ಮಾಧ್ಯಮಗಳೆಂಬ ಮುಸುಕಿನ ಅಸ್ತ್ರಗಳು

ಕ್ರಿಯಾಶೀಲವಾದ ಜನಪರವಾದ ರಾಜಕೀಯ ಚಿಂತನೆ ಹಾಗೂ ಹೋರಾಟಗಳು ಕಡಿಮೆಯಾದ ಸಂದರ್ಭವು ಬಂಡವಾಳಶಾಹಿಗೆ ಅತ್ಯಂತ ಅನುಕೂಲಕರವಾಗಿರುತ್ತದೆ. ತನ್ನ ಆಕ್ರಾಮಕವಾದ ಆರ್ಥಿಕ-ರಾಜಕೀಯ ಕಾರ್ಯಚಟುವಟಿಕೆಗಳಿಗೆ ಸೂಕ್ತವಾದ ಸಂದರ್ಭವೆಂದು ಕಂಡುಕೊಂಡು ತನ್ನ ಹಿಡಿತದಲ್ಲಿರುವ ಮಾಧ್ಯಮಗಳ ಮೂಲಕ ಜನರ ಗಮನವನ್ನು ಹಾಗೂ ಶಕ್ತಿಯನ್ನು ಕ್ಷುಲ್ಲಕ ವಿಷಯಗಳ ಮೇಲೆ ವ್ಯಯಮಾಡುವ ಹಾಗೆ ಪ್ರೇರೇಪಿಸುತ್ತಿವೆ.

ಅಸಹಿಷ್ಣುತೆಯ ವಿರುದ್ಧ ನಡೆಯುತ್ತಿರುವ ಹಲವು ಬಗೆಯ ಪ್ರತಿಭಟನೆಗಳು ಇತ್ತೀಚಿನ ವರ್ಷಗಳಲ್ಲಿ ನಡೆದ ಬಹುಮುಖ್ಯ ವಿದ್ಯಮಾನವಾಗಿದೆ. ಇವು ತಮ್ಮ ಕಾವನ್ನು ಕಳೆದುಕೊಳ್ಳದೇ ಸೈದ್ಧಾಂತಿಕವಾದ ಸ್ಪಷ್ಟತೆ ಹಾಗೂ ಸಮರ್ಪಕವಾದ ಕ್ರಿಯಾಶೀಲತೆಯಿಂದ ಮುಂದುವರೆದರೆ ಚರಿತ್ರೆ ಯ ಒಂದು ಅರ್ಥಪೂರ್ಣವಾದ ತಿರುವಿಗೆ ಬೆಂಬಲವಾಗುವ ಸಾಧ್ಯತೆ ಇದೆ. ಇಲ್ಲದಿದ್ದರೆ ಇಂಥ ವಿದ್ಯಮಾನಗಳಲ್ಲಿ ಸಾಮಾನ್ಯವಾಗಿ ಆಗುವ ಹಾಗೆ ಅವುಗಳನ್ನು ಕ್ಷುಲ್ಲಕಗೊಳಿಸುವ ಶಕ್ತಿಗಳಿಗೆ ಬಲಿಯಾಗಿ ಹೋಗಿಬಿಡಬಹುದು. ಗಂಭೀರವಾದ ಸಂಗತಿಗಳನ್ನು ಕ್ಷುಲ್ಲಕಗೊಳಿಸಿ ಅವುಗಳ ಬಗ್ಗೆ ಗೊಂದಲ ಸೃಷ್ಟಿಸುವುದು ನಮ್ಮ ಮಾಧ್ಯಮಗಳು ಮಾಡುತ್ತಿರುವ ದುಷ್ಟ ಕೆಲಸವಾಗಿದೆ. ಮಾಧ್ಯಮದವರ ದಡ್ಡತನದಿಂದಾಗಿ ಅಥವಾ ಬೇಜವಾಬ್ದಾರಿಯಿಂದಾಗಿ ಹೀಗೆ ಆಗುತ್ತಿದೆಯೆಂದು ತಪ್ಪಾಗಿ ಅಂದುಕೊಳ್ಳಲಾಗಿದೆ. ನನ್ನ ದೃಷ್ಟಿಯಲ್ಲಿ ಇದು ಬಂಡವಾಳಶಾಹಿಯು ಉದ್ದೇಶಪೂರ್ವಕವಾಗಿ ಮಾಡುವ ಕೆಲಸವಾಗಿದೆ.

