ಲೀಥಿಯಂ, ಮಸ್ಕ್ ಮತ್ತು ಬೊಲಿವಿಯ ಕ್ಷಿಪ್ರ ದಂಗೆ

– ಪ್ರೊ. ರಾಜೇಂದ್ರ ಉಡುಪ

ಲಿಥೀಯಂ 21ನೇ ಶತಮಾನದ ಜಗತ್ತಿನ ಇಂಧನ ಆರ್ಥಿಕದಲ್ಲಿ ನವ-ತೈಲದ ಸ್ಥಾನ ಪಡೆದಿದೆ. 20ನೇ ಶತಮಾನದಲ್ಲಿ ಆಗಿನ ಇಂಧನ ಆರ್ಥಿಕದ ಪ್ರಧಾನ ಸಂಪನ್ಮೂಲವಾಗಿದ್ದ ತೈಲದ ನಿಕ್ಷೇಪಗಳ ಮತ್ತು ತಂತ್ರಜ್ಞಾನದ ಮೇಲೆ ಬೆರಳೆಣಿಕೆಯ ಬಹುರಾಷ್ಟ್ರೀಯ ಕಂಪನಿಗಳು ಸಾಮ್ರಾಜ್ಯಶಾಹಿ ಮಿಲಿಟರಿ ಬಲದೊಂದಿಗೆ ಏಕಸ್ವಾಮ್ಯ ಹಿಡಿತ ಸಾಧಿಸಿದ್ದವು. ಈಗ ಲಿಥೀಯಂ ಕುರಿತು ಬೊಲಿವಿಯದಲ್ಲಿ ಕ್ಷಿಪ್ರದಂಗೆ ಮೂಲಕ ಅದರ ಪುನರಾವರ್ತನೆಗೆ ಪ್ರಯತ್ನಿಸುತ್ತಿವೆ. ಆದರೆ ಬೊಲಿವಿಯದ ಜನತೆ ಮತ್ತು ಎಂ.ಎ.ಎಸ್ ಪಕ್ಷ ಅದಕ್ಕೆ ಪ್ರಬಲ ತಡೆಯೊಡ್ಡಿದೆ ಎಂಬುದು ಸಕಾರಾತ್ಮಕ ಬೆಳವಣಿಗೆ.

“ಕ್ಷಿಪ್ರದಂಗೆ ನಡೆಸಿ ಮಾಡಿ ನಾವು ಯಾರನ್ನು ಬೇಕಾದರೂ ಪದಚ್ಯುತಗೊಳಿಸುತ್ತೇವೆ. ಏನು ಮಾಡ್ತೀರಾ?” ಎಂದು ಟ್ವೀಟ್ ನಲ್ಲಿ ಈ ಹೇಳಿಕೆಯನ್ನು ಕೊಟ್ಟ ಮಹಾಪುರುಷ’ಎಲಾನ್ ಮಸ್ಕ್. 2019ರ ಬೊಲಿವಿಯದಲ್ಲಿ ಕ್ಷಿಪ್ರದಂಗೆಯನ್ನು ಅಮೆರಿಕನ್ ಸರಕಾರ ನಿಮ್ಮ ಕಂಪನಿಯ ಹಿತಾಸಕ್ತಿಗಾಗಿ ನಡೆಸಿತಾ ಎಂಬ ಪ್ರಶ್ನೆಗೆ ಮಸ್ಕ್ ಕೊಟ್ಟ ಉದ್ಧಟ ಉತ್ತರವಿದು.  ಟ್ವಿಟರ್ ನಲ್ಲಿ ಈ ಪ್ರಶ್ನೆ ಸಹ, ಕೊವಿಡ್ ನೆರವಿಗೆ ಸರಕಾರ ಪ್ರತಿ ಅಮೆರಿಕನ್ ನಾಗರಿಕರಿಗೆ ತಿಂಗಳ 1200 ಡಾಲರ್ ನೆರವು ಕೊಡುವುದನ್ನು ಟೀಕಿಸಿ ಇದು ಜನರ ಹಿತಾಸಕ್ತಿಯಲ್ಲಿಲ್ಲ ಎಂಬ ಮಸ್ಕ್ ಮಾಡಿದ್ದ ಉದ್ಧಟ ಟ್ವೀಟ್ ಗೆ ಪ್ರತಿಕ್ರಿಯೆಯಾಗಿತ್ತು.

ಯಾರು ಈ ಎಲಾನ್ ಮಸ್ಕ್? ಈತ ಜಗತ್ತಿನ ಅತಿ ದೊಡ್ಡ ಶ್ರೀಮಂತರಲ್ಲಿ 5ನೇ ಸ್ಥಾನದಲ್ಲಿರುವ ವ್ಯಕ್ತಿ. ಟೆಸ್ಲ ಎನ್ನುವ ಕಂಪನಿಯ ಮುಖ್ಯಸ್ಥ. ಈ ಕಂಪನಿ ವಿದ್ಯುತ್ಚಾಲಿತ ಕಾರುಗಳನ್ನು ತಯಾರಿಸುತ್ತಿದೆ. ಟೆಸ್ಲ ಜಗತ್ತಿನ ವಿದ್ಯುತ್ಚಾಲಿತ ವಾಹನಗಳ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಪಾಲು ಪಡೆದ ಅಮೆರಿಕನ್ ಕಂಪನಿ. ಅದು ಈ ವರ್ಷ ಈ ವರೆಗೆ 3.6 ಲಕ್ಷ ವಿದ್ಯುತ್ಚಾಲಿತ ವಾಹನಗಳನ್ನು ಉತ್ಪಾದಿಸಿದ್ದು ಈ ವರ್ಷದ ಜಾಗತಿಕ ಉತ್ಪಾದನೆಯಲ್ಲಿ ಶೇ. 18 ಪಾಲು ಪಡೆದಿದೆ. ಇದು ಎರಡನೆ ಅತಿ ದೊಡ್ಡ ಪಾಲು ಪಡೆದಿರುವ ಜರ್ಮನಿಯ ಫೋಕ್ಸ್ ವಾಗೆನ್ ನ ಪಾಲಿನ (ಶೇ. 6) ಮೂರು ಪಟ್ಟು.

ಮುಂದಿನ ದಿನಗಳಲ್ಲಿ ವಿದ್ಯುತ್ಚಾಲಿತ ಕಾರು? ಸ್ಕೂಟರ್? ಬಸ್ ಇತರ ವಾಹನಗಳಿಗೆ ಬಹು ದೊಡ್ಡ ಬೇಡಿಕೆ ಬರಲಿದೆ. 2021ರಲ್ಲಿ ವಿದ್ಯುತ್ಚಾಲಿತ ವಾಹನಗಳ ಉತ್ಪಾದನೆ ಈ ವರ್ಷದ ದುಪ್ಪಟ್ಟಿಗಿಂತಲೂ ಹೆಚ್ಚಾಗಬಹುದು ಎಂಬ ನಿರೀಕ್ಷೆಯಿದೆ. ಈಗ ವಿದ್ಯುತ್ಚಾಲಿತ ವಾಹನಗಳು ಒಟ್ಟು ವಾಹನಗಳ ಶೇ. 3 ಭಾಗ ಮಾತ್ರ ಇದ್ದು, ಮುಂದಿನ ವರ್ಷ ಇದು ಶೇ. 7 ರಿಂದ 10ಕ್ಕೆ ಏರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪೆಟ್ರೋಲ್, ಡೀಸೆಲ್ ವಾಹನಗಳಿಂದ ವಾತಾವರಣ ಕಲುಷಿತಗೊಳ್ಳುತ್ತದೆ? ನಗರ ಜನರ ಆರೋಗ್ಯ ಹದೆಗೆಡುತ್ತದೆ ಎನ್ನುವ ಕಾರಣಕ್ಕೆ ಜಗತ್ತಿನಾದ್ಯಂತ ವಿದ್ಯುತ್ಚಾಲಿತ ವಾಹನಗಳನ್ನು ಓಡಿಸುವ ಯೋಜನೆ ಇದೆ. ಇದರಲ್ಲಿರುವ ಪರಿಸರ ರಕ್ಷಣೆಯ ವಿಚಾರ ಪೂರ್ತಿ ಸತ್ಯವಲ್ಲ. ನಗರಗಳು ಚೊಕ್ಕ ಆಗುತ್ತವೆ ಅನ್ನುವುದೇನೊ ಸರಿ. ಆದರೆ ಈ ವಾಹನಗಳಿಗೆ ಬೇಕಾದ ಅಗಾಧ ಪ್ರಮಾಣದ ವಿದ್ಯುತ್ಚಕ್ತಿಯನ್ನು ಮತ್ತೆಲ್ಲೋ ಉತ್ಪಾದಿಸಿ ನಗರಗಳಿಗೆ ತಂದು ಚಾಜಿಂಗ್ ಸ್ಟೇಶನ್(ಈಗಿನ ಪೆಟ್ರೋಲ್ ಬಂಕ್ ಗಳಂತೆ) ಗಳಿಂದ ವಿತರಿಸಬೇಕಾಗುತ್ತದೆ. ಅಂದರೆ ಪರಿಸರ ಸಮಸ್ಯೆಯನ್ನು ನಗರಗಳಿಂದ ಬೇರೆಡೆಗೆ ಸಾಗಿಸಿದಂತಾಗುತ್ತದೆ.

ವಿದ್ಯುತ್ಚಾಲಿತ ವಾಹನಗಳು ಓಡುವುದು ಬ್ಯಾಟರಿಗಳಲ್ಲಿ ಶೇಖರಿಸಿದ ವಿದ್ಯುತ್ ಶಕ್ತಿಯಿಂದ. ಬ್ಯಾಟರಿಯೇ ಈ ವಾಹನಗಳ ಹೃದಯ ಭಾಗ. ವಾಹನಗಳು ಓಡಾಡಿ ವಿದ್ಯುತ್ ಖರ್ಚಾದಂತೆ ಬ್ಯಾಟರಿಗಳನ್ನು ರಿಚಾರ್ಜ ಮಾಡಿಕೊಳ್ಳಬೇಕಾಗುತ್ತದೆ. ಇವುಗಳನ್ನು ರಿಚಾರ್ಜೇಬಲ್ ಬ್ಯಾಟರಿಗಳೆನ್ನುತ್ತೇವೆ. ವಾಹನಗಳಿಗೆ ಬೇಕಾಗುವ ಶಕ್ತಿಶಾಲಿ ಬ್ಯಾಟರಿ : ಲೀಥಿಯಂ ಅಯೋನ್ ಬ್ಯಾಟರಿ. ಇದರ ವಿಶೇಷತೆ ಏನು?

ಎಲ್ಲಾ ಬ್ಯಾಟರಿಗಳಲ್ಲಿ ಇರುವಂತೆ ಇದರಲ್ಲಿಯೂ ನಾಲ್ಕು ಭಾಗಗಳಿರುತ್ತವೆ: ಕ್ಯಾತೋಡ್ ಮತ್ತು ಎನೋಡ್ ಎಂಬ ಎರಡು ವಿದ್ಯುಧ್ರುವ (electrode)ಗಳು? ಇಲೆಕ್ಟ್ರಾನುಗಳು ಚಲಿಸಲು ಒಂದು ಮಾರ್ಗ ಹಾಗೂ ಇಲೆಕ್ಟ್ರಾನುಗಳನ್ನು ಕಳೆದುಕೊಂಡ ಪರಮಾಣು (ಇದನ್ನು ಅಯೋನ್ ಎಂದು ಕರೆಯುತ್ತಾರೆ) ಚಲಿಸಲು ಇನ್ನೊಂದು ಮಾರ್ಗ (ಇದನ್ನು ಇಲೆಕ್ಟ್ರೋಲೈಟ್ ಎನ್ನುತ್ತಾರೆ.). ಲೀಥಿಯಂ ಬ್ಯಾಟರಿಯಲ್ಲಿ ಒಂದು ವಿದ್ಯುಧ್ರುವ ಲೀಥಿಯಂ ಆಕ್ಷೈಡ್ ಆಗಿದ್ದರೆ ಇನ್ನೊಂದು ವಿಧ್ಯುಧ್ರವ ಗ್ರಾಫೈಟ(ಇಂಗಾಲದ ಒಂದು ರೂಪ) ಆಗಿರುತ್ತದೆ. ಖಾಲಿಯಾದ ಬ್ಯಾಟರಿಯ ಶಕ್ತಿ ಸಂಚಯ? ಅಂದರೆ ರಿಚಾರ್ಜ್ ಮಾಡುವಾಗ ಲಿಥಿಯಂ ಆಕ್ಷೈಡ್ ನಲ್ಲಿರುವ ಇಲೆಕ್ಟ್ರಾನುಗಳು ತಾಮ್ರದ ತಂತುವಿನ ಮೂಲಕ ಗ್ರಾಫೈಟ್ ನ್ನು ಬಂದು ಸೇರಿಕೊಳ್ಳುತ್ತವೆ. ಇಲೆಕ್ಟ್ರಾನನ್ನು ಕಳೆದುಕೊಂಡ ಲೀಥಿಯಂ ಅಯೋನುಗಳು ಘನ ರೂಪದ ಇಲೆಕ್ಟ್ರಾಲೈಟ್ ಮೂಲಕ ಪ್ರಸರಣಗೊಂಡು ಗ್ರಾಫೈಟ್ ಪದರುಗಳಲ್ಲಿ ಶೇಖರಗೊಳ್ಳುತ್ತವೆ. ಹೀಗೆ ವಿದ್ಯುತ್ ಶೇಕರಣೆಗೊಂಡ ಬ್ಯಾಟರಿಯನ್ನು ಮೋಟರ್ ಒಂದಕ್ಕೆ ಜೋಡಿಸಿದಾಗ ಗ್ರಾಫೈಟ್ ನಿಂದ ಇಲೆಕ್ಟ್ರಾನುಗಳೂ ಹಾಗೂ ಅಯಾನುಗಳು ಬಂದ ದಾರಿಯಿಂದಲೇ ಹಿಂದಕ್ಕೆ ಸಂಚರಿಸಿ ಲಿಥಿಯಂ ಆಕ್ಷೈಡನ್ನು ಸೇರಿಕೊಳ್ಳುತ್ತವೆ ಮತ್ತು ಮೋಟರಿಗೆ ಚಾಲನೆ ಕೊಡುತ್ತವೆ.

ಇಂತಹ ಬ್ಯಾಟರಿಗೆ ಬೇಕಾದ ಅತೀ ಮುಖ್ಯ ವಸ್ತು ಲೀಥಿಯಂ ಲೋಹ. ಸಾಮಾನ್ಯ ಸ್ಥಿತಿಯಲ್ಲಿ ಅತೀ ಹಗುರವಾದ ಅಂದರೆ ಅತೀ ಕಡಿಮೆ ಸಾಂದ್ರತೆಯ ಲೋಹ. ಇದು ರಾಸಾಯನಿಕವಾಗಿ ತುಂಬ ಚುರುಕಾದ ಲೋಹ  ನೀರಿನೊಂದಿಗೆ ಶೀಘ್ರವಾಗಿ ಪ್ರತಿಕ್ರಯಿಸಿ ಸುಲಭದಲ್ಲಿ ಧಹಿಸುವ ಜಲಜನಕವನ್ನು ಬಿಡುಗಡೆಗೊಳಿಸುತ್ತದೆ. ಲೀಥಿಯಂಗೆ ಇಲೆಕ್ಟ್ರಾನುಗಳ ದಾಹ ತುಂಬ ಹೆಚ್ಚಿರುವುದರಿಂದ ಸಣ್ಣ ಬ್ಯಾಟರಿ ಕೂಡ ಅಧಿಕ ಶಕ್ತಿಯನ್ನು ಕೊಡಬಲ್ಲದು. ನೂರಾರು ಚಿಕ್ಕ ಬ್ಯಾಟರಿಗಳನ್ನು (6 ರಿಂದ 7 ಸೆ.ಮೀ.ಉದ್ದ) ಪೋಣಿಸಿಕೋಂಡು ಬ್ಯಾಟರಿ ಪ್ಯಾನೆಲ್ ಗಳನ್ನು ತಯಾರಿಸುತ್ತಾರೆ. ಕಾರಿನ ಗಾತ್ರಕ್ಕೆ ತಕ್ಕಂತೆ ಹಲಗೆಗಳ ರೂಪವನ್ನು ಬದಲಿಸ ಬಹುದು. ಇಂತಹ ಬ್ಯಾಟರಿಗಳು 25 ವರ್ಷಗಳಿಗಿಂತಲೂ ಅಧಿಕ ಬಾಳಿಕೆ ಬರುತ್ತವೆ.? ಲಿಥಿಯಂ ಬ್ಯಾಟರಿಗಳನ್ನು ವಿದ್ಯುತ್ ವಾಹನಗಳು ಮಾತ್ರವಲ್ಲದೇ ಕಂಪ್ಯೂಟರ್? ಲಾಪ್ ಟಾಪ್? ಐಫೋನ್ ಇತ್ಯಾದಿ ಹೆಚ್ಚಿನ ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸಲಾಗುತ್ತದೆ. ಇದರಿಂದಾಗಿ ಲಿಥಿಯಂ 21ನೇ ಶತಮಾನದ ತಂತ್ರಜ್ಞಾನಕ್ಕೆ ಬೇಕಾದ ಅತೀ ಅವಶ್ಯಕ ಲೋಹ ಆಗಿದೆ.  ಲಿಥಿಯಂ ಗೆ ಬೇಡಿಕೆ ಮುಂದಿನ 10 ವರ್ಷಗಳಲ್ಲಿ ಮೂರು ಪಟ್ಟು ಆಗಿ 5.7 ಲಕ್ಷ ಟನ್ ಗೆ ಏರುತ್ತದೆ ಎಂದು ಅಂದಾಜು ಮಾಡಲಾಗಿದೆ.

ಬೋಲಿವಿಯಾದಲ್ಲಿ ಲಿಥಿಯಂ ಅದಿರಿನ ದೊಡ್ಡ ನಿಕ್ಶೇಪವೇ ಇದೆ. ಅಂದಾಜಿನಂತೆ ಜಗತ್ತಿನ ಒಟ್ಟು ಲಿಥಿಯಂ ನಿಕ್ಶೇಪದ ಸುಮಾರು 45% ಬೋಲಿವಿಯಾದ ಒಂದು ಮರುಭೂಮಿಯಲ್ಲೇ ದೊರಕುತ್ತದೆ. ಲಿಥಿಯಂ ಮಾತ್ರವಲ್ಲದೇ ಚಿನ್ನ? ತಾಮ್ರ? ತವರ? ಸತು? ಟಂಗಸ್ಟನ್ ? ಸಾಲ್ಟಪೀಟರ್ ನಂತಹ ಅತೀ ಬೆಲೆಬಾಳುವ ಖನಿಜಗಳೂ ದೊರಕುತ್ತವೆ. ಈ ಮೊದಲು ಅಮೆರಿಕ, ಫ್ರಾನ್ಸ್, ದಕ್ಷಿಣ ಕೊರಿಯಾದ ಬಹುರಾಷ್ಟ್ರೀಯ ಕಂಪನಿಗಳು ಬೊಲಿವಿಯಾದ ಗಣಿಗಳ  ಒಡೆತನ ಹೊಂದಿದ್ದವು. ಇವರಿಂದ ಖನಿಜ ಸಂಪತ್ತಿನ ಲೂಟಿ ನಡೆಯುತಿತ್ತು. ಗಣಿಗಾರಿಕೆ ಕೆಟ್ಟ ರೀತಿಯಲ್ಲಿ ನಡೆದು ಕಾರ್ಮಿಕರು ಶೋಷಣೆಗೊಂಡು ಬಡತನದಲ್ಲಿ ಬದುಕುತ್ತಿದ್ದರು. ಗಣಿಗಳಲ್ಲಿನ ಬಾಲ ಕಾರ್ಮಿಕ ಪದ್ಥತಿ ಜಗತ್ತಿನಲ್ಲೇ ಕುಖ್ಯಾತಿಗೊಂಡಿತ್ತು.

ವಿದ್ಯುಚ್ಚಾಲಿತ ಕಾರುಗಳ ಅತಿ ದೊಡ್ಡ ತಯಾರಕರಾಗಿ ಟೆಸ್ಲಗೆ ಲಿಥಿಯಂ ಅತಿ ಮುಖ್ಯ ಕಚ್ಚಾ ವಸ್ತು. ಮುಂದೆ ಪೈಪೋಟಿ ತೀವ್ರವಾದಾಗ ತನಗೆ ಇದರ ಲಭ್ಯತೆ ಖಚಿತ ಪಡಿಸುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಇತರ ಕಂಪನಿಗಳಿಗೆ ಲಭ್ಯತೆ ಇಲ್ಲದಂತೆ ಮಾಡುವುದು  ಸಹ ಅದರ ಯೋಜನೆಯಲ್ಲಿ ಇತ್ತು. ಟೆಸ್ಲ ಬಹುರಾಷ್ಟ್ರೀಯ ಲಿಥಿಯಂ ಗಣಿ ಕಂಪನಿಗಳ ಅತಿ ದೊಡ್ಡ ಖರೀದಿದಾರ ಆಗಿದ್ದು, ಅವರೆಲ್ಲರ ಹಿತಾಸಕ್ತಿ  ಲಿಥಿಯಂ ಗಣಿಗಳ ಮೇಲೆ ಭದ್ರ ಹಿಡಿತ ಸಾಧಿಸುವುದರಲ್ಲಿ ಇತ್ತು.

ಹೀಗೆ ಶೋಷಣೆಗೊಳಗಾದ ದೇಶದಲ್ಲಿ ಇವೋ ಮೊರಾಲಸ್ ಎನ್ನುವ ಎಡಪಂಥೀಯ ವ್ಯಕ್ತಿ 2006 ರಲ್ಲಿ   ಅಧ್ಯಕ್ಷರಾದರು. 2019ರ ವರೆಗೆ ಅವರ ’ಸಮಾಜವಾದಕ್ಕಾಗಿ ಚಳವಳಿ’(Movement For Socialism – MAS) ಪಕ್ಷ  ಚುನಾವಣೆಯಲ್ಲಿ ಬಹುಮತ ಪಡೆದು ಇವರು ಅಧ್ಯಕ್ಷರಾಗಿ ಮುಂದುವರಿದರು. 2006ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಗಣಿಗಳನ್ನು ರಾಷ್ಟ್ರೀಕರಿಸಲಾಯಿತು. ಗಣಿಗಾರಿಕೆಯಿಂದ ಬಂದ ಲಾಭವನ್ನು ಕಾರ್ಮಿಕ ಕಲ್ಯಾಣ ಮತ್ತು ಬಡತನ ನಿವಾರಣ ಯೋಜನೆಗೆ ಉಪಯೋಗಿಸಲಾಯಿತು. ಶಿಕ್ಷಣ? ಆರೋಗ್ಯ? ವಸತಿಗೆ ಹೇಚ್ಚಿನ ಒತ್ತು ಕೊಡಲಾಯಿತು. ಇದರಿಂದಾಗಿ ಅಲ್ಲಿನ ಅತೀ ಬಡವರ ಸಂಖ್ಯೆ 35% ನಿಂದ 7%ಗೆ ಇಳಿಯಿತು.

ಮೊರಾಲೆಸ್ ಸರಕಾರ 2006ರಲ್ಲಿ ಲಿಥೀಯಂ ರಾಷ್ಟ್ರೀಯ ವ್ಯೂಹಾತ್ಮಕ ಸಂಪತ್ತು ಎಂದು ಘೋಷಿಸಿ ಅದರ ಗಣಿಗಾರಿಕೆ, ಸಂಸ್ಕರಣವನ್ನು ಸರಕಾರವೇ ವಹಿಸುತ್ತದೆ ಎಂಬ ರಾಷ್ಟ್ರೀಯ ನೀತಿಯನ್ನು ಅಂಗೀಕರಿಸಿತು. ಇದನ್ನು ಸಂವಿಧಾನದಲ್ಲೂ ಸೇರಿಸಲಾಯಿತು. ಇದಕ್ಕಾಗಿ ವೈ.ಎಲ್.ಬಿ (ಬೊಲಿವಿಯನ್ ರಾಷ್ಟ್ರೀಯ ಲಿಥೀಯಂ ಸಂಸ್ಥೆ) ಯನ್ನು ಸ್ಥಾಪಿಸಿ ಅದಕ್ಕೆ  ಲಿಥೀಯಂ ಗಣಿಗಳ ಒಡೆತನವನ್ನು ವಹಿಸಿತು. ಲಿಥಿಯಂ ಗಣಿಗಾರಿಕೆ ಮತ್ತು ಸಂಸ್ಕರಣದಲ್ಲಿ ವಿದೇಶೀ ಕಂಪನಿಗಳ ಭಾಗವಹಿಸುವಿಕೆಯನ್ನು ಅದೇನು ನಿಷೇಧಿಸಲಿಲ್ಲ. ಆದರೆ ಲೀಥಿಯಂ ಸಂಬಂಧಿತ ಯಾವುದೇ ಚಟುವಟಿಕೆಯನ್ನು ವೈ.ಎಲ್.ಬಿ ಮತ್ತು ಕೊಮಿಬಿಲ್ (ಬೊಲಿಯಾದ ರಾಷ್ಟ್ರೀಯ ಗಣಿಗಾರಿಕೆ ಕಂಪನಿ) ಜತೆ ಜಂಟಿಯಾಗಿ ನಿರ್ವಹಿಸಬೇಕಿತ್ತು. ಇದಕ್ಕೆ ಒಪ್ಪದ್ದರಿಂದ ಆ ವರೆಗೆ ಬೊಲಿವಿಯದ ಲಿಥೀಯಂ ಸಂಪತ್ತಿನ ಮೇಲೆ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಅಮೆರಿಕದ ಎಫ್.ಎಂ.ಸಿ, ಫ್ರಾನ್ಸಿನ ಎರಾಮೆಟ್, ಮತ್ತು ದ.ಕೊರಿಯಾದ ಪೊಸ್ಕೊ ಅದರಿಂದ ಹೊರಗುಳಿಯಬೇಕಾಯಿತು. ಈ ಕಂಪನಿಗಳ ಜೊತೆ ನಿಕಟ ನಂಟು ಹೊಂದಿದ್ದ ಮಸ್ಕ್ ಗೂ ಇದು ನುಂಗಲಾರದ ತುತ್ತಾಗಿತ್ತು. ಯಾಕೆಂದರೆ ಟೆಸ್ಲ ದ ವರ್ಷಕ್ಕೆ 5 ಲಕ್ಷ ಕಾರುಗಳ ತಯಾರಿಕೆಯ ಯೋಜನೆಗೆ ಹೆಚ್ಚು ಕಡಿಮೆ ಈಗಿನ ಇಡೀ ಜಾಗತಿಕ ಉತ್ಪಾದನೆ ಬೇಕಾಗಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಮೊರಾಲೆಸ್ ಸರಕಾರದ ಯೋಜನೆ ಬರಿಯ ಲಿಥೀಯಂ ಗಣಿಗಾರಿಕೆ ಮಾಡಿ ರಫ್ತು ಮಾಡುವುದಕ್ಕೆ ಸೀಮಿತವಾಗಲಿಲ್ಲ. ಬ್ಯಾಟರಿಗೆ ಬೇಕಾದ ಲಿಥೀಯಂ ಡೈ ಆಕ್ಸೈಡ್ ಮುಂತಾದ ರಾಸಾಯನಿಕ ವಸ್ತುಗಳು, ಇಡೀ ಬ್ಯಾಟರಿ ಮತ್ತು ವಿದ್ಯುತ್ಚಾಲಿತ ವಾಹನಗಳನ್ನೇ ಮಾಡಲು ಯೋಜನೆ  ಹಾಕಿತು. ಇದಕ್ಕೆ ಅದು ರಶ್ಯನ್, ಜರ್ಮನ್ ಮತ್ತು ಚೀನಾದ ಕಂಪನಿಗಳ ತಾಂತ್ರಿಕ ಸಹಕಾರ, ಹೂಡಿಕೆ ಪಡೆಯುವುದರಲ್ಲಿ ಸಫಲವಾಯಿತು. ಈ ಕಂಪನಿಗಳು ಬೊಲಿವಿಯ ಸರಕಾರದ ಷರತ್ತುಗಳನ್ನು ಒಪ್ಪಿಕೊಂಡು ಸರಕಾರ ನಿಯೋಜಿಸಿದ ವೈ.ಎಲ್.ಬಿ ಮತ್ತು ಕೊಮಿಬಿಲ್ ಸಂಸ್ಥೆಗಳೊಂದಿಗೆ ಕೆಲಸ ಮಾಡಿದವು. ಇದು ಅಮೆರಿಕದ ಸರಕಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಇನ್ನಷ್ಟು ಉತ್ತೇಜಿತಗೊಳಿಸಿತು.

ಜಗತ್ತಿನಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಖನಿಜ ಸಂಪತ್ತನ್ನು ಲೂಟಿ ಮಾಡುವುದು ಅಮೇರಿಕಾ ನಡೆದು ಬಂದ ದಾರಿ. ಇದಕ್ಕೆ ತಡೆಯೊಡ್ಡಿದ ಚುನಾಯಿತ ಸರಕಾರಗಳನ್ನು ಪತನಗೊಳಿಸುವುದು? ಆ ದೇಶದ ನಾಯಕರನ್ನು ಪದಚ್ಯುತಿ ಮಾಡುವುದು, ಮತ್ತು ಅಗತ್ಯವಿದ್ದರೆ ಹತ್ಯೆಗೆಯ್ಯುವುದು ಅಮೇರಿಕದ ಮಿಲಿಟರಿ-ವಿದೇಶಾಂಗ ನೀತಿಯ ಒಂದು ಅನಿವಾರ್ಯ ಭಾಗ. ಕಾಂಗೊದಲ್ಲಿ ವಜ್ರದ ಗಣಿ ಮತ್ತಿತರ ನಿಕ್ಷೇಪಗಳನ್ನು ರಾಷ್ಟ್ರೀಕರಿಸಿದ ಪೆಟ್ರೀಕ್ ಲುಮುಂಬ? ಚಿಲಿಯಲ್ಲಿ ತಾಮ್ರದ ಗಣಿಗಳನ್ನು ರಾಷ್ಟ್ರೀಕರಿಸಿದ ಅಲೆಂಡೆ?, ಸ್ವತಂತ್ರ ತೈಲ ನೀತಿ ಅನುಸರಿಸಲು ಯತ್ನಸಿದ ಇರಾಕಿನ ಸದ್ದಾಂ ಹುಸೇನ್ ಇವರೆಲ್ಲರ ಹತ್ಯೆಗಳು ಕೆಲವು ಉದಾರಣೆಗಳು. 1950ರ ದಶಕದಲ್ಲಿ ತೈಲ ಬಾವಿಗಳನ್ನು ರಾಷ್ಟ್ರೀಕರಿಸಿದ ಇರಾನಿನ ಪ್ರಧಾನಿ ಮೊಸದೆಗ್ ಅವರನ್ನು ಮಿಲಿಟರಿ ಕ್ಷಿಪ್ರದಂಗೆಯಲ್ಲಿ ಪದಚ್ಯುತಗೊಳಿಸಿ ಆಮರಣಾಂತ ಗೃಹಬಂಧನದಲ್ಲಿಡಲಾಗಿತ್ತು. ಬೊಲಿವಿಯಾ ಮತ್ತು ಇವೋ ಮೊಲಾರಸ್ ಮೇಲೂ ಇದೇ ಪ್ರಯೋಗವನ್ನು ಪುನರಾವರ್ತಿಸಲಾಯಿತು. 2000 ರ ದಶಕದಿಂದಲೇ ಮೊರಾಲೆಸ್ ವಿರೋಧಿ ಗುಂಪುಗಳನ್ನು ಹುಟ್ಟು ಹಾಕಿ ಅವರ ಸರಕಾರವನ್ನು ಉರುಳಿಸಲು ಪಿತೂರಿ ಆರಂಭವಾಯಿತು. ಕಳೆದೊಂದು ವರ್ಷದಲ್ಲೇ ಇದಕ್ಕೆ 10 ಕೋಟಿ ಡಾಲರುಗಳಷ್ಟು ಅನುದಾನ ಕೊಡಲಾಗಿತ್ತು.

2019ರಲ್ಲಿ ಅಮೇರಿಕಾದ ಸಿಐಎ ಪ್ರೇರಿತ ಸೈನಿಕ ಕ್ಷಿಪ್ರಕ್ರಾಂತಿಯನ್ನು ನಡೆಸಿತು. ತನ್ನ ಕುಟುಂಬ ಹಾಗೂ ಸಂಗಾತಿಗಳ ರಕ್ಷಣೆಗಾಗಿ ಮೊರಾಲಸ್ ಅಧ್ಯಕ್ಷ ಪದವಿಗೆ ರಾಜಿನಾಮೆ ಕೊಟ್ಟು ಮೆಕ್ಷಿಕೋ ತಲುಪಿದರು? ಮತ್ತು ಅಲ್ಲಿಂದ ಅಜಂಟೈನಾಗೆ ಹೋಗಿ ಉಳಿದುಕೊಂಡರು. ಅಮೇರಿಕಾ ತನ್ನ ಆಡುಗೊಂಬೆ ಜನೈನ್ ಅನೇಜ್ ನ್ನು ಬೊಲಿವಿಯಾದ ಅಧ್ಯಕ್ಷ ಸ್ಠಾನದಲ್ಲಿ ನೇಮಿಸಿತು (ಚುನಾವಣೆ ಇಲ್ಲದೆ). ಈತ ಮೊರಾಲೆಸ್ ಸರಕಾರದ ಲೀಥೀಯಂ ಸಂಬಂಧಿತ ಕ್ರಮಗಳನ್ನೆಲ್ಲ ರದ್ದು ಮಾಡಿ ಮತ್ತೆ ಬಹುರಾಷ್ಟ್ರೀಯ ಕಂಪನಿಗಳಿಗೆ ಕೊಡುವ ಕ್ರಮ ಪ್ರಾರಂಭಿಸಿದ್ದ. ಆದರೆ ಆತನ ಸರಕಾರದ ವಿರುದ್ಧ ನಡೆದ ತೀವ್ರ ಚಳುವಳಿಯ ಒತ್ತಡದಿಂದಾಗಿ ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ’ಸಮಾಜವಾದಕ್ಕಾಗಿ ಚಳವಳಿ’(ಎಂ.ಎ.ಎಸ್) ಪಕ್ಷ ಮತ್ತೆ ಪ್ರಚಂಡ ಬಹುಮತದೊಂದಿಗೆ ಗೆದ್ದು ಬಂದಿತು.

ಲೀಥೀಯಂ ನ್ನು ರಾಷ್ಟ್ರೀಯ ಸಂಪನ್ಮೂಲವಾಗಿ ಕಾಪಾಡಿ ಬೆಳೆಸುವ ನೀತಿಯನ್ನು ಬೊಲಿವಿಯದ ಹೊಸ ಸರಕಾರ ಮತ್ತೆ ಸ್ಥಾಪಿಸಲಿದೆ. ಲಿಥೀಯಂ 21ನೇ ಶತಮಾನದ ಜಗತ್ತಿನ ಇಂಧನ ಆರ್ಥಿಕದಲ್ಲಿ ನವತೈಲದ ಸ್ಥಾನ ಪಡೆದಿದೆ. 20ನೇ ಶತಮಾನದಲ್ಲಿ ಆಗಿನ ಇಂಧನ ಆರ್ಥಿಕದ ಪ್ರಧಾನ ಸಂಪನ್ಮೂಲವಾಗಿದ್ದ  ತೈಲದ ನಿಕ್ಷೇಪಗಳ ಮತ್ತು ತಂತ್ರಜ್ಞಾನದ ಮೇಲೆ ಬೆರಳೆಣಿಕೆಯ ಬಹುರಾಷ್ಟ್ರೀಯ ಕಂಪನಿಗಳು ಸಾಮ್ರಾಜ್ಯಶಾಹಿ ಮಿಲಿಟರಿ ಬಲದೊಂದಿಗೆ ಏಕಸ್ವಾಮ್ಯ ಹಿಡಿತ ಸಾಧಿಸಿದ್ದವು. ಈಗ ಲಿಥೀಯಂ ಕುರಿತು ಬೊಲಿವಿಯದಲ್ಲಿ ಕ್ಷಿಪ್ರದಂಗೆ ಮೂಲಕ ಅದರ ಪುನರಾವರ್ತನೆಗೆ ಪ್ರಯತ್ನಿಸುತ್ತಿವೆ. ಆದರೆ ಬೊಲಿವಿಯದ ಜನತೆ ಮತ್ತು ಎಂ.ಎ.ಎಸ್ ಪಕ್ಷ ಅದಕ್ಕೆ ಪ್ರಬಲ ತಡೆಯೊಡ್ಡಿದೆ ಎಂಬುದು ಸಕಾರಾತ್ಮಕ ಬೆಳವಣಿಗೆ.

 

 

 

 

Donate Janashakthi Media

Leave a Reply

Your email address will not be published. Required fields are marked *