ಲೆಬನಾನ್ ದೇಶದ ವಿದ್ಯಮಾನಗಳು ಇಡೀ ಮೂರನೇ ಜಗತ್ತಿನ ದೇಶಗಳಿಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿವೆ. ಆರ್ಥಿಕ ಬಿಕ್ಕಟ್ಟಿನಿಂದ ಪೀಡಿತವಾಗಿರುವ ಮೂರನೇ ಜಗತ್ತಿನ ದೇಶಗಳಲ್ಲಿ ಬಿಕ್ಕಟ್ಟು ಮುಂದುವರಿಯುತ್ತಲೇ ಹೋಗುವ ಕಾರಣದ ಮೇಲೆ ಸಾಮ್ರಾಜ್ಯಶಾಹಿಯು ಒಂದು ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುತ್ತದೆ. ಆರ್ಥಿಕ ಬಿಕ್ಕಟ್ಟಿಗೆ ಮೂರನೆಯ ಜಗತ್ತಿನ ದೇಶಗಳ ಸರ್ಕಾರಗಳ ಭ್ರಷ್ಟಾಚಾರವೇ ಕಾರಣವೆಂದು ದೂಷಿಸುವುದು, ನವ ಉದಾರವಾದವೇ ಸೃಷ್ಟಿಸಿದ ಬಿಕ್ಕಟ್ಟನ್ನು ಜಯಿಸುವ ಹೆಸರಿನಲ್ಲಿ, ಮೂರನೆಯ ಜಗತ್ತಿನ ದೇಶಗಳ ಅರ್ಥವ್ಯವಸ್ಥೆಗಳ ಮೇಲೆ ನವ ಉದಾರವಾದವು ಹೊಂದಿರುವ ಹಿಡಿತವು ಮತ್ತಷ್ಟು ಬಿಗಿಯಾಗುವಂತೆ ನೋಡಿಕೊಳ್ಳುವುದು ಮತ್ತು ಮೂರನೇ ಜಗತ್ತಿನ ದೇಶಗಳ ಬಿಕ್ಕಟ್ಟುಗಳನ್ನೇ ಬಳಸಿಕೊಂಡು ಆ ದೇಶಗಳ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಳ್ಳುವುದು.
ಮೆಡಿಟರೇನಿಯನ್ ಸಮುದ್ರ ತೀರದಲ್ಲಿರುವ ಲೆಬನಾನ್, ಪಶ್ಚಿಮ ಏಷಿಯಾದ ಒಂದು ಪುಟ್ಟ ದೇಶ. ಆಮದುಗಳನ್ನೇ ಹೆಚ್ಚಾಗಿ ಆಶ್ರಯಿಸಿರುವ ಆ ದೇಶದ ರಾಜಧಾನಿ ಬೈರೂತ್‌ನಲ್ಲಿ ಒಂದು ರಾಸಾಯನಿಕ ವಸ್ತುವನ್ನು ಸಂಗ್ರಹಿಸಿಟ್ಟಿದ್ದ ಸ್ಥಳದಲ್ಲಿ ಆಗಸ್ಟ್ 5ರಂದು ಒಂದು ಭಾರೀ ಸ್ಫೋಟ ಸಂಭವಿಸಿತು. ಈ ದುರಂತಮಯ ಅಪಘಾತದ ನಂತರ ಆ ದೇಶದಲ್ಲಿ ಅನಾವರಣಗೊಳ್ಳುತ್ತಿರುವ ಘಟನೆಗಳು ಇಡೀ ಮೂರನೇ ಜಗತ್ತಿಗೆ ಒಂದು ಎಚ್ಚರಿಕೆ ನೀಡುತ್ತವೆ. ಪ್ರಸಕ್ತ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮಗಳು ತೀವ್ರವಾಗಿ ತಟ್ಟಿರುವ ಕಾರಣದಿಂದಾಗಿ, ಕೊರೋನಾ ಸಾಂಕ್ರಾಮಿಕವು ಅಪ್ಪಳಿಸುವ ಬಹಳ ದಿನಗಳ ಮುನ್ನವೇ ಲೆಬನಾನ್ ಆರ್ಥಿಕ ಸಂಕಷ್ಟದಲ್ಲಿತ್ತು. ಕರೋನಾದಿಂದಾಗಿ ಆ ಸಂಕಷ್ಟಗಳು ಮತ್ತಷ್ಟು ಹೆಚ್ಚಿದ ಪರಿಣಾಮವಾಗಿ ಲೆಬನಾನ್‌ನ ಅರ್ಥವ್ಯವಸ್ಥೆಯು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಲೆಬನಾನಿನ ದುಡಿಮೆಗಾರರು ಕೊಲ್ಲಿ ದೇಶಗಳಿಂದ ಸಂಪಾದಿಸಿ ಕಳಿಸುತ್ತಿದ್ದ ಹಣ ಮತ್ತು ಪ್ರವಾಸೋದ್ಯಮ, ಈ ಎರಡೂ ಮೂಲಗಳಿಂದ ಆ ದೇಶವು ಸಾಕಷ್ಟು ವಿದೇಶಿ ವಿನಿಮಯವನ್ನು ಗಳಿಸುತ್ತಿತ್ತು. ಕರೋನಾದಿಂದಾಗಿ ಹೊರ ದೇಶಗಳಿಂದ ಈ ಎರಡೂ ಬಾಬ್ತಿನಿಂದ ಬರುತ್ತಿದ್ದ ವಿದೇಶಿ ವಿನಿಮಯವು ನಿಂತು ಹೋದ ಕಾರಣದಿಂದಾಗಿ ಲೆಬನಾನಿನ ಕರೆನ್ಸಿಯ ಮೌಲ್ಯವು ಅಪಾರವಾಗಿ ಅಪಮೌಲ್ಯಗೊಂಡಿದೆ. ಹಾಗಾಗಿ, ಲೆಬನಾನ್ ಹೊರ ದೇಶಗಳಿಂದ ಪಡೆದ ಸಾಲವನ್ನು ತೀರಿಸುವುದು (ಸಾಲದ ಕಂತು ಕಟ್ಟುವುದು) ಅಸಾಧ್ಯವಾಯಿತು. ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಜೀವನಾವಶ್ಯಕ ವಸ್ತುಗಳ ಆಮದುಗಳನ್ನೂ ತೀವ್ರವಾಗಿ ಕಡಿತಮಾಡಿತು. ಪರಿಣಾಮವಾಗಿ ಸರಕು-ಸರಂಜಾಮುಗಳ ಅಭಾವ ಉಂಟಾಯಿತು. ಅದರಿಂದಾಗಿ ಹಣದುಬ್ಬರವು ಶೇ.56ರ ಮಟ್ಟಕ್ಕೆ ಏರಿತು.
ಕೊರೊನಾ ಹರಡುವ ಮೊದಲೇ ಸಂಕಷ್ಟಕ್ಕೊಳಗಾಗಿದ್ದ ಲೆಬನಾನಿನ ಸಮಸ್ಯೆಗಳು ಕೊರೊನಾದಿಂದಾಗಿ ಮತ್ತಷ್ಟು ಉಲ್ಬಣಗೊಂಡವು. ಇದೇ ರೀತಿಯ ವಿದ್ಯಮಾನಗಳನ್ನು ತೃತೀಯ ಜಗತ್ತಿನ ಸುಮಾರು ಎಲ್ಲ ದೇಶಗಳಲ್ಲೂ ಕಾಣಬಹುದು. ಈ ಸಂಕಷ್ಟಗಳು ನವ ಉದಾರ ನೀತಿಗಳನ್ನು ಅನುಸರಿಸುವ ಎಲ್ಲ ದೇಶಗಳನ್ನೂ ತಪ್ಪದೆ ಕಾಡುತ್ತವೆ. ಹಾಗಾಗಿ ಈ ದೇಶಗಳ ಹಣೆಬರಹವು ಜಾಗತಿಕ ಅರ್ಥವ್ಯವಸ್ಥೆಯ ಏಳು-ಬೀಳಿನೊಂದಿಗೆ ಬಿಗಿಯಾಗಿ ಗಂಟು ಹಾಕಿಕೊಂಡಿದೆ.
ಇಂತಹ ಆಘಾತದಿಂದ ಹೊರಬರಲು ಲೆಬನಾನ್ ಸರ್ಕಾರವು ಕನಿಷ್ಠ 10.15 ಶತಕೋಟಿ ಡಾಲರ್ ಸಾಲವನ್ನು ತಕ್ಷಣವೇ ಹೊರ ದೇಶಗಳಿಂದ ಪಡೆಯಲು ಪರದಾಡುತ್ತಿದೆ. ಆದರೆ, ಹಿಂದೆ ಹೊರ ದೇಶಗಳಿಂದ ಪಡೆದ ಸಾಲದ ಕಂತು ಕಟ್ಟುವ ಜವಾಬ್ದಾರಿಯನ್ನು ನಿರ್ವಹಿಸಲು ಮಾರ್ಚ್ ತಿಂಗಳಿನಲ್ಲೇ ವಿಫಲವಾದ ಕಾರಣದಿಂದಾಗಿ, ಹೊಸದಾಗಿ ಸಾಲ ಕೊಡಲು ಯಾವ ದೇಶವೂ ಮುಂದೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲೆಬನಾನಿನ ಸರ್ಕಾರವು ಜನರ ವಿಶ್ವಾಸಾರ್ಹತೆ ಕಳೆದುಕೊಂಡಿರುವ ಸಂಗತಿಯಲ್ಲಿ ಆಶ್ಚರ್ಯವೇನಿಲ್ಲ. ಆದರೆ, ಸರ್ಕಾರವು ಜನರ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಅರ್ಹತೆ ಹೊಂದಿಲ್ಲ ಎಂಬ ಅಂಶವನ್ನು ಸಮರ್ಥಿಸುವ ಸಲುವಾಗಿ ʻ”ಭ್ರಷ್ಟಾಚಾರʼʼದ ಕಥನವನ್ನು ಉಣ ಬಡಿಸಲಾಗುತ್ತಿದೆ. ಅನಿಷ್ಟಗಳಿಗೆಲ್ಲ ಶನೀಶ್ವರನೇ ಹೊಣೆ ಎಂಬಂತೆ ಲೆಬನಾನಿನ ಆರ್ಥಿಕ ಸಂಕಷ್ಟಗಳಿಗೆ ಸರಕಾರವನ್ನು ಮತ್ತು ಇಡೀ ರಾಜಕೀಯ ವರ್ಗವನ್ನೇ ಬಾಧಿಸುತ್ತಿರುವ ʻʻಭ್ರಷ್ಟಾಚಾರʼʼವೇ ಕಾರಣ ಎಂದು ದೂಷಿಸಲಾಗುತ್ತಿದೆ.
