ಬೆಂಗಳೂರು: ಬೆಂಗಳೂರಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ ಬಳಿಕ ಮೂರನೇ ಅತಿ ದೊಡ್ಡ ಉದ್ಯಾನ ನಿರ್ಮಾಣ ಮಾಡುವ ಗುರಿ ಹೊಂದಿದೆ. ಅರಣ್ಯ ಇಲಾಖೆ ಯಲಹಂಕ ಬಳಿಯ ಮಾದಪ್ಪನಹಳ್ಳಿ 153 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಬಗ್ಗೆ ಸಚಿವ ಸಂಪುಟ ಬಳಿಕ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. 265 ವರ್ಷಗಳ ಹಿಂದೆ 1760ರಲ್ಲಿ 240 ಎಕರೆ ಪ್ರದೇಶದಲ್ಲಿ ಲಾಲ್ ಬಾಗ್ ನಿರ್ಮಾಣವಾಗಿತ್ತು.
ಇದನ್ನೂ ಓದಿ : ಟಿಇಟಿ ಉತ್ತೀರ್ಣರಾದ 4.47 ಲಕ್ಷ ಜನರಲ್ಲಿ 28 ಸಾವಿರ ಜನರಿಗೆ ಮಾತ್ರ ಉದ್ಯೋಗ
155 ವರ್ಷಗಳ ಹಿಂದೆ 1870ರಲ್ಲಿ 197 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಬ್ಬನ್ ಪಾರ್ಕ್ ಜನಾಕರ್ಷಣೆಯ ತಾಣವಾಗಿದೆ. ಅಂದರೆ ಕಬ್ಬನ್ ಪಾರ್ಕ್ ನಿರ್ಮಾಣವಾಗಿ 155ವರ್ಷ ಆಗಿದೆ. ಆದಾದ ಬಳಿಕ ಬೆಂಗಳೂರಿನಲ್ಲಿ ಹಲವು ಸಣ್ಣ ಉದ್ಯಾನಗಳ ನಿರ್ಮಾಣವಾಗಿದೆಯಾದರೂ ಬೃಹತ್ ಉದ್ಯಾನ ನಿರ್ಮಾಣ ಆಗಿರಲಿಲ್ಲ. ಈಗ ಅಂತಹ ಒಂದು ಬೃಹತ್ ಜೀವವೈವಿಧ್ಯ ಉದ್ಯಾನವನ್ನು ನಮ್ಮ ಸರ್ಕಾರ ಜನತೆಗೆ ಸಮರ್ಪಿಸುತ್ತಿದೆ ಎಂದರು.
ಈ ಹಿಂದೆ ಅರಣ್ಯ ಇಲಾಖೆ ಮಾದಪ್ಪನಹಳ್ಳಿಯಲ್ಲಿರುವ 153 ಎಕರೆ ಪ್ರದೇಶವನ್ನು ನೆಡುತೋಪು ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. ಈಗ ಈ ಜಾಗವನ್ನು ಮರಳಿ ಇಲಾಖೆಗೆ ಪಡೆಯಲಾಗಿದ್ದು, ಇಲ್ಲಿರುವ ನೀಲಗಿರಿ ಮರಗಳನ್ನು ಹಂತಹಂತವಾಗಿ ತೆಗೆದು ಇಲ್ಲಿ ಸ್ಥಳೀಯ ಪ್ರಭೇದದ ಗಿಡ ಮರ ಬೆಳೆಸಿ, ಜಲ ಗುಂಡಿ ನಿರ್ಮಿಸಿ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ನಿರ್ಮಿಸಲಾಗುವುದು. ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಆಗಲಿರುವ ಈ ಉದ್ಯಾನ ರಾಜ್ಯ ರಾಜಧಾನಿಯ 3ನೇ ಅತಿದೊಡ್ಡ ಉದ್ಯಾನವನವೆಂಬ ಖ್ಯಾತಿಗೆ ಪಾತ್ರವಾಗಲಿದೆ. ಮೂರು ವರ್ಷದಲ್ಲಿ ಯೋಜನೆ ಕಾರ್ಯಗತಗೊಳಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಈ ಉದ್ಯಾನದಲ್ಲಿ ದಿವ್ಯೌಷಧೀಯ ಸಸ್ಯ ವನ, ಪಕ್ಷಿ ಲೋಕ, ವೃಕ್ಷೋದ್ಯಾನ ಹಾಗೂ ಇಂಟರ್ ಪ್ರಿಟೇಷನ್ ಸೆಂಟರ್ ನಿರ್ಮಾಣ ಮಾಡಲು ಚಿಂತಿಸಲಾಗಿದ್ದು, ಅತಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿರುವ ಶಿವರಾಮಕಾರಂತ ಬಡಾವಣೆಗೆ ಅತ್ಯಂತ ಸಮೀಪದಲ್ಲಿದೆ. ಈ ಪ್ರದೇಶದಲ್ಲಿ ಬೆಳೆಸಲಾಗಿರುವ ನೀಲಗಿರಿ ಮರಗಳನ್ನು ತೆಗೆದು ಸ್ಥಳೀಯ ಜಾತಿಯ ನಂದಿ, ಹೊನ್ನೆ, ಬಿಲ್ವ, ಮಹಾಬಿಲ್ವವೇ ಮೊದಲಾದ ನೂರಾರು ಪ್ರಭೇದದ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು. ಹೀಗೆ ಬೆಳೆಸುವ ಎಲ್ಲ ಮರಗಳ ಬಳಿ ವೃಕ್ಷದ ಹೆಸರು, ಪ್ರಭೇದ ಇತ್ಯಾದಿ ವೈಜ್ಞಾನಿಕ ವಿವರದ ಫಲಕ ಹಾಕುವ ಮೂಲಕ ಮುಂದಿನ ಪೀಳಿಗೆ ಕನಿಷ್ಠ 50 ಮರಗಳನ್ನು ಗುರುತಿಸುವಂತೆ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಇದನ್ನೂ ನೋಡಿ : KBL ಕ್ಯಾಂಟೀನ್ | ಇಲ್ಲಿ 1ರೂ ಗೆ ಹೊಟ್ಟೆ ತುಂಬುವಷ್ಟು ಟಿಫನ್ ಸಿಗುತ್ತೆ! Janashakthi Media
