ಕೋವಿಡ್ ಪೂರ್ವದ ಬಡವರಂತೆ ಕೊವಿಡೋತ್ತರ ಬಡವರಿಗೆ ’ಹಸಿವ’ವನ್ನು ತಡೆಯವ ತಾಳ್ಮೆಯಾಗಲಿ ಅಥವಾ ವಿಧಿಯ ಮೊರೆ ಹೋಗುವ ವಾಡಿಕೆಯಾಗಲಿ ಇಲ್ಲ. ಈ ಎರಡು ಬಗೆಯ ಬಡವರಲ್ಲಿನ ಭಿನ್ನತೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಹೀಗೆ ಕರೋನಾದ ಪರಿಣಾಮವಾಗಿ ಬಡವರಾದ ಜನರೂ ರೇಷನ್ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಇವರ ಸಿಟ್ಟು ಕೇವಲ ಬಾಯಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಈ ಹೊಸ ಬಡವರ ಸಿಟ್ಟು ಅವರ ರಟ್ಟೆಗೆ ಬಂದರೆ ಏನಾಗುತ್ತದೆ ಎಂಬುದನ್ನು ಹೇಳುವುದು-ಊಹಿಸುವುದು ಸಾಧ್ಯವಿಲ್ಲ. ಇವರು ಕೇವಲ ಪ್ರಶ್ನೆ ಮಾಡುವುದಿಲ್ಲ, ಪ್ರತಿಯಾಗಿ ಅಧಿಕಾರಿಗಳನ್ನು-ಜನಪ್ರತಿನಿಧಿಗಳನ್ನು ಕೈಹಿಡಿದು-ಗೋಣಿಡಿದು ನಿಲ್ಲಿಸುತ್ತಾರೆ, ಪರಿಹಾರ ಒತ್ತಾಯಿಸುತ್ತಾರೆ.
ಕರೊನಾ ಮಹಾರೋಗ ತಡೆಯಲು ಲಾಕ್‌ಡೌನ್ ಕ್ರಮವನ್ನು ಭಾರತೀಯರು ಪಾಲಿಸುತ್ತಿದ್ದಾರೆ.’ಅಲ್ಲಿ ಇಲ್ಲಿ ಕೆಲವು ವ್ಯತ್ಯಯಗಳು ಉಂಟಾಗಿರುವುದನ್ನು ಬಿಟ್ಟರೆ ಜನರು ಹಸಿವು, ನಿರುದ್ಯೋಗ, ದುಸ್ಥಿತಿ ಎಲ್ಲವನ್ನು ಮರೆತು ಮನೆಗಳಲ್ಲಿ ಸ್ವ-ಬಂಧನಕ್ಕೊಳಗಾಗಿದ್ದಾರೆ. ಆದರೆ ಜನರು ಹಸಿವನ್ನು ಎಷ್ಟು ದಿನ ತಡೆದುಕೊಂಡಾರು? ಸರ್ಕಾರಗಳು ಲಾಕ್‌ಡೌನ್ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿವೆ. ಮಾಸ್ಕ್ ಹಾಕಿಕೊಳ್ಳುವ ಬಗ್ಗೆ, ಸಾಮಾಜಿಕ ಅಂತರದ ಬಗ್ಗೆ, ಸ್ಯಾನಿಟೈಸರ್ ಬಗ್ಗೆ, ಸೋಪಿನಿಂದ ಕೈತೊಳೆದುಕೊಳ್ಳುವ ಬಗ್ಗೆ ಅಮಿತಾಬ್ ಬಚನ್ ಸರ್ಕಾರದ ಪರವಾಗಿ ದಿನಕ್ಕೆ ಹತ್ತಾರು ಭಾರಿ ಟಿವಿಯಲ್ಲಿ ಉಪದೇಶ ನೀಡುತ್ತಿದ್ದಾರೆ. ಆದರೆ ’ದುಡಿದರೆ ಕೂಳು; ಇಲ್ಲದಿದ್ದರೆ ಖಾಲಿಹೊಟ್ಟೆ’ಎನ್ನುವ ಸ್ಥಿತಿಯಲ್ಲಿರುವ ಕೋಟ್ಯಾವಧಿ ’ದಿನಗೂಲಿ ದುಡಿಮೆಗಾರರ ಭಾರತ’ವು ಲಾಕ್‌ಡೌನ್ ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಯಾರೂ ಸೂಚನೆಗಳನ್ನು ನೀಡುತ್ತಿಲ್ಲ. ಟಿವಿಗಳಂತೂ ದಿನನಿತ್ಯ ’ಜನರಿಗೆ ಬುದ್ಧಿಯಿಲ್ಲ,’ಈ ಜನರಿಗೆ ಯಾವಾಗ ಬುದ್ಧಿಬರುತ್ತೋ’, ’ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ಬಾಯಿಗೆ ಬಂದಹಾಗೆ ರೇಷನ್‌ಗಾಗಿ, ಆಹಾರಕ್ಕಾಗಿ, ಹಾಲಿಗಾಗಿ ಸರದಿಯಲ್ಲಿ ಮುಗಿಬಿದ್ದ ಬಡ-ಅರೆಹೊಟ್ಟೆ ದುಡಿಮೆಗಾರರನ್ನು ಹೀಯಾಳಿಸುತ್ತಿವೆ. ಆದರೆ ಲಾಕ್‌ಡೌನಾಗಿ ೧೫-೧೬ ದಿನ ಕಳೆದರೂ ದಿನಗೂಲಿಗಳಿಗೆ, ಕೂಲಿಕಾರರಿಗೆ, ಕೆಲಸ ಕಳೆದುಕೊಂಡ ವಲಸಿಗರಿಗೆ, ಅವರ ಹೆಣ್ಣು ಮಕ್ಕಳಿಗೆ ಹೇಗೆ ರೇಷನ್ ವಿತರಿಸಬೇಕು, ಔಷಧಿ ನೀಡಬೇಕು, ಮಾಸ್ಕ್ ನೀಡಬೇಕು ಎಂಬುದರ ಬಗ್ಗೆ ಸರ್ಕಾರ ಚಕಾರವೆತ್ತುತ್ತಿಲ್ಲ.
ಲಾಕ್‌ಡೌನ್ ಎಲ್ಲಿ ಬಿಗಿಗೊಳಿಸಬೇಕು, ಎಲ್ಲಿ ಎಷ್ಟು ಏನು ಸಡಿಲಿಸಬೇಕು ಎಂಬುದರ ಬಗ್ಗೆ ದಿನನಿತ್ಯ ಭಜನೆ ಮಾಡಲಾಗುತ್ತಿದೆ. ಇದು ಏನೇ ಆಗಲಿ, ಮೂರಾಬಟ್ಟೆಯಾಗಿರುವ ಬಡವರ ಬದುಕನ್ನು ಮತ್ತೆ ಹೇಗೆ ಕಟ್ಟಿಕೊಳ್ಳಲು ನೆರವು ನೀಡಬೇಕು, ಇದಕ್ಕೆ ಎಷ್ಟು ಬಂಡವಾಳ ಬೇಕು, ಹಸಿವನ್ನು ಹೇಗೆ ತಡೆಯಬೇಕು, ಆಹಾರವನ್ನು ಹೇಗೆ ಜನರಿಗೆ ತಲುಪಿಸಬೇಕು ಮುಂತಾದವುಗಳನ್ನು ಒಳಗೊಂಡ ಪ್ಯಾಕೇಜ್ ಬಗ್ಗೆ ಪರಮೋಚ್ಛ ನಾಯಕರು ಮಾತನಾಡುತ್ತಿಲ್ಲ. ಕೆಲವೇ ದಿನಗಳಲ್ಲಿ ವಿತ್ತಮಂತ್ರಿ ನಿರ್ಮಲಾಸೀತಾರಾಮನ್ ನೇತೃತ್ವದ ಕಾರ್ಯಪಡೆಯು ಅಂತಹ ಯೋಜನೆಗಳನ್ನು ಪ್ರಕಟಿಸುತ್ತದೆ ಎಂದು ಆಳುವ ವರ್ಗ ದಿನದೂಡುತ್ತಿದೆ. ಇವರಿಗೆ ’ಸಾಮಾನ್ಯ ಸಂದರ್ಭ-ಅಸಮಾನ್ಯ ಸಂದರ್ಭ ಎಂಬುದರ ನಡುವಿನ ಭಿನ್ನತೆಯ ಪರಿವೆ ಇದ್ದಂತೆ ಕಾಣುತ್ತಿಲ್ಲ. ಅರ್ಥತಜ್ಞೆ ಜಯತಿ ಘೋಷ್ ಹೇಳಿರುವಂತೆ ’ಈ ಬಗ್ಗೆ ಗಮನ ನೀಡುವುದಿರಲಿ, ಅವರು ಯೋಚಿಸುತ್ತಲೂ ಇಲ್ಲ ಎಂಬ ದುಸ್ಥಿತಿ ನಮ್ಮ ಮುಂದಿದೆ. ವೆಲ್ತ್ ಕ್ರಿಯೆಟರ್ಸ್, ವೆಲ್ತ್ ಕ್ರಿಯೇಟರರ್ಸ್ ಎಂದು ಬಂಡವಳಿಗರನ್ನು ಹಾಡಿಹರಸುತ್ತಿದ್ದ ಕೇಂದ್ರದ ಮಂತ್ರಿಮಹೋದಯರಿಗೆ ಈಗ ವೆಲ್ತ್‌ಕ್ರಿಯೇಟರ್ಸ್ ಯಾರು ಎಂಬುದರ ಜ್ಞಾನೋದಯವಾಗಿರಬೇಕು! ದುಡಿಮೆಗಾರರ ಭಾರತ ನಿತ್ರಾಣಗೊಂಡರೆ ವೆಲ್ತೂ ಇಲ್ಲ, ವೆಲ್‌ಫೇರೂ ಇಲ್ಲ, ಸ್ವಾಮಿ!
ಕರೋನಾ ಮಹಾ ದುರಂತದ ಪರಿಣಾಮವಾಗಿ ಬಡತನದ ರೇಖೆಯ ಮೇಲೆ ಅಥವಾ ಅದರಿಂದ ಸ್ವಲ್ಪ ಮೇಲಿದ್ದವರೆಲ್ಲ ಇಂದು ಬಡತನದ ರೇಖೆಯ ಕೆಳಗೆ ಬೀಳುತ್ತಿದ್ದಾರೆ.ಕರೋನಾ ಬಡವರನ್ನು ಹುಟ್ಟುಹಾಕುತ್ತಿದೆ. ಭಾರತವು ಯಶಸ್ವಿಯಾಗಿ ಬಡತನವನ್ನು ನಿವಾರಿಸುವ ದಿಶೆಯಲ್ಲಿ ಕಾರ್ಯನಿರತವಾಗಿತ್ತು. ಒಂದು ಅಂದಾಜಿನ ಪ್ರಕಾರ ೨೦೦೬ ರಿಂದ ೨೦೧೬ ಅವಧಿಯಲ್ಲಿ ೨೭ ಕೋಟಿ ದುಡಿಮೆಗಾರರನ್ನು ಬಡತನ ರೇಖೆಯಿಂದ ಮೇಲೆತ್ತಿತ್ತು. ಈಗ ಇವರೆಲ್ಲರೂ ರೇಖೆಯ ಕೆಳಗೆ ಬೀಳುತ್ತಾರೆ.ಇದುವರೆವಿಗೂ ಬಡತನದ ರೇಖೆಯ ಕೆಳಗಿದ್ದವರನ್ನು ಒಂದು ರೀತಿಯ ಭ್ರಮೆಗೆ ತಳ್ಳಿ, ಭಾವನಾತ್ಮಕ ಸಂಗತಿಗಳನ್ನು ಕೆರಳಿಸಿ, ಬಡತನವನ್ನು ಸಹಿಸಿಕೊಳ್ಳುವಂತೆ ಮನವೊಲಿಸಿ, ಸಮಸ್ಯೆಯಲ್ಲದ ಸಂಗತಿಗಳನ್ನು ಸಮಸ್ಯೆಗಳನ್ನಾಗಿ ಮಾಡಿ ಆಳುವ ವರ್ಗ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿತ್ತು.ಆದರೆ ಇಂದು ಬಡತನದ ಒಳರಚನೆ ಬದಲಾಗುತ್ತಿದೆ. ಮಧ್ಯಮ ಅಥವಾ ಅರೆಮಧ್ಯಮ ವರಮಾನದ ಜನರೆಲ್ಲ ಬಡತನದ ರೇಖೆಯ ವ್ಯಾಪ್ತಿಗೆ ಬರುತ್ತಾರೆ. ಐ.ಎಲ್.ಒ ನಡೆಸಿದ ಕೋವಿಡ್ ಪರಿಣಾಮದ ಅಧ್ಯಯನದ ಪ್ರಕಾರ ಭಾರತದಲ್ಲಿ ೪೦ ಕೋಟಿ ದುಡಿಮೆಗಾರರು ನಿರುದ್ಯೋಗಿಗಳಾಗುತ್ತಾರೆ.
