ಬೊಲಿವಿಯದಲ್ಲಿ ಕಾರ್ಮಿಕ ಮತ್ತು ಜನ ಚಳುವಳಿಗಳ ಸಂಘಟನೆಗಳು ಜುಲೈ 28ರಂದು ಬೊಲಿವಿಯ ಚುನಾವಣೆಯ ಮುಂದೂಡಿಕೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿ ದೇಶವ್ಯಾಪಿ ಪ್ರತಿಭಟನೆಗಳನ್ನು ನಡೆಸಿದವು. ಬೊಲಿವಿಯದ ಕೇಂದ್ರೀಯ ಕಾರ್ಮಿಕ ಸಂಘಟನೆ (ಸಿ.ಒ.ಬಿ) ತಳಮಟ್ಟದ ಚಳುವಳಿಗಳ ರಾಷ್ಟ್ರೀಯ ಕೂಟ ‘ಪ್ಯಾಕ್ಟ್ ಆಫ್ ಯುನಿಟಿ’ಗಳು ಈ ರಾಷ್ಟ್ರೀಯ ಪ್ರತಿಭಟನೆಗೆ ಕರೆ ಕೊಟ್ಟಿದ್ದವು.
ಜುಲೈ 23ರಂದು ಕೊವಿದ್ ಮಹಾಸಾಂಕ್ರಾಮಿಕದ ನೆಪ ಒಡ್ಡಿ ಬೊಲಿವಿಯದ ಸುಪ್ರೀಂ ಚುನಾವಣಾ ಕೋರ್ಟು ಸೆಪ್ಟೆಂಬರ್ 6ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಅಕ್ಟೋಬರ್ 18ಕ್ಕೆ ಮುಂದೂಡಿತ್ತು. ಮರುದಿನವೇ ಸಿ.ಒ.ಬಿ ಮತ್ತು ‘ಪ್ಯಾಕ್ಟ್ ಆಫ್ ಯುನಿಟಿ’ ಗಳು ಚುನಾವಣಾ ಕೋರ್ಟುಗಳ ತರ‍್ಪನ್ನು ತಿರಸ್ಕರಿಸಿ ಜುಲೈ 28ರ ರಾಷ್ಟ್ರೀಯ ಪ್ರತಿಭಟನೆಗೆ ಕರೆ ಕೊಟ್ಟಿದ್ದವು. ರಾಜಧಾನಿ ಲಾ ಪಾಸ್ ಅಲ್ಲದೆ ಇತರ ಹಲವು ಪ್ರಮುಖ ನಗರಗಳಲ್ಲಿ ಸಾವಿರಾರು ರೈತರ, ಗ್ರಾಮೀಣ, ಮಹಿಳಾ ಮತ್ತು ಆದಿವಾಸಿ ಸಂಘಟನೆಗಳ ಸದಸ್ಯರು “ಪ್ರಜಾಪ್ರಭುತ್ವ, ಆರೋಗ್ಯ ಮತ್ತು ಜೀವನಕ್ಕಾಗಿ” ಎಂಬ ಘೋಷಣೆಯೊಂದಿಗೆ ಭಾಗವಹಿಸಿದರು.ಕೊಚಬಾಂಬಾ ಮತ್ತು ಸಾನ್ ಜೂಲಿಯಾನಾದ ಮೂಲನಿವಾಸಿ ಸಮುದಾಯಗಳ ಹಾಗೂ ಕೃಷಿ ಉತ್ಪಾದಕರ ಫೆಡರೇಶನ್ ಗಳು ಸಹ ಚುನಾವಣೆಯ ಮುಂದೂಡಿಕೆಯನ್ನು ತಿರಸ್ಕರಿಸಿವೆ. ಗ್ರಾಮೀಣ ಕಾರ್ಮಿಕರ ರಾಷ್ಟ್ರೀಯ ಫೆಡರೇಶನ್ ಚುನಾವಣೆಯ ಮುಂದೂಡಿಕೆಯನ್ನು ಹಿಂತೆಗೆದುಕೊಳ್ಳದಿದ್ದರೆ ಲಾ ಪಾಸ್ ನ ಎಲ್ಲ 20 ಪ್ರಾಂತ್ಯಗಳಲ್ಲಿ ಇಟ್ಟಿರುವ ರಸ್ತೆ ತಡೆಗಳನ್ನು ಮುಂದುವರಿಸುವುದಾಗಿ ಘೋಷಿಸಿದೆ.
