ಪ್ರಸಕ್ತ – ಕೆ.ಎಸ್. ವಿಮಲಾ ಸಂಪುಟ 10 ಸಂಚಿಕೆ 01 ಜನವರಿ 03, 2016
ಕೊನೆಗೂ ಬಾಲಾಪರಾಧ ನ್ಯಾಯದ ಕಾಯ್ದೆ ತಿದ್ದುಪಡಿಗೆ ದೇಶದ ಉಭಯ ಸದನಗಳು ಅಂಗೀಕಾರ ನೀಡಿವೆ. ನಿರ್ಭಯಾ ಪ್ರಕರಣವೆಂದು ಪ್ರಖ್ಯಾತವಾದ ದೆಹಲಿಯ ಸಾಮೂಹಿಕ ಅತ್ಯಾಚಾರ, ಬರ್ಬರ ಹಿಂಸೆ ಕ್ರೌರ್ಯಗಳು ಈ ದೇಶ ಎಂದಿಗೂ ಮರೆಯಲಾರದ ಬೀಭತ್ಸ ನೆನಪು. ಆ ಘಟನೆಯ ಹಿಂದೆಯೇ ದೇಶದಾದ್ಯಂತ ಮತ್ತೊಮ್ಮೆ ಶಿಕ್ಷೆಯ ಕುರಿತು ಅಪರಾಧದ ಗಹನತೆಯ ಕುರಿತು ಚರ್ಚೆ ಗದ್ದಲ ಪ್ರತಿಭಟನೆಗಳೆಲ್ಲವೂ ನಡೆದವು. ಆಗಲೇ ಶುರುವಾದದ್ದು ಬಾಲಾಪರಾಧಿಗಳು, ಅವರು ಎಸಗುವ ಅಪರಾಧಗಳು, ಅವರಿಗೆ ಶಿಕ್ಷೆ, ಬಾಲಾಪರಾಧಿಗಳೆಂದು ಪರಿಗಣಿಸುವ ವಯಸ್ಸಿನ ಬಗ್ಗೆ ಹಲವು ಪ್ರಶ್ನೆಗಳು – ಇವು ದೇಶದಾದ್ಯಂತ ತೀವ್ರ ಚರ್ಚೆಗೆ ಒಳಗಾದವು. ಅಪರಾಧದ ಗಂಭೀರತೆ ಹೀನತೆಗಳ ಆಧಾರದಲ್ಲಿ ಶಿಕ್ಷೆಯನ್ನು ಪರಿಗಣಿಸಬೇಕೇ ಹೊರತೂ ಅಪರಾಧಿಯ ವಯಸ್ಸಿನ ಮೇಲಲ್ಲ ಎಂಬಿತ್ಯಾದಿ ಗಂಭೀರ ಚರ್ಚೆಗಳು ವಾಗ್ಯುದ್ದಗಳು ನಡೆದವು.
ಭಾವೋದ್ರೇಕಕ್ಕೆ ತಲೆಬಾಗಿದ ಬಿಜೆಪಿ ಸರ್ಕಾರ
ಈಗ ದೇಶದ ಉಭಯ ಸದನಗಳಲ್ಲಿ ಬಾಲಾಪರಾಧಿಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಲೋಕಸಭೆಯಲ್ಲಿ ಈ ಹಿಂದೆಯೇ ಅಂಗೀಕಾರವಾಗಿದ್ದ ಮಸೂದೆ ಅಂಗೀಕಾರಗೊಂಡಿದೆ. ರಾಜ್ಯಸಭೆಯಲ್ಲಿ ಇದನ್ನು ಸಿಪಿಐ(ಎಂ) ಪಕ್ಷದ ಸಂಸದರು ವಿರೋಧಿಸಿ ಸದನದಿಂದ ಹೊರನಡೆದಿದ್ದಾರೆ. ಈ ತಿದ್ದುಪಡಿ ದ್ವೇಷವನ್ನು ನ್ಯಾಯಸಮ್ಮತಗೊಳಿಸಿದೆ. ಈ ಹಿಂದೆ 18 ವರ್ಷದವರೆಗೂ ಅಪರಾಧಿಗಳನ್ನು ಬಾಲಾಪರಾಧಿಗಳೆಂದು ಪರಿಗಣಿಸಿ ಅವರಿಗೆ ಮೂರು ವರ್ಷಗಳ ಶಿಕ್ಷೆ ಮತ್ತು ಶಿಕ್ಷೆಯೂ ಕೂಡ ಅವರನ್ನು ಪರಿವರ್ತಿಸುವ ನೆಲೆಯಲ್ಲಿ ಬಾಲಾಪರಾಧಿ ಮಂದಿರಗಳಲ್ಲಿ ಇಡುವುದಾಗಿತ್ತು. ಈಗ ವಯೋಮಿತಿಯನ್ನು 18 ರಿಂದ 16ಕ್ಕೆ ಇಳಿಸಲಾಗಿದೆ. ಮತ್ತು ಅಪರಾಧಗಳ ಗಂಭೀರತೆಗೆ ಅನುಗುಣವಾಗಿ ಹೀನ ಅಪರಾಧಗಳಿಗೆ ಉಳಿದ ಅಪರಾಧಿಗಳಂತೆಯೇ 7 ವರ್ಷಗಳ ಸಜೆಯನ್ನು ಉಳಿದಂತೆ ಅಪರಾಧಗಳ ಆಧಾರದಲ್ಲಿ ಶಿಕ್ಷೆಯ ಪ್ರಮಾಣವಿರುತ್ತದೆ.
ವಿಪರ್ಯಾಸವೆಂದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಭಯಾ ಪ್ರಕರಣದಲ್ಲಿ ವಸ್ತುನಿಷ್ಟ ತನಿಖೆ ನಡೆಸಿ ಮಾದರಿ ಶಿಫಾರಸುಗಳನ್ನು ಕೊಟ್ಟ ಜಸ್ಟೀಸ್ ವರ್ಮಾ ಈ ತೆರನ ತಿದ್ದುಪಡಿಗಳಿಗೆ ಸಮ್ಮತಿಸಿರಲಿಲ್ಲ. ಯಾವುದೇ ಕಾನೂನು ರಚನೆ ಭಾವನಾತ್ಮಕ ನೆಲೆಯಲ್ಲಿ ಆಗಬಾರದು. ಆದರೆ ಕೇಂದ್ರದ ಬಿ.ಜೆ.ಪಿ.ಸರ್ಕಾರ ಈ ತೆರನ ಭಾವೋದ್ರೇಕದ ಸಾರ್ವಜನಿಕ ಒತ್ತಡಕ್ಕೆ ತಲೆಬಾಗಿದೆ. ನಿರ್ಭಯಾ ಪ್ರಕರಣದ ಒಬ್ಬ ಬಾಲಾಪರಾಧಿ 3 ವರ್ಷಗಳ ಶಿಕ್ಷೆ ನಂತರ ಬಿಡುಗಡೆಯಾಗುವುದಿತ್ತು. ಅದರ ವಿರುದ್ಧ ಕೋರ್ಟುಗಳಲ್ಲಿ ಹಾಕಿದ ಅರ್ಜಿಯನ್ನು ಸುಪ್ರೀಂ ಕೋರ್ಟು ತಳ್ಳಿ ಹಾಕಿ, ಅಂತಹ ಕಾನೂನು ಇಲ್ಲದಿರುವ ಬಗ್ಗೆ ಸೂಚಿಸಿತ್ತು. ಈ ವಿಷಯವನ್ನು ಎತ್ತಿಕೊಂಡು ನಿರ್ಭಯಾ ಪಾಲಕರನ್ನು ಮುಂದಿಟ್ಟುಕೊಂಡು ಹೀನ ಅಪರಾಧಗಳಿಗೆ ವಯೋಮಿತಿಯನ್ನು 18 ರಿಂದ 16ಕ್ಕೆ ಇಳಿಸುವ ಕಾನೂನು ತಿದ್ದುಪಡಿ ಹೂಡಲು ಚಳುವಳಿ ಹೂಡಿತ್ತು. ಇದೇ ಅಧಿವೇಶನದಲ್ಲಿ ಅದನ್ನು ರಾಜ್ಯಸಭೆ ಪಾಸು ಮಾಡಬೇಕೆಂದು ಒತ್ತಡ ಹಾಕಿತ್ತು. ಈ ಒತ್ತಡಕ್ಕೆ ತಲೆಬಾಗಿ ಬಿಜೆಪಿ ಸರ್ಕಾರ ಕಾಂಗ್ರೆಸ್ ಸೇರಿದಂತೆ ಕೆಲವು ವಿರೋಧ ಪಕ್ಷಗಳ ಬೆಂಬಲದೊಂದಿಗೆ ಈ ತಿದ್ದುಪಡಿಯನ್ನು ಪಾಸು ಮಾಡಿದೆ.