ನಮ್ಮ ಮಾಧ್ಯಮಗಳು, ವಿಶೇಷವಾಗಿ ಪ್ರಮುಖ ವಾಹಿನಿಗಳು ದೇಶದ ಬನಿಯಾ- ಬಂಡವಾಳಶಾಹಿಗಳ ಒಡೆತನದಲ್ಲಿವೆ. ಹೀಗಾಗಿ ಪ್ರಜಾಪ್ರಭುತ್ವವಾದಿ ಪ್ರತಿಭಟನೆಗಳು, ಚಳುವಳಿಗಳು ಹುಟ್ಟಿಕೊಳ್ಳುತ್ತಲೇ ಈ ಮಾಧ್ಯಮಗಳು ಮೊದಲು ಅವುಗಳಿಗೆ ವಿಪರೀತವಾದ ಪ್ರಚಾರವನ್ನು ಕೊಟ್ಟು ಆಮೇಲೆ ಅಷ್ಟೇ ಬೇಗನೇ ಅವುಗಳನ್ನು ಗೊಂದಲಗಳ ಮೂಲಕ ಕ್ಷುಲ್ಲಕಗೊಳಿಸಿಬಿಡುತ್ತವೆ. ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಲೋಕಾಯುಕ್ತ ಪರವಾದ ಚಳುವಳಿ, ನಿರ್ಭಯಾ ಪ್ರಕರಣ, ಆಮ್ ಆದ್ಮಿ ಪಕ್ಷದ ಹುಟ್ಟು – ಇವುಗಳಿಗೆ ಆದ ಗತಿಯನ್ನು ನೆನಪುಮಾಡಿಕೊಳ್ಳಿ. ಅಪಾರವಾದ ಜನಬೆಂಬಲವನ್ನು ಪಡೆದಂತೆ ಕಂಡ ಈ ಚಳುವಳಿಗಳು ತಮ್ಮ ಒಡಲಲ್ಲಿಯೇ ಅನೇಕ ದೌರ್ಬಲ್ಯಗಳನ್ನು ಹೊಂದಿದ್ದು ಅವುಗಳ ಅವನತಿಗೆ ಕಾರಣವಾಗಿರಬಹುದು. ಆದರೆ ಅವುಗಳನ್ನು ಕ್ಷುಲ್ಲಕಗೊಳಿಸಿದ್ದರಲ್ಲಿ ಮಾಧ್ಯಮಗಳ ಪಾತ್ರ ಪ್ರಬಲವಾಗಿತ್ತು.

‘ಆಂಕರ್ ಪಾಲಿಟಿಕ್ಸ್’

ಈ ಕೆಲಸದಲ್ಲಿ ಮಾಧ್ಯಮಗಳು ಬಳಸುವ ತಂತ್ರಗಾರಿಕೆ ಹೀಗಿದೆ. ಮೊದಲು ಈ ಚಳುವಳಿಗಳಿಗೆ ತೀವ್ರವಾದ ಬೆಂಬಲವನ್ನು ಸೂಚಿಸುವುದು. ಮುಖ್ಯವಾಗಿ ತಮ್ಮ ಒಡೆಯರಾದ ಬನಿಯಾ- ಬಂಡವಾಳಶಾಹಿಗಳಿಗೆ ಆಪ್ತವಾದ ನಗರವಾಸಿ ಉಚ್ಚ ಮಧ್ಯಮವರ್ಗದ ಇಂಗ್ಲಿಷ್ ಬಲ್ಲ ಐಟಿ, ಬಿಟಿ ಮುಂತಾದ ಕಂಪನಿಗಳ ಸೇವೆಯಲ್ಲಿರುವವರನ್ನು ಈ ಚಳುವಳಿಗೆ ಎಳೆದು ತರುವುದು. ಅವರು ನಡೆಸುವ ಮೊಂಬತ್ತಿ ಪ್ರತಿಭಟನೆಗಳಿಗೆ ವಿಪರೀತ ಪ್ರಚಾರ ಕೊಡುವುದು. ಇದಕ್ಕೆ ಕಾರಣವೆಂದರೆ ಈ ವರ್ಗಕ್ಕೆ ತಾನು ಸಮಾಜಕ್ಕೆ ಏನನ್ನೋ ಮಾಡುತ್ತಿದ್ದೇನೆ ಎನ್ನುವ ಭರವಸೆ ಬೇಕಿದೆ. ಅಲ್ಲದೆ ಈ ಮಾಧ್ಯಮಗಳಿಗೆ ಕೂಡಾ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿಕೊಡಬೇಕಾಗಿದೆ.