ಚುನಾಯಿತ ಸರಕಾರವನ್ನು ಸಂವಿಧಾನ-ವಿರೋಧಿ ರೀತಿಯಲ್ಲಿ ಕ್ಷಿಪ್ರಕ್ರಾಂತಿಯಲ್ಲಿ ಉರುಳಿಸಿ ಅಧಿಕಾರಕ್ಕೆ ಬಂದ ಈಗಿನ ಅಧ್ಯಕ್ಷ ಜಿನೀನ್ ಅನೇಜ್ ತಮ್ಮ ಪಟ್ಟ ಕಾಯ್ದುಕೊಳ್ಳಲು ನಡೆಸುತ್ತಿರುವ ಪ್ರಯತ್ನದಲ್ಲಿ ಸುಪ್ರೀಂ ಚುನಾವಣಾ ಕೋರ್ಟು ಶಾಮೀಲಾಗಿದೆ ಎಂದು ಈ ಸಂಘಟನೆಗಳು ಆಪಾದಿಸಿವೆ. ಹಿಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿದ್ದ ಮತ್ತು ಮುಂದಿನ ಚುನಾವಣೆಯಲ್ಲೂ ಬಹುಮತ ಪಡೆಯುವ ಸಾಧ್ಯತೆ ಇರುವ “ಸಮಾಜವಾದದತ್ತ ಚಳುವಳಿ”ಯ ನಾಯಕರು ಮತ್ತು ಕಾರ್ಯಕರ್ತರಿಗೆ ಹಿಂಸೆ ಮತ್ತು ಕಿರುಕುಳ ಕೊಡಲಾಗುತ್ತಿರುವುದನ್ನೂ ಈ ಸಂಘಟನೆಗಳು ಖಂಡಿಸಿವೆ.
“ಸಮಾಜವಾದದತ್ತ ಚಳುವಳಿ”(ಎಂ.ಎ.ಎಸ್) ರಾಜಕೀಯ ಪಕ್ಷ, ಅದರ ಪ್ರಸಿದ್ಧ ನಾಯಕ ಹಾಗೂ ಬೊಲಿವಿಯದ ಮಾಜಿ ಅಧ್ಯಕ್ಷ ಇವೊ ಮೊರಾಲೆಸ್ ಮತ್ತು ಈ ಬಾರಿಯ ಅಧ್ಯಕ್ಷೀಯ ಅಭ್ಯರ್ಥಿ ಲೂಯಿಸ್ ರ‍್ಸ್ ಅವರುಗಳು ಕೂಡಾ ಚುನಾವಣಾ ಕೋರ್ಟಿನ ಈ ನಿರ್ಣಯವನ್ನು ಖಂಡಿಸಿ, ಚುನಾವಣಾ ದಿನಾಂಕವನ್ನು ಪಾರ್ಲಿಮೆಂಟಿನ ಮಂಜೂರಿ ಇಲ್ಲದೆ ಬದಲಿಸುವಂತಿಲ್ಲ ಎಂದು ನೆನಪಿಸಿದ್ದಾರೆ. ಇದು ಮೂರು ಕಾನೂನುಗಳ ಮತ್ತು ಸಂವಿಧಾನದ ಉಲ್ಲಂಘನೆ ಎಂದಿದ್ದಾರೆ. ಚುನಾವಣಾ ಕೋರ್ಟಿಗೆ ಕಾನೂನು ಮತ್ತು ಸಂವಿಧಾನದ ವಿಧಿಗಳನ್ನು ಮೀರಿ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ. ಈಗಾಗಲೇ ಎರಡು ಬಾರಿ ಚುನಾವಣೆಯನ್ನು ತಡೆ ಹಿಡಿದಿದ್ದು ಪಾರ್ಲಿಮೆಂಟಿನ ಮಂಜೂರಿ ಇಲ್ಲದೆ ಸೆಪ್ಟೆಂಬರ್ 6ಕ್ಕಿಂತ ಚುನಾವಣೆಯನ್ನು ಮುಂದೂಡುವುದು ಸಾಧ್ಯವಿಲ್ಲ. ಚುನಾಯಿತ ಪಾರ್ಲಿಮೆಂಟನ್ನು ಲೆಕ್ಕಕ್ಕೆ ಇಲ್ಲದಂತೆ ಮಾಡಿ ಕ್ಷಿಪ್ರಕ್ರಾಂತಿಯ ಕೂಸಾದ ತಮ್ಮ ಆಡಳಿತವನ್ನು ಮುಂದುವರೆಸುವ ಹುನ್ನಾರ ಇದೆಂದು ಮೊರಾಲೆಸ್ ಟ್ವೀಟ್ ಮಾಡಿದ್ದಾರೆ. ಬಲಪಂಥೀಯ ಶಕ್ತಿಗಳು ಎಂ.ಎ.ಎಸ್ ಪಕ್ಷವನ್ನು ನಿಷೇಧಿಸಿ, ಪ್ರಭುತ್ವವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವ ಪಿತೂರಿಯಲ್ಲಿ ತೊಡಗಿವೆ. ಕೇಂದ್ರದಲ್ಲಿ ಮಾಡಿದಂತೆ, ಮುನಿಸಿಪಲ್ ಮತ್ತು ಪ್ರಾಂತೀಯ ಹಂತದ ಚುನಾಯಿತ ಸ್ಥಳೀಯ ಸರಕಾರಗಳನ್ನೂ ಕಾನೂನುಬಾಹಿರವಾಗಿ ಉರುಳಿಸಿ ಅಧಿಕಾರ ಕಸಿದುಕೊಳ್ಳುವ ಯೋಜನೆ ಹೂಡಿವೆ, ಎಂದೂ ಮೊರಾಲೆಸ್ ಹೇಳಿದ್ದಾರೆ.
ನವೆಂಬರ್ 2019 ರ ಕ್ಷಿಪ್ರಕ್ರಾಂತಿಯಲ್ಲಿ ಅಧಿಕಾರ ವಹಿಸಿಕೊಂಡ ಜಿನೀನ್ ಸರಕಾರ ಮಾರ್ಚ್ 2020ರಿಂದ ತಮ್ಮ ಸಾಮ್ರಾಜ್ಯಶಾಹಿ-ಪರ ಮತ್ತು ನವ-ಉದಾರವಾದಿ ನೀತಿಗಳನ್ನು ಮುಂದುವರೆಸಲು ಮೂರು ಬಾರಿ ಚುನಾವಣೆಯನ್ನು ಮುಂದೂಡಿದೆ. ಈಗಿನ ಅಧ್ಯಕ್ಷರಾದ ಉಗ್ರ ಬಲಪಂಥೀಯ ಜಿನೀನ್ ಆಗಲಿ ಬಲಪಂಥೀಯ ಕೂಟದ ಅಧ್ಯಕ್ಷೀಯ ಅಭ್ಯರ್ಥಿಯಾಗಲಿ ಚುನಾವಣೆ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ ಇರುವುದೇ ಇದಕ್ಕೆ ಕಾರಣ.
