ಬ್ರೆಜಿಲ್ ನ ಮಾಜಿ ಅಧ್ಯಕ್ಷ ಮತ್ತು ಅಲ್ಲಿನ ವರ್ಕರ್ಸ್ ಪಾರ್ಟಿಯ ಜನಪ್ರಿಯ ನಾಯಕ ಲುಲಾ ಅವರ ಶಿಕ್ಷೆಯನ್ನು ಮಾರ್ಚ್ 8ರಂದು ಕೊಟ್ಟ ತೀರ್ಪಿನಲ್ಲಿ ಸುಪ್ರೀ ಕೋರ್ಟು ರದ್ದು ಮಾಡಿದೆ. ಇದರೊಂದಿಗೆ ಲುಲಾ ಅಧ್ಯಕ್ಷ ಪದವಿಗೆ ಸ್ಪರ್ಧಿಸುವಂತಿಲ್ಲ ಎಂಬ ನಿಷೇಧ ಸಹ ರದ್ದಾಗಿದೆ. ಇದರಿಂದಾಗಿ ಲುಲಾ 2022ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಳಲ್ಲಿ ಸ್ಪರ್ಧಿಸಬಹುದಾಗಿದೆ.ಲುಲಾ ಆಗಲಿ ಅವರ ಪಕ್ಷವಾಗಲಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎಂದೇನೂ ಹೇಳಿಲ್ಲ. ಆದರೂ ಬ್ರೆಜಿಲ್ ನಲ್ಲಿ ವಿದ್ಯುತ್ ಸಂಚಾರವಾದಂತಾಗಿದೆ.
ಈಗಾಗಲೇ ಲ್ಯಾಟಿನ್ ಅಮೆರಿಕದ ‘ಟ್ರಂಪ್ʼ ಎಂದು ಹೆಸರಾದ ಈಗಿನ ಬ್ರೆಜಿಲ್ ನ ಅಧ್ಯಕ್ಷ ಬೊಲ್ಸನಾರೊ ದುರಾಡಳಿತದ ವಿರುದ್ಧ ರೋಸಿ ಹೋಗಿದ್ದು ಜನರ ಆಕ್ರೋಶದ ಕಟ್ಟೆಯೊಡೆಯುತ್ತಿದೆ. ಹಿಂದಿನ ವರ್ಕರ್ಸ್ ಪಾರ್ಟಿಯ ಜನಕಲ್ಯಾಣ ಯೋಜನೆಗಳನ್ನು ರದ್ದು ಮಾಡಿದ ಆತನ ಆಡಳಿತವು ದುಡಿಯುವ ಜನರ ಮೇಲೆ ಉಗ್ರ ನವ-ಉದಾರವಾದಿ ಆರ್ಥಿಕ ನೀತಿಗಳ ಮೂಲಕ ಬೆಲೆಏರಿಕೆ, ಉದ್ಯೋಗನಷ್ಟ, ಆದಾಯ ಕುಸಿತಗಳ ಸಂಕಷ್ಟಗಳ ಸರಮಾಲೆಯನ್ನೇ ಹೇರಿದೆ.
