ರಾಜೇಶ್‌ಗೆ ಅಸ್ಮಿತೆಯ ಭಾಗವಾಗಲು ಸಾಧ್ಯವಾಗಿಲ್ಲ

ಬಿ.ಶ್ರೀಪಾದ್ ಭಟ್

ಇತ್ತೀಚಿಗೆ ನಿಧನರಾದ ನಟ ರಾಜೇಶ್ ಕಲೆಯನ್ನು ಅಕ್ಷರಶಃ ಆರಾಧಿಸಿದ ಕಲಾವಿದ. ಅವರಲ್ಲಿ ಈ ವೃತ್ತಿಯ ಕುರಿತು ಕಿಂಚಿತ್ತೂ ಉಡಾಫೆಯಿರಲಿಲ್ಲ.

ಆ ಕಾಲದ ಕಲ್ಯಾಣ ಕುಮಾರ್ ಮತ್ತು ಉದಯ್ ಕುಮಾರ್ ಗಿಂತಲೂ ಹೆಚ್ಚಿನ ವೈವಿಧ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ರಾಜ್ ರಂತೆ ವೃತ್ತಿರಂಗಭೂಮಿ ಹಿನ್ನೆಲೆಯಿಂದ ಸಿನಿಮಾರಂಗಕ್ಕೆ ಪ್ರವೇಶಿಸಿದರು. ಅವರಂತೆ ದೈಹಿಕ ಶಿಸ್ತನ್ನು ಕಾಪಾಡಿಕೊಂಡಿದ್ದರು ಮತ್ತು ಅಣ್ಣಾವ್ರು ಅಭಿನಯದ ಕೆಲವು ಸಿನಿಮಾಗಳಿಗೂ ರಾಜೇಶ್ ರ ಕೆಲ ಸಿನಿಮಾಗಳಿಗೂ ಸಾಮ್ಯತೆಗಳಿವೆ.

ಅಣ್ಣಾವ್ರ ರೀತಿ ನಗರ ಮತ್ತು ಗ್ರಾಮೀಣ ಭಾಗದ ಎರಡೂ ಬದಿಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಉದಾಹರಣೆಗೆ ‘ಬೋರೇಗೌಡ ಬೆಂಗಳೂರಿಗೆ ಬಂದ’ ಸಿನಿಮಾ ಮತ್ತು ‘ಮೇಯರ್ ಮುತ್ತಣ್ಣ’ವನ್ನು ಹೋಲಿಸಬಹುದು. ಕ್ಲೈಮ್ಯಾಕ್ಸ್ ಬೇರೆಯಾದರೂ ಹೂರಣ ಒಂದೇ. ಅದೇ ರೀತಿ ‘ಮಣ್ಣಿನ ಮಗ’ ಮತ್ತು ʻಬೆಳುವಲದ ಮಡಿಲಲ್ಲಿ’ ಸಿನಿಮಾ. ಈ ಎರಡೂ ಸಿನಿಮಾಗಳ ನಿರ್ದೇಶಕ ಗೀತಪ್ರಿಯ ಮತ್ತು ಎರಡರಲ್ಲಿಯೂ ಕಲ್ಪನಾ ನಾಯಕಿ ಎಂಬುದನ್ನು ಹೊರತುಪಡಿಸಿ ಸಿನಿಮಾಗಳ ದನಿಯಲ್ಲಿ ಸಾಮ್ಯತೆಗಳಿವೆ ಮತ್ತು ವಿರೋಧಭಾಸಗಳಿವೆ.

