ಯುವಜನಾಂಗವನ್ನು ಹೊಸ ಓದಿನತ್ತ ಸೆಳೆಯುವ ಬಗೆ ಹೇಗೆ ? 'ಸಹಯಾನ ಸಾಹಿತ್ಯೋತ್ಸವದಲ್ಲಿ ಒಂದು ಸಂವೇದನಾಶೀಲ ಚಿಂತನೆ'

ಯಮುನಾ ಗಾಂವ್ಕರ

ಪುಸ್ತಕಗಳ ಬಿಡುಗಡೆ ಸಂದರ್ಭ
ಪುಸ್ತಕಗಳ ಬಿಡುಗಡೆ ಸಂದರ್ಭ

     ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ನೇರ, ನಿಷ್ಟುರವಾಗಿ ಹಾಗೂ ಕೊನೆಯವರೆಗೂ ಬದ್ದತೆಯನ್ನು ಉಳಿಸಿಕೊಂಡು ಜನರಿಗಾಗಿ ಸಾಹಿತ್ಯ ಕೃಷಿ ನಡೆಸಿದವರು ಡಾ: ಆರ್.ವಿ. ಭಂಡಾರಿಯವರು. ಕರ್ನಾಟಕದಲ್ಲಿ ಬಂಡಾಯ, ದಲಿತ ಹಾಗೂ ಎಡಪಂಥೀಯ ಚಳುವಳಿಗಳ ಜೊತೆ ಅತ್ಯಂತ ನಿಕಟ ಬಾಂಧವ್ಯವನ್ನು ಹೊಂದಿದ್ದ ಅವರು ಕರಾವಳಿ ಉದ್ದಕ್ಕೂ ತಮ್ಮ ಚಿಂತನೆಯಿಂದ ಪ್ರಭಾವ ಬೀರಿದವರು. ಕೆಲ ವರ್ಷಗಳ ಕೆಳಗೆ ಅವರು ನಿಧನರಾದಾಗ ಉತ್ತರ ಕನ್ನಡ ಜಿಲ್ಲೆಯ ಪ್ರಗತಿಪರರಿಗೆಲ್ಲಾ ಒಬ್ಬ ಮಾರ್ಗದರ್ಶಿ ಚಿಂತಕನನ್ನು ಕಳೆದುಕೊಂಡ ಸಂಕಟ. ಆದರೆ ಆರ್.ವಿ. ದೈಹಿಕವಾಗಿ ಮಾತ್ರ ದೂರವಾಗಿದ್ದರು; ಅವರು ಬಿಟ್ಟು ಹೋದ ಬೌದ್ಧಿಕ ಪರಂಪರೆಗೆ ಸಾವು ಬಂದಿರಲಿಲ್ಲ. ಅವರ ಪ್ರಗತಿಪರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಆಶಯದೊಂದಿಗೆ ಕಳೆದ ಐದು ವರ್ಷಗಳ ಹಿಂದೆ ಆರಂಭವಾಗಿದ್ದು ‘ಸಹಯಾನ’ ಎನ್ನುವ ಆರ್. ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ. ಇದರ ಆಶ್ರಯದಲ್ಲಿ ‘ಹೊಸತಲೆಮಾರು’ಎನ್ನುವ ವಿಷಯವನ್ನು ಕೇಂದ್ರವಾಗಿರಿಸಿಕೊಂಡು ಪ್ರತಿವರ್ಷ ಮೇ ತಿಂಗಳಲ್ಲಿ ಒಂದೊಂದು ಪ್ರತ್ಯೇಕ ವಿಷಯದ ಕುರಿತು ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ನಡೆಸಲಾಗುತ್ತದೆ.
ಈ ಬಾರಿಯೂ ಆರ್.ವಿ.ಯವರ ಊರಾದ ಕೆರೆಕೋಣದಲ್ಲಿ `ಓದುವ ಸಂಸ್ಕೃತಿ:ಹೊಸ ತಲೆಮಾರು’ ಎನ್ನುವ ವಿಷಯವನ್ನು ಕೇಂದ್ರದಲ್ಲಿ ಇಟ್ಟುಕೊಂಡು ಒಂದು ದಿನದ ಉತ್ಸವವನ್ನು ನಡೆಸಿತು. ‘ಹೊಸ ತಲೆಮಾರು-ಓದಿನ ತಾತ್ವಿಕ ನೆಲೆಗಳು’ ಹಾಗೂ `ಹೊಸ ತಲೆಮಾರು:ಓದಿನ ಭಿನ್ನ ಮಾರ್ಗಗಳು ಮತ್ತು ಆಕರಗಳು’ ಕುರಿತು ಇಡೀ ದಿನದ ಸಂವಾದವನ್ನು ಏರ್ಪಡಿಸಲಾಗಿತ್ತು. ಇದರೊಂದಿಗೆ ಕವಿಗೋಷ್ಟಿ, ನಾಟಕ, ರೂಪಕ, ಜಾನಪದ ಹಾಡುಗಳು ಓದಿನ ವೈವಿಧ್ಯತೆಗಳ ಕಡೆಗೆ ಗಮನ ಸೆಳೆದವು.
ಖ್ಯಾತ ಯಕ್ಷಗಾನ ಕಲಾವಿದರಾದ ಜಲವಳ್ಳಿ ವೆಂಕಟೇಶರಾವ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ, ಬಾಲ್ಯದಿಂದಲೂ ಆರ್.ವಿ.ಯವರೊಂದಿಗಿನ ತಮ್ಮ ಒಡನಾಟ, ಅವರು ಯಕ್ಷಗಾನದ ಸಂಭಾಷಣೆ, ಅಧ್ಯಯನ ಹೇಗಿರಬೇಕೆಂದು ಕೂಲಂಕಷವಾಗಿ ಮಾರ್ಗದರ್ಶನ ಮಾಡಿದ್ದನ್ನು ನೆನೆಪಿಸಿಕೊಂಡರು. ಮತ್ತು ಯುವಜನರು ಚಿಂತನಾಶೀಲತೆಯಿಂದ ವಿಮುಖರಾಗುತ್ತಿರುವ ಕುರಿತು ವಿಷಾದಿಸಿದರು. ಓದು ನಮ್ಮನ್ನು ಬೆಳೆಸುತ್ತದೆ. ಲೋಕದೃಷ್ಟಿಯನ್ನು ಹೆಚ್ಚಿಸುತ್ತದೆ ಎಂದರು.
ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ನಾಡಿನ ಪ್ರಗತಿಪರ ಚಿಂತಕ ಹಾಗೂ ಹೆಸರಾಂತ ವಿಮರ್ಶಕ ಡಾ: ಎಚ್.ಎಸ್.ರಾಘವೇಂದ್ರರಾವ್ ವಹಿಸಿದ್ದರು. `ಹಳೆತಲೆಮಾರು-ಹೊಸತಲೆಮಾರು ಎನ್ನುವುದೆಲ್ಲಾ ನಮ್ಮೊಳಗಿನ ವಿಗಂಡನೆ. ಹಳೆತಲೆಮಾರು ಎಲ್ಲವನ್ನು ತಿಳಿದುಕೊಂಡಿದೆ ಎಂದಾಗಲಿ, ಹೊಸತಲೆಮಾರಿಗೆ ಏನೇನೂ ತಿಳುವಳಿಕೆಯೇ ಇಲ್ಲ ಎಂದಾಗಲಿ ನಾವು ಭಾವಿಸಬೇಕಾಗಿಲ್ಲ. ಬದಲಾಗಿ ಸಮಾಜವನ್ನು ಪ್ರಗತಿಯೆಡೆಗೆ ಕೊಂಡೊಯ್ಯುವ ಎಲ್ಲಾ ಬಗೆಯ ಸಾಹಿತ್ಯವನ್ನು ನಾವು ಬೆಂಬಲಿಸಬೇಕು. ಇವತ್ತಿನ ಹೊಸತಲೆಮಾರಿನ ಯುವಜನರಿಗೆ ಸಾಕಷ್ಟು ಅವಕಾಶಗಳು ಲಭ್ಯವಿದ್ದು ಅವರನ್ನು ಹೆಚ್ಚೆಚ್ಚು ಹೊಸ ಓದು ಹಾಗೂ ಸಾಹಿತ್ಯ ಕೃಷಿಯತ್ತ ಸೆಳೆಯುವ ಕೆಲಸವನ್ನು ಮಾಡಬೇಕು.’ ಎಂದು ಹೇಳುತ್ತಾ ಇಡೀ ಸಂವಾದಕ್ಕೊಂದು ತಾತ್ವಿಕ ಚಿಂತನೆಯ ಬುನಾದಿ ಹಾಕಿದರು.
ಪುಸ್ತಕಗಳು ಮನುಷ್ಯರಲ್ಲಿ ಪ್ರಶ್ನೆ ಕೇಳುವ, ಹಂಚಿಕೊಳ್ಳುವ ಬದಲಾವಣೆ ತರಬೇಕು. ವಿಧೇಯ ಓದು ಕೇವಲ ಆರಾಧನೆಯಾಗುತ್ತದೆ. ತಿಳುವಳಿಕೆ ಬರದಂತೆ ಮಾಡುವ ಓದು ರಾಜಕಾರಣವಾಗುತ್ತದೆ. ಓದು ಹೇಗೆ ಏಕೆ ಮತ್ತು ಯಾವುದು ಎನ್ನುವ ಪ್ರಶ್ನೆಯನ್ನು ಎತ್ತಿಕೊಂಡ ಅವರು ಓದುಗರಲ್ಲದ ಬಹುಸಂಖ್ಯಾತರ ಕಾಲಕ್ಷೇಪಕ್ಕೆ ಬಳಕೆಯಾಗುವ ಎಲೆಕ್ಟ್ರಾನಿಕ್ ಮನರಂಜನಾ ಮಾಧ್ಯಮಗಳು ಪ್ರಭುತ್ವದ ವಿರುದ್ಧದ ವಿರೋಧವನ್ನು ಹತ್ತಿಕ್ಕುವ ಸಾಂಸ್ಕೃತಿಕ ರಾಜಕಾರಣವಿರಬಹುದು. ಆರಾಧನೆಯೆಡೆಗೆ ಕೊಂಡೊಯ್ಯುವ ಪುರಾಣದ ಓದು ಒಂದೆಡೆಯಾದರೆ, ಪ್ರಶ್ನೆಯನ್ನು ಉದ್ದೀಪಿಸುವ ಓದು ಇನ್ನೊಂದೆಡೆ. ನಿರಂತರ ಮಾತನಾಡುವ ಟೀವಿಯಂಥ ಮಾಧ್ಯಮಗಳು `ಹಾಟ್ ಮೀಡಿಯಾ’ ಆದರೆ ಆಲೋಚನಾ ಸ್ವಾತಂತ್ರ್ಯವನ್ನು ನೀಡುವ ಪುಸ್ತಕಗಳು `ಕೋಲ್ಡ್ ಮೀಡಿಯಾ’ ಎಂದು ಹೇಳಿದರು.
ಆರ್.ವಿ. ಭಂಡಾರಿಯವರು ಬರೆದ `ಜಾನಪದ:ಸಾಂಸ್ಕೃತಿಕ ಮುಖಾಮುಖಿ’ಯನ್ನು ಇಂದಿರಾ ಭಂಡಾರಿಯವರಿಗೆ, ಹಶ್ಮಿ ಬರೆದ `ದಿಲ್ ಮಾಂಗೇ ಮೋರ್ ಮತ್ತಿತರ ಹಶ್ಮಿ ನಾಟಕಗಳ ಅನುವಾದಕಾರರಾದ ಡಾ.ಮಾಧವಿ ಭಂಡಾರಿ ಉಡುಪಿಯವರಿಗೆ, `ಬಾ ಮರಿ ಚಿತ್ರ ಬರಿ’ ಕೃತಿಕಾರ ತಮ್ಮಣ್ಣ ಬೀಗಾರರಿಗೆ ಪುಸ್ತಕಗಳನ್ನು ನೀಡುವ ಮೂಲಕ 3 ಪುಸ್ತಕಗಳ ಬಿಡುಗಡೆ ಮಾಡಿದವರು ಸಮುದಾಯ ಕರ್ನಾಟಕದ ಅಧ್ಯಕ್ಷರಾದ ಆರ್.ಕೆ. ಹುಡುಗಿ.
ಪ್ರಾರಂಭದಲ್ಲಿ ಸಹಯಾನದ ಅ ಧ್ಯಕ್ಷರಾದ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಸ್ವಾಗತಿಸಿದರು. ರಂಗನಿರ್ದೇಶಕ, ಶಿಕ್ಷಕ ಡಾ. ಶ್ರೀಪಾದ ಭಟ್ ಪ್ರಾಸ್ತಾವಿಕ ಮಾತನಾಡಿದರು. ಸಹಯಾನದ ಕಾಯಾಧ್ಯಕ್ಷ ವಿಷ್ಣು ನಾಯ್ಕ ವಂದಿಸಿದರು. ವಿಠ್ಠಲ ಭಂಡಾರಿ ನಿರೂಪಿಸಿದರು.

