ಮತ್ತೆ ಎದ್ದಿದೆ ಏಕರೂಪ ನಾಗರಿಕ ಸಂಹಿತೆಯ ವಾದ

ಕೆ.ಎಸ್. ವಿಮಲಾ
ಸಂಪುಟ 9 ಸಂಚಿಕೆ 46, 15 ನವೆಂಬರ್ 2015

ಮಹಿಳೆಯರಿಗೆ ನ್ಯಾಯ ಒದಗಿಸುವ ಪ್ರಶ್ನೆಗಳ ಮೇಲೆ ಸರ್ವೋಚ್ಚ ನ್ಯಾಯಾಲಯ ಮತ್ತೊಮ್ಮೆ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪ್ರಶ್ನೆ ಎತ್ತಿದೆ. ಆದರೆ ಕೇವಲ ಏಕರೂಪ ನಾಗರಿಕ ಸಂಹಿತೆಯ ಮೂಲಕ ಮಾತ್ರ ಮಹಿಳಾ ಸಮಾನತೆಯ ಕಾರ್ಯ ಸಾಧಿಸುವುದು ಸಾಧ್ಯವಿಲ್ಲವೆಂಬುದು ಇದುವರೆಗಿನ ಅನುಭವ. ಎಲ್ಲ ಧರ್ಮಗಳೊಳಗಿನ ಮೂಲಭೂತವಾದಿಗಳು ಮಹಿಳಾ ವಿರೋಧೀ ಅಂಶಗಳಲ್ಲಿ ಸಾಮ್ಯತೆಯನ್ನು ಹೊಂದಿರುತ್ತಾರೆ. ಹಾಗಾಗಿಯೇ ಪ್ರಜಾಪ್ರಭುತ್ವ ನೆಲೆಯಲ್ಲಿ ಹಂತ ಹಂತವಾಗಿ ಎಲ್ಲ ಮಹಿಳೆಯರಿಗೂ ಸಿಗಬೇಕಾದ ಸಮಾನ ಕಾನೂನಿನ ಅವಕಾಶಗಳನ್ನು ಸೃಷ್ಟಿ ಮಾಡಬೇಕು. ಮತ್ತು ಎಲ್ಲ ವೈಯಕ್ತಿಕ ಕಾನೂನುಗಳಿಗೆ ತಿದ್ದುಪಡಿ ಬರಬೇಕು. ಆ ಮೂಲಕವಷ್ಟೇ ಲಿಂಗತ್ವ ಸಮನ್ಯಾಯ ಮತ್ತು ಸಮಾನ ಕಾನೂನು ಬೇಡಿಕೆಗಳಿಗೆ ಅರ್ಥಬರಲು ಸಾಧ್ಯ.

