ಡಾ.ಅಂಬೇಡ್ಕರ್ ಮುಷ್ಕರದ ಹಕ್ಕು ಕುರಿತ 1938 ಭಾಷಣ
– ಪ್ರೊ. ರಾಜೇಂದ್ರಚೆನ್ನಿ
ಈ ನಾಲ್ಕು ಕೋಡ್‌ಗಳು ಯಾಕೆ ಕಾರ್ಮಿಕ ವಿರೋಧಿಯಾಗಿವೆಯೆಂದು ಅರಿಯಲು 15 ಸೆಪ್ಟೆಂಬರ್ 1938 ರಂದು ಅಂಬೇಡ್ಕರ್‌ರು ಮಾಡಿದ ಈ ಅದ್ಭುತ ಭಾಷಣವನ್ನುಓದಿದರೆ ಸಾಕು. 1934ರಂದು ವ್ಯಾಪಾರ ವಿವಾದ ಸಂಧಾನಕ್ಕಾಗಿ ತಂದಿದ್ದ ಮಸೂದೆಯ ಬದಲಾಗಿ 1938ರಲ್ಲಿ ಔದ್ಯಮಿಕ ವಿವಾದ ಮಸೂದೆಯನ್ನು ತರಲು ಸರಕಾರವು ಹೊರಟಿದ್ದಾಗ ಬಾಂಬೆ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಭಾಗವಾಗಿ ಅಂಬೇಡ್ಕರ್ ಈ ವಾದಗಳನ್ನು ಮಂಡಿಸಿದರು. ಈ ಚರ್ಚೆಯಲ್ಲಿಅಂಬೇಡ್ಕರ್ ಒಂದು ಪ್ರಧಾನ ಕಾನೂನಿನ ಪ್ರಶ್ನೆ ಮತ್ತುಇನ್ನೊಂದು ಮುಖ್ಯವಾದ ತಾತ್ವಿಕ ಪ್ರಶ್ನೆಯನ್ನು ಎತ್ತುತ್ತಾರೆ.
ನಮ್ಮ ಸರ್ವೋಚ್ಛ ನ್ಯಾಯಾಲಯದ ಘನತೆವೆತ್ತ ನ್ಯಾಯಾಧೀಶರು ಈ ವಾಕ್ಯಗಳನ್ನು ಮತ್ತೆ ಮತ್ತೆ ಓದಲಿ. ಓದಿದರೆ ಸಾವಿರಾರು ಪ್ರತಿಭಟನಾಕಾರರನ್ನು ವಿಚಾರಣೆ ಇಲ್ಲದೆ ಜೈಲಿಗೆ ಹಾಕುವ ಪ್ರಕ್ರಿಯೆಯನ್ನುಅವರ ಬೇಲ್ ನಿರಾಕರಣೆಯ ಮೂಲಕ ಸಮರ್ಥಿಸುವ ಘನತೆವೆತ್ತ ನ್ಯಾಯಾಧೀಶರು ಜಗತ್ತಿನ ಮಹಾನ್‌ಚಿಂತಕನೊಬ್ಬನಿಂದ ಪ್ರಜಾಪ್ರಭುತ್ವದ ಮೊದಲ ಪಾಠವನ್ನುಕಲಿತಂತಾಗುತ್ತದೆ. ಅಂಬೇಡ್ಕರ್‌ಅವರ ಉಜ್ವಲವಾದ ಈ ಮಾತುಗಳನ್ನು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರು ಮತ್ತು ಈಗ ಮತ್ತೊಮ್ಮೆ ನಾಲ್ಕು ಕೋಡ್‌ಗಳನ್ನು ವಿರೋಧಿಸಲು ತಯಾರಾಗುತ್ತಿರುವ ಕಾರ್ಮಿಕರು ತಮ್ಮ ಲಾಂಛನವನ್ನಾಗಿಸಿಕೊಳ್ಳಲಿ ಎಂದು ನನ್ನ ಆಸೆ ಮತ್ತು ಕನಸು.