ಈ ಭ್ರಷ್ಟಾಚಾರದ ಕಥನವು ಹೊಸದೇನೂ ಅಲ್ಲ. ಅದರಲ್ಲಿ ಸುಳ್ಳೂ ಇಲ್ಲ. ಅದು ಆಶ್ಚರ್ಯವನ್ನೂ ಉಂಟುಮಾಡುವುದಿಲ್ಲ. ಆದರೆ, ಜಾಗತಿಕ ಅರ್ಥ ವ್ಯವಸ್ಥೆಯು ಹಿಂಜರಿತದತ್ತ ಜಾರುತ್ತಿರುವ ಸನ್ನಿವೇಶದಲ್ಲಿ, ನವ ಉದಾರವಾದಿ ನೀತಿಗಳ ಬೆನ್ನು ಹತ್ತಿದ ದೇಶಗಳು ಎದುರಿಸುತ್ತಿರುವ ಬಿಕ್ಕಟ್ಟಿನಿಂದ ನರಳುತ್ತಿರುವ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶವನ್ನು ಈ ಭ್ರಷ್ಟಾಚಾರದ ಕಥನವು ಈಡೇರಿಸುತ್ತದೆ.
ಮೂರನೆಯ ಜಗತ್ತಿನ ದೇಶಗಳ ಬಹುತೇಕ ಸರ್ಕಾರಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂಬುದು ನಿಜವೇ. ಆದರೆ, ಭ್ರಷ್ಟಾಚಾರದಿಂದಾಗಿಯೇ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎನ್ನುವ ರೀತಿಯಲ್ಲಿ ಈ ಭ್ರಷ್ಟಾಚಾರದ ಕಥನವನ್ನು ನಿರೂಪಿಸಲಾಗುತ್ತಿದೆ. ಎರಡು ಸ್ಪಷ್ಟ ಕಾರಣಗಳಿಂದಾಗಿ ಈ ನಿರೂಪಣೆಯಲ್ಲಿ ದೋಷವಿದೆ. ಮೊದಲನೆಯದಾಗಿ, ಇಡೀ ಜಗತ್ತನ್ನೇ ವ್ಯಾಪಿಸಿರುವ ಈ ಬಿಕ್ಕಟ್ಟಿನ ಸ್ವರೂಪದ ಬಗ್ಗೆ ಕೊಡುವ ವಿವರಣೆಗಳು ಅಪೂರ್ಣವಾಗಿವೆ. ಏಕೆಂದರೆ, ಈ ಬಿಕ್ಕಟ್ಟು ಕೇವಲ ತೃತೀಯ ಜಗತ್ತಿನ ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಮುಂದುವರಿದ ಬಹುತೇಕ ಬಂಡವಾಳಶಾಹಿ ದೇಶಗಳೂ ಈ ಬಿಕ್ಕಟ್ಟಿಗೆ ಒಳಗಾಗಿವೆ. ಎರಡನೆಯದಾಗಿ, ಎಲ್ಲೆಲ್ಲೂ ತಾಂಡವವಾಡುತ್ತಿರುವ ಭ್ರಷ್ಟಾಚಾರವು ನವ ಉದಾರ ಆರ್ಥಿಕ ಆಡಳಿತದ ಒಂದು ಜಾಯಮಾನವೇ ಆಗಿದೆ. ಈ ಹಿಂದೆಯೂ ಭ್ರಷ್ಟಾಚಾರವಿತ್ತು ಎಂಬುದು ನಿಜವೇ. ಹಿಂದೆ ಅಸ್ತಿತ್ವದಲ್ಲಿದ್ದ ನಿಯಂತ್ರಣ-ಪ್ರಧಾನ ಆಡಳಿತವು ಭ್ರಷ್ಟಾಚಾರಕ್ಕೆ ಹೇಳಿ ಮಾಡಿಸಿದಂತೆಯೇ ಇತ್ತು ಎಂಬುದೂ ನಿಜವೇ. ಆದರೆ, ಬಹು ದೊಡ್ಡ ಪ್ರಮಾಣದ ಖಾಸಗೀಕರಣದ ಮೂಲಕ ಗುರುತಿಸಿಕೊಂಡ ಆಡಳಿತವೂ ಭ್ರಷ್ಟಾಚಾರದಲ್ಲಿ ತೊಡಗುತ್ತದೆ ಮತ್ತು ಸರ್ಕಾರದ ಖಜಾನೆಯಿಂದ ಸಾಕಷ್ಟು ಪ್ರಮಾಣದ ಕಾಣಿಕೆ/ ಭಕ್ಷೀಸು ಪಡೆದ ಬಂಡವಾಳಿಗರೂ ಸಹ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದೂ ನಿಜವೇ. ವಾಸ್ತವವಾಗಿ, ನಿಯಂತ್ರಣ ಮುಕ್ತ ಎಂದೇ ಹೇಳಿಕೊಳ್ಳುವ ಆಡಳಿತದಲ್ಲೇ, ಅಂದರೆ ನವ ಉದಾರ ಆಳ್ವಿಕೆಯಲ್ಲೇ ಮಿತಿ ಮೀರಿದ ಪ್ರಮಾಣದ ಭ್ರಷ್ಟಾಚಾರವಿದೆ.
