ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರವರ ಕ್ರಮಗಳು ಎಲ್ಲಾ ಸಾಂವಿಧಾನಿಕ ಮಿತಿಗಳನ್ನು ಮೀರಿ ಹೋಗುತ್ತಿವೆ, ಅವು ರಾಜ್ಯಪಾಲರ ಹುದ್ದೆಯ ಘನತೆಗೆ ಸರಿಹೊಂದುವುದಿಲ್ಲ. ರಾಜ್ಯಪಾಲರುಗಳು ಕೇಂದ್ರ ಸರಕಾರದ ಏಜೆಂಟರಂತೆ ಕೆಲಸ ಮಾಡಬಾರದು ಎಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ. ಸಪ್ಟೆಂಬರ್ 20ರಂದು ರಾಜ್ಯಪಾಲರು ತಮ್ಮಅಧಿಕೃತ ನಿವಾಸವಾದ ‘ರಾಜಭವನ’ದಲ್ಲೇ ಒಂದು ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದರು. ಇದಕ್ಕೆ ತಕ್ಕ ಉತ್ತರ ನೀಡಲು ಮುಖ್ಯಮಂತ್ರಿಗಳು ಕರೆದ ಪತ್ರಿಕಾಗೋಷ್ಠಿಯಲ್ಲಿಅವರು ಈ ಟೀಕೆ ಮಾಡಿದರು.
ಸಂವಿಧಾನದ ಪ್ರಕಾರ ರಾಜ್ಯಪಾಲರು ರಾಜ್ಯದ ಸಂವಿಧಾನಿಕ ಮುಖ್ಯಸ್ಥರಷ್ಟೇ, ಕಾರ್ಯಕಾರಿ ಅಧಿಕಾರ ಚುನಾಯಿತ ಸರಕಾರದ್ದು, ರಾಜ್ಯಪಾಲರು ರಾಜ್ಯ ಸಂಪುಟದ ನೆರವು ಮತ್ತು ಸಲಹೆ ಯಂತೆ ಕೆಲಸ ಮಾಡಬೇಕು ಎಂದು ಸಂವಿಧಾನ ವಿಧಿಸುತ್ತದೆ, ರಾಜ್ಯಪಾಲರಿಗೆ ಸಂಪುಟದ ನಿರ್ಧಾರವನ್ನುತಿರಸ್ಕರಿಸುವ ಹಕ್ಕು ಇಲ್ಲ ಎಂದು ಸುಪ್ರಿಂ ಕೋರ್ಟ್ ಕೂಡ ಸ್ಪಷ್ಟವಾಗಿ ಹೇಳಿದೆ; ಅವರೇನೂ ಕೇಂದ್ರ ಸರಕಾರದ ನೌಕರನಲ್ಲಅಥವ ಏಜೆಂಟ್ ಅಲ್ಲ ಎಂದೂ ಅದು ಹೇಳಿದೆ ಎಂದು ಪಿಣರಾಯಿ ವಿಜಯನ್ ನೆನಪಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ರಾಜ್ಯಪಾಲರು ಆರ್‌ಎಸ್‌ಎಸ್ ಮೇಲೆ ಹೊಗಳಿಕೆಯ ಮಳೆಗರೆದರು, ಸಂವಿಧಾನಿಕ ಸ್ಥಾನದಲ್ಲಿರುವ ಅವರು ತಾನೊಬ್ಬ ಆರೆಸ್ಸೆಸ್ ಬೆಂಬಲಿಗ ಎಂದು ಹೇಳುವುದು ಸರಿಯೇ ಎಂದು ಅವರು ಮತ್ತು ಅವರ ಸಹಾಯಕರು ಸ್ಪಷ್ಟಪಡಿಸಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ತಾನು 1986ರಿಂದ ಅದರ ಜೊತೆಗಿದ್ದೇನೆ ಎಂದೂ ಅವರು ಹೇಳಿದರು. 1963ರಲ್ಲಿ ಆಗಿನ ಪ್ರಧಾನ ಮಂತ್ರಿ ನೆಹರೂ ರವರು ಗಣತಂತ್ರದಿನದ ಪರೇಡಿನಲ್ಲಿ ಭಾಗವಹಿಸಲು ಆರೆಸ್ಸೆಸ್‌ಗೆ ಆಹ್ವಾನ ನೀಡಿದ್ದರು ಎನ್ನುತ್ತ ಅದರೊಂದಿಗೆ ತನ್ನ ಸಂಪರ್ಕವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಇದು ನಿಜವೇ? ಆರೆಸ್ಸೆಸ್ ಹೀಗೆ ಗಣತಂತ್ರ ದಿನದ ಪರೇಡಿನಲ್ಲಿ ಭಾಗವಹಿಸಿದ ದಾಖಲೆಯೇನೂ ಇಲ್ಲ ಎಂದು 2018ರಲ್ಲಿ ಇಂಡಿಯಾ ಟುಡೇ ಪತ್ರಿಕೆಯ ಆರ್‌ಟಿಐ ಪ್ರಶ್ನೆಗೆ ಉತ್ತರಿಸುತ್ತ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಗೃಹ ಮಂತ್ರಾಲಯವೇ ಹೇಳಿದೆ. ಬಹುಶಃ ಈ ಸುಳ್ಳು ಮಾಹಿತಿಯನ್ನುಅವರು ಸಂಘ ಪರಿವಾದ ವಾಟ್ಸ್ಆಪ್ ಗುಂಪುಗಳಿಂದ ಸಂಗ್ರಹಿಸಿರಬೇಕು ಎಂದು ವಿಜಯನ್ ವ್ಯಂಗ್ಯವಾಡಿದರು.
ಆರಿಫ್ ಮಹಮ್ಮದ್‌ಖಾನ್ ಅವರು ಆಗ ವಿ ಪಿಸಿಂಗ್ ರವರ ಕೇಂದ್ರ ಸಂಪುಟದಲ್ಲಿ ಮಂತ್ರಿಗಳಾಗಿದ್ದರು. 1990ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಆ ಸರಕಾರವನ್ನು ಉರುಳಿಸಿದರು. ಆರೆಸ್ಸೆಸ್ ಮಂಡಲ ಆಯೋಗದ ಪ್ರಶ್ನೆಯನ್ನೆತ್ತಿ ಅವರಿದ್ದ ಸರಕಾರವನ್ನು ಪದಚ್ಯುತಗೊಳಿಸಿತ್ತ್ತು.ಅಂದರೆ ಅವರು ತಾನು ಮಂತ್ರಿಯಾಗಿದ್ದ ಸರಕಾರವನ್ನೇ ಉರುಳಿಸಿದವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪ್ರಕಟ ಪಡಿಸುತ್ತಿದ್ದಾರೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಕೇರಳದ ಸಮಾಜ ಮತ್ತು ಎಡಪಂಥೀಯರಿಗೆ ಆರೆಸ್ಸೆಸ್ ಬಗ್ಗೆ ಒಂದು ಖಚಿತವಾದನಿ ಲುವಿದೆ. ಅದುಕೋಮುವಾದ, ದ್ವೇಷ ಮತ್ತು ಸಂಕುಚಿತವಾದದ ಪ್ರತಿಪಾದಕ ಎಂದು ಪರಿಗಣಿಸುತ್ತಾರೆ. ಅದನ್ನು ಗಾಂಧೀಜಿಯ ಹತ್ಯೆಯಾದಾಗ ನಿಷೇಧಿಸಲಾಗಿತ್ತು. ಕೇರಳದ ರಾಜಕೀಯ ಕೊಲೆಗಳ ಬಗ್ಗೆ ಚಿಂತಿತರಾಗಿರುವ ರಾಜ್ಯಪಾಲರು ಈ ಕೊಲೆಗಳು, ಸಂಘರ್ಷಗಳಲ್ಲಿ ಸದಾ ಭಾಗಿಯಾಗಿದ್ದ ಆರೆಸ್ಸೆಸ್ಸನ್ನು ವೈಭವೀಕರಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಪ್ರಜ್ಞೆ ಮತ್ತು ಸಂವಿಧಾನವು ಎತ್ತಿ ಹಿಡಿದ ಮೂಲ ಮೌಲ್ಯಗಳಲ್ಲಿ ನಂಬಿಕೆ ಹೊಂದಿರುವ ಯಾರೂ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ವಿಜಯನ್ ಹೇಳಿದರು.
