“ಸಾಮ್ರಾಜ್ಯಶಾಹಿಗೆ ವಿರೋಧ ಮತ್ತು ಸಾರ್ವಭೌಮತ್ವದ ರಕ್ಷಣೆಯ ಭಾರತದ ಜನರ ಹೆಮ್ಮೆಯ ಪರಂಪರೆಯನ್ನು ಇಂದೂ ಕಾಪಾಡಿಕೊಳ್ಳಬೇಕು”
ನವದೆಹಲಿ: ಅಮೆರಿಕದ ಆಕ್ರಮಣ, ವೆನೆಜುವೆಲಾದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ರಾಷ್ಟ್ರಾಧ್ಯಕ್ಷರನ್ನು ಹಾಗೂ ಪ್ರಥಮ ಮಹಿಳೆಯನ್ನು ಅಪಹರಿಸುವ ಸಂಚು, ಮತ್ತು ವೆನೆಜುವೆಲಾ ಜನರೊಂದಿಗೆ ಸೌಹಾರ್ದವನ್ನು ವ್ಯಕ್ತಪಡಿಸುವ ಉದ್ದೇಶದಿಂದ ಜನವರಿ 12ರಂದು ನವದೆಹಲಿಯ ಹರ್ಕಿಶನ್ ಸಿಂಗ್ ಸುರ್ಜೀತ್ ಭವನದಲ್ಲಿ ಒಂದು ವಿಶಾಲ ಆಧಾರದ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಯಿತು.
ಈ ಸಭೆಯನ್ನು ಉದ್ದೇಶಿಸಿ ಎಂ. ಎ. ಬೇಬಿ (ಪ್ರಧಾನ ಕಾರ್ಯದರ್ಶಿ, ಸಿಪಿಐ(ಎಂ)], ಡಿ. ರಾಜಾ (ಪ್ರಧಾನ ಕಾರ್ಯದರ್ಶಿ, ಸಿಪಿಐ), ರವಿ ರಾಯ್ (ಪೊಲಿಟ್ ಬ್ಯೂರೋ ಸದಸ್ಯ, ಸಿಪಿಐ (ಎಂಎಲ್) ಲಿಬರೇಷನ್), ಜಿ. ದೇವರಾಜನ್ (ಪ್ರಧಾನ ಕಾರ್ಯದರ್ಶಿ, ಎಐಎಫ್‌ಬಿ), ಆರ್. ಎಸ್. ದಾಗರ್ (ಕೇಂದ್ರ ಕಾರ್ಯದರ್ಶಿಮಂಡಳಿ ಸದಸ್ಯ, ಆರ್‌ಎಸ್‌ಪಿ), ತಿರುಚಿ ಶಿವ (ಸಂಸದ, ರಾಜ್ಯಸಭೆಯಲ್ಲಿ ಡಿಎಂಕೆ ನಾಯಕ), ಥೋಲ್. ತಿರುಮಾವಳವನ್ (ಸಂಸದ, ವಿಸಿಕೆ ರಾಷ್ಟ್ರೀಯ ಅಧ್ಯಕ್ಷ), ಜಾವೇದ್ ಅಲಿ ಖಾನ್ (ಸಂಸದ, ಸಮಾಜವಾದಿ ಪಕ್ಷ), ಮನೋಜ್ ಝಾ (ಸಂಸದ, ಆರ್‌ಜೆಡಿ) ಮತ್ತು ಸಂದೀಪ್ ಪಾಠಕ್ (ಸಂಸದ, ಆಮ್ ಆದ್ಮಿ ಪಕ್ಷ) ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು ಹಾಗೂ ಸಂಸತ್ ಸದಸ್ಯರು ಮಾತನಾಡಿದರು:
ಎಲ್ಲಾ ಭಾಷಣಕಾರರು ವೆನೆಜುವೆಲಾ ವಿರುದ್ಧ ಅಮೆರಿಕ ನಡೆಸುತ್ತಿರುವ ಸಾಮ್ರಾಜ್ಯಶಾಹೀ ಆಕ್ರಮಣವನ್ನು ನಿಸ್ಸಂದಿಗ್ಧವಾಗಿ ಖಂಡಿಸಿದರು ಮತ್ತು ಅದನ್ನು ಅಂತರರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಚಾರ್ಟರ್ ಹಾಗೂ ರಾಷ್ಟ್ರೀಯ ಸರ್ವಭೌಮತ್ವದ ತತ್ವದ ಘೋರ ಉಲ್ಲಂಘನೆ ಎಂದು ವಿವರಿಸಿದರು. ಒಂದು ಸ್ವಾಯತ್ತ ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮತ್ತು ಆಯ್ಕೆಯಾದ ನಾಯಕತ್ವವನ್ನು ಉರುಳಿಸಲು ಅಥವಾ ಅಪಹರಿಸಲು ರೂಪಿಸಲಾದ ಸಂಚುಗಳು ಇಡೀ ಜಗತ್ತಿಗೆ ಒಂದು ಅಪಾಯಕಾರಿ ಮಾದರಿಯನ್ನು ಸ್ಥಾಪಿಸುತ್ತವೆ ಎಂದು ಅವರು ಒತ್ತಿ ಹೇಳಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಆರ್ಥಿಕ ದಿಗ್ಬಂಧನ ಖಂಡಿಸಿ ಕೇರಳ ಸಿಎಂ ನೇತೃತ್ವದಲ್ಲಿ ಸತ್ಯಾಗ್ರಹ ಹೋರಾಟ
ಪ್ರಕಾಶ್ ಕಾರಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು, ನ್ಯಾಯಕ್ಕಿಂತ ಭುಜಬಲವೇ ಮೇಲು ಎನ್ನುವ ಕಾಲಘಟ್ಟದಲ್ಲಿ ಪ್ರಜಾಸತ್ತಾತ್ಮಕ ಮತ್ತು ಪ್ರಗತಿಪರ ಶಕ್ತಿಗಳು ಸ್ಪಷ್ಟವಾಗಿ ಹಾಗೂ ಧೈರ್ಯವಾಗಿ ಮಾತಾಡುವುದು ಅತ್ಯಾವಶ್ಯಕ ಎಂದು ಒತ್ತಿ ಹೇಳಿದರು. ಸಾಮ್ರಾಜ್ಯಶಾಹಿಯನ್ನು ವಿರೋಧಿಸುವಲ್ಲಿ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ಭಾರತ ಜನರಿಗೆ ಹೆಮ್ಮೆಯ ಪರಂಪರೆ ಇದೆ, ಆ ಪರಂಪರೆಯನ್ನು ಇಂದೂ ಕಾಪಾಡಬೇಕು ಎಂದು ಅವರು ನೆನಪಿಸಿದರು.
ಸಭೆಯಲ್ಲಿ ವೆನೆಜುವೆಲಾದೊಂದಿಗೆ ಸೌಹಾರ್ದದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ನಿರ್ಣಯವು ಅಮೆರಿಕದ ಆಕ್ರಮಣವನ್ನು ತೀವ್ರವಾಗಿ ಖಂಡಿಸಿ, ವೆನೆಜುವೆಲಾ ಜನರೊಂದಿಗೆ ದೃಢ ಸೌಹಾರ್ದವನ್ನು ವ್ಯಕ್ತಪಡಿಸಿದೆ ಮತ್ತು ಭಾರತ ಸರ್ಕಾರ ಸ್ವತಂತ್ರ, ತತ್ವಾಧಾರಿತ ವಿದೇಶಾಂಗ ನೀತಿಯನ್ನು ಅನುಸರಿಸುವಂತೆ ಕರೆ ನೀಡಿದೆ. ವೆನೆಜುವೆಲಾ, ಕ್ಯೂಬಾ ಮತ್ತು ಪ್ಯಾಲೆಸ್ತೈನ್ ಜನರೊಂದಿಗೆ ಬಹಿರಂಗವಾಗಿ ಸೌಹಾರ್ದ ವ್ಯಕ್ತಪಡಿಸಿ ಅಮೆರಿಕದ ಆಕ್ರಮಣವನ್ನು ಖಂಡಿಸುವಂತೆ ಸರ್ಕಾರವನ್ನು ಅದು ಆಗ್ರಹಿಸಿದೆ.