ಸರಿ, ಆನಂತರ ಎರಡನೇಯ ಪರ್ವ ಶುರುವಾಗುತ್ತದೆ. ಇದರಲ್ಲಿ ಈ ಚಳುವಳಿಯ ನೇತಾರರ ದೌರ್ಬಲ್ಯಗಳನ್ನು ವೈಯಕ್ತಿಕ ಸಮಸ್ಯೆಗಳನ್ನು, ಒಡಕುಗಳನ್ನು “ವಸ್ತುನಿಷ್ಠವಾಗಿ” ಚರ್ಚಿಸಲಾಗುತ್ತದೆ. ಈ ‘ವಸ್ತುನಿಷ್ಠತೆ’ಯ ದೊಂಬರಾಟವನ್ನು ನಾನು ‘ಆಂಕರ್ ಪಾಲಿಟಿಕ್ಸ್’ (anchor politics) ಎಂದು ಕರೆಯುತ್ತೇನೆ. ಈ ರಾಜಕೀಯದಲ್ಲಿ ಎರಡು ತಂತ್ರಗಳಿವೆ. ಒಂದು, ಕ್ರಮೇಣವಾಗಿ ಚಳುವಳಿಗಳ ಪರವಾಗಿ ಮಾತನಾಡಲು ದುರ್ಬಲರನ್ನು ಹಾಗೂ ಅವುಗಳು ವಿರುದ್ಧವಾಗಿ ಮಾತನಾಡಲು ಪ್ರಬಲ ವಾಗ್ಮಿಗಳನ್ನು ಆಹ್ವಾನಿಸುವುದು. ಎರಡನೇಯದಾಗಿ ಪ್ರಾಮಾಣಿಕವಾಗಿ ಮಾತನಾಡುವವರಿಗೆ ಅವಕಾಶವನ್ನೇ ಕೊಡದಂತೆ ನೋಡಿಕೊಳ್ಳುವುದು. ಪ್ರಶಸ್ತಿ ವಾಪಸ್ಸುಕೊಡುವ ಬಗ್ಗೆ ನಡೆದ ಚರ್ಚೆಗಳಲ್ಲಿ ಪ್ರಸಿದ್ಧ ‘ಆಂಕರ್’ (anchor) ಆಗಿರುವ ಬರ್ಖಾ ದತ್ತ ಲೇಖಕ ಗಣೇಶ ದೇವಿಯವರಿಗೆ ಅವಕಾಶವನ್ನೇ ಕೊಡಲಿಲ್ಲ. ಚಂಪಾ ಅವರಿಗೂ ಇದೇ ಗತಿಯಾಯಿತು. ಅಂದರೆ ಪರ-ವಿರೋಧದ ಎಲ್ಲಾ ನಿಲುವುಗಳಿಗೆ ಅವಕಾಶವಿದೆಯೆನ್ನುವ ಭ್ರಮೆಯನ್ನು ಹುಟ್ಟಿಸಿ ವಾಸ್ತವವಾಗಿ ಗೊಂದಲವನ್ನು ಹುಟ್ಟಿಸುವುದು ಈ ‘ಆಂಕರ್’ (anchor) ರಾಜಕೀಯದ ಉದ್ದೇಶವಾಗಿದೆ.