“ಇತಿಹಾಸದಿಂದ ನಾವು ಕಲಿಯುವ ಪಾಠವೆಂದರೆ ಇತಿಹಾಸದಿಂದ ನಾವು ಯಾವ ಪಾಠವನ್ನು ಕಲಿಯುವುದಿಲ್ಲ”. ಈ ಸತ್ಯವಚನವನ್ನು ಜರ್ಮನ್ ತತ್ವಜ್ಞಾನಿ ಹೆಗಲ್ ಹೇಳಿದ್ದಾನೆ ಎನ್ನಲಾಗಿದೆ. ನನಗೆ ಈ ಮಾತು ನೆನಪಾದದ್ದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಾಂಬೆ ಲೆಜಿಸ್ಲೇಟಿವ್‌ಅಸೆಂಬ್ಲಿಯಲ್ಲಿ ಔದ್ಯಮಿಕ ವಿವಾದ ಮಸೂದೆಯನ್ನು ಕುರಿತು ಮಂಡಿಸಿದ ಅದ್ಭುತವಾದ ವಾದಮಂಡನೆಯನ್ನು ಮತ್ತೆ ಓದಿದಾಗ. ಏಪ್ರಿಲ್ 1 ರಿಂದ ಕೇಂದ್ರ ಸರಕಾರವು ತನ್ನ ಆಪದ್ಭಾಂಧವ, ಹಾಗೂ ದೇವರುಕೊಟ್ಟ ವರವಾದಕೊರೋನಾ ಪಿಡುಗಿನ ಸಂದರ್ಭದಲ್ಲಿ ಸಂಸತ್ತಿನಲ್ಲಿ ಪಾಸು ಮಾಡಿದ ಕಾರ್ಮಿಕ ಸಂಹಿತೆ (ಲೇಬರ್‌ಕೋಡ್)ಗಳನ್ನು ಜಾರಿಮಾಡುವುದನ್ನು ಇತ್ತೀಚೆಗೆ ಮುಂದೂಡಲಾಯಿತು. ಕೆಲವರು ಸದ್ಯ ಸರಕಾರಕ್ಕೆ ಸ್ವಲ್ಪ ವಿವೇಚನೆ ಬಂದಿರಬಹುದು ಎಂದು ಸಮಾಧಾನಪಟ್ಟರು. ಆದರೆ ವಾಸ್ತವವೆಂದರೆ ಈ ಕೋಡ್‌ಗಳು ಜಾರಿಗೆ ಬರುವ ಮೊದಲು ತಮ್ಮ ಅನುಕೂಲಕ್ಕೆ ಕೆಲವು ತಯಾರಿಗಳನ್ನು ಮಾಡಿಕೊಳ್ಳಲು ಶ್ರೀ ಮೋದಿ ಮತ್ತು ಅವರ ಗುಲಾಮರು ಬಂಡವಾಳಶಾಹಿಗಳಿಗೆ ಮಾಡಿಕೊಟ್ಟ ಅನುಕೂಲವಿದಾಗಿದೆ. ಆದ್ದರಿಂದಲೇ ಈ ಬಗ್ಗೆ ಬಂಡವಾಳಶಾಹಿ ಪರವಾದ ಭಾರತದ ಕೆಲವು ಇಂಗ್ಲಿಷ್ ಪತ್ರಿಕೆಗಳು ವರದಿಯನ್ನು “India Inc. heaves a sigh of relief”ಎನ್ನುವ ಶೀರ್ಷಿಕೆಯೊಂದಿಗೆ ಪ್ರಕಟಿಸಿದವು. ಇರಲಿ.
ಈ ನಾಲ್ಕು ಕೋಡ್‌ಗಳು ಯಾಕೆ ಕಾರ್ಮಿಕ ವಿರೋಧಿಯಾಗಿವೆಯೆಂದು ಅರಿಯಲು 15 ಸೆಪ್ಟೆಂಬರ್ 1938 ರಂದು ಅಂಬೇಡ್ಕರ್‌ರು ಮಾಡಿದ ಈ ಅದ್ಭುತ ಭಾಷಣವನ್ನು ಓದಿದರೆ ಸಾಕು. 1934ರಂದು ವ್ಯಾಪಾರ ವಿವಾದ ಸಂಧಾನಕ್ಕಾಗಿ ತಂದಿದ್ದ ಮಸೂದೆಯ ಬದಲಾಗಿ 1938ರಲ್ಲಿ ಔದ್ಯಮಿಕ ವಿವಾದ ಮಸೂದೆಯನ್ನುತರಲು ಸರಕಾರವು ಹೊರಟಿದ್ದಾಗ ಬಾಂಬೆ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಭಾಗವಾಗಿ ಅಂಬೇಡ್ಕರ್ ಈ ವಾದಗಳನ್ನು ಮಂಡಿಸಿದರು. ವಿಶೇಷವೆಂದರೆ ಶ್ರಿ ಮೋದಿ ಮತ್ತು ಇಂದಿನ ಬಿ.ಜೆ.ಪಿ. ರೈತರು, ಕಾರ್ಮಿಕರು ಮತ್ತು ಚಳುವಳಿಗಾರರ ವಿರುದ್ಧತರುತ್ತಿರುವ ಕಾಯ್ದೆಗಳು, ತಿದ್ದುಪಡಿಗಳು ವಸಾಹತುಶಾಹಿ ಕಾಲದಕ್ರೂರ ಕಾನೂನುಗಳ ಥೇಟು ಅನುಕರಣೆಗಳಾಗಿವೆ. ಅಲ್ಲಲ್ಲಿಇನ್ನೂ ಹೆಚ್ಚು ಕ್ರೂರವಾಗಿಸುವ ಪ್ರಯತ್ನವನ್ನು ಇಂದಿನ ಸರಕಾರವು ಮಾಡುತ್ತಿದೆ.
