2020-21 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್ ಲಾಗ್ ಹುದ್ದೆಗಳ ಬರ್ತಿಗೆ ತಡೆಯನ್ನು ಒಡ್ಡಲಾಗಿದೆ. ಆರ್ಥಿಕ ಸ್ಥಿತಿ ಹೆಸರಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ತಡೆದದ್ದು ಎಷ್ಟು ಸರಿ? ಬ್ಯಾಕ್ ಲಾಗ್ ಹುದ್ದೆಗಳೆಂದರೆ ಯಾರಿಗೂ ಬೇಡವಾದ ಕೂಸೆ ಎಂಬಂತಾಗಿದೆ.
ಕರ್ನಾಟಕ ಸರ್ಕಾರದ ಸಚಿವಾಲಯವು ಈ ಹಿಂದೆ 6.7.2020ರಂದು ಒಂದು ಸುತ್ತೋಲೆಯನ್ನು ಹೊರಡಿಸಿತ್ತು, ಆ ಸುತ್ತೋಲೆಯಲ್ಲಿ ‘ರಾಜ್ಯದಲ್ಲಿ ಕೋವಿಡ್ 19ನಿಂದ ಉಂಟಾದ ಪರಿಸ್ಥಿತಿಯನ್ನು ನಿಬಾಯಿಸಬೇಕು ಮತ್ತು ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತರಬೇಕಿದೆ. ಹಾಗಾಗಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್ ಲಾಗ್ ಹುದ್ದೆಗಳೂ ಸೇರಿದಂತೆ ಎಲ್ಲಾ ನೇಮಕಾತಿಗಳನ್ನು ಬರ್ತಿ ಮಾಡುವುದನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ’ ಎಂದು ಹೇಳಲಾಗಿತ್ತು.
ಈಗ ಅದನ್ನು ಪರಿಶೀಲಿಸಿ ದಿನಾಂಕ 12.1.2021ರಂದು ಮತ್ತೊಂದು ಸುತ್ತೋಲೆ ಹೊರಡಿಸಿದೆ. ಇದರಲ್ಲಿ ‘ಅನುಕಂಪದ ಆದಾರದ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ಹಿಂದಿನ ಸುತ್ತೋಲೆಯಲ್ಲಿ ವಿನಾಯಿತಿ ನೀಡಲಾಗಿದೆ ಮತ್ತು ಅನುಕಂಪದ ಆದಾರದ ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ಕೊಡಲಾಗಿದೆ’ ಎಂದು ಹೇಳಲಾಗಿದೆ. ಇದು ಒಂದು ಕಡೆ ಸ್ವಾಗತಿಸಬಹುದಾದ ತೀರ್ಮಾನ, ಉದ್ಯೋಗ ಪ್ರಕ್ರೀಯೆ ನಡೆಯದೆ ಇದ್ದಾಗ ಇಂತಹದ್ದೊಂದು ಪ್ರಕ್ರೀಯೆ ನಡೆಯುತ್ತಿರುವುದು ಒಪ್ಪಿಕೊಳ್ಳಬಹುದಾದ ವಿಚಾರ ಆದರೆ ಇದೇ ಮಾನದಂಡವನ್ನು ಬ್ಯಾಕ್ ಲಾಗ್ ಹುದ್ದೆಗಳಿಗೆ ಯಾಕೆ ಅನ್ವಯಿಸಲಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ರಾಜ್ಯ ಸರಕಾರ ನಿರ್ಲಕ್ಷ್ಯ ತೋರಿಸಲಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅನುಕಂಪದ ಆದಾರದ ಹುದ್ದೆಗಳಿಗೆ ನೇಮಕ ಮಾಡಲು ಹಣಕಾಸು ಅನುದಾನ ವಿದ್ದರೆ, ಬ್ಯಾಕ್ ಹುದ್ದೆಗಳಿಗೆ ಯಾಕಿಲ್ಲ? ತಳ ಸಮುದಾಯಗಳ ವಿದ್ಯಾವಂತ ಹುಡುಗರು ಹೀಗೆಯೇ ನಿರುದ್ಯೋಗಿಗಳಾಗಿ ನೇಪಥ್ಯದಲ್ಲಿರಲಿ ಎಂದು ಸರಕಾರ ಬಯಸುತ್ತಿದೆಯೇ? ತಳ ಸಮುದಾಯದ ಬಗ್ಗೆ ಸರಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಇದನ್ನು ಓದಿ : ದಲಿತರ ಅಭಿವೃದ್ಧಿ ಹಣ ಬಳಕೆಗೆ ಸರಕಾರದ ನಿರ್ಲಕ್ಷ್ಯ
ಕಲ್ಯಾಣ ಕರ್ನಾಟಕ (ಹಿಂದಿನ ಹೈದರಾಬಾದ್ ಕರ್ನಾಟಕ) ಕ್ಕೆ 371 ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನ ಕೊಡಲಾಗಿದೆ. ಆದರೆ ಸರಕಾರ ಅದರ ಅನುಸಾರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಉತ್ಸಾಹ ತೋರುತ್ತಿಲ್ಲ. ಇದೇ ಯಡಿಯೂರಪ್ಪ ಸರಕಾರ ಗ್ರುಪ್ ಸಿ ಮತ್ತು ಗ್ರುಪ್ ಡಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವುದಾಗಿ ಹೇಳಿಕೊಂಡಿದೆ. ಅಂದರೆ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದೆ ಈಗ ಕನ್ನಡಿಗರಿಗೆ ಮೀಸಲಾತಿ ಕೊಡುತ್ತೇವೆ ಎನ್ನುವ ಸರಕಾರದ ಈ ಕಪಟ ನೀತಿಯು ತಳ ಸಮುದಾಯಗಳಿಗೆ ಮಾಡಿದ ನೇರವಾದ ವಂಚನೆಯಾಗಿದೆ ಎಂದು ಎಸ್.ಎಫ್.ಐ ಮುಖಂಡ ಶಿವಕುಮಾರ ಮ್ಯಾಗಳಮನಿ ಆರೋಪಿಸಿದ್ದಾರೆ.
ದಲಿತರ ಅಭಿವೃದ್ಧಿ ಹಣ ಬಳಕೆಗೆ ಸರಕಾರದ ನಿರ್ಲಕ್ಷ್ಯ?
ಸಂವಿಧಾನದ ಪರಿಚ್ಚೇದ 16(4) ರ ಅನುಸಾರ ‘ಸೂಕ್ತ ಪ್ರಾತಿವಿದ್ಯವಿಲ್ಲದ ಎಲ್ಲಾ ಹಿಂದುಳಿದ ವರ್ಗಗಳ ನೇಮಕಾತಿ ಮಾಡಲು ಸರಕಾರಕ್ಕೆ ಸಂಪೂರ್ಣ ಅಧಿಕಾರವಿದೆ ಮತ್ತು ಆ ಹುದ್ದೆಗಳನ್ನು ಭರ್ತಿ ಮಾಡಬೇಕು’. ಆದರೆ ರಾಜ್ಯ ಸರಕಾರವು ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದೆ ಇರುವಂತದ್ದು ಸಂವಿದಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತೆ ಎಂಬ ಅರಿವು ಸರಕಾರಕ್ಕೆ ಇರಬೇಕಿತ್ತು.
ಇನ್ನೊಂದು ಆಶ್ವರ್ಯಕರ ಸಂಗತಿ ಎಂದರೆ ಅಕ್ಟೋಬರ್ 20ರಂದು ಯುಜಿಸಿಯು ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ಎಲ್ಲಾ ಬಗೆಯ ಬೋಧಕ ಮತ್ತು ಬೋಧಕೇತರ ಬ್ಯಾಕ್ ಲಾಗ್ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕೆಂದು ಆದೇಶಿಸಿದೆ.