ಭೀಕರ ಮೀಡಿಯಾ ಕ್ರೈಮ್

ಕನ್ನಡ ವಾಹಿನಿಗಳಂತೂ ಅತ್ಯಂತ ಅನೈತಿಕವಾದ, ದುಷ್ಟವಾದ ಕೆಲಸಗಳನ್ನು ಮಾಡುತ್ತಿವೆ. ನಂದಿತಾ ಪ್ರಕರಣ ಹಾಗೂ ಡಿ.ಕೆ. ರವಿ ಪ್ರಕರಣದಲ್ಲಿ ಶುದ್ಧ ಸುಳ್ಳುಗಳನ್ನು ಸತ್ಯವೆಂದು ಬಿಂಬಿಸುತ್ತಾ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಈ ವಾಹಿನಿಗಳು ಸತ್ಯ ಹೊರಬಂದ ಮೇಲೆ ಯಾವ ವಿಷಾದವನ್ನು ತೋರಿಸಲಿಲ್ಲ. ಅನೇಕ ಪ್ರಕರಣಗಳಲ್ಲಿ ಅವು ನೇರವಾಗಿ ಕೋಮುಭಾವನೆಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತ ಬಂದಿವೆ. ಸೈಬರ್ ಕ್ರೈಮ್‍ಗಿಂತ ಭೀಕರವಾದುದು ಈ ಮೀಡಿಯಾ ಕ್ರೈಮ್ ಎಂದು ನನ್ನ ಅನ್ನಿಸಿಕೆಯಾಗಿದೆ. ಯು.ಆರ್. ಅನಂತಮೂರ್ತಿಯವರನ್ನು ಒಬ್ಬ ಖಳನಾಯಕನನ್ನಾಗಿ ಬಿಂಬಿಸಿ ಅಪಪ್ರಚಾರ ಮಾಡಿದ ಎರಡು ಪತ್ರಿಕೆಗಳ ಸಂಪಾದಕರು ಭ್ರಷ್ಟಾಚಾರದ ಕಾರಣದಿಂದಾಗಿ ಕೆಲಸ ಕಳೆದುಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಅದೇ ರೀತಿಯಲ್ಲಿ ಪ್ರೊ. ಎಂ.ಎಂ. ಕಲಬುರ್ಗಿಯವರು ಅವಸರದಲ್ಲಿ ಆಡಿದ ಕೆಲವು ಮಾತುಗಳನ್ನು ದಿನದ 24 ಗಂಟೆಯೂ ಬಿತ್ತರಿಸಿ ಅವರನ್ನು ಹಿಂದೂ ವಿರೋಧಿಯೆಂದು ಬಿಂಬಿಸಿದ್ದು ಕನ್ನಡ ವಾಹಿನಿಗಳೇ. ಹೀಗಾಗಿ ಕಲಬುರ್ಗಿಯವರು ಬರೆದ ಒಂದು ಪುಟವನ್ನೂ ಓದದ ಸಾವಿರಾರು ಜನ ಸಾಮಾನ್ಯರು ಅವರನ್ನು ಒಬ್ಬ ಹಿಂದೂ ವಿರೋಧಿ ಕೇಡಿಯೆಂದು ಭಾವಿಸಿದ್ದಾರೆ. ಕಲಬುರ್ಗಿಯವರ ಹತ್ಯೆಗೆ ಕಾರಣವಾಗಿರಬಹುದಾದ ಅನೇಕ ಸಂಗತಿಗಳಲ್ಲಿ ಮಾಧ್ಯಮಗಳ ಈ ನಡುವಳಿಕೆಯಾಗಿ ಒಂದಾಗಿದೆ. ನಾನಂತೂ ಕಲಬುರ್ಗಿಯವರ ಹತ್ಯೆಯ ನೈತಿಕ ಜವಾಬ್ದಾರಿಯು ಮಾಧ್ಯಮಗಳದೇ ಎಂದು ನಂಬಿದ್ದೇನೆ.

