ರಾಜ್ಯದ ಹಣಕಾಸು ಸ್ಥಿತಿಗತಿ: ಕೇಂದ್ರದಿಂದ ಅನ್ಯಾಯ

ಇಂದು ಕೇಂದ್ರವು ತನ್ನ ಸಂಪನ್ಮೂಲವನ್ನು ರಾಜ್ಯದ ಜೊತೆ ಹಂಚಿಕೊಳ್ಳುವಲ್ಲಿ ಅನ್ಯಾಯ ಮತ್ತು ತಾರತಮ್ಯ ಮಾಡುತ್ತಿರುವುದರಿಂದ ರಾಜ್ಯದ ಹಣಕಾಸು ಸ್ಥಿತಿಯು ಹದಗೆಡುತ್ತಾ ನಡೆದಿದೆ. ಕೋವಿಡ್ ದುರಂತದಿಂದ ಇದು ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. 2020-21 ರಾಜ್ಯ ಬಜೆಟಿನಲ್ಲಿ ದಾಖಲಿಸಿರುವಂತೆ ಕೇಂದ್ರದ ತೆರಿಗೆಗಳಲ್ಲಿನ ರಾಜ್ಯದ ಪಾಲು 2019-20ರಲ್ಲಿ 8,887 ಕೋಟಿ ರೂ. ಕಡಿತವಾಗಿದೆ. 2020-21ರಲ್ಲಿನ ಕಡಿತ 11,215 ಕೋಟಿಯಾಗಿದೆ. ಜಿಎಸ್ಟಿ ಸಂಗ್ರಹದಲ್ಲಿ ಕುಸಿತವಾಗಿರುವುದರಿಂದ ಅದರ ಪರಿಹಾರದಲ್ಲಿ 3000 ಕೋಟಿ ರೂ. ಕಡಿತವಾಗಿದೆ. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿನ ವೆಚ್ಚ ಭರಿಸುವುದರಲ್ಲಿ ಕೇಂದ್ರವು ರಾಜ್ಯ ಸರ್ಕಾರಗಳ ಪಾಲನ್ನು ಹೆಚ್ಚು ಮಾಡಿದೆ. ರಾಜ್ಯವು 2019-20ರಲ್ಲಿ ಜಲ ಪ್ರಳಯ ವಿಕೋಪದಿಂದ ಅನುಭವಿಸಿದ ಹಾನಿ 25,160 ರೂ. ಕೋಟಿ. ಇದಕ್ಕೆ ಕೇಂದ್ರವು ನೀಡಿದ ನೆರವು 1869 ಕೋಟಿ ರೂ.  (ಶೇ.5.32). ರಾಜ್ಯವು 2019-20ರಲ್ಲಿ ಜಲ ಪ್ರಳಯ ವಿಕೋಪದಿಂದ ಅನುಭವಿಸಿದ ಹಾನಿ 35,160 ಕೋಟಿ ರೂ. ಇದಕ್ಕೆ ಕೇಂದ್ರವು ನೀಡಿದ ನೆರವು 1869 ಕೋಟಿ ರೂ. (ಶೇ.5.32).

ದೇಶದಲ್ಲಿ ಸಾರ್ವಜನಿಕ ಹಣಕಾಸನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಬರುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. ರಾಜ್ಯವು 2004-05ರಿಂದಲೂ ರೆವಿನ್ಯೂ ಖಾತೆಯಲ್ಲಿ ಕೊರತೆಗೆ ಪ್ರತಿಯಾಗಿ ಆಧಿಕ್ಯವನ್ನು ಸಾಧಿಸಿಕೊಂಡು ಬರುತ್ತಿದೆ. ಅದರ ವಿತ್ತೀಯ ಕೊರತೆಯ ಪ್ರಮಾಣವೂ ಕೂಡ ಶಾಸನಾತ್ಮಕ ಮಿತಿಯನ್ನು ಮೀರಿಲ್ಲ. ಭಾರತದ ಜನಸಂಖ್ಯೆ ಮತ್ತು ಭೂ ವಿಸ್ತೀರ್ಣದಲ್ಲಿ ಕರ್ನಾಟಕ ಪಾಲು ಎರಡೂ ಅಂಶಗಳಲ್ಲಿ ಶೇ.5.5 ಆದರೆ ದೇಶದ ಚಾಲ್ತಿ ಬೆಲೆಗಳ ನಿವ್ವಳ ಆಂತರಿಕ ಉತ್ಪನ್ನದಲ್ಲಿ( 170.3 ಲಕ್ಷ ಕೋಟಿ  ರೂ.) ರಾಜ್ಯದ ಪಾಲು 2019-20ರಲ್ಲಿ (13.99 ಲಕ್ಷ ಕೋಟಿ ರೂ.) ಶೇ. 8.2 ರಷ್ಟಿದೆ. ಕರ್ನಾಟಕದ ಆರ್ಥಿಕ ಬೆಳವಣಿಗೆಯು ದೇಶದ ಆರ್ಥಿಕ ಬೆಳವಣಿಗೆಯನ್ನು ನಿರ್ಣಯಿಸುವ ಪ್ರಮುಖ ಸಂಗತಿಯಾಗಿದೆ.

ಆದರೆ ಇಂದು ಕೇಂದ್ರವು ತನ್ನ ಸಂಪನ್ಮೂಲವನ್ನು ರಾಜ್ಯದ ಜೊತೆ ಹಂಚಿಕೊಳ್ಳುವಲ್ಲಿ ಅನ್ಯಾಯ ಮತ್ತು ತಾರತಮ್ಯ ಮಾಡುತ್ತಿರುವುದರಿಂದ ರಾಜ್ಯದ ಹಣಕಾಸು ಸ್ಥಿತಿಯು ಹದಗೆಡುತ್ತಾ ನಡೆದಿದೆ. ಕೋವಿಡ್ ದುರಂತದಿಂದ ಇದು ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ನಮ್ಮದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ವ್ಯವಸ್ಥೆಯಲ್ಲಿ ಅತ್ಯಂತ ಸಮಸ್ಯಾತ್ಮಕ ಸಂಗತಿಯೆಂದರೆ ರಾಜ್ಯ-ಕೇಂದ್ರಗಳ ನಡುವಿನ ಹಣಕಾಸು ಸಂಬಂಧ. ಇಂದಿನ ಕೇಂದ್ರ ಸರ್ಕಾರವು  ಅನುಸರಿಸುತ್ತಿರುವ ಒಕ್ಕೂಟ ವಿರೋಧಿ ನೀತಿಗಳಿಂದಾಗಿ ರಾಜ್ಯ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದೆ. ಕೇಂದ್ರವು ಸಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ವ್ಯವಸ್ಥಿತವಾಗಿ ಎಳ್ಳುನೀರು ಬಿಡುತ್ತಿದೆ. ನಮ್ಮ ಸಂವಿಧಾನದ ಮೂಲತತ್ವಗಳಲ್ಲಿ ಒಂದಾಗಿರುವ ಒಕ್ಕೂಟ ನಿಯಮಕ್ಕೆ ಇದು ಯಾವ ಗೌರವವನ್ನು ನೀಡುತ್ತಿಲ್ಲ. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಅದು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿ ಎಲ್ಲ ಅಧಿಕಾರವನ್ನು ತನ್ನಲ್ಲಿ ಕೇಂದ್ರೀಕರಿಸಿಕೊಳ್ಳುತ್ತಿದೆ. ಸಂವಿಧಾನದಲ್ಲಿ ರಾಜ್ಯಗಳ ಮತ್ತು ಕೇಂದ್ರದ ನಡುವಿನ ಕರ್ತವ್ಯಗಳನ್ನು ಹಂಚಿಕೆ ಮಾಡಿದೆ. ಆದರೆ ಕೇಂದ್ರವು ಇದನ್ನು ಒಂದಲ್ಲ ಒಂದು ನೆಪ ಮಾಡಿಕೊಂಡು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ. ಆರೋಗ್ಯ ಕ್ಷೇತ್ರವು