ಒಂದು ಅಂದಾಜಿನ ಪ್ರಕಾರ ಕೇಂದ್ರ ವಿ.ವಿಗಳಲ್ಲಿ 1084 ಪ. ಜಾತಿಗೆ ಮೀಸಲಿರಿಸಿದ ಹುದ್ದೆಗಳು ಖಾಲಿ ಇವೆ. 604 ಪ. ಪಂಗಡಕ್ಕೆ ಮಿಸಲಿರಿಸಿದ ಹುದ್ದೆಗಳು ಖಾಲಿ ಇವೆ. 1684 ಹಿಂದುಳಿದ ವರ್ಗಗಳ ಬೋಧಕ ಹುದ್ದೆಗಳು ಖಾಲಿ ಇದೆ. ರಾಜ್ಯ ವಿವಿಗಳಲ್ಲಿ ಶೇ. 28% ಪ್ರಮಾಣದ ಬ್ಯಾಕ್ ಲಾಗ್ ಬೋಧಕ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿ ಇನ್ನೂ ಕೋಡಾ ನಡೆಯುತ್ತಿಲ್ಲ. ಯಾಕೆ ಭರ್ತಿ ಮಾಡಿಕೊಳ್ಳುತ್ತಿಲ್ಲ ಎಂದರೆ ತಳ ಸಮುದಾಯಗಳ ಕುರಿತಾದ ಅಸಡ್ಡೆ ಮತ್ತು ಅವರ ಸಬಲೀಕರಣ ಸರಕಾರಕ್ಕೆ ಬೇಕಾಗಿಲ್ಲ ಎಂದು ಚಿಂತಕ ಶ್ರೀಪಾದ್ ಭಟ್ ಆರೋಪಿಸಿದ್ದಾರೆ.
ಮುಖ್ಯವಾಗಿ ಗಮನಿಸಬೇಕಾದ ಮತ್ತೊಂದು ಸಂಗತಿ ಏನು ಅಂದರೆ, ಬಹುತೇಕ ವಿಶ್ವ ವಿದ್ಯಾಲಯಗಳು ತಮ್ಮ ಅಂತರ್ಜಾಲ ತಾಣಗಳಲ್ಲಿ ಮೀಸಲಾತಿ ರೋಸ್ಟರ್ ಕುರಿತಾದ ಸಂಪೂರ್ಣ ಮಾಹಿತಿಯನ್ನು, ಬ್ಯಾಕ್ ಲಾಗ್ ಹುದ್ದೆಗಳ ಮಾಹಿತಿಯನ್ನು ಪ್ರಕಟಿಸುತ್ತಿಲ್ಲ. ಇನ್ನು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಸಾವಿರಾರು ಬ್ಯಾಕ್ ಲಾಗ್ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. ತಳ ಸಮುದಾಯದವರನ್ನು ಶಿಕ್ಷಕರನ್ನಾಗಿ, ಉಪನ್ಯಾಸಕರನ್ನಾಗಿ ನೇಮಿಸಿಕೊಳ್ಳಬಾರದು ಎಂದು ಸರಕಾರ ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಬ್ಯಾಕ್ ಲಾಗ್ ಹುದ್ದೆಗಳ ಜಾಗದಲ್ಲಿ ಅತಿಥಿ ಉಪನ್ಯಾಸಕರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೆಲ್ಲ ಗಮನಿಸುತ್ತಿದ್ದರೆ ಈ ಬ್ಯಾಕ್ ಲಾಗ್ ಹುದ್ದೆಗಳು ಎಂಬುದು ಯಾರಿಗೂ ಬೇಡದ ಕೂಸು ಎಂಬಂತೆ ಕಾಣ್ತಾ ಇದೆ. ಸರಕಾರ ಇಂತಹ ನಿರ್ಧಾರದಿಂದ ಹಿಂದೆ ಸರಿಯಬೇಕಿದೆ. ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿ ತಳ ಸಮುದಾಯದ ಉದ್ಯೊಗಾಂಕ್ಷಿಗಳ ಹಕ್ಕನ್ನು ರಕ್ಷಿಸಲು ಮುಂದಾಗಬೇಕಿದೆ.