ಅಭಿವೃದ್ಧಿಯ ಹೆಸರಿನಲ್ಲಿ ಜಾಗತಿಕ ಹಣಕಾಸು ಬಂಡವಾಳವನ್ನು ಓಲೈಸಲು ಪ್ರಜಾಪ್ರಭುತ್ವ ಹಕ್ಕುಗಳನ್ನು ದಮನ ಮಾಡುವುದು “ಭಾರತದಲ್ಲಿ ತಯಾರಿಸಿ” ಘೋಷಣೆಯ ಅಭಿನ್ನ ಭಾಗ. ಇದುವೇ ಈ ಆಕರ್ಷಕ ಘೋಷಣೆಯ ಹಿಂದಿರುವ ಅಪಾಯ. ಮೋದಿ ಸರಕಾರ ತನ್ನ ಚಾಳಿಗೆ ತಕ್ಕಂತೆ ಈ ಅಭಿಯಾನವನ್ನೇ ಆರಿಸಿಕೊಂಡಿದೆ
ಪ್ರಪಂಚದ ದೊಡ್ಡ ಬಹು ರಾಷ್ಟ್ರೀಯ ಕಂಪೆನಿಗಳು ನಮ್ಮ ದೇಶಕ್ಕೆ ಕಾಲಿಟ್ಟು ಉತ್ತಮ ದರ್ಜೆಯ ಉತ್ಪನ್ನಗಳನ್ನು ತಯಾರಿಸಿ ವಿಶ್ವ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ನಮ್ಮ ದೇಶಕ್ಕೆ ಲಾಭವಿದೆ ಎನ್ನುವ ಲೆಕ್ಕಾಚಾರದಲ್ಲಿ ಮೋದಿಯವರು ‘ಮೇಕ್ ಇನ್ ಇಂಡಿಯಾ’ (ಭಾರತದಲ್ಲಿ ತಯಾರಿಸಿ) ಎಂಬ ಘೋಷಣೆ ಕೊಟ್ಟಿದ್ದಾರೆ. ಅವರು ಮೊಳಗಿಸಿದ ಈ ಘೋಷಣೆ ಆಕರ್ಷಕವಾಗಿ ಕಾಣುತ್ತದೆ ಮತ್ತು ಮೇಲ್ನೋಟಕ್ಕೆ ಅದರಲ್ಲಿ ಯಾವ ಹಾನಿಯೂ ಕಾಣುವುದಿಲ್ಲ. ಆದರೆ, ಬೆಳ್ಳಗಿರುವುದೆಲ್ಲಾ ಹಾಲು ಅಲ್ಲ ಎನ್ನುವಂತೆ ಈ ಯೋಜನೆಯಲ್ಲಿ ಅನೇಕ ಅಪಾಯಗಳು ಅಡಕವಾಗಿವೆ. “ಭಾರತದಲ್ಲಿ ತಯಾರಿಸಿ” ಘೋಷಣೆ ಕಾರ್ಯಸಾಧುವಲ್ಲ. ಅದರ ಬದಲಿಗೆ “ಭಾರತಕ್ಕಾಗಿ ತಯಾರಿಸಿ” ಎನ್ನುವುದು ಸೂಕ್ತ ಎಂಬುದಾಗಿ ಆರ್ಬಿಐ ಗವರ್ನರ್ ರಘುರಾಂ ರಾಜನ್ ಹೇಳಿದ್ದರು. ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರು ತಮ್ಮ ಮಾತನ್ನು ಬಹಳ ನಾಜೂಕಾಗಿ ಹೇಳಿದ್ದರು.