`ಬದುಕನ್ನು ಬದಲಾಯಿಸುವ ಓದಿನ ಸಂಸ್ಕೃತಿ ಎಲ್ಲರದಾಗಲಿ’

    ಉದ್ಘಾಟನಾ ಸಮಾರಂಭದ ನಂತರ ನಡೆದ ಗೋಷ್ಠಿಗಳಲ್ಲಿ ‘ಓದಿನ ತಾತ್ವಿಕ ನೆಲೆಗಳು’ ಬಗ್ಗೆ ಪ್ರೊ.ಆರ್. ಕೆ. ಹುಡುಗಿ ಮಾತನಾಡುತ್ತಾ, ಓದು ಅಂದ್ರೆ ಅವಲೋಕನ ಮತ್ತು ಬದುಕನ್ನು ಬದಲಿಸುವ ಅದ್ಭುತ ಸಂಶೋದನೆ. ಪ್ರತಿಯೊಬ್ಬ ಮನುಷ್ಯನಿಗೂ ಭಾವನೆ, ಅನುಭೂತಿ, ತರ್ಕ ಶಕ್ತಿ ಇದ್ದರೂ ಇವುಗಳ ಸಮಾನ ಬೆಳವಣಿಗೆ ಮನೋವೈಜ್ಞಾನಿಕವಾಗಿ ಹಲವರಲ್ಲಿ ಆಗಿರುವುದಿಲ್ಲ. ಓದುವಿಕೆಯು ಮನಸ್ಸನ್ನು ನಿರೂಪಿಸಿ ನಿರ್ದೇಶಿಸುವ ಕೆಲಸ ಮಾಡುತ್ತದೆ. ಸುತ್ತಲಿನ ವಿಷಯಗಳಿಗೆ, ಆಗುಹೋಗುಗಳಿಗೆ ಸ್ಪಂದಿಸುವುದೂ ಕೂಡ ಓದಿನ ಭಾಗ. ಆದರೆ ನಮ್ಮ ಓದು ನಮ್ಮ ಇಚ್ಛೆ ಅಥವಾ ಸ್ವಾತಂತ್ರ್ಯದ ಪ್ರಕಾರವೇ ಆಯ್ಕೆಯಾಗಿರುವುದಿಲ್ಲ. ಹೊಸ ಪೀಳಿಗೆ ಹಲವು ಆಕರ್ಷಣೆಗೊಳಗಾಗಿದ್ದರಿಂದ ನಾವು ಬಯಸುತ್ತಿದ್ದುದನ್ನು ಅವರು ಬಯಸುತ್ತಿಲ್ಲ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳ ಓದಿಗೂ, ಏಕಾಗ್ರತೆಗೂ ಹಲವು ಅಡಚಣೆಗಳಿವೆ. ಮಾಧ್ಯಮ ಹಾಗೂ ಪ್ರಬಲ ಶಕ್ತಿಗಳು ತಮಗೆ ಬೇಕಾದ ಜನಮಾನಸ ಸೃಷ್ಠಿಸಲು ಅದಕ್ಕೆ ಬೇಕಾದ ಓದಿನ ಕಡೆ ಯುವಮನಸ್ಸನ್ನು ಸೆಳೆಯಲು ಹಾತೊರೆಯುತ್ತವೆ. ಹಾಗಾಗಿ ಪ್ರಗತಿಪರ ಉದ್ದಿಷ್ಯವಿರುವ ನಮಗೆ ಪುಸ್ತಕಗಳು ಮನೆಯಲ್ಲಿರುವ ಎಲ್ಲಾ ಅಲಂಕಾರಗಳಿಗಿಂತ ಶ್ರೇಷ್ಟ, ಸಮಕಾಲೀನ ದೃಷ್ಠಿ ಹಾಗೂ ಬದುಕನ್ನು ಬದಲಾಯಿಸುವ ಓದಿನ ಸಂಸ್ಕೃತಿ ಎಲ್ಲರದಾಗಲಿ ಎಂದರು. ಚಿಂತನದ ಶ್ರೀನಿವಾಸ ನಾಯ್ಕ ನಿರೂಪಿಸಿದರು.
ಮತ್ತು ‘ಓದಿನ ಭಿನ್ನ ಆಕರಗಳು ಮತ್ತು ಮಾರ್ಗಗಳ ಕುರಿತು ಚೇತನಾ ತೀರ್ಥಹಳ್ಳಿ ಪ್ರಬಂಧ ಮಂಡಿಸಿದರು. ಓದು ಒಂದು ಬಯಲುದಾರಿ. ಪ್ರತಿಯೊಬ್ಬನಿಗೂ ಯಾವ ಆಕರ ಸಿಗುತ್ತದೋ ಅದರ ಆಧಾರದಲ್ಲಿ ಓದಿನ ಕ್ರಮ ಅನುಸರಿಸುತ್ತಾರೆ. ನಗರ ಕೇಂದ್ರ ಮತ್ತು ಮಾನಸಿಕವಾಗಿ ನಗರೀಕರಣಗೊಂಡವರು ಯುವಜನಾಂಗ, ಹೆಚ್ಚು ಸತ್ವಯುತ ಓದಿಗೆ ತೆರೆದುಕೊಂಡಿದ್ದಾರೆ. ಇಂದಿನ ತುರ್ತಿಗೆ, ಸ್ಪರ್ಧೆಗೆ ಸುಲಭವಾಗಿ ಸಿಗುವ ಕಡೆಗೆ ಧಾವಿಸುತ್ತಾರೆ. 