷಣ ಸಚಿವಾಲಯಕ್ಕೆ ಪತ್ರ ಬರೆದು, ಸಚಿವಾಲಯವು ಅಸಹಜವಾದ ಒತ್ತಡವನ್ನು ವಿಶ್ವವಿದ್ಯಾನಿಲಯದ ಮೇಲೆ ಹೇರಿದ್ದು ಮುಂದೆ ರೋಹಿತನ ಆತ್ಮಹತ್ಯೆಗೆ ಕಾರಣವಾಯಿತು. ಬಂಡಾರು ದತ್ತಾತ್ರೇಯ ಅವರು ಯಾವ ಸಮಗ್ರ ತನಿಖೆಯ ಆಧಾರದ ಮೇಲೆ ‘‘ಹೈದರಾಬಾದ್ ವಿಶ್ವವಿದ್ಯಾನಿಲಯವು ರಾಷ್ಟ್ರವಿರೋಧಿ ಚಟುವಟಿಕೆಗಳ ತಾಣವಾಗಿದೆ’ ಎಂದು ಪತ್ರ ಬರೆದರೋ ಅದು ಯಾರಿಗೂ ಗೊತ್ತಿಲ್ಲ. ಇದು ನಿಜವಾಗಿದ್ದರೆ ವಿಶ್ವವಿದ್ಯಾನಿಲಯವು ದಲಿತ ವಿದ್ಯಾರ್ಥಿಗಳನ್ನು ನೇರವಾಗಿ ಜೈಲಿಗೆ ಕಳುಹಿಸಬಹುದಿತ್ತಲ್ಲ? ಯಾಕೆ ಅವರ ಮೇಲಿನ ಆರೋಪಗಳು ಸಾಬೀತಾಗಿಲ್ಲವೆಂದು ಹೇಳಿತ್ತು? ಉತ್ತರ ಸರಳವಾಗಿದೆ. ಹುಸಿ ರಾಷ್ಟ್ರೀಯತೆ ಹಾಗೂ ಹುಸಿ ಧರ್ಮಗಳ ಮೂಲಕ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದೌರ್ಜನ್ಯ ನಡೆಸುವುದು ಸದ್ಯದ ಬಲಪಂಥೀಯ ರಾಜಕೀಯವಾಗಿದೆ. ಇದನ್ನು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಪ್ರಯೋಗಿಸಲಾಗುತ್ತಿದೆ. ಹಲ್ಲೆ ಹಾಗೂ ದೈಹಿಕ ಹಿಂಸೆ ನಡೆದಿದೆಯೆಂದು ಸುಳ್ಳು ದೂರನ್ನು ಕೊಟ್ಟವರ ಬಗ್ಗೆ ತನಿಖೆ ಮಾಡುವುದರ ಬದಲಾಗಿ ರೋಹಿತ್ ವೇಮುಲನು ಹುಟ್ಟಿದ ಜಾತಿ ಯಾವುದು ಎಂದು ತನಿಖೆ ಮಾಡಲಾಗುತ್ತಿದೆ. ಅವನು ಹುಟ್ಟಿದ ಜಾತಿಯು ಅಧಿಕೃತವಾದ ಪರಿಶಿಷ್ಟ ಜಾತಿ ಜನಾಂಗಗಳ ಪಟ್ಟಿಯಲ್ಲಿ ಇಲ್ಲದಿದ್ದರೆ ಅಂಥ ಪ್ರತಿಭಾವಂತನ ಆತ್ಮಹತ್ಯೆಗೆ ಕಾರಣವಾದ ಸಂಗತಿಗಳನ್ನು ಮರೆತುಬಿಡಬಹುದೆ? ಅಥವಾ ಕಾರಣರಾದವರು ತಪ್ಪಿತಸ್ಥರಲ್ಲವೆಂದು ಒಪ್ಪಬೇಕೆ?