ಬಹು ರಾಷ್ಟ್ರೀಯ ಕಂಪೆನಿಗಳು ಹಿಂದುಳಿದ ದೇಶಗಳಲ್ಲಿ ತಮ್ಮ ಫ್ಯಾಕ್ಟರಿಗಳನ್ನು ಆರಂಭಿಸುತ್ತಾರೆ ಎಂದರೆ ಅದರ ಅರ್ಥ ಅವರ ಉನ್ನತ ತಂತ್ರಜ್ಞಾನ ಮತ್ತು ಉತ್ಪಾದನೆಗೆ ಸಂಬಂಧಿಸಿದ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ವರ್ಗಾವಣೆ ಮಾಡುತ್ತಾರೆ ಎಂದಲ್ಲ. ಅದು ಯಾವತ್ತೂ ಅವು ಅವರ ಜಾಗತಿಕ ವ್ಯೂಹವಾಗಿ ಅವರ ಮುಖ್ಯ ಕಛೇರಿಯಲ್ಲೇ ಇರುತ್ತದೆ. ಬಹು ರಾಷ್ಟ್ರೀಯ ಕಂಪೆನಿಗಳು ತಳ ಊರಿದ ಕೂಡಲೆ ಹಿಂದುಳಿದ ದೇಶಗಳ ಜುಟ್ಟನ್ನು ಹಿಡಿಯುತ್ತವೆ. ಅವರ ತಾಳಕ್ಕೆ ಕುಣಿಯದಿದ್ದರೆ ತಮ್ಮ ಹೂಡಿಕೆಯನ್ನು ಹಿಂತೆಗೆಯುವ ಬೆದರಿಕೆ ಹಾಕುತ್ತಾರೆಂಬ ಭಯದಿಂದ ಹಿಂದುಳಿದ ದೇಶಗಳು ತಮ್ಮ ಜುಟ್ಟನ್ನು ಒಪ್ಪಿಸುತ್ತವೆ. ಈ ದೇಶಗಳಲ್ಲಿ ಅವರ ಕಾರ್ಯಾಚರಣೆ ಏನಿದ್ದರೂ ಕಡಿಮೆ ಬಂಡವಾಳದ, ಕೆಳಮಟ್ಟದ ತಂತ್ರಜ್ಞಾನ ಸಾಕಾಗುವ ಮತ್ತು ಹೆಚ್ಚಿನ ಶ್ರಮ ಬೇಕಾಗುವ ಕೆಲಸಗಳಿಗೆ ಸಂಬಂಧಿಸಿರುತ್ತವೆ.
ಅಷ್ಟಾದರೂ, ಹೂಡಿಕೆ ಮಾಡಲು ಅವರು ಸುಲಭವಾಗಿ ಮುಂದಾಗುವುದಿಲ್ಲ. ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವಲ್ಲಿ ಅವರು ತೊಡಗುವ ದುರಾಚಾರಗಳ ವಿರುದ್ಧವಾಗಿ ಕಾನೂನು ಕ್ರಮಗಳಾಗಲಿ, ಪತ್ರಿಕೆಗಳಲ್ಲಿ ಅವರ ಕುತಂತ್ರಗಳ ಮೇಲೆ ಪ್ರಕಟಿಸುವ ವರದಿಗಳಾಗಲಿ ಇಲ್ಲದಿರುವ ಮತ್ತು ರಾಜಕೀಯ ಪಕ್ಷಗಳಾಗಲಿ ಅಥವಾ ವ್ಯಕ್ತಿಗಳಾಗಲಿ ಅವರ ವಿರುದ್ಧವಾಗಿ ದನಿ ಎತ್ತುವುದಿಲ್ಲವೆಂಬ ಪರಿಸ್ಥಿತಿಯನ್ನು ಅವರು ಬಯಸುತ್ತಾರೆ. ಅಂದರೆ, ಅವರು ಬಯಸುವುದು, ಒಂದು ಸರ್ವಾಧಿಕಾರಿ ಪ್ರಭುತ್ವವನ್ನು.
ಹಾಗಾಗಿ, ಅಭಿವೃದ್ಧಿಯ ಹೆಸರಿನಲ್ಲಿ ಪ್ರಜಾಪ್ರಭುತ್ವ ಹಕ್ಕುಗಳನ್ನು ದಮನ ಮಾಡುವುದು “ಭಾರತದಲ್ಲಿ ತಯಾರಿಸಿ”ಎನ್ನುವ ರೀತಿಯ ವ್ಯೂಹದ ಒಂದು ಭಾಗವಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ, ಮೂರನೆ ಜಗತ್ತಿನ ದೇಶಗಳ ನಡುವೆ ‘ನಾ ಮುಂದು’ ‘ತಾ ಮುಂದು’ ಎನ್ನುವ ರೀತಿಯಲ್ಲಿ ಕೆಳಗೆ ಜಾರುವ ಒಂದು ‘ಪಾತಾಳ ಮುಟ್ಟುವ ಪಂದ್ಯ’ ಆರಂಭವಾಗಿ ಜನತೆಯ ಪ್ರಜಾಪ್ರಭುತ್ವ ಹಕ್ಕುಗಳ ದಮನ ಮತ್ತು ಶ್ರಮಜೀವಿಗಳ ಶೋಷಣೆ ತೀವ್ರವಾಗುತ್ತವೆ.