ಭ್ರಷ್ಟಾಚಾರವು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ, ಸರ್ಕಾರದ ವಿರುದ್ಧ ಜನರ ಆಕ್ರೋಶವು ಭುಗಿಲೇಳುವ ಹಿನ್ನೆಲೆಯಲ್ಲಿ, ಬೈರೂತ್‌ನಲ್ಲಿ ಒಂದು ಸ್ಫೋಟ ಸಂಭವಿಸಿದೆ. ಬೈರೂತ್ ಬಂದರಿನ ಬಳಿ ಅಮೋನಿಯಂ ನೈಟ್ರೇಟ್‌ನ ಅಪಾಯಕಾರಿ ಸಂಗ್ರಹವೊಂದರ ಸ್ಫೋಟಕ್ಕೆ ೨೦೦ ಮಂದಿ ಬಲಿಯಾಗಿದ್ದು, 5000 ಜನರು ಗಾಯಗೊಂಡಿದ್ದು ಅಪಾರ ಸಂಖ್ಯೆಯ ಜನರು ನಿರಾಶ್ರಿತರಾಗಿದ್ದಾರೆ. ಅಪಾರ ಆಸ್ತಿ ಹಾನಿಗೊಳಗಾಗಿದೆ. ಜನರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದು ಸರ್ಕಾರ ಮತ್ತು ರಾಜಕೀಯ ವರ್ಗದ ವಿರುದ್ಧ ಜನರ ಭುಗಿಲೆದ್ದ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಆಡಳಿತದ ಬದಲಾವಣೆಯನ್ನು ಒತ್ತಾಯಿಸಿ ಬೀದಿಗಿಳಿದು ಪ್ರತಿಭಟಿಸುತ್ತಿರುವ ಜನರು ಪೊಲೀಸರೊಂದಿಗೆ ಘರ್ಷಣೆಗೂ ಇಳಿದಿದ್ದಾರೆ. ಘರ್ಷಣೆಗಳಲ್ಲಿ ಈವರೆಗೆ ಸುಮಾರು 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಒಂದು ಬಿಕ್ಕಟ್ಟು ಪೀಡಿತ ದೇಶದಲ್ಲಿ ಆಡಳಿತದ ಬದಲಾವಣೆಯನ್ನು ಆಗ್ರಹಿಸಿ ಪ್ರತಿಭಟನೆ ಮಾಡುವುದು ಆಶ್ಚರ್ಯದ ಘಟನೆಯೂ ಅಲ್ಲ, ಅಭೂತಪೂರ್ವ ಘಟನೆಯೂ ಅಲ್ಲ. ಆದರೆ, ಈ ಸನ್ನಿವೇಶವನ್ನು ಸಾಮ್ರಾಜ್ಯಶಾಹಿಯು ಬಳಸಿಕೊಳ್ಳುತ್ತಿರುವ ರೀತಿಯು ಮಹತ್ವ ಪಡೆಯುತ್ತದೆ. ಸ್ಫೋಟ ಘಟಿಸಿದ ನಂತರ ಬೈರೂತ್‌ಗೆ ಬಂದಿಳಿದ ಮೊದಲ ನಾಯಕನೆಂದರೆ, ಫ್ರಾನ್ಸಿನ ಅಧ್ಯಕ್ಷ ಇಮ್ಯಾನುಯಲ್ ಮ್ಯಕ್ರಾನ್. ಈ ವ್ಯಕ್ತಿಯ ಹೆಗ್ಗಳಿಕೆ ಎಂದರೆ, ಆತ, ಮರೈನ್ ಲೆ ಪೆನ್ ಗಿಂತ ಲೇಸು. (ಮ್ಯಕ್ರಾನ್ ಒಬ್ಬ ಫ್ಯಾಸಿಸ್ಟ್ ಅಲ್ಲ ಎಂಬ ನೆಲೆಯಲ್ಲಿ, ಫ್ಯಾಸಿಸ್ಟ್ ನಾಯಕಿ ಲೆ ಪೆನ್ ಗಿಂತ ಆತ ವಾಸಿ ಎಂದು ಭಾವಿಸಿದ ಫ್ರೆಂಚ್ ಮತದಾರರು ಆತನನ್ನು ಅಧ್ಯಕ್ಷಗಿರಿಗೆ ಆಯ್ಕೆ ಮಾಡಿದ್ದು ಸರಿಯಾಗಿಯೇ ಇದೆ). ಎರಡನೇ ಮಹಾಯುದ್ಧಕ್ಕಿಂತ ಹಿಂದೆ ಲೆಬನಾನ್ ದೇಶವು ಫ್ರೆಂಚ್ ವಸಾಹತುಶಾಹಿ ಸಾಮ್ರಾಜ್ಯದ ಭಾಗವಾಗಿತ್ತು. ಸಾಮ್ರಾಜ್ಯಶಾಹಿ ದಿನಗಳನ್ನು ನೆನಪಿಸಿ ಕೊಡುವ ರೀತಿಯಲ್ಲಿ, ಸಾಮ್ರಾಜ್ಯಶಾಹಿಯ ದರ್ಪದ ಶೈಲಿಯಲ್ಲಿ, “ರಾಜಕೀಯ ಮತ್ತು ಆರ್ಥಿಕ ಸುಧಾರಣೆʼಗಳನ್ನು ಕೈಗೊಂಡರೆ ಲೆಬನಾನ್ ಜನರಿಗೆ ನೆರವು ನೀಡುವುದಾಗಿ ಮ್ಯಕ್ರಾನ್ ಘೋಷಣೆ ಮಾಡಿದರು.
