ಸಿಪಿಐ(ಎಂ) ಜನತೆಯ ಹಿತಾಸಕ್ತಿಗಳನ್ನು, ಪ್ರಜಾಪ್ರಭುತ್ವ ಹಕ್ಕುಗಳನ್ನು ಪ್ರತಿಪಾದಿಸುವಲ್ಲಿ ಮುಂಚೂಣಿಯಲ್ಲಿರಬೇಕು, ಭೂಮಿ. ಆಹಾರ, ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಅವರ ಹೋರಾಟಗಳಿಗೆ ನೇತೃತ್ವ ನೀಡಬೇಕು, ಜಾತ್ಯಾತೀತತೆಯನ್ನು ರಕ್ಷಿಸಬೇಕು, ಕೋಮುವಾದಿ ಶಕ್ತಿಗಳನ್ನು ದೂರ ತಳ್ಳಬೇಕು ಹಾಗೂ ಸಾಮ್ರಾಜ್ಯಶಾಹಿ ಕೊಳ್ಳೆಗಳಿಂದ ರಾಷ್ಟ್ರೀಯ ಸಾರ್ವಭೌಮತೆಯನ್ನು ರಕ್ಷಿಸಬೇಕು, ಇದಕ್ಕಾಗಿ ಇಡೀ ಪಕ್ಷ ಶ್ರಮಿಸಬೇಕು ಎಂದು ಸಿಪಿಐ(ಎಂ)ನ ಕೇಂದ್ರ ಸಮಿತಿಯ ವಿಸ್ತೃತ ಸಭೆ ಕರೆ ನೀಡಿದೆ.
ವಿಜಯವಾಡದಲ್ಲಿ ಅಗಸ್ಟ್ 7 ರಂದು ಆರಂಭವಾದ ಸಿಪಿಐ(ಎಂ) ನ ಕೇಂದ್ರ ಸಮಿತಿಯ ವಿಸ್ತೃತ ಸಭೆಯು ಅಗಸ್ಟ್ 10ರಂದು ಒಂದು ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಮುಕ್ತಾಯಗೊಂಡಿತು. ಸಿಪಿಐ(ಎಂ) ಮತ್ತು ಎಡಶಕ್ತಿಗಳನ್ನು ದುರ್ಬಲಗೊಳಿಸಬಯಸುವವರನ್ನು ವಿಫಲಗೊಳಿಸುತ್ತೇವೆ, ವರ್ಗ ಶೋಷಣೆಯ ವಿರುದ್ಧ ಮತ್ತು ಎಲ್ಲ ದಮನಕ್ಕೊಳಗಾಗಿರುವ ವಿಭಾಗಗಳಿಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಪಥದಲ್ಲಿ ಮುಂದೆ ಸಾಗುತ್ತೇವೆ ಎಂಬ ದೃಢ ನಿರ್ಧಾರದೊಂದಿಗೆ ಅದು ಮುಕ್ತಾಯಗೊಂಡಿದೆ.
ಕಾಂಗ್ರೆಸ್ ಯುಪಿಎ ಸರಕಾರದ ನವ-ಉದಾರವಾದಿ ನೀತಿಗಳ ಪ್ರಧಾನ ಚಾಲಕ, ಅದು ದೊಡ್ಡ ಬಂಡವಾಳಶಾಹಿಯ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತದೆ ಮತ್ತು ಅಮೆರಿಕಾ-ಪರ ವಿದೇಶಾಂಗ ನೀತಿ ಅನುಸರಿಸುತ್ತದೆ, ಆದ್ದರಿಂದ ಅದನ್ನು ಸಿಪಿಐ(ಎಂ) ವಿರೋಧಿಸುತ್ತದೆ. ಬಿಜೆಪಿ ಕೋಮುವಾದಿ ರಾಜಕೀಯವನ್ನು ಅನುಸರಿಸುವುದಷ್ಟೇ ಅಲ್ಲ, ಅದು ನವ-ಉದಾರವಾದಿ ನೀತಿಗಳನ್ನು ಪ್ರತಿಪಾದಿಸುವ ಬಲಪಂಥೀಯ ಪಕ್ಷ, ಅದರ ವಿರುದ್ಧ ರಾಜಕೀಯ ಹೋರಾಟ ನಡೆಸುತ್ತಲೇ, ಅದನ್ನು ಏಕಾಂಗಿಯಾಗಿಸಲು ಜಾತ್ಯಾತೀತ ಪಕ್ಷಗಳನ್ನು ಅಣಿನೆರೆಸುವ ಕಾರ್ಯತಂತ್ರಗಳನ್ನು ಸಿಪಿಐ(ಎಂ) ಅನುಸರಿಸುತ್ತದೆ. ಕಾಂಗ್ರೆಸ್ಸೇತರ ಜಾತ್ಯಾತೀತ ಪಕ್ಷಗಳೊಂದಿಗೆ ಜನಗಳ ಪ್ರಶ್ನೆಗಳ ಮೇಲೆ ಸಂಸತ್ತಿನ ಒಳಗೆ ಮತ್ತು ಹೊರಗೆ ಅವುಗಳೊಂದಿಗೆ ಸಹಕರಿಸುತ್ತಲೇ, ಸಿಪಿಐ(ಎಂ) ಸ್ವತಂತ್ರ ಪಾತ್ರ ವಹಿಸುವುದರ ಮೇಲೆ ಒತ್ತು ನೀಡುತ್ತದೆ ಹಾಗೂ ಜನಗಳ ಮುಂದೆ ಪರ್ಯಾಯ ನೀತಿಗಳನ್ನು ಇಡುತ್ತದೆ ಎಂದು ಈ ವಿಶೇಷ ಸಭೆ ಸರ್ವಾನುಮತದಿಂದ ನಿರ್ಧರಿಸಿದೆ.