ಒಂದು ವಿಪರ್ಯಾಸವನ್ನು ಗಮನಿಸಬೇಕು. ಚರ್ಚೆ ಸಂವಾದದ ಕಾರ್ಯಕ್ರಮಗಳಲ್ಲಿ ಪ್ರಗತಿಪರ ನಿಲುವುಗಳಿಗೂ ಅವಕಾಶವಿದೆ ಎಂದು ತೋರಿಸಬಯಸುವ ವಾಹಿನಿಗಳು ತಾವು ಬಿತ್ತರಿಸುವ ಶೇಕಡಾ 50 ರಷ್ಟು ಕಾರ್ಯಕ್ರಮಗಳನ್ನು ಮೂಢನಂಬಿಕೆ, ಅತಾರ್ಕಿಕ ಆಚರಣೆಗಳಿಗೆ ಮೀಸಲಿಟ್ಟಿರುತ್ತವೆ. ಗ್ರಹಗತಿ, ಭವಿಷ್ಯ, ವಾಸ್ತು ಹಾಗೂ ನಾನಾ ವೇಷಗಳಲ್ಲಿ ಕಾಣಿಸಿಕೊಂಡು ಸಮಾಜವಿರೋಧಿ ಕಾವಿಧಾರಿಗಳ ಹಾಗೂ ನಿಲುವುಗಳನ್ನು ಸಮರ್ಥಿಸುವ ಧಾರಾವಾಹಿ (ಸೀರಿಯಲ್ಲು)ಗಳ ಆರ್ಭಟ ಹೇಗಿದೆಯೆಂದರೆ, ಕರ್ನಾಟಕದ ಜನಪ್ರಿಯ ಸಂಸ್ಕøತಿಯು ಹಿಂದೆಂದೂ ಕಾಣದ ಅವನತಿಗೆ ತಲುಪಿದೆ. ಮಾಧ್ಯಮಗಳ ಪ್ರಭಾವದಲ್ಲಿರುವ ಜನಪ್ರಿಯ ಸಂಸ್ಕøತಿಯ ಅಪಾಯವೇನೆಂದರೆ ಅದು ಮೂಲತಃ ಜನವಿರೋಧಿಯಾದ ನಿಲುವುಗಳಿಗೆ ತನ್ನ ಒಪ್ಪಿಗೆಯನ್ನು ಸೂಚಿಸತೊಡಗುತ್ತದೆ. ಅವುಗಳನ್ನು ‘ಕಾಮನ್ ಸೆನ್ಸ್’ ಎಂದು ಒಪ್ಪತೊಡಗುತ್ತದೆ. ರಾಜಕೀಯವೂ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆಯೂ ಸಮಗ್ರವಾದ, ನಂಬಲರ್ಹವಾದ ಮಾಹಿತಿಯನ್ನು ಮಾಧ್ಯಮಗಳು ಕೊಡುತ್ತವೆಯೆನ್ನುವ ನಂಬಿಕೆ ಎಷ್ಟು ಬಲವಾಗಿ ಊರಿಬಿಟ್ಟಿದೆಯೆಂದರೆ ಓದು, ಚರ್ಚೆ, ಚಿಂತನೆ ಇವಾವುಗಳ ಗೊಡವೆಯೇ ಇಲ್ಲದೇ ಇಂದಿನ ಜನಸಾಮಾನ್ಯರು ಮಾಧ್ಯಮಗಳು ಪ್ರತಿಪಾದಿಸುವ ಹುಸಿ ವಿವರಣೆಗಳನ್ನೇ ಸತ್ಯವೆಂದು ನಂಬುತ್ತಿದ್ದಾರೆ. ಆದ್ದರಿಂದಲೇ ಯಾವುದೇ ಸಾರ್ವಜನಿಕ ಘಟನೆಯ ಬಗ್ಗೆ ತಕ್ಷಣವೇ ಪ್ರತಿಕ್ರಿಯೆ ತೋರಿಸತೊಡಗುತ್ತಾರೆ.