ಹೊಸ ಅಜೆಂಡಾದ ವಿರುದ್ಧ ಪ್ರತಿರೋಧ
ತನಿಖೆಯು ಈ ಜಾಡಿನಲ್ಲಿ ನಡೆದರೆ ಅದರ ಫಲಿತಾಂಶವನ್ನು ಈಗಲೇ ಊಹಿಸಬಹುದಾಗಿದೆ. ನಿಯಮ ಕಾನೂನುಗಳ ಟ್ರ್ಯಾಫಿಕ್ ಜ್ಯಾಮ್‍ನಲ್ಲಿ ಸತ್ಯವು ಕಳೆದುಹೋಗುತ್ತದೆ. ತ್ವರಿತವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಹುಟ್ಟಿಕೊಳ್ಳುವ ವೈರುಧ್ಯಗಳನ್ನು ನಿಭಾಯಿಸುವ ಸಾಮಥ್ರ್ಯವು ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಇಲ್ಲ. ಇನ್ನು ಜಾತಿ, ಶೋಷಣೆ, ಅವಮಾನ ಇಂಥ ಸೂಕ್ಷ್ಮವಿಷಯಗಳನ್ನು ಅವು ಅರ್ಥಮಾಡಿಕೊಳ್ಳುವುದು ಅಸಾಧ್ಯವೇ ಸರಿ. ಆದರೆ ತುರ್ತಾಗಿ ಆಗಬೇಕಾಗಿರುವ ಕೆಲಸವೆಂದರೆ ಆಧುನಿಕ ಜಗತ್ತಿನ ಸಂಕೇತಗಳಾಗಿರುವ ವಿದ್ಯಾಸಂಸ್ಥೆಗಳಲ್ಲಿ ಬಲಪಂಥೀಯ ರಾಜಕೀಯ ಪಕ್ಷ ಹಾಗೂ ಸಂಸ್ಥೆಗಳು ತಮ್ಮ ಮನುವಾದವನ್ನು ಹೇರಲು ಅವಕಾಶವಿರದಂತೆ ಪ್ರತಿಭಟನೆಯ ಮೂಲಕ ಒತ್ತಡವನ್ನು ತರಬೇಕಾಗಿದೆ. ಆದರೆ, ಅದು ಒಟ್ಟಾರೆಯಾಗಿ ನಮ್ಮನ್ನೆಲ್ಲ ಪೀಡಿಸುತ್ತಿರುವ ಅಸಹಿಷ್ಣುತೆಯ ವಿರುದ್ಧದ ಸಾಮುದಾಯಿಕವಾದ ಹೋರಾಟವಾಗಿ ಆಗಬೇಕಿದೆ. ನನ್ನ ದೃಷ್ಟಿಯಲ್ಲಿ ರೋಹಿತ್‍ನ ಆತ್ಮಹತ್ಯೆಯನ್ನು ಒಂದು ಬಿಡಿಯಾದ ಘಟನೆಯನ್ನಾಗಿ ನೋಡಲಾಗದು. ಅದು ಒಂದು ನಿರ್ದಿಷ್ಟ ಚರಿತ್ರೆಯ ಫಲವಾಗಿದೆ. ಸ್ವಾತಂತ್ರ್ಯಪೂರ್ವ ಕಾಲದಿಂದ ಆರಂಭವಾದ ಸಾಂಸ್ಕøತಿಕ ಹಾಗೂ ರಾಜಕೀಯ ಸಂಘರ್ಷದ ನಿಡಿದಾದ ನೆರಳಿನಲ್ಲಿ ಈಗಲೂ ನಾವು ಇದ್ದೇವೆ. ಸಾಂಪ್ರದಾಯಿಕ ಮೌಲ್ಯಗಳು, ನಡವಳಿಕೆ, ಕಟ್ಟಳೆಗಳು, ಜಾತಿ ವ್ಯವಸ್ಥೆ, ಸ್ತ್ರೀಪುರುಷರ ನಡುವಣ ಅಸಮಾನತೆ ಇವುಗಳ ವಿರುದ್ಧ ಬಹುದೊಡ್ಡ ಸಂಘರ್ಷವು ಅಂದು ಶುರುವಾಯಿತು. ಸಮಾನತೆ, ಸೆಕ್ಯುಲರ್‍ವಾದ, ಜಾತಿ ವ್ಯವಸ್ಥೆಯ ವಿರೋಧ ಇಂಥ ನಾಗರಿಕ ಮೌಲ್ಯಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನದ ಫಲವಾಗಿ ಸ್ವಾತಂತ್ರ್ಯ ಹಾಗೂ ಸಂವಿಧಾನಗಳನ್ನು ಪಡೆದುಕೊಂಡವು.