ಕೊವಿಡ್-19 ಸಮಸ್ಯೆಯೇ ಅಲ್ಲ ಎಂಬ ಅವೈಜ್ಞಾನಿಕ ಧೋರಣೆಯಿಂದಾಗಿ ತೀವ್ರ ಆರೋಗ್ಯ ಬಿಕ್ಕಟ್ಟು ಎದುರಾಗಿದೆ. ಬ್ರೆಜಿಲ್ 2.7 ಲಕ್ಷ ಕೊವಿಡ್ ಸಾವುಗಳೊಂದಿಗೆ ಎರಡನೇಯ ಅತಿ ಹೆಚ್ಚು ಕೊವಿಡ್ ಸಾವುಗಳನ್ನು ಕಂಡ ದೇಶ ಎಂಬ ಕುಖ್ಯಾತಿ ಪಡೆಯಿತು. ಹಲವು ತಿಂಗಳುಗಳಿಂದ ಅಮೆರಿಕ, ಬ್ರೆಜಿಲ್, ಕೊವಿಡ್ ಸಾವುಗಳಲ್ಲಿ ಅನುಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಹೊಂದಿದ್ದು ಈ ದೇಶಗಳ ಮುಖ್ಯಸ್ಥರು ಕೊವಿಡ್-19 ಸಮಸ್ಯೆಯೇ ಅಲ್ಲ ಎಂಬ ಅವೈಜ್ಞಾನಿಕ ಧೋರಣೆ ಮತ್ತು ಉಗ್ರ ನವ-ಉದಾರವಾದಿ ಆರ್ಥಿಕ ನೀತಿಗಳ ಚಾಂಪಿಯನ್ನುಗಳಾಗಿದ್ದರು ಎಂಬುದು ಆಕಸ್ಮಿಕವಲ್ಲ, ಬ್ರೆಜಿಲ್ ಆಸ್ಪತ್ರೆಗಳು ತುಂಬಿದ್ದು ಅದು ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ಆದರೂ ಬೊಲ್ಸನಾರೊ ಧೋರಣೆ ಬದಲಾಗಿಲ್ಲ. ಅಮೆರಿಕನ್ ಸಾಮ್ರಾಜ್ಯಶಾಹಿಗೆ ಸೆಡ್ಡು ಹೊಡೆದು ನಿಂತಿದ್ದ ಬ್ರೆಜಿಲನ್ನು ಅಮೆರಿಕದ ಬಾಲಂಗೋಚಿ ಮಾಡಿದ ಅಪಕೀರ್ತಿ ಸಹ ಇವರದ್ದು.
ಈ ಪರಿಸ್ಥಿತಿಯಿಂದಾಗಿ ಜನ ರೋಸಿ ಹೋಗಿದ್ದು ಕೆಲವು ವಾರಗಳ ಹಿಂದೆ ಬೊಲ್ಸನಾರೊ ರನ್ನು ಅಧ್ಯಕ್ಷೀಯ ಕರ್ತವ್ಯಲೋಪ ಎಸಗಿರುವ ದೋಷಾರೋಪಣೆಗೆ ಒಳಪಡಿಸಿ ಅಧ್ಯಕ್ಷ ಪದವಿಯಿಂದ ಪದಚ್ಯುತಗೊಳಿಸಬೇಕೆಂದು ವಿರೋಧ ಪಕ್ಷಗಳು ಮಾತ್ರವಲ್ಲ, ಅವರನ್ನು ಹಿಂದೆ ಬೆಂಬಲಿಸಿದ್ದ ಪಕ್ಷಗಳು ಕೂಡಾ ವ್ಯಾಪಕ ಪ್ರದರ್ಶನಗಳನ್ನು ನಡೆಸಿವೆ. ಕಳೆದ ಚುನಾವಣೆಯನ್ನು ಸಹ ಬೊಲ್ಸನಾರೊ ಮತ್ತು ಅವರ ಪಕ್ಷ ಸರಣಿ ಅಕ್ರಮಗಳನ್ನು ನಡೆಸಿ ಗೆದ್ದಿತ್ತು. ಇವುಗಳಲ್ಲಿ ವರ್ಕರ್ಸ್ ಪಾರ್ಟಿಯ ಇಬ್ಬರೂ ಮಾಜಿ ಅಧ್ಯಕ್ಷರುಗಳು ಮತ್ತು ಜನಪ್ರಿಯ ನಾಯಕರುಗಳಾದ ಲುಲಾ ಮತ್ತು ದಿಲ್ಮಾ ಅವರಿಬ್ಬರ ಮೇಲೆ ಸುಳ್ಳು ಭ್ರಷ್ಟಾಚಾರದ ಕೇಸುಗಳನ್ನು ಹಾಕಿ ಅವರು ಚುನಾವಣೆಗೆ ಸ್ಪರ್ಧಿಸದಂತೆ ಮಾಡಿದ್ದು ಪ್ರಮುಖವಾದ್ದು.