ಸಂವಿಧಾನದಲ್ಲಿ ರಾಜ್ಯ ಪಟ್ಟಿಯಲ್ಲಿದೆ. ಕೋವಿಡ್-19  ಸಂದರ್ಭದಲ್ಲಿ ರಾಜ್ಯಗಳ ಜೊತೆ ಸಮಾಲೋಚನೆ ನಡೆಸದೆ ಮತ್ತು ರಾಜ್ಯಗಳ ಸಿದ್ಧತೆಯ ಬಗ್ಗೆ ಚರ್ಚೆ ಮಾಡದೆ ಕೇಂದ್ರವು ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಹೇರಿತು. ಆದರೆ ಅದರಿಂದ ಉಂಟಾದ ವಲಸೆ ಕಾರ್ಮಿಕರ ದುರಂತವನ್ನು ಮಾತ್ರ ಕೇಂದ್ರವು ರಾಜ್ಯ ಸರಕಾರಗಳ ನಿರ್ವಹಣೆಗೆ ಬಿಟ್ಟುಬಿಟ್ಟ್ಟಿತು. ಒಂದು ದೇಶ;ಒಂದು ತೆರಿಗೆ (ಜಿ.ಎಸ್.ಟಿ), ಒಂದು ಬ್ಯಾಂಕು(ಬ್ಯಾಂಕುಗಳ ವಿಲೀನ), ಒಂದು ರೇಷನ್ ಕಾರ್ಡು, ಒಂದು ಮಾರುಕಟ್ಟೆ(ಎ.ಪಿ.ಎಮ್.ಸಿ ಗಳ ಖಾಸಗೀಕಣ), ಒಂದು ಭಾಷೆ(ಹಿಂದೆ ಭಾಷೆಯ ಹೇರಿಕೆ), ಒಂದು ಉದ್ಯೋಗ ಆಯ್ಕೆ(ರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಿಗಳ ನೇಮಕಾತಿಗೆ ಒಂದು ವ್ಯವಸ್ಥೆ) ಮುಂತಾದ ಜನಪ್ರಿಯ ಶೀರ್ಷಿಕೆಗಳಲ್ಲಿ ರಾಜ್ಯಗಳ ಸ್ವಾಯತ್ತತೆಯನ್ನು ನಾಶ ಮಾಡಲಾಗುತ್ತಿದೆ. ಇದು ಅಲ್ಪಾವಧಿಯಲ್ಲಿ ರಾಜಕೀಯ ಲಾಭ ತಂದು ಕೊಡಬಹುದು. ಆದರೆ ದೀರ್ಘಾವಧಿಯಲ್ಲಿ ರಾಷ್ಟ್ರದ ಹಿತಕ್ಕೆ ಇದು ಅಪಾಯಕರವಾಗಿ ಪರಿಗಣಿಸಬಹುದು. ನಮ್ಮ ದೇಶದ ಏಕತೆಯು ಭದ್ರವಾಗಿರುವುದೇ ಅದರ ಬಹುತ್ವ ಸ್ವರೂಪದಿಂದಾಗಿ ಎಂಬುದನ್ನು ನಾವು ಮರೆಯಬಾರದು. ದೇಶ ಒಂದು ನಿಜ. ಇದರ ನಿಜವಾದ ಸೌಂದರ್ಯ ಅದರ ವೈವಿಧ್ಯತೆಯಲ್ಲಿ ಮತ್ತು ಬಹುತ್ವ ಸಂಸ್ಕೃತಿಯಲ್ಲಿ ಅಡಗಿದೆ. ಈ ವೈವಿಧ್ಯತೆ ಮತ್ತು ಬಹುತ್ವವು ನಮ್ಮ ದೇಶದ ಭದ್ರತೆಗೆ ಮತ್ತು ಏಕತೆಗೆ ಎಂದೂ ಅಪಾಯ ತಂದಿಲ್ಲ. ಪ್ರತಿಯಾಗಿ ಇವನ್ನು ಇದು ಗಟ್ಟಿಗೊಳಿಸುತ್ತಿದೆ.