ರಾಜೇಶ್ ನಾಯಕನಾಗಿರುವ ‘ನಮ್ಮ ಊರು’ ಸಿನಿಮಾ 1968ರಲ್ಲಿ ಬಿಡುಗಡೆಯಾಗಿದ್ದು, ಸೂಪರ್ ಹಿಟ್ ಆಗಿದ್ದು ನಿಜ. ಆದರೆ ಆ ವೇಳೆಗೆ ರಾಜ್ ಸೂಪರ್ ಸ್ಟಾರ್ ಆಗಿದ್ದರು ಮತ್ತು ರಾಜ್ ರವರ ಪಾತ್ರಗಳ ನೆರಳನ್ನೇ ಹೋಲುವಂತಹ ಸಿನಿಮಾಗಳಲ್ಲಿ ಅಭಿನಯಿಸಿದ್ದು ರಾಜೇಶ್ ಗೆ ಒಂದು ಸವಾಲಾಗಿತ್ತು. ಇಲ್ಲಿ ಅವರ ಅಭಿನಯದ ಕುರಿತು ಎರಡನೇ ಮಾತಿಲ್ಲವಾದರೂ ಅಣ್ಣಾವ್ರು ಜನಪ್ರಿಯ ನಟರಾಗಿರುವುದರ ಜೊತೆಗೆ ಕನ್ನಡದ ಸಾಂಸ್ಕೃತಿಕ ಪ್ರತಿನಿಧಿಯಂತಿದ್ದರು. ಇದು ರಾಜೇಶ್ ಗೆ ಏರಲು ಕಷ್ಟವಾಗುವಂತಹ ಏಣಿಯಾಗಿತ್ತು.

ರಾಜೇಶ್ ಗೆ ಕನ್ನಡದ ಒಟ್ಟಾರೆ ಅಸ್ಮಿತೆಯ ಭಾಗವಾಗಲು ಸಾಧ್ಯವಾಗಲೇ ಇಲ್ಲ. ನೋಡು ನೋಡುತ್ತಲೇ 1970ರ ದಶಕದಲ್ಲಿ ರಾಜ್ ಕನ್ನಡದ ಇತರೇ ನಟರಗಿಂತ ನೂರಾರು ಮೈಲಿ ಮುಂದೆ ಸಾಗಿದ್ದರು. ಆದರೆ ರಾಜ್ ರ ಬೃಹದಾಕಾರದ ಹೆಜ್ಜೆಗಳ ಹಿಂದೆ ರಾಜೇಶ್ ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ಸಮಚಿತ್ತದಿಂದ ನಡೆದಿರುವುದು ವಿಶೇಷ.

ಆದರೂ ಸಹ ರಾಜೇಶ್ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ರಾಜ್ ನಾಯಕರಾಗಿರುವ ಬಿಡುಗಡೆ, ಪ್ರತಿಧ್ವನಿ, ಕ್ರಾಂತಿವೀರ ಸಿನಿಮಾಗಳಲ್ಲಿ ಪ್ರತಿ ನಾಯಕ ಪಾತ್ರಗಳಲ್ಲಿ ನಟಿಸಿರುವುದು ವಿಶೇಷ. ಬಿಡುಗಡೆಯಲ್ಲಿ ಅಣ್ಣಾವ್ರ ಸಮನಾಗಿ ಅಭಿನಯಿಸಿದ್ದರು.

ತಮ್ಮ ಕಡೆಯ ದಿನದವರೆಗೂ ಮನೆಯಲ್ಲಿಯೂ ಸಹ ಸೂಟು ಧರಿಸಿ, ಮೇಕಪ್ ಮಾಡಿಕೊಂಡಿರುತ್ತಿದ್ದರು ಮತ್ತು ಮಾತನಾಡುವಾಗಲೂ ಸಹ ‘ನೀನು ಈಗ ಏಕೆ ಬಂದೆ ಅಂತ ಹೇಳಬಲ್ಲೆಯಾ’ ಎನ್ನುವ ರೀತಿ ನಾಟಕೀಯವಾಗಿ ಮಾತನಾಡುತ್ತಿದ್ದರು. ನನಗೂ ಇದರ ಅನುಭವವಾಗಿತ್ತು. ಅನೇಕರಿಗೆ ಇದು ವಿಲಕ್ಷಣ ವರ್ತನೆ ಎನಿಸಿತ್ತು. ಆದರೆ ರಾಜೇಶ್ ರವರಿಗೆ ಇದು ಸಹಜ ಬದುಕಾಗಿತ್ತು.

Donate Janashakthi Media

Leave a Reply

Your email address will not be published. Required fields are marked *