ವಿಶ್ವ ವ್ಯಾಪಾರ ಸಂಸ್ಥೆಯ ನೈರೋಬಿ ಸಭೆ -ದೇಶಕ್ಕೆ ಹಿನ್ನಡೆ

ಸಂಪುಟ 10 ಸಂಚಿಕೆ 3 ಜನವರಿ 17, 2016 ( ಕುರುಡು ಕಾಂಚಾಣ – ಕೆ.ಎಂ. ನಾಗರಾಜು )

ಎರಡು ವರ್ಷಕ್ಕೊಮ್ಮೆ ವಿಶ್ವ ವ್ಯಾಪಾರ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಮಂತ್ರಿಗಳ ಸಭೆ ನಡೆಯುತ್ತದೆ. ಈ ಸಂಸ್ಥೆಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಅತ್ಯುನ್ನತ ಅಧಿಕಾರ ಹೊಂದಿರುವ ಈ ಸಭೆಗೆ ಭಾರಿ ಮಹತ್ವವಿದೆ. ಈ ಬಾರಿ, ಈ ಸಂಸ್ಥೆಯ ಹತ್ತನೆ ಸುತ್ತಿನ ಮಂತ್ರಿಗಳ ಸಭೆ, ಕೆನ್ಯಾದ ರಾಜಧಾನಿ ನೈರೋಬಿಯಲ್ಲಿ 2015ರ ಡಿಸೆಂಬರ್ 15ರಿಂದ 19ರ ವರೆಗೆ ನಡೆಯಿತು. ಈ ಸಭೆಯಲ್ಲಿ ಭಾರತಕ್ಕೆ ಯಾವ ಪ್ರಯೋಜನವೂ ಆಗಿಲ್ಲ. ದೋಹಾ ಸುತ್ತಿನ ಸೀಮಿತ ಸಾಧನೆಗಳು ಮತ್ತು ಅಲ್ಲಿ ಇತ್ಯರ್ಥವಾಗದೆ ಉಳಿದಿದ್ದ ಅಜೆಂಡಾ ಎರಡೂ ಸಮಾಧಿಯಾಗಿವೆ. ನೈರೋಬಿಯಲ್ಲಿ ಚರ್ಚೆಗೆ ಬಂದ ವಿವಾದಾತ್ಮಕ ವಿಷಯಗಳು ಮತ್ತು ತೀರ್ಮಾನಗಳನ್ನು ಗಮನಿಸಿದ ಕೆಲವು ವಿಶ್ಲೇಷಕರು ಅದನ್ನು ಒಂದು ದುರ್ಘಟನೆ ಎಂದಿದ್ದಾರೆ.

ಶ್ರೀಮಂತ ದೇಶಗಳ ಕೈಗೊಂಬೆ

ಎರಡನೆ ಮಹಾಯುದ್ಧದ ನಂತರ 1947ರಿಂದ 1994ರವರೆಗೆ ಅಂತಾರಾಷ್ಟ್ರೀಯ ವ್ಯಾಪಾರಗಳಿಗೆ ಸಂಬಂಧಿಸಿದ ವಿಧಿ ವಿಧಾನಗಳನ್ನು ಗ್ಯಾಟ್  (GATT-General Agreement on Trade and Tariffs) ನಿರ್ವಹಿಸುತ್ತಿತ್ತು. 1995ರಲ್ಲಿ ಗ್ಯಾಟ್ ವ್ಯವಸ್ಥೆಗೆ ಬದಲಾಗಿ ವಿಶ್ವ ವ್ಯಾಪಾರ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಈಗ 162 ದೇಶಗಳು ಸದಸ್ಯರಿರುವ ಅದರಲ್ಲಿ ಮುಕ್ಕಾಲು ಪಾಲು ದೇಶಗಳು ಆರ್ಥಿಕವಾಗಿ ಹಿಂದುಳಿದವುಗಳು. ಪ್ರಜಾಪ್ರಭುತ್ವದ ತಳಹದಿಯ ಮೇಲೆ ಸಮಸ್ಯೆಗಳನ್ನು ತೀರ್ಮಾನ ಮಾಡುವ ಆಶಯ ಹೊತ್ತ ಸಂಸ್ಥೆ, ಅಂದಿನಿಂದ ಇಂದಿನವರೆಗೆ ಶ್ರೀಮಂತ ಬಂಡವಾಳಶಾಹಿ ದೇಶಗಳ ಪರವಾಗಿ ನಿಂತಿದೆ. ಅವರ ಕೈಗೊಂಬೆಯಾಗಿದೆ. ಅಭಿವೃದ್ಧಿ ಪಥದಲ್ಲಿರುವ ಭಾರತದಂತಹ ದೇಶಗಳು ಮತ್ತು ಹಿಂದುಳಿದಿರುವ ಅನೇಕ ಸಣ್ಣ ದೇಶಗಳಿಗೆ ಹಾನಿಯುಂಟುಮಾಡಿ ಅದರ ಲಾಭವನ್ನು ಶ್ರೀಮಂತ ದೇಶಗಳಿಗೆ ಒದಗಿಸಿದೆ.