ಆನಂತರ, “ಲೆಬನಾನ್ ಜನರು ತುಂಬಾ ತೊಂದರೆ ಅನುಭವಿಸಿದ್ದಾರೆʼ ಮತ್ತು “ಲೆಬನಾನಿನ ಆರ್ಥಿಕ ಸಮೃದ್ಧಿಯನ್ನು ಹಾಗೂ ವಿದೇಶಿ ಒತ್ತಡಗಳಿಂದ ಮುಕ್ತವಾದ, ಭ್ರಷ್ಟಾಚಾರ-ರಹಿತ, ಪಾರದರ್ಶಕ ಹಾಗೂ ಉತ್ತರದಾತ್ವದ ಒಂದು ಆಡಳಿತವನ್ನು ಪಡೆಯಲು ಹಾತೊರೆಯುತ್ತಿರುವ ಲೆಬನಾನ್ ಜನರನ್ನು ಅಮೇರಿಕಾ ದೀರ್ಘಕಾಲದಿಂದಲೂ ಬೆಂಬಲಿಸುತ್ತಾ ಬಂದಿದೆʼ ಎಂಬ ಹೇಳಿಕೆಗಳೊಂದಿಗೆ ಪ್ರದರ್ಶನಕಾರರ ಬೆಂಬಲಕ್ಕೆ ಅಮೇರಿಕಾ ಧುಮುಕಿತು.
ಮ್ಯಕ್ರಾನ್ ಯಾವುದನ್ನು “ರಾಜಕೀಯ ಸುಧಾರಣೆಗಳು” ಎಂದು ಎಣಿಸುತ್ತಾರೋ ಮತ್ತು ಯಾವುದನ್ನು “ಲೆಬನಾನಿನ ಆರ್ಥಿಕ ಸಮೃದ್ಧಿ ಹಾಗೂ ವಿದೇಶಿ ಒತ್ತಡಗಳಿಂದ ಮುಕ್ತವಾದ, ಭ್ರಷ್ಟಾಚಾರ-ರಹಿತ, ಪಾರದರ್ಶಕ ಹಾಗೂ ಉತ್ತರದಾತ್ವದ ಒಂದು ಆಡಳಿತವನ್ನುʼ ಬೆಂಬಲಿಸುವುದಾಗಿ ಅಮೇರಿಕಾ ಹೇಳುತ್ತದೆಯೋ ಅದರ ಅರ್ಥವೆಂದರೆ, ಲೆಬನಾನಿನಲ್ಲಿ ಪಾಶ್ಚಿಮಾತ್ಯ ದೇಶಗಳ ಪರವಾಗಿರುವ ಒಂದು ಆಡಳಿತವನ್ನು ಸ್ಥಾಪಿಸುವುದು. ಲೆಬನಾನಿನಲ್ಲಿ ಸ್ಥಾಪಿಸಲು ಬಯಸುವ ಈ ಸರ್ಕಾರವು ಇಸ್ರೇಲ್‌ನೊಂದಿಗೆ ಸ್ನೇಹದಿಂದಿರಬೇಕು, ಹೇಗೆಂದರೆ, ಈಗಿರುವ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಬೆಂಬಲವನ್ನು ಹೊಂದಿರುವ ಪ್ರಸ್ತುತ ಆಡಳಿತದಂತಲ್ಲದೆ. ಅದೇ ರೀತಿಯಲ್ಲಿ ಮ್ಯಕ್ರಾನ್ ಯಾವುದನ್ನು “ಆರ್ಥಿಕ ಸುಧಾರಣೆಗಳು” ಎಂದು ಎಣಿಸುತ್ತಾರೋ ಮತ್ತು ಯಾವುದನ್ನು “ಲೆಬನಾನ್ ಜನರ ಆರ್ಥಿಕ ಸಮೃದ್ಧಿಯ ಅನ್ವೇಷಣೆಯನ್ನು ಬೆಂಬಲಿಸುವುದು” ಎಂದು ಅಮೇರಿಕಾ ಹೇಳುತ್ತದೆಯೋ ಅದು ನವ ಉದಾರವಾದದ ತೊರೆಯುವಿಕೆಯಲ್ಲ. ಅದು, ನವ ಉದಾರವಾದದ ಮುಂದುವರಿಕೆಯ ಬದ್ಧತೆ ಎಂದು ಅರ್ಥೈಸುತ್ತದೆ. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ, ಒಂದು ವೇಳೆ, ಹೆಜ್ಬೊಲ್ಲಾ ಬೆಂಬಲಿತ ಸರ್ಕಾರವನ್ನು ಕಿತ್ತೊಗೆದು, ಅದರ ಸ್ಥಾನದಲ್ಲಿ ನವ ಉದಾರವಾದಕ್ಕೆ ಬದ್ಧವಾದ, ಪಾಶ್ಚಾತ್ಯ ದೇಶಗಳ ಪರವಾದ ಮತ್ತು ಇಸ್ರೇಲ್ ಪರ ಸರ್ಕಾರವನ್ನು ಸ್ಥಾಪಿಸಿದರೆ, ಸಾಮ್ರಾಜ್ಯಶಾಹಿ ರಾಷ್ಟ್ರಗಳು ಲೆಬನಾನ್‌ಗೆ ಸಾಲ ಕೊಡುತ್ತವೆ.