ಸಭೆಯು ಸಾಮ್ರಾಜ್ಯಶಾಹಿ ಆಕ್ರಮಣದ ವಿರುದ್ಧ ಧ್ವನಿ ಎತ್ತಲು ಮತ್ತು ಶಾಂತಿ, ಸಾರ್ವಭೌಮತ್ವ ಹಾಗೂ ಅಂತರರಾಷ್ಟ್ರೀಯ ಕಾನೂನಿನ ರಕ್ಷಣೆಗೆ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಭಾರತ ಜನತೆಗೆ ಮನವಿ ಮಾಡಿತು. ಸಭೆಯು ಅಂಗೀಕರಿಸಿದ ವೆನೆಜುವೆಲಾದೊಂದಿಗೆ ಸೌಹಾರ್ದದ ನಿರ್ಣಯವನ್ನು ಈ ಮುಂದೆ ಕೋಡಲಾಗಿದೆ:
ವೆನೆಜುವೆಲಾದೊಂದಿಗೆ ಸೌಹಾರ್ದದ ನಿರ್ಣಯ
ನಾವು, ಭಾರತದ ರಾಜಕೀಯ ಪಕ್ಷಗಳು, ಅದರ ಜನರನ್ನು ಪ್ರತಿನಿಧಿಸಿ, ವೆನೆಜುವೆಲಾ ವಿರುದ್ಧ ಅಮೆರಿಕ ನಡೆಸುತ್ತಿರುವ ಆಕ್ರಮಣವನ್ನು ಮತ್ತು ಅದರ ಚುನಾಯಿತ ಅಧ್ಯಕ್ಷ ನಿಕೋಲಾಸ್ ಮದುರೊ ಹಾಗೂ ಪ್ರಥಮ ಮಹಿಳೆ ಸಿಲಿಯಾ ಫ್ಲೊರೆಸ್ ಅವರನ್ನು ಅಪಹರಿಸಿರುವುದನ್ನೂ ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ.
ನಾವು ಕ್ಯೂಬಾ, ಮೆಕ್ಸಿಕೋ, ಕೊಲಂಬಿಯಾ, ಇರಾನ್ ಮತ್ತು ಗ್ರೀನ್‌ಲ್ಯಾಂಡ್ ವಿರುದ್ಧ ಯುಎಸ್ ಬೆದರಿಕೆಗಳನ್ನೂ ಖಂಡಿಸುತ್ತೇವೆ.
ಯುನೈಟೆಡ್ ಸ್ಟೇಟ್ಸ್‌ನ ಈ ಕ್ರತ್ಯಗಳು ರಾಷ್ಟ್ರೀಯ ಸಾರ್ವಭೌಮತ್ವವನ್ನು ಗೌರವಿಸಬೇಕು ಮತ್ತು ಸಾರ್ವಭೌಮ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಹೇಳುವ ವಿಶ್ವಸಂಸ್ಥೆಯ ಚಾರ್ಟರ್‌ನ ಉಲ್ಲಂಘನೆಯಾಗಿವೆ.
ಅಮೆರಿಕದ ಆಕ್ರಮಣ ವೆನೆಜುವೆಲಾದ ಶ್ರೀಮಂತ ನೈಸರ್ಗಿಕ ಸಂಪನ್ಮೂಲಗಳನ್ನು, ವಿಶೇಷವಾಗಿ ಅದರ ತೈಲವನ್ನು, ಕಬಳಿಸುವ ಒಂದು ನಾಚಿಕೆಗೇಡೀ ಪ್ರಯತ್ನವಾಗಿದೆ. ಜಗತ್ತಿನಲ್ಲೇ ಅತಿ ದೊಡ್ಡದೆಂದು ಹೇಳಲಾಗಿರುವ ತೈಲ ಮೀಸಲುಗಳನ್ನು ಹೊಂದಿರುವ ವೆನೆಜುವೆಲಾವನ್ನು ವಶಪಡಿಸಿಕೊಂಡು ನಿಯಂತ್ರಿಸಲು ಯುಎಸ್ ಪ್ರಯತ್ನಿಸುತ್ತಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಅಮೆರಿಕದ ತೈಲ ಕಂಪನಿಗಳ ಉನ್ನತಾಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿದ್ದು, ಇಂತಹ ಸ್ವಾಧೀನದ ಯೋಜನೆಯನ್ನು ರೂಪಿಸುತ್ತಿದ್ದಾರೆ ಎಂಬ ವರದಿಗಳಿವೆ.