ಶ್ರೀಮಂತ ದೇಶಗಳ ಅಸ್ತ್ರ

ಬಂಡವಾಳಶಾಹಿಯ ಸುವರ್ಣಯುಗ ಕೊನೆಗೊಂಡ ನಂತರ ಅದು ನಿಧಾನವಾಗಿ ಬಿಕ್ಕಟ್ಟಿನತ್ತ ಸಾಗುತ್ತಿತ್ತು. ಹೊಸ ಹೊಸ ಮಾರುಕಟ್ಟೆಗಳ ಅನ್ವೇಷಣೆಯಲ್ಲಿದ್ದ ಶ್ರೀಮಂತ ಬಂಡವಾಳಶಾಹಿ ದೇಶಗಳು ತಮ್ಮ ಲಾಭಕ್ಕಾಗಿ ವಿಶ್ವ ವ್ಯಾಪಾರ ಸಂಸ್ಥೆಯನ್ನು ಒಂದು ಅಸ್ತ್ರವಾಗಿ ಬಳಸಲು ಆರಂಭಿಸಿದವು.

ಭಾರತವೂ ಸೇರಿದಂತೆ, ವಸಾಹತುಶಾಹಿ ಆಡಳಿತಕ್ಕೊಳಪಟ್ಟಿದ್ದ ದೇಶಗಳು ವಿಮೋಚನೆಗೊಂಡ ನಂತರ ಸ್ವಾವಲಂಬಿ ಅರ್ಥವ್ಯವಸ್ಥೆಯನ್ನು ರೂಪಿಸಿಕೊಂಡಿದ್ದವು. ಆಗ ಕೃಷಿ ಪ್ರಧಾನವಾಗಿದ್ದ ಭಾರತದಲ್ಲಿ ಸರ್ಕಾರ ರೈತರಿಗೆ ಸುಲಭ ದರದಲ್ಲಿ ಬೀಜ, ರಸಗೊಬ್ಬರ ಒದಗಿಸುವ ಮತ್ತು ಬಡ ಜನರಿಗೆ ಪಡಿತರ ವ್ಯವಸ್ಥೆಯ ಮೂಲಕ ಸುಲಭ ದರದಲ್ಲಿ ಆಹಾರ ಧಾನ್ಯ ಒದಗಿಸುವ ವ್ಯವಸ್ಥೆ ರೂಪಿಸಿತ್ತು. ಈ ಸುಲಭ ದರ ಅಥವಾ ಸಬ್ಸಿಡಿಯ ಮೇಲೆ ಶ್ರೀಮಂತ ದೇಶಗಳ ಕಣ್ಣು ಕೆಂಪಾಯಿತು. ಈ ದೇಶಗಳು ವಿಶ್ವ ವ್ಯಾಪಾರ ಸಂಸ್ಥೆಯನ್ನು ಅಸ್ತ್ರವಾಗಿ ಬಳಸಿ ಭಾರತದಲ್ಲಿ ಸಬ್ಸಿಡಿ ಕೊನೆಗೊಳ್ಳುವಂತೆ ಮಾಡಿದವು. ನಂತರ, ತಂತ್ರಜ್ಞಾನವನ್ನು ತಮ್ಮ ಆಸ್ತಿಯಾಗಿಸಿಕೊಳ್ಳಲು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಮತಿ ಕೊಡುವ ವ್ಯಾಪಾರ ಸಂಬಂಧಿ ಬೌದ್ಧಿಕ ಆಸ್ತಿ ಹಕ್ಕು (TRIPS- Trade Related Intellectual Property Rights) ಗಳನ್ನು ಎಲ್ಲರೂ ಒಪ್ಪಿಕೊಳ್ಳುವಂತೆ ವಿಶ್ವ ವ್ಯಾಪಾರ ಸಂಸ್ಥೆಯ ಮೂಲಕ ತೀರ್ಮಾನ ಹೇರಲಾಯ್ತು.