ಸಾಮ್ರಾಜ್ಯಶಾಹಿ ದೇಶಗಳ ಈ ಇಷ್ಟಾರ್ಥವು ಕೈಗೂಡುತ್ತದೆ ಎಂದೇ ಒಂದು ಕ್ಷಣ ಭಾವಿಸೋಣ. ಈ ದೇಶಗಳು ಒದಗಿಸುವ ಸಾಲವನ್ನು ಸ್ವಲ್ಪ ಸಮಯದ ನಂತರ ಲೆಬನಾನ್ ಮರುಪಾವತಿಸಲೇ ಬೇಕಾಗುತ್ತದೆ. ಅಂತಹ ಮರುಪಾವತಿಗೆ/ ಸಾಲದ ಕಂತು ಕಟ್ಟಲು ಹಣ ಬರುವುದಾದರೂ ಎಲ್ಲಿಂದ? ಈ ಸಾಂಕ್ರಾಮಿಕ ರೋಗವು ಒಂದಲ್ಲಾ ಒಂದು ದಿನ ಕೊನೆಗೊಂಡು, ಪ್ರವಾಸೋದ್ಯಮದ ಮತ್ತು ಉದ್ಯೋಗ ಅರಸಿ ಕೊಲ್ಲಿ ದೇಶಗಳಿಗೆ ಹೋದವರಿಂದ ವಿದೇಶಿ ವಿನಿಮಯ ಲಭ್ಯವಾಗುತ್ತದೆ ಎಂಬುದು ನಿಜವೇ. ಅಷ್ಟು ಹಣ ಸಾಲದ ಮರುಪಾವತಿಗೆ ಸಾಲದು. ಆದರೆ, ಇಲ್ಲಿರುವ ಮುಖ್ಯವಾದ ಅಂಶ ಏನೆಂದರೆ, ಲೆಬನಾನ್‌ನ ಬಿಕ್ಕಟ್ಟು ಕೊರೊನಾದಿಂದಲೇ ಉಂಟಾದದ್ದಲ್ಲ. ಈ ಸಾಂಕ್ರಾಮಿಕವು ಹರಡುವುದಕ್ಕೂ ಮೊದಲೇ ಲೆಬನಾನ್ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಸಾಂಕ್ರಾಮಿಕವು ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿತ್ತು, ಅಷ್ಟೇ. ಈ ವರ್ಷದ ಮಾರ್ಚ್ ತಿಂಗಳಿನಲ್ಲೇ ಲೆಬನಾನ್ ಹೊರ ದೇಶಗಳ ಸಾಲ ಮರುಪಾವತಿ ಮಾಡುವಲ್ಲಿ ವಚನಭ್ರಷ್ಟವಾಗಿತ್ತು (ಸಾಲದ ಕಂತು ಕಟ್ಟುವಲ್ಲಿ ವಿಫಲವಾಗಿತ್ತು). ಈ ವಿದ್ಯಮಾನದಿಂದ ನಮಗೆ ತಿಳಿದುಬರುವುದು ಏನೆಂದರೆ, ಮೂರನೆಯ ಜಗತ್ತಿನ ಇತರ ದೇಶಗಳಲ್ಲಿ ಆಗಿರುವಂತೆಯೇ, ಲೆಬನಾನಿನ ಆರ್ಥಿಕ ಸಂಕಷ್ಟದ ಮೂಲವೂ ಜಾಗತಿಕ ಅರ್ಥ ವ್ಯವಸ್ಥೆಯ ಮಂದಗತಿಯೊಂದಿಗೇ ಸೇರಿಕೊಂಡಿದೆ. ಮಂದಗತಿಯಲ್ಲಿ ಒದ್ದಾಡುತ್ತಿರುವ ಜಾಗತಿಕ ಅರ್ಥ ವ್ಯವಸ್ಥೆಯು ಮುಂಬರುವ ಒಂದೆರಡು ವರ್ಷಗಳಲ್ಲಿ ಚೇತರಿಸಿಕೊಳ್ಳುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಆದ್ದರಿಂದ, ಸಾಲ ಮರುಪಾವತಿಯನ್ನು ಖಾತ್ರಿಪಡಿಸಿಕೊಳ್ಳಲು ಜನರ ಕೈಯಲ್ಲಿರುವ ಆದಾಯವನ್ನು ಹಿಂಡುವ “”ಮಿತವ್ಯಯʼʼ ಕ್ರಮಗಳನ್ನು ಜಾರಿಗೊಳಿಸುವಂತೆ ಸಾಲದಾತರು ಒತ್ತಾಯ ಹೇರುವುದು ಖಚಿತ.
ಹೊರ ದೇಶಗಳಿಂದ ಸಾಲ ದೊರೆತ ಕೂಡಲೇ ಲೆಬನಾನಿನ ಪಾವತಿ ಶೇಷದ (ವಿದೇಶ ವ್ಯಾಪಾರದ ಬಾಕಿ ಚುಕ್ತಾ) ಸಮಸ್ಯೆ ಸ್ವಲ್ಪ ಮಟ್ಟಿಗೆ ತಗ್ಗುತ್ತದೆ. ಹಣದುಬ್ಬರದ ದರವೂ ಸ್ವಲ್ಪ ಮಟ್ಟಿಗೆ ತಗ್ಗುತ್ತದೆ. ಆದರೆ, ಜನರ ಆದಾಯವನ್ನು ಹಿಂಡುವ “”ಮಿತವ್ಯಯʼʼ ಕ್ರಮಗಳನ್ನು ಹೇರಲೇಬೇಕಾಗುತ್ತದೆ. ಈ “”ಮಿತವ್ಯಯʼʼ ನೀತಿಯ ಪಾಲನೆಯು ಬೇರೊಂದು ರೀತಿಯಲ್ಲಿ ಜನರಿಗೆ ನೋವುಂಟು ಮಾಡುತ್ತದೆ. ಅದೇ ಸಮಯದಲ್ಲಿ, ವಿದೇಶಿ ಸಾಲಗಳ ತಕ್ಷಣದ ಲಭ್ಯತೆಯು ನವ ಉದಾರವಾದಿ ನೀತಿಗಳನ್ನು ಅನುಸರಿಸುವುದನ್ನು ಹೊರತುಪಡಿಸಿ, ಬೇರೆ ಯಾವುದೇ ಆಯ್ಕೆಯ ಅನ್ವೇಷಣೆಯಲ್ಲಿ ತೊಡಗದಂತೆ ತಡೆಯುತ್ತದೆ. “ಆರ್ಥಿಕ ಸಮೃದ್ಧಿʼ ಎನ್ನುವುದು ಬಿಸಿಲ್ಗುದುರೆಯ ಬೆನ್ನಟ್ಟಿದಂತಾಗುತ್ತದೆ. ಆದ್ದರಿಂದ, ಲೆಬನಾನಿನ ಆರ್ಥಿಕ ಬಿಕ್ಕಟ್ಟು ಮುಂದುವರಿಯುತ್ತಲೇ ಹೋಗುತ್ತದೆ.