ನವೆಂಬರ್ 2019ರ ಕ್ಷಿಪ್ರಕ್ರಾಂತಿಯ ನಂತರ ಜಿನೀನ್ ಸರಕಾರ ಅನುಸರಿಸಿದ ನೀತಿಗಳು ಹಿಂದಿನ ಮೊರಾಲೆಸ್ ಸರಕಾರದ ಪ್ರಗತಿಪರ ಜನಪರ ನೀತಿಗಳಿಗೆ ತದ್ವಿರುದ್ಧವಾಗಿದ್ದು ಅದು ಜನತೆಯ ಆಕ್ರೋಶಕ್ಕೆ ಗುರಿಯಾಗಿದೆ. ಆಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಹಿಂದಿನ ಸರಕಾರ ಆರಂಭಿಸಿ ಜನಪ್ರಿಯವಾಗಿದ್ದ ವ್ಯಾಪಕ ಆರೋಗ್ಯ ಸೇವೆಯ ಕರ‍್ಯಕ್ರಮದ ಬೆನ್ನೆಲುಬಾಗಿದ್ದ ನೂರಾರು ಕ್ಯೂಬನ್ ಡಾಕ್ಟರುಗಳನ್ನು ವಾಪಸು ಕಳಿಸಿ ಆ ಕರ‍್ಯಕ್ರಮಗಳನ್ನು ನಿಲ್ಲಿಸಲಾಯಿತು. ಆದೇ ರೀತಿ ಬಡಜನರಿಗೆ ಸಂಕಟದ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿಹಾರ ಒದಗಿಸುತ್ತಿದ್ದ ನೇರ ನಗದು ರ‍್ಗಾವಣೆಯ ಹಲವು ಕರ‍್ಯಕ್ರಮಗಳನ್ನು ಕಡಿತ ಮಾಡಲಾಯಿತು ಅಥವಾ ನಿಲ್ಲಿಸಲಾಯಿತು. ಕೊವಿದ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಜಗತಿನ ಇತರ ಉಗ್ರ ಬಲಪಂಥೀಯ ಸರಕಾರಗಳ ಸೂತ್ರವನ್ನೇ ಅನುಸರಿಸಲಾಯಿತು. ಆರೋಗ್ಯ ಸಂಬಂಧಿ ತುರ್ತು ಕ್ರಮಗಳ ಅಗತ್ಯದ ನಿರಾಕರಣೆ ಮತ್ತು ಆ ಕುರಿತು ದಿವ್ಯ ನಿರ್ಲಕ್ಷ ತೋರಿದೆ. ಅದೇ ಸಮಯದಲ್ಲಿ ಕೊವಿದ್ ಪರಿಣಾಮವಾಗಿ ಜೀವನೋಪಾಯ ಮತ್ತು ಹಣಕಾಸು ನಷ್ಟಕ್ಕೆ ಯಾವುದೇ ಪರಿಹಾರ ಕೊಡಲಿಲ್ಲ. ಆದರೆ ಕರ್ಫ್ಯೂ ಕ್ವಾರಂಟೈನ್ ಮುಂತಾದ ನಿಯಮಗಳ ಉಲ್ಲಂಘನೆಗೆ 10ವರ್ಷಗಳ ವರೆಗೆ ಜೈಲುವಾಸದಂತಹ ಕಠಿಣ ಶಿಕ್ಷೆಗಳನ್ನು ಮುತುವರ್ಜಿಯಿಂದ ಜಾರಿ ಮಾಡಲಾಯಿತು. ಇಂತಹ ಶಿಕ್ಷೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಹಲವು ದಂಗೆಗಳು ನಡೆದಿದ್ದು ಅದನ್ನು ಹತಿಕ್ಕಲು ಸಾವಿರಾರು ಜನರನ್ನು ಬಂಧಿಸಲಾಗಿದೆ. ಇವೆಲ್ಲದರಿಂದ ತೀವ್ರ ಅತೃಪ್ತಿ ಇದೆ.