ಈ ದೇಶಗಳು ಈಗ ಇನ್ನೊಂದು ಹೊಸ ಅಸ್ತ್ರದ ಬಳಕೆ ಮಾಡಲು ಆರಂಭಿಸಿವೆ. ವಿಶ್ವ ವ್ಯಾಪಾರ ಸಂಸ್ಥೆಯ ಚೌಕಟ್ಟಿನಿಂದ ಹೊರಗೆ ತಮಗೆ ಬೇಕಾದ ರೀತಿಯಲ್ಲಿ ಈ ದೇಶಗಳು ಬೇರೆ ದೇಶಗಳೊಂದಿಗೆ ಮುಕ್ತ ವ್ಯಾಪಾರದ ಹೆಸರಿನಲ್ಲಿ ಮಾಡಿಕೊಳ್ಳುವ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಒಪ್ಪಂದಗಳೇ ಈ ಹೊಸ ಅಸ್ತ್ರ.

ನೈರೋಬಿಯಲ್ಲಿ ಆದದ್ದೇನು? 

ಕತಾರ್ ರಾಜಧಾನಿ ದೋಹಾದಲ್ಲಿ ನಡೆದ ಮಂತ್ರಿಗಳ ಮಟ್ಟದ ನಾಲ್ಕನೆ ಸುತ್ತಿನ ಮಾತುಕತೆಯಲ್ಲಿ ತಾರತಮ್ಯದ ಸಬ್ಸಿಡಿ ನೀತಿಯನ್ನು ಕ್ರಮೇಣವಾಗಿ ಸರಿಪಡಿಸುವ ಬಗ್ಗೆ ಒಮ್ಮತ ಮೂಡಿತ್ತು. ನಂತರ ನಡೆದ ಮಂತ್ರಿಗಳ ಮಟ್ಟದ ಎಲ್ಲ ಸಭೆಗಳಲ್ಲೂ ಅದನ್ನು ಪನರುಚ್ಛರಿಸಲಾಗುತ್ತಿತ್ತು. ಆದರೆ, ಈ ವಿಷಯವನ್ನು ಈಗ ನೈರೋಬಿಯಲ್ಲಿ ಕೈ ಬಿಡಲಾಗಿದೆ. ಇದು ಭಾರತ ಮತ್ತು ಇತರ ಹಿಂದುಳಿದ ದೇಶಗಳ ನಿರೀಕ್ಷೆಯನ್ನು ನುಚ್ಚುನೂರು ಮಾಡಿದೆ. ಮೊದಲ ಬಾರಿಗೆ ತಮ್ಮ ನೆಲದಲ್ಲಿ ನಡೆಯುವ ಸಭೆಯಲ್ಲಿ ತಮಗೆ ಸಬ್ಸಿಡಿ ವಿಷಯದಲ್ಲಿ ಸ್ವಲ್ಪವಾದರೂ ರಿಯಾಯ್ತಿ ದೊರೆಯುವುದೆಂಬ ಆಫ್ರಿಕಾ ದೇಶಗಳ ನಿರೀಕ್ಷೆಯೂ ಮಣ್ಣುಪಾಲಾಗಿದೆ.

