ಬಂಡವಾಳವಾದದ ಅಸ್ವಸ್ಥ ಸ್ಥಿತಿ ಮತ್ತು ಸಮಾಜವಾದದ ಅಧಿಕಾರ ಸ್ಥಾಪನೆಯ ಜರೂರು

ಅಸ್ವಸ್ಥ ವ್ಯವಸ್ಥೆಯಾದ ಬಂಡವಾಳಶಾಹಿಯ ವ್ಯಕ್ತಿರೂಪಗಳಾದ ಅಸ್ವಸ್ಥ ಮನಸ್ಸಿನ ಬಂಡವಳಿಗರ ಜೀವನದೃಷ್ಟಿಯನ್ನು ಸ್ವಸ್ಥ, ವೈಚಾರಿಕ, ತಾರ್ಕಿಕ ಮತ್ತು ಆರೋಗ್ಯಕರ ಮನಸ್ಸಿನ ಸಮಾಜವಾದಿ ಜೀವನದೃಷ್ಟಿಗೆ ಉಪದೇಶಗಳಿಂದ, ಹೃದಯ ಪರಿವರ್ತನೆಂದ, ಬದಲಿಸುವುದು ಸಾಧ್ಯವೆ? ಸಾಧ್ಯ ಎಂದಾದರೆ ಹಾಗೆ ಮಾಡುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದೆ. ಹಾಗಿಲ್ಲದಿದ್ದರೆ ಮಾರ್ಕ್ಸ್ ೧೭೦ ವರ್ಷಗಳ ಹಿಂದೆಯೇ ಹೇಳಿದಂತೆ ಬಂಡವಾಳಶಾಹಿಯನ್ನು ಕೆಳಗಿಳಿಸಿ ಅಧಿಕಾರ ಪಡೆಯುವುದೊಂದೆ ಸಮಾಜವಾದದಲ್ಲಿ ನಂಬಿಕೆ ಇರುವ ಎಲ್ಲರಿಗೂ ಈಗ ಉಳಿದಿರುವ ದಾರಿ.

ರಾಷ್ಟ್ರ ಎಂದ ತಕ್ಷಣ ಆಳುವ ವರ್ಗಗಳಿಗೆ ರಾಷ್ಟ್ರಪ್ರೇಮ ಮೇಲೆದ್ದು ಬರುತ್ತದೆ. ರಾಷ್ಟ್ರವನ್ನು ಧಾರ್ಮಿಕವಾಗಿ ಕಲ್ಪಿಸಿಕೊಂಡಾಗ ಇದೇ ರಾಷ್ಟ್ರಭಕ್ತಿ ಆಗುತ್ತದೆ. ಜನರನ್ನು ಹೊರಗಿಟ್ಟ ಗಡಿಗಳೊಳಗಿನ ಭೂಮಿ, ನದಿ, ಬೆಟ್ಟ ಗುಡ್ಡಗಳ ಅಮೂರ್ತ ಚಿತ್ರವು ರಾಷ್ಟ್ರಮಾತೆ ಅಥವಾ ರಾಷ್ಟ್ರಪಿತನ ಪ್ರತೀಕವಾಗುತ್ತದೆ. ನಿಜವಾದ ರಾಷ್ಟ್ರವೆಂದರೆ ಈ ಭೂ ಪ್ರದೇಶದಲ್ಲಿ ವಾಸಿಸುವ ಜನ, ಅವರ ಶ್ರಮಶಕ್ತಿ, ಆ ಪ್ರದೇಶದಲ್ಲಿ ಸಿಗುವ ಖನಿಜ ನಿಕ್ಷೇಪಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳು. ಆದರೆ, ಇವನ್ನು