ತಿದ್ದುಪಡಿ ಬಾಲಾಪರಾಧಕ್ಕೆ ಪರಿಹಾರವಲ್ಲ
ಮೇಲ್ನೋಟಕ್ಕೆ ಮತ್ತು ನಿರ್ಭಯಾ ಅಲಿಯಾಸ್ ಜ್ಯೋತಿ ಸಿಂಗ್ ಮೇಲಿನ ಬರ್ಬರ ಹಿಂಸೆಗೆ ಕಾರಣರಾದಂಥವರಿಗೆ ಇದೂ ಕಡಿಮೆ ಶಿಕ್ಷೆಯೇ ಎನಿಸಬಹುದಾದರೂ ಇದು ಸೃಷ್ಟಿಸುವ ಅಪಾಯವನ್ನು ನಾವು ಮುಂಗಾಣಬೇಕು. ಈ ತಿದ್ದುಪಡಿಯಂತೆ 1997ರ ನಂತರ ಮತ್ತು ಈ ನಂತರ ಹುಟ್ಟಬಹುದಾದ ಎಲ್ಲ ಮಕ್ಕಳ ತಲೆಯ ಮೇಲೂ ತೂಗುವ ಕತ್ತಿ ಇದು. ಹಾಗೆಂದ ಮಾತ್ರ ಕ್ಕೆ ತನ್ನ ಮೂರು ವರ್ಷಗಳ ಶಿಕ್ಷೆಯ ಅವಧಿಯನ್ನು ಮುಗಿಸಿ ಡಿಸೆಂಬರ್ 20ರಂದು ಬಿಡುಗಡೆಹೊಂದಿದ ಅತ್ಯಾಚಾರದ ಅಪರಾಧಿಯನ್ನು ಶಿಕ್ಷಿಸಬಾರದಿತ್ತು ಎಂದಲ್ಲ. ಈ ಹಿಂದೆ ಇದ್ದಂತೆ ಬಾಲಾಪರಾಧಿಗಳನ್ನು ಶಿಕ್ಷೆಗೆ ಒಳಪಡಿಸಿಯೂ ವಿಶೇಷ ಆಸ್ಥೆಯಲ್ಲಿ ಪರಿವರ್ತನೆ ಮಾಡುವ, ಮತ್ತು ಸಮಾಜದಲ್ಲಿ ಸನ್ನಡತೆಯ ಪ್ರಜೆಗಳಾಗಿ ಬಾಳಲು ಬೇಕಾದ ಆಪ್ತಸಲಹೆ, ಶಿಕ್ಷಣ, ಮನೋಪರಿವರ್ತನೆಯ ಹಲವು ವಿಧಾನಗಳನ್ನು ಕೈಗೊಳ್ಳಲಾಗುತ್ತಿತ್ತು. ಈಗಿರುವ ಬಾಲಮಂದಿರಗಳು ಅಂಥಹ ಕಾರ್ಯಕ್ಷಮತೆಯನ್ನು ಹೊಂದಿಲ್ಲ ಅಥವಾ ಅಂಥದ್ದೊಂದರ ಅಗತ್ಯವಿದೆ ಎಂದು ಸರ್ಕಾರಗಳಿಗೆ ಅನಿಸಿಯೂ ಇಲ್ಲ ಎನ್ನುವ ಕೊರತೆ ಇದೆ. ಅದನ್ನು ಸರಿಪಡಿಸುವ ನಿಜವಾದ ನೆಲೆಯಲ್ಲಿ ಬಾಲಾಪರಾಧಿಗಳನ್ನು ಸರಿಮಾಡುವ ಕೆಲಸಕ್ಕೆ ಒತ್ತು ಕೊಡಬೇಕು. ಆದರೆ ಈ ನಂತರ 16ರ ವಯಸ್ಕರನ್ನೂ, ತಾನು ಮಾಡುವ ಕೃತ್ಯದ ಪರಿಣಾಮ ಗೊತ್ತಿದ್ದೂ ಎಸಗುವ ವಯಸ್ಕ ಖೈದಿಗಳ ಜೊತೆ ಕ್ರಿಮಿನಲ್ ಅಪರಾಧಿಗಳಂತೇ ಪರಿಗಣಿಸಲಾಗುತ್ತದೆ.