ಕೋವಿಡ್-ಪೂರ್ವದ ಮತ್ತು ಕೋವಿಡೋತ್ತರ ಬಡವರು
ಹೀಗೆ ಬಡವರಾದ ಜನರ ಅತೃಪ್ತಿ-ಅಸಮಧಾನ-ಅಸಂತೋಷವನ್ನು ಭ್ರಮೆಗೆ ಸಿಲುಕಿಸಿಭಾವನೆ ಕೆರಳಿಸಿ ಸುಮ್ಮನಿರಿಸಲು ಸಾಧ್ಯವಿಲ್ಲ. ಕೋವಿಡ್ ಪೂರ್ವದ ಬಡವರಂತೆ ಕೊವಿಡೋತ್ತರ ಬಡವರಿಗೆ `ಹಸಿವ’ವನ್ನು ತಡೆಯವ ತಾಳ್ಮೆಯಾಗಲಿ ಅಥವಾ ವಿಧಿಯ ಮೊರೆ ಹೋಗುವ ವಾಡಿಕೆಯಾಗಲಿ ಇವರಲ್ಲಿ ಇಲ್ಲ. ಈ ಎರಡು ಬಗೆಯ ಬಡವರಲ್ಲಿನ ಭಿನ್ನತೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಹೀಗೆ ಕರೋನಾದ ಪರಿಣಾಮವಾಗಿ ಬಡವರಾದ ಜನರೂ ರೇಷನ್ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಇವರ ಸಿಟ್ಟು ಕೇವಲ ಬಾಯಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಈ ಹೊಸ ಬಡವರ ಸಿಟ್ಟು ಅವರ ರಟ್ಟೆಗೆ ಬಂದರೆ ಏನಾಗುತ್ತದೆ ಎಂಬುದನ್ನು ಹೇಳುವುದು-ಊಹಿಸುವುದು ಸಾಧ್ಯವಿಲ್ಲ. ಇವರು ಕೇವಲ ಪ್ರಶ್ನೆ ಮಾಡುವುದಿಲ್ಲ, ಪ್ರತಿಯಾಗಿ ಅಧಿಕಾರಿಗಳನ್ನು-ಜನಪ್ರತಿನಿಧಿಗಳನ್ನು ಕೈಹಿಡಿದು-ಗೋಣಿಡಿದು ನಿಲ್ಲಿಸುತ್ತಾರೆ, ಪರಿಹಾರ ಒತ್ತಾಯಿಸುತ್ತಾರೆ.
ಆರ್ಥಿಕತೆಯಲ್ಲಿ ಸಾಮಾನ್ಯ ಸ್ಥಿತಿಯಿದ್ದ ೨೦೧೭-೧೮ ಮತ್ತು ೨೦೧೮-೧೯ನೆಯ ಸಾಲುಗಳಲ್ಲಿ ಇದನ್ನುಶಿಸ್ತುಬದ್ಧವಾಗಿ ನಿರ್ವಹಿಸದೆ ಅದನ್ನು ನೆಲೆಕಚ್ಚುವಂತೆ ಮಾಡಲಾಗಿತ್ತು. ನೋಟು ಅಮಾನ್ಯೀಕರಣದ ಕ್ರೂರ ಛಾಯೆ ಈಗಲೂ ನಮ್ಮನ್ನು ಕಾಡುತ್ತಿದೆ. ಕೋವಿಡ್ ದುರಂತವು ಒಂದು ವಿಪತ್ತಾದರೆ ಆರ್ಥಿಕ ದುಸ್ಥಿತಿಯು ಸರ್ಕಾರದ ಸ್ವಯಂಕೃತಾಪರಾಧವಾಗಿದೆ. ಕೋವಿಡೊತ್ತರ ಬಡವರು ಪತ್ರಿಕೆಗಳಲ್ಲಿ-ಟೀವಿಗಳಲ್ಲಿ ಬರುವ ’ಸುಳ್ಳುಗಳನ್ನು `ಸರ್ಕಾರದ ಭಜನೆ’ಯನ್ನು ನಂಬುವುದಿಲ್ಲ.
