ಆಗಸ್ಟ್ ಕೊನೆಯ ವಾರದಲ್ಲಿ ಸುದರ್ಶನ ಟಿವಿ ಎಂಬ ಒಂದು ವಾಹಿನಿ ‘ಯುಪಿಎಸ್‍ಸಿ ಜಿಹಾದ್ ಎಂಬುದನ್ನು ಬಯಲು ಮಾಡುವುದಾಗಿ ಭಾರೀ ಪ್ರಚಾರ ನಡೆಸಿತ್ತು.ಮುಸ್ಲಿಮರನ್ನು ದೊಡ್ಡ ಪ್ರಮಾಣದಲ್ಲಿ ಅಧಿಕಾರಶಾಹಿಯೊಳಕ್ಕೆ ನುಸುಳಿಸುವ ಸಂಚು ನಡೆಯುತ್ತಿದೆ, ಜಾಮಿಯ ಮಿಲಿಯ ವಿದ್ಯಾರ್ಥಿಗಳು ಯುಪಿಎಸ್‍ಸಿ ಪರೀಕ್ಷೆಗಳ ಮೂಲಕ ಅದನ್ನು ಕೈವಶ ಮಾಡಿಕೊಳ್ಳಲು ಎಂತಹ ಪ್ರಯತ್ನ ನಡೆಸಿದ್ದಾರೆ ಎಂದು ಸಾಕ್ಷ್ಯ ಸಮೇತ ಈ ಕಾರ್ಯಕ್ರಮ ಬಯಲಿಗೆಳೆಯುವುದಾಗಿ ಅದರ ಪ್ರಮೋ ಭಾರೀ ಪ್ರಚಾರ ನಡೆಸಿತು.
ಮೇಲ್ನೋಟಕ್ಕೇ ಅದೊಂದು ದ್ವೇಷ ಪ್ರಚಾರದಂತೆ ಕಾಣುತ್ತಿದ್ದುದರಿಂದ ಅದರ ಪ್ರಸಾರವನ್ನು ತಡೆಯಬೇಕು ಎಂದು ಎನ್‍ಬಿಎಸ್‍ಎಗೆ ಮತ್ತು ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಎನ್‍ಬಿಎಸ್‍ಎ ಅದನ್ನು ಕೇಂದ್ರ ಸುದ್ಧಿ ಮತ್ತು ಪ್ರಸಾರ ಮಂತ್ರಾಲಯಕ್ಕೆ ಕಳಿಸಿದ್ದರೆ, ಸುಪ್ರಿಂ ಕೋರ್ಟ್ ಅದರ ಪ್ರಸಾರದ ಮೊದಲೇ ತಡೆಯುವುದು ಸರಿಯಾಗದು ಎಂದು ಹೇಳಿ ವಿಚಾರಣೆಯನ್ನು ಸೆಪ್ಟಂಬರ್ 15ಕ್ಕೆ ಮುಂದೂಡಿತು.ಆದರೆ ದಿಲ್ಲಿ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿತು.
ಕೇಂದ್ರ ಸುದ್ದಿ ಮತ್ತು ಪ್ರಸಾರ ಮಂತ್ರಾಲಯ ಯಾವುದೇ ನಿಯಮಗಳನ್ನು ಉಲ್ಲಂಘಿಸಬಾರದು ಎಂದಷ್ಟೇ ಹೇಳಿ ಅದರ ಪ್ರಸಾರಕ್ಕೆ ಅನುಮತಿ ನೀಡಿದ ನಂತರ ಈ ತಡೆಯಾಜ್ಞೆಯನ್ನು ಮುಂದುವರೆಸಲಿಲ್ಲ.ಸೆಪ್ಟಂಬರ್ 11ರಿಂದ 14 ರವರೆಗೆ ಅದರ ನಾಲ್ಕು ಕಂತುಗಳು ಪ್ರಸಾರಗೊಂಡಿವೆ. ಇನ್ನೂ ಸೆಪ್ಟಂಬರ್ 20 ರ ವರೆಗೆ ಅದು ಮುಂದುವರೆಯುವುದಾಗಿ ಹೇಳಲಾಗಿತ್ತು.