ಬಳಸಿಕೊಂಡು ಶ್ರಮಿಕರ ಶೋಷಣೆ ಮಾಡಿ ಬಂಡವಳಿಗರು ಉತ್ಪಾದಿಸುವ ಸರಕೇ ದೇಶದ ಸಂಪತ್ತು ಎಂದಾಗಿದೆ. ಹಳ್ಳಿ-ಪಟ್ಟಣ-ನಗರಗಳೊಳಗೆ ಸಾರ್ವಜನಿಕರ ಬಳಕೆಗೆ ಸಿಗುವುದು ಮಾತ್ರ ‘ಸಾರ್ವಜನಿಕ ಸಂಪತ್ತು’. ಅದರ ರಕ್ಷಣೆಯ ಹೆಸರಿನಲ್ಲಿ ಬಂಡವಳಿಗರ ಸಂಪತ್ತನ್ನು ಬಡವರಿಂದ ರಕ್ಷಿಸಲು ಪೋಲೀಸ್ ಪಡೆ ಇದೆ. ರಾಷ್ಟ್ರದ, ಅಂದರೆ ಬಂಡವಳಿಗರ ಹಿಡಿತದಲ್ಲಿರುವ ಸಂಪತ್ತನ್ನು ಹೊರಗಿನ ಬಂಡವಳಿಗರಿಂದ ರಕ್ಷಿಸಲು ಸೇನೆ ಮತ್ತು ಅರೆಸೇನಾಪಡೆಗಳಿವೆ. ಪೋಲೀಸ್ ಪಡೆಯಲ್ಲಿ ಪೇದೆ ಎಂದು, ಸೇನಾ ಪಡೆಗಳಲ್ಲಿ ಜವಾನ್ ಎಂದು ಕರೆಯುವ ಬಹುತೇಕ ಯುವಜನರು ಪಟ್ಟಣ ಪ್ರದೇಶಗಳ ಹಾಗೂ ಕುಗ್ರಾಮಗಳ ಬಡವರು. ನಿರುದ್ಯೋಗದ ಕಾರಣಕ್ಕಾಗಿ ಮತ್ತು ದೃಢಕಾಯರಾಗಿರುವುದರಿಂದ ಪೋಲೀಸ್ ಪಡೆಯನ್ನು ಸೇರಿದವರು. ಆರ್ಥಿಕ ಕ್ಷೋಭೆಗಳು ಉಂಟಾದಾಗ, ಅವುಗಳ ಬಿಸಿ ನೇರವಾಗಿ ಶ್ರಮಿಕರಿಗೆ ತಗುಲುತ್ತದೆ. ಅವುಗಳ ವಿರುದ್ಧ ರಾಜಕೀಯ ಆಂದೋಲನಗಳು ನಡೆದಾಗ ಅವುಗಳಲ್ಲಿ ಮುಖ್ಯವಾಗಿ ಭಾಗಿಗಳಾಗುವವರು ಶ್ರಮಿಕರು ಅಂದರೆ ಸಾಮಾನ್ಯ ಜನರು. ಇಂಥ ಕ್ಷೋಭೆಗಳು ಉಂಟಾದಾಗ ಅವುಗಳ ಹಿಂದಿರುವ ಸಮಸ್ಯೆಗಳನ್ನು ಗುರುತಿಸಿ ಅವನ್ನು ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳನ್ನು ಕಳಿಸುವ ಬದಲು ಆಳುವ ವರ್ಗವು ಪೋಲೀಸರನ್ನು ಕಳಿಸುತ್ತದೆ. ಇದರಿಂದ ಸಮವಸ್ತ್ರಧರಿಸಿದ ಬಡಜನರಾದ ಪೋಲೀಸರು, ಸಮವಸ್ತ್ರವಿಲ್ಲದ ಬಡಜನರನ್ನು ಸುವ್ಯವಸ್ಥೆ ಮತ್ತು ಕಾನೂನು ಪಾಲನೆಯ ಹೆಸರಿನಲ್ಲಿ ದಮನ ಮಾಡುವಂತಾಗುತ್ತದೆ. ಪ್ರತಿಭಟನೆಯ ಪ್ರತಿರೋಧವು ತೀವ್ರವಾಗಿ ಪರಿಸ್ಥಿತಿಯು ಪೋಲೀಸರ ಕೈ ಮೀರಿದಾಗ ಅವರಿಗೂ ಶ್ರಮಿಕರಿಗಾಗುವಂತೆಯೇ ಸಾಕಷ್ಟು ತೊಂದರೆಯಾಗುತ್ತದೆ. ಪ್ರತಿಭಟನಕಾರರು ಮತ್ತು ಪೋಲೀಸರು, ಇಬ್ಬರಲ್ಲಿ ಯಾರಿಗೇ ತೊಂದರೆಯಾದರೂ ಒಟ್ಟಿನಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆಯೇ ಹೊರತು ಆಳುವ ವರ್ಗದ ಯಾರಿಗೂ ತೊಂದರೆಯಾಗುವುದಿಲ್ಲ. ಎಷ್ಟೋ ಸಲ ಆಳುವವರ ದೌರ್ಜನ್ಯವನ್ನು ಮರೆಮಾಚಲು ಪೋಲೀಸರನ್ನು ಬಲಿಪಶುಗಳನ್ನಾಗಿ ಮಾಡಿ ದಂಡಿಸಬಹುದು. ಅಲ್ಲದೆ, ಪೋಲೀಸರು ವ್ಯವಸ್ಥೆಯಲ್ಲಿನ ತಮ್ಮ ಸ್ಥಾನದಿಂದಾಗಿ, ಆಳುವ ವರ್ಗದೊಂದಿಗೆ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದಾಗಿ ಜನರಪರ ವಾಗಿಲ್ಲದಂತೆ ಕಾಣಿಸುತ್ತಾರೆ. ಪ್ರಜ್ಞಾಪೂರ್ವಕವಾಗಿ ವ್ಯವಸ್ಥೆಯ ಪರವಾಗಿರುವ ಪೋಲೀಸರಿಗೆ ಪ್ರಶಸ್ತಿ, ಬಹುಮಾನಗಳೂ, ಕಾನೂನಿನ ಸಿಕ್ಕುಗಳಲ್ಲಿ ಸಿಕ್ಕಿಕೊಂಡವರನ್ನು ಅವುಗಳಿಂದ ಪಾರು ಮಾಡಬಲ್ಲಂಥ ಎಲ್ಲ ಕುಟಿಲ, ಧೂರ್ತ ಉಪಾಯಗಳೂ ಆಳುವವರಿಂದ ಸಿಗುತ್ತವೆ.