ಯುಎಸ್ ನ ‘ರಾಷ್ಟ್ರೀಯ ಭದ್ರತಾ ರಣನೀತಿ, 2025’ ಕುಪ್ರಸಿದ್ಧ ಮೊನ್ರೋ ಸಿದ್ಧಾಂತದ ಟ್ರಂಪ್ ಉಪಬಂಧವನ್ನು ಜಾರಿಗೊಳಿಸುವ ಉದ್ದೇಶವನ್ನು ಘೋಷಿಸಿದ್ದು, ಸಮಸ್ತ ಲ್ಯಾಟಿನ್ ಅಮೆರಿಕ ಪ್ರದೇಶದ ಮೇಲೆ ಪ್ರಾಬಲ್ಯ ಸಾಧಿಸುವ ಗುರಿಯನ್ನು ಹೊಂದಿದೆ. ಲ್ಯಾಟಿನ್ ಅಮೆರಿಕದ ದೇಶಗಳು ಪ್ರದೇಶದ ಹೊರಗಿನ ರಾಷ್ಟ್ರಗಳೊಂದಿಗೆ ವ್ಯಾಪಾರ ನಡೆಸಲು ಅಮೆರಿಕ ಅವಕಾಶ ನೀಡುವುದಿಲ್ಲ ಎಂದು ಅದು ಬಹಿರಂಗವಾಗಿ ಘೋಷಿಸಿದೆ. ಇದು ಆಧುನಿಕ ಕಾಲದ ದರೋಡೆಕೋರತನ ಮತ್ತು ಜಗಳಗಂಟತನವಲ್ಲದೆ ಮತ್ತೇನೂ ಅಲ್ಲ. ಲ್ಯಾಟಿನ್ ಅಮೆರಿಕದ ಸಾರ್ವಭೌಮ ದೇಶಗಳ ಹಕ್ಕುಗಳ ಮೇಲಿನ ಈ ಅತಿಕ್ರಮಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ನಾವು ಅಮೆರಿಕದ ಆಕ್ರಮಣವನ್ನು ಪ್ರತಿರೋಧಿಸಿ ಬೀದಿಗಳಲ್ಲಿ ಹೋರಾಡುತ್ತಿರುವ ಮತ್ತು ತಮ್ಮ ರಾಷ್ಟ್ರಾಧ್ಯಕ್ಷ ಹಾಗೂ ಪ್ರಥಮ ಮಹಿಳೆಯ ಬಿಡುಗಡೆಗಾಗಿ ಆಗ್ರಹಿಸುತ್ತಿರುವ ವೆನೆಜುವೆಲಾದ ಜನತೆಯೊಂದಿಗೆ ನಮ್ಮ ಅಚಲ ಸೌಹಾರ್ದವನ್ನು ಘೋಷಿಸುತ್ತೇವೆ.
ನಾವು ಅಮೆರಿಕದ ಅತ್ಯಂತ ಅಮಾನುಷ ನಿರ್ಬಂಧಕ್ಕೆ ಒಳಗಾಗಿರುವ ಮತ್ತು ಈಗ ನೇರ ಮಿಲಿಟರಿ ಆಕ್ರಮಣದ ಬೆದರಿಕೆಯನ್ನು ಎದುರಿಸುತ್ತಿರುವ ಕ್ಯೂಬಾ ಜನತೆಯೊಂದಿಗೂ ಸೌಹಾರ್ದವನ್ನು ವ್ಯಕ್ತಪಡಿಸುತ್ತೇವೆ.