40% ಜನ `ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. (ಕನ್ನಡದಲ್ಲಿ) 3,228 `ಬ್ಲಾಗ್ಗಳಿವೆ ಅದರಲ್ಲಿ 800ರಷ್ಟು ಸಮಕಾಲೀನಗೊಳ್ಳುತ್ತಿವೆ. ಇದರಲ್ಲಿ 800 ರಿಂದ 900 ಶಬ್ದಗಳ ಮಿತಿ ಇರುವುದರಿಂದ ನೀಳ್ಗತೆ, ಕಾದಂಬರಿಗಳು ಪ್ರಸಿದ್ಧವಾಗದೇ, ಪ್ರಬಂಧಗಳೇ ಪ್ರಾಬಲ್ಯ ಪಡೆದಿವೆ. ಗಟ್ಟಿಬರಹಗಾರರು ತಮ್ಮನ್ನು ಇದರಲ್ಲಿ ಸ್ಥಾಪಿಸಿಕೊಳ್ಳಬೇಕು. ಹಾಗಾಗಿ ಹಿರಿಯ ತಲೆಮಾರಿನ ಬರಹಗಳನ್ನು, ಕನ್ನಡ ಸಾಹಿತ್ಯವನ್ನು ಡಿಜಿಟಲ್ಗೆ ಅಳವಡಿಸಿಕೊಳ್ಳುವ, ಆ ಮೂಲಕ ಹೊಸ ಪೀಳಿಗೆಗೆ ದಾಟಿಸುವ ಅಗತ್ಯವಿದೆ. ಸಾಂಪ್ರದಾಯಿಕ ಓದಿನ ಮಡಿವಂತಿಕೆಯಿಂದ ಹೊರಬಂದು ಇಂದಿನ ಓದಿನ ಕ್ರಮಕ್ಕೆ ತಕ್ಕ ವಿಧಾನಕ್ಕೆ ತೆರೆದುಕೊಳ್ಳಬೇಕೆಂದು ಹೊಸತಲೆಮಾರು ಬಯಸುತ್ತದೆ. ಏಕೆಂದರೆ ಸಾಹಿತ್ಯದ ಭವಿಷ್ಯ ಪ್ರಧಾನವಾಗಿ ಡಿಜಿಟಲ್ ಹಾಗೂ `ಆನ್ ಲೈನ್ ಮಾಧ್ಯಮದಲ್ಲಿರಲಿದೆ. ಆದರೆ ಓದಿ ಏನು ಮಾಡುತ್ತೇವೆ, ತನ್ನ ಕೆಲಸಕ್ಕೆ, ಕೌಶಲ್ಯಕ್ಕೆ ಇದರಿಂದ ಪ್ರಯೋಜನವೇನು ಎಂಬ ಆಧಾರದಲ್ಲಿ ಯುವಪೀಳಿಗೆ ಯೋಚಿಸುವುದರಿಂದ ಅವರಲ್ಲಿ ಕೊರತೆಯಿದೆ. ಯಾವುದನ್ನು ಓದಬೇಕು ಯಾವ ಬಗೆಯಲ್ಲಿ ಓದನ್ನು ಸಾಗಿಸಬೇಕು, ಹೇಗೆ ಓದಬೇಕು ಎಂಬ ವಿಚಾರದಲ್ಲಿ ಮಾರ್ಗದರ್ಶನ ಬೇಕಿದೆ ಎಂದರು. ಕೃತಿ ಓದಿನ ಕುರಿತು ಗಮನಸೆಳೆದು, ಭೈರಪ್ಪನಂಥವರು ಬರೆದಿದ್ದಾರೆ ಎಂದು ವಿರೋಧಿಸುವುದಕ್ಕಿಂತ ಅವರ ‘ಕವಲು’ ಕಾದಂಬರಿಯಲ್ಲಿರುವ ಸ್ತ್ರೀ ವಿರೋಧಿ ಗುಣದ ವಿರುದ್ಧ ನಾವು ಮಾತನಾಡಬೇಕಾಗಿದೆ. ಸ್ತ್ರೀಯರನ್ನು ಕೀಳು ಮಟ್ಟದಲ್ಲಿ ಚಿತ್ರಿಸಿರುವ ಕೃತಿಯ ರಾಜಕಾರಣದ ಬಗ್ಗೆ ಚರ್ಚಿಸಬೇಕಾಗಿದೆ ಎಂದರು.
ಚರ್ಚೆಯಲ್ಲಿ ವೈರಸ್ ಶಿರಾಲಿ, ರೋಹಿದಾಸ ನಾಯಕ, ಶ್ರೀಧರ ಬಳಗಾರ, ಮಾಂತೇಶ ರೇವಡಿ, ಪಿ.ಆರ್.ನಾಯ್ಕ, ಸುಧಾ ಆಡುಕಳ, ಸುಬ್ರಾಯ ಮತ್ತಿಹಳ್ಳಿ, ಮೀನಾಕ್ಷಿ ಬಾಳಿ, ವಿಷ್ಣು ನಾಯ್ಕ, ಕಿರಣ ಭಟ್, ಶ್ರೀನಿವಾಸ ನಾಯ್ಕ ಮುಂತಾದವರು ಪಾಲ್ಗೊಂಡರು. ಡಾ. ಎನ್.ಆರ್. ನಾಯಕ, ಡಾ.ಬಿ.ಎ.ಸನದಿ, ಪ್ರಭು ಖಾನಾಪುರೆ, ಶಾಂತಾರಾಮ ನಾಯಕ, ಮೋಹನ ಹಬ್ಬು, ವ್ಯಾಸ ದೇಶಪಾಂಡೆ, ರೇಣುಕಾ ರಮಾನಂದ, ಸಚಿನ್ ನಾಯ್ಕ ಮುಂತಾದ ಉಪಸ್ಥಿತರಿದ್ದರು. ಕಿರಣ ಭಟ್ ನಿರೂಪಿಸಿದರು.