ಲುಲಾ ಅವರನ್ನು ‘ಆಪರೇಶನ್ ಕಾರ್ ವಾಶ್ʼ ಎಂಬ ಹಗರಣದಲ್ಲಿ ಆಪಾದಿತರನ್ನಾಗಿ ಮಾಡಿ 580 ದಿನಗಳ ಕಾಲ ಜೈಲಿಗೆ ಕಳಿಸಲಾಗಿತ್ತು. ಈ ಪಿತೂರಿಯಲ್ಲಿ ರಾಜಕೀಯ ನಾಯಕರುಗಳಲ್ಲದೆ ನ್ಯಾಯಾಂಗ, ಕಾರ್ಯಾಂಗದ ಅಧಿಕಾರಿಗಳು ಶಾಮೀಲಾಗಿದ್ದರು. ಲುಲಾ ಅವರು ‘ಅಪರಾಧಿʼ ಎಂದು ತೀರ್ಪು ಕೊಟ್ಟ ನ್ಯಾಯಾಧೀಶ ಅದರ ನಂತರ ಕೂಡಲೇ ಕೇಂದ್ರ ಸರಕಾರದಲ್ಲಿ ನ್ಯಾಯ ಇಲಾಖೆಯ ಮಂತ್ರಿಯಾಗಿದ್ದು ಇದನ್ನು ಬಯಲುಗೊಳಿಸುತ್ತದೆ. ಲುಲಾ ಜೈಲಿನಲ್ಲಿದ್ದಷ್ಟು ದಿನ ಜೈಲಿನ ಎದುರು ದಿನಾ ಪ್ರತಿಭಟನೆ ಧರಣಿಗಳು ನಡೆಯುತ್ತಿದ್ದವು. ಬೊಲ್ನಾರೊ ಸರಕಾರ ಕಲ್ಲುಹೃದಯದ್ದಾಗಿತ್ತು. ಲುಲಾ ಜೈಲಿನಲ್ಲಿದ್ದಾಗ ಅವರ ಸೋದರ ಮತ್ತು ಸಹಚರೆ ಇಬ್ಬರೂ ಗಂಭಿರವಾಗಿ ಕಾಯಿಲೆ ಬಿದ್ದು ಆ ಮೇಲೆ ನಿಧನರಾದರೂ ಅವರ ಅಂತಿಮ ದರ್ಶನ ಪಡೆಯಲಿಕ್ಕೆ ಅವಕಾಶ ಕೊಟ್ಟಿರಲಿಲ್ಲ.
ವರ್ಕರ್ಸ್ ಪಾರ್ಟಿ ಈಗಾಗಲೇ ಬೊಲ್ಸನಾರೊ ದುರಾಡಳಿತದ ವಿರುದ್ಧ ದೇಶವ್ಯಾಪಿ ಅಭಿಯಾನ ನಡೆಸುತ್ತಿದ್ದು, ಲುಲಾ ಅವರು ಅದರ ಜತೆಗೆ ಸೇರಿಕೊಂಡಿದ್ದು ಅದಕ್ಕೆ ಆನೆಬಲ ಬಂದಂತಾಗಿದೆ. ಅವರು ತಮ್ಮ ದೇಶವ್ಯಾಪಿ ಅಭಿಯಾನವನ್ನು ಅವರ ಮೊದಲ ಸಂಘಟನೆಯಾಗಿದ್ದ ಲೋಹಕಾರ್ಮಿಕರ ಯೂನಿಯನಿನ ಮುಖ್ಯ ಕಚೇರಿಯಿಂದ ಆರಂಭಿಸಿದ್ದು ಜನರ ಉತ್ಸಾಹವನ್ನು ಇಮ್ಮಡಿಸಿದೆ. ಮುಖ್ಯ ಕಚೇರಿಯಲ್ಲಿ ಮಾತನಾಡುತ್ತಾ ಬ್ರೆಜಿಲ್ ನಲ್ಲಿ ಸರಕಾರವೇ ಇಲ್ಲ. ಜನತೆಯ ಉದ್ಯೋಗ, ಆದಾಯ, ಜೀವನಾವಶ್ಯಕ ವಸ್ತುಗಳ ಲಭ್ಯತೆ, ಆರೋಗ್ಯ, ಪರಿಸರ, ಕೈಗಾರಿಕೆ, ಕೃಷಿ ಯಾವುದರ ಬಗೆಗೂ ಅದು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಸರಕಾರ ಹೋಗಬೇಕು ಎಂದು ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಬಿಡುಗಡೆಗೆ ಒತ್ತಾಯಿಸಿ ಅವಿತರವಾಗಿ ಸೌಹಾರ್ದತೆ ಪ್ರದರ್ಶಿಸಿದ ಅರ್ಜೆಂಟಿನಾ, ವೆನೆಜುವೇಲಾ, ಕ್ಯೂಬಾ ಅಧ್ಯಕ್ಷರುಗಳು, ಅಮೆರಿಕದ ಬರ್ನಿ ಸ್ಯಾಂಡರ್ಸ್, ಫ್ರಾನ್ಸ್ ಮೇಯರ್ ಮುಂತಾದ ವಿದೇಶೀ ರಾಜಕೀಯ ನಾಯಕರು, ಪೋಪ್, ದೇಶ-ವಿದೇಶಗಳ ಕಾರ್ಮಿಕ ರೈತ-ಕೂಲಿ ಸಂಘಟನೆಗಳು – ಇವರಿಗೆಲ್ಲ ಲುಲಾ ಕೃತಜ್ಞತೆಗಳನ್ನು ಸಲ್ಲಿಸಿದರು.