ಭಾರತವು ಬಹುಸಂಸ್ಕೃತಿಯ ಬಹು ಧರ್ಮೀಯ ರಾಷ್ಟ್ರವೆಂದೂ, ಎಲ್ಲರಿಗೂ ಅವರವರ ಧಾರ್ಮಿಕ ಹಕ್ಕುಗಳಿರುತ್ತವೆ ಮತ್ತು ಒಬ್ಬರು ಮತ್ತೊಬ್ಬರನ್ನು ಗೌರವಿಸಬೇಕು ಎಂಬ ಸಂವಿಧಾನವನ್ನೂ ಒಪ್ಪಿಕೊಳ್ಳುತ್ತಲೇ ಬಂದಿದ್ದೇವೆ. ಹಾಗೆ ಹೇಳುವಾಗಲೇ ಪ್ರತಿಯೊಬ್ಬ ವ್ಯಕ್ತಿಗೂ ಲಿಂಗ ಜಾತಿ ಧರ್ಮಗಳ ತರತಮವಿಲ್ಲದೇ ಸಮಾನತೆಯ ಆಶಯವನ್ನೂ ಸಂವಿಧಾನದಲ್ಲಿ ಹೇಳಿಕೊಂಡಿದ್ದೇವೆ. ಧರ್ಮ ಸಹಿಷ್ಣುತೆಯನ್ನು ಬೋಧಿಸುತ್ತಲೇ ಅಸಹಿಷ್ಣುತೆಯ ಭಾವವನ್ನೂ ಬೆಳೆಸಿಕೊಂಡಿದ್ದೇವೆ. ಎಲ್ಲರೂ ಸಮಾನರು ಎಂದು ಹೇಳಿಕೊಳ್ಳುತ್ತಲೇ ಲಿಂಗಾಧಾರಿತ ತಾರತಮ್ಯವನ್ನು ಸಹಿಸಿಕೊಂಡೂ ಬಂದಿದ್ದೇವೆ. ಅದಕ್ಕೆ ಪರಂಪರೆ ಸಂಸ್ಕೃತಿಯೆಂಬ ವೈಭವದ ಸ್ಥಾನವನ್ನೂ ಕೊಟ್ಟಿದ್ದೇವೆ. ಮಾತೃದೇವೋ ಭವ ಎಂದು ಶಿಲೆಯಂತೆ ನಿಲ್ಲಲು ಆಜ್ಞಾಪಿಸಿದ್ದೇವೆ. ಕುಟುಂಬದ ಸಕಲ ಜವಾಬುದಾರಿಗೂ ಬಾಧ್ಯಸ್ಥಳನ್ನಾಗಿ ಮಾಡಿ ಹಕ್ಕುಗಳ ಬಗ್ಗೆ ಮೌನವಹಿಸ ಬಯಸುತ್ತೇವೆ. ಸಮಾನತೆಯನ್ನು ಕೊಡ ಬಯಸುವುದಿಲ್ಲ ಆದರೆ ಸಂಹಿತೆಗೆ ಒಳಪಡಿಸ ಬಯಸುತ್ತೇವೆ. ಇದು ಈ ದೇಶದ ಪೃವೃತ್ತಿ.

ಈಗ ನಮ್ಮ ಸರ್ವೋಚ್ಚ ನ್ಯಾಯಾಲಯ ಮತ್ತೊಮ್ಮೆ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪ್ರಶ್ನೆ ಎತ್ತಿದೆ. ಸುಪ್ರೀಂಕೋರ್ಟ್ ಆಗಾಗ ಈ ಪ್ರಶ್ನೆಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ಹಲವು ಬಾರಿ ಎತ್ತಿದೆ. ಈ ಬಾರಿ ಕ್ರಿಶ್ಚಿಯನ್ ಧರ್ಮದ ಪುರುಷನೊಬ್ಬ ವಿಚ್ಚೇದನಕ್ಕೆ ಸಂಬಂಧಿಸಿದಂತೆ ತಮ್ಮ ಕಾನೂನಿನಲ್ಲಿರುವ ಎರಡು ವರ್ಷಗಳ ಕಾಯುವ ಅವಧಿಯನ್ನು ಹಿಂದೂ ವಿವಾಹ ಕಾಯ್ದೆಯಲ್ಲಿರುವಂತೆ ಒಂದು ವರ್ಷಕ್ಕೆ ಇಳಿಸಬೇಕೆಂದು ಕೋರಿಕೊಂಡ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನೇಕೆ ಜಾರಿಗೆ ತರಬಾರದು ಎಂಬ ಪ್ರಸ್ತಾಪವನ್ನು ಮತ್ತೆ ಮುಂದಿಟ್ಟಿದೆ. ಈ ಹಿಂದೆ ಹಿಂದೂ ಮಹಿಳೆಯೊಬ್ಬಳು ತನ್ನ ಗಂಡ ಇನ್ನೊಂದು ಮದುವೆಯಾಗಲೋಸುಗವೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವಿಷಯದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ ಸಂದರ್ಭದಲ್ಲಿಯೂ ಇದೇ ಪ್ರಶ್ನೆಯನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿತ್ತು.