ಆರೆಸ್ಸೆಸ್‌ನ ಆರು ಒಟಿಸಿಗಳಲ್ಲಿ ತಾನು ಮುಖ್ಯ ಅತಿಥಿಯಾಗಿದ್ದೆ ಎಂದು ರಾಜ್ಯಪಾಲರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಬೆನ್ನು ತಟ್ಟಿಕೊಂಡರು. ಈ ಒಟಿಸಿ (ಆಫೀಸರ್ ಟ್ರೈನಿಂಗ್ ಕ್ಯಾಂಪ್)ಗಳು ಆರೆಸ್ಸೆಸ್‌ನ ಸಂಘಟನಾ ತರಬೇತಿ ಪ್ರಕ್ರಿಯೆಯಲ್ಲಿ ಬಹಳ ಮಹತ್ವ ಪಡೆದಿವೆ. ಇಂತಹ ಮೊದಲನೆ, ಎರಡನೇ ಮತ್ತು ಮೂರನೇ ಹಂತದ ಒಟಿಸಿಗಳನ್ನು ಪೂರ್ಣಗೊಳಿಸಿದ ವ್ಯಕ್ತಿಗಳು ಕೇರಳದ ಹಲವು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ನೆನಪಿಸಿದ ಮುಖ್ಯಮಂತ್ರಿಗಳು ಈ ರಾಜ್ಯಪಾಲರು ಈಗ ಏನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯ ಬೇಕೇ ಎಂದು ಖಾರವಾಗಿ ಪ್ರಶ್ನಿಸಿದರು.
ಮೂರು ವರ್ಷಗಳ ಹಿಂದೆ ಕಣ್ಣೂರಿನಲ್ಲಿ ನಡೆದ‘ಇತಿಹಾಸ ಮಹಾಧಿವೇಶನ’ದಲ್ಲಿ ನಡೆದ ಘಟನೆಯ ಬಗ್ಗೆ ರಾಜ್ಯಪಾಲರು ಭಾವುಕರಾಗಿ ಮಾತಾಡಿದ್ದಾರೆ. ಪೌರತ್ವವನ್ನು ಧರ್ಮಕ್ಕೆ ಜೋಡಿಸುವ ಸಿಎಎ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಈ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಪ್ರಸಿದ್ಧ ಇತಿಹಾಸಕಾರ ಪ್ರೊ.ಇರ್ಫಾನ್ ಹಬೀಬ್ ಹಿಂದುತ್ವದ ಅಜೆಂಡಾವನ್ನು ಬಯಲಿಗೆಳೆದರು. ರಾಜ್ಯಪಾಲರು ಅಲ್ಲಿ ಸಿಎಎ ಪರವಾಗಿ ಮಾತಾಡಿದಾಗ ಸಹಜವಾಗಿ ಅಧ್ಯಯನಶೀಲ ಸಭಿಕರಿಂದ ವಿರೋಧಗಳು ವ್ಯಕ್ತವಾದವು. ಅಂತರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರರನ್ನು ಈ ರಾಜ್ಯಪಾಲ ‘ಗೂಂಡಾ’ ಎಂದು ಕರೆದಿದ್ದಾರೆ, 92 ವರ್ಷದ ಅವರು ತನ್ನ ಕೊಲೆಗೆ ಪ್ರಯತ್ನಿಸಿದವರು ಎಂಬ ಹಾಸ್ಯಾಸ್ಪದ ಆರೋಪ ಮಾಡಿದ್ದಾರೆ. ಅದೇ ರೀತಿಯಲ್ಲಿ ಇತಿಹಾಸವನ್ನು ತಿರುಚುವುದನ್ನು ವಿರೋಧಿಸುತ್ತ ಬಂದಿರುವ ಕಣ್ಣೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಗೋಪೀನಾಥ ರವೀಂದ್ರನ್ಅವರನ್ನು ‘ಕ್ರಿಮಿನಲ್’ ಎಂದು ಕರೆದಿದ್ದಾರೆ. ಇವರಿಬ್ಬರೂ ಆರೆಸ್ಸೆಸ್‌ನ ದ್ವೇಷ ಪಟ್ಟಿಯಲ್ಲಿರುವವರು. ಅವರ ದ್ವೇಷವನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಒಂದು ರಾಜ್ಯದ ಸಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಆದಾಳಿಯ ಅಸ್ತ್ರವಾಗುವದು ಹೇಗೆ ಸಾಧ್ಯ ಎಂದು ಪಿಣರಾಯಿ ವಿಜಯನ್ ತಮ್ಮ ಪತ್ರಿಕಾ ಗೋಷ್ಠಿಯಲ್ಲಿ ಪ್ರಶ್ನಿಸಿದರು. ಡಾ.