ಲೆಬನಾನಿನ ಐತಿಹಾಸಿಕ ಮತ್ತು ಭೌಗೋಳಿಕ ನಿರ್ದಿಷ್ಟತೆಗಳ ಹೊರತಾಗಿಯೂ, ಲೆಬನಾನ್ ಪ್ರಕರಣವು ಮೂರನೇ ಜಗತ್ತಿನ ದೇಶಗಳಿಗೆ ಬಹಳ ಮುಖ್ಯವಾಗುತ್ತದೆ. ಏಕೆಂದರೆ, ಆ ದೇಶದ ವಿದ್ಯಮಾನಗಳು ಇಡೀ ಮೂರನೇ ಜಗತ್ತಿನ ದೇಶಗಳಿಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿವೆ. ಆರ್ಥಿಕ ಬಿಕ್ಕಟ್ಟಿನಿಂದ ಪೀಡಿತವಾಗಿರುವ ಮೂರನೇ ಜಗತ್ತಿನ ದೇಶಗಳಲ್ಲಿ ಬಿಕ್ಕಟ್ಟು ಮುಂದುವರಿಯುತ್ತಲೇ ಹೋಗುವ ಕಾರಣದ ಮೇಲೆ ಸಾಮ್ರಾಜ್ಯಶಾಹಿಯು ಒಂದು ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುತ್ತದೆ. ಆ ಕಾರ್ಯತಂತ್ರದ ಆಕಾರರೇಖೆಗಳು ಈಗಾಗಲೇ ಲೆಬನಾನ್‌ನಲ್ಲಿ ಗೋಚರಿಸುತ್ತಿವೆ.
ಮೊದಲನೆಯದಾಗಿ, ಈ ಆರ್ಥಿಕ ಬಿಕ್ಕಟ್ಟಿಗೆ ಮೂರನೆಯ ಜಗತ್ತಿನ ದೇಶಗಳ ಸರ್ಕಾರಗಳ ಭ್ರಷ್ಟಾಚಾರವೇ ಕಾರಣವೆಂದು ಸಾಮ್ರಾಜ್ಯಶಾಹಿಯು ಈ ಸರ್ಕಾರಗಳನ್ನು ದೂಷಿಸುತ್ತದೆ. ಇದೊಂದು ದಿಕ್ಕು ತಪ್ಪಿಸುವ ತಂತ್ರ. ಈ ತಂತ್ರದ ಮೂಲಕ ಸೋತು ಸುಣ್ಣವಾಗಿರುವ ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯು ದೂಷಣೆಯಿಂದ ತಪ್ಪಿಸಿಕೊಳ್ಳುತ್ತದೆ. ಸಾಮ್ರಾಜ್ಯಶಾಹಿಯ ಈ ತಂತ್ರವು ಸ್ವಲ್ಪ ಮಟ್ಟಿನ ವಿಶ್ವಾಸಾರ್ಹತೆಯನ್ನು ಹೊಂದಿದೆ. ಹೇಗೆಂದರೆ, ತೃತೀಯ ಜಗತ್ತಿನ ಅನೇಕ ಸರ್ಕಾರಗಳು ಭ್ರಷ್ಟಾಚಾರದಲ್ಲಿ ತೊಡಗಿವೆ ಎಂಬುದನ್ನು ನಿರಾಕರಿಸುವಂತಿಲ್ಲ.