ಸೇನೆಗಳಲ್ಲಿ ಭರ್ತಿಯಾಗುವ ಯುವಕರೂ ಸಹ ಬಡವರೇ ಮತ್ತು ಜನಸಾಮಾನ್ಯರೇ. ಮಧ್ಯಮ ಮತ್ತು ಕೆಳಮಧ್ಯಮ ವರ್ಗಗಳಿಂದ ಬಂದ ಸುಶಿಕ್ಷಿತ ಯುವಕರು ಸೇನೆಯ ಆಫೀಸರ್ ಹುದ್ದೆಗಳಲ್ಲಿ ಇರುತ್ತಾರೆ. ನಾಡಿನ ಕುಗ್ರಾಮಗಳ ಅಶಿಕ್ಷಿತ, ಅರೆಶಿಕ್ಷಿತ ಬಡ ಕುಟುಂಬಗಳಿಂದ, ಬಂದ ಯುವಕರಲ್ಲಿ ಬಹಳಷ್ಟು ಜನರು ನಿರುದ್ಯೋಗದಿಂದ ಪಾರಾಗುವ ಪ್ರಧಾನ ಉದ್ದೇಶದಿಂದ ಸೇನೆಗೆ ಭರ್ತಿಯಾಗುತ್ತಾರೆ. ಉಳಿದವರು ದೇಶಸೇವೆಯ ನೈಜ ಉದ್ದೇಶವೂ ಸೇರಿದಂತೆ, ಬೇರೆ ಬೇರೆ ಕಾರಣಗಳಿಗಾಗಿ ಸಹ ಸೇನೆಯಲ್ಲಿ ಭರ್ತಿಯಾಗುತ್ತಾರೆ. ಅವರು ದೇಶದ ಹೆಸರಿನಲ್ಲಿ ರಕ್ಷಿಸುವುದು, ದೇಶದ ಬೆನ್ನೆಲುಬಾದ ಶ್ರಮಿಕರು ಮತ್ತು ಶೋಷಿತರ ಹಿತವನ್ನಲ್ಲ, ಶೋಷಕರನ್ನು. ಇದು ಅವರಿಗೆ ತಿಳಿದಿರುವ ಸಂಭವ ತೀರಾ ಕಡಿಮೆ. ನಾನಾ ಬಗೆಯ ಅಪಾಯಗಳಿಗೆ ಎದೆಯೊಡ್ಡಿ, ಅಂಗವಿಕಲರಾಗಿ, ಶವಗಳಾಗಿ, ತಮ್ಮ ಕುಗ್ರಾಮಗಳಿಗೆ ಮರಳುವ ಈ ಯುವಕರ ಸಾವು ಬಲಿದಾನ ಎಂಬುದರಲಿ, ಯಾವುದೇ ಉತ್ಪ್ರೇಕ್ಷೆಲ್ಲ. ಆದರೆ ಹೀಗೆ ಪ್ರಾಣಬಿಡುವ ಯುವಕರನ್ನು ಹುತಾತ್ಮರೆಂದು, ಅಪ್ರತಿಮ ದೇಶಭಕ್ತರೆಂದು ಹಾಡಿ ಹೊಗಳುವವರು ರಾಜಕಾರಣಿಗಳು. ಅವರ ಈ ಹೊಗಳಿಕೆಯು ಪ್ರಾಮಾಣಿಕವೆಂದು ಪರಿಗಣಿಸುವುದಾದರೆ ಅದರ ಹಿಂದೆಯೇ ಸರಳವಾದ ಪ್ರಶ್ನೆಯೊಂದು ಏಳುತ್ತದೆ. ಈ ರಾಜಕಾರಣಿಗಳು, ಭಾರಿ ಉದ್ಯಮಿಗಳು ಮತ್ತು ಕೋಟ್ಯಾಧಿಪತಿಗಳು ತಮ್ಮ ಮಕ್ಕಳನ್ನು, ಕುಟುಂಬದ ದೃಢಕಾಯದ ಯುವಕರನ್ನು ಇಂಥ ದೇಶಸೇವೆಯಲ್ಲಿ ಯಾಕೆ ತೊಡಗಿಸುವುದಿಲ್ಲ? ಅವರಿಗೆ ದೇಶಪ್ರೇಮ, ರಾಷ್ಟ್ರಭಕ್ತಿ ಇಲ್ಲವೆ?