ಕೃಪೆ: ಪಿ. ಮಹಮ್ಮದ್, ವಾರ್ತಾಭಾರತಿ

ಕೇಂದ್ರದಿಂದ ಕರ್ನಾಟಕಕ್ಕಾಗಿರುವ ಅನ್ಯಾಯ

ಹಣಕಾಸು ಮಂತ್ರಿಗಳು ಆಗಿರುವ ಬಿ. ಎಸ್. ಯಡಿಯೂರಪ್ಪ ಮಂಡಿಸಿರುವ 2020-2021ರ ಬಜೆಟ್ಟಿನಲ್ಲಿ ಹಣಕಾಸು ಸಂಪನ್ಮೂಲವನ್ನು ಹಂಚಿಕೊಳ್ಳುವುದರಲ್ಲಿ ಕೇಂದ್ರವು ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಅಪ್ರತ್ಯಕ್ಷವಾಗಿ ಬಹಿರಂಗ ಪಡಿಸಿದ್ದಾರೆ. ನೇರವಾಗಿ ಇದನ್ನು ಹೇಳುವ ರಾಜಕೀಯ ಮುತ್ಸದ್ದಿತನ ಅವರಲ್ಲಿಲ್ಲ. ಅವರು 2020-21ರ ಬಜೆಟಿನಲ್ಲಿ ದಾಖಲಿಸಿರುವಂತೆ ಕೇಂದ್ರದ ತೆರಿಗೆಗಳಲ್ಲಿನ ರಾಜ್ಯದ ಪಾಲು 2019-20ರಲ್ಲಿ 8887 ಕೋಟಿ ರೂ. ಕಡಿತವಾಗಿದೆ.  2020-21ರಲ್ಲಿನ ಕಡಿತ 11,215 ಕೋಟಿ ರೂ. ಆಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಕುಸಿತವಾಗಿರುವುದರಿಂದ ಅದರ ಪರಿಹಾರದಲ್ಲಿ 3000 ಕೋಟಿ ರೂ. ಕಡಿತವಾಗಿದೆ. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿನ ವೆಚ್ಚ ಭರಿಸುವುದರಲ್ಲಿ ಕೇಂದ್ರವು ರಾಜ್ಯ ಸರ್ಕಾರಗಳ ಪಾಲನ್ನು ಹೆಚ್ಚು ಮಾಡಿದೆ. ಇವೆಲ್ಲವೂ ಒಕ್ಕೂಟ ವ್ಯವಸ್ಥೆಗೆ ಅಪಾಯ ಉಂಟು ಮಾಡುವ ಕ್ರಮಗಳಾಗಿವೆ.

ರಾಜ್ಯವು 2019-20ರಲ್ಲಿ ಜಲ ಪ್ರಳಯ ವಿಕೋಪದಿಂದ ಅನುಭವಿಸಿದ ಹಾನಿ 35,160 ಕೋಟಿ ರೂ. ಇದಕ್ಕೆ ಕೇಂದ್ರವು ನೀಡಿದ ನೆರವು 1869 ಕೋಟಿ ರೂ., ಕೋಟಿ(ಶೇ.5.32). ರಾಜ್ಯವು 2018-19ರಲ್ಲಿ ಎದುರಿಸಿದ್ದ ಪ್ರ್ರವಾಹದಲ್ಲಿ 7 ಲಕ್ಷ ಜನರ ಬದುಕು ಮೂರಾಬಟ್ಟೆಯಾಗಿತ್ತು. ಸುಮಾರು 4.69 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಾಶವಾಗಿತ್ತು. ಅಕ್ಷರಶಃ ನೂರಾರು ಜನರ ಪ್ರಾಣ ಹಾನಿಯಾಗಿತ್ತು. ಆದರೆ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಲಿಲ್ಲ ಮತ್ತು ವಿಶೇಷ ಪರಿಹಾರ ನೀಡಲಿಲ್ಲ. ರಾಜ್ಯವು ಪ್ರಸಕ್ತ ವರ್ಷದಲ್ಲಿಯೂ ಪ್ರವಾಹದ ಅಪಾಯವನ್ನು ಎದುರಿಸುತ್ತಿದೆ. ಆದರೆ ಕೇಂದ್ರವು ಇದರ ಬಗ್ಗೆ ಕಾಳಜಿ ತೋರುತ್ತಿಲ್ಲ.