ಈ ವಿಡಂಬನೆಯ ನಾಟಕದಲ್ಲಿ ಅಮೇರಿಕದ ಪಾತ್ರ ದೊಡ್ಡದಿತ್ತು. ಹಿಂದುಳಿದ ದೇಶಗಳ ಅಭಿಪ್ರಾಯಗಳಿಗೆ ಕಿವಿಗೊಡದೆ, ಬೆರಳೆಣಿಕೆಯಷ್ಟು ಸಂಖ್ಯೆಯ ಪ್ರಮುಖ ದೇಶಗಳ ಬೆಂಬಲದೊಂದಿಗೆ ಸಿದ್ಧ ಪಡಿಸಿದ ಕರಡು ಘೋಷಣೆಯನ್ನು ಉಳಿದವರೂ ಒಪ್ಪಿಕೊಳ್ಳುವಂತೆ ಮಾಡಿತು ಅಮೆರಿಕಾ. ಈ ಬೆರಳೆಣಿಕೆಯ ದೇಶಗಳಲ್ಲಿ ಭಾರತವೂ ಸೇರಿತ್ತು. ಸಬ್ಸಿಡಿ ವಿಷಯ ಈಗ ಮುಗಿದ ಕತೆ ಎಂಬ ಹೊಸ ರಾಗ ಹಾಡುತ್ತಿದೆ ಅಮೆರಿಕ. ಈ ವರೆಗಿನ ಎಲ್ಲ ಸಭೆಗಳಲ್ಲಿಯೂ ಈ ವಿಷಯವನ್ನು ಪುನರುಚ್ಛರಿಸಲಾಗುತ್ತಿತ್ತು. ನೈರೋಬಿಯಲ್ಲಿ ಹಾಗೆ ಮಾಡದಿರುವದರಿಂದ ಕಾನೂನು ದೃಷ್ಟಿಯಲ್ಲಿ ಅದು ಸತ್ತುಹೋಗಿದೆ ಎನ್ನುತ್ತಿದೆ ಅಮೆರಿಕ.

ಅಲ್ಲಿ ಸಲ್ಲುವುದು ಇಲ್ಲಿ ಸಲ್ಲದು

ಸಬ್ಸಿಡಿ ತಾರತಮ್ಯದ ಬಗ್ಗೆ ಈ ತನಕ ಗಟ್ಟಿ ದನಿಯಲ್ಲಿ ಮಾತಾಡುತ್ತಿದ್ದ ಭಾರತ, ಹಿಂದುಳಿದ ದೇಶಗಳನ್ನು ನಡುನೀರಿನಲ್ಲಿ ಬಿಟ್ಟು ಅಮೆರಿಕದ ಜೊತೆ ಕೈ ಜೋಡಿಸಿದ್ದರಿಂದ ಅದಕ್ಕೆ ಸಿಕ್ಕಿದ ಲಾಭ ಏನೂ ಇಲ್ಲ. ಬದಲಿಗೆ, ಸಾರ್ವಜನಿಕ ವಿತರಣೆಗೆ ಬೇಕಾದ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿಸುತ್ತಿರುವ ಏರ್ಪಾಡಿನಲ್ಲಿ, ವಿಶ್ವ ವ್ಯಾಪಾರ ಸಂಸ್ಥೆ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಸಬ್ಸಿಡಿ – “ಮಾರುಕಟ್ಟೆ ವಿರೂಪಗೊಳಿಸುವ ಸಬ್ಸಿಡಿ” – ಇರುವ ನೆಲೆಯಲ್ಲಿ “ಉಲ್ಲಂಘನೆ” ಎದುರಿಸುವ ಅಪಾಯದಲ್ಲಿದೆ. ಉಪವಾಪ ಬೀಳಲಿರುವ ಜನತೆಗೆ ಆಹಾರ ಒದಗಿಸುವ ಧಾನ್ಯಗಳ ಖರೀದಿಯಲ್ಲಿಯೂ  “ಮಾರುಕಟ್ಟೆ ವಿರೂಪಗೊಳಿಸುವ ಸಬ್ಸಿಡಿ” ಇದೆ ಎಂಬ ವಾದ ಹೂಡುವವರಿಗೆ ಶ್ರೀಮಂತ ದೇಶಗಳು ತಮ್ಮ ರೈತರಿಗೆ ಕೊಡುವ ಭಾರಿ ಮೊತ್ತದ ಹಣ “ಮಾರುಕಟ್ಟೆ ವಿರೂಪಗೊಳಿಸುವ ಸಬ್ಸಿಡಿ”ಯಾಗುವುದಿಲ್ಲ! ಉದಾಹರಣೆಗೆ, 2014ರಲ್ಲಿ, ಅಮೆರಿಕದ ರೈತರಿಗೆ 140 ಬಿಲಿಯನ್ ಡಾಲರ್(ಸುಮಾರು ಒಂಭತ್ತು ಲಕ್ಷ ಇಪ್ಪತ್ತನಾಲ್ಕು ಸಾವಿರ ಕೋಟಿ ರೂ) ಸಹಾಯ ದೊರೆತಿದೆ. ಇದನ್ನು ತಾಂತ್ರಿಕ ವಾದಗಳ ಮೂಲಕ ಸಮರ್ಥಿಸಿಕೊಳ್ಳುತ್ತಾರೆ.