ರಾಷ್ಟ್ರದೊಳಗೇ ನಡೆಯುವ ಆಂದೋಲನಗಳಾಗಲಿ, ದೇಶ ದೇಶಗಳ ನಡುವೆ ನಡೆಯುವ ಕದನಗಳಾಗಲಿ, ಅಥವಾ ಜಾಗತಿಕ ಯುದ್ಧಗಳಾಗಲಿ, ಶ್ರಮಶೋಷಣೆಯ ಕಾರಣಗಳಿಗಾಗಿಯೇ ನಡೆಯುತ್ತವೆ. ಬಹಳ ಹಿಂದಿನಿಂದಲೂ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸ್ವಾಧೀನಕ್ಕಾಗಿ ಯುದ್ಧಗಳು ನಡೆಯುತ್ತಾ ಬಂದಿವೆ ಮತ್ತು ಅದಕ್ಕಿಂತ ಮುಖ್ಯವಾಗಿ ಜಾಗತಿಕ ಮಾರುಕಟ್ಟೆಯ ವಿಸ್ತರಣೆಗಾಗಿ ಆಕ್ರಮಣ, ರಕ್ಷಣೆ ಮತ್ತು ಪ್ರತ್ಯಾಕ್ರಮಣದ ರೂಪದಲ್ಲಿ ಯುದ್ಧಗಳು ನಡೆಯುತ್ತಾ ಬಂದಿವೆ. ಈ ಯುದ್ಧಗಳಿಂದ  ಯಾವಾಗಲೂ ತೊಂದರೆ ಯಾಗುವುದು ಶೋಷಿತರಿಗೇ. ಜೀವನ ಮಟ್ಟದ ಕುಸಿತ. ಅಗತ್ಯ ವಸ್ತುಗಳ ಕೊರತೆ, ಬೆಲೆಯೇರಿಕೆ, ಸಾವು-ನೋವು ಎಲ್ಲವೂ ತಗುಲುವುದು ಬಡವರಿಗೆ. ಯುದ್ಧಗಳ ನೇರ ಫಲಾನುಭವಿಗಳು ಭಾರಿ ಬಂಡವಾಳಿಗರು ಬೃಹತ್‌ಉದ್ಯಮಿಗಳು ಮತ್ತು ದೊಡ್ಡ ದೊಡ್ಡ ವ್ಯಾಪಾರಿಗಳು.

ಗುಲಾಮಿ ಸಮಾಜದಿಂದ ಮೊದಲುಗೊಂಡು ಊಳಿಗಮಾನ್ಯ ಸಮಾಜದವರೆಗೂ ಉತ್ಪಾದನಾ ಸಾಧನಗಳು, ಶ್ರಮ ಸಂಬಂಧಗಳು ಮತ್ತು ವಸ್ತುಸ್ಥಿತಿಗಳಲ್ಲಿ ನಿರ್ದಿಷ್ಟ ಬಗೆಯ ಬದಲಾವಣೆಯಾಗುತ್ತಾ ಬಂದಿದೆ. ಈ ಬದಲಾವಣೆಗಳು ಜನರಲ್ಲಿ ಒಟ್ಟಾರೆಯಾಗಿ ಆಗ ಇದ್ದ ಜೀವನದ ಮಟ್ಟದ ಬಗ್ಗೆ ಅತೃಪ್ತಿಯನ್ನು ಹೆಚ್ಚಿಸಿವೆ. ಜೀವನಮಟ್ಟವನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳನ್ನು ಸೃಷ್ಟಿಸಿವೆ. ಹಾಗೆಯೇ ಅವಕ್ಕೆ ಅಂದಿನ ಆಳುವ ವರ್ಗಗಳು ವಿರೋಧವನ್ನೂ ಒಡ್ಡಿವೆ. ಇದರ ಫಲವಾಗಿ ನಡೆದ ಎಲ್ಲಾ ದಂಗೆ, ಪ್ರತಿಭಟನೆ, ಕ್ರಾಂತಿ ಮೊದಲಾದ ತೀವ್ರಸ್ವರೂಪದ ಹೋರಾಟಗಳಲ್ಲಿ ಜನಸಾಮಾನ್ಯರೇ ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಅವರೇ ಸಾಕಷ್ಟು ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅತೀವ ಕಷ್ಟನಷ್ಟಗಳನ್ನು ಅನುಭವಿಸಿದ್ದಾರೆ. ಆಗ, ಅಂಥ ಹೋರಾಟಗಳ ಫಲಾನುಭವಿಯಾಗಿದ್ದ ಬಂಡವಾಳಶಾಹಿಯು ಹಿಂದಿನ ಎಲ್ಲಾ ವ್ಯವಸ್ಥೆಗಳಿಗಿಂತಲೂ ಕ್ರಾಂತಿಕಾರಕವಾಗಿತ್ತು. ತಂತ್ರಜ