ಮುಂಬೈ: ಮಹಾರಾಷ್ಟ್ರದ ಜಾಲ್ನಾ ನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಕಾಂತ ಪಾಂಗಾರಕರ್ ಜಯ ಗಳಿಸಿದ್ದಾರೆ. ಮತ ಎಣಿಕೆ ಶುಕ್ರವಾರ ನಡೆಯಿತು.
ಅವರು ವಾರ್ಡ್ ನಂ.13ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿಯ ಅಭ್ಯರ್ಥಿ ಸಮೀಪದ ಪ್ರತಿಸ್ಪರ್ಧಿಯಾಗಿದ್ದರು. ಉಪಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ.
ಇದನ್ನೂ ಓದಿ : ಹಣಕಾಸು ವ್ಯವಸ್ಥೆಯನ್ನು ಮತ್ತೆ ಅಪಾಯಕಾರಿ ದಿಕ್ಕಿನತ್ತ ತಳ್ಳುವ ‘ಸುಧಾರಣೆ’ಗಳು
ಪಾಂಗಾರಕರ್ ಅವರಿಗೆ ಕರ್ನಾಟಕ ಹೈಕೋರ್ಟ್ 2024ರ ಸೆಪ್ಟೆಂಬರ್ 4ರಂದು ಜಾಮೀನು ನೀಡಿತ್ತು. ನಾಲಾಸೋಪಾರದಲ್ಲಿ ಶಸ್ತ್ರಾಸ್ತ್ರ ಸಿಕ್ಕಿದ್ದ ಪ್ರಕರಣದಲ್ಲಿಯೂ ಪಾಂಗಾರಕರ್ ಆರೋಪಿಯಾಗಿದ್ದಾರೆ. ಅದೇ ವರ್ಷ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯುವುದಕ್ಕೂ ಮುನ್ನ ಪಾಂಗಾರಕರ್ ಶಿವಸೇನಾ ಸೇರಿದ್ದರು. ಬಳಿಕ ಅವರನ್ನು ಜಾಲ್ನಾ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
ಈ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾದ ಕಾರಣ, ಆಗ ಮುಖ್ಯಮಂತ್ರಿಯಾಗಿದ್ದ ಏಕನಾಥ ಶಿಂದೆ ಅವರು, ಪಾಂಗಾರಕರ್ ನೇಮಕವನ್ನು ರದ್ದು ಮಾಡಿದ್ದರು.
ಈ ಪ್ರಕರಣದಲ್ಲಿ ಕೂಡ ಅವರು ಜಾಮೀನು ಪಡೆದುಕೊಂಡಿದ್ದಾರೆ. ನಾಲಾಸೋಪಾರದಲ್ಲಿ ಕಚ್ಚಾಬಾಂಬ್‌ಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಾಂಗಾರಕರ್ ಅವರನ್ನು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್) 2018ರಲ್ಲಿ ಬಂಧಿಸಿತ್ತು.
ಪಾಂಗಾರಕರ್ ಜಯ ಗಳಿಸಿರುವ ಕುರಿತ ಘೋಷಣೆ ಹೊರ ಬೀಳುತ್ತಿದ್ದಂತೆಯೇ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ್ದ ಅವರು,‘ಈ ಚುನಾವಣೆ ಹಾಗೂ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೂ ಸಂಬಂಧ ಇಲ್ಲ’ ಎಂದು ಹೇಳಿದ್ದರು.
‘ತನಿಖಾ ಸಂಸ್ಥೆಗಳಿಗೆ ನನ್ನ ಬಗ್ಗೆ ತಪ್ಪು ತಿಳಿವಳಿಕೆ ಇರಬಹುದು. ಈ ಬಗ್ಗೆ ಕೋರ್ಟ್ ನಿರ್ಧರಿಸಲಿದೆ’ ಎಂದಿದ್ದರು. ಆ ಪ್ರಕರಣ ಕರ್ನಾಟಕಕ್ಕೆ ಸಂಬಂಧಪಟ್ಟಿದ್ದು. ‘ಈ ಚುನಾವಣೆಗೂ ಹಾಗೂ ಆ ವಿಚಾರಕ್ಕೂ(ಗೌರಿ ಲಂಕೇಶ್ ಕೊಲೆ ಪ್ರಕರಣ) ಸಂಬಂಧ ಇಲ್ಲ. ನಾನು ನೂರಕ್ಕೆ ನೂರರಷ್ಟು ನಿರಪರಾಧಿ. ಹೀಗಾಗಿ ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ’ ಎಂದೂ ಹೇಳಿದ್ದರು.
ಇದನ್ನೂ ನೋಡಿ : ಲಾಲ್‌ಬಾಗ್ ಫ್ಲವರ್ ಶೋ| ಬಣ್ಣಬಣ್ಣದ ಹೂಗಳ ಚಿತ್ತಾರದಲ್ಲಿ ‘ತೇಜಸ್ವಿ ವಿಸ್ಮಯ’ Janashakthi Media