ಆದರೆ ಈಗ ಸೆಪ್ಟಂಬರ್ 15ರಂದು ವಿಚಾರಣೆ ಮುಂದುವರೆಸಿದ ಸುಪ್ರಿಂ ಕೋರ್ಟ್ ಮೇಲ್ನೋಟಕ್ಕೇ ಈ ಕಾರ್ಯಕ್ರಮದ ಉದ್ದೇಶ, ಆಶಯ ಮತ್ತು ಗುರಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡುವುದು, ನಾಗರಿಕ ಸೇವೆಗಳ ಒಳಕ್ಕೆ ನುಸುಳುವ ಒಂದು ಪಿತೂರಿಯ ಭಾಗ ಎಂದು ಚಿತ್ರಿಸುವ ಕಪಟ ಪ್ರಯತ್ನದಿಂದ ಕೂಡಿದೆ ಎಂದು ಕಂಡು ಬರುತ್ತದೆ ಎನ್ನುತ್ತ ಅದರ ಪ್ರಸಾರಕ್ಕೆ ಈಗ ತಡೆಯಾಜ್ಞೆ ನೀಡಿದೆಯಲ್ಲದೆ, ಇದೊಂದು ‘ಉನ್ಮತ್ತ ಕಾರ್ಯಕ್ರಮ’ ಎಂಬ ತೀಕ್ಷ್ಣ ಟೀಕೆಯನ್ನು ಮಾಡಿದೆ. ಈ ನ್ಯಾಯಪೀಠದ ಮುಖ್ಯಸ್ಥರಾದ ನ್ಯಾಯಮೂರ್ತಿ ಚಂದ್ರಚೂಡ್ ಈ ಕಾರ್ಯಕ್ರಮವನ್ನು ನೋಡಿ, ಎಷ್ಟು ಹುಚ್ಚುತನದಿಂದ ಕೂಡಿದೆ, ಒಂದು ಸಮುದಾಯ ನಾಗರಿಕ ಸೇವೆಗಳೊಳಕ್ಕೆ ಪ್ರವೇಶಿಸುತ್ತಿದೆ ಎನ್ನುತ್ತಿದೆ ಎಂದು ವಿಚಾರಣೆಯ ವೇಳೆಯಲ್ಲಿ ಹೇಳಿದರು. ಈ ಕಾರ್ಯಕ್ರಮ ಎಷ್ಟೊಂದು ಕಪಟದಿಂದ ಕೂಡಿದೆ. ಒಂದು ನಿರ್ದಿಷ್ಟ ಸಮುದಾಯದ ನಾಗರಿಕರು ಅದೇ ಪರೀಕ್ಷೆಯ ಮೂಲಕ ಹಾದು ಬರುತ್ತಾರೆ,ಅದೇ ಸಂದರ್ಶನ ತಂಡ ಅವರ ಸಂದರ್ಶನ ನಡೆಸುತ್ತದೆ. ಇದು ಯುಪಿಎಸ್‍ಸಿಯ ಬಗ್ಗೆಯೂ ಸಂದೇಹವನ್ನು ಉಂಟು ಮಾಡುತ್ತದೆ. ಇಂತಹ ಪ್ರಶ್ನೆಗಳನ್ನು ಹೇಗೆ ನಿಭಾಯಿಸುವುದು? ಇದನ್ನು ಸಹಿಸಲು ಸಾಧ್ಯವೇ? ಎಂದೂ ನ್ಯಾಯಮೂರ್ತಿ ಚಂದ್ರಚೂಡ್ ಪ್ರಶ್ನಿಸಿರುವದಾಗಿ ವರದಿಯಾಗಿದೆ.

ಸುದರ್ಶನ ಟಿವಿಯ ವಕೀಲರು ಮಾತ್ರವಲ್ಲ, ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ಕೂಡ ಹೆಸರಲ್ಲಿ ಈ ಪ್ರಸಾರವನ್ನು ತಡೆಯುವುದು ‘ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಎಂದು ವಾದಿಸಲು ಪ್ರಯತ್ನಿಸಿದರು ಎಂಬುದು ಗಮನಾರ್ಹ.