“ಭಾರತದಲ್ಲಿ ತಯಾರಿಸಿ” ಕಾರ್ಯಕ್ರಮದ ಮೂಲಕ ಹೆಚ್ಚಿನ ಬೆಳವಣಿಗೆಯಾದರೆ, ಉದ್ಯೋಗಗಳು ಸೃಷ್ಟಿಯಾಗುತ್ತವೆ. ಬಡತನ ನಿವಾರಣೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಾರ್ಮಿಕರ ಹಿತಕ್ಕೆ ಧಕ್ಕೆಯಾದರೂ, ಅಥವಾ ಪ್ರಜಾಪ್ರಭುತ್ವ ಹಕ್ಕುಗಳಿಗೆ ಚ್ಯುತಿಯಾದರೂ, ಅದರಲ್ಲಿ ತಪ್ಪೇನಿದೆ ಎಂದು ಕೇಳುವವರಿದ್ದಾರೆ. ಈ ಪ್ರಶ್ನೆಯಲ್ಲಿ ಒಂದು ಅಸಹ್ಯ ಮನೋಭಾವ ಅಡಕವಾಗಿದೆ. ಇದೊಂದು ವಿತಂಡವಾದವೂ ಹೌದು. ಕಾರ್ಮಿಕರ ಮತ್ತು ಇಡೀ ಜನತೆಯ ಪ್ರಜಾಪ್ರಭುತ್ವ ಹಕ್ಕುಗಳ ತ್ಯಾಗವನ್ನು ಬಯಸುವ ಇಂತಹ ಅಭಿವೃದ್ಧಿ ಮಾದರಿಯ ಬದಲಾಗಿ ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾದ ಇನ್ನೊಂದು ಮಾದರಿಯ ಆಯ್ಕೆ ಸಾಧ್ಯವಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞ ಪ್ರೊ.ಪ್ರಭಾತ್ ಪಟ್ನಾಯಕ್
ಮುಂದುವರೆಯುತ್ತಿರುವ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟಿನ ಪರಿಣಾಮವಾಗಿ ಬಂಡವಾಳದ ಹೂಡಿಕೆಯ ಗಾತ್ರ ಕುಗ್ಗುತ್ತಿದೆ. ಆದರೂ, “ಭಾರತದಲ್ಲಿ ತಯಾರಿಸಿ” ಯೋಜನೆ ಯಶಸ್ವಿಯಾಗಲೇ ಬೇಕು ಎನ್ನುವ ಭರದಲ್ಲಿ ಸರ್ಕಾರ ಕಾರ್ಮಿಕರ ವೇತನವನ್ನು ಕುಗ್ಗಿಸುವ ಕ್ರೂರ ಕ್ರಮಕ್ಕೆ ಮುಂದಾಗಿದೆ. ಕಾರ್ಮಿಕರ ವೇತನಗಳು ಕುಗ್ಗುವುದರಿಂದ ನಮ್ಮ ಆಂತರಿಕ ಮಾರುಕಟ್ಟೆಯ ಗಾತ್ರವೂ ಕುಗ್ಗುತ್ತದೆ, ಪರಿಣಾಮವಾಗಿ, ಉತ್ಪಾದನೆ ಕಡಿಮೆಯಾಗುತ್ತದೆ ಮತ್ತು ಉದ್ಯೋಗಗಳೂ ನಾಶವಾಗುತ್ತವೆ. ಬಹು ರಾಷ್ಟ್ರೀಯ ಕಂಪೆನಿಗಳನ್ನು ಓಲೈಸಲು ಕಾರ್ಮಿಕರನ್ನು ಹಿಂಡುವುದು ಅಸಹ್ಯದ ಮನೋಭಾವ ಮಾತ್ರವಲ್ಲ, ಅದು ಕೆಟ್ಟ ಅರ್ಥಶಾಸ್ತ್ರವೂ ಆಗುತ್ತದೆ ಎಂದಿದ್ದಾರೆ ಪ್ರೊ.ಪಟ್ನಾಯಕ್. ಹಾಗಾಗಿ, “ಭಾರತದಲ್ಲಿ ತಯಾರಿಸಿ” ಘೋಷಣೆಯು ಅಪಾಯಕಾರಿಯಾಗಿದೆ.