ಈ ಚರ್ಚೆಯಲ್ಲಿಅಂಬೇಡ್ಕರ್ ಒಂದು ಪ್ರಧಾನ ಕಾನೂನಿನ ಪ್ರಶ್ನೆ ಮತ್ತು ಇನ್ನೊಂದು ಮುಖ್ಯವಾದ ತಾತ್ವಿಕ ಪ್ರಶ್ನೆಯನ್ನು ಎತ್ತಿಅದ್ಯಾವ ಮಟ್ಟಕ್ಕೆ ನಮ್ಮನ್ನೆಲ್ಲ ಕರೆದುಕೊಂಡು ಹೋಗುತ್ತಾರೆ ಎಂದರೆ ಗೌರವ ಹಾಗೂ ಕೃತಜ್ಞತೆಯಿಂದ ನನ್ನ ಮನಸ್ಸುಆರ್ದ್ರವಾಯಿತು. ಕಾನೂನಿನ ಪ್ರಶ್ನೆಯೆಂದರೆ ಕಾರ್ಮಿಕ ಅಥವಾ ಕಾರ್ಮಿಕರು ಔದ್ಯಮಿಕಕರಾರು(ಗಳನ್ನು) ಉಲ್ಲಂಘಿಸಿದರೆ ಅದು ಕೇವಲ ಸೇವಾ ಒಪ್ಪಂದದ ಉಲ್ಲಂಘನೆಯಾಗುತ್ತದೆ ಮತ್ತು ನಾಗರೀಕ ಅಕ್ರಮವಾಗುತ್ತದೆಯೆ ಹೊರತು ಅಪರಾಧವಾಗುವುದಿಲ್ಲ. ಈ ವಾದವನ್ನು ಭಾರತದಲ್ಲಿನ ವಸಾಹತುಶಾಹಿ ಸರಕಾರ ಮತ್ತುಇಂಗ್ಲೆಂಡ್‌ನ ಸಾಮ್ರಾಜ್ಯಶಾಹಿ ಸರಕಾರಗಳು ಒಪ್ಪಿಕೊಂಡೇ ಬಂದಿದ್ದವು. ಅದನ್ನುಅಪರಾಧವೆಂದು ಪರಿಗಣಿಸಲಾಗಿರಲಿಲ್ಲ. ಇದು ಸರಿಯೆಂದು ಅಂಬೇಡ್ಕರ್ ವಾದಿಸುತ್ತಾರೆ. ಏಕೆಂದರೆ ಕಾರ್ಮಿಕರ ಉಲ್ಲಂಘನೆಗಳಿಗೆ ಕಾರಣವಾಗುವುದು ಅವರ ವಾಸ್ತವಿಕ ಸಮಸ್ಯೆಗಳೇ. ಹೀಗಾಗಿ ಮುಷ್ಕರವೂ ಕೂಡ ಒಂದು ಪರಿಹಾರ ಹುಡುಕುವ ಮಾರ್ಗ; ಅದು ಎಂದೂ ಅಪರಾಧವಾಗಲಾರದು. ಈ ಹಿಂದೆ ಸಫಲವಾಗಿದ್ದ, ಮಾರ್ಗದರ್ಶಕ ಸೂಚನೆಯ ರೂಪದಲ್ಲಿದ್ದದನ್ನು ಈಗ ಈ ಮಸೂದೆಯ ಮೂಲಕ ಅಪರಾಧಿ ಕಾನೂನು ಮಾಡಲು ಹೊರಟಿರುವ ಸರಕಾರವನ್ನುಅಂಬೇಡ್ಕರ್ ವಿರೋಧಿಸುತ್ತಾರೆ. ಇಂಥ ಕಾನೂನುಗಳು ಒತ್ತಾಯದ ಗುಲಾಮಗಿರಿಯ ಹೇರಿಕೆಯಾಗುತ್ತವೆಯೆಂದು ಹೇಳುತ್ತಾರೆ. ಅವರ ಪ್ರಕಾರ ಕಾರ್ಮಿಕನು ತನ್ನ ಸ್ವಇಚ್ಛೆಯಿಂದ ತನ್ನ ಶ್ರಮವನ್ನು ನೀಡಬೇಕೆ ಹೊರತು ಹೊಸ ಗುಲಾಮಗಿರಿಗಾಗಿ ಅಲ್ಲವೆಂದು ಪ್ರಬಲವಾಗಿ ವಾದಿಸುತ್ತಾರೆ. ಈ ವಾದಗಳಲ್ಲಿ ಅಂಬೇಡ್ಕರ್ ಮತ್ತುಅವರ ಸಹಸದಸ್ಯರು ಬಳಸುವ ಭಾಷೆಯ ಸೂಕ್ಷ್ಮತೆ, ವಿಚಾರಗಳ ಹಿಂದಿರುವ ಉದಾರವಾದವು ನಮ್ಮನ್ನು ದಂಗುಗೊಳಿಸುತ್ತವೆ, ನಮ್ರವಾಗಿಸುತ್ತವೆ. ಇಂದಿನ ಸಂಸತ್ತಿನಲ್ಲಿರುವ ಅಶಿಕ್ಷಿತ ಅನಾಗರೀಕ ರಾಜಕೀಯ ಪ್ರತಿನಿಧಿಗಳಿಗೂ ಈ ಉದಾತ್ತ ಮನೋಭೂಮಿಯ ಸದಸ್ಯರುಗಳಿಗೂ ಯಾವ ಹೋಲಿಕೆಯೂ ಇಲ್ಲ. ಅಂಬೇಡ್ಕರ್ ಅವರ ಮಾತುಗಳನ್ನು ಕೇಳಿ:
“ಸೇವಾ ಒಪ್ಪಂದದ ಉಲ್ಲಂಘನೆಯನ್ನು ಭಾರತೀಯ ಕಾನೂನು ಏಕೆ ಅಪರಾಧವಾಗಿಸಿಲ್ಲ? ಎಂಬುದೇ ಆ ಪ್ರಶ್ನೆ….ಇದಕ್ಕೆ ಸದನದ ಇತರ ಸದಸ್ಯರು ಯಾವ ಉತ್ತರವನ್ನಾದರೂ ಕೊಡ ಬಯಸಲಿ. ಇದಕ್ಕೆ ನನ್ನ ಉತ್ತರ ತುಂಬಾ ಸರಳವಾಗಿದೆ. ನನ್ನ ಉತ್ತರ ಇದು: ಸೇವಾ ಒಪ್ಪಂದದ ಉಲ್ಲಂಘನೆಯನ್ನು ಭಾರತೀಯ ಶಾಸಕಾಂಗ ಅಪರಾಧವೆಂದು ಪರಿಗಣಿಸದೆ ಇರುವುದಕ್ಕೆ ಕಾರಣವೆಂದರೆ ಅದನ್ನುಅಪರಾಧವಾಗಿ ಪರಿಗಣಿಸಿದರೆ, ತನ್ನ ಮನಸ್ಸಿಗೆ ವಿರುದ್ಧವಾಗಿ ಸೇವೆ ಸಲ್ಲಿಸುವಂತೆ ವ್ಯಕ್ತಿಯನ್ನು ಒತ್ತಾಯಪಡಿಸಿದಂತಾಗುತ್ತದೆ ಎಂದು ಅದು ಭಾವಿಸಿರುವುದು; ಅವನನ್ನು ಗುಲಾಮನಾಗಿಸಿದಂತಾಗುತ್ತದೆ (ಎಂದು ಭಾವಿಸಿರುವುದು) [ಸದಸ್ಯರು Hear, Hear ಎಂದು ಮೆಚ್ಚುಗೆ ಸೂಚಿಸುತ್ತಾರೆ]. ಹೀಗಾಗಿ ಮುಷ್ಕರವನ್ನು ದಂಡನಾರ್ಹವಾಗಿಸುವುದು ಕಾರ್ಮಿಕನನ್ನು ಗುಲಾಮನನ್ನಾಗಿಸುವುದಕ್ಕಿಂತ ಭಿನ್ನವಾದುದೇನೂ ಅಲ್ಲವೆಂದು ನಾನು ವಾದಿಸುತ್ತೇನೆ……. ಗುಲಾಮತನವೆನ್ನುವುದು ಅನೈಚ್ಛಿಕದಾಸ್ಯವಲ್ಲದೆ ಬೇರೇನೂ ಅಲ್ಲ. ಅಂತೆಯೆ ಇದು ನ್ಯಾಯಶಾಸ್ತ್ರಕ್ಕೆ ವಿರುದ್ಧವಾಗಿರುವಂಥದು”.