ಆರ್ಥಿಕತೆಯ ಪುನರ್‌ನಿರ್ಮಾಣ
ಕೋವಿಡೋತ್ತರ ಭಾರತೀಯ ಆರ್ಥಿಕತೆಯ ಪುನರ್ ನಿರ್ಮಾಣ ಸುಲಭವಾದ ಕಾರ್ಯವಲ್ಲ. ಏಕೆಂದರೆ ಲಾಕ್‌ಡೌನ್ ನಂತರವೂ ಕರೋನಾದ ಭಯ ಇದ್ದೆ ಇರುತ್ತದೆ. ನಗರ ಪ್ರದೇಶದಲ್ಲಿದ್ದ ವಲಸಿಗ ದುಡಿಮೆಗಾರರೆಲ್ಲ ಗ್ರಾಮಗಳಿಗೆ ಹಿಂತಿರುಗಿದ್ದಾರೆ. ಕಾರ್ಖಾನೆಗಳೆಲ್ಲ ಸ್ತಬ್ದವಾಗಿವೆ. ಕಚ್ಚಾಸಾಮಗ್ರಿ ಹೊಂದಿಸಿಕೊಳ್ಳುವುದು ಇವುಗಳಿಗೆ ದೊಡ್ಡ ಸಾಹಸದ ಕಾರ್ಯವಾಗುತ್ತದೆ. ಇವುಗಳ ಕೈಯಲ್ಲಿ ಹಣವಿಲ್ಲ. ಹೀಗಾಗಿ ನೆಲಕಚ್ಚಿರುವ ಕಾರ್ಖಾನೆಗಳನ್ನು ಪುನರಾರಂಭ ಮಾಡುವುದು ಕಷ್ಟದ ಕೆಲಸ. ಇವುಗಳಿಗೆ ಕಾರ್ಯಕಾರಿ ಬಂಡವಾಳ ನೀಡುವ ಸ್ಥಿತಿಯಲ್ಲಿ ಬ್ಯಾಂಕುಗಳಿಲ್ಲ. ಈಗಾಗಲೆ ರಫ್ತು ವ್ಯಾಪಾರ ತಳಮಟ್ಟ ತಲುಪಿದೆ. ಉಳಿತಾಯ-ಬಂಡವಾಳ ಹೂಡಿಕೆ ಪ್ರಮಾಣವು ೨೦೧೧-೧೨ರಲ್ಲಿ ಜಿಡಿಪಿಯ ಶೇ. ೩೪ ರಷ್ಟಿದ್ದುದು ೨೦೧೮-೧೯ರಲ್ಲಿ ಶೇ. ೨೯ಕ್ಕಿಳಿದಿದೆ.