ಆದರೆ, ಸ್ವಾತಂತ್ರ್ಯಪೂರ್ವ ಕಾಲದಿಂದಲೇ ಬ್ರಾಹ್ಮಣವಾದಿ ಮನುಷ್ಯವಿರೋಧಿ ಸಿದ್ಧಾಂತಗಳನ್ನು ಪ್ರತಿಪಾದಿಸುವ ಬಲಪಂಥೀಯ ಸಂಘಟನೆಗಳೂ ಬೆಳೆಯುತ್ತ ಬಂದವು. ಅನೇಕ ಸಂಕೀರ್ಣವಾದ ಕಾರಣಗಳಿಂದಾಗಿ ಈಗ ಚುನಾವಣಾ ರಾಜಕೀಯದ ಮೂಲಕ ಈ ಸಂಘಟನೆಗಳ ರಾಜಕೀಯ ಪ್ರತಿನಿಧಿಯಾದ ಪಕ್ಷವು ಅಧಿಕಾರಕ್ಕೆ ಬಂದಿದೆ. ಈ ಹಿಂದೆಯೂ ನಾವು ನೋಡಿದಂತೆ ಅಧಿಕಾರಕ್ಕೆ ಬಂದಕೂಡಲೇ ಈ ಪಕ್ಷವು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಸ್ತಕ್ಷೇಪವನ್ನು ಮಾಡತೊಡಗುತ್ತದೆ. ಪಠ್ಯಗಳ ಕೇಸರೀಕರಣ, ಇತಿಹಾಸ ಕಥನಗಳನ್ನು ತಿರುಚುವುದು, ಶಿಕ್ಷಣ ಸಂಸ್ಥೆಗಳಲ್ಲಿ ಆರ್‍ಎಸ್‍ಎಸ್ ಹಿಂಬಾಲಕರನ್ನು ಆಡಳಿತದ ಸ್ಥಾನಗಳಿಗೆ ನೇಮಕಮಾಡುವುದು, ಎಡಪಂಥೀಯ ಶಿಕ್ಷಕರು ಹಾಗೂ ವಿದ್ವಾಂಸರನ್ನು ಪೀಡಿಸುವುದು – ಇವೆಲ್ಲ ಅದರ ಅಜೆಂಡಾದ ಅಂಶಗಳಾಗಿವೆ. ಈ ಅಜೆಂಡಾಗೆ ಈಗ ಸೇರಿಕೊಂಡಿರುವ ಹೊಸ ಅಂಶವೆಂದರೆ ಐಐಟಿ, ಕೇಂದ್ರೀಯ ವಿಶ್ವವಿದ್ಯಾಲಯ ಇಂಥ ಮುಂಚೂಣಿ ಸಂಸ್ಥೆಗಳಲ್ಲಿ ಅಂಬೇಡ್ಕರ್‍ವಾದಿ ದಲಿತ ವಿದ್ಯಾರ್ಥಿಗಳ ಮೇಲೆ ಸಾಂಸ್ಥಿಕವಾದ ದೌರ್ಜನ್ಯವನ್ನು ನಡೆಸುವುದು. ಈ ಕೆಲಸದ ಎರಡು ಉದ್ದೇಶಗಳೆಂದರೆ ದಲಿತ ಯುವಜನತೆಯನ್ನು ಅತ್ಯುನ್ನತ ಶಿಕ್ಷಣದಿಂದ ಹೊರಗೆ ಹಾಕುವುದು ಮತ್ತು ಬಲಪಂಥೀಯ ಸಿದ್ಧಾಂತಕ್ಕೆ ಅತ್ಯಂತ ಪ್ರಬಲ ಸವಾಲಾಗಿರುವ ಅಂಬೇಡ್ಕರ್‍ವಾದವು ಕ್ಯಾಂಪಸ್‍ಗಳಲ್ಲಿ ಬೆಳೆಯದಂತೆ ಮಾಡುವುದು. ನಿನ್ನೆ ಐಐಟಿ, ಈಗ ಹೈದರಾಬಾದ್ ವಿಶ್ವವಿದ್ಯಾಲಯ, ಮುಂದೆ ಇಂಥ ಇತರ ಸಂಸ್ಥೆಗಳು. ಸಂಘಟಿತವಾದ ಹೋರಾಟಗಳು ಇಲ್ಲದಿದ್ದರೆ ಇನ್ನೆಷ್ಟು ಜನ ಶೋಷಿತರು ಬಲಿಪಶುಗಳಾಗುತ್ತಾರೋ.