ಸೆಪ್ಟೆಂಬರ್ 12ರಿವಾ ಪ್ರಚಾರಾಂದೋಲನ
ಸಭೆಯ ಈ ತೀರ್ಮಾನಗಳನ್ನು ಪತ್ರಿಕಾ ಸಮ್ಮೇಳನದಲ್ಲಿ ತಿಳಿಸಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕಾರಟ್ರವರು ಪಶ್ಚಿಮ ಬಂಗಾಲದಲ್ಲಿ ಪಕ್ಷದ ಸದಸ್ಯರು ಮತ್ತು ಬೆಂಬಲಿಗರ ಮೇಲೆ ದಾಳಿ ಮಾಡಿ ಸಿಪಿಐ(ಎಂ) ಮತ್ತು ಎಡಶಕ್ತಿಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ತೃಣಮೂಲ-ಮಾವೋವಾದಿ ಕೂಟದ ಹುನ್ನಾರವನ್ನು ದೇಶದ ಮುಂದಿಡಲು ಸೆಪ್ಟೆಂಬರ್ 12ರಿಂದ ದೇಶವ್ಯಾಪಿ ಪ್ರಚಾರಾಂದೋಲನವನ್ನು ನಡೆಸಲಾಗುವುದು ಎಂದು ಹೇಳಿದರು.
ಸಭೆ ಪಶ್ಚಿಮ ಬಂಗಾಲ ಮತ್ತು ಕೇರಳದಲ್ಲಿ ಮುಂಬರುವ ಚುನಾವಣೆಗಳ ಬಗ್ಗೆ ಒಂದು ಪ್ರತ್ಯೇಕ ನಿರ್ಣಯವನ್ನೂ ಅಂಗೀಕರಿಸಿದೆ. `ಪಶ್ಚಿಮ ಬಂಗಾಲ ಮತ್ತು ಕೇರಳ ಸಮಾಜವಾದಿ ಪರ್ಯಾಯದತ್ತ ಒಂದು ರಾಜಕೀಯ ಆಂದೋಲನವನ್ನು ಪ್ರತಿನಿಧಿಸುತ್ತವೆ, ಅಲ್ಲಿಯ ಸರಕಾರಗಳು ಈ ಆಂದೋಲನದ ಪ್ರತಿಫಲಗಳು. ಈ ಎರಡು ರಾಜ್ಯಗಳ ರಕ್ಷಣೆ ಈ ಸರಕಾರಗಳ ರಕ್ಷಣೆಗಾಗಿ ಅಲ್ಲ, ಈ ರಾಜಕೀಯ ಆಂದೋಲನದ ರಕ್ಷಣೆಗಾಗಿ, ಭಾರತದ ಭವಿಷ್ಯದ ದಿಕ್ಕನ್ನು ನಿರೂಪಿಸುವುದಕ್ಕಾಗಿ’ ಎಂದು ಈ ಬಗ್ಗೆ ವಿವರಿಸುತ್ತಾ ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯ ಸೀತಾರಾಂ ಯೆಚುರಿ ಹೇಳಿದರು. ಮುಂದಿನ ಮೇ ತಿಂಗಳಲ್ಲಿ ಈ ಎರಡು ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳು ದುಡಿಯುವ ಜನಗಳು, ಸಾಮಾಜಿಕ ನ್ಯಾಯ, ಜಾತ್ಯಾತೀತತೆ ಮತ್ತು ದೇಶದ ಸಾರ್ವಭೌಮತೆಯನ್ನು ಪ್ರತಿನಿಧಿಸುವ ಶಕ್ತಿಗಳು ಹಾಗೂ ದೊಡ್ಡ ಬಂಡವಾಳಶಾಹಿಗಳು, ಭೂಮಾಲಕರು, ಶ್ರೀಮಂತರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ, ಸಾಮ್ರಾಜ್ಯಶಾಹಿಯೊಂದಿಗೆ ಸಾಮರಿಕ ಮೈತ್ರಿ ಬಯಸುವ ಹಾಗೂ ತಮ್ಮ ಗುರಿಸಾಧನೆಗೆ ಕೋಮುವಾದ, ಅತಿ-ಎಡ ಅರಾಜಕತಾವಾದ ಹಾಗೂ ವಿಭಜಕ ರಾಜಕೀಯವನ್ನು ಬಳಸುವ ಶಕ್ತಿಗಳ ನಡುವಿನ ಸಮರ ಎಂದು ಈ ನಿರ್ಣಯ ಬಣ್ಣಿಸಿದೆ.
ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಿಪಿಐ(ಎಂ) ಕೇಂದ್ರ ಸಮಿತಿಯ ಈ ವಿಸ್ತೃತ ಸಭೆ ಆ ರಾಜ್ಯದ ಎಲ್ಲ ಜನವಿಭಾಗಗಳ ಜೊತೆಗೆ ಸಂವಾದ ನಡೆಸಲು ತನ್ನ ಮುಖಂಡರನ್ನು ಕಳಿಸಲು ನಿರ್ಧರಿಸಿದೆ. ಈ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಿ ಒಂದು ಸಮಗ್ರ ನಿಲುವು ರೂಪಿಸಲು ಅದು ನಿರ್ಧರಿಸಿದೆ.
ಯುಪಿಎ ಗೆ ಬೆಂಬಲ ಮೊದಲೇ ಹಿಂತೆಗೆಯಬೇಕಿತ್ತು
ರಾಜಕೀಯ ಪರಾಮರ್ಶೆಯ ವರದಿಯನ್ನು ಅಂಗೀಕರಿಸಿದ ಸಭೆ, ಜೂನ್ 2008ರಲ್ಲಿ ಯುಪಿಎ-1 ಸರಕಾರದಿಂದ ಬೆಂಬಲವನ್ನು ಹಿಂತೆಗೆದುಕೊಂಡದ್ದನ್ನು ಅನುಮೋದಿಸಿತು, ಮಾತ್ರವಲ್ಲದೆ, ಈ ಕ್ರಮವನ್ನು ಅದಕ್ಕೆ ಮೊದಲೇ ಕೈಗೊಳ್ಳಬೇಕಿತ್ತು, ಸರಕಾರ ಅಂತರ್ರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಬಳಿಗೆ ಸುರಕ್ಷತೆಯ ಬಗ್ಗೆ ಮಾತುಕತೆ ನಡೆಸಲು ಅವಕಾಶವನ್ನು ಕೊಡಬಾರದಾಗಿತ್ತು ಎಂದಿದೆ. 2009ರ ಲೋಕಸಭಾ ಚುನಾವಣೆಗಳ ಮೊದಲು ಕೇಂದ್ರ ಸಮಿತಿ ಅಂಗೀಕರಿಸಿದ ಚುನಾವಣಾ ಕಾರ್ಯತಂತ್ರವನ್ನು ಕೂಡ ಅನುಮೋದಿಸಿದ ಸಭೆ, ಕಾಂಗ್ರೆಸ್ ಅಥವ ಬಿಜೆಪಿಯೊಂದಿಗೆ ಇರದ ಜಾತ್ಯಾತೀತ ಪಕ್ಷಗಳನ್ನು ಅಣಿನೆರೆಸುವ ಪ್ರಯತ್ನ ನಡೆಸುವುದು ಅಗತ್ಯವಾಗಿತ್ತು ಎಂದಿತು. ಆ ಚುನಾವಣೆಗಳಲ್ಲಿ ಕೆಲವೇ ರಾಜ್ಯಗಳಲ್ಲಿ ಚುನಾವಣಾ ಹೊಂದಾಣಿಕೆ ಸಾಧ್ಯವಾಗಿತ್ತು.