ಲುಲಾ ಖುಲಾಸೆಯಾಗಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಬರಲು ಸಾಧ್ಯವಾಗಿದ್ದು ಬ್ರೆಜಿಲ್ ನ 2022 ಚುನಾವಣಾ ಕಣದ ರಣಕಹಳೆ ಮೊಳಗಿದಂತಾಗಿದೆ. ಬೊಲ್ಸನಾರೊ ರಿಂದ ಅವರ ಬೆಂಬಲಿಗರೂ ಭ್ರಮನಿರಸನ ಹೊಂದಿದ್ದು ಲುಲಾ ಅವರ ವರ್ಕರ್ಸ್ ಪಾರ್ಟಿಗೆ ಬೆಂಬಲ ಹೆಚ್ಚುತ್ತಿದೆ. ಲುಲಾ ಮತ್ತು ವರ್ಕರ್ಸ್ ಪಾರ್ಟಿಯ ಆಡಳಿತದ ಸಾಧನೆಗಳ ನೆನಪು ಬ್ರೆಜಿಲರಲ್ಲಿ ಹಸಿರಾಗಿದೆ. 2003-2013ರ ಅವಧಿಯಲ್ಲಿ ಬ್ರೆಜಿಲ್ ನ ಜಿಡಿಪಿ ಶೇ.64ರಷ್ಟು ಹೆಚ್ಚಿತ್ತು. ಬಡತನವನ್ನು ಅರ್ಧದಷ್ಟು ಕಡಿತ ಮಾಡಲು ಸಾಧ್ಯವಾಗಿತ್ತು. ಲಕ್ಷಾಂತರ ಹೊಸ ಉದ್ಯೋಗಗಳ ಸೃಷ್ಟಿಯಾಗಿತ್ತು. ನಿಜಗೂಲಿ ಶೇ. 75ರಷ್ಟು ಹೆಚ್ಚಿತ್ತು. ಉತ್ತರ ಅಮೆರಿಕದ ವಿರುದ್ಧ ಲ್ಯಾಟಿನ್ ಅಮೆರಿಕದ ದೇಶಗಳ ನಾಯಕರಾಗಿಯೂ, ಬ್ರಿಕ್ಸ್ ಮುಂತಾದ ಜಾಗತಿಕ ವೇದಿಕೆಗಳ ಮೂಲಕ ಮೂರನೇ ಜಗತ್ತಿನ ನಾಯಕರಾಗಿಯೂ ಲುಲಾ ಹೊಮ್ಮಿದ್ದರು. ಹಾಗಾಗಿಯೇ ಏನೋ, ಅವರ ಬಿಡುಗಡೆಯ ನಂತರ ಮಾಡಲಾದ ಸಮೀಕ್ಷೆಯ ಪ್ರಕಾರ, ಈಗ ಚುನಾವಣೆ ನಡೆದರೆ ಲುಲಾ ಶೇ. 50 ಮತ್ತು ಬೊಲ್ಸನಾರೊ ಕೇವಲ ಶೇ. 38 ಮತ ಪಡೆಯಲಿದ್ದಾರೆ.
ಲುಲಾ ಅವರ ಬಿಡುಗಡೆ ಬ್ರೆಜಿಲ್ ನಲ್ಲಿ ಮಾತ್ರವಲ್ಲ, ಇಡೀ ಲ್ಯಾಟೀನ್ ಖಂಡದ ರಾಜಕಾರಣದಲ್ಲಿ ಉತ್ಸಾಹ ಮೂಡಿಸಿದೆ. ಲ್ಯಾಟೀನ್ ಅಮೆರಿಕದ ಎಲ್ಲೆಡೆ ಉಗ್ರ ಬಲಪಂಥೀಯ ಜನಮರುಳು ಮತ್ತು ಎಡ-ಪ್ರಗತಿಪರ ಸಾಮ್ರಾಜ್ಯಶಾಹಿ-ವಿರೋಧಿ ಶಕ್ತಿಗಳ ನಡುವೆ ರಾಜಕೀಯ ಕದನ ತೀವ್ರಗೊಂಡಿದೆ. ಎಡ-ಪ್ರಗತಿಪರ ಸಾಮ್ರಾಜ್ಯಶಾಹಿ-ವಿರೋಧಿ ಶಕ್ತಿಗಳು ಮೈಲುಗೈ ಪಡೆಯುತ್ತಿರುವಂತೆ ಕಾಣುತ್ತಿದೆ. ಈಗಾಗಲೇ ವೆನೆಜುವೇಲಾ, ಅರ್ಜೆಂಟಿನಾ, ಬೊಲಿವಿಯಾ, ಮೆಕ್ಸಿಕೊಗಳಲ್ಲಿ ಎಡ-ಪ್ರಗತಿಪರ ಸರಕಾರಗಳಿವೆ. ಉಗ್ರ ಬಲಪಂಥೀಯ ಸರಕಾರಗಳಿರುವ ಚಿಲಿ, ಬ್ರೆಜಿಲ್ ಗಳಲ್ಲಿ ಸರಕಾರಗಳು ಜನಾಕ್ರೋಶಕ್ಕೆ ಗುರಿಯಾಗಿದ್ದು ತೀವ್ರ ವಿರೋಧ ಎದುರಿಸುತ್ತಿವೆ. ಮುಂದೆ ಬ್ರೆಜಿಲ್ ಮತ್ತು ಚಿಲಿ ಗಳಲ್ಲಿ ಎಡ-ಪ್ರಗತಿಪರ ಸಾಮ್ರಾಜ್ಯಶಾಹಿ-ವಿರೋಧಿ ಶಕ್ತಿಗಳು ಅಧಿಕಾರಕ್ಕೆ ಬಂದರೆ ಮತ್ತೆ ‘ಎಳೆಗೆಂಪು ಅಲೆ’ ಲ್ಯಾಟೀನ್ ಅಮೆರಿಕವನ್ನು ಆವರಿಸುವ ಸೂಚನೆಗಳು ಕಾಣುತ್ತಿವೆ. 20 ನೇ ಶತಮಾನದ ಕೊನೆಯ ದಶಕದ ಎರಡನೇಯ ಅರ್ಧಭಾಗ ಮತ್ತು 21ನೇ ಶತಮಾನದ ಮೊದಲ ದಶಕದ ಮೊದಲನೆಯ ಅರ್ಧ ಭಾಗದಲ್ಲಿ 2-3 ಬಿಟ್ಟರೆ, ಲ್ಯಾಟೀನ್ ಅಮೆರಿಕದ ಎಲ್ಲ ದೇಶಗಳಲ್ಲಿ ಎಡ-ಪ್ರಗತಿಪರ ಸಾಮ್ರಾಜ್ಯಶಾಹಿ-ವಿರೋಧಿ ಶಕ್ತಿಗಳು ಅಧಿಕಾರಕ್ಕೆ ಬಂದಿದ್ದನ್ನು ಎಳೆಗೆಂಪು ಅಲೆ’ ಎಂದು ಕರೆಯಲಾಗಿತ್ತು.