ಮಳವಳ್ಳಿ : ಬಗರ್ ಹುಕುಂ ಸಾಗುವಳಿ ದಾರರಿಗೆ ಹಕ್ಕುಪತ್ರಕ್ಕಾಗಿ, ಲೀಟರ್ ಹಾಲಿಗೆ 30 ರೂ ಬೆಲೆ ನಿಗದಿಗಾಗಿ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ತಡೆಗಟ್ಟಲು ಜಾನುವಾರು ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ವಿರೋಧಿಸಿ, ಟನ್ ಕಬ್ಬಿಗೆ 4000 ರೂ ಬೆಲೆ ನಿಗದಿಗಾಗಿ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಮಳವಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
KSRTC ಬಸ್ ನಿಲ್ದಾಣದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಛೇರಿ ಮುಂದೆ ಜಮಾವಣೆಗೊಂಡು ರೈತ ವಿರೋಧಿ ಕೃಷಿ ನೀತಿಗಳ ಜಾರಿಗೆ ತಂದಿರುವ ಕೇಂದ್ರ ರಾಜ್ಯ ಸರ್ಕಾರಗಳ ವಿರುದ್ದ ಧಿಕ್ಕಾರ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಮಾತನಾಡುತ್ತಾ 60- 70 ವರ್ಷಗಳಿಂದ ಬಗರ್ ಹುಕುಂ ಸಾಗುವಳಿದಾರರು ತಮ್ಮ ರಕ್ತ ಬೆವರನ್ನು ಸುರಿಸಿ ಭೂಮಿಯಲ್ಲಿ ಬೀಜ ಬಿತ್ತಿ ದೇಶಕ್ಕೆ ಅನ್ನ ಹಾಕುತ್ತ ತಾನು ಜೀವನ ನಡೆಸುತ್ತಿದ್ದಾನೆ. ಎರಡು ಮೂರು ತಲೆಮಾರುಗಳು ಕಳೆದರೂ ಇನ್ನೂ ಸಹ ಆ ಬಡ ರೈತರಿಗೆ ಹಕ್ಕುಪತ್ರ ನೀಡದಿರುವುದು ಖಂಡನೀಯ. ಕಾಡಂಚಿನ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳು ರೈತರ ಬೆಳೆಗಳನ್ನು ಹಾಳು ಮಾಡಿದಾಗ ಅವರಿಗೆ ಸೂಕ್ತ ಪರಿಹಾರ ಇಲ್ಲ ಮತ್ತು ದುಷ್ಟ ಪ್ರಾಣಿಗಳಿಂದ ರೈತರು ಜೀವಭಯದಲ್ಲಿ ಬದುಕುತಿದ್ದಾರೆ. ಹಾಲು ಉತ್ಪಾದನೆ ಮಾಡುವ ರೈತರಿಗೆ ನೀರಿನ ಬೆಲೆಯು ಸಿಗುತ್ತಿಲ್ಲ ಆದರೆ ಆಡಳಿತ ಮಂಡಳಿ ಅಧಿಕಾರಿ ವರ್ಗ ಹಾಲಿನ ಹೆಸರಿನಲ್ಲಿ ಕೋಟಿ ಕೋಟಿ ತಿಂದು ನೀರು ಕುಡಿಯುತ್ತಿದ್ದಾರೆ ಎಂದು ಆರೋಪಿಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ 200 ದಿನಗಳ ಕಾಲ ಕೆಲಸ ನೀಡಬೇಕು ಮತ್ತು ದಿನಕ್ಕೆ ಐದು ನೂರು ರೂಪಾಯಿ ಕೂಲಿ ನೀಡಬೇಕು. ಹೈನುಗಾರಿಕೆ ಚರ್ಮೋದ್ಯಮ ಮಾಂಸೋದ್ಯಮ ಔಷಧೋದ್ಯಮ ವಿರೋಧಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಮಾಡಬೇಕು. ಖರೀದಿಸಿರುವ ಭತ್ತದ ಹಣವನ್ನು ಶೀಘ್ರವಾಗಿ ಪಾವತಿ ಮಾಡಬೇಕು. ರೈತರು ಕೂಲಿಕಾರರು ದಲಿತರು ಮಹಿಳೆಯರು ಎಲ್ಲಾ ರೀತಿಯ ಸಾಲ ಮನ್ನಾ ಮಾಡಿ ಜೀವನ ರೂಪಿಸಿಕೊಳ್ಳಲು ಹೊಸ ಸಾಲ ನೀಡಬೇಕು. ಕಾಡು ಪ್ರಾಣಿಗಳಿಂದ ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ವೈಜ್ಞಾನಿಕ ಪರಿಹಾರ ಕೊಡಬೇಕು. ಎಲ್ಲಾ ಕೃಷಿ ಉತ್ಪಾನ್ನಗಳಿಗೆ ಉತ್ಪಾದನಾ ವೆಚ್ಚದ ಜೊತೆಗೆ ಶೇ.50ರಷ್ಟು ಲಾಭಾಂಶವನ್ನು ಸೇರಿಸಿ ಬೆಂಬಲ ಬೆಲೆ ನಿಗದಿ ಪಡಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.
ಬೇಡಿಕೆಗಳ ಈಡೇರಿಕೆಗಾಗಿ ತಹಸೀಲ್ದಾರ್ ವಿಜಯಣ್ಣ, ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಅಸೀಫ್ ಅಹಮದ್ ಮನ್ ಮುಲ್, ಉಪ ವ್ಯವಸ್ಥಾಪಕರಾದ ನೂತನ್ ಚೇಸ್ಕಾಂ ,ಅಧಿಕಾರಿಗಳಾದ ಪ್ರೇಮ್ ಕುಮಾರ್, ಮಂಜುನಾಥ್ ಚಾಮುಂಡೇಶ್ವರಿ ಸಕ್ಕರೆ ಕಂಪನಿಯ ಹಿರಿಯ ವ್ಯಾವಸ್ಥಾಪಕರಾದ ಮಹದೇವ್ ಪ್ರಭು ರವರಿಗೆ ಮನವಿ ಸಲ್ಲಿಸಿ ಸಂಬಂಧಪಟ್ಟ ವಿಷಯಗಳ ಆಧಾರದ ಮೇಲೆ ಚರ್ಚಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಎನ್ ಲಿಂಗರಾಜಮೂರ್ತಿ ಆನಂದ್, ಜವರಯ್ಯ ಮಹದೇವು, ಶಿವಕುಮಾರ್ ಆನಂದ ಸ್ವಾಮಿ, ರವಿ ಮತ್ತು ರಾಜ್ ಶಿವಮಾದು, ಶಂಕರ್ ಚಿಕ್ಕಮೊಗಣ್ಣ, ತಿಮ್ಮೇಗೌಡ ಶಾಂತರಾಜ್ ಸಿದ್ದೇಗೌಡ ಪುಟ್ಟಣ್ಣ, ಶಿವಣ್ಣ, ಸಿದ್ದರಾಜು, ಜಯಲಕ್ಷ್ಮಿ, ಮಂಜುಳಾ, ನಾಗಮಣಿ, ಸುನಂದಮ್ಮ ಮುಂತಾದವರು ಭಾಗವಹಿಸಿದ್ದರು.