ಕಾವ್ಯಾಭಿರುಚಿ ಗೋಷ್ಠಿ

    ಸಂಜೆ ನಡೆದ ಕಾವ್ಯಾಭಿರುಚಿ ಗೋಷ್ಠಿ ಮಾಧವಿ ಭಂಡಾರಿ, ಉಡುಪಿ, ತಾರಿಣಿ ಶುಭದಾಯಿನಿ, ಎಚ್ ಎಲ್ ಪುಷ್ಪ, ದು. ಸರಸ್ವತಿ, ಎಂ ಲೋಕೇಶ, ಮೈಸೂರು, ಸಿಂಧೂ ಹೆಗಡೆ, ಶಂಕರ ಗೌಡ, ಗುಣವಂತೆ ಪ್ರೇಮಾ ಟಿ ಎಂ ಆರ್, ಎಸ್. ಅರುಂಧತಿ, ಶೈಲಜಾ ಗೊರ್ನಮನೆ, ಉಮೇಶ ನಾಯ್ಕ, ಶಿರಸಿ, ನಾಗರಾಜ ಹೆಗಡೆ, ಮಾನಸಾ ಹೆಗಡೆ, ಗಿರಿಜಾ ಹೆಗಡೆ ಪವಿತ್ರಾ ಪ್ರಿಯಭಾಷಿಣಿ, ನಾಗೇಶ ಅಂಕೋಲೆಕರ್, ಕೆ.ಮಹಾಂತೇಶ, ವಿದ್ಯಾದರ ಕಡತೋಕಾ ಭಾಗವಹಿಸಿದ್ದರು. ಮಾಧವಿ ಭಂಡಾರಿ, ಕೆರೆಕೋಣ ನಿರ್ವಹಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗ ನೀಡಿತ್ತು.