ಅಭಿವ್ಯಕ್ತಿ, ಪ್ರದರ್ಶನಗಳ ಮಧ್ಯ ವ್ಯತ್ಯಾಸ ಇಲ್ಲ

ಬಹುಪಾಲು ಈ ಪ್ರತಿಕ್ರಿಯೆಯು ಅತಾರ್ಕಿಕ ಹಾಗೂ ಭಾವನಾತ್ಮಕವಾಗಿರುತ್ತದೆ. ಅನೇಕ ಸಾರಿ ನೇರವಾಗಿ ‘ಮೊಬ್ ವಯಲೆನ್ಸ್’ (mob violence) ಆಗಿ ಪರಿವರ್ತಿತವಾಗುತ್ತದೆ. ಈ ವಿದ್ಯಮಾನಗಳಲ್ಲಿ ದೊಡ್ಡಪಾಲು ಕೋಮುವಾದಿ ಭಾವನೆಗಳ ಪ್ರಚೋದನೆಯನ್ನು ಒಳಗೊಂಡಿರುತ್ತದೆ. ಇದನ್ನು ವ್ಯವಸ್ಥಿತವಾಗಿ ಬಲಪಂಥೀಯ ಗುಂಪುಗಳು ಬಳಸಿಕೊಳ್ಳುತ್ತಿವೆ. ಸಮಾಜದ ಸಮಸ್ಯೆಗಳನ್ನು ನಿಜವಾದ ಪ್ರಜಾಪ್ರಭುತ್ವವಾದಿ ರೀತಿಯಲ್ಲಿ ಸಂವಾದದ ಮೂಲಕ ಚರ್ಚಿಸಬೇಕಾದ ನಾಗರೀಕ ಸಮುದಾಯವು (ಸಿವಿಲ್ ಸೊಸೈಟಿ) ಇಂದು ಮಾಧ್ಯಮಗಳು ಹಾಗೂ ರಾಜಕೀಯ ವಲಯಗಳಿಂದ ಪ್ರಚಾರವಾಗುತ್ತಿರುವ ಪೂರ್ವಗ್ರಹಗಳಿಗೆ ತಕ್ಷಣವೇ, ವಿವೇಚನೆಯೇ ಇಲ್ಲದೇ ಸಾರ್ವಜನಿಕವಾಗಿ ಪ್ರತಿಕ್ರಿಯಿಸುವ ರಂಗಸ್ಥಳವಾಗಿ ಬಿಟ್ಟಿರುವುದು ಅಪಾಯಕಾರಿಯಾಗಿದೆ. ಇದು ಎಷ್ಟು ರೂಕ್ಷವಾಗಿಬಿಟ್ಟಿದೆಯೆಂದರೆ ಅದನ್ನು ಪ್ರಚೋದನೆ-ಪ್ರತಿಕ್ರಿಯೆಯ ಸರಳ ಸೂತ್ರಕ್ಕೆ ಇಳಿಸಿಬಿಡಬಹುದಾಗಿದೆ. ಅಲ್ಲದೆ ಅಭಿವ್ಯಕ್ತಿ ಮತ್ತು ಪ್ರದರ್ಶನಗಳ ಮಧ್ಯದ ವ್ಯತ್ಯಾಸವೇ ಇಲ್ಲದಂತಾಗಿದೆ.