ಈಗ ನಮ್ಮ ಮುಂದೆ ಬರುವ ಪ್ರಶ್ನೆ ಇವತ್ತಿನ ಹಲವು ವಿಪರೀತ ಬೆಳವಣಿಗೆಗಳ ಕಾರಣದಿಂದ 12ರ ವಯೋಮಾನದ ಬಾಲಕರೂ ಲೈಂಗಿಕ ಅಪರಾಧಗಳಲ್ಲಿ ತೊಡಗಿಕೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಹಾಗಾದರೆ ಮುಂದಿನ ನಡೆ 16 ನ್ನು 12 ಕ್ಕೆ ಮತ್ತೂ ಮುಂದಕ್ಕೆ ಇನ್ನೂ ಕಡಿಮೆ ಮಾಡುತ್ಥಾ ಹೋಗುವುದೇ?
ಸಮಾಜದಲ್ಲಿ ಸರಿಪಡಿಸಬೇಕಾದ್ದು ಬೇರೆಯೇ.. ನಮ್ಮ ಸುತ್ತಲಿನ ಪರಿಸರವನ್ನು ದೌರ್ಜನ್ಯ ಮುಕ್ತಗೊಳಿಸಲು ಅಗತ್ಯವಾದ ಕ್ರಮಗಳನ್ನು ರೂಢಿಸುವ ಬದಲು ಈ ತೆರನ ತಿದ್ದುಪಡಿ ಹುಟ್ಟಲಿರುವ ಮಕ್ಕಳ ತಲೆಯ ಮೇಲಿನ ತೂಗುಕತ್ತಿ ಕೂಡ ಆಗಬಹುದು. ಶಿಕ್ಷೆ ಬೇಕು. ಆದರೆ ಶಿಕ್ಷೆಯೇ ಎಲ್ಲವನ್ನೂ ಸರಿಪಡಿಸುತ್ತದೆ ಎಂದಾದರೆ ಈ ಹಿಂದಿನ ಹಲವು ಅಪರಾಧಗಳಿಗೆ ಕೊಟ್ಟ ಶಿಕ್ಷೆ ಅಪರಾಧವನ್ನು ಇಲ್ಲವಾಗಿಸಬೇಕಿತ್ತು. ಆದರೆ ಕಡಿಮೆಯೂ ಆಗಿಲ್ಲವಲ್ಲ. ಅಪರಾಧದ ಹೆಚ್ಚಳವಾದಾಗ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಲು ಅಧಿಕಾರ ಆಡಳಿತ ಪೊಲೀಸ್ ವ್ಯವಸ್ಥೆ ಆಮಾಯಕರನ್ನು, ಸುಲಭವಾಗಿ ಸಿಕ್ಕು ಹಾಕಿಸಬಹುದಾದವರನ್ನು ಎಳೆದುಕೊಂಡು ಹೋಗಿ ಪ್ರಕರಣ ದಾಖಲು ಮಾಡುವ ಪೃವೃತ್ತಿಯೂ ಈ ದೇಶಕ್ಕೆ ಹೊಸದಲ್ಲ. ಈ ತಿದ್ದುಪಡಿ ಬಡ, ಅಶಿಕ್ಷಿತ, ಅಲ್ಪಸಂಖ್ಯಾತ ವರ್ಗದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ. ಮೂಲದ ಬೇರನ್ನು ಕೀಳದೆ ಟೊಂಗೆಯನ್ನು ಕತ್ತರಿಸುವುದು ಸಮಸ್ಯೆಗೆ ಪರಿಹಾರವಲ್ಲ.