ಭಾರತದಲ್ಲಿ ವಿವಾಹ ಅತ್ಯಂತ ಪವಿತ್ರ ಬಂಧನ. ಅದರಿಂದಾಗಿ ವಿವಾಹ ಸಂಬಂಧದಲ್ಲಿ ಹೆಂಡತಿಯ ಸಮ್ಮತಿಯಿಲ್ಲದಿದ್ದರೂ ಬಲವಂತವಾಗಿ ಗಂಡನಾದವನು ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಮಾನದಂಡಗಳನ್ನು ಭಾರತಕ್ಕೆ ಅಳವಡಿಸಲಾಗುವುದಿಲ್ಲ ಯಾಕೆಂದರೆ ಇಲ್ಲಿನ ಸಾಮಾಜಿಕ ಶೈಕ್ಷಣಿಕ, ಧಾರ್ಮಿಕ ನಂಬಿಕೆಗಳು, ಮನೋವೃತ್ತಿಗಳೇ ಬೇರೆ?????? ಈ ಮಾತು ಸಂಸತ್ತಿನ ಕಲಾಪದಲ್ಲಿ ಸಂಸತ್ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ದೇಶದ ಗೃಹ ಖಾತೆಯ ರಾಜ್ಯ ಮಂತ್ರಿಗಳು ಕೊಟ್ಟ ಲಿಖಿತ ಉತ್ತರ!!
ಗಂಡಿನ ಕಾಮತೃಷೆಯನ್ನು ಪೂರೈಸಲು ಮಹಿಳೆ ಸದಾ ಸಿದ್ಧವಿರಬೇಕೆನ್ನುವ ಸಿದ್ದಾಂತವನ್ನು ಬದಲಿಸುವ ಇರಾದೆ ಈ ಸಮಾಜಕ್ಕೆ ಈ ಸರ್ಕಾರಕ್ಕೆ ಎಳ್ಳಷ್ಟೂ ಇಲ್ಲವೆನ್ನುವುದು ಮತ್ತೊಮ್ಮೆ ಸಾಬೀತಾಯಿತು. ‘ಕಾರ್ಯೇಷು ದಾಸಿ, ಕರಣೇಶು ಮಂತ್ರಿ, ಶಯನೇಷು ವೇಶ್ಯಾ’ಎಂಬ ನುಡಿಯನ್ನು ಚಾಚೂ ತಪ್ಪದೇ ಪಾಲಿಸಲು ಹೊರಟವರಿಗೆ ಧಿಕ್ಕಾರವಿರಲಿ.
ಇಷ್ಟಕ್ಕೂ ಈ ವಿಷಯದ ಪ್ರಸ್ತಾಪವಾಗಿದ್ದು ಡಿ.ಎಂ.ಕೆ. ಸಂಸದೆ ಕನ್ನಿಮೊಳಿಯವರಿಗೆ ಉತ್ತರ ಕೊಡುವಾಗ.
ವಿಶ್ವಸಂಸ್ಥೆಯ ’ಸೀಡಾ’ (Committee on Elimination of Descrimination Against Women) ಭಾರತ ಸರ್ಕಾರಕ್ಕೆ ವಿವಾಹದಲ್ಲಿ ಸಂಬಂಧದಲ್ಲಿಯೂ ನಡೆಯಬಹುದಾದ ಅತ್ಯಾಚಾರಗಳನ್ನು ಅಪರಾಧವೆಂದು ಪರಿಗಣಿಸಬೇಕೆಂಬ ಪ್ರಸ್ತಾಪವನ್ನು ಕಳುಹಿಸಿಕೊಟ್ಟಿದೆ. ಈ ಸಮಿತಿ 1979 ರಿಂದ ಚಾಲ್ತಿಯಲ್ಲಿದ್ದು ಹಲವಾರು ದೇಶಗಳ ಪರಿಣಿತರನ್ನು ಸದಸ್ಯರನ್ನಾಗಿ ಹೊಂದಿದೆ. 1982 ರಲ್ಲಿ ನಡೆದ ಅಂತರ ರಾಷ್ಟ್ರೀಯ ಸಮಾವೇಶದಲ್ಲಿ ಮಹಿಳೆಯರ ಮೇಲಿನ ಎಲ್ಲ ರೀತಿಯ ದೌರ್ಜನ್ಯಗಳನ್ನು ನಿವಾರಿಸುವ ಬಗೆಗೆ ನಿರ್ಣಯವನ್ನು ಕೈಗೊಂಡಿತ್ತು. ಅದಕ್ಕೆ ಭಾರತವೂ ಸಹಿ ಹಾಕಿದೆ. 23 ರಾಷ್ಟ್ರಗಳ ಪರಿಣಿತರನ್ನು ಹೊಂದಿದ ಈ ಸಮಿತಿ ಆಗಿಂದಾಗ್ಗೆ ಸದಸ್ಯ ರಾಷ್ಟ್ರಗಳಲ್ಲಿ ಪರಿಸ್ಥಿತಿಗಳನ್ನು, ಬದಲಾವಣೆ ಬೆಳವಣಿಗೆಗಳನ್ನು ಅವಲೋಕಿಸುತ್ತಿರುತ್ತದೆ. ವಿಶ್ವಸಂಸ್ಥೆಯ ಜನಸಂಖ್ಯಾನಿಧಿಯ ವರದಿಯ ಪ್ರಕಾರ ಭಾರತದಲ್ಲಿ 75% ಮಹಿಳೆಯರು ವಿವಾಹ ಸಂಬಂಧದಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಕನ್ನಿಮೋಳಿಯವರು ತಮ್ಮ ಪ್ರಶ್ನೆಯಲ್ಲಿ ಇದನ್ನೇ ಎತ್ತಿ ಸರ್ಕಾರ ಇದನ್ನು ಪರಿಗಣನೆಗೆ ತೆಗೆದುಕೊಂಡು ವಿವಾಹದೊಳಗಿನ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸುವ ಕಾನೂನನ್ನು ತರುವ ಆಲೋಚನೆ ಸರ್ಕಾರಕ್ಕಿದೆಯೇ ಎಂದು ಪ್ರಶ್ನಿಸಿದ್ದರು.
ಈ ಪ್ರಶ್ನೆ ಈಗ ಮಾತ್ರ ಮುನ್ನೆಲೆಗೆ ಬಂದಿದ್ದೇನೂ ಅಲ್ಲ. ನಿರ್ಭಯಾ ಪ್ರಕರಣದ ನಂತರ ಅತ್ಯಾಚಾರ ಕಾಯ್ದೆಗೆ ತಿದ್ದುಪಡಿ ತಂದ ಜಸ್ಟೀಸ್ ವರ್ಮಾ ಆಯೋಗ ತನ್ನ ಪ್ರಮುಖ ಶಿಫಾರಸುಗಳಲ್ಲಿ ಈ ವಿಷಯವನ್ನೂ ಪ್ರಸ್ತಾಪಿಸಿತ್ತು. ಆದರೆ ಅಂದಿನ ಮತ್ತು ಇಂದಿನ ಸರ್ಕಾರಗಳೆರಡೂ ಮಹಿಳೆಯರ ಬಗೆಗೆ ಮತ್ತು ಅವರು ಎದುರಿಸುವ ಅತ್ಯಾಚಾರದಂತಹ ಮಾನಸಿಕ ಮತ್ತು ದೈಹಿಕ ಪೀಡನೆಯ ವಿಷಯವನ್ನು ಎಷ್ಟು ಹಗುರವಾಗಿ ಪರಿಗಣಿಸುತ್ತವೆ ಎಂಬುದನ್ನು ಈ ಶಿಫಾರಸುಗಳನ್ನು ಒಪ್ಪಿಕೊಳ್ಳದಿರುವ ಮೂಲಕ ಸಾಬೀತು ಪಡಿಸಿವೆ.
ವಿವಾಹ ಸಂಬಂಧದಲ್ಲಿ ನಡೆಯುವ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಬೇಕೆನ್ನುವ ಜಸ್ಟೀಸ್ ವರ್ಮಾ ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡರೆ ಅದು ಕುಟುಂಬ ದ ಸಂಬಂಧಗಳನ್ನು ಹಾಳುಗೆಡಹುತ್ತದೆ ಎಂಬ ಸರ್ಕಾರಗಳ ಅಭಿಪ್ರಾಯವನ್ನು ಮಹಿಳಾ ಸಂಘಟನೆಗಳು ತೀವ್ರವಾಗಿ ಆಕ್ಷೇಪಿಸಿವೆ. ಮಹಿಳೆಯ ಮೇಲೆ ನಡೆಯುವ ಆಕ್ರಮಣದಿಂದ ಹದಗೆಡಬಹುದಾದ ಕೌಟುಂಬಿಕ ಪರಿಸ್ಥಿತಿಯ ಬಗ್ಗೆ ಚಕಾರವೆತ್ತದ ಸರ್ಕಾರಗಳ ಬಾಹ್ಯೋಪಚಾರದ ಮಹಿಳಾಪರತೆ ಖಂಡನೀಯ. ಇದರಿಂದ ನಾವು ಮತ್ತೆ ಮತ್ತೆ ಅರ್ಥಮಾಡಿಕೊಳ್ಳಬೇಕಾದುದು ಪುರುಷ ಮತ್ತು ಆತನ ಅಗತ್ಯಗಳ ಪೂರೈಕೆಗಾಗಿ ಮಹಿಳೆ ಎಂಬ ಜೀವವೇ ಹೊರತೂ ಆಕೆಗೆ ಆಕೆಯದೇ ಆದ ಅಗತ್ಯಗಳು, ವಾಂಛೆಗಳು, ಬೇಕು-ಬೇಡಗಳಿರುತ್ತವೆ ಎಂಬುದು ನಗಣ್ಯ. ಈಗಾಗಲೇ ಇರುವ ಇಂಡಿಯನ್ ಪೀನಲ್ ಕೋಡ್ ಕಲಂ 375 ರ ಪ್ರಕಾರ 15 ವಯಸ್ಸು ಮೀರಿದ ತನ್ನ ಹೆಂಡತಿಯಾದ ಮಹಿಳೆಯ ಜೊತೆ ಪುರುಷ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಾಗುವುದಿಲ್ಲ.
ಕಲಂ 376 ರ ಪ್ರಕಾರ ಅತ್ಯಾಚಾರ ವೆಸಗಿದವನಿಗೆ ಶಿಕ್ಷೆಯಾಗಿ ಅವಳು ಆತನ ಹೆಂಡತಿಯಾಗಿರದಿದ್ದರೆ ದಂಡ ಮತ್ತು ಕಾರಾಗೃಹ ವಾಸವನ್ನು, ವಿಧಿಸಬಹುದು. ಎಂದರೆ ಈ ಕಲಮಿನ ಪ್ರಕಾರ ಗಂಡನಾದವನು ತನ್ನ ಹೆಂಡತಿಯ ಮೇಲೆ ಅತ್ಯಾಚಾರ ವೆಸಗಬಹುದು ಎಂಬ ಸರ್ಟಿಫಿಕೇಟ್ ಕೊಟ್ಟಂತೆ ಇದೆ. ಇದನ್ನು ಒಪ್ಪಿಕೊಳ್ಳಬೇಕೆ. ಪತಿ ಪತ್ನಿಯ ಸಂಬಂಧ ಎಷ್ಟೇ ಪವಿತ್ರ ಎಂದು ಹೊದಿಕೆ ಹೊದೆಸಿದರೂ ಪರಸ್ಪರ ಪ್ರೀತಿ, ವಿಶ್ವಾಸ, ಗೌರವಗಳಿಲ್ಲದಿದ್ದರೆ ಆ ಪಾವಿತ್ರ್ಯವನ್ನಿಟ್ಟುಕೊಂಡು ಏನು ಮಾಡಲು ಸಾಧ್ಯ. ಮದುವೆ ಎಂಬ ಒಂದು ಕ್ರಿಯೆ ಅಥವಾ ವಿವಾಹ ನೋಂದಣೀ ಪತ್ರ ಅವಳ ದೇಹವನ್ನು ಪುರುಷ ಹೇಗೆ ಬೇಕಾದರೂ ಬಳಸಲು ರಹದಾರಿ ಪತ್ರವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳದ ಸರ್ಕಾರ ಸಮಾಜ ಎಷ್ಟು ಬೆಳವಣಿಗೆ ಸಾಧಿಸಿದರೂ ಅದನ್ನು ಅಭಿವೃದ್ದಿ ಎಂದು ಕರೆಯಲು ಸಾಧ್ಯವಿಲ್ಲ.
ಜನರ ಕಣ್ಣಿಗೆ ಮಣ್ಣೆರೆಚುವ ‘ಬೇಟಿ ಬಚಾವ್, ಬೇಟೀ ಪಡಾವ್’ನಂಥಹ ಕೇವಲ ಘೋಷಣೆಗಳಿಂದ ಯಾವ ಪ್ರಯೋಜನಗಳೂ ಇಲ್ಲ. ಮಹಿಳೆಯರಿಗೆ ಸಿಗಬೇಕಾದ ನಿಜವಾದ ಸ್ವಾತಂತ್ರ ಸಿಕ್ಕಿದಾಗ ಮಾತ್ರ ಅದಕ್ಕೊಂದು ಅರ್ಥವೇ ಹೊರತೂ ಘೋಷಣೆಗಳು ಚುನಾವಣೆಯಲ್ಲಿ ಓಟು ಗಳಿಸುವ ತಂತ್ರವಾಗಬಹುದಷ್ಟೇ. ಟಿ.ವಿ. ಚಾನಲ್‌ಗಳಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಹೆಗ್ಗಳಿಸಿಕೊಳ್ಳುವ ಬಿ.ಜೆ.ಪಿ. ಮಹಿಳಾ ನಾಯಕರು ಸಂಸ್ಕೃತಿಯ ಹೆಸರಿನಲ್ಲಿ ಇದನ್ನು ಒಪ್ಪಿಕೊಳ್ಳುತ್ತಾರೆಯೇ.??