ಕಳೆದ ಎರಡು ವಾರಗಳಲ್ಲಿ ಜನರ ವ್ಯಾಪಕ ಪ್ರತಿಭಟನಾ ಪ್ರದರ್ಶನಗಳಿಂದ, ಮ್ಯಾನ್ಮಾರ್ ಮಿಲಿಟರಿ ಸರಕಾರವು ಯಾವುದೇ ಜನವಿಭಾಗದ ಬೆಂಬಲವಿಲ್ಲದೆ ಒಂಟಿಯಾಗಿದೆ ಎಂಬುದು ಸ್ಪಷ್ಟವಾಗಿದೆ. ನೂರಾರು ಜನರನ್ನು ಬಂಧಿಸಲಾಗಿದೆ. ಪ್ರದರ್ಶನಗಳ ಮೇಲೆ ಲಾಠಿಚಾರ್ಜ್, ಜಲಫಿರಂಗಿ ದಾಳಿ, ಗೋಳಿಬಾರು ಮಾಡಲಾಗುತ್ತಿದೆ. ಇವೆಲ್ಲದಕ್ಕೆ ಬೆದರದೆ ಮ್ಯಾನ್ಮಾರ್ ಜನ ಮಿಲಿಟರಿ ಸರಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಮಿಲಿಟರಿ ಸರಕಾರದ ಈ ಕ್ರೂರ ದಮನ ಕ್ರಮಗಳಿಗೆ ಮಣಿಯದೆ ಸರಕಾರಿ ನೌಕರರು, ರೈಲ್ವೇ, ಆರೋಗ್ಯ, ವಿದ್ಯುತ್ ಕ್ಷೇತ್ರದ ಉದ್ಯೋಗಿಗಳು ಭಾರೀ ಸಂಖ್ಯೆಯಲ್ಲಿ ಸಾಮೂಹಿಕ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದು, ಈ ಕ್ಷೇತ್ರಗಳ ಉದ್ಯೋಗಿಗಳು ತಿರುಗಿ ಬಿದ್ದರೆ ಮಿಲಿಟರಿಗೆ ಸರಕಾರ ನಡೆಸುವುದೇ ಕಷ್ಟವಾಗಬಹುದು.
ಮ್ಯಾನ್ಮಾರ್ (ಬರ್ಮಾ) ನಲ್ಲಿ ಇತ್ತೀಚೆಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವನ್ನು ಉರುಳಿಸಿ ಮಿಲಿಟರಿ ಅಧಿಕಾರ ಕಸಿದುಕೊಂಡಿದ್ದರ ವಿರುದ್ಧ ಜನ ದಂಗೆ ಎದ್ದಿದ್ದಾರೆ. ಪ್ರಜಾಸತ್ತೆಯ ಕ್ರೂರ ದಮನವನ್ನು ಬಲವಾಗಿ ವಿರೋಧಿಸಿ, ಕಳೆದ ಹಲವು ದಿನಗಳಿಂದ ಸಮಾಜದ ಹೆಚ್ಚು ಕಡಿಮೆ ಎಲ್ಲ ಜನವಿಭಾಗಗಳು ಬೀದಿಗಿಳಿದಿದ್ದಾರೆ. ನವೆಂಬರ್ 2020 ರಲ್ಲಿ ನಡೆದ ಚುನಾವಣೆಗಳ ನಂತರ ಹೊಸ ಪಾರ್ಲಿಮೆಂಟಿನ ಸಭೆ ಆರಂಭವಾಗಬೇಕಿದ್ದ ಫೆಬ್ರುವರಿ 1 ರಂದು ತತ್ಮದಾವ್ (ಮ್ಯಾನ್ಮಾರ್ ಮಿಲಿಟರಿ) ಕ್ಷಿಪ್ರದಂಗೆ ನಡೆಸಿ ಅಧಿಕಾರ ಕಸಿದುಕೊಂಡಿತು. ಚುನಾವಣೆಯಲ್ಲಿ ಅಂಗ್ ಸಾನ್ ಸುಕಿ ಅವರ ನಾಯತ್ವದ ನೇಶನಲ್ ಲೀಗ್ ಫಾರ್ ಡೆಮೊಕ್ರಸಿ (ಎನ್.ಎಲ್.ಡಿ) ಭಾರೀ ಬಹುಮತದಿಂದ ಮರು ಆಯ್ಕೆಯಾಗಿತ್ತು. ಚುನಾವಣಾ ಫಲಿತಾಂಶಗಳು ಕಾನೂನುಬಾಹಿರ ಎಂದು ಘೋಷಿಸಿದ ಮಿಲಿಟರಿ ಅಧ್ಯಕ್ಷ ಡಿನ್ ಮಿಂಟ್ ಮತ್ತು ಸ್ಟೇಟ್ ಕೌನ್ಸಲರ್ (ಪ್ರಧಾನಿಯಂತಹ ಹುದ್ದೆ) ಅಂಗ್ ಸಾನ್ ಸುಕಿ ಅವರನ್ನು ಮತ್ತು ಹಲವಾರು ಎನ್.ಎಲ್.ಡಿ ನಾಯಕರು ಮತ್ತು ಕಾರ್ಯಕರ್ತರುಗಳನ್ನು ಬಂಧಿಸಿದೆ.
ಮಿಲಿಟರಿ ಕ್ಷಿಪ್ರದಂಗೆಯಾಗಲಿ, ಸರಕಾರಗಳಾಗಲಿ ಮ್ಯಾನ್ಮಾರ್ ಗೆ ಹೊಸದಲ್ಲ. 1962ರಲ್ಲಿ ಜನರಲ್ ನೇವಿನ್ ನಾಯಕತ್ವದಲ್ಲಿ ಅಧಿಕಾರ ಕಸಿದುಕೊಂಡ ನಂತರ ಹಲವು ದಶಕಗಳ ಕಾಲ ಮಿಲಿಟರಿ ಆಡಳಿತ ನಡೆಸಿದೆ. ಪ್ರಜಾಪ್ರಭುತ್ವಕ್ಕಾಗಿ ನಡೆದ ಚಳುವಳಿ 1981ರಲ್ಲಿ ಸಫಲವಾದರೂ, ಮತ್ತೆ ಅದನ್ನು ಮಿಲಿಟರಿ ದಮನಿಸಿತು. ಅದರ ನಾಯಕಿ ಅಂಗ್ ಸಾನ್ ಸುಕಿ ಅವರನ್ನು 16 ವರ್ಷಗಳ ಕಾಲ ಗೃಹ ಬಂಧನದಲ್ಲಿರಿಸಿತು.
ಹಲವು ದಶಕಗಳ ದೀರ್ಘ ಕಷ್ಟಕರ ಹೋರಾಟದ ನಂತರ ಮಿಲಿಟರಿ ಕೆಲವು ಅಧಿಕಾರಗಳನ್ನು ಬಿಟ್ಟುಕೊಟ್ಟು 2008ರಲ್ಲಿ ರಚಿಸಿದ ಸಂವಿಧಾನದ ಪ್ರಕಾರ ಒಂದು ಹೈಬ್ರಿಡ್ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದಿತು. ಈ ಹೈಬ್ರಿಡ್ ವ್ಯವಸ್ಥೆಯಲ್ಲಿ ಮಿಲಿಟರಿ ಪ್ರಮುಖ ಅಧಿಕಾರಗಳನ್ನು ತಾನೇ ಇಟ್ಟುಕೊಂಡಿತ್ತು. ಪಾರ್ಲಿಮೆಂಟಿನ ಎರಡೂ ಸದನಗಳಲ್ಲಿ ಕಾಲು ಭಾಗದ ಸೀಟುಗಳನ್ನು ಮಿಲಿಟರಿ ನಾಮನಿರ್ದೇಶನಕ್ಕೆ ಮೀಸಲಾಗಿಟ್ಟಿತು. ರಕ್ಷಣೆ ಮತ್ತು ಗೃಹ ಮಂತ್ರಿ ಹುದ್ದೆ ಹಾಗೂ ಇತರ ನಿರ್ಣಾಯಕ ಹುದ್ದೆಗಳು ಮಿಲಿಟರಿಯವರಿಗೆ ಸೀಮಿತವಾಗಿದ್ದವು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
2015ರಲ್ಲಿ ಮೊದಲ ಬಾರಿಗೆ ಎನ್.ಎಲ್.ಡಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಿ, ಎರಡೂ ಸದನಗಳಲ್ಲಿ ಶೇ. 80ರಷ್ಟು (ಮಿಲಿಟರಿಗೆ ಮೀಸಲಾಗಿರದವು) ಸೀಟುಗಳನ್ನು ಗೆದ್ದುಕೊಂಡಿತು. ಸು ಕಿ ಅವರು ಪತಿ ವಿದೇಶಿ ನಾಗರಿಕರಾದ್ದರಿಂದ ಅವರು ಸಂವಿಧಾನದ ಪ್ರಕಾರ ಸರಕಾರದ ಮುಖ್ಯಸ್ಥರಾಗುವುದು ಅಸಾಧ್ಯವಾದ್ದರಿಂದ, ಅವರನ್ನು ಸ್ಟೇಟ್ ಕೌನ್ಸಲರ್ (ಪ್ರಧಾನಿಗೆ ಸಮನಾದ ಹುದ್ದೆ) ಆಗಿ ನೇಮಿಸಲಾಯಿತು.
ನವೆಂಬರ್ 2020ರಲ್ಲಿ ನಡೆದ ಚುನಾವಣೆಯಲ್ಲಿ ಎನ್.ಎಲ್.ಡಿ ಕೆಳಸದನ (ಪ್ರತಿನಿಧಿ ಸಭೆ) ದಲ್ಲಿ 310ರಲ್ಲಿ 258 ಮತ್ತು ಮೇಲ್ಸದನ (ರಾಷ್ಟ್ರೀಯತೆಗಳ ಸಭೆ) ದಲ್ಲಿ 168ರಲ್ಲಿ 138 ಸೀಟುಗಳನ್ನು ಗೆದ್ದು, ತನ್ನ ಸ್ಥಾನವನ್ನು ಇನ್ನಷ್ಟು ಉತ್ತಮ ಪಡಿಸಿಕೊಂಡಿತು. ಮಿಲಿಟರಿ ಬೆಂಬಲದ ಯು.ಎಸ್.ಡಿ.ಪಿ ಪಕ್ಷ ಕೆಳಸದನದಲ್ಲಿ ಕೇವಲ 26 ಸೀಟು ಮತ್ತು ಶೇ. 5.9 ಮತ ಗಳಿಸಿತು.
ಈ ಫಲಿತಾಂಶದಿಂದ ಹತಾಶವಾದ ಮಿಲಿಟರಿ, ಚುನಾವಣೆಯಲ್ಲಿ ತೀವ್ರ ಅಕ್ರಮಗಳು ನಡೆದಿವೆ ಎಂದು ಆಪಾದಿಸಿತು. ಅದರ ಬೆನ್ನಲ್ಲೇ ಕ್ಷಿಪ್ರದಂಗೆ ನಡೆಯಿತು. ಸಂವಿಧಾನದಲ್ಲಿ ಇರುವ ಅಂಶವನ್ನು ಬಳಸಿಕೊಂಡು ಒಂದು ವರ್ಷದ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಒಂದು ವರ್ಷದ ನಂತರ ಚುನಾವಣೆ ನಡೆಸಲಾಗುವುದು. ಅಲ್ಲಿಯವರೆಗೆ ಮಿಲಿಟರಿ ಮುಖ್ಯಸ್ಥ ಜನರಲ್ ಮಿನ್ ಔಂಗ್ ಹ್ಲಿಯಂಗ್ ಸರಕಾರದ ಮುಖ್ಯಸ್ಥರಾಗಿ ಆಡಳಿತ ನಡೆಸುತ್ತಾರೆ ಎಂದು ಮಿಲಿಟರಿ ಘೋಷಿಸಿತು.
ಈ ಮಿಲಿಟರಿ ಕ್ಷಿಪ್ರದಂಗೆ ಯಾತಕ್ಕಾಗಿ ? ಉನ್ನತ ಮಿಲಿಟರಿ ಅಧಿಕಾರಿಗಳು ದೇಶದ ವ್ಯಾಪಾರಿ ಹಿತಾಸಕ್ತಿಗಳ ಮತ್ತು ಬಾಲಬಡುಕರ ಜಾಲವನ್ನು ದಶಕಗಳಿಂದ ಕಟ್ಟಿದ್ದಾರೆ. ಮರಮಟ್ಟು, ರತ್ನಗಳು ಮತ್ತು ಗಣಿ ಸಂಪನ್ಮೂಲಗಳ ಲಾಭದಾಯಕ ಕ್ಷೇತ್ರಗಳಲ್ಲಿ ಹಾಲಿ ಮತ್ತು ಮಾಜಿ ಮಿಲಿಟರಿ ಉನ್ನತ ಅಧಿಕಾರಿಗಳ ಕಂಪನಿಗಳು ಅವ್ಯಾಹತವಾಗಿ ಲೂಟಿ ಹೊಡೆಯುತ್ತಿವೆ.
ಈ ಚುನಾವಣೆಯ ಹೊತ್ತಿಗೆ ತಾವು ಬೆಂಬಲಿಸಿದ ಯು.ಎಸ್.ಡಿ.ಪಿ ಪಕ್ಷ ಬಲಗಳಿಸಿಕೊಂಡು ಎನ್.ಎಲ್.ಡಿ ಮತ್ತು ಸು ಕಿ ಅವರಿಗೆ ಸವಾಲು ಎಸಗಲು ಸಮರ್ಥವಾಗಿರುತ್ತದೆ ಎಂದು ಅವರು ಭಾವಿಸಿದ್ದರು. ಆದರೆ ಅದು ಆಗಲಿಲ್ಲ, ಅಧ್ಯಕ್ಷ ಮತ್ತು ಎರಡನೇ ಉಪಾಧ‍್ಯಕ್ಷ ಆಗಬೇಕಾದರೆ ಮೂರನೇ ಎರಡರಷ್ಟು (ಶೇ. 67) ಬಹುಮತ ಇರಬೇಕು ಎಂಬ ಕಠಿಣ ಷರತ್ತು ಗಳಿಂದ ಸಹ ಎನ್.ಎಲ್.ಡಿ ಕೈಗೆ (ಸೀಮಿತವಾದರೂ) ಅಧಿಕಾರ ಹೋಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.2015 ಮತ್ತು 2020ರಲ್ಲೂ ಮಿಲಿಟರಿಯೇತರ ಸೀಟುಗಳಲ್ಲಿ ಎನ್.ಎಲ್.ಡಿ ಶೇ. 80 ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದಿತು.
ಮಿಲಿಟರಿ ಮತ್ತು ಅದರ ಜೊತೆ ಶಾಮೀಲಾಗಿ ರಾಜಕೀಯ ಮತ್ತು ಆರ್ಥಿಕ ಪರಮಾಧಿಕಾರವನ್ನು ಚಲಾಯಿಸುತ್ತಿದ್ದ ಪಟ್ಟಭದ್ರ ಹಿತಾಸಕ್ತಿಗಳಿಗೆ, ಎನ್.ಎಲ್.ಡಿ ಮತ್ತು ಸು ಕಿ ಅವರು ಚುನಾವಣೆಗಳ ಮೂಲಕ ಸವಾಲೊಡ್ಡುವುದು ಅಪಥ್ಯವಾಗಿತ್ತು.
ಕಳೆದ ಎರಡು ವಾರಗಳಲ್ಲಿ ಜನರ ವ್ಯಾಪಕ ಪ್ರತಿಭಟನಾ ಪ್ರದರ್ಶನಗಳಿಂದ, ಮಿಲಿಟರಿ ಸರಕಾರವು ಜನತೆಯ ಯಾವುದೇ ವಿಭಾಗದ ಬೆಂಬಲವಿಲ್ಲದೆ ಒಂಟಿಯಾಗಿದೆ ಎಂಬುದು ಸ್ಪಷ್ಟವಾಗಿದೆ. ನೂರಾರು ಜನರನ್ನು ಬಂಧಿಸಲಾಗಿದೆ. ಪ್ರದರ್ಶನಗಳ ಮೇಲೆ ಲಾಠಿಚಾರ್ಜ್, ಜಲಫಿರಂಗಿ ದಾಳಿ, ಗೋಳಿಬಾರು ಮಾಡಲಾಗುತ್ತಿದೆ. ಇವೆಲ್ಲದಕ್ಕೆ ಬೆದರದೆ ಮ್ಯಾನ್ಮಾರ್ ಜನ ಮಿಲಿಟರಿ ಸರಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಮಿಲಿಟರಿ ಸರಕಾರದ ಈ ಕ್ರೂರ ದಮನ ಕ್ರಮಗಳಿಗೆ ಮಣಿಯದೆ ಸರಕಾರಿ ನೌಕರರು, ರೈಲ್ವೇ, ಆರೋಗ್ಯ, ವಿದ್ಯುತ್ ಕ್ಷೇತ್ರದ ಉದ್ಯೋಗಿಗಳು ಭಾರೀ ಸಂಖ್ಯೆಯಲ್ಲಿ ಸಾಮೂಹಿಕ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದು, ಈ ಕ್ಷೇತ್ರಗಳ ಉದ್ಯೋಗಿಗಳು ತಿರುಗಿ ಬಿದ್ದರೆ ಮಿಲಿಟರಿಗೆ ಸರಕಾರ ನಡೆಸುವುದೇ ಕಷ್ಟವಾಗಬಹುದು.
ಮ್ಯಾನ್ಮಾರ್ ಜನತೆಯ ಈ ಶಾಂತಿಯುತ ಪ್ರತಿಭಟನೆಗಳಿಗೆ ಭಾರತದ ಮತ್ತು ಜಗತ್ತಿನ ಜನರ ಸೌಹಾರ್ದ ಬೆಂಬಲ ಅಗತ್ಯ. ಜನರ ಪ್ರಜಾಸತ್ತಾತ್ಮಕ ಆಯ್ಕೆಯನ್ನು ಮನ್ನಿಸದ ಮಿಲಿಟರಿ ಸರಕಾರವನ್ನು ವಿರೋಧಿಸಭೆಕಾಗಿದೆ. ಭಾರತ ಸರಕಾರ ಸೇರಿದಂತೆ ಜಗತ್ತಿನ ಸರಕಾರಗಳು, ಜಾಗತಿಕ ಸಂಸ್ಥೆಗಳು ಪ್ರಜಾಸತ್ತೆಯ ಪುನಃಸ್ಥಾಪನೆಗೆ ಒತ್ತಾಯಿಸಬೇಕಿದೆ. ಈ ವಿದ್ಯಮಾನಗಳನ್ನು ಭೂಗೋಳ-ರಾಜಕೀಯ ವ್ಯೂಹದ ಅಥವಾ ಮ್ಯಾನ್ಮಾರ್ ನಲ್ಲಿ ಭಾರತದ ಆರ್ಥಿಕ-ಮಿಲಿಟರಿ-ರಾಜಕೀಯ ಹಿತಾಸಕ್ತಿಯಿಂದ ದೃ಼ಷ್ಟಿಯಿಂದ ನೋಡದೆ, ಭಾರತ ಸರಕಾರ ಸಹ ಮ್ಯಾನ್ಮಾರ್ ಜನತೆಯ ಜತೆ ನಿಲ್ಲಬೇಕಿದೆ.