ಬಂಡವಾಳಶಾಹಿ ಬಿಕ್ಕಟ್ಟಿನಿಂದಾಗಿ ನಮ್ಮ ರಫ್ತುಗಳು ಸತತವಾಗಿ ಇಳಿಯುತ್ತಿವೆ. ಪರಿಣಾಮವಾಗಿ ತಯಾರಿಕಾ ವಲಯ ಕುಗ್ಗುತ್ತಿದ್ದು ಉದ್ಯೋಗಗಳು ನಾಶವಾಗುತ್ತ್ತಿವೆ. ನಮ್ಮ ಆಂತರಿಕ ಮಾರುಕಟ್ಟೆಯ ಗಾತ್ರ ಹಿಗ್ಗಿದರೆ ಮಾತ್ರ ತಯಾರಿಕಾ ವಲಯ ಚೇತರಿಸಿಕೊಳ್ಳಲು ಸಾಧ್ಯ. ಜನರ ಕೊಳ್ಳುವ ಸಾಮಥ್ರ್ಯ ಹೆಚ್ಚಿದಾಗ ಆಂತರಿಕ ಮಾರುಕಟ್ಟೆ ಹಿಗ್ಗುತ್ತದೆ. ಆದ್ದರಿಂದ, ಶಿಕ್ಷಣ, ಆರೋಗ್ಯ, ನೀರಾವರಿ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳಿಗೆ ಮತ್ತು ಕಡು ಬಡವರಿಗೆ ಸಹಾಯವಾಗುವ ಉದ್ಯೋಗ ಖಾತ್ರಿ ಯೋಜನೆಗಳಿಗೆ ಸರ್ಕಾರ ಮಾಡುವ ಖರ್ಚುಗಳನ್ನು ಹೆಚ್ಚಿಸಿದಾಗ ಜನತೆಯ ಕೊಳ್ಳುವ ಸಾಮಥ್ರ್ಯವೂ ಹೆಚ್ಚುತ್ತದೆ. ಒಂದು ವೇಳೆ ಅಂತರಾಷ್ಟ್ರೀಯ ಹಣಕಾಸು ಬಂಡವಾಳವು ಇಂತಹ ಕಾರ್ಯಕ್ರಮಗಳಿಗೆ ಅಡ್ಡಗಾಲು ಹಾಕಿದರೆ, ಬಂಡವಾಳ ನಿಯಂತ್ರಣ ಹೇರುವ ಮೂಲಕ ಅವರನ್ನು ಎದುರಿಸಬಹುದು ಎನ್ನುತ್ತಾರೆ ಪ್ರೊ.ಪಟ್ನಾಯಕ್.
ಇಂತಹ ಜನೋಪಯೋಗಿ ಕಾರ್ಯಗಳು “ಭಾರತದಲ್ಲಿ ತಯಾರಿಸಿ” ಯೋಜನೆಗೆ ಹೊಂದಿಕೆಯಾಗುವುದಿಲ್ಲ. ಎನ್ಡಿಎ ಸರ್ಕಾರ ಇಂತಹ ಪರ್ಯಾಯ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇ ಆದರೆ ಅದೊಂದು ಸರ್ವಾಧಿಕಾರಿ ಧೋರಣೆಗಳ ಕೂಟವಾಗುವುದಿಲ್ಲ. ಆದರೆ, ಎನ್ಡಿಎ ಸರಕಾರದ ಚಾಳಿ ಬೇರೇ ತಾನೇ? ತನ್ನ ಚಾಳಿಗೆ ತಕ್ಕಂತೆ ಅದು ಪ್ರಜಾಪ್ರಭುತ್ವ ಹಕ್ಕುಗಳನ್ನು ದಮನಿಸುವ, ಕಡಿಮೆ ವೇತನ ಮತ್ತು ಉದ್ಯೋಗ ನಾಶದ ಮೂಲಕ ಕಾರ್ಮಿಕರನ್ನು ಹಿಂಡಿ ಹಿಪ್ಪೆ ಮಾಡುವ ಉದ್ದೇಶಗಳೇ ತುಂಬಿರುವ “ಭಾರತದಲ್ಲಿ ತಯಾರಿಸಿ” ಅಭಿಯಾನವನ್ನೇ ಆರಿಸಿಕೊಂಡಿದೆ.