ಭೂಸ್ವಾಧೀನದ ಬಗ್ಗೆ ಚರ್ಚೆಸಿದ ಸಭೆ, ನಂದಿಗ್ರಾಮದಲ್ಲಿ ಭೂಸ್ವಾಧೀನ ಇರಲಿಲ್ಲ, ಆದರೂ ಈ ಬಗ್ಗೆ ಅಪಪ್ರಚಾರ ನಡೆಸಿ ಪಕ್ಷದ ಪ್ರತಿಷ್ಠೆಗೆ ಕುಂದು ತರಲಾಯಿತು. ಇನ್ನು ಮುಂದೆ, ಯಾವುದೇ ಭೂಸ್ವಾಧೀನದಲ್ಲಿ ಒಪ್ಪಿಗೆ ಹಾಗೂ ಪರಿಹಾರ ಮತ್ತು ಪುನರ್ವಸತಿ ಈ ಎರಡು ಅಂಶಗಳು ಇರಬೇಕು ಎಂದು ಸಭೆ ನಿರ್ಧರಿಸಿತು. ಏಕೆಂದರೆ ಈಗಿರುವ ವ್ಯವಸ್ಥೆ ಭೂಮಿ ಕಳಕೊಂಡವರಿಗೆ ನ್ಯಾಯ ಒದಗಿಸುವುದಿಲ್ಲ. ಬುಡಕಟ್ಟು ಜನಗಳು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಇತರ ದಮನಕ್ಕೊಳಗಾಗಿರುವ ಜನವಿಭಾಗಗಳ ಹಕ್ಕುಗಳಿಗಾಗಿ ಹೋರಾಟಗಳನ್ನು ಸಂಘಟಿಸಲು ಪಕ್ಷ ನಿರ್ಧರಿಸಿತು.
ಮೊದಲ ಬಾರಿಗೆ
ಸಿಪಿಐ(ಎಂ) ಈ ರೀತಿ ಕೇಂದ್ರ ಸಮಿತಿಯ ಸಭೆಯನ್ನು ನಡೆಸುತ್ತಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ. ಪಕ್ಷದ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದ್ದರೂ ಇದು ವರೆಗೆ ಇದನ್ನು ಬಳಸಲಾಗಿಲ್ಲ. ಇದಕ್ಕೆ ಕಾರಣವನ್ನು ಆರಂಭದ ದಿನ ಪತ್ರಿಕಾ ಸಮ್ಮೇಳನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕಾರಟ್ ರವರು ವಿವರಿಸಿದರು. ಕಳೆದ ಮಹಾಧಿವೇಶನದ ನಂತರ ಲೋಕಸಭಾ ಚುನಾವಣೆಗಳು ನಡೆದವು. ಇದರ ನಂತರ ಉಂಟಾದ ಹೊಸ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಮುಂದೆ ಅನುಸರಿಸಬೇಕಾದ ರಾಜಕೀಯ ಕಾರ್ಯತಂತ್ರಗಳ ಪರಾಮರ್ಶೆ ನಡೆಯಬೇಕಾಗಿದೆ, ಅಲ್ಲದೆ ಮುಂದಿನ ವರ್ಷ ಎಡಪಕ್ಷಗಳ ಎರಡು ಪ್ರಮುಖ ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆಗಳು ನಡೆಯಬೇಕಾಗಿದ್ದು ಪಕ್ಷದ 20 ನೇ ಮಹಾಧಿವೇಶನವನ್ನು ಒಂದು ವರ್ಷ ಕಾಲ ಮುಂದೂಡುವ ಅಗತ್ಯ ಬಂದಿದೆ. ಆದ್ದರಿಂದ ಈ ಮಧ್ಯಂತರ ಅವಧಿಯಲ್ಲಿ ಪಕ್ಷ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಕೇಂದ್ರ ಸಮಿತಿ ಮಾತ್ರ ಚರ್ಚೆಸುವ ಬದಲು ಒಂದು ವಿಸ್ತೃತ ಸಭೆ ಅದನ್ನು ಚರ್ಚಿಸಿ ಅಂಗೀಕರಿಸಲೆಂದು ಈ ಸಭೆ ನಡೆಸಲಾಗಿದೆ ಎಂದು ಅವರು ಹೇಳಿದರು. ಆಗಸ್ಟ್ 7ರಂದು ಆಂಧ್ರಪ್ರದೇಶದ ಹಿರಿಯ ಸಿಪಿಐ(ಎಂ) ಮುಖಂಡರಾದ ಮಲ್ಲು ಸ್ವರಾಜ್ಯಂ ಕೆಂಬಾವುಟವನ್ನು ಆರೋಹಿಸುವುದರೊಂದಿಗೆ ಈ ವಿಸ್ತೃತ ಸಭೆ ಆರಂಭವಾಯಿತು. 0