ಕಳೆದ ಎರಡು-ಮೂರು ವರ್ಷಗಳಲ್ಲಿ ಆರ್ಥಿಕ ನಿರ್ವಹಣೆಯಲ್ಲಿ ವೈಫಲ್ಯದಿಂದಾಗಿ ಜನರ ಮಾಸಿಕ ತಲಾ ಅನುಭೋಗ ವೆಚ್ಚವು ೨೦೧೧-೧೨ ರಲ್ಲಿದ್ದ ರೂ.೧೫೦೦ ರಷ್ಟಿದ್ದುದು ೨೦೧೭-೧೮ರಲ್ಲಿ ರೂ.೧೪೪೦ಕ್ಕಿಳಿದಿದೆ. ಕೋವಿಡ್ ದುರಂತದಿಂದಾಗಿ ಇದು ಇನ್ನಷ್ಟು ಕೆಳಗೆ ಇಳಿಯುತ್ತದೆ. ಕೋವಿಡ್ ಪೂರ್ವದಲ್ಲಿಯೇ ಆರ್ಥಿಕತೆಯಲ್ಲಿನ ನಿರುದ್ಯೋಗ ಪ್ರಮಾಣ ಕಳೆದ ೪೦ ವರ್ಷಗಳಲ್ಲಿ ಅತ್ಯಧಿಕ ಎಂದು ಸರ್ಕಾರವೇ ನಡೆಸಿದ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ ಬಹಿರಂಗ ಪಡಿಸಿದೆ. ಕೋವಿಡ್ ಪೂರ್ವದಲ್ಲಿಯೇ ಜಿಡಿಪಿ ಬೆಳವಣಿಗೆ ದರವು ಶೇ. ೫ ಕ್ಕಿಂತ ಕೆಳಗಿಳಿದಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್‌ನಿಂದ ನುಚ್ಚುನೂರಾಗಿರುವ ಆರ್ಥಿಕತೆಯನ್ನು, ಮೂರಾಬಟ್ಟೆಯಾಗಿರುವ ೪೦ ಕೋಟಿ ದುಡಿಮೆಗಾರರ ಭಾರತವನ್ನು ಪುನರ್‌ನಿರ್ಮಾಣ ಮಾಡುವುದು ಹಿಮಾಲಯ ಸದೃಶ ಸಾಹಸವಾಗಿದೆ. ಈಗ ಸರ್ಕಾರ ಏನು ಮಾಡಬಹುದು ಎಂಬ ಕೆಲವು ಸೂಚನೆಯಲ್ಲಿ ಇಲ್ಲಿ ನೀಡಲಾಗಿದೆ.
ಮೊಟ್ಟಮೊದಲನೆಯದಾಗಿ ಕೋವಿಡ್‌ನಿಂದಾಗಿ ಆರ್ಥಿಕತೆಯ ಮೇಲಾಗಿರುವ ದುಷ್ಪರಿಣಾಮವನ್ನು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಬೇಕು. ಇದು ಸರ್ಕಾರಿ ಅರ್ಥಶಾಸ್ತ್ರಜ್ಞರಿಂದ ಅಥವಾ ಸರ್ಕಾರದ ಭಜನಾಮಂಡಳಿ ತಜ್ಞರಿಂದ ಸಾಧ್ಯವಿಲ್ಲ. ಸ್ವತಂತ್ರ ಅಥಶಾಸ್ತ್ರಜ್ಞರನ್ನು-ಸಮಾಜಶಾಸ್ತ್ರಜ್ಞನ್ನು ಒಳಗೊಂಡ ಸಮಿತಿಯಿಂದ ಇದು ನಡೆಯಬೇಕು.
ಇದರ ಆಧಾರದ ಮೇಲೆ ದುಡಿಮೆಗಾರರ ಭಾರತವನ್ನುಕೇಂದ್ರವಾಗಿಟ್ಟುಕೊಂಡು ಪ್ಯಾಕೇಜ್ ಪ್ರಕಟಿಸಬೇಕು.
ತಕ್ಷಣ ಮನರೇಗಾ ಯೋಜನೆಗೆ ಪ್ರಸ್ತುತ ಸಾಲಿನಲ್ಲಿ ಕನಿಷ್ಟ ರೂ. ೧ ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಬೇಕು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರೀತಿಯ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ಪ್ರಕಟಿಸಬೇಕು. ಇದಕ್ಕೂ ರೂ. ೧ ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಬೇಕು(ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯವು ತನ್ನ ’ಸ್ಟೇಟಸ್ ಆಫ್ ವರ್ಕಿಂಗ್ ಇಂಡಿಯಾ’ ವರದಿಯ ಮೂಲಕ ಇದನ್ನು ಶಿಫಾರಸ್ಸು ಮಾಡುತ್ತಿದೆ).
ಯಾರನ್ನು ಕಳೆದ ಎರಡು ವರ್ಷಗಳಿಂದ ವೆಲ್ತ್ ಕ್ರಿಯೆಟರ‍್ಸ್ ಎಂದು ಬಂಡವಳಿಗರನ್ನು ತೆರಿಗೆ ವಿನಾಯಿತಿ ಮೂಲಕ, ತೆರಿಗೆ ರದ್ದು ಮಾಡುವುದರ ಮೂಲಕ ವೈಭವೀಕರಿಸಲಾಗುತ್ತಿತ್ತೋ ಇದನ್ನು ನಿಲ್ಲಿಸಬೇಕು. ಕೋವಿಡ್ ದುರಂತದ ಹಿನ್ನೆಲೆಯಲ್ಲಿ ವರಮಾನ ತೆರಿಗೆ, ಕಾರ್ಪೋರೇಟ್ ತೆರಿಗೆ ಮುಂತಾದ ಪ್ರತ್ಯಕ್ಷ ತೆರಿಗೆ ದರಗಳನ್ನು ಹೆಚ್ಚಿಸಬೇಕು.
ಈ.ಎಸ್.ಟಿಯನ್ನು ಇನ್ನಿಲ್ಲದಂತೆ ಕ್ರಾಂತಿಕಾರಕ ಎಂದು ಬಣ್ಣಿಸಿದ್ದು ಸಾಕು. ಈ ತೆರಿಗೆಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ದರಗಳನ್ನು ಕೆಳಮಟ್ಟದಲ್ಲಿ ಇಟ್ಟುಕೊಳ್ಳಬೇಕು. ಜಿಎಸ್‌ಟಿಯಲ್ಲಿ ರಾಜ್ಯಗಳ ಪಾಲನ್ನು ಕಾಲಬದ್ಧವಾಗಿ ರಾಜ್ಯಗಳಿಗೆ ನೀಡಬೇಕು. ಏಕೆಂದರೆ ಇದು ಅಪ್ರತ್ಯಕ್ಷ-ಬಡವರ ಮೇಲಿನ ತೆರಿಗೆ.
ಕಳೆದ ೫-೬ ವರ್ಷಗಳಿಂದ ನಮ್ಮ ಸಂವಿಧಾನದ ಅಭಿಜಾತ ಸ್ವರೂಪವಾದ ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸಲಾಗುತ್ತಿದೆ. ಜಿ.ಎಸ್.ಟಿ, ಬ್ಯಾಂಕುಗಳ ವಿಲೀನ ಕ್ರಮ, ೧೫ನೆಯ ಹಣಕಾಸು ಆಯೋಗದ ವಿಕೃತ ಶಿಫಾರಸ್ಸುಗಳು, ಸಂವಿಧಾನಾತ್ಮಕ ಸಂಸ್ಥೆಗಳ ಸ್ವಾಯತ್ತತೆಯ ಮೇಲಿನ ಆಕ್ರಮಣ ಮುಂತಾದವು ಇದಕ್ಕೆ ನಿದರ್ಶನಗಳು. ಜನರ ಕಷ್ಟಕಾರ್ಪಣ್ಯಗಳನ್ನು ನೇರವಾಗಿ ಎದುರಿಸುವುದು ಹಾಗೂ ನಿವಾರಿಸಬೇಕಾದುದು ರಾಜ್ಯ ಸರ್ಕಾರಗಳು. ಇಂತಹ ರಾಜ್ಯ ಸರ್ಕಾರಗಳ ಸ್ವಾಯತ್ತತೆಯನ್ನು ಕೇಂದ್ರವು ದಮನ ಮಾಡುತ್ತಿದೆ. ಇದು ನಿಲ್ಲಬೇಕು. ರಾಜ್ಯಗಳ ಅಧಿಕಾರವನ್ನು ಸಂವಿಧಾನಬದ್ಧವಾಗಿ ಬಲಪಡಿಸಬೇಕು.
ಎರಡು ವರ್ಷಗಳ ಹಿಂದೆ ಆರ್.ಬಿ.ಐ ಬಳಿಯಿದ್ದ ಬಂಡವಾಳವನ್ನು(ಸುಮಾರು ರೂ. ೯೦೦೦೦ ಕೊಟಿ) ಬಳಿದುಕೊಂಡು ಕೇಂದ್ರವು ನುಂಗಿಬಿಟ್ಟಿತು. ಅದು ಇದ್ದಿದ್ದರೆ ಇಂದು ನಾವು ಎದುರಿಸುತ್ತಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ನೆರವಿಗೆ ದೊರೆಯುತ್ತಿತ್ತು.
ಸಮಸ್ಯೆಯಲ್ಲದ ಸಮಸ್ಯೆಗಳನ್ನುಸಮಸ್ಯೆಗಳನ್ನಾಗಿ ಸೃಷ್ಟಿಸಿ ಮುಗ್ದ ಜನರ ಬದುಕನ್ನು, ಸಮಾಜದ ಆರೋಗ್ಯವನ್ನು ಹಾಳುಗೆಡವುದನ್ನು ಕೇಂದ್ರ ನಿಲ್ಲಿಸಬೇಕು.
ʻದುಡಿಮೆಗಾರರ ಭಾರತವೇ ನಿಜವಾದ ಭಾರತ’ ಎನ್ನುವುದನ್ನು ಮನದಟ್ಟು ಮಾಡಿಕೊಂಡು ಬಂಡವಳಿಗರ(ಸುಡೋ ವೆಲ್ತ್ ಕ್ರಿಯೆಟರ‍್ಸ್‌ಗಳ) ವೈಭವೀಕರಣವನ್ನು ನಿಲ್ಲಿಸಬೇಕು.
ಸಾಂಕೇತಿಕ ಕ್ರಮಗಳಿಂದ ಕರೋನಾವನ್ನಾಗಲಿ ಅಥವಾ ಆರ್ಥಿಕ ದುರಂತವನ್ನಾಗಲಿ ತಡೆಯುವುದು-ಪರಿಹರಿಸುವುದು ಸಾಧ್ಯವಿಲ್ಲ. ಬಡವರ ಸಿಟ್ಟು ರಟ್ಟೆಗೆ ಬರುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಆರ್ಥಿಕ ಪುನಶ್ಚೇತನ ಹಾಗೂ ಕೋವಿಡ್ ಪರಿಹಾರದ ಬಗ್ಗೆ ವಾರ್‌ರೂಮ್ ಮೂಲಕ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಲೇಬರ್ ಕೋಡ್ ಕ್ರಮಗಳ ಅನುಷ್ಠಾನವನ್ನು ತಡೆಹಿಡಿದು ಕಾರ್ಮಿಕ ಸಂಘಟನೆಗಳ ಶೋಷಣೆಯನ್ನು ಸರ್ಕಾರ ನಿಲ್ಲಿಸಬೇಕು. ಲೇಬರ್ ಕೋಡ್ ಅನುಷ್ಠಾನದ ಸಮಯ ಇದಲ್ಲ.
ಕೋವಿಡ್ ದುರಂತದಿಂದಾಗಿ ’ಹಸಿವು’ ಬ್ರಹ್ಮರಾಕ್ಷಸದಂತೆ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಇದನ್ನು ಎದುರಿಸುವುದು-ನಿವಾರಿಸುವುದು ನಮಗೆ ಆದ್ಯತೆಯ ಸಂಗತಿಯಾಗಬೇಕು. ಹಸಿವನ್ನು ನಿವಾರಿಸಿದ್ದೇವೆ ಎಂಬ ಒಳಜಂಬದ ಮಾತುಗಳನ್ನು ನಿಲ್ಲಿಸಬೇಕು. ನಮ್ಮದು ರೂ.೨೨೪.೮೯ ಲಕ್ಷ ಕೋಟಿ ಜಿಡಿಪಿಯ ಆರ್ಥಿಕತೆ. ನಮ್ಮ ೨೦೨೦-೨೦೨೧ರ ಬಜೆಟ್ ಗಾತ್ರ ರೂ.೩೦.೪೨ ಲಕ್ಷ ಕೋಟಿ. ಇಂತಹ ಭಾರತಕ್ಕೆ ಸರಿಸುಮಾರು ರೂ. ೫ ಲಕ್ಷ ಕೋಟಿ ಗಾತ್ರದ ’ದುಡಿಮೆಗಾರ ಭಾರತ’ದ ರಕ್ಷಣೆಗೆ ಪ್ಯಾಕೇಜ್ ಕೈಗೊಳ್ಳುವುದು ನಮಗೆ ಕಷ್ಟವಾಗಬಾರದು.