ಬಂಡವಾಳವಾದವೆಂಬ ಕೊರೋನಾಜಾಡ್ಯ

ಪ್ರೊ. ವಿ.ಎನ್.ಲಕ್ಷ್ಮೀನಾರಾಯಣ

ಯುದ್ಧ, ಮತ್ತು ಅನಾಹುತಗಳ ಪರಿಸ್ಥಿತಿಗಳನ್ನು ಸೃಷ್ಟಿಸಿ ಅವುಗಳ ತೆಕ್ಕೆಗೆ ಜನರನ್ನು ಏಕಾಏಕಿ ಬೀಳಿಸಿ, ಭಯಗ್ರಸ್ತರನ್ನಾಗಿಸಿ, ಅಂಥ ದಿಗ್ಮೂಢ ಸ್ಥಿತಿಯಲ್ಲಿ, ಸಾಧಾರಣ ಪರಿಸ್ಥಿತಿಗಳಲ್ಲಿ ಜಾರಿಗೊಳಿಸಲಾಗದಂಥ ಜನವಿರೋಧೀ ನೀತಿಗಳನ್ನು, ಅಭಿವೃದ್ಧಿಯ ಹೆಸರಿನಲ್ಲಿ ಜಾರಿಗೊಳಿಸುವುದು ಬಂಡವಾಳಶಾಹಿ ಸರ್ಕಾರಗಳು ಬಳಸುವ ಮತ್ತೊಂದು ತಂತ್ರ. ಇದನ್ನೇ ನೋಮೀ ಕ್ಲೀನ್ ‘ಷಾಕ್ ಡಾಕ್ಟ್ರಿನ್’ ಎಂದು ಕರೆದಿದ್ದಾರೆ. ಈಗ ರಾಷ್ಟ್ರೀಯತೆ, ತಾತ್ವಿಕತೆ, ವರ್ಗ, ಜಾತಿ-ಮತಗಳ ಭೇದಗಳನ್ನು ಮೀರಿ ಜಾಗತಿಕವಾಗಿ ಹರಡುತ್ತಿರುವ ಕೋವಿಡ್ ತಾನೇ ‘ಒಂದು ದೊಡ್ಡ ನೈಸರ್ಗಿಕ ಷಾಕ್’ ಎನ್ನುತ್ತಾರೆ, ನೋಮಿ ಕ್ಲೀನ್. ಆದರೆ, ಇಂಥ ನೈಸರ್ಗಿಕ ಅನಾಹುತಗಳನ್ನೂ ಸಹ ತಮ್ಮ ಫ್ಯಾಸಿಸ್ಟ್-ಬಲಪಂಥೀಯ ಉದ್ದೇಶಗಳನ್ನು ಸಾಧಿಸಲು ‘ಷಾಕ್ ಡಾಕ್ಟ್ರಿನ್’ ವ್ಯೂಹವಾಗಿ ಬಂಡವಾಳಶಾಹಿಗಳು ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇದು ‘ಕೊರೋನಾ ಕ್ಯಾಪಿಟಲಿಸಂ’ ಆಗಿದೆ ಎಂದು ನೋಮಿ ಕ್ಲೀನ್ ಹೇಳುತ್ತಾರೆ.

ಸಂಘಪರಿವಾರದ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ, ತನ್ನ ಜನವಿರೋಧಿ ನೀತಿಗಳನ್ನು ನಾಲ್ಕು ವಿಧಾನಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಅವೆಂದರೆ, ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಖಾಸಗೀಕರಣ, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ಡಿಜಿಟಲೀಕರಣ, ಎಲ್ಲ ಸ್ತರಗಳಲ್ಲಿನ ಅಧಿಕಾರದ ಕೇಂದ್ರೀಕರಣ ಮತ್ತು ಎಲ್ಲ ಸಾಂವಿಧಾನಿಕ ಸಂಸ್ಥೆಗಳ ಕೇಸರೀಕರಣ. ಕೋವಿಡ್ ರೋಗದ ವಿರುದ್ಧ ಪ್ರಕಟಿಸಲಾಗುತ್ತಿರುವ ಪರಿಹಾರ ಕಾರ್ಯಗಳ ಹಿಂದೆಯೂ ಸಹ ಈ ನಾಲ್ಕೂ ವಿಧಾನಗಳ ಬಳಕೆ ಎದ್ದು ಕಾಣುತ್ತದೆ.

ಜಾಗತಿಕವಾಗಿ ಹರಡುತ್ತಿರುವ ನವಕೊರೋನಾ ವೈರಸ್ 19, ನಾಲ್ಕು ಪ್ರಧಾನ ನೆಲೆಗಳಲ್ಲಿ ಭಾರತದ ಜನಸಮುದಾಯವನ್ನು ಬಾಧಿಸುತ್ತಿದೆ.

  1. ಈಗಾಗಲೇ ವೈರಸ್‌ನಿಂದ ಬಾಧಿತರಾಗಿ ಆಸ್ಪತ್ರೆ ಸೇರಿ ವಿವಿಧ ಹಂತಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು.

2. ತಮಗೆಲ್ಲಿ ಅಂಟುತ್ತದೋ ಎಂದು ಭಯಭೀತರಾಗಿ, ಸುದ್ದಿಮಾಧ್ಯಮಗಳ ವ್ಯಾಪಾರಿಗಳು ಒದಗಿಸುವ, ಊಹಾಪೋಹಗಳು, ಭಯರಂಜನೆ ಮತ್ತು ಸಾಮಾಜಿಕ ಜಾಲತಾಣಗಳ ಜಾಲದಲ್ಲಿ ಹರಡುವ ರೋಚಕ ಸುದ್ದಿಗಳು, ಗುಲ್ಲು ಮತ್ತು ಸಂದೇಶಗಳ ವಿನಿಮಯದಲ್ಲಿ ಮುಳುಗೇಳುತ್ತಾ ಕಾಲಹಾಕುತ್ತಿರುವ ಮಧ್ಯಮವರ್ಗೀಯ ಜನರು.

3. ಕರ್ತವ್ಯನಿರತರಾಗಿ ಆರೋಗ್ಯ ಮತ್ತು ಕಾನೂನು ಪಾಲನೆಗಳಲ್ಲಿ ತೊಡಗಿಸಿಕೊಂಡು ಭಯ-ಸಾಂಕ್ರಾಮಿಕಗಳ ಮಧ್ಯೆಯೇ ಹಗಲಿರುಳೂ ದುಡಿಯುತ್ತಿರುವ ಸಾಮಾನ್ಯ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಸೇವಾ ಸಿಬ್ಬಂದಿ ಮತ್ತು ರಕ್ಷಣಾ ಸಿಬ್ಬಂದಿ.

4. ಜನಹಿತದೃಷ್ಟಿ, ವಿವೇಕ, ದೂರಗಾಮಿ ಪರಿಣಾಮಗಳ ಅರಿವಿನ ಅಭಾವದಿಂದ ನರಳುತ್ತಿರುವ ಅಧಿಕಾರಸ್ಥರು ಅಗತ್ಯವಾದ ಪೂರ್ವಸಿದ್ಧತೆಗಳಿಲ್ಲದೆ ಏಕಾಏಕಿ ಹೇರುತ್ತಿರುವ ಕಠಿಣ ಕ್ರಮಗಳಿಂದಾಗಿ ಬದುಕುವ ದಾರಿಗಳೇ ಬಂದಾಗಿರುವ ಬಡಜನರು. ಕೋವಿಡ್ ಜಾಡ್ಯ ತರಬಹುದಾದ ಅಕಾಲಿಕ ಮರಣ, ಹಸಿವಿನಿಂದ ಬರಬಹುದಾದ ದಾರುಣ ಸಾವು ಇವುಗಳಲ್ಲಿ ಯಾವುದು ಮೊದಲೋ ಎಂದು ಪರಿತಪಿಸುತ್ತಿರುವ ನಿರ್ಗತಿಕರು, ಉದ್ಯೋಗಹೀನರು, ನಿರುದ್ಯೋಗಿಗಳು ಮತ್ತು ಅವರನ್ನು ನಂಬಿದ ಅಸಹಾಯ ಕುಟುಂಬಗಳು.

ಇವರೆಲ್ಲರೂ ಒಂದಲ್ಲ ಒಂದು ರೀತಿಗಳಲ್ಲಿ ಎಲ್ಲರ ದೃಷ್ಟಿಗೂ ಬೀಳುವವರು. ಆದರೆ ಇವರೆಲ್ಲರ ಮಧ್ಯೆ ಇದ್ದೂ, ನವಕೋವಿಡ್ ನಂತೆ ಅಗೋಚರವಾಗಿರುವ, ಭವಿಷ್ಯತ್ತಿನ ಭವ್ಯ ಭಾರತದಲ್ಲಿ ಪಡೆಯಬಹುದಾದ ರಾಜಕೀಯ ಮತ್ತು ಆರ್ಥಿಕ ಲಾಭಗಳ ಬಗ್ಗೆ ಲೆಕ್ಕ ಹಾಕುತ್ತಿರುವ ವಿಶೇಷ ಬಗೆಯ ಜನರಿದ್ದಾರೆ. ಅವರೇ, ಕಾರ್ಪೊರೇಟ್ ಉದ್ಯಮಿಗಳು ಮತ್ತು ಧರ್ಮೋದ್ಯಮದ ಮುಖಂಡರು. ಇವರು ಎಲ್ಲರ ಗಮನಕ್ಕೂ ಸುಲಭವಾಗಿ ಬಾರದವರು.

