ರಾಜ್ಯಸಭೆಗೆ 12 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎನ್ ಡಿಎ ನೇತೃತ್ವದ ಆಡಳಿತ ಪಕ್ಷ ಬಹುಮತದ ಗಡಿಯನ್ನು ಸ್ಪರ್ಶಿಸಿದೆ.
ಬಿಜೆಪಿಯ 9 ಸದಸ್ಯರು ಹಾಗೂ ಎನ್ ಡಿಎ ಮೈತ್ರಿಕೂಟದ ಎರಡು ಪಕ್ಷಗಳು ತಲಾ 1 ಸ್ಥಾನದಲ್ಲಿ ಜಯ ಸಾಧಿಸುವ ಮೂಲಕ 11 ರಾಜ್ಯಸಭಾ ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿತು. ಪ್ರತಿಪಕ್ಷ ಕಾಂಗ್ರೆಸ್ 1 ಸ್ಥಾನದಲ್ಲಿ ಗೆಲುವು ಕಂಡಿದೆ.
ಬಿಜೆಪಿ 9, ಎನ್ ಡಿಎ ಮೈತ್ರಿಕೂಟದ ಅಜಿತ್ ಪವಾರ್ ಬಣದ ಎನ್ ಸಿಪಿ ಪಕ್ಷದ ಒಬ್ಬ ಸದಸ್ಯ ಹಾಗೂ ರಾಷ್ಟ್ರೀಯ ಲೋಕ್ ಮಂಚ್ ಪಕ್ಷದ ಒಬ್ಬ ಸದಸ್ಯ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎನ್ ಡಿಎಗೆ ಪಕ್ಷೇತರ 6 ಸದಸ್ಯರು ಬೆಂಬಲ ಸೇರಿದಂತೆ ಎನ್ ಡಿಎ ಬಲ 112 ಆಗಿದ್ದು, ಬಹುಮತಕ್ಕೆ ಅಗತ್ಯವಾದ ಗಡಿಯನ್ನು ತಲುಪಿದೆ.
ಪ್ರತಿಪಕ್ಷ ಕಾಂಗ್ರೆಸ್ 1 ಸ್ಥಾನದಲ್ಲಿ ಗೆಲುವು ಕಂಡಿದ್ದು, ಪ್ರತಿಪಕ್ಷಗಳ ಒಟ್ಟಾರೆ ಬಲ 85ಕ್ಕೆ ಏರಿಕೆಯಾಗಿದೆ. ರಾಜ್ಯಸಭೆಯಲ್ಲಿ ಒಟ್ಟು 245 ಸ್ಥಾನಗಳಿದ್ದು, ಪ್ರಸ್ತುತ 237 ಸದಸ್ಯರನ್ನು ಹೊಂದಿದೆ. ಜಮ್ಮು ಕಾಶ್ಮೀರದ 6 ಸ್ಥಾನಗಳು ಖಾಲಿ ಇದ್ದು, ಇವು ಸೇರಿದರೆ ಬಹುಮತಕ್ಕೆ 119 ಸ್ಥಾನದ ಬಲ ಬೇಕಿದೆ.
ಅಸ್ಸಾಂನಿಂದ ಮಿಷನ್ ರಂಜನ್ ದಾಸ್ ಮತ್ತು ರಾಮೇಶ್ವರ್ ತೇಲಿ, ಬಿಹಾರದಿಂದ ಮನನ್ ಕುಮಾರ್ ಮಿಶ್ರಾ, ಹರಿಯಾಣದಿಂದ ಕಿರಣ್ ಚಾಧರಿ, ಮಧ್ಯಪ್ರದೇಶದಿಂದ ಜಾರ್ಜ್ ಕುರಿಯನ್, ಮಹಾರಾಷ್ಟ್ರದಿಂದ ಧೀರ್ಯಾ ಶೀಲ್ ಪಾಟೀಲ್, ಒಡಿಶಾದಿಂದ ಮಮತಾ ಮೊಹಾಂತ, ರಾಜಸ್ಥಾನದಿಂದ ರವನೀತ್ ಸಿಂಗ್ ಬಿಟ್ಟು ಮತ್ತು ರಾಜೀವ್ ಮತ್ತು ತ್ರಿಪುರಾದ ಭಟ್ಟಾಚಾರ್ಯ ಬಿಜೆಪಿಯಿಂದ ರಾಜ್ಯಸಭೆಗೆ ಅವಿರೋಧವಾಗಿ ಪ್ರವೇಶಿಸಿದ್ದಾರೆ.
ತೆಲಂಗಾಣದಿಂದ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎನ್‌ಸಿಪಿ ಅಜಿತ್ ಪವಾರ್ ಬಣದ ನಿತಿನ್ ಪಾಟೀಲ್ ಮಹಾರಾಷ್ಟ್ರದಿಂದ ಮತ್ತು ಆರ್‌ಎಲ್‌ಎಂನ ಉಪದೇಂದ್ರ ಕುಶ್ವಾಹಾ ಬಿಹಾರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.