ಎರಡನೆಯದಾಗಿ, ಆರ್ಥಿಕ ಬಿಕ್ಕಟ್ಟು ಪೀಡಿತ ದೇಶಗಳಿಗೆ ಅವರ ತಕ್ಷಣದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅನುವಾಗುವಂತೆ ಅವರಿಗೆ ಸಾಲ ಒದಗಿಸುವ ಮೂಲಕ ಸಾಮ್ರಾಜ್ಯಶಾಹಿಗೆ ಆ ದೇಶಗಳ ಅರ್ಥವ್ಯವಸ್ಥೆಯನ್ನು ನವ ಉದಾರ ಬಂಡವಾಳಶಾಹಿ ವ್ಯವಸ್ಥೆಯೊಂದಿಗೆ ಇನ್ನಷ್ಟು ಬಿಗಿಯಾಗಿ ಗಂಟುಹಾಕಲು ಸಾಧ್ಯವಾಗುತ್ತದೆ. ಹೇಗೆಂದರೆ, ಸಾಲ ಕೊಡುವಾಗ ಕೆಲವು “ಷರತ್ತುಗಳುʼಗಳನ್ನು ಹೇರಲಾಗುತ್ತದೆ. ಈ “ಷರತ್ತುಗಳುʼ ಮೂರನೆಯ ಜಗತ್ತಿನ ದೇಶಗಳನ್ನು ನವ ಉದಾರವಾದದೊಂದಿಗೆ ಇನ್ನಷ್ಟು ಬಿಗಿಯಾಗಿ ಕಟ್ಟಿಹಾಕುತ್ತವೆ. ಈ ರೀತಿಯಲ್ಲಿ ನವ ಉದಾರವಾದವೇ ಸೃಷ್ಟಿಸಿದ ಬಿಕ್ಕಟ್ಟನ್ನು ಜಯಿಸುವ ಹೆಸರಿನಲ್ಲಿ, ಮೂರನೆಯ ಜಗತ್ತಿನ ದೇಶಗಳ ಅರ್ಥವ್ಯವಸ್ಥೆಗಳ ಮೇಲೆ ನವ ಉದಾರವಾದವು ಹೊಂದಿರುವ ಹಿಡಿತವು ಮತ್ತಷ್ಟು ಬಿಗಿಯಾಗುವಂತೆ ಸಾಮ್ರಾಜ್ಯಶಾಹಿಯು ನೋಡಿಕೊಳ್ಳುತ್ತದೆ.
ಮೂರನೆಯದಾಗಿ, ತೃತೀಯ ಜಗತ್ತಿನ ದೇಶಗಳಲ್ಲಿ, ಆರ್ಥಿಕ ಬಿಕ್ಕಟ್ಟನ್ನು ಮತ್ತು ಅದರ ಪರಿಣಾಮವಾಗಿ ಜನಪ್ರಿಯತೆಯನ್ನು ಕಳೆದುಕೊಂಡ ಸರ್ಕಾರದ ಪರಿಸ್ಥಿತಿಯನ್ನು ಸಾಮ್ರಾಜ್ಯಶಾಹಿಯು ಬಳಕೆ ಮಾಡಿಕೊಳ್ಳುತ್ತದೆ: ಹೇಗೆಂದರೆ, ಅಂತಹ ಸರ್ಕಾರದ ಸ್ಥಾನದಲ್ಲಿ ಅದಕ್ಕಿಂತಲೂ ಯಾವ ರೀತಿಯಲ್ಲಿಯೂ ಕಡಿಮೆ ನವ ಉದಾರವಾದಿಯಲ್ಲದ, ಪಶ್ಚಿಮದ ದೇಶಗಳತ್ತ ಇನ್ನೂ ಹೆಚ್ಚು ವಾಲುವ ಮತ್ತು ನವ ಉದಾರವಾದವೇ ಬಿಕ್ಕಟ್ಟನ್ನು ಸೃಷ್ಟಿಸಿದರೂ ಅದನ್ನೇ ಇನ್ನಷ್ಟು ಬಿಗಿಯಾಗಿ ಅಪ್ಪಿಕೊಳ್ಳುವ ಇನ್ನೊಂದು ಸರ್ಕಾರವನ್ನು ಸ್ಥಾಪಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಉಂಡೂ ಹೋದ, ಕೊಂಡೂ ಹೋದ ಎನ್ನುವ ರೀತಿಯಲ್ಲಿ ಸಾಮ್ರಾಜ್ಯಶಾಹಿಯು ಮೂರನೇ ಜಗತ್ತಿನ ದೇಶಗಳ ಬಿಕ್ಕಟ್ಟುಗಳನ್ನೇ ಬಳಸಿಕೊಂಡು ಆ ದೇಶಗಳ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತದೆ.
ಜನರ ಸ್ಥಿತಿ-ಗತಿಗಳು ಉತ್ತಮಗೊಳ್ಳದ ಹೊರತು ಇಂತಹ ಕಾರ್ಯತಂತ್ರವು ದೀರ್ಘಕಾಲ ಬಾಳುವುದಿಲ್ಲ ಎಂದು ಯಾರಾದರೂ ಭಾವಿಸಬಹುದು. ಆದರೆ, ಜನರ ಸ್ಥಿತಿ-ಗತಿಗಳನ್ನು ಸುಧಾರಿಸುವುದಾಗಲಿ ಅಥವಾ ದೀರ್ಘಾವಧಿಯಲ್ಲಿ ಏನಾಗುತ್ತದೆ ಎಂಬುದರ ಬಗ್ಗೆಯೇ ಆಗಲಿ, ಬಂಡವಾಳಶಾಹಿಗೆ ಕಾಳಜಿಯೇ ಅಲ್ಲ. ಅದಕ್ಕಿರುವ ಕಾಳಜಿ ಯಾವುದು ಎಂದರೆ, ನವ ಉದಾರವಾದಿ ವ್ಯವಸ್ಥೆಗೆ ಎದುರಾಗುವ ತಕ್ಷಣದ ಬೆದರಿಕೆ ಮಾತ್ರ. ಈ ಬೆದರಿಕೆಯನ್ನು ಅದು ಎದುರಿಸುವ ರೀತಿಯಲ್ಲಿ ಜನರಿಗೆ ಹಾನಿಯಾಗುವುದಾದರೆ, ಹಾಗೆಯೇ ಆಗಲಿ. ಅದಕ್ಕೇನಂತೆ?
ಅನು: ಕೆ.ಎಂ.ನಾಗರಾಜ್