ದುಡಿಯುವ ಜನರಿಂದ ವರ್ಷವೆಲ್ಲಾ ಕೊಳ್ಳೆಹೊಡೆದ ಸಂಪತ್ತಿನ ರಾಶಿಯ ನಗಣ್ಯ ಭಾಗವನ್ನು ದೇಣಿಗೆಯೆಂದು ಕೂಗಿ ಹೇಳುವ ಪ್ರಕಟಣೆಗಳಿಂದ ಅವರ ಇರವನ್ನು ಗುರುತಿಸಬಹುದೇ ಹೊರತು ಬೇರಾವ ರೀತಿಗಳಲ್ಲೂ ಅವರ ಅಸ್ತಿತ್ವವು ಸಾಮಾನ್ಯ ಜನರ ಗಣನೆಗೆ ಬರುವುದಿಲ್ಲ.

ಸಾಮಾನ್ಯ ಜನರು ಕಷ್ಟ ಬಂದಾಗ ದೇವರನ್ನು ನೆನೆಯುತ್ತಾರೆ. ಕಾರ್ಪೋರೇಟ್ ಉದ್ಯಮಿಗಳು, ಬಂಡವಾಳವನ್ನು ನೆನೆಯುತ್ತಾರೆ. ಅವರಿಗೆ ಬಂಡವಾಳವೇ ದೇವರು. ವ್ಯಾಪಾರವೇ ಪೂಜೆ. ಕಾರ್ಮಿಕರೇ ಬಲಿಪಶುಗಳು. ಲಾಭವೇ ಪ್ರಸಾದ. ಧಾರ್ಮಿಕ ಮುಖಂಡರು ಮತ್ತು ಅಧಿಕಾರಸ್ಥರು ಬಂಡವಾಳದ ಪೂಜಾರಿಗಳು.

ಸಾಮಾನ್ಯ ಜನರ ಕಷ್ಟಗಳು ಕಾರ್ಪೋರೇಟ್ ಬಂಡವಳಿಗರಿಗೆ ಲಾಭಾವಕಾಶಗಳು. ಮಳೆ ಕಮ್ಮಿಯಾದರೆ ರೈತರಿಗೆ ಬೆಳೆ ಒಣಗುವ ಚಿಂತೆ. ಬಂಡವಳಿಗರಿಗೆ ಎಲ್ಲೆಲ್ಲಿ ಎಷ್ಟೆಷ್ಟು, ಹೊಸ ಮಿನರಲ್ ವಾಟರ್ ಪ್ಲಾಂಟ್‌ಗಳನ್ನು ಹಾಕಬಹುದೆಂಬ ಹಂಚಿಕೆ. ಆಡಳಿತಗಾರರ ಜನವಿರೋಧೀ ನೀತಿಗಳಾಗಿರಲಿ ಅಥವಾ ನೈಸರ್ಗಿಕ ಅನಾಹುತಗಳಾಗಿರಲಿ ಬಂಡವಳಿಗರ ಪಾಲಿಗೆ ತಮ್ಮ ಲಾಭದ ಹಾಲು ಕರೆಯಬಲ್ಲ ಕಾಮಧೇನುಗಳು. ‘ಬರ ಎಂದರೆ ಎಲ್ಲರಿಗೂ ಇಷ್ಟ’ ಎಂದು ಸಾಯಿನಾಥ್ ಹೇಳಿದ್ದು ಇದನ್ನೇ. ಇಂಥ ಪರಿಸ್ಥಿತಿಗಳಲ್ಲೇ, ಕಾರ್ಪೊರೇಟ್ ಉದ್ಯಮಿಗಳು ದೇಶೀಯ ಸರ್ಕಾರಗಳ ಸಹಯೋಗದಲ್ಲಿ ತೀವ್ರತರವಾದ ಜನವಿರೋಧೀ ಆರ್ಥಿಕ-ರಾಜಕೀಯ ಕ್ರಮಗಳನ್ನು ವ್ಯವಸ್ಥೆಯೊಳಕ್ಕೆ ನುಗ್ಗಿಸುವುದು. ಕೆನಡಾ ಮೂಲದ ಅಮೆರಿಕನ್ ಪತ್ರಕರ್ತೆ ನೋಮಿ ಕ್ಲೀನ್, ಇಂಥ ವ್ಯವಸ್ಥೆಯನ್ನು ‘ಅನಾಹುತದ ಬಂಡವಾಳವಾದ’ (ಡಿಸಾಸ್ಟರ್ ಕ್ಯಾಪಿಟಲಿಸಂ) ಎಂದು ಕರೆದಿದ್ದಾರೆ.