ಇಂದಿನ ಸರಕಾರವು ನಾಲ್ಕು ಕೋಡ್‌ಗಳನ್ನು ತಂದಿರುವುದು ಆಧುನಿಕ ಬಂಡವಾಳಶಾಹಿಯು ಬಯಸುವ ಆಧುನಿಕ ಗುಲಾಮಗಿರಿಯನ್ನು ಕಾನೂನಿನ ಮೂಲಕ ಅನುಷ್ಠಾನಗೊಳಿಸಲು. ಆದ್ದರಿಂದಲೇ ಇವುಗಳಿಗೆ ರಾಷ್ಟ್ರವ್ಯಾಪಿ ವಿರೋಧವು ಕಾರ್ಮಿಕರಿಂದ ಮತ್ತುಅವರ ಸಂಘಟನೆಗಳಿಂದ ಬಂದಿದೆ. ಸ್ಪಷ್ಟವಾಗಿಯೇ ಈ ಕೋಡ್‌ಗಳು ವಸಾಹತುಶಾಹಿ ಕಾನೂನುಗಳಿಗಿಂತ ಕ್ರೂರವಾಗಿವೆ. ತಮ್ಮ ವಾದಮಂಡನೆಯಲ್ಲಿ ಅಂಬೇಡ್ಕರ್ ಕೊಡುವ ಒಂದು ಉದಾಹರಣೆ ಅತ್ಯಂತ ಕುತೂಹಲಕರವಾಗಿದೆ. 1857ರ ಸಿಪಾಯಿ ದಂಗೆಯ ನಂತರ ಅನೇಕ ಕಾರ್ಮಿಕರು ಪ್ರಕ್ಷಬ್ಧ ಸ್ಥಿತಿಯಿಂದಾಗಿ ತಮ್ಮ ಉದ್ಯೋಗಗಳನ್ನು ತೊರೆದು ತಮ್ಮ ಊರುಗಳಿಗೆ ಹಿಂದುರಿಗಿದರು. ಇದನ್ನುಅಪರಾಧವೆಂದು ಪರಿಗಣಿಸಲು ಸಾಧ್ಯವಿತ್ತು. ಆದರೆ ಅತ್ಯಂತ ಖಚಿತವಾದ ವಿದ್ವತ್ತನ್ನು ಗಳಿಸಿದ್ದ ಅಂಬೇಡ್ಕರ್ ಪ್ರಕಾರ ಬಹಳ ಕಡಿಮೆ ಸಂದರ್ಭಗಳಲ್ಲಿ ಹೀಗೆ ಮಾಡಲಾಯಿತು. ಅಂದರೆ ಪ್ರಭುತ್ವದ ವಿರುದ್ಧದ ನೇರ ಸಂಘರ್ಷದ “ರಾಜದ್ರೋಹ”ದ ಸಂದರ್ಭದಲ್ಲಿಯೇ ವಿದೇಶೀಯರ ವಸಾಹತುಶಾಹಿ ಪ್ರಭುತ್ವವು ಕಾರ್ಮಿಕರ ವಿರುದ್ಧ ಅಪರಾಧ ಕಾನೂನನ್ನು ಬಳಸಿಕೊಳ್ಳಲಿಲ್ಲ. ಆದರೆ ಸ್ವಾತಂತ್ರ್ಯದ ನಂತರ 7 ದಶಕಗಳು ಕಳೆದ ಮೇಲೆ ಚುನಾಯಿತ ಪ್ರಜಾಪ್ರಭುತ್ವವಾದಿ ಸರಕಾರವು ರೈತರನ್ನು ಮತ್ತುಕಾರ್ಮಿಕರನ್ನು ಯಾವುದೇ ಪ್ರತಿಭಟನೆ ಮಾಡಿದರೆ ಅಪರಾಧಿಗಳನ್ನಾಗಿ ಹಾಗೂ ದೇಶದ್ರೋಹಿಗಳನ್ನಾಗಿ ನೋಡುತ್ತಿದೆ. ಅಂಬೇಡ್ಕರ್ ಸರಿಯಾಗಿ ಗುರುತಿಸಿದಂತೆ ಕಾರ್ಮಿಕರು ಅಥವಾ ಅವರ ಸಂಘಟನೆಗಳು ಪಿತೂರಿ, ದೇಶದ್ರೋಹ ಇತ್ಯಾದಿ ಉದ್ದೇಶಗಳನ್ನು ಇಟ್ಟುಕೊಂಡು ಮುಷ್ಕರ, ಪ್ರತಿಭಟನೆ ಮಾಡುವುದು ಅಸಾಧ್ಯ. ಹಾಗೆನ್ನುಕೊಳ್ಳುವುದು ಪ್ರಭುತ್ವದ ದೌರ್ಬಲ್ಯ. ಆದ್ದರಿಂದ ಇದಕ್ಕೆ ಆಸ್ಪದಕೊಡುವ ಕಾನೂನುಗಳು ಇರಲೇಕೂಡದು. ಈ ವಿಷಯಗಳಲ್ಲಿ ಅವರು ಎಷ್ಟು ಸೂಕ್ಷ್ಮವೆಂದರೆ ಈ ಹಿಂದಿನ ಮಸೂದೆ ಹಾಗೂ ಆದೇಶಗಳಲ್ಲಿ “shall”ಎನ್ನುವ ಪದವು ಕಡ್ಡಾಯವೆನ್ನುವ ಅರ್ಥಕೊಡುವುದರಿಂದ “may” ಅನ್ನುವ ಪದವನ್ನು ಬಳಸಲಾಗಿತ್ತಂತೆ. ಈಗಿನ ಪ್ರಭುತ್ವವು ಇಂಥ ಸೂಕ್ಷ್ಮತೆಯಿರಲಿ ಎಗ್ಗಿಲ್ಲದೆ ಸರ್ವಾಧಿಕಾರಿ ಭಾಷೆಯಲ್ಲಿ ಮಾತನಾಡುತ್ತದೆ.
ಹಾಗೆಂದ ಮಾತ್ರಕ್ಕೆ ಅಂಬೇಡ್ಕರ್ ಅವರು ವಸಾಹತುಶಾಹಿಯ ಬಗ್ಗೆ ಮುಗ್ಧರಾಗಿರಲಿಲ್ಲ. ಅನೇಕ ದಶಕಗಳವರೆಗೆ ನೇರವಾಗಿಕಾರ್ಮಿಕ ಚಳುವಳಿಗಳಲ್ಲಿ ಅವರು ಭಾಗಿಯಾಗಿದ್ದರು. ಹೇಗೆ ಗಾಂಧಿ ವಸಾಹತುಶಾಹಿ ಸರಕಾರವನ್ನು, ಇಂಗ್ಲೆಂಡ್‌ನ ಸರಕಾರವನ್ನು ಸಮಾನತೆಯ ಆತ್ಮವಿಶ್ವಾಸದಿಂದ ಸಂಬೋಧಿಸುತ್ತಿದ್ದರೋ ಹಾಗೆಯೆ ಅಂಬೇಡ್ಕರ್ ಕೂಡ ಈ ಭಾಷಣದಲ್ಲಿ ಮಾತನಾಡಿದ್ದಾರೆ. ಈ ಅಪೂರ್ವಘನತೆ ಹಾಗೂ ಆತ್ಮವಿಶ್ವಾಸಕ್ಕೆ ತಳಹದಿಯೆಂದರೆ ಸ್ವಾತಂತ್ರ್ಯದ ಬಗ್ಗೆ ಅವರಿಗಿರುವ ತಾತ್ವಿಕ ಶ್ರದ್ಧೆ. ಅವರು ಕಾರ್ಮಿಕರ ಹಕ್ಕಿನ ಪ್ರಶ್ನೆಯನ್ನು ಮಾನವ ಸ್ವಾತಂತ್ರ್ಯದ ವಿಶ್ವಾತ್ಮಕ ಚೌಕಟ್ಟಿನಲ್ಲಿ ನೋಡುತ್ತಾರೆ. ಅವರ ಮಾತುಗಳನ್ನು ಕೇಳಿ:
“ ‘ಮುಷ್ಕರ’ ಎಂದರೆ ಒಪ್ಪಂದದ ಉಲ್ಲಂಘನೆಗಿಂತ ಹೆಚ್ಚಿನದೇನೂ ಅಲ್ಲವೆಂಬ ನನ್ನಅರ್ಥವನ್ನು ಒಪ್ಪಿಕೊಳ್ಳಲು ಸದಸ್ಯರು ಸಿದ್ಧರಾಗಿದ್ದರೆ, ಸ್ವಾತಂತ್ರ್ಯದ ಹಕ್ಕು ಎಂಬುದಕ್ಕೆ ಮುಷ್ಕರ ಎಂಬುದು ಇನ್ನೊಂದು ಹೆಸರು ಮಾತ್ರವಾಗುತ್ತದೆ ಎಂದು ನಾನು ನಿವೇದಿಸಬಯಸುತ್ತೇನೆ. ವ್ಯಕ್ತಿ ತಾನು ಪಡೆದುಕೊಳ್ಳಬಯಸುವ ಯಾವುದೇ ಷರತ್ತುಗಳ ಮೇಲೆ ತನ್ನ ಸೇವೆಯನ್ನುಒದಗಿಸುವ ಸ್ವಾತಂತ್ರ್ಯದ ಹಕ್ಕಲ್ಲದೆ ಅದು ಬೇರೇನೂ ಅಲ್ಲ. ಸ್ವಾತಂತ್ರ್ಯದ ಹಕ್ಕನ್ನು ನೀವು ಒಪ್ಪುವುದಾದರೆ ಮುಷ್ಕರ ಹೂಡುವ ಹಕ್ಕನ್ನು ನೀವು ಅಗತ್ಯವಾಗಿ ಒಪ್ಪುತ್ತೀರಿ”.
ನಮ್ಮ ಸರ್ವೋಚ್ಛ ನ್ಯಾಯಾಲಯದ ಘನತೆವೆತ್ತ ನ್ಯಾಯಾಧೀಶರು ಈ ವಾಕ್ಯಗಳನ್ನು ಮತ್ತೆ ಮತ್ತೆ ಓದಲಿ. ಓದಿದರೆ ಸಾವಿರಾರು ಪ್ರತಿಭಟನಾಕಾರರನ್ನು ವಿಚಾರಣೆ ಇಲ್ಲದೆ ಜೈಲಿಗೆ ಹಾಕುವ ಪ್ರಕ್ರಿಯೆಯನ್ನುಅವರ ಬೇಲ್ ನಿರಾಕರಣೆಯ ಮೂಲಕ ಸಮರ್ಥಿಸುವ ಘನತೆವೆತ್ತ ನ್ಯಾಯಾಧೀಶರು ಜಗತ್ತಿನ ಮಹಾನ್‌ಚಿಂತಕನೊಬ್ಬನಿಂದ ಪ್ರಜಾಪ್ರಭುತ್ವದ ಮೊದಲ ಪಾಠವನ್ನುಕಲಿತಂತಾಗುತ್ತದೆ. ಅಂಬೇಡ್ಕರ್‌ಅವರ ಉಜ್ವಲವಾದ ಈ ಮಾತುಗಳನ್ನು ದೆಹಲಿಯಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರು ಮತ್ತು ಈಗ ಮತ್ತೊಮ್ಮೆ ನಾಲ್ಕು ಕೋಡ್‌ಗಳನ್ನು ವಿರೋಧಿಸಲು ತಯಾರಾಗುತ್ತಿರುವ ಕಾರ್ಮಿಕರು ತಮ್ಮ ಲಾಂಛನವನ್ನಾಗಿಸಿಕೊಳ್ಳಲಿ ಎಂದು ನನ್ನ ಆಸೆ ಮತ್ತು ಕನಸು.