ಕೇಂದ್ರ ಸರಕಾರ ಸೆಪ್ಟಂಬರ್ 9ರಂದು ಇದರ ಪ್ರಸಾರದ ಆದೇಶ ನೀಡಿತು. ನಂತರ ಸೆಪ್ಟಂಬರ್ 11,12,13 ಮತ್ತು 14ರಂದು ಇದು ಪ್ರಸಾರಗೊಂಡಿದೆ. ಸಚಿವಾಲಯದಿಂದ ಯಾರಾದರೂ ಇದನ್ನು ನೋಡಿ ಈ ಬಗ್ಗೆ ಯೋಚಿಸಿದ್ದಾರೆಯೇ? ಎಂದು ಸಾಲಿಸಿಟರ್ ಜನರ್ ರವರನ್ನು ನ್ಯಾಯಪೀಠ ಪ್ರಶ್ನಿಸಿದಾಗ, ಈ ಬಗ್ಗೆ ಸರಕಾರದಿಂದ ಸೂಚನೆಗಳನ್ನು ಪಡೆಯುವದಾಗಿ ಅವರು ಹೇಳಬೇಕಾಗಿ ಬಂತು.
ಸುಪ್ರಿಂ ಕೋರ್ಟ್‍ನ ಈ ಮೂವರು ನ್ಯಾಯಾಧೀಶರ ಪೀಠ ನೀಡಿದ ಆದೇಶದಲ್ಲಿ ‘ಸಂವಿಧಾನಿಕ ಹಕ್ಕುಗಳು ಮತ್ತು ಮೌಲ್ಯಗಳ ಒಂದು ವ್ಯವಸ್ಥೆಯ ಅಡಿಯಲ್ಲಿ ಒಂದು ಸ್ಥಿರ ಪ್ರಜಾಪ್ರಭುತ್ವ ಸಮಾಜದ ಸೌಧ ಸಮುದಾಯಗಳ ಸಹ–ಅಸ್ತಿತ್ವ ದ ಬುನಾದಿಯ ಮೇಲೆ ನಿಂತಿರುತ್ತದೆ. ಭಾರತ ನಾಗರಿಕತೆಗಳ, ಸಂಸ್ಕೃತಿಗಳ ಮತ್ತು ಮೌಲ್ಯಗಳ ಒಂದು ಮೂಸೆ‘ ಎಂದು ಟಿಪ್ಪಣಿ ಮಾಡುತ್ತ ಒಂದು ಸಮುದಾಯವನ್ನು ಅವಹೇಳನ ಮಾಡುವ ಯಾವುದೇ ಪ್ರಯತ್ನವನ್ನು ಸಂವಿಧಾನಿಕ ಹಕ್ಕುಗಳ ರಕ್ಷಕನಾದ ಈ ನ್ಯಾಯಾಲಯ ಅನಾದರದಿಂದ ಕಾಣುತ್ತದೆ ಎಂದು ಖಾರವಾಗಿಯೇ ಹೇಳಿದೆ.
ಅಲ್ಲದೆ, ಇದರ ಪ್ರಸಾರವನ್ನು ಯಾವುದೇ ರೀತಿಯಲ್ಲಿ ಮುಂದುವರೆಸಬಾರದು ಎಂದು ಆದೇಶ ನೀಡಿದ ನಂತರ ನ್ಯಾಯಮೂರ್ತಿ ಚಂದ್ರಚೂಡ್ ಅವರು ಇಲೆಕ್ಟ್ರಾನಿಕ್ ಮಾಧ್ಯಮಕ್ಕೆ ಕೆಲವು ನಿರ್ದಿಷ್ಠ ಮಾನಕಗಳನ್ನು ರೂಪಿಸಬಲ್ಲ ಐವರು ಪ್ರತಿಷ್ಠಿತ ನಾಗರಿಕರ ಒಂದು ಸಮಿತಿಯನ್ನು ನೇಮಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದರೆಂದು ‘ಲಿವ್‍ಲಾ’ ವರದಿ ಮಾಡಿದೆ.