ರಾಜ್ಯವು ಹಣಕಾಸು ಸಂಪನ್ಮೂಲ ಸಂಗ್ರಹಣೆಯಲ್ಲಿ ಎಡವುತ್ತಿದೆ

ಇಂದು ರಾಜ್ಯವು ಕೋವಿಡ್-19 ದುರಂತದಲ್ಲಿ ತತ್ತರಿಸಿ ಹೋಗಿದೆ. ಜನರ ಬದುಕು ಜರ್ಜರಿತವಾಗಿದೆ. ಈ ಸಂದರ್ಭದಲ್ಲಿ ಹಣಕಾಸು ಸಂಪನ್ಮೂಲವನ್ನು ಕ್ರೋಢೀಕರಿಸುವುದರಲ್ಲಿ ಎಚ್ಚರ ವಹಿಸಬೇಕಾಗಿತ್ತು. ಆದರೆ ಈ ಸಂಪನ್ಮೂಲ ಸಂಗ್ರಹಣದಲ್ಲಿ ಮುತ್ಸದ್ದಿತನ ಕಾಣುತ್ತಿಲ್ಲ. ಉದಾ. ನಮ್ಮ ರಾಜ್ಯದ ಒಟ್ಟು ರಾಜ್ಯ ಆಂತರಿಕ ಉತ್ಪನ್ನಕ್ಕೆ (ಜಿ.ಎಸ್.ಡಿ.ಪಿ)ದಲ್ಲಿ ಮಾಹಿತಿ ತಂತ್ರಜ್ಞಾನದ ಕಾಣಿಕೆ ಶೇ. 25. ಅಂದರೆ ಅದು ರಾಜ್ಯದ ವರಮಾನಕ್ಕೆ ನೀಡುತ್ತಿರುವ ಕಾಣಿಕೆ ಅಂದಾಜು 35000 ಕೋಟಿ ರೂ. ಆದರೆ ಅದರಿಂದ ರಾಜ್ಯದ ಬೊಕ್ಕಸಕ್ಕೆ ಬರುತ್ತಿರುವ ತೆರಿಗೆ ಮಾತ್ರ ಸೊನ್ನೆ(ಬಜೆಟ್ ಭಾಷಣ, 2020-21 ಪು: 8. ಕಂಡಿಕೆ 18). ಸಂಕಷ್ಟದ ಸಂದರ್ಭದಲ್ಲಿ ಉದ್ದಿಮೆ ರಂಗಕ್ಕೆ ತೆರಿಗೆ ವಿನಾಯಿತಿ ನೀಡುವುದು ವಿವೇಕಯುತ ಕ್ರಮ. ಆದರೆ ಅದು ಅತಿಯಾಗಬಾರದು. ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟು ಉದ್ದಿಮೆದಾರರಿಗೆ ನೆರವು ನೀಡುವುದು ತರವಲ್ಲ. ನಮ್ಮ ಸರಕಾರವು ಉದ್ದಿಮೆಗಾರರಿಗೆ, ಬಂಡವಾಳಿಗರಿಗೆ ಇನ್ನಿಲ್ಲದಂತೆ ಎಲ್ಲ ಬಗೆಯ ರಿಯಾಯಿತಿ ತೋರುತ್ತಿದೆ. ಅವರನ್ನು ವೈಭವೀಕರಿಸಲಾಗುತ್ತಿದೆ. ಕೇಂದ್ರವಂತೂ ಅವರು ವೆಲ್ಥ್ ಕ್ರಿಯೇಟರ್ಸ್‌ ಎಂದು ಹಾಡಿಹೊಗಳುತ್ತಿದೆ. ಆದರೆ ಬಂಡವಾಳದಷ್ಟೇ ನಿರ್ಣಾಯಕ ಪಾತ್ರ ವಹಿಸುವ ಕಾರ್ಮಿಕ ವರ್ಗವನ್ನು ಅಭಿವೃದ್ಧಿಗೆ ಕಂಟಕ, ಬಂಡವಾಳ ಹೂಡಿಕೆಗೆ ಅಡ್ಡಿ ಎಂದೆಲ್ಲ ಹೀಯಾಳಿಸಲಾಗುತ್ತಿದೆ ಮತ್ತು ಕಾರ್ಮಿಕ ಹಿತಾಸಕ್ತಿ ವಿರೋಧಿ ಕ್ರಮಗಳನ್ನು ಲೇಬರ್ ಕೋಡ್ಸ್ ಹೆಸರಿನಲ್ಲಿ ಜಾರಿ ಮಾಡಲಾಗುತ್ತಿದೆ.

