ಜಯ
ಕಳೆದ ವಾರ ಅಮೇರಿಕಾದ ಅಂತರಿಕ್ಷ ಸಂಶೋಧನಾ ಸಂಸ್ಥೆಯಾದ ನಾಸಾ ಬಿತ್ತರಿಸಿದ ಒಂದು ಸುದ್ದಿ ಬಾಂಬ್ ಸ್ಫೋಟಿಸಿದಷ್ಟೇ ಆತಂಕಕಾರಿ ಯಾಗಿತ್ತು. ಅದೇನೆಂದರೆ, ಸೂರ್ಯನಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಉಂಟಾದ ಸೌರ ಮಾರುತಗಳು ಭೂಮಿಯ ಕಡೆ ಗುರಿಯಿಟ್ಟು ಧಾವಿಸುತ್ತಿದ್ದು, ಇದರಿಂದ ಭೂಮಿಯ ವಾತಾವರಣದ ಮೇಲೆ ಪರಿಣಾಮ ಬೀರಬಹುದು ಎಂಬುದು. ಇಂತಹ ಸೌರ ಮಾರುತಗಳು ಭೂಮಿಯನ್ನು ಅಪ್ಪಳಿಸಿದರೂ, ಭೂಮಿಯ ಸುತ್ತ ಇರುವ ಅಯಸ್ಕಾಂತೀಯ ಅಲೆಗಳು ಸೌರ ಮಾರುತಗಳನ್ನು ತಡೆದು ಭೂಮಿಗೆ ರಕ್ಷಣೆ ನೀಡುತ್ತವೆ. ಆದರೆ, ಭೂಮಿಯನ್ನು ಸುತ್ತುತ್ತಿರುವ ಕೃತಕ ಉಪಗ್ರಹಗಳಿಗೆ ಇದು ತೊಂದರೆಯುಂಟು ಮಾಡಿ ಸಂವಹನ (ಟೆಲಿ ಕಮ್ಯುನಿಕೇಷನ್) ವ್ಯವಸ್ಥೆಯನ್ನು ಹಾಳುಗೆಡುತ್ತವೆ ಎಂದು ಸುದ್ದಿಯಲ್ಲಿ ತಿಳಿಸಲಾಗಿತ್ತು. ನಂತರದಲ್ಲಿ, ಸೌರ ಮಾರುತಗಳು ಆಗಸದ ಕೆಲವೆಡೆ ಬಣ್ಣ ಬಣ್ಣದ ಬೆಳಕನ್ನು ತೋರಿಸಿದವಾದರೂ ನಾಸಾ ಸುದ್ದಿ ತಿಳಿಸಿದಂತೆ ಯಾವುದೇ ಸಂವಹನ ವ್ಯವಸ್ಥೆಗಳು ಹಾಳಾದ ವರದಿಯಾಗಲಿಲ್ಲ.
ಅಮೇರಿಕಾದ ಸೋಲಾರ್ ಡೈನಮಿಕ್ ವೀಕ್ಷಣಾಲಯ ಮತ್ತು ಇತರೆ ಉಪಗ್ರಹಗಳಲ್ಲಿ ಸೂರ್ಯ ಒಂದು ಬೆಂಕಿಯಂತೆ ಹತ್ತಿಕೊಂಡು ಉರಿಯುತ್ತಿರುವ ಬೃಹತ್ ಗಾತ್ರದ ಮುದ್ದೆಯಂತೆ ಗೋಚರವಾಗಿದ್ದು ಅದರಿಂದ ಮಿಂಚಿನ ವೇಗದಲ್ಲಿ ಎರಗಿದ ಬೆಂಕಿಯ ಪ್ರವಾಹ ಬಣ್ಣಬಣ್ಣದ ಚಿತ್ತಾರಗಳನ್ನು ಆಗಸದಲ್ಲಿ ಮೂಡಿಸಿತ್ತು. ನಮ್ಮ ಸೌರವ್ಯೂಹದಲ್ಲಿ ಕೇಂದ್ರ ಸ್ಥಾನದಲ್ಲಿರುವ ಸೂರ್ಯನು ಅನಿಲಗಳಿಂದ ಸದಾ ಸ್ಫೋಟಿಸಿಕೊಂಡು ಹತ್ತಿಕೊಂಡು ಉರಿಯುತ್ತಿರುವ ಒಂದು ನಕ್ಷತ್ರ. ಸೂರ್ಯನ ಒಟ್ಟು ವ್ಯಾಸ ಸುಮಾರು 8,65,000 ಮೈಲುಗಳು. ಅಂದರೆ ಸೂರ್ಯನ ವ್ಯಾಸ ನಮ್ಮ ಭೂಮಿಗಿಂತ 109 ಪಟ್ಟು ದೊಡ್ಡದು. ಆದರೆ ಸೂರ್ಯನ ತೂಕ ಮಾತ್ರ ಭೂಮಿಗಿಂತ 3,30,000 ಪಟ್ಟು ಹೆಚ್ಚು. ಸೂರ್ಯನಲ್ಲಿರುವ ಅನಿಲಗಳಲ್ಲಿ ಜಲಜನಕ ಹೆಚ್ಚಿನ ಪ್ರಮಾಣದಲ್ಲಿದ್ದು, ಮಿಕ್ಕಿದ್ದೆಲ್ಲವೂ ಹೀಲಿಯಂ ಅನಿಲ. ಇನ್ನು ಶೇ. 2 ಕ್ಕಿಂತಲೂ ಕಮ್ಮಿ ಪ್ರಮಾಣದಲ್ಲಿ ಆಮ್ಲಜನಕ, ಇಂಗಾಲ, ನಿಯಾನ್, ಕಬ್ಬಿಣ, ಇತ್ಯಾದಿಗಳಿವೆ. ನಮಗೆ ಸೂರ್ಯನಿಂದ ದೊರೆಯುವ ಬೆಳಕು ಅಲ್ಲಿ ಜರುಗುವ ಪರಮಾಣು ಸಂಯುಕ್ತ (ನ್ಯೂಕ್ಲಿಯಾರ್ ಪ್ಯೂಷನ್) ಕ್ರಿಯೆಯಿಂದ ಉಂಟಾಗುವುದು. ಇದು ಇಡೀ ಸೌರಪರಿವಾರದಲ್ಲೆಲ್ಲಾ ಜ್ವಾಜಲ್ಯಮಾನದಿಂದ ಬೆಳಗುವುದು. ಇದರೊಂದಿಗೆ ಸೌರ ಮಾರುತಗಳು ಹರಡುವುವು.
ಭೂಮಿಯ ಸುತ್ತಲೂ ಅದರ ರಕ್ಷಣೆಗಾಗಿ ಹಲವು ಪದರುಗಳಿವೆ: ವಾತಾವರಣದಲ್ಲಿ ಎಕ್ಸೋಸ್ಪಿಯರ್, ಥರ್ಮಾಸ್ಪಿಯರ್, ಮೀಸೋಸ್ಪಿಯರ್, ಸ್ಟ್ರಾಟೋಸ್ಪಿಯರ್, ಟ್ರೋಪೋಸ್ಪಿಯರ್, ಇತ್ಯಾದಿ. ಇವುಗಳ ಜೊತೆಗಿರುವ ಅಯಸ್ಕಾಂತೀಯ ಪದರವು ಸೂರ್ಯನಿಂದ ನಿರಂತರವಾಗಿ ಎರಗಿ ಬರುವ ಸೌರ ಮಾರುತಗಳನ್ನು ತಡೆಗಟ್ಟಿ ಭೂಮಿಗೆ ರಕ್ಷಣೆ ನೀಡುವುದು.0