ಜನರ ಹಿತಾಸಕ್ತಿಗಳಿಗೆ ವಿರುದ್ಧವಾದ, ಆದರೆ ಬಂಡವಾಳಶಾಹಿಗಳಿಗೆ ಲಾಭಕರವಾದ ನೀತಿಗಳನ್ನು ಜಾರಿಗೆ ತರುವುದು ಜನರಿಂದಲೇ ಚುನಾಯಿತರಾದ ಅಧಿಕಾರಸ್ಥರಿಗೆ ಹೇಗೆ ಸಾಧ್ಯ?

ತಮ್ಮ ವರ್ಗಹಿತಾಸಕ್ತಿಗಳನ್ನು ರಕ್ಷಿಸುವ ತಪ್ಪು ನೀತಿಗಳಿಂದಾಗಿ, ಆರ್ಥಿಕ ಬಿಕ್ಕಟ್ಟುಗಳು ಎದುರಾದಾಗ, ಜನರನ್ನು ಮರುಳುಮಾಡುವ ಅಭಿವೃದ್ಧಿ ಮಂತ್ರಗಳನ್ನು ಬಳಸಿ ಜನಘಾತುಕ ಕ್ರಮಗಳಿಗೆ ಜನರ ಸಮ್ಮತಿಯನ್ನು ಪಡೆಯುವುದು ಮಾಮೂಲಿ ಕ್ರಮ.
ಶತ್ರುವಿನ ಆಕ್ರಮಣದ ಭಯ ಹುಟ್ಟಿಸಿ ಯುದ್ಧರೀತಿಯ ಬಿಕ್ಕಟ್ಟನ್ನು ಸೃಷ್ಟಿಸಿ ದೇಶಪ್ರೇಮದ ಹೆಸರಿನಲ್ಲಿ ವ್ಯಾಪಾರಿಗಳ ಹಿತಾಸಕ್ತಿಗಳನ್ನು ಪೂರೈಸುವಂತೆ ಜನಸಾಮಾನ್ಯರನ್ನು ಸಜ್ಜುಗೊಳಿಸುವುದು ವಿಶೇಷ ಕ್ರಮ.

ಯುದ್ಧ, ಮತ್ತು ಅನಾಹುತಗಳ ಪರಿಸ್ಥಿತಿಗಳನ್ನು ಸೃಷ್ಟಿಸಿ ಅವುಗಳ ತೆಕ್ಕೆಗೆ ಜನರನ್ನು ಏಕಾಏಕಿ ಬೀಳಿಸಿ, ಭಯಗ್ರಸ್ತರನ್ನಾಗಿಸಿ, ಅಂಥ ದಿಗ್ಮೂಢ ಸ್ಥಿತಿಯಲ್ಲಿ, ಸಾಧಾರಣ ಪರಿಸ್ಥಿತಿಗಳಲ್ಲಿ ಜಾರಿಗೊಳಿಸಲಾಗದಂಥ ಜನವಿರೋಧೀ ನೀತಿಗಳನ್ನು, ಅಭಿವೃದ್ಧಿಯ ಹೆಸರಿನಲ್ಲಿ ಜಾರಿಗೊಳಿಸುವುದು ಬಂಡವಾಳಶಾಹಿ ಸರ್ಕಾರಗಳು ಬಳಸುವ ಮತ್ತೊಂದು ತಂತ್ರ. ಇದನ್ನೇ ನೋಮೀ ಕ್ಲೀನ್ ‘ಷಾಕ್ ಡಾಕ್ಟ್ರೀನ್’ ಎಂದು ಕರೆದಿದ್ದಾರೆ.

ಕಾಂಬೋಡಿಯಾ, ಚಿಲಿ, ಪೋಲೆಂಡ್, ಇರಾಕ್, ಆಫ್ಘಾನಿಸ್ತಾನ, ದಕ್ಷಿಣ ಆಫ್ರಿಕ ಮುಂತಾದ ದೇಶಗಳಲ್ಲಿ ಯುದ್ಧಗಳ ಮೂಲಕ ಆರ್ಥಿಕ ಉದಾರವಾದವನ್ನು ನುಗ್ಗಿಸಿದ್ದು ಈ ತಂತ್ರವನ್ನು ಬಳಸಿಯೇ. ಈ ತಂತ್ರಕ್ಕೆ ಆಧಾರ, ಮನುಷ್ಯ ಪ್ರಜ್ಞೆಯ ಮೇಲೆ ಕ್ಯಾಮರಾನ್ ಎಂಬ ವಿಜ್ಞಾನಿ ನಡೆಸಿದ ವಿಸ್ಮೃತಿ-ಸ್ಮೃತಿ ಸಂಬಂಧದ, ಸಿಐಎ ಪ್ರಾಯೋಜಿತ ಪ್ರಯೋಗಗಳು ಮತ್ತು ಬಂಡವಾಳಶಾಹೀ ಪದ್ಧತಿಯ ಸಮರ್ಥಕನಾಗಿ ಮಿಲ್ಟನ್ ಫ್ರೀಡ್‌ಮನ್ ಪ್ರತಿಪಾದಿಸಿದ ನೀತಿ-ತಂತ್ರಗಳು. ಇವುಗಳಲ್ಲಿ, ಆರ್ಥಿಕ ಬೇಹುಗಾರಿಕೆ, ವ್ಯೂಹಾತ್ಮಕ ತಂತ್ರಗಳು, ರಹಸ್ಯ ಮಿಲಿಟರಿ ಯೋಜನೆ- ಸೈನಿಕಕಾರ್ಯಾಚರಣೆ ಪೂರ್ಣರೂಪದ ಆಕ್ರಮಣಕಾರಿ ಯುದ್ಧ, ಎಲ್ಲವೂ ಸೇರಿವೆ.

ಜನಸಾಮಾನ್ಯರ ಪಾಲಿಗೆ ‘ನವಕೊರೋನಾ ವೈರಸ್ 19 ಹುಟ್ಟಿಸಿರುವ ನರಳಿಕೆಗಳು ಚೀನಾ ಮತ್ತು ಅಮೆರಿಕಾ ದೇಶಗಳ ನಡುವೆ ನಡೆಯುತ್ತಿರುವ ‘ವ್ಯಾಪಾರ ಯುದ್ಧದ’ ಭಾಗವಾಗಿ, ಉದ್ದೇಶಪೂರ್ವಕವಾಗಿ ಬಳಸಿರುವ, ‘ಮಾನವ ನಿರ್ಮಿತ ಜೈವಿಕ ಅಸ್ತ್ರ’ದ ಸಂಚುಗಳೆಂದು ಆರೋಪಿಸುವವರು, ವಾದಿಸುವವರು ಎರಡೂ ದೇಶಗಳ ಪರ-ವಿರೋಧದ ಎರಡು ಬಣಗಳಲ್ಲೂ ಇದ್ದಾರೆ.

ಆದರೆ ಕೊರೋನಾ ಸಾಂಕ್ರಾಮಿಕವು ಕಾಣಿಸಿಕೊಂಡು ಹರಡುತ್ತಿರುವುದರ ಹಿಂದೆ ಅಂಥ ಯಾವ ಸಂಚುಗಳೂ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ವಿಜ್ಞಾನಿಗಳು, ವೈಚಾರಿಕರು ಪದೇ ಪದೇ ಹೇಳುತ್ತಲೇ ಇದ್ದಾರೆ. ಈಗ ರಾಷ್ಟ್ರೀಯತೆ, ತಾತ್ವಿಕತೆ, ವರ್ಗ, ಜಾತಿ-ಮತಗಳ ಭೇದಗಳನ್ನು ಮೀರಿ ಜಾಗತಿಕವಾಗಿ ಹರಡುತ್ತಿರುವ ಕೋವಿಡ್ ತಾನೇ ‘ಒಂದು ದೊಡ್ಡ ನೈಸರ್ಗಿಕ ಷಾಕ್’ ಎನ್ನುತ್ತಾರೆ, ನೋಮಿ ಕ್ಲೀನ್. ಆದರೆ, ಇಂಥ ನೈಸರ್ಗಿಕ ಅನಾಹುತಗಳನ್ನೂ ಸಹ ತಮ್ಮ ಫ್ಯಾಸಿಸ್ಟ್-ಬಲಪಂಥೀಯ ಉದ್ದೇಶಗಳನ್ನು ಸಾಧಿಸಲು ‘ಷಾಕ್ ಡಾಕ್ಟ್ರೀನ್’ ವ್ಯೂಹವಾಗಿ ಬಂಡವಾಳಶಾಹಿಗಳು ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇದು ‘ಕೊರೋನಾ ಕ್ಯಾಪಿಟಲಿಸಂ’ ಆಗಿದೆ ಎಂದು ನೋಮಿ ಕ್ಲೀನ್ ಹೇಳುತ್ತಾರೆ.

ಕೊರೋನಾ ಪೀಡೆಯು ಸಾಂಕ್ರಾಮಿಕ ವ್ಯಾಧಿಯಾಗಿ ಎಲ್ಲರಿಗೂ ಒಂದೇ ಆಗಿದ್ದರೂ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳಲ್ಲಿ ಶ್ರಮಿಕರಿಗೆ ಮತ್ತು ಬಂಡವಾಳಶಾಹಿಗಳಿಗೆ ಬೇರೆ ಬೇರೆಯಾಗಿದೆ. ಮಧ್ಯಮವರ್ಗಗಳಿಗಿರುವ ಮೂಲ ಸೌಲಭ್ಯಗಳು ಕೆಳವರ್ಗಗಳಿಗೆ ಇಲ್ಲ. ‘ಮನೆಯಲ್ಲೇ ಇರಿ, ಹೊರಗೆ ಬರಬೇಡಿ’ ಎಂಬ ತಾಕೀತು, ಉಳ್ಳವರಿಗೆ ಅನ್ವಯವಾಗುವಂತೆ ಎಲ್ಲೆಲ್ಲಿಂದಲೋ ವಲಸೆ ಬಂದು, ಜೋಪಡಿಗಳಲ್ಲಿ ಹೇಗೋ ಬದುಕುವ ವಸತಿಹೀನರಿಗೆ, ವಲಸೆ ಶ್ರಮಿಕರಿಗೆ ಅನ್ವಯವಾಗುವುದು ಸಾಧ್ಯವಿಲ್ಲ.

‘ಆಹಾರ ಧಾನ್ಯಗಳ ಕೊರತೆ ಇಲ್ಲ, ಜೀವನಾಧಾರ ವಸ್ತುಗಳ ಕೊರತೆಯಿಲ್ಲ, ಹೆದರಬೇಡಿ’ ಎಂಬ ಆಶ್ವಾಸನೆಗಳು, ಭದ್ರ ಆದಾಯ, ಸಂಚಿತ ಹಣ, ಬ್ಯಾಂಕ್ ಖಾತೆ, ಕಾರ್ಡುಗಳನ್ನು ಹೊಂದಿರುವ ಜನರಿಗೆ ಕೊಡುವ ಆರ್ಥಿಕ ಭದ್ರತೆಗಳು, ಅಂದಂದೇ ದುಡಿದು ತಿನ್ನಬೇಕಾದ ಅನಿವಾರ್ಯತೆ ಇರುವ ಬಹುಸಂಖ್ಯಾತ ಕಾರ್ಮಿಕರಿಗೆ, ಬೀದಿಬದಿಯ ವ್ಯಾಪಾರಿಗಳಿಗೆ ಯಾವ ಅರ್ಥವನ್ನೂ ಕೊಡುವುದಿಲ್ಲ. ದೇಶ ವಿದೇಶಗಳಲ್ಲಿ ಅತಂತ್ರರಾಗಿ ಪರಿತಪಿಸುತ್ತಿದ್ದ ಮೇಲು ವರ್ಗದ ಜನರನ್ನು ಕರೆತರಲು ವಿಮಾನಗಳನ್ನು ಒದಗಿಸಿದ ಬಂಡವಾಳವಾದೀ ಸರ್ಕಾರಗಳು, ನೂರಾರು ಮೈಲಿಗಳಾಚೆ ಇರುವ ತಮ್ಮ ಜನರನ್ನು ಸೇರಿಕೊಳ್ಳಲು ಹೆಂಗಸರು-ಮಕ್ಕಳೊಂದಿಗೆ ಕಾಲ್ನಡಿಗೆಯಲ್ಲೇ ಹೊರಟ ಬಡಜನರಿಗೆ ವಿಶೇಷ ರೈಲು-ಬಸ್ಸುಗಳನ್ನು ಓಡಿಸಲು ಹಿಂದೆಗೆದವು.

ಕಾಯಿಲೆ ಹರಡುವ ಭಯ, ಉದ್ಯೋಗಪತಿಗಳ ಸೇವೆ ಮಾಡಲು ಜನರಿರುವುದಿಲ್ಲವೆಂಬ ಆತಂಕಗಳೂ ಸಹ ಆಳುವವರ ಮನುಷ್ಯತ್ವವನ್ನು ಬಡಿದೆಬ್ಬಿಸುವಲ್ಲಿ ವಿಫಲವಾದವು. ಸಾಕಷ್ಟು ವಿವೇಚನೆ-ಮುಂದಾಲೋಚನೆಗಳಿಲ್ಲದೆ ಸಿನಿಮೀಯ ರೀತಿಯಲ್ಲಿ ಘೋಷಿಸಿದ ‘ಲಾಕ್‌ಡೌನ್’ ನಿಂದಾಗಿ ಬೆಳೆದ ಫಸಲನ್ನು ಮಾರುಕಟ್ಟೆಗೆ ಸಾಗಿಸಲಾಗದ ರೈತರು, ಹಸಿವಿನಿಂದ ಕಂಗೆಟ್ಟ ಮಕ್ಕಳು ಪ್ರಾಣ ಕಳೆದುಕೊಳ್ಳಬೇಕಾಯಿತು. ಇವು ಸಾಲದೆಂಬಂತೆ ಐಡಿಯಾಲಜಿ ಮತ್ತು ಧಾರ್ಮಿಕ ಶ್ರದ್ಧೆಗಳ ಸಂಬಂಧದ ದ್ವೇಷ-ಪೂರ್ವಗ್ರಹಗಳನ್ನು ಜನರಮಧ್ಯೆ ಹರಡುವ ಯತ್ನಗಳಲ್ಲಿ ರಾಜಕಾರಣಿಗಳೊಂದಿಗೆ ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಬರಹಗಳು ಕೈಜೋಡಿಸುತ್ತಲೇ ಇವೆ.