ಸಂಪನ್ಮೂಲ ತೀವ್ರ ಕೊರತೆಯ ಸಂದರ್ಭದಲ್ಲಿ ಅದನ್ನು ಒಗ್ಗೂಡಿಸುವುದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಆದರೆ ನಮ್ಮ ಸರ್ಕಾರ ಏನು ಮಾಡುತ್ತಿದೆ? ಅನಗತ್ಯವಾಗಿ ಭೂಮಿಗೆ ಸಂಬಂಧಿಸಿದಂತೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದಂತೆ, ಕಾರ್ಮಿಕರ ಕೆಲಸದ ಅವಧಿಗೆ ಸಂಬಂಧಿಸಿದಂತೆ ಸುಗ್ರಿವಾಜ್ಞೆಗಳನ್ನು ಹೊರಡಿಸುತ್ತಿದೆ. ಇಲ್ಲಿ ಸರ್ಕಾರಕ್ಕೆ ರವಷ್ಟೂ ಸಂಪನ್ಮೂಲ ದೊರೆಯುವುದಿಲ್ಲ. ಮತ್ತೆ ಬೆಂಗಳೂರಿನಲ್ಲಿ ಸರ್ಕಾರಿ ಭೂಮಿಯನ್ನು ಮಾರಾಟ ಮಾಡುವ ಕ್ರಮವನ್ನು ಅದು ಅನುಸರಿಸುತ್ತಿದೆ. ಆಸ್ತಿಯನ್ನು ಮಾರಾಟ ಮಾಡುವುದು ನಮ್ಮಲ್ಲಿ ಅವಮಾನಕರ ಸಂಗತಿ. ಜಮೀನನ್ನು ಮಾರಾಟ ಮಾಡುವವರನ್ನು ಹಳ್ಳಿಗಳಲ್ಲಿ ಜನರು ಕೀಳಾಗಿ ಕಾಣುತ್ತಾರೆ. ಸರ್ಕಾರ ಇಂದು ಇಂತಹ ಸ್ಥಿತಿಗೆ ಬಂದಂತೆ ಕಾಣುತ್ತದೆ. ಯಾರು ಬೇಕಾದರೂ ಜಮೀನು ಕೊಳ್ಳಬಹುದು, ಯಾರು ಬೇಕಾದರೂ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಬಹುದು, ಯಾರಿಗಾದರೂ. ಎಲ್ಲಿಯಾದರೂ ಮಾರಾಟ ಮಾಡಬಹುದು ಎಂಬ ಕಾನೂನನ್ನು ಜಾರಿಗೆ ತಂದಿದೆ. ಈ ಎಲ್ಲ ಕ್ರಮಗಳಿಂದ ಸರ್ಕಾರಕ್ಕೆ ಒಂದು ರೂಪಾಯಿ ಸಂಪನ್ಮೂಲ ದೊರೆಯುವುದಿಲ್ಲ. ನಿಜ, ʻಲೈಸೆನ್ಸ್ – ಕಂಟೋಲ್ ರಾಜ್ʼ ಆರ್ಥಿಕ ಬೆಳವಣಿಗೆಗೆ ತಡೆಯುಂಟು ಮಾಡುತ್ತದೆ. ಆದರೆ ನಿಯಂತ್ರಣವೇ ಇಲ್ಲದಿದ್ದರೆ ಅದು ಆರ್ಥಿಕ ಅರಾಜಕತೆಗೆ, ವರಮಾನ-ಸಂಪತ್ತಿನ ಕೇಂದ್ರೀಕರಣಕ್ಕೆ ಎಡೆಮಾಡಿಕೊಡುತ್ತದೆ. ಕಾರ್ಮಿಕ ವರ್ಗವನ್ನು ತುಳಿದು, ದುಡಿಮೆಯನ್ನು ದುರ್ಬಲಗೊಳಿಸಿ ಅಭಿವೃದ್ಧಿ ಸಾಧಿಸಿಕೊಳ್ಳುವುದು ಅಸಾಧ್ಯ.