 

393256

ಏಕರೂಪ ನಾಗರಿಕ ಸಂಹಿತೆ ಇಲ್ಲದೆಯೂ ಅವಕಾಶವಿದೆ

ಬಹುಪತ್ನಿತ್ವಕ್ಕಾಗಿಯೇ ಮತಾಂತರ ಹೊಂದಿದರೆ ಅದನ್ನು ಸಹಜ ಮತಾಂತರವೆಂದು ಪರಿಗಣಿಸಬೇಕಾದ ಅಗತ್ಯವಿಲ್ಲವೆಂದು ಅಪರಾಧವೆಂದು ಪರಿಗಣಿಸುವ ಹಾಗೂ ಎರಡು ವರ್ಷಗಳ ಕಾಯುವ ಸಮಯವನ್ನು ಒಂದು ವರ್ಷಕ್ಕೆ ಇಳಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ಏಕರೂಪ ನಾಗರಿಕ ಸಂಹಿತೆಯಿಲ್ಲದೆಯೂ ಅವಕಾಶವಿತ್ತು. ಈ ಹಿಂದೆ ಕೂಡ ಇಂಥಹ ಕ್ರಮ ಕೈಗೊಂಡ ಉದಾಹರಣೆಗಳಿವೆ. ಅದನ್ನು ಎಡ ಪ್ರಜಾಸತ್ತಾತ್ಮಕ ಶಕ್ತಿಗಳು ಸ್ವಾಗತಿಸಿವೆ. ಧಾರ್ಮಿಕ ಮೂಲಭೂತವಾದಿಗಳಿಂದ ಅದರ ವಿರುದ್ಧ ತೀವ್ರ ಪ್ರತಿಭಟನೆಯೂ ಬಂದಿರುವುದಿಲ್ಲ.

ಭಾರತದಂತಹ ದೇಶಗಳಲ್ಲಿ ಆಳುವ ಪಕ್ಷಗಳ ಸೀಮಿತ ರಾಜಕೀಯ ಕಾರಣಗಳಿಂದಾಗಿ ಹಲವು ಮಹಿಳಾ ವಿರೋಧಿ ನೀತಿ ನಿಲುವುಗಳು ಆಗಾಗ ಪ್ರಕಟವಾಗುತ್ತವೆ, ಮತ್ತು ಮಹಿಳೆಯರ ಸ್ಥಾನ ಮಾನಗಳ ಕುಸಿತಕ್ಕೆ ಅದು ಕಾರಣವಾಗಿದೆ ಕೂಡ. ಅದನ್ನು ಮುಚ್ಚಿಕೊಳ್ಳಲೋಸುಗವೇ ಮಹಿಳೆಯರನ್ನೂ ಧರ್ಮ, ಜಾತಿಗಳ ಹೆಸರಿನಲ್ಲಿ ಒಡೆಯುವ ಕೆಲಸಕ್ಕೂ ಅವು ಮುಂದಾಗುತ್ತವೆ. ಇವುಗಳ ವಿರುದ್ಧ ಎಲ್ಲ ಜಾತಿಯ, ಎಲ್ಲ ಧರ್ಮದ ಮಹಿಳೆಯರಿಗೆ ಅವರ ಧರ್ಮದೊಳಗೆ ಮತ್ತು ನಾಗರೀಕರಾಗಿ. ಎಲ್ಲ ಸ್ತರಗಳಲ್ಲಿ ಸಿಗಬೇಕಾದ ಸಮಾನ ಹಕ್ಕುಗಳು, ಸಮಾನ ಅವಕಾಶ ಸಮ ನ್ಯಾಯ ಸಿಗಬೇಕೆಂಬ ಆಶಯದಲ್ಲಿ ಯಾವ ರಾಜಿಯೂ ಇಲ್ಲ. ಹಾಗೆಯೇ ಬೇರೆ ಬೇರೆ ವೈಯಕ್ತಿಕ ಕಾನೂನುಗಳಲ್ಲಿ ಲಿಂಗಾಧಾರಿತ ತಾರತಮ್ಯಗಳಿವೆ ಎಂಬುದರಲ್ಲಿಯೂ ಯಾವ ಸಂಶಯವೂ ಇಲ್ಲ. ಮತ್ತು ಆ ತಾರತಮ್ಯಗಳನ್ನು ಕೆಲವೊಮ್ಮೆ ಪ್ರಭುತ್ವ, ರಾಜಕೀಯ ಪಕ್ಷಗಳು ವಿವಿಧ ಪಂಗಡಗಳ ಮೂಲಭೂತವಾದಿಗಳು ಧರ್ಮ, ರೀತಿ ರಿವಾಜು, ಪರಂಪರೆಗಳ ಹೆಸರಿನಲ್ಲಿ ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸುವ ಖಂಡನೀಯ ಪ್ರಯತ್ನ ನಡೆಸುತ್ತಲೇ ಇರುತ್ತವೆ. ಆಸ್ತಿ ಹಕ್ಕು, ದತ್ತಕದ ಹಕ್ಕು, ವಿಚ್ಚೇದನದ ಹಕ್ಕು, ಮುಂತಾದ ವಿಷಯಗಳಲ್ಲಿ ವೈಯಕ್ತಿಕ ಕಾನೂನುಗಳು ಮಹಿಳೆಯರ ಪರವಾಗಿ ಖಂಡಿತಾ ಇಲ್ಲ. ಹಾಗಾಗಿ ಪಂಗಡಗಳ ಒಳಗೇ ವ್ಯಕ್ತಿ ವ್ಯಕ್ತಿಗಳ ಮಧ್ಯೆ ಮೂಡಬೇಕಾದ ಸಮಾನತೆ, ಲಿಂಗತ್ವ ಸಮನ್ಯಾಯ ಮೂಡಿಸುವಲ್ಲಿ ಸರ್ಕಾರಗಳ ಪಾತ್ರಗಳ ಬಗ್ಗೆಯೂ ಅರ್ಥಮಾಡಿಕೊಳ್ಳಬೇಕು.