ಸಮಾಜವಾದದ ಕೇಂದ್ರದಲ್ಲಿರುವುದೇ ಸಹೋದರತೆ ಸಾರ್ವಜನಿಕ ಹಿತ, ಮತ್ತು ಮಾನವೀಯತೆಗಳು. ಅದರಲ್ಲೂ ಕಷ್ಟಕಾಲದಲ್ಲಿ ಸಹಜವಾಗಿ ವ್ಯಕ್ತವಾಗುವ ಬಂಧುತ್ವ, ಸಹಾನುಕಂಪ, ಮತ್ತು ಸಹಾಯಬುದ್ಧಿಗಳ ಹಿಂದೆ ಸಮುದಾಯದ ಹಿತವಿರುತ್ತದೆಯೇ ಹೊರತು ಲಾಭದೃಷ್ಟಿಯಲ್ಲ. ಆದರೆ, ಬಂಡವಾಳವಾದ ಹಾಗಲ್ಲ. ಖಾಸಗಿತನ, ಸ್ವಾರ್ಥಕೇಂದ್ರಿತ ನೆಮ್ಮದಿ, ಲಾಭಬಡುಕತನವೇ ಬಂಡವಾಳವಾದದ ಎಲ್ಲ ಕ್ರಿಯೆಗಳ ಪರಮಾರ್ಥ. ‘ಬಲಿಷ್ಠರಿಗೇ ಬದುಕುವ ಹಕ್ಕು’ ಎಂಬ ಮೃಗನ್ಯಾಯವನ್ನು ಬದುಕಿನ ತಳಹದಿಯನ್ನಾಗಿ ಬಂಡವಾಳವಾದವು ಮಾಡಿಕೊಂಡಿದೆ. ಇದೇನೂ ಹೊಸದಾಗಿ ಕಂಡುಕೊಂಡ ಸತ್ಯವಲ್ಲ. ಈ ನಗ್ನಸತ್ಯವನ್ನು ಕೋವಿಡ್ ಈಗ ಮತ್ತೊಮ್ಮೆ ಬಯಲುಗೊಳಿಸಿದೆ ಅಷ್ಟೆ.

ಸಂಘಪರಿವಾರದ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ, ತನ್ನ ಜನವಿರೋಧೀ ನೀತಿಗಳನ್ನು ನಾಲ್ಕು ವಿಧಾನಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಅವೆಂದರೆ, ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಖಾಸಗೀಕರಣ, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ಡಿಜಿಟಲೀಕರಣ, ಎಲ್ಲ ಸ್ತರಗಳಲ್ಲಿನ ಅಧಿಕಾರದ ಕೇಂದ್ರೀಕರಣ, ಮತ್ತು ಎಲ್ಲ ಸಾಂವಿಧಾನಿಕ ಸಂಸ್ಥೆಗಳ ಕೇಸರೀಕರಣ. ಕೋವಿಡ್ ರೋಗದ ವಿರುದ್ಧ ಪ್ರಕಟಿಸಲಾಗುತ್ತಿರುವ ಪರಿಹಾರ ಕಾರ್ಯಗಳ ಹಿಂದೆಯೂ ಸಹ ಈ ನಾಲ್ಕೂ ವಿಧಾನಗಳ ಬಳಕೆ ಎದ್ದುಕಾಣುತ್ತದೆ.

ಕೋವಿಡ್ ಜಾಡ್ಯವನ್ನು ಹಿಮ್ಮೆಟ್ಟಿಸುವ ಹೆಸರಿನಲ್ಲಿ ಇಡೀ ದೇಶದ ಬೆನ್ನೆಲುಬಾದ ಕಾರ್ಮಿಕರನ್ನು ಉದ್ದಿಮೆದಾರರ ಮುಂದೆ ಕೈಚಾಚಿ ನಿಂತ ಭಿಕ್ಷುಕರ ಸ್ಥಿತಿಗೆ ಇಳಿಸಲಾಗಿದೆ.
ವಿವಿಧ ರಾಜ್ಯಗಳ ಒಕ್ಕೂಟದ ವ್ಯವಸ್ಥೆಯಾದ ಭಾರತ ಈಗ ಏಕವ್ಯಕ್ತಿಯ ಹಿಡಿತದಲ್ಲಿರುವಂತೆ ಕಾಣಿಸುತ್ತಿದೆ. ರಾಷ್ಟ್ರೀಯ ಸರ್ಕಾರ ಎಂದರೆ ಕೇಂದ್ರದಲ್ಲಿರುವ ಸರ್ಕಾರ ಎಂಬ ಅರ್ಥ ಬರುವಂತಾಗಿದೆ.

