ಹಾಸನ: ಕೊರೊನಾ ಮಹಾಮಾರಿ ವಕ್ಕರಿಸದೇ ಇದ್ದಿದ್ದರೆ ಜಿಲ್ಲೆಯ ಈ ವೇಳೆಗಾಗಲೇ ಬೇರೆಯದೇ ರೀತಿಯಲ್ಲೇ ಬದಲಾಗುತ್ತಿತ್ತು ಅನ್ನೋದು ಬೇರೆ ಮಾತು.
ರೈಲ್ವೆ ಮೇಲ್ಸೇತುವೆ ಕಾಮಗಾರಿ ಒಂದು ರೂಪ ಪಡೆಯುತ್ತಿತ್ತು.ದೊಡ್ಡ ಕಟ್ಟಡ ಕಾಮಗಾರಿಗಳು ಇನ್ನೂ ಎತ್ತರಕ್ಕೆ ಬೆಳೆಯುತ್ತಿದ್ದವು. ವ್ಯಾಪಾರ ವಹಿವಾಟು ಮತ್ತಷ್ಟು ವೃದ್ಧಿಯಾಗಿ ಆರ್ಥಿಕ ಬೆಳವಣಿಗೆ ಇಂಬು ಪಡೆಯುತ್ತಿತ್ತು. ಆದರೀಗ ಎಲ್ಲರೂ ಬುಡಮೇಲಾಗಿದೆ. ಅಭಿವೃದ್ಧಿಗೆ
ಅಕ್ಷರಶಃ ಗ್ರಹಣ ಹಿಡಿದಿದೆ. ಕೆಲವರು ಕಾಮಗಾರಿ ಮುಂದುವರಿಯುತ್ತಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ವೇಗ ಪಡೆದುಕೊಂಡಿಲ್ಲ ಎತ್ತಿನಹೊಳೆ ಯೋಜನೆ ಸೇರಿದಂತೆ ಬಹುತೇಕ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿವೆ ಎಂಬುದು ಕಣ್ಣ ಮುಂದಿನ ಸತ್ಯ.
ಉತ್ತಮ ಮಳೆಯಿಂದ ಕೃಷಿ ಚಟುವಟಿಕೆ ನಿರಾಂತಕವಾಗಿ ಸಾಗಿದ್ದರೂ, ಮೆಕ್ಕೆಜೋಳಕ್ಕೆ ಹುಳುವಿನ ಬಾಧೆ ಕಾಣಿಕೊಂಡಿದ್ದರೆ, ಆಲೂಗೆಡ್ಡೆ ಮೊಳೆಯುವ ಬದಲು ಕೊಳೆಯುತ್ತಿದೆ. ಜಿಲ್ಲಾಧಿಕಾರಿ ಆರ್.ಗಿರೀಶ್ ನಿರಂತರ ಸಭೆ ನಡೆಸುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತಲೇ ಇದ್ದಾರೆ. ಆದರೆ ಕೊರೊನಾ ಮಹಾಮಾರಿ ಎಲ್ಲದಕ್ಕೂ ತಡೆ ಒಡ್ಡಿದೆ. ಬಹುತೇಕ ಅಧಿಕಾರಿಗಳು ಇದೊಂದರ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಂಡಿದ್ದು, ಉಳಿದೆಲ್ಲಾ ಕಾರ್ಯಕ್ರಮ, ಜಿಲ್ಲೆಯ ಪ್ರಮುಖ ಸಮಸ್ಯೆಗಳತ್ತ ಗಮನ ಹರಿಸುವುದು ಗೌಣವಾಗಿದೆ. ಮಲೆನಾಡು ಭಾಗದಲ್ಲಿ ಮಿತಿ ಮೀರಿರುವ ಕಾಡಾನೆ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿದ್ದರೂ, ಅದರತ್ತ ಸರ್ಕಾರದಿಂದ ಹಿಡಿದು ಅಧಿಕಾರಿಗಳವರೆಗೆ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಇದರ ಪರಿಣಾಮ ಮತ್ತೆ ಹೋರಾಟದ ಕೂಗು ಮೊಳಗಿದೆ.
ಜಿಲ್ಲೆಯ 264 ಗ್ರಾಮ ಪಂಚಾಯ್ತಿಗಳ ಆಡಳಿತಾವಧಿ ಮುಗಿದಿರುವುದರಿಂದ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ. ಅವರಿನ್ನೂ ಚುರುಕಾಗದ ಕಾರಣ ಸ್ಥಳೀಯ ಮಟ್ಟದಲ್ಲಿ ತಲೆದೋರುವ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲಾಗದೆ ಹಳ್ಳಿ ಜನ ತೊಂದರೆ ಪಡುವಂತಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳ ಪೈಕಿ ಕೆಲವರು ಹೆಚ್ಚಾಗಿ ರಸ್ತೆ ಕಾಮಗಾರಿ ಚಾಲನೆ ನೀಡುವುದು ಬಿಟ್ಟರೆ, ಕೊರೊನಾದಲ್ಲೇ ಬ್ಯುಸಿಯಾಗಿದ್ದಾರೆ.