ಜೀವನದಲ್ಲಿ ಬಂದ ಜೀವನಾನುಭವ ಅದು ರೂಪಿಸಿದ ವಿವೇಕ, ಅದರಿಂದ ಕಲಿತ ಪಾಠ ಈಗ ನಮಗೆ ಒದಗಿಬರಬೇಕಾಗಿದೆ    -ಬಂಜಗೆರೆ ಜಯಪ್ರಕಾಶ 

    ಸಮಾರೋಪ ಭಾಷಣ ಮಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ “ಹಿಂದೆಂದಿಗಿಂತ ಹೆಚ್ಚು ಸಂಕೀರ್ಣವಾದ ಸವಾಲುಗಳಿರುವ ಕಾಲಘಟ್ಟಕ್ಕೆ ಪ್ರವೇಶ ಮಾಡುತ್ತಿದ್ದೇವೆ. ಆದರೆ ಈ ಹೊಸ ಸವಾಲನ್ನು ಸಮರ್ಥವಾಗಿ ಅರ್ಥಪೂರ್ಣವಾಗಿ ಎದುರಿಸುವ ಬದ್ಧತೆ ಉಳ್ಳವರ ಸಂಖ್ಯೆ ಕಡಿಮೆ ಆಗುತ್ತಿದೆ. ಹಿಂದೆ ನಮ್ಮೆದುರಿಗಿನ ಸವಾಲಿನ ಚಹರೆಗಳು ಸ್ಪಷ್ಟವಾಗಿದ್ದುವು. ಆದರೆ ಇಂದು ಅದು ಕಣ್ಣಿಗೆ ಕಾಣದಂತೆ ನಮಗೆ ಅರಿವಿಲ್ಲದಂತೆ ನಮ್ಮೊಳಗೆ ಬೆಳೆಯುತ್ತಿದೆ. ಹಾಗಾಗಿ ಮಾರುಕಟ್ಟೆ ಸಂಸ್ಕೃತಿ ಸೃಷ್ಟಿಸುತ್ತಿರುವ ಸಾಮುದಾಯಿಕವಲ್ಲದ, ಮನುಷ್ಯತ್ವವಿಲ್ಲದ ಸಂವೇದನಾರಹಿತವಾದ, ಸಾಮಾಜಿಕವಾಗಿ ಕ್ರಿಯಾಶೀಲ ಆಗಿಲ್ಲದ ನಿರ್ವೀರ್ಯ ಸಂಸ್ಕೃತಿಯನ್ನು ಎದುರಿಸುವ ಹತ್ಯಾರಗಳನ್ನು ಹೊಸತಲೆಮಾರು ಸಿದ್ಧಿಸಿಕೊಳ್ಳಬೇಕಾಗಿದೆ. ಓದಿನಿಂದ ಹಿಂದೆ ಸರಿಯುತ್ತಿರುವ ಹೊಸ ತಲೆಮಾರು ಮತ್ತೆ ಹೊಸ ಓದಿನೆಡೆಗೆ ಮರಳಬೇಕಾಗಿದೆ” ಎಂದರು. ಮುಂದುವರಿದು “ಅಂತರ್ಜಾಲ ಖಂಡಿತವಾಗಿಯೂ ಹಲವು ಅನುಕೂಲತೆ ಸೃಷ್ಟಿಸಿದೆ ನಿಜ. ಆದರೆ ಹೊಸತಲೆಮಾರನ್ನು ಓದಿನಿಂದ ವಿಮುಖಗೊಳಿಸಿ ಸಮಾಜಬಾಹಿರ ಕೆಲಸದಲ್ಲಿಯೂ ತೊಡಗಿಸುವಂತೆ ಒತ್ತಾಯಿಸುತ್ತದೆಂಬ ಎಚ್ಚರವೂ ಬೇಕು. ಕುಟುಂಬ ಕೌಟುಂಬಿಕ ಸಂಬಂಧ ಮತ್ತು ಸಾಮುದಾಯಿಕವಾಗಿ ಪಾಲ್ಗೊಳ್ಳಬೇಕೆಂಬ ವಿವೇಕ ನಾಶವಾಗಿ ವ್ಯಕ್ತಿನಿಷ್ಠತೆ, ಒಂಟಿತನ ಹೆಚ್ಚೆಚ್ಚು ಬೆಳೆಯುತ್ತಿದೆ. ಚಾಕರಿ ಪ್ರಜ್ಞೆ ಬೆಳೆಯುತ್ತಿದೆ. ನಮ್ಮ ಶ್ರಮವನ್ನು ಮಾರಾಟ ಮಾಡಲು ಕೈಯಲ್ಲಿ ವೀಸಾ ಹಿಡಿದುಕೊಂಡು ಹೆಚ್ಚು ಹಣ ಕೊಡುವ ಮಾಲಿಕನಿಗಾಗಿ ಕಾಯುವ ದುರಂತ ಸೃಷ್ಟಿಯಾಗಿದೆ. ಮತ್ತೊಮ್ಮೆ ನಮ್ಮ ಜೀವನದಲ್ಲಿ ಬಂದ ಜೀವನಾನುಭವ ಅದು ರೂಪಿಸಿದ ವಿವೇಕ, ಅದರಿಂದ ಕಲಿತ ಪಾಠ ಈಗ ನಮಗೆ ಒದಗಿಬರಬೇಕಾಗಿದೆ. ಇದು ಭಿನ್ನ ಬಗೆಯ ಗಂಭೀರ ಓದಿನಿಂದ, ಸಾಮುದಾಯಿಕವಾಗಿ ಪಾಲ್ಗೊಳ್ಳುವಿಕೆಯಿಂದ ಬರುವಂಥದ್ದು. ಹೊಸತಲೆಮಾರು ಈ ಹೊಸ ಓದನ್ನು ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕವಿಯತ್ರಿ ಪ್ರೊ. ಎಚ್.ಎಲ್.ಪುಷ್ಪಾ ಮಾತನಾಡಿ “ಆತ್ಮೀಯ ಸಂಬಂಧವೇ ಕಳೆದು ಹೋಗುತ್ತಿರುವ, ಪ್ರತಿಯೊಬ್ಬರನ್ನೂ ಗುಮಾನಿಯಿಂದ ನೋಡುತ್ತಿರುವ ವಿಷಾದದ ಸಂದರ್ಭದಲ್ಲಿ ಆರ್.ವಿ. ಭಂಡಾರಿಯವರ ಹೆಸರಿನಲ್ಲಿ ಹಳೆಯ ಸಂಬಂಧವನ್ನು ಪುನರ್ ಸೃಷ್ಟಿಸುವ ಸಹಯಾನೋತ್ಸವದ ಕಾರ್ಯ ಶ್ಲಾಘನೀಯವಾದದ್ದು. ಓದುವ ಸಂಸ್ಕೃತಿಯ ಸ್ವರೂಪವು ಬದುಕಿನ ಕ್ರಮಗಳು ಬದಲಾದಂತೆ ಕಾಲಕಾಲಕ್ಕೆ ಬದಲಾಗುತ್ತದೆ. ಎಲ್ಲವನ್ನೂ ಒಳಗೊಳ್ಳುವ ಸತ್ವಪೂರ್ಣವಾದ ಓದು ಇಂದಿನ ಸಮಾಜಕ್ಕೆ ಅವಶ್ಯಕ ಎಂದರು. ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಅವರು ವಹಿಸಿ ಓದಿನ ಅಭಿರುಚಿ ಹೆಚ್ಚಿಸುವ ತನ್ಮೂಲಕ ಬದುಕಿನ ಅಭಿರುಚಿಯನ್ನೂ ಶ್ರೀಮಂತಗೊಳಿಸುವ ಹಲವು ಮಾದರಿಗಳನ್ನು ತೆರೆದಿಟ್ಟರು. ಯಮುನಾ ಗಾಂವ್ಕರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಹಯಾನದ ಕಾರ್ಯದರ್ಶಿ ವಿಠ್ಠಲ ಭಂಡಾರಿ ವಂದಿಸಿದರು.     ವಾಚನಾಭಿರುಚಿ ಕಮ್ಮಟವಾಗಿ ನಡೆದ ಇಡೀ ದಿನದ ಕಾರ್ಯಕ್ರಮಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಸಹಯೋಗ ನೀಡಿತ್ತು.