ನಾವು ಪ್ಯಾಲೆಸ್ತೈನ್ ಜನರೊಂದಿಗೆ ಮತ್ತು ಅಮೆರಿಕ ಹಾಗೂ ಇಸ್ರೇಲ್ ಸೇರಿದಂತೆ ಅದರ ಮಿತ್ರರ ಆಕ್ರಮಣವನ್ನು ಪ್ರತಿರೋಧಿಸುತ್ತಿರುವ ಇತರ ಎಲ್ಲಾ ದೇಶಗಳ ಜನರೊಂದಿಗೆ ಸೌಹಾರ್ದತೆಯಿಂದ ನಿಲ್ಲತ್ತೇವೆ.
ಭಾರತದ ಜನತೆ ತಮ್ಮ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ಮೌಲ್ಯವನ್ನು ಕಾಪಾಡಿಕೊಳ್ಳುತ್ತೇವೆ. ಮತ್ತು ಎಲ್ಲಾ ದೇಶಗಳ ಜನರಿಗೂ ಅದನ್ನೇ ಬಯಸುತ್ತೇವೆ. ಭಾರತದ ವಿದೇಶಾಂಗ ನೀತಿ ಒಂದೊಮ್ಮೆ ಈ ಹೆಮ್ಮೆಯ ಪರಂಪರೆಯನ್ನು ಬಿಂಬಿಸುತಿತ್ತು. ಆದರೆ ಇಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿದೇಶಾಂಗ ನೀತಿ ಈ ಪರಂಪರೆಯಿಂದ ದೂರ ಸರಿದಿದೆ. ಸರ್ಕಾರ ಯುಎಸ್ ಒತ್ತಡಕ್ಕೆ ಒಳಗಾಗಿ, ಜಾಗತಿಕ ದಕ್ಷಿಣದ ಹಕ್ಕುಗಳ ರಕ್ಷಣೆಗೆ ನಿಲ್ಲಲು ಇಷ್ಟಪಡುತ್ತಿಲ್ಲ.
ಸರ್ಕಾರ ತನ್ನ ಈ ಅಧೀನ ವಿದೇಶಾಂಗ ನೀತಿಯನ್ನು ಬದಲಿಸಿ ತನ್ನ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕೆಂದು ನಾವು ಆಗ್ರಹಿಸುತ್ತೇವೆ. ಭಾರತ ಸರ್ಕಾರ ವೆನೆಜುವೆಲಾ, ಕ್ಯೂಬಾ ಮತ್ತು ಪ್ಯಾಲೆಸ್ತೈನ್ ಜನರೊಂದಿಗೆ ತನ್ನ ಸೌಹಾರ್ದವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕು, ಮತ್ತು ಯುಎಸ್ ಆಕ್ರಮಣವನ್ನು ಖಂಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.
ನಾವು ವೆನೆಜುವೆಲಾ ಪರವಾಗಿ ಸೌಹಾರ್ದದಿಂದ ನಿಲ್ಲಬೇಕು ಮತ್ತು ಅಮೆರಿಕದ ಆಕ್ರಮಣವನ್ನು ಖಂಡಿಸಬೇಕು ಎಂದು ನಮ್ಮ ದೇಶದ ಜನರಿಗೆ ನಾವು ಮನವಿ ಮಾಡುತ್ತೇವೆ. ಆಕ್ರಮಣಕಾರರು ಮತ್ತು ಗೂಂಡಾಗಿರಿ ನಡೆಸುವವರು ಜಾಗತಿಕ ಶಾಂತಿಗೆ ಒಂದು ಬೆದರಿಕೆ; ಅವರು ಪ್ರತಿಯೊಬ್ಬರಿಗೂ ಒಂದು ಅಪಾಯ. ಇಂತಹ ಆಕ್ರಮಣವನ್ನು ವಿರೋಧಿಸುವುದು ಮತ್ತು ಸಾರ್ವಭೌಮತ್ವದ ರಕ್ಷಣೆಗೆ ನಿಲ್ಲುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ.
ಇದನ್ನೂ ನೋಡಿ: ವೆನೆಜುವೆಲಾ ಮೇಲೆ ಯು.ಎಸ್. ಆಕ್ರಮಣ ಖಂಡಿಸಿ ಎಡಪಕ್ಷಗಳ ಪ್ರತಿಭಟನೆ Janashakthi Media