ಸೆಪ್ಟಂಬರ್ 17ರಂದು ವಿಚಾರಣೆ ಮುಂದುವರೆಯಲಿದೆ.
ಈ ನಡುವೆ ಐವರು ನಿವೃತ್ತ ಐಎಎಸ್ ಅಧಿಕಾರಿಗಳು ಮತ್ತು ಇಬ್ಬರು ಐಎಫ್‍ಎಸ್ ಅಧಿಕಾರಿಗಳು ಈ ಕೇಸಿನಲ್ಲಿ ಮಧ್ಯಪ್ರವೇಶಿಸಲು ಅರ್ಜಿ ಹಾಕಿರುವುದಾಗಿ ವರದಿಯಾಗಿದೆ. ನ್ಯಾಯಾಲಯ ‘ದ್ವೇಷ ಭಾಷಣ’ ಎಂಬ ಪದದ ವ್ಯಾಪ್ತಿ ಮತ್ತು ಅರ್ಥವನ್ನು ವಿಷದಪಡಿಸಬೇಕು, ಈ ಮೂಲಕ ನಾಗರಿಕರು, ಅನುಷ್ಠಾನ ಅಧಿಕಾರಿಗಳು, ಮತ್ತು ನ್ಯಾಯಲಯಗಳಲ್ಲಿ ಯಾವ ಭಾಷಣಕ್ಕೆ ರಕ್ಷಣೆಯಿದೆ, ಯಾವುದು ಇದರ ವ್ಯಾಪ್ತಿಯ ಹೊರಕ್ಕೆ ಹೋಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗುವಂತಾಗಬೇಕು ಎಂಬುದು ತಮ್ಮ ಆಶಯ ಎಂದು ಇವರು ಹೇಳಿದ್ದಾರೆ. ಮನಿಸಬೇಕಾದ ಸಂಗತಿಯೆಂದರೆ ಈ ಬಾರಿಯ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಪಾಸಾದ ಮುಸ್ಲಿಮ್ ಅಭ್ಯರ್ಥಿಗಳ ಪ್ರಮಾಣ 4.22ಶೇ.,ಆದರೆ ಭಾರತದ ಜನಸಂಖ್ಯೆಯಲ್ಲಿ ಮುಸ್ಲಿಮ್ ಸಮುದಾಯದ ಪ್ರಮಾಣ 14.2ಶೇ.!
ಯುಪಿಎಸ್‍ಸಿ ಜಿಹಾದ್ ತಡೆಯಾಜ್ಞೆ ಕುರಿತು ಜನಶಕ್ತಿ ಮೀಡಿಯಾಕ್ಕೆ ಪ್ರತಿಕ್ರಹಿಸಿದ ಜಸ್ಟಿಸ್ ವಿ.ಗೋಪಾಲ ಗೌಡ ರವರು ಸುಪ್ರೀಂ ಕೋರ್ಟ್ ಹೇಳಿರುವ ತೀರ್ಪು ಸರಿಯಾಗಿದೆ ಎಂದು ಹೇಳಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ಸನ್ನತ್ ಕುಮಾರ್ ಬೆಳಗಲಿ ಮಾತನಾಡುತ್ತಾ ಸುಮಾರು 2 ದಶಕಗಳಿಂದಲ್ಲೂ ಕೋಮು ಆಧಾರದಲ್ಲಿ ಈ ದೇಶವನ್ನು ವಿಭಜಿಸಲಾಗುತ್ತಿದೆ. ಕೋಮು ಪ್ರಚೂದನಕಾರಿ ಕಾರ್ಯಕ್ರಮಗಳನ್ನು ನಿಯಂತ್ರಣ ಮಾಡಲು ಕಾನೂನು ನಿಯಮಾವಳಿಗಳನ್ನು ರೂಪಿಸಿ ಆ ಪ್ರಕಾರ ಮಾಧ್ಯಮಗಳು ಕೆಲಸ ಮಾಡುವಂತೆ ನಿದರ್ಶನ ನೀಡಬೇಕು ಹೇಳಿದರು.