ಸಣ್ಣ ಪ್ಯಾಪಾರಿಗಳು ಬಳಸುತ್ತಿದ್ದ ಸಾರ್ವಜನಿಕ ಭೂಮಿ. ಕಟ್ಟಡ ಮತ್ತು ಮಾರುಕಟ್ಟೆ ಮಾಳಗಳನ್ನು ಕೋವಿಡ್ ಸಾಂಕ್ರಾಮಿಕದ ಸಂದರ್ಭವನ್ನು ಬಳಸಿಕೊಂಡು ತೆರವುಗೊಳಿಸಲಾಗುತ್ತಿದೆ.

ನಗರ ಪ್ರದೇಶಗಳಲ್ಲಿ ದುಡಿಯುವ ದಾರಿಗಳೆಲ್ಲವೂ ಮುಚ್ಚಿ ದೊಡ್ಡಪ್ರಮಾಣದಲ್ಲಿ ಸ್ವಗ್ರಾಮಗಳಿಗೆ ಗುಳೇ ಹೊರಟ ವಲಸೆಕಾರ್ಮಿಕರು ತಮ್ಮ ಜೋಪಡಿಗಳನ್ನು ತೆರವುಮಾಡುತ್ತಿದ್ದಂತೆಯೇ ಭೂಮಾಫಿಯಾ ಶಕ್ತಿಗಳು ಆ ಸ್ಥಳಗಳನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ.

ದೇಶದ ಗಂಭೀರ ಸಮಸ್ಯೆಯಾಗಿರುವ, ಬಡತನ, ನಿರುದ್ಯೋಗಗಳು ಈಗ ಕೋವಿಡ್ ಭಯದಲ್ಲಿ ಹೂತುಹೋಗಿದೆ.

ಆರ್ಥಿಕ ಹಿಂಜರಿಕೆ- ಹಣಕಾಸಿನ ಬಿಕ್ಕಟ್ಟುಗಳು, ಹಣದುಬ್ಬರ, ಉದ್ದಿಮೆದಾರರ ಭಾರೀಸಾಲದ ದರೋಡೆಗಳಿಂದಾದ ಬ್ಯಾಂಕುಗಳ ದಿವಾಳಿ, ಉತ್ಪಾದನೆಯ ಕುಸಿತ, ಬೆಲೆಯೇರಿಕೆ, ಹೀಗೆ ಬಂಡವಾಳಶಾಹಿಯ ನೇರ ಪರಿಣಾಮಗಳಾದ ಎಲ್ಲ ಸಮಸ್ಯೆಗಳೂ ಈಗ ಕೋವಿಡ್ ಹೆಸರನ್ನು ಧರಿಸಿಕೊಂಡಿವೆ.

ಇವೆಲ್ಲದರ ಒಟ್ಟು ಪರಿಣಾಮ, ಬಂಡವಾಳಶಾಹಿಯೇ ಜಾಗತಿಕ ಮಟ್ಟದ ಅತ್ಯಂತ ದೊಡ್ಡ ಸಾಂಕ್ರಾಮಿಕ ಜಾಡ್ಯ ಎಂಬ ಸತ್ಯ ಭಯಗ್ರಸ್ತ ಸಮುದಾಯಗಳ ಸಮಷ್ಟಿ ಪ್ರಜ್ಞೆಗೆ ಅರಿವಾಗುತ್ತಿಲ್ಲ. ಸಮಾಜವಾದೀ ಸಂಘಟನೆಗಳು ಪ್ರಗತಿಪರ ಮತ್ತು ಜನಪರವಾದ ಸಂಘಟನೆಗಳೊಂದಿಗೆ ಕೈಗೂಡಿಸಿ ವಸ್ತುಸ್ಥಿತಿಯ ಅರಿವನ್ನು ಮೂಡಿಸದಿದ್ದರೆ, ಜನರ ಬದುಕಿನಲ್ಲಿ ಕೋವಿಡ್ ಸೃಷ್ಟಿಸಿರುವ ದಿಗ್ಮೂಢತೆಯು ಬಂಡವಾಳವಾದ, ಸರ್ವಾಧಿಕಾರ ಮತ್ತು ಫ್ಯಾಸಿಸಂಗಳ ಹೊಸ ರೂಪಗಳ ಹುಟ್ಟಿಗೆ ದಾರಿಮಾಡಿಕೊಡಬಹುದು.

ನವಕೋವಿಡ್‌ಗಿಂತಲೂ ಅನೇಕಪಟ್ಟು ವಿಧ್ವಂಸಕಕಾರಿಯಾದ ನವಆರ್ಥಿಕ ನೀತಿಗಳ ರಾಜಕೀಯವು ದೇಶೀಯವಾಗಿ ಮತ್ತು ಜಾಗತಿಕವಾಗಿ ಜನರನ್ನು ಕಾಡಬಹುದು.

Donate Janashakthi Media

Leave a Reply

Your email address will not be published. Required fields are marked *