ಖಾಸಗೀಕರಣವು ಮಿತಿಯಾಗಿದ್ದರೆ ಅದು ಅಭಿವೃದ್ಧಿಗೆ ಅನುಕೂಲವಾಗಿರುತ್ತದೆ. ಇದು ಮಿತಿ ಮೀರಿದರೆ ಆರ್ಥಿಕತೆಗೆ ಅಪಾಯವುಂಟಾಗುತ್ತದೆ. ಮಹಾಆರ್ಥಿಕ ಸಂಕಷ್ಟದಲ್ಲಿ ಸಾರ್ವಜನಿಕ ವಲಯ ಮಾತ್ರ ಜನರ ಬದುಕನ್ನು ಮತ್ತು ಆರ್ಥಿಕತೆಯ ಭದ್ರತೆಯನ್ನು ಕಾಪಾಡಬಲ್ಲದು. ಕೋವಿಡ್-19 ಸಂದರ್ಭದಲ್ಲಿ ಆರೋಗ್ಯ ರಂಗದಲ್ಲಿ ಇದು ಸಾಬೀತಾಗಿದೆ ಮತ್ತು ದುರಂತದ ಸಂದರ್ಭದಲ್ಲಿ ಖಾಸಗಿ ಆರೋಗ್ಯ ರಂಗ ಹೇಗೆ ಹಣಮಾಡುವುದರಲ್ಲಿ ನಿರತವಾಗಿದೆ ಎಂಬುದೂ ಜಗಜ್ಜಾಹೀರಾಗಿದೆ.

ತೆರಿಗೆ ವಿನಾಯತಿ ಸರಿ. ಅದೇ ಸಮಯದಲ್ಲಿ ತೆರಿಗೆ ಸಂಗ್ರಹವೂ ಮುಖ್ಯ. ಆಸ್ತಿ ಮಾರಿ ಸರ್ಕಾರವನ್ನು ನಡೆಸುವುದು ದಿವಾಳಿತನದ ಸೂಚಿ. ಸರ್ಕಾರವೊಂದು ಆರ್ಥಿಕತೆಯ ದೀರ್ಘಾವಧಿ ಹಿತಾಸಕ್ತಿಗಳ ಬಗ್ಗೆಯೂ ಆಲೋಚನೆ ಮಾಡಬೇಕು. ಇಂದು ನಮ್ಮ ಸರ್ಕಾರವು ಬೆಂಗಳೂರೇ ಕರ್ನಾಟಕ ಎನ್ನುವಂತೆ ನಡೆದುಕೊಳ್ಳುತ್ತಿದೆ. ಗ್ರಾಮೀಣ ಮತ್ತು ಪಟ್ಟಣ-ಪುರಸಭೆಗಳ ಮಟ್ಟದಲ್ಲಿನ ಆರೋಗ್ಯ ವ್ಯವಸ್ಥೆ ಬಗ್ಗೆ ಸರ್ಕಾರ ಕುರುಡಾಗಿಬಿಟ್ಟಿದೆ.

ಕೋವಿಡೋತ್ತರ ಆರ್ಥಿಕತೆಯ ಬಗ್ಗೆ ಸರ್ಕಾರ ಯೋಚಿಸಬೇಕು. ಎಲ್ಲವನ್ನೂ ಖಾಸಗಿರಂಗಕ್ಕೆ ವಹಿಸಿಬಿಟ್ಟರೆ ಇದು ಸಮಾಜದಲ್ಲಿ ಆರ್ಥಿಕ ಅರಾಜಕತೆ ಮತ್ತು ಬಡತನ ಹಾಗೂ ಅಸಮಾನತೆಯ ಆಸ್ಪೋಟಕ್ಕೆ ಕಾರಣವಾಗುತ್ತದೆ.  ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಾನೂನಾತ್ಮಕವಾಗಿ ನೀಡಬೇಕಾದ ಸಂಪನ್ಮೂಲವನ್ನು ಒತ್ತಾಯ ಮಾಡಬೇಕು. ರಾಜ್ಯಗಳು ಕೇಂದ್ರದ ಮುಂದೆ ಭಿಕ್ಷೆ ಬೇಡಬೇಕಾಗಿಲ್ಲ. ನಮ್ಮ ಸರ್ಕಾರವು ಉದ್ದಿಮೆಗಳಿಗೆ ವಿನಾಯಿತಿ ನೀಡುವುದರಲ್ಲಿ ಎಷ್ಟು ಮುತುವರ್ಜಿ ತೋರಿಸುತ್ತಿದೆಯೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಕಾಳಜಿಯನ್ನು ಸಂಪನ್ಮೂಲ ಸಂಗ್ರಹಕ್ಕೆ ಮತ್ತು ಅದರ ಕ್ರೋಢೀಕರಣಕ್ಕೆ ಗಮನ ನೀಡಬೇಕು.

Donate Janashakthi Media

Leave a Reply

Your email address will not be published. Required fields are marked *