ಎಚ್ಚರದ ಅಗತ್ಯವೂ ಇದೆ

ಸಾಮಾನ್ಯವಾಗಿ ಈ ರೀತಿಯ ಚರ್ಚೆಗಳು ಎದ್ದಾಗೆಲ್ಲ ಕೆಲವೊಮ್ಮೆ ಸೀಮಿತ ರಾಜಕೀಯ ಲಾಭದ ದೃಷ್ಟಿಯಿಂದ ಕೆಲವು ರಾಜಕೀಯ ಪಕ್ಷಗಳು ಮತ್ತು ಅಲ್ಪಸಂಖ್ಯಾತ ಅದರಲ್ಲಿಯೂ ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಯೇ ಇರಿಸಿಕೊಂಡು ಆಗಾಗ ಏಕರೂಪ ನಾಗರೀಕ ಸಂಹಿತೆಯ ಚರ್ಚೆಯನ್ನು ಲಂಬಿಸುತ್ತವೆ. ಮಹಿಳೆಯರನ್ನೂ ಮತ್ತು ಅವರ ವಿಷಯಗಳನ್ನು ಕೂಡ ಧರ್ಮದ ನೆಲೆಯಲ್ಲಿ ವಿಭಜಿಸುವ ಶಕ್ತಿಗಳ ವಿರುದ್ಧ ಎಚ್ಚರದ ಅಗತ್ಯವೂ ಇದೆ. ಯಾಕೆಂದರೆ ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು ಇದನ್ನು ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಮುಸ್ಲಿಮರ ವಿರುದ್ಧ ಬಳಸಿಕೊಳ್ಳುವ ರಾಜಕೀಯ ಶಕ್ತಿಗಳು ಬಹಳ ಸುಲಭವಾಗಿ ತಮ್ಮ ಕಾರ್ಯತಂತ್ರವನ್ನು ಜಾರಿಗೆ ತಂದುಬಿಡುತ್ತಾರೆ.

ಈ ಕಾರಣದಿಂದಲೇ ಮಹಿಳಾ ಹಕ್ಕುಗಳು ಸಮಾನ ಕಾನೂನುಗಳ ಪ್ರಶ್ನೆ ಬಂದಾಗೆಲ್ಲ ದೇಶದ ಸಂವಿಧಾನದ ರಚನೆಯಾಗುವಾಗ ಕಾನ್ಸ್ಟೀಟ್ಯುಯೆಂಟ್ ಅಸೆಂಬ್ಲಿ ಮತ್ತು ಸಂಸತ್ತಿನಲ್ಲಿ ಹಿಂದೂ ಮಹಿಳೆಯರ ಆಸ್ತಿ ಹಕ್ಕು, ದತ್ತಕದ ಅಧಿಕಾರ, ವಿಚ್ಛೇದನ, ಬಾಲ್ಯವಿವಾಹ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಹಿಂದೂ ಮಹಾಸಭಾ ಮತ್ತು ಅಂದಿನ ಜನಸಂಘ ನಡೆದುಕೊಂಡ ಮಹಿಳಾ ವಿರೋಧಿ ನಡೆಯನ್ನು ಪ್ರಸ್ತಾಪಿಸದಿರಲು ಸಾಧ್ಯವೇ ಇಲ್ಲ. ಈಗ ಇಂಥಹ ಚರ್ಚೆ ಬಂದಾಗೆಲ್ಲ ಈ ಸಿದ್ಧಾಂತದ ಪ್ರತಿಪಾದಕರೇ ಏಕರೂಪ ನಾಗರಿಕ ಸಂಹಿತೆಯ ಬಾವುಟವನ್ನು ಎತ್ತಿ ಹಿಡಿಯಲು ಹವಣಿಸುತ್ತಾರೆ. ಅವರ ಆ ವಿರೋಧದ ಕಾರಣದಿಂದಾಗಿಯೇ ಮಹಿಳೆಯರ ಸ್ವಾಯತ್ತ ಅಧಿಕಾರವಾಗಿರಬೇಕಾದ ಹಲವು ಸಂಗತಿಗಳು ಅಗುಳಗುಳಾಗಿ ಪಾಲಿಗೆ ಬಂದವೆಂದರೆ ತಪ್ಪಾಗಲಾರದು.

ಆಸ್ತಿಹಕ್ಕಿನ ಅಧಿಕಾರದ ಕಾನೂನು ಬಂದಿದ್ದು ಕೇವಲ ಒಂದು ದಶಕದ ಹಿಂದೆ. ಮತ್ತು ಈಗಲೂ ಸುಪ್ರಿಂ ಕೋರ್ಟ ಅದನ್ನೂ ಅಷ್ಟಿಷ್ಟು ಮೊಟಕುಗೊಳಿಸುತ್ತಿದೆ. ಹಿಂದೂ ಉತ್ತರಾಧಿಕಾರದ ಹಕ್ಕಿನ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯಾದವನು 2005(ಕಾನೂನಿಗೆ ಬಂದ ತಿದ್ದುಪಡಿಯ ವರ್ಷವದು)ಕ್ಕೂ ಮುನ್ನ ನಿಧನ ಹೊಂದಿದ್ದರೆ ಆಗ ಮಗಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿರುವುದಿಲ್ಲ ಎಂದು ಈಗ ಒಂದು ತೀರ್ಪು ಬಂದಿದೆ. ಒಂದು ಕಡೆ ಏಕರೂಪ ನಾಗರಿಕ ಸಂಹಿತೆಯನ್ನು ಪ್ರಸ್ತಾಪಿಸುವ ಉಚ್ಛ ನ್ಯಾಯಾಲಯವೇ ಒಂದೇ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಗಂಡುಗಳ ಮಧ್ಯೆ ಈ ರೀತಿಯ ಬೇಧವೆಣಿಸುತ್ತದೆ.

ಇದರಿಂದಲೇ ಅರ್ಥಮಾಡಿಕೊಳ್ಳಬಹುದು ಭಾರತದಂಥಹ ದೇಶಗಳಲ್ಲಿ ಸಮಾನತೆಯ ಭಾವವನ್ನು ಸಮುದಾಯದ ಒಳಗೆ ಮೂಡಿಸುವ ಪ್ರಯತ್ನಕ್ಕೆ ಹೆಚ್ಚು ಮಹತ್ವ ಕೊಡಬೇಕಾದ ಅಗತ್ಯವಿದೆ.

ಹಾಗೆ ಹೇಳುವಾಗಲೇ ಈಗಾಗಲೇ ಇರುವ ಕಾನೂನುಗಳ ಸಮರ್ಪಕ ಜಾರಿಯಲ್ಲಿ ವಿವಿಧ ಸರ್ಕಾರಗಳು ಎಡವಿರುವ ಹಲವಾರು ಉದಾಹರಣೆಗಳಿವೆ. ಅದರಿಂದಾಗಿಯೇ ತಪ್ಪಿತಸ್ಥರು ಬಚಾವಾಗುವ ಅವಕಾಶಗಳು ಸೃಷ್ಟಿಯಾಗಿವೆ.

ಎಲ್ಲರಿಗೂ ಅನ್ವಯವಾಗುವ ಕಾನೂನುಗಳ ಸಮರ್ಪಕ ಜಾರಿಯ ಪ್ರಶ್ನೆ

ವರದಕ್ಷಿಣೆ, ಅತ್ಯಾಚಾರ ಮುಂತಾದ ಪ್ರಕರಣಗಳಲ್ಲಿ ಈಗಿರುವ ಸಾಮಾನ್ಯ ಕಾನೂನುಗಳು ಎಲ್ಲರಿಗೂ ಅನ್ವಯಿಸುತ್ತವೆ. ಆದರೆ ಶಿಕ್ಷೆಯ ವರೆಗೆ ತಲುಪುವ ಪ್ರಕರಣಗಳ ಪರಿಮಾಣ ಕಾನೂನು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಬಹಳ ಪರಿಶ್ರಮದಿಂದ ಜಾರಿಗೆ ಬಂದ ಕೌಟುಂಬಿಕ ದೌರ್ಜನ್ಯ ತಡೆ ಕಾನೂನು, ದುಡಿಯುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾನೂನು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಸರಿಯಾಗಿ ಮಹಿಳೆಯರಿಗೆ ಮಾಹಿತಿ ದೊರೆಯುವ ಮೊದಲೇ ಕೌಟುಂಬಿಕ ದೌರ್ಜನ್ಯ ತಡೆ ಕಾನೂನು, ವರದಕ್ಷಿಣೆ ನಿಷೇಧ ಕಾನೂನು ದುರ್ಬಳಕೆಯಾಗುತ್ತಿದೆ ಎಂಬ ಕಾರಣವೊಡ್ಡಿ ತಿದ್ದುಪಡಿಯೂ ಇಲ್ಲದೇ ಇವುಗಳನ್ನು ಸಡಿಲಗೊಳಿಸಲಾಗಿದೆ.

ಈ ಎಲ್ಲ ಕಾನೂನುಗಳೂ ದೇಶದ ಎಲ್ಲ ನಾಗರಿಕರಿಗೂ ಸಮಾನವಾಗಿಯೇ ಅನ್ವಯವಾಗುವಂಥಹವು. ಮರ್ಯಾದೆಯ ಹೆಸರಿನ ಹತ್ಯೆಯ ವಿರುದ್ಧ ಕಾನೂನು ತರಲು ಸರ್ಕಾರವಿನ್ನೂ ಮುಂದಾಗಿಲ್ಲ. ದೇಶದ ಹಲವು ಕೋರ್ಟುಗಳ ಮುಂದೆ ಈ ಹೆಸರಿನ ಬರ್ಭರ ಹತ್ಯೆಯ ಪ್ರಕರಣಗಳು ದಾಖಲಾಗುತ್ತಿವೆ. ಕೆಲವು ಪ್ರಕರಣಗಳಲ್ಲಿ ತೊಂದರೆಗೊಳಗಾದ ಯುವತಿಯರ ಬಗ್ಗೆ ಲವಲೇಶವೂ ಆಲೋಚಿಸದೇ ಸಹಜ ಪುರುಷ ಪ್ರಾಧಾನ್ಯತೆಯ ಧೋರಣೆಯ ತೀರ್ಪುಗಳನ್ನು ವಿವಿಧ ಹಂತಗಳಲ್ಲಿ ಘೋಷಿಸಲಾಗಿದೆ. ಇಂಥಹ ಪ್ರಕರಣಗಳ ಸಂದರ್ಭದಲ್ಲಿ ಇದರ ವಿರುದ್ಧ ಕಾನೂನೊಂದು ತರಬೇಕೆಂಬ ಒತ್ತಾಯವನ್ನು, ಸಲಹೆಯನ್ನೋ ಸರ್ಕಾರಕ್ಕೆ ಮಾಡುವ ಸಾಧ್ಯತೆಗಳನ್ನೂ ಯೋಚಿಸಬಹುದಿತ್ತಾದರೂ ಅಂಥಹುದು ಇದುವರೆಗೂ ಆಗಿಲ್ಲ.

ಸಾಮಾನ್ಯವಾಗಿ ಏಕರೂಪ ನಾಗರಿಕ ಸಂಹಿತೆಯ ವಿಷಯ ಬಂದಾಗೆಲ್ಲ ಪ್ರಸ್ತಾಪವಾಗುವುದು ಮುಸ್ಲಿಂ ಸಮುದಾಯದಲ್ಲಿರುವ ಟ್ರಿಪಲ್ ತಲಾಕ್ ಬಗ್ಗೆ. ಆದರೆ ಕಳೆದೊಂದು ದಶಕಗಳಲ್ಲಿ ಈ ಬಗ್ಗೆ ಬಹಳ ಚರ್ಚೆಯಾಗಿದೆ. ಜನವಾದಿ ಮಹಿಳಾ ಸಂಘಟನೆ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದಂಥಹ ಸಂಘಟನೆಗಳು ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆಗೆ ಒತ್ತಾಯಿಸಿವೆ. ಲಕ್ಷಾಂತರ ಸಹಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಇದುವರೆಗೂ ಉಭ ಶುಭ ಎಂದಿಲ್ಲ.

ಕ್ರಿಶ್ಚಿಯನ್ ಕಾನೂನಿನಲ್ಲಿ ಬದಲಾವಣೆಯ ಬಗ್ಗೆ ಕೂಡ ಆ ಸಮುದಾಯದ ಜನರು ಕ್ಲರ್ಜಿಗಳೂ ಸೇರಿ ಸಿದ್ಧಪಡಿಸಿದ ಅಹವಾಲುಗಳೂ ಸರ್ಕಾರದ ಮುಂದೆ ತಣ್ಣಗೆ ಕುಳಿತಿವೆ.

ಇತ್ತೀಚಿನ ಬೆಳವಣಿಗೆಗಳಾದ ವರ್ಮಾ ಆಯೋಗದ ಶಿಫಾರಸುಗಳ ಸಂದರ್ಭದಲ್ಲಿ ಕೂಡ ಹಲವಾರು ರಾಜ್ಯಗಳು ಇನ್ನೂ ಅದನ್ನು ಅಳವಡಿಸಿಕೊಳ್ಳುವ ಗೋಜಿಗೇ ಹೋಗಿಲ್ಲ. ಅಲ್ಲದೇ ವಿವಾಹ ಸಂಬಂಧದಲ್ಲಿ ನಡೆಯುವ ಬಲಾತ್ಕಾರದ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರವೆಂದು ಪರಿಗಣಿಸಬೇಕೆನ್ನುವ ಆಯೋಗದ ಶಿಫಾರಸುಗಳನ್ನು ದೇಶದ ಪರಿಸ್ಥಿತಿಯ ನೆವವೊಡ್ಡಿ ಸಂಸತ್ತಿನಲ್ಲಿ ತಿರಸ್ಕರಿಸಲಾಗಿದೆ. ಈ ರೀತಿಯ ಶಿಫಾರಸುಗಳು ಎಲ್ಲ ವೈಯಕ್ತಿಕ ಕಾನೂನುಗಳನ್ನು ಮೀರಿ ಜಾರಿಗೆ ಬರಬಹುದಾದ ಅತ್ಯಂತ ಜಾತ್ಯಾತೀತ ಕಾನೂನುಗಳು. ಮತ್ತು ಅತ್ಯಂತ ಅಗತ್ಯವಾದ ಬದಲಾವಣೆಗಳು ಕೂಡ.

ಈಗಿನ ರಾಜಕೀಯ ಸಂದರ್ಭದಲ್ಲಿ

ಇಲ್ಲಿ ಒಂದು ವಾದ ಏಳಬಹುದಾಗಿದೆ. ಅದೆಂದರೆ ಇಷ್ಟೆಲ್ಲ ಪ್ರಯತ್ನಗಳ ನಂತರವೂ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲವೆಂದಾದರೆ ಏಕರೂಪ ಸಂಹಿತೆ ತಂದೇ ಸಮಾನತೆಯ ಸಾಧನೆಗೆ ಪ್ರಯತ್ನಿಸ ಬಹುದಲ್ಲ ಎಂದು. ಒಂದು ನೆಲೆಯಲ್ಲಿ ದಶಕಗಳಲ್ಲಿ ನಡೆದ ಹಲವು ಹೋರಾಟಗಳು, ಪ್ರಚಾರಗಳು ಒಂದಿಷ್ಟು ಬದಲಾವಣೆಯ ಗಾಳಿಯನ್ನು ಬೀಸಿದೆ ಎಂದಾದರೂ ಭಾರತದ ಈಗಿನ ರಾಜಕೀಯ ಸಂದರ್ಭ ಈ ಪ್ರಯೋಗಕ್ಕೆ ತಕ್ಕುದಾಗಿಲ್ಲ.

ಅಲ್ಲದೇ ಮಹಿಳಾ ಸಮಾನತೆಯ ಕಾರ್ಯ ಕೇವಲ ಏಕರೂಪ ನಾಗರಿಕ ಸಂಹಿತೆಯ ಮೂಲಕ ಮಾತ್ರ ಸಾಧಿಸುವುದು ಸಾಧ್ಯವಿಲ್ಲ. ಹಿಂದೂ ಅಥವಾ ಮುಸ್ಲಿಂ ಅಥವಾ ಇನ್ನಾವುದೇ ಧರ್ಮದೊಳಗಿನ ಮೂಲಭೂತವಾದಿಗಳ ಧೋರಣೆಗಳು ಅಷ್ಟು ಸುಲಭವಾಗಿ ಬದಲಾಗದು. ಇತರ ವಿಷಯಗಳಲ್ಲಿ ಅವರು ಒಬ್ಬರನ್ನೊಬ್ಬರು ವಿರೋಧಿಸಿಕೊಂಡರೂ ಮಹಿಳಾ ವಿರೋಧೀ ಅಂಶಗಳಲ್ಲಿ ಸಾಮ್ಯತೆಯನ್ನು ಹೊಂದಿರುತ್ತಾರೆ. ಹಾಗಾಗಿಯೇ ಪ್ರಜಾಪ್ರಭುತ್ವ ನೆಲೆಯಲ್ಲಿ ಹಂತ ಹಂತವಾಗಿ ಎಲ್ಲ ಮಹಿಳೆಯರಿಗೂ ಸಿಗಬೇಕಾದ ಸಮಾನ ಕಾನೂನಿನ ಅವಕಾಶಗಳನ್ನು ಸೃಷ್ಟಿ ಮಾಡಬೇಕು. ಮತ್ತು ಎಲ್ಲ ವೈಯಕ್ತಿಕ ಕಾನೂನುಗಳಿಗೆ ತಿದ್ದುಪಡಿ ಬರಬೇಕು. ಆ ಮೂಲಕವಷ್ಟೇ ಲಿಂಗತ್ವ ಸಮನ್ಯಾಯ ಮತ್ತು ಸಮಾನ ಕಾನೂನು ಬೇಡಿಕೆಗಳಿಗೆ ಅರ್ಥಬರಲು ಸಾಧ್ಯ. ಹೀಗೆ ಎಲ್ಲ ಸಮುದಾಯದ ಮಹಿಳೆಯರಲ್ಲಿ ಮೂಡುವ ಐಕ್ಯತೆ ಒಂದು ಏಕರೂಪದ ನಾಗರಿಕ ಸಂಹಿತೆಗೆ ವೇದಿಕೆಯನ್ನು ಸಜ್ಜುಗೊಳಿಸಬಹುದು. ಇಲ್ಲವಾದಲ್ಲಿ ಕೇಂದ್ರದಲ್ಲಿ ಅಧಿಕಾರವೂ ಇರುವುದರಿಂದ ಈ ಪ್ರಸ್ತಾಪದ ಎಳೆ ಹಿಡಿದು ಬಹಳ ಸುಲಭವಾಗಿ ಕೋಮುವಾದೀ ಶಕ್ತಿಗಳು ಇದನ್ನು ದುರ್ಬಳಿಸಿಕೊಳ್ಳುವ ಎಲ್ಲ ಸಾದ್ಯತೆಗಳೂ ಇವೆ. ಲಿಂಗತ್ವ ಸಮನ್ಯಾಯಕ್ಕೆ ಆಸ್ಪದ ನೀಡುವ ಸೆಕ್ಯುಲರ್ ಕಾನೂನುಗಳ ರಚನೆ ಮತ್ತು ಸಮರ್ಪಕ ಜಾರಿಗೆ ನಮ್ಮ ಪ್ರಯತ್ನವಾಗಬೇಕು.

Donate Janashakthi Media

Leave a Reply

Your email address will not be published. Required fields are marked *