ಗೋಪಿನಾಥ್ ರವೀಂದ್ರನ್ ಅವರನ್ನು ಆರ್‌ಎಸ್‌ಎಸ್‌ನ ಉಪಕುಲಪತಿಯಾಗಿ ಮರು ನೇಮಕ ಮಾಡುವ ನಿರ್ಧಾರವನ್ನುಅವರು ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ, ದೇಶಾದ್ಯಂತ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವೆ ನಡೆಯುತ್ತಿರುವ ವಿವಾದದಲ್ಲಿ ಪ್ರಮುಖ ಅಂಶವೆಂದರೆ ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳ ನೇಮಕ ಎಂಬ ಸಂಗತಿಯತ್ತ ಅವರು ಗಮನ ಸೆಳೆದರು. ಉನ್ನತ ಶಿಕ್ಷಣ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿ ಆ ಮೂಲಕ ಭಾರತದಲ್ಲಿ ತಮಗೆ ಬೇಕಾದ ಇತಿಹಾಸವನ್ನು ತಮ್ಮದೇ ಆದರೀತಿಯಲ್ಲಿ ಸೃಷ್ಟಿಸುವುದು ಸಂಘ ಪರಿವಾರದ ಅಜೆಂಡಾ. ಅವರಿಗೆ ವಿಶ್ವವಿದ್ಯಾನಿಲಯಗಳು ಅವರ ರಾಜಕೀಯ ಪ್ರಯೋಗ ಶಾಲೆಗಳು. ರಾಜಸ್ಥಾನ, ತಮಿಳುನಾಡು ಮತ್ತು ಬಂಗಾಳದಲ್ಲಿ ಎಲ್ಲಾ ರಾಜ್ಯಪಾಲರು ರಾಜ್ಯ ಸರಕಾರದ ಹಣದಿಂದ ನಡೆಯುತ್ತಿರುವ ವಿಶ್ವವಿದ್ಯಾನಿಲಯಗಳಲ್ಲಿಯೂ ಸಂಘ ಪರಿವಾರದ ಸಂಪರ್ಕ ಹೊಂದಿರುವ ಉಪಕುಲಪತಿಗಳನ್ನು ನೇಮಿಸಲು, ಅವರ ಮೂಲಕ ಅವುಗಳಲ್ಲಿ ಸಂಘ ಪರಿವಾರದವರನ್ನುತುಂಬಿಸಲು ಪ್ರಯತ್ನಿಸುತ್ತಿದ್ದಾರೆ. ಕೇರಳದಲ್ಲಿ ಹಾಗೆ ಮಾಡುವ ಯಾವುದೇ ಪ್ರಯತ್ನವನ್ನು ಬಲವಾಗಿ ವಿರೋಧಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಸರಕಾರದ ಕಾಳಜಿ ಇರುವುದು ಜನತೆ ಮತ್ತು ಈ ದೇಶದ ಬಗ್ಗೆ. ರಾಜ್ಯಪಾಲರೊಡನೆ ಸಂಘರ್ಷದ ನಿಲುವು ತಮ್ಮ ಸರಕಾರದ್ದಲ್ಲ. ಭಿನ್ನಾಭಿಪ್ರಾಯಗಳು ಇರಬಹುದು. ಅವನ್ನು ವ್ಯಕ್ತಪಡಿಸುವ ವಿಧಾನಗಳನ್ನು ಸಂವಿಧಾನ, ನಿಯಮಾವಳಿಗಳು ನಮೂದಿಸಿವೆ. ಇವನ್ನು ಅನುಸರಿಸುವ ಬದಲು ರಾಜಭವನದಲ್ಲಿ ಪತ್ರಿಕಾಗೋಷ್ಠಿ ಕರೆದಿರುವುದು ಕೇರಳದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಅಸಾಮಾನ್ಯ ಘಟನೆಯಾಗಿದೆ. ಆದ್ದರಿಂದಲೇ ಈ ಪತ್ರಿಕಾಗೋಷ್ಠಿಯನ್ನು ಕರೆಯಲಾಯಿತು ಎಂದು ಮುಖ್ಯಮಂತ್ರಿಗಳು ಹೇಳಿದರು.