ನೆತ್ತಿಯ ಮೇಲೆ ನೇತಾಡುವ ಕತ್ತಿ

ನೈರೋಬಿ ಸಭೆಯ ಫಲಿತಾಂಶಗಳ ಬಗ್ಗೆ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಅವರ ಅಭಿಪ್ರಾಯಗಳು ಹೀಗಿವೆ:

“ಮೂರನೆ ಜಗತ್ತಿನ ಹಿಂದುಳಿದ ದೇಶಗಳು ಹೊಂದಿರುವ ಅಭಿವೃದ್ಧಿಯ ಹೆಬ್ಬಯಕೆಗಳನ್ನು ಈಡೇರಿಸುವ ಆಶ್ವಾಸನೆ ಕೊಟ್ಟಿದ್ದ ದೋಹಾ ಅಭಿವೃದ್ಧಿ ಅಜೆಂಡಾವನ್ನು ವಿಧ್ಯುಕ್ತವಾಗಿ ತ್ಯಜಿಸಲಾಗಿದೆ. ಇದು, ವಿಶ್ವ ವ್ಯಾಪಾರ ಸಂಸ್ಥೆಯ ವೇದಿಕೆಯಲ್ಲಿ ಆಗುತ್ತಿದ್ದ ವಿಶಾಲರೂಪದ ಒಪ್ಪಂದಗಳ ಬದಲು ಪ್ರಾದೇಶಿಕ ಮಟ್ಟಗಳಲ್ಲಿ ಏರ್ಪಡಿಸಿಕೊಳ್ಳುವ ಮುಕ್ತ ವ್ಯಾಪಾರ ಒಪ್ಪಂದಗಳತ್ತ ಸಾಗುವ ವ್ಯೂಹದ ಭಾಗವಾಗಿದೆ. ಈ ಏರ್ಪಾಡಿನಲ್ಲಿ, ಶ್ರೀಮಂತ ದೇಶಗಳು ಮೂರನೆ ಜಗತ್ತಿನ ಹಿಂದುಳಿದ ದೇಶಗಳನ್ನು ದಬಾಯಿಸಿ ತಮಗೆ ಬೇಕಾದ್ದನ್ನು ಪಡೆಯುವ ಸಾಧ್ಯತೆಗಳಿವೆ. 2013ರಲ್ಲಿ ಇಂಡೋನೇಷಿಯಾದ ಬಾಲಿಯಲ್ಲಿ ನಡೆದ ಸಭೆಯಲ್ಲಿ ಭಾರತ ಮತ್ತು ಇತರ ಹಿಂದುಳಿದ ದೇಶಗಳಿಗೆ, ಒಂದು ನಿಗದಿತ ಬೆಲೆಯಲ್ಲಿ ಧಾನ್ಯ ಸಂಗ್ರಹಣೆಗೆ ಸ್ವಲ್ಪ ಸಮಯದ ಅನುಮತಿ ನೀಡಲಾಗಿತ್ತು. ನೈರೋಬಿ ಸಭೆಯಲ್ಲಿ ಅದನ್ನು ಮುಂದುವರೆಸಲು ಅನುಮತಿ ಪಡೆಯುವ ನಿರೀಕ್ಷೆಯಿತ್ತು. ಅದೀಗ ಹುಸಿಯಾಗಿದೆ. ಈ ವಿಷಯದಲ್ಲಿ, ಭಾರತದ ತಲೆಯ ಮೇಲೆ ನೇತಾಡುವ ತೂಗು ಕತ್ತಿಯನ್ನು ಕಾಣಬೇಕಾದ ಪರಿಸ್ಥಿತಿ ಈಗ ಭಾರತದ್ದು. ಈ ವಿಷಯವನ್ನು ಮತ್ತು ಪರಿಸ್ಥಿತಿಯನ್ನು ಶ್ರೀಮಂತ ದೇಶಗಳು 1996ರ ಸಿಂಗಾಪುರ ಸಭೆಯಲ್ಲಿ ಇತ್ಯರ್ಥವಾಗದೆ ಉಳಿದ ಹೂಡಿಕೆ, ಪೈಪೋಟಿ, ಪಾರದರ್ಶಕತೆ ಮುಂತಾದ ವಿಷಯಗಳ ಬಗ್ಗೆ ತಮಗೆ ಶರಣಾಗುವಂತೆ ಭಾರತವನ್ನು ಬಗ್ಗಿಸಲು ಬಳಸಿಕೊಳ್ಳಬಹುದು. ಯಾವ ರೀತಿಯಲ್ಲಿ ನೋಡಿದರೂ ಪ್ರಯೋಜನ ಪಡೆಯುವುದು ಈ ದೇಶಗಳೇ. ಭಾರತಕ್ಕೆ ಅಷ್ಟರ ಮಟ್ಟಿಗೆ ಹಿನ್ನಡೆಯಾಗಿದೆ”.