ಇನ್ನು ದುಡಿಯುವ ಮಂದಿಗೆ ಕೆಲಸ ಇಲ್ಲದಂತಾಗಿದ್ದರೆ, ಜಿಲ್ಲೆಯಲ್ಲೂ ಪ್ರವಾಸೋದ್ಯಮ, ಹೋಟಲ್ ಉದ್ಯಮ ನೆಲ ಕಚ್ಚಿದೆ. ಕೈಗಾರಿಕೆ ವಾಣಿಜ್ಯೋದ್ಯಮ ಏದುಸಿರು ಬಿಡುತ್ತಿದೆ. ಒಟ್ಟಿನಲ್ಲಿ ಕಳೆದ ಮೂರು ತಿಂಗಳಿಂದ ಯಾವೊಂದೂ ಚಟುವಟಿಕೆ ಸಾಂಗವಾಗಿ ನಡೆಯುತ್ತಿಲ್ಲ. ಬಂದ್ ಆಗಿರುವ ಸಿನಿಮಾ ಥಿಯೇಟರ್, ಮಾಲ್ ಓಪನ್ ಆಗಿಲ್ಲ. ಕೆಎಸ್‍ಆರ್ ಟಿಸಿ ಬಸ್ ಸಂಚಾರ ಸಂಪೂರ್ಣವಾಗಿ ಶುರುವಾಗಿಲ್ಲ. ಕೆಲವು ಶಾಲೆಗಳಲ್ಲಿ ಆನ್‍ಲೈನ್ ತರಗತಿ ನಡೆಯುತ್ತಿರುವುದನ್ನು ಬಿಟ್ಟರೆ, ಯಾವುದೇ ಶಾಲಾ ಕಾಲೇಜು ಆರಂಭವಾಗಿಲ್ಲ.
ಖಾಸಗಿ ಸಂಸ್ಥೆಗಳಿಗೆ ಸಂಬಳ ಕಡಿತವಾಗಿದೆ. ಕೆಲವರಿಗೆ ಸಂಬಳವನ್ನೇ ನಿಲ್ಲಿಸಲಾಗಿದೆ. ಇದರಿಂದ ತಿಂಗಳ ಸಂಬಳವನ್ನೇ ನೆಚ್ಚಿಕೊಂಡು ಬದುಕುತ್ತಿದ್ದವರು ಅಕ್ಷರಶಃ ಕಣ್ ಕಣ್ ಬಿಡುವಂತಾಗಿದೆ. ಎಷ್ಟೋ ಮಂದಿ ಬೆಳಗಾದರೆ ದಿನ ದೂಡುವುದು ಹೇಗೆ ಎಂಬ ಚಿಂತೆಗೆ ಬಿದಿದ್ದಾರೆ.
ಸರ್ಕಾರಿ ನೌಕರರಿಗೂ ಎಲ್ಲರಿಗೂ ವೇತನ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಇನ್ನು ಕೊರೊನಾ ಲಾಕ್‍ಡೌನ್ ನಿಂದ ಅನುಭವಿಸಿರುವ ಆಟೋ ಚಾಲಕರು, ಅಕ್ಕಸಾಲಿಗರು, ಕ್ಷೌರಿಕರು, ಹೂ, ಹಣ್ಣು ತರಕಾರಿ ವ್ಯಾಪಾರಿಗಳು, ರೈತರಿಗೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಬಿಡುಗಡೆಯಾಗಲು ದಿನ ಎಣಿಸುವಂತಾಗಿದೆ.
ವಾಸ್ತವ ಹೀಗಿರುವಾಗ ಹೀಗಿರುವಾಗ ರಾಜ್ಯ ಸರ್ಕಾರ ಮತ್ತೆ ಲಾಕ್‍ಡೌನ್ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಹಾಗಾದರೆ ಜಿಲ್ಲೆಯಲ್ಲೂ ಎಲ್ಲ ಚಟುವಟಿಕೆ ಲಾಕ್‍ಡೌನ್ ಆಗಲಿವೆ ಎಂಬ ಆತಂಕ ಎದುರಾಗಿದೆ. ಸಮಸ್ಯೆಗಳು ಬೆಟ್ಟದಷ್ಟು ಬೆಳೆಯಲಿವೆ. ರೈತರ ಬದುಕು ಅಯೋಮಯವಾಗಲಿದೆ. ಹಾಲಿ ಬಾಧಿಸುತ್ತಿರುವ ಆರ್ಥಿಕ ಸಂಕಷ್ಟ ಬಡಪಾಯಿಗಳ ಜೀವ ಬಲಿ ಪಡೆದರೂ ಅಚ್ಚರಿ ಇಲ್ಲ. ಒಂದೊಡೆ ಕೊರೊನಾ ಮಹಾಮಾರಿ ಜೀವ ಹಿಂಡುತ್ತಿದ್ದರೆ ಮತ್ತೊಂದೆ ಲಾಕ್‍ಡೌನ್ ಗುಮ್ಮ ಎಲ್ಲ ಜನರನ್ನು ಆತಂಕ್ಕೆ ದೂಡಿದೆ. ಈ ಕುರಿತು ಗುರುವಾರ ನಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.