ರಾಮಾಯಣದ ಸ್ತ್ರೀವಾದಿ ಓದು: ಸಣ್ಣತಿಮ್ಮಿ ರಾಮಾಯಣ

   ಸಣ್ಣತಿಮ್ಮಿ ರಾಮಾಯಣ ನಾಟಕದ ದೃಶ್ಯ

ಸಣ್ಣತಿಮ್ಮಿ ರಾಮಾಯಣ  ನಾಟಕದ ದೃಶ್ಯ

    ಸಹಯಾನ ಸಾಹಿತ್ಯೋತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಿತು. ರಾಮಾಯಣ ಮತ್ತು ಮಹಾಭಾರತಗಳನ್ನು ನಮ್ಮ ದೇಶದ ಸಾಂಸ್ಕೃತಿಕ ಭಾಷೆ ಎನ್ನಲಾಗುತ್ತಿದೆ. ಬದುಕುಗಳ ಬಹುತ್ವವನ್ನು ಹಲವು ಧಾರೆಗಳನ್ನು ಬಳಸಿಕಟ್ಟಿದ ಈ ಮಹಾಕಾವ್ಯಗಳು ಹಲವು ಶತಮಾನಗಳಿಂದ ಬೆಳೆಯುತ್ತಲೇ ಬಂದಿವೆ. ಇಂದು ಕೋಮುವಾದಿ ರಾಜಕೀಯದ ದುಷ್ಟ ಚಿಂತನೆಗಳು ಈ ಮಹಾ ಕಾವ್ಯಗಳ ಬಹುತ್ವದ ವ್ಯಾಕರಣವನ್ನೇ ಭ್ರಷ್ಟಗೊಳಿಸತೊಡಗಿವೆ. ಈಗ ಇದೇ ಸರ್ವಮಾನ್ಯವಾಗತೊಡಗಿದೆ. ಜನಸಾಮಾನ್ಯರಿಗೆ ಅರ್ಥವಾಗುವ ಈ ಭಾಷೆಯಲ್ಲಿ ಮಾತನಾಡುವ ಹಲವು ವಿಚಾರಧಾರೆಗಳು, ಸಾಧ್ಯತೆಗಳು ಇಲ್ಲಿವೆ. ಇಂಥ ಮಹತ್ವದ ಓದನ್ನು ದು.ಸರಸ್ವತಿಯವರು `ಸಣ್ಣತಿಮ್ಮಿ ರಾಮಾಯಣ’ ಎಂಬ ಏಕವ್ಯಕ್ತಿ ಪ್ರದರ್ಶನದ ಮೂಲಕ ಕಟ್ಟಿಕೊಟ್ಟರು. ತುಂಬು ಸಂಸಾರದ ರಾಮನ ಚಿತ್ರವನ್ನು ಹರಿದೆಸೆದು ಬಿಲ್ಲುಧಾರಿಯಾದ ಯುದ್ಧಸನ್ನದ್ಧ ರಾಮನನ್ನು ರಾಜಕೀಯ ದಾಳವಾಗಿ ಬಳಸತೊಡಗಿದ್ದ ಮೂಲಭೂತವಾದಿಗಳಿಗೆ ಉತ್ತರವಾಗಿಯೂ, ರಾಮಾಯಣದಲ್ಲಿ ಅಡಗಿದ್ದ ಸೀತೆಯ ನೋವನ್ನು ಮುನ್ನೆಲೆಗೆ ತರುತ್ತ ಸ್ತ್ರೀವಾದಿ ಓದನ್ನು ಮುನ್ನೆಲೆಗೆ ತರುವುದರ ಮೂಲಕ ಸ್ತ್ರೀಪರ ಸಂವೇದನೆಯನ್ನು ಮೂಡಿಸುತ್ತಲೇ ಸಾಗುವ ಈ ಪ್ರಯೋಗ ‘ನರೇಶನ್ ಮೂಲಕವೇ ಕತೆ-ಕಥನ-ಪಾತ್ರಚಿತ್ರಣ ಹೀಗೆ ಹಲವು ರಂಗತಂತ್ರಗಳನ್ನು ಬಳಸಿಕೊಂಡು ಪ್ರೇಕ್ಷಕರನ್ನು ಆವರಿಸಿಕೊಂಡಿತು.

ನಾಟಕದ ಪ್ರದರ್ಶನ :

     ವಿಶ್ವಕವಿ ರವೀಂದ್ರನಾಥ ಟ್ಯಾಗೋರರು ರಚಿಸಿದ `ಚಿತ್ರಾ ನಾಟಕವನ್ನು ಡಾ. ಎಂ.ಜಿ.ಹೆಗಡೆ ಮತ್ತು ಡಾ. ಶ್ರೀಪಾದ ಭಟ್ ಅವರು ಕನ್ನಡಕ್ಕೆ ಪಠ್ಯೀಕರಿಸಿದ್ದರು. ಇದು ಉತ್ಸವದಲ್ಲಿ ಸಂಜೆ ಡಾ. ಶ್ರೀಪಾದ ಭಟ್ರವರ ನಿರ್ದೇಶನದಲ್ಲಿ ಮೂಡಿಬಂತು. ನಾಡಿನ ನವೋದಯಕ್ಕೆ ನಾಂದಿ ಹಾಡಿದ ಮೊದಲಿಗರಲ್ಲಿ ಒಬ್ಬರಾದ ಕವಿ ರವೀಂದ್ರನಾಥ ಟಾಗೋರರು ಸಾಹಿತ್ಯ, ರಂಗಭೂಮಿ, ಸಂಗೀತ, ಚಿತ್ರ ಮೊದಲಾದ ಕಲಾಪ್ರಕಾರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಹಾಗೂ ಸಾಮಾಜಿಕ, ರಾಜಕೀಯ, ಜನಪರ ಶೈಕ್ಷಣಿಕ ರಂಗಗಳಲ್ಲಿ ಮೂಲಗಾಮಿ ಚಿಂತನೆ ನಡೆಸಿದ ಧೀಮಂತರು. ಹೊಸದಾಗಿ ನಿರ್ಮಾಣವಾಗಬೇಕಿದ್ದ ನಮ್ಮ ರಾಷ್ಟ್ರದ ಸ್ವರೂಪ ಹೇಗಿರಬೇಕೆಂಬುದು ಅವರ ಸಾಹಿತ್ಯದ ಕೇಂದ್ರ ಕಾಳಜಿಯಾಗಿತ್ತು. ಅಂತೆಯೇ ಸ್ತ್ರೀತ್ವದ ಅಸ್ತಿತ್ವವನ್ನು ಅದರ ಘನತೆಯ ಹಿನ್ನೆಲೆಯಲ್ಲಿಯೇ ಪ್ರತಿಪಾದಿಸುವ ‘ಚಿತ್ರಾ ಪೌರಾಣಿಕ ಕಥಾನಕವನ್ನು ಪುನರ್ಲೇಖಿಸುತ್ತದೆ. ರಂಗಭೂಮಿಯ ಮೇಲೆ ಕಾವ್ಯ ಸೃಷ್ಠಿಯಾಗಬೇಕು, ಅಂತರಂಗದ ವಾಸ್ತವ ಅನಾವರಣಗೊಳ್ಳಬೇಕು ಎಂಬ ರವೀಂದ್ರರ ರಂಗ ಸಿದ್ಧಾಂತದ ಬೆಳಕಿನಲ್ಲಿ ಈ ಪ್ರಯೋಗ ಸಿದ್ಧಗೊಂಡಿತ್ತು. ಕಲಾವಿದರಾಗಿ ಮಾನಸಾ ಹೆಗಡೆ, ಮಾಧವಿ ಭಂಡಾರಿ, ಶೈಲಜಾ ಗೋರ್ನಮನೆ, ಪುಷ್ಪಾ ಸಾಗರ, ರೂಪಾ ಹೆಗಡೆ ಮನೋಜ್ಞವಾಗಿ ಅಭಿನಯಿಸಿದರು. ಇಂಪಾದ ಸಂಗೀತ ನಿರ್ವಹಣೆ ಮಾಡಿದವರು ವಿದ್ವಾನ್ ವಿಶ್ವನಾಥ ಹಿರೇಮಠರವರು. ಚಂದ್ರು ಉಡುಪಿ, ದಾಮೋದರ ನಾಯ್ಕ ಸಹಕರಿಸಿದರು. ಈ ಎರಡೂ ನಾಟಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಪ್ರಾಯೋಜಿಸಿತ್ತು.

Donate Janashakthi Media

Leave a Reply

Your email address will not be published. Required fields are marked *