73079281_2c56785752_b

ಇದುವರೆಗೆ ಡಬ್ಲ್ಯುಟಿಒ ಅಥವ ವಿಶ್ವ ವ್ಯಾಪಾರ ಸಂಸ್ಥೆ ಮುಂದುವರೆದ ದೇಶಗಳ ಒಂದು ಪ್ರಧಾನ ಅಸ್ತ್ರವಾಗಿತ್ತು. ವಸಾಹತುಶಾಹಿಯಿಂದ ವಿಮೋಚನೆಗೊಂಡ ಭಾರತದಂತಹ ದೇಶಗಳು ಸ್ವಾವಲಂಬೀ ಬೆಳವಣಿಗೆಗೆ ರೂಪಿಸಿಕೊಂಡಿದ್ದ ಸರಕಾರೀ ನಿಯಂತ್ರಣದ ವ್ಯವಸ್ಥೆಯನ್ನು ಕಳಚಿಹಾಕುವ ತಮ್ಮ ಗುರಿ ನೇರವೇರಿದ ನಂತರ ಅವು ಈಗ ಇನ್ನೂ ಬಲವಾದ ಅಸ್ತ್ರವನ್ನು ರೂಪಿಸಿಕೊಂಡಿವೆ- ದ್ವಿಪಕ್ಷೀಯ ಅಥವ ಪ್ರಾದೇಶಿಕ ವ್ಯಾಪಾರ ಒಪ್ಪಂದ(ಆರ್‍ಟಿಎ)ಗಳು. ಇಲ್ಲಿ ಅವು ಡಬ್ಲ್ಯುಟಿಒದಂತೆ 162 ದೇಶಗಳ ಮಂತ್ರಿಗಳೊಂದಿಗೆ ಮಾತುಕತೆ ನಡೆಸಬೇಕಾಗಿಲ್ಲ, ಒಂದು ಆಥವ ಕೆಲವೇ ದೇಶಗಳೊಂದಿಗೆ ಮಾತುಕತೆ ನಡೆಸಿದರೆ ಸಾಕು. ಹೀಗೆ ಮೂರನೇ ಜಗತ್ತಿನ ದೇಶಗಳ ಐಕ್ಯತೆಯನ್ನು ಛಿದ್ರಗೊಳಿಸಿ ತಮ್ಮ ಯಜಮಾನಿಕೆಯನ್ನು ಮುಂದುವರೆಸಲು ಸಾಮ್ರಾಜ್ಯಶಾಹಿಗೆ ಸಾಧ್ಯವಾಗಿದೆ. ನೈರೋಬಿ ಸಭೆ ಇದನ್ನು ಪ್ರದರ್ಶಿಸಿದೆ ಎನ್ನುತ್ತಾರೆ ಪ್ರೊ. ಪ್ರಭಾತ್ ಪಟ್ನಾಯಕ್. ಅಲ್ಲಿ ಭಾರತಕ್ಕೆ ಆಗಿರುವ ಹಿನ್ನಡೆ ಇದನ್ನು ಪ್ರದರ್ಶಿಸಿದೆ. 

Donate Janashakthi Media

Leave a Reply

Your email address will not be published. Required fields are marked *