ಉದಾಹರಣೆಗೆ ಈ ಹಿಂದೆ ಯಾವುದೇ ಬಗೆಯ ಸಾವು ಸಂಭವಿಸಿದಾಗ ಅದು ಕುಟುಂಬ, ಸಂಬಂಧಿಕರು ಹಾಗೂ ನೆರೆಹೊರೆಯವರು ಮಾತ್ರ ದುಃಖವನ್ನು ಹಂಚಿಕೊಳ್ಳುವ, ಸಾಂತ್ವನ ಹೇಳುವ, ಮತ್ತೆ ಬದುಕಿಗೆ ಮರಳುವ ಕ್ರಿಯೆಗಳಿಗೆ ಸೀಮಿತವಾಗಿರುತ್ತಿತ್ತು. ಆದರೆ ಈಗ ಸಾವು ಪ್ರದರ್ಶನದ ವಸ್ತುವಾಗಿಬಿಟ್ಟಿದೆ. ಮಾಧ್ಯಮಗಳ ಕ್ಯಾಮರಾ ಇಲ್ಲದಿದ್ದರೆ ದುಃಖವೂ ಅನ್ನಿಸಲಾರದ ಅಮಾನವೀಯ ಸ್ಥಿತಿಯನ್ನು ಕಾಣುತ್ತಿದ್ದೇವೆ. ವಿವಾದಾಸ್ಪದವಾದ ಸಾವಿನ ಸಂದರ್ಭದಲ್ಲಿ ಪ್ರತಿಯೊಬ್ಬ ರಾಜಕೀಯ ಧುರೀಣ “ಸಾಂತ್ವನ ಹೇಳಲು” ಬಂದಾಗಲೂ ಕಡ್ಡಾಯವಾಗಿ ದುಃಖ ಪ್ರದರ್ಶಿಸುವ ತಂದೆ ತಾಯಂದಿರನ್ನು ನೋಡಿದಾಗ ನಮ್ಮ ಮನುಷ್ಯ ಸಹಜ ನೋವುಗಳನ್ನು ಸಹಜವಾಗಿ ಅಭಿವ್ಯಕ್ತಿಸುವ ಹಕ್ಕನ್ನು ದೋಚಿಕೊಂಡು ಮಾಧ್ಯಮಗಳು ಅವುಗಳ ಅಶ್ಲೀಲವಾದ ಪ್ರದರ್ಶನಕ್ಕೆ ತೊಡಗಿಸುತ್ತಿರುವುದರ ಬಗ್ಗೆ ಕಳವಳವೆನಿಸುತ್ತದೆ. ಮನುಷ್ಯರ ದುಃಖ ದುಮ್ಮಾನಗಳಿಗೆ ಸಹಜವಾದ ಅಭಿವ್ಯಕ್ತಿಯ ರಹದಾರಿಗಳು ಇಲ್ಲವಾಗತೊಡಗಿದಾಗ ಮಾನವೀಯ ನಡುವಳಿಕೆಯು ಅಸಾಧ್ಯವಾಗುತ್ತದೆ.

ಮುಂದಿನ ಹೆಜ್ಜೆ ಫ್ಯಾಸಿಜಮ್ ವಿರುದ್ಧ ನೇರ ಹೋರಾಟವಾದೀತೆ?

ಇದೆಲ್ಲಾ ಮಾಧ್ಯಮಗಳ ವಿರುದ್ಧದ ಗೊಣಗಾಟವೆಂದು ಹೇಳಿಬಿಡುವುದು ಸುಲಭ. ನಾನು ಹೇಳುತ್ತಿರುವುದು ಮಾಧ್ಯಮಗಳು ಕೇವಲ ಲಕ್ಷಣಗಳು ಮಾತ್ರ. ಕ್ರಿಯಾಶೀಲವಾದ ಜನಪರವಾದ ರಾಜಕೀಯ ಚಿಂತನೆ ಹಾಗೂ ಹೋರಾಟಗಳು ಕಡಿಮೆಯಾದ ಸಂದರ್ಭವು ಬಂಡವಾಳಶಾಹಿಗೆ ಅತ್ಯಂತ ಅನುಕೂಲಕರವಾಗಿರುತ್ತದೆ. ತನ್ನ ಆಕ್ರಾಮಕವಾದ ಆರ್ಥಿಕ-ರಾಜಕೀಯ ಕಾರ್ಯಚಟುವಟಿಕೆಗಳಿಗೆ ಸೂಕ್ತವಾದ ಸಂದರ್ಭವೆಂದು ಕಂಡುಕೊಂಡು ತನ್ನ ಹಿಡಿತದಲ್ಲಿರುವ ಮಾಧ್ಯಮಗಳ ಮೂಲಕ ಜನರ ಗಮನವನ್ನು ಹಾಗೂ ಶಕ್ತಿಯನ್ನು ಕ್ಷುಲ್ಲಕ ವಿಷಯಗಳ ಮೇಲೆ ವ್ಯಯಮಾಡುವ ಹಾಗೆ ಪ್ರೇರೇಪಿಸುತ್ತಿವೆ.

ಜಾಗತೀಕರಣದ ದೃಷ್ಟಿಯಿಂದ ನೋಡಿದರೆ ಈಗ ಅಂತರ್ರಾಷ್ಟ್ರೀಯ ಬಂಡವಾಳಶಾಹಿಯು ಭಾರತದಲ್ಲಿ ತನ್ನ ಎರಡನೇ ಹಂತದ ಬೆಳವಣಿಗೆಗಾಗಿ ಕಾಯುತ್ತಿದೆ. ಮೋದಿ ನಾಯಕತ್ವದ ಸರಕಾರದಿಂದ ಅದು ಮತ್ತು ನಮ್ಮ ದೇಶದ ಬನಿಯಾ-ಬಂಡವಾಳಶಾಹಿಯು ಭೂಮಿಯ ಪರಭಾರೆ, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವ ಕಾನೂನುಗಳ, ನೇರ ವಿದೇಶೀ ಬಂಡವಾಳ ಹೂಡಿಕೆಗೆ ಇರುವ ಅಡೆತಡೆಗಳನ್ನು ತೆಗೆದುಹಾಕುವ ಕಾನೂನು ಇವುಗಳನ್ನು ನಿರೀಕ್ಷಿಸುತ್ತಿದೆ. ಆದರೆ ಅದು ಅಷ್ಟು ಸುಲಭವಾಗಿ ಸಂಸತ್ತಿನಲ್ಲಿ ಆಗುತ್ತಿಲ್ಲವೆಂಬ ಕಳವಳದಲ್ಲಿವೆ. ಆರ್.ಎಸ್.ಎಸ್.ನ ಉಗ್ರವಾದಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ರಾಷ್ಟ್ರದ ರಾಜಕೀಯದ ಮೇಲೆ ಸಂಪೂರ್ಣ ಹತೋಟಿ ಸಾಧಿಸುವ ಪ್ರಯತ್ನದಲ್ಲಿ ಬಿ.ಜೆ.ಪಿ. ಇದೆ. ಅದು ತನ್ನ ಈ ಅಂತರ್ ವೈರುಧ್ಯವನ್ನು ಬಗೆಹರಿಸಿಕೊಂಡಿಲ್ಲ. ಇದರ ಪರಿಣಾಮವಾಗಿ ಹುಟ್ಟಿಕೊಂಡಿರುವ ಅಸಂಗತವಾದ ಸ್ಥಿತಿಯಲ್ಲಿ ಮಾಧ್ಯಮಗಳು ಗೊಂದಲಗಳನ್ನು ಹೆಚ್ಚಿಸುತ್ತಿವೆ.

ಇಂಥ ಸಂದರ್ಭದಲ್ಲಿ ಬರಹಗಾರರು, ಕಲಾವಿದರು, ವಿಜ್ಞಾನಿಗಳು ಇತಿಹಾಸಕಾರರು ರಾಷ್ಟ್ರದ ರಾಜಕೀಯದಿಂದ ಉಲ್ಬಣಗೊಂಡಿರುವ ಅಸಹಿಷ್ಣುತೆಯನ್ನು ಸರಿಯಾಗಿ ಗುರುತಿಸಿ ಪ್ರತಿಭಟಿಸುತ್ತಿದ್ದಾರೆ. ಆದರೆ ಅವರು ತೆಗೆದುಕೊಂಡ ಅರ್ಥಪೂರ್ಣವಾದ ಮೊದಲ ಹೆಜ್ಜೆಯ ಮುಂದಿನ ಹೆಜ್ಜೆಯು ಫ್ಯಾಸಿಜಮ್ ವಿರುದ್ಧದ ನೇರ ಹೋರಾಟವೇ ಆಗಿರುತ್ತದೆಯೆನ್ನುವುದನ್ನು ಅವರು ಖಚಿತವಾಗಿ ಅರಿತಿದ್ದಾರೆಯೇ? ಕಾಯ್ದು ನೋಡಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *