ಮೈಸೂರು: ದೆಹಲಿಯ ಎನ್‌ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ತಂಡವು ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಕಟ್ಟಡದಲ್ಲಿ ಡ್ರಗ್ಸ್ ಉತ್ಪಾದನೆ ಮಾಡಲಾಗುತ್ತಿದೆ ಎಂಬ ಅನುಮಾನದ ಮೇಲೆ ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದು, ರಾತ್ರಿಯವರೆಗೂ ಪರಿಶೀಲನೆ ನಡೆಸಿದೆ.
ಪ್ರಕರಣವೊಂದನ್ನು ಭೇದಿಸುತ್ತಿದ್ದಾಗ ಅದರ ಆರೋಪಿಯ ಸಂಬಂಧಿಕರ ಘಟಕದಲ್ಲಿ ಮಾದಕ ವಸ್ತು ಉತ್ಪಾದಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ದೊರಕಿದೆ. ತಕ್ಷಣವೇ ಎನ್‌ಸಿಬಿಯ 8 ಅಧಿಕಾರಿ ಹಾಗೂ ಸಿಬ್ಬಂದಿ ಎರಡು ಕಾರುಗಳಲ್ಲಿ ಗಣಪತಿ ಲಾಲ್ ಮನೆ ಹಾಗೂ ಘಟಕದ ಮೇಲೆ ಏಕಾಏಕಿ ನಡೆಸಿದ್ದು, ರಾತ್ರಿಯವರೆಗೂ ವಿಚಾರಣೆ ನಡೆಸಿದ್ದಾರೆ. ಸ್ಥಳೀಯರಾದ ಬೋರೇಗೌಡ ಅವರ ಒಡೆತನದ ಕಟ್ಟಡವನ್ನು, ಆಲನಹಳ್ಳಿ ನಿವಾಸಿ ಗಣಪತ್ ಲಾಲ್ ಬಾಡಿಗೆಗೆ ಪಡೆದಿದ್ದರು. ಅಲ್ಲಿ ಟುಕ್-ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಮ್ಯಾನಿಫ್ಯಾಕ್ಚರಿಂಗ್ ಹೆಸರಿನ ಘಟಕ ನಡೆಸುತ್ತಿದ್ದರು. ದಾಳಿ ವೇಳೆ ಖಾಲಿ ಬಾಟಲಿ, ಕಾಸ್ಮಿಕ್ ಸೋಡಾ ಮತ್ತು ಉಪ್ಪು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ದೇವದುರ್ಗ | ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿ: ನಾಗಲಕ್ಷ್ಮಿ ಚೌಧರಿ
ಬೋರೇಗೌಡರಿಗೆ ಕೆಐಡಿಬಿಯಿಂದ ಈ ಭೂಮಿ ಮಂಜೂರಾಗಿದೆ. ಗಣಪತ್ ಲಾಲ್ ಅವರು ಫಿನಾಯಿಲ್ ಘಟಕ ಆರಂಭಿಸಲು 5 ಲಕ್ಷ ರೂ. ಮುಂಗಡ ಪಾವತಿ ಹಾಗೂ 46 ಸಾವಿರ ರೂ. ತಿಂಗಳ ಬಾಡಿಗೆಗೆ ಒಪ್ಪಿ ಕರಾರು ಪತ್ರ ಮಾಡಲಾಗಿದೆ. ಹೈಟೆಕ್ ಯಂತ್ರಗಳನ್ನು ಅಳವಡಿಸಿದ್ದರು, ಆದರೆ ಇನ್ನೂ ಕೆಲಸ ಆರಂಭಿಸಿಲ್ಲ. ಗಣಪತ್‌ಲಾಲ್ ಅವರ ಸಂಬಂಧಿಕ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರಿಂದ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಬೋರೇಗೌಡರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಬೋರೇಗೌಡ ಪರ ವಕೀಲ ಭರತ್ ತಿಳಿಸಿದರು.
ಕಟ್ಟಡದಲ್ಲಿ ರಾತ್ರಿ 3-4 ಹಿಂದಿ ಭಾಷಿಗ ಯುವಕರು ಕೆಲಸ ಮಾಡುತ್ತಿದ್ದರು. ರಾತ್ರಿಯ ವೇಳೆ ಈ ಪ್ರದೇಶವೂ ನಿರ್ಜನವಾಗಿರುತ್ತದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಕೆ.ಎಸ್.ಸುಂದರ್‌ರಾಜ್ ಭೇಟಿ ನೀಡಿದರು.
ಇಲ್ಲಿ ಫಿನಾಯಿಲ್ ತಯಾರಿಸುವ ಸಾಮಾಗ್ರಿಗಳು ಸಿಕ್ಕಿದೆ. ಮಾದಕ ವಸ್ತು ತಯಾರಿಯ ವಸ್ತುಗಳು ಸಿಕ್ಕಿಲ್ಲ. ನಗರ ಪೊಲೀಸ್ ಇಲಾಖೆಯಿಂದಲೂ ಡ್ರಗ್ಸ್ ಮಾರಾಟದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಅಹಮದಾಬಾದ್‌ನ ಪ್ರಕರಣವೊಂದರ ವಿಚಾರಣೆಗಾಗಿ ಎನ್‌ಸಿಬಿ ತಂಡವು ಭೇಟಿ ನೀಡಿದೆ. ಆ ಪ್ರಕರಣದ ಆರೋಪಿಯು ಗಣಪತಿ ಲಾಲ್ ಪತ್ನಿಯ ತಂಗಿಯ ಗಂಡ. ಹೀಗಾಗಿ, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಭಾಗದಲ್ಲಿ ಆ ರೀತಿಯ ಚಟುವಟಿಕೆ ನಡೆಯುತ್ತಿರಲಿಲ್ಲ. ಎನ್‌ಸಿಬಿ ತಂಡವು ನಮಗೆ ಮಾಹಿತಿ ನೀಡಿ ಬಂದಿದ್ದು, ಹೆಬ್ಬಾಳ ಪೊಲೀಸರೂ ಸಹಕಾರ ನೀಡಿದ್ದಾರೆ” ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಇದನ್ನೂ ನೋಡಿ : ಒಂದು ದೇಹ, ಒಂದು ಸಾಕ್ಷಿ | ಸಾಮ್ರಾಜ್ಯಶಾಹಿಯ ವಿರುದ್ಧ ಸುಮಿತೇರು ತಾನಿಗುಚಿJanashakthi Media
