ವಕ್ಫ್ ಬೋರ್ಡ್ ಅಧಿಕಾರವನ್ನು ಮೊಟಕುಗೊಳಿಸುವ ವಕ್ಫ್ (ತಿದ್ದುಪಡಿ) ಮಸೂದೆ 2024 ಅನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಗುರುವಾರ ಮಂಡಿಸಿದ್ದು, ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು.
ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ಖಾತೆಯ ಸಚಿವ ಕಿರಣ್ ರಿಜುಜು ಮಸೂದೆಯನ್ನು ಮಂಡಿಸಿದರು.
ವಕ್ಫ್ ಮಂಡಳಿ ತಿದ್ದುಪಡಿಸಿ ಮಸೂದೆಯನ್ನು ಕಾಂಗ್ರೆಸ್, ಸಮಾಜವಾದಿ ಪಕ್ಷ, ಎನ್ ಸಿಪಿ, ಆಪ್, ಡಿಎಂಕೆ, ಎಐಎಂಐಎಂ, ಜೆಡಿಯು ಸೇರಿದಂತೆ ಪ್ರತಿಪಕ್ಷಗಳು ಖಂಡಿಸಿದವು.
ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತ ಒಬ್ಬ ಸದಸ್ಯರು ಇರುವಂತಿಲ್ಲ. ಮುಸ್ಲಿಮೇತರ ವ್ಯಕ್ತಿಗಳು ವಕ್ಫ್ ಮಂಡಳಿಯ ಆಸ್ತಿಯ ಮೇಲೆ ಅಧಿಕಾರ ಸಾಧಿಸುವಂತಿಲ್ಲ, ಒತ್ತುವರಿ ಮಾಡಿದ ಭೂಮಿ ತೆರವು, ವಕ್ಫ್ ಆಸ್ತಿಯ ಸಮೀಕ್ಷೆ ಸೇರಿದಂತೆ ಹಲವು ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದೆ.
ಪ್ರಸ್ತುತ ವಕ್ಫ್ ಬೋರ್ಡ್ ಹೊಂದಿರುವ ಏಕಪಕ್ಷೀಯ ಅಧಿಕಾರಗಳನ್ನು ಕಡಿಮೆ ಮಾಡಲು ಕೇಂದ್ರ ಉದ್ದೇಶಿಸಿದೆ. ಹಿಂದಿನ ಕಾಯ್ದೆಯಲ್ಲಿ ವಕ್ಫ್ ಬೋರ್ಡ್‌ಗೆ ಹೆಚ್ಚಿನ ಅಧಿಕಾರ ನೀಡಿತ್ತು. ಇದರ ಪ್ರಕಾರ ಭೂಮಿಯನ್ನು ವಕ್ಫ್ ಬೋರ್ಡ್‌ನಿಂದ ಹಿಂಪಡೆಯುವುದು ಅಸಾಧ್ಯವಾಗಿತ್ತು. ಇದಾದ ನಂತರ ವಕ್ಫ್ ಬೋರ್ಡ್ ತೆಗೆದುಕೊಳ್ಳುವ ನಿರ್ಣಯಗಳು ವಿವಾದಕ್ಕೆ ಕಾರಣವಾಗುತ್ತಿದ್ದವು. ಇದನ್ನು ತಡೆಯುವ ಉದ್ದೇಶದಿಂದ ವಕ್ಫ್ ಕಾಯ್ದೆಗೆ ಕೇಂದ್ರ ತಿದ್ದುಪಡಿ ತಂದಿದೆ.
ವಕ್ಫ್ ಮಂಡಳಿ ತಿದ್ದುಪಡಿ ಮಸೂದೆ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ಈ ಮಸೂದೆ ಜಾರಿಗೆ ತರಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತು.
ಹಿಂದೂಗಳು ಸರ್ವ ಧರ್ಮ ಸಹಿಷ್ಣುಗಳಾಗಿದ್ದು, ಮತ್ತೊಂದು ಧರ್ಮದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಯತ್ನಿಸುವುದು ಸರಿಯಲ್ಲ. ಅಲ್ಲದೇ ಇದು ಸಂವಿಧಾನ ವಿರೋಧಿ ನಿಲುವಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಧರ್ಮಗಳ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು.