ಮಾಧ್ಯಮಗಳಲ್ಲಿ ಏರು ದನಿಯಲ್ಲಿ ಭಕ್ತರು ಹೇಳುತ್ತಾರೆ: ದಿಲ್ಲಿಯ ಗಡಿಗಳಲ್ಲಿ ಸುಧಾರಣೆಗಳನ್ನು ವಿರೋಧಿಸುತ್ತಿರುವವರು, ಲೋಹದ ತಳ್ಳುಗಾಡಿಗಳಲ್ಲಿ 2 ಡಿಗ್ರಿ ಅಥವಾ ಅದಕ್ಕೂ ಕೆಳಗಿನ ತಾಪಮಾನದಲ್ಲಿ ಮಲಗಿರುವವರು, 5-6 ಡಿಗ್ರಿಯ ಛಳಿಯಲ್ಲಿ ಬಯಲಿನಲ್ಲಿ ಸ್ನಾನ ಮಾಡುವವರು ಈ ಎಲ್ಲರೂ “ಶ್ರೀಮಂತ ರೈತರು” ಎಂದು. ಎಂತಹ ಮೋಹಕ ಮಾತು! ರೈತರ ಐತಿಹಾಸಿಕ ಹೋರಾಟ ಕ್ಕೆ ಮೋದಿ ಸರಕಾರದ ಪ್ರತಿಕ್ರಿಯೆ ಹೆಚ್ಚೆಚ್ಚು ಅಪಹಾಸ್ಯಕ್ಕೆ ಒಳಗಾಗುತ್ತಿದೆ. ಮುಳ್ಳುತಂತಿ ಬೇಲಿಗಳು, ಕಾಂಕ್ರಿಟ್ ತಡೆಗೋಡೆಗಳು, ಜಲಫಿರಂಗಿಗಳು ಸಾಲಲಿಲ್ಲವೆಂದು, ನಂತರ ರೈತರ ವಿರುದ್ದ ಅಪಪ್ರಚಾರ, ಅದೂ ಸಾಗದಾದಾಗ ಹೆದ್ದಾರಿಗಳಿಗೆ ಮೊಳೆ ಜಡಿದ ನಂತರ ಈಗ ಅಂತರ್ರಾಷ್ಟ್ರೀಯ ಪಿತೂರಿಯ ಬೊಬ್ಬೆ!
ಪಿ.ಸಾಯಿನಾಥ್
ಲಕ್ಷಾಂತರ ಮನುಷ್ಯರಿಗೆ ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನು ನಿಲ್ಲಿಸಿ ಅವರ ಆರೋಗ್ಯವನ್ನು ಅಪಾಯಕ್ಕೆ ಒಡ್ಡುವುದು, ಅವರ ಬಿಡಾರದ ಸುತ್ತ ಅಪಾಯಕಾರಿ ಮಟ್ಟದ ಅನೈರ್ಮಲ್ಯ ಉಂಟಾಗಿ ಅಲ್ಲಿಂದ ಆಚೆ ಹೋಗದಂತೆ ಪೊಲೀಸರು ಬಿಡಾರದಲ್ಲಿದ್ದವರನ್ನು ಪ್ರತಿಬಂಧಿಸುವುದು, ಮತ್ತು ದೇಹದ ಉಷ್ಣತೆ ಇಳಿದ ಕಾರಣದಿಂದ ಕಳೆದ ಎರಡು ತಿಂಗಳಲ್ಲಿ ತಮ್ಮ ಕಣ್ಣಮುಂದೆಯೇ 200 ಮಂದಿ ಸತ್ತಿರುವುದನ್ನು ಈಗಾಗಲೇ ಕಂಡಿರುವ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡುವುದು ಮಾಧ್ಯಮಗಳಿಗೆ ಅಸಾಧ್ಯವಾಗುವಂತೆ ಮಾಡುವುದು, ಇಂತಹ ವಿದ್ಯಮಾನಗಳನ್ನು ಜಗತ್ತಿನ ಯಾವುದೇ ಭಾಗದಲ್ಲಿ ಅನಾಗರಿಕ ಮತ್ತು ಮಾನವ ಹಕ್ಕುಗಳ ಮತ್ತು ಘನತೆಯ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ.
ಆದರೆ, ಭೂಮಿಯ ಮೇಲಿನ ಮಹಾನ್ ರಾಷ್ಟ್ರವನ್ನು ಅವಮಾನಿಸುವ ಜಾಗತಿಕ ಭಯೋತ್ಪಾದಕಿಯರಾದ ರಿಹಾನಾ ಮತ್ತು ಗ್ರೆಟಾ ಥುನ್ಬರ್ಗ್ ಇವರ ಸಂಚನ್ನು ಪುಡಿ ಪುಡಿ ಮಾಡುವುದು ಹೇಗೆ ಎಂಬ ಆತಂಕದಲ್ಲಿ ನಮ್ಮ ಸರ್ಕಾರವು ಪುರಸೊತ್ತಿಲ್ಲದೆ ತೊಳಲಾಡುತ್ತಿದೆ. ಒಂದು ಕಲ್ಪನೆಯಾಗಿಯೂ ಸಹ, ಇದು ಬುದ್ಧಿಗೇಡಿ ಕುಚೋದ್ಯವೇ. ಒಂದು ವಾಸ್ತವವಾಗಿ, ಬುದ್ಧಿಗೇಡಿ ಕೃತ್ಯವೇ.
ಈ ವಿದ್ಯಮಾನಗಳು ಆಘಾತಕಾರಿಯೇ. ಆದರೆ, ಆಶ್ಚರ್ಯಪಡಬೇಕಾದ್ದಿಲ್ಲ. ಕಳವಳಪಡಬೇಕಾದ ವಿಷಯವೆಂದರೆ, ಬೇರೆ ಎಲ್ಲಾ ವಿಷಯಗಳ ಬಗ್ಗೆ ಅರಳು ಹುರಿದಂತೆ ಮಾತನಾಡುವ ಹಲವರು ರೈತರ ಪ್ರತಿಭಟನೆಯ ಬಗ್ಗೆ ವಹಿಸಿರುವ ಜಾಣ ಮೌನ. ಕೇಂದ್ರ ಸಂಪುಟದ ಪ್ರತಿಯೊಬ್ಬ ಸಚಿವರಿಗೂ ರೈತರ ಪ್ರತಿಭಟನೆಗೆ ನಿಜವಾದ ಕಾರಣ ಏನು ಎಂಬುದು ಗೊತ್ತಿದೆ. ಕೃಷಿಯು ರಾಜ್ಯಗಳ ಅಧಿಕಾರದ ವ್ಯಾಪ್ತಿಯಲ್ಲಿದ್ದರೂ ಸಹ, ಈ ಕಾನೂನುಗಳನ್ನು ರೂಪಿಸುವಲ್ಲಿ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ಮಾಡಿಯೇ ಇಲ್ಲ ಎಂಬುದು ಅವರಿಗೆ ಗೊತ್ತಿದೆ. ರೈತರೊಂದಿಗಾಗಲಿ ಅಥವಾ ವಿರೋಧ ಪಕ್ಷಗಳೊಂದಿಗಾಗಲಿ ಅಥವಾ ಸಂಸತ್ತಿನ ಒಳಗೂ ಚರ್ಚೆ ಮಾಡಿಲ್ಲ ಎಂಬುದೂ ಅವರಿಗೆ ಗೊತ್ತಿದೆ. ಈ ಎಲ್ಲವೂ ಬಿಜೆಪಿ ನಾಯಕರಿಗೂ ಗೊತ್ತಿವೆ. ಅವರೊಂದಿಗೂ ರೈತರ ವಿಷಯವನ್ನು ಚರ್ಚಿಸಿಯೇ ಇಲ್ಲ, ಈ ವಿಷಯ ಮಾತ್ರವಲ್ಲ ಇನ್ನೂ ಅನೇಕ ಪ್ರಮುಖ ವಿಷಯಗಳನ್ನೂ ಚರ್ಚಿಸಿಲ್ಲ, ಎಂಬುದೂ ಅವರಿಗೆ ಗೊತ್ತಿದೆ. ಅವರ ಕೆಲಸ ಏನಿದ್ದರೂ, ಉಕ್ಕೇರಿ ಬರುತ್ತಿರುವ ಸಮುದ್ರದ ಅಲೆಗಳನ್ನು ತಮ್ಮ ನಾಯಕ ಆಜ್ಞೆ ಮಾಡಿದಾಗ ಹಿಮ್ಮೆಟ್ಟಿಸುವುದು ಮಾತ್ರ.
ಉತ್ತರ ಪ್ರದೇಶದಲ್ಲಿ ದೈತ್ಯ ಪ್ರತಿಭಟನೆಗಳು ನಡೆಯುತ್ತಿವೆ. ಸರ್ಕಾರವು ರಾಕೇಶ್ ಟಿಕಾಯಿತ್ ಅವರನ್ನು ಹೆಡೆಮುರಿ ಕಟ್ಟಿ ಬಿಸಾಡುವ ಪ್ರಯತ್ನಗಳ ಮೊದಲು ವಾಮನನಂತಿದ್ದ ಅವರ ವ್ಯಕ್ತಿತ್ವ ಇಂದು ತ್ರಿವಿಕ್ರಮನಂತಿದೆ. ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ, ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ. ಹರಿಯಾಣ ರಾಜ್ಯ ಸರ್ಕಾರವು ಏದುಸಿರು ಬಿಡುತ್ತಿದೆ. ಅಲ್ಲಿನ ಸಾರ್ವಜನಿಕ ಸಭೆಗಳಲ್ಲಿ ಮುಖ್ಯ ಮಂತ್ರಿಗಳು ಸ್ವತಃ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅಷ್ಟು ಮಟ್ಟಿಗೆ ಜನರು ಸಿಡಿದೆದ್ದಿದ್ದಾರೆ. ಪಂಜಾಬಿನಲ್ಲಿ, ಪ್ರತಿ ಮನೆಯೂ ಪ್ರತಿಭಟನೆಯೊಂದಿಗೆ ಗುರುತಿಸಿಕೊಂಡಿದೆ. ಇನ್ನೂ ಅನೇಕ ಮಂದಿ ಯುವಕರು ಪ್ರತಿಭಟನಾ ಕ್ಯಾಂಪ್ ಸೇರಿಕೊಳ್ಳಲು ಚಡಪಡಿಸುತ್ತಿದ್ದಾರೆ. ಪಂಜಾಬಿನಲ್ಲಿ ನವೆಂಬರ್ 14ರಂದು ನಡೆಯಲಿರುವ ಸ್ಥಳೀಯ ನಗರ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ.
ಈ ಸರ್ಕಾರದ ಒಂದು ವಿಸ್ಮಯಕರ ಸಾಧನೆಯೆಂದರೆ, ರೈತರು ಮತ್ತು ಕಮಿಷನ್ ಏಜೆಂಟ್ ರಂತಹ ಕೆಲವು ಸಾಂಪ್ರದಾಯಿಕ ವಿರೋಧಿಗಳೂ ಸೇರಿದಂತೆ, ಸಾಮಾಜಿಕ ಶಕ್ತಿಗಳ ಒಂದು ಬೃಹತ್ ಮತ್ತು ಅಸಂಭವನೀಯ ಸಮುದಾಯವನ್ನು ಒಗ್ಗೂಡಿಸಿದೆ. ಅದರಾಚೆಗೆ, ಸಿಖ್ಖರು, ಹಿಂದೂಗಳು, ಮುಸ್ಲಿಮರು, ಜಾಟರು ಮತ್ತು ಜಾಟೇತರರನ್ನು, ಖಾಪ್ ಪಂಚಾಯತ್ಗಳನ್ನು ಮತ್ತು ಖಾನ್ ಮಾರ್ಕೆಟ್ ಗಿರಾಕಿಗಳೆಂಬ ಅವಹೇಳನಕ್ಕೆ ಒಳಗಾಗಿದ್ದವರನ್ನು- ಈ ಎಲ್ಲರನ್ನೂ ಒಗ್ಗೂಡಿಸಿದೆ.
ಇದು ತಮಾಷೆಯಾಗಿ ಕಾಣುತ್ತದೆ – ಮಾಧ್ಯಮಗಳಲ್ಲಿ ಏರು ದನಿಯಲ್ಲಿ ಭಕ್ತರು ಹೇಳುತ್ತಾರೆ: ದಿಲ್ಲಿಯ ಗಡಿಗಳಲ್ಲಿ ಸುಧಾರಣೆಗಳನ್ನು ವಿರೋಧಿಸುತ್ತಿರುವವರು, ಲೋಹದ ತಳ್ಳುಗಾಡಿಗಳಲ್ಲಿ 2 ಡಿಗ್ರಿ ಅಥವಾ ಅದಕ್ಕೂ ಕೆಳಗಿನ ತಾಪಮಾನದಲ್ಲಿ ಮಲಗಿರುವವರು, 5-6 ಡಿಗ್ರಿಯ ಛಳಿಯಲ್ಲಿ ಬಯಲಿನಲ್ಲಿ ಸ್ನಾನ ಮಾಡುವವರು ಈ ಎಲ್ಲರೂ “ಶ್ರೀಮಂತ ರೈತರು” ಎಂದು. ಎಂತಹ ಮೋಹಕ ಮಾತು! ಕಳೆದ ಎನ್.ಎಸ್.ಎಸ್ ಸಮೀಕ್ಷೆಯ ಪ್ರಕಾರ, ಪಂಜಾಬ್ನ ಕೃಷಿ ಕುಟುಂಬವೊಂದರ ಸರಾಸರಿ ಮಾಸಿಕ ಆದಾಯವು 18,059 ರೂ ಇತ್ತು. ಪ್ರತಿ ಕೃಷಿ ಕುಟುಂಬದ ಸದಸ್ಯರ ಸರಾಸರಿ ಸಂಖ್ಯೆಯು 5.24, ಅಂದರೆ ಮಾಸಿಕ ತಲಾ ಆದಾಯವು ಸುಮಾರು 3,450 ರೂ ಆಗುತ್ತದೆ. ಇದು, ಸಂಘಟಿತ ವಲಯದ ಅತಿ ಕಡಿಮೆ ವೇತನ ಪಡೆಯುವ ಉದ್ಯೋಗಿಗಿಂತಲೂ ಕಡಿಮೆ.
ಆಹಾ! ಅವರ ಬಳಿ ಇಷ್ಟೊಂದು ಸಂಪತ್ತು! ಪಂಜಾಬಿನ ಬಗ್ಗೆ ತಿಳಿಸಿದ ಇದೇ ಅಂಕಿ-ಆಂಶಗಳನ್ನು ಹರಿಯಾಣಕ್ಕೆ ಅನ್ವಯಿಸಿ ಹೇಳುವುದಾದರೆ, ಪ್ರತಿ ಕೃಷಿ ಕುಟುಂಬದ ಸದಸ್ಯರ ಸರಾಸರಿ ಸಂಖ್ಯೆ – 5.9; ಸರಾಸರಿ ಮಾಸಿಕ ಆದಾಯ 14,434 ರೂ; ತಲಾ ಆದಾಯ 2,450 ರೂಗಳು.
ಇಂತಹ ಆದಾಯ ಸಂಖ್ಯೆಗಳೂ ಭಾರತದ ಇತರ ರಾಜ್ಯಗಳ ರೈತರ ಆದಾಯಗಳಿಗೆ ಹೋಲಿಸಿದಾಗ ಉತ್ತಮವಾಗಿಯೇ ಕಾಣುತ್ತವೆ.
ಗುಜರಾತ್ನಲ್ಲಿ ಕೃಷಿ ಕುಟುಂಬದ ಸರಾಸರಿ ಮಾಸಿಕ ಆದಾಯ 7,926 ರೂಗಳು; ಕುಟುಂಬದ ಸದಸ್ಯರ ಸರಾಸರಿ ಸಂಖ್ಯೆ 5.2; ಕುಟುಂಬದ ತಲಾ ಮಾಸಿಕ ಆದಾಯ 1,524 ರೂಗಳು.
ಅಖಿಲ ಭಾರತದ ಮಟ್ಟದಲ್ಲಿ, ರೈತ ಕುಟುಂಬದ ಸರಾಸರಿ ಮಾಸಿಕ ಆದಾಯ 6,426 ರೂಗಳು; ತಲಾ ಮಾಸಿಕ ಆದಾಯ ಸುಮಾರು 1,300 ರೂಗಳು.
ಅಂದಹಾಗೆ, ಈ ಎಲ್ಲಾ ಸರಾಸರಿ ಮಾಸಿಕ ಆದಾಯದ ಅಂಕಿಗಳು ಎಲ್ಲಾ ಮೂಲಗಳಿಂದಲೂ ಬರುವ ಆದಾಯಗಳನ್ನು ಒಳಗೊಂಡಿರುತ್ತವೆ. ಕೇವಲ ಕೃಷಿಯಿಂದ ಮಾತ್ರವಲ್ಲ, ಜಾನುವಾರು ಸಾಕಣೆ, ಕೃಷಿಯೇತರ ವ್ಯಾಪಾರ, ಕೂಲಿ, ಸಂಬಳ ಮುಂತಾದವುಗಳಿಂದ ಬರುವ ಎಲ್ಲ ಆದಾಯವೂ ಅದರಲ್ಲಿ ಸೇರಿಕೊಂಡಿದೆ.
ಪ್ರತಿಭಟನಾ ನಿರತ ರೈತರನ್ನು ಬೆದರಿಸುವ ಮತ್ತು ಭಯಹುಟ್ಟಿಸುವ ಪ್ರತಿಯೊಂದು ಪ್ರಯತ್ನವೂ ಪ್ರತಿಭಟಿಸುವ ರೈತರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇದೆ. ಅವರ ಹೆಸರು ಕೆಡಿಸುವ ಪ್ರತಿಯೊಂದು ಕೃತ್ಯವೂ ಗೋದೀ(ಆಸ್ಥಾನ) ಮಾಧ್ಯಮಗಳಲ್ಲಿ ಭಾರಿ ಸೆಳೆತ ಹೊಂದಿರುವಂತೆ ತೋರುತ್ತದೆಯಾದರೂ ವಾಸ್ತವವಾಗಿ ವ್ಯತಿರಿಕ್ತ ಪರಿಣಾಮವನ್ನೇ ಬೀರಿದೆ. ಆದರೂ, ಭಯಾನಕವಾಗಿ ತೋರುವ ಅಂಶವೆಂದರೆ, ಸರ್ಕಾರದ ನಿರಂಕುಶ ಪ್ರವೃತ್ತಿ ಮತ್ತು ಅದರ ಬಲ ಪ್ರಯೋಗದ ಕ್ರೂರ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲಾಗಿಲ್ಲ.
ಬಹುಶಃ ಈ ವಿವಾದದಲ್ಲಿ ಎದುರಾಗಿರುವ ದುಸ್ತರವಾದ ಒಂದು ಅಡಚಣೆಯೆಂದರೆ ಅದು ವೈಯಕ್ತಿಕ ಅಹಂ ಎಂಬುದು ಕಾರ್ಪೊರೇಟ್ ಮಾಧ್ಯಮದ ಅನೇಕರಿಗೆ ತಿಳಿದಿದೆ. ಬಿಜೆಪಿಯೊಳಗಿನ ಅನೇಕರಿಗೆ ಅದು ಇನ್ನೂ ಚೆನ್ನಾಗಿ ತಿಳಿದಿದೆ. ನೀತಿಗಳಿಗೆ ಸಂಬಂಧಿಸಿದ ವಿಷಯವೂ ಅಲ್ಲ, ಅತಿ ಶ್ರೀಮಂತ ಕಾರ್ಪೊರೇಟ್ಗಳಿಗೆ ನೀಡಿದ ಭರವಸೆಗಳೂ ಅಲ್ಲ, ಕಾನೂನಿನ ಪಾವಿತ್ರ್ಯತೆಯೂ ಅಲ್ಲ. ಅದೇನೆಂದರೆ, ದೊರೆ ಮಾಡಿದ್ದಕ್ಕೆ ದಂಡವಿಲ್ಲ, ಅಷ್ಟೇ. ದೊರೆ ಯಾವ ತಪ್ಪನ್ನೂ ಮಾಡಲಾರ. ಈ ಬಗ್ಗೆ ದೊಡ್ಡ ದೊಡ್ಡ ದಿನಪತ್ರಿಕೆಗಳಲ್ಲಿ ಒಂದೇ ಒಂದು ಸಂಪಾದಕೀಯವೂ ಇಲ್ಲ. ಗೊತ್ತಿದ್ದರೂ ಅವರು ಪಿಸುಗುಡುತ್ತಿಲ್ಲ.
ಈ ಗೊಂದಲದ ವಾತಾವರಣದಲ್ಲಿ ಅಹಂ ಎಷ್ಟು ಮುಖ್ಯ? ರೈತರ ಬಿಡಾರದಲ್ಲಿ ಇಂಟರ್ನೆಟ್ ಬಂದ್ ಮಾಡಿದ್ದರ ಬಗ್ಗೆ ಅಮೇರಿಕಾದ ಒಬ್ಬ ಪಾಪ್ ಹಾಡುಗಾರ್ತಿ ರಿಹಾನಾ ಬಹಳ ಸರಳ ಟ್ವೀಟ್ ಮಾಡಿದ್ದಳು-“ನಾವು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ?” ಇದಕ್ಕಿಂತ ಒಂದು ಅಕ್ಷರ ಹೆಚ್ಚೂ ಇಲ್ಲ; ಕಡಿಮೆಯೂ ಇಲ್ಲ. ಅವಳು ಯಾರನ್ನೂ ದೂಷಿಸಿರಲೂ ಇಲ್ಲ ಮತ್ತು ಕೃಷಿ ಕಾನೂನುಗಳ ಬಗ್ಗೆ ಯಾವ ನಿಲುವನ್ನೂ ಪ್ರಕಟಿಸಿರಲಿಲ್ಲ – ಕೃಷಿ ಕಾನೂನುಗಳನ್ನು ಬಹಿರಂಗವಾಗಿ ಶ್ಲಾಘಿಸಿದ ಐಎಂಎಫ್ ನ ಮುಖ್ಯ ಅರ್ಥಶಾಸ್ತ್ರಜ್ಞಳಂತಲ್ಲದೆ.
ಸ್ವೀಡನ್ನಿನ ಹದಿನೆಂಟು ವಯಸ್ಸಿನ ಶಾಲಾ ಬಾಲಕಿ-ಪರಿಸರವಾದಿ ಗ್ರೇಟಾ ಥುನ್ಬರ್ಗ್ ಕೂಡ ತನ್ನ ಟ್ವೀಟ್ ಮೂಲಕ ರೈತರ ಪ್ರತಿಭಟನೆಯ ಮೂಲಭೂತ ಹಕ್ಕುಗಳನ್ನು ಸಮರ್ಥಿಸಿದ್ದಳು.
ಇಲ್ಲ. ಕಲಾವಿದೆ ರಿಹಾನಾ ಮತ್ತು ಪರಿಸರವಾದಿ ಗ್ರೇಟಾ ಥುನ್ಬರ್ಗ್ ಅಪಾಯಕಾರಿ ವ್ಯಕ್ತಿಗಳು! ಅವರು ದಯೆ-ದಾಕ್ಷಿಣ್ಯಕ್ಕೆ ಅರ್ಹರಲ್ಲ. ದೆಹಲಿ ಪೊಲೀಸರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈಗ ಈಗ ಅದು ಜಾಗತಿಕ ಮಟ್ಟದ್ದು. ನಾಳೆ ಅವರು ನಭೋ ಮಂಡಲದ್ದು ಎಂದು ಅವರು ಕಂಡುಕೊಂಡರೆ, ನಾನೇನೂ ಅವರನ್ನು ಅಪಹಾಸ್ಯ ಮಾಡಲಾರೆ. ಅಂತರ್ಜಾಲದ ಬಗ್ಗೆ ನನಗೆ ಬಹಳ ಹಿಡಿಸಿದ ಮಾತೊಂದಿದೆ: “ನಮ್ಮ ಭೂಮಂಡಲದ ಹೊರಗೆ ಬುದ್ಧಿಮತ್ತೆ ಇದೆ ಎಂಬುದಕ್ಕೆ, ಅವರು ನಮ್ಮಷ್ಟಕ್ಕೆ ಇರಲು ನಮ್ಮನ್ನು ಬಿಟ್ಟಿದ್ದಾರೆ ಎಂಬುದೇ ಒಂದು ಖಚಿತ ಪರಾವೆ”!
(ದಿ ವೈರ್, ಫೆಬ್ರುವರಿ 6–ಸಂಗ್ರಹಾನುವಾದ: ಕೆ.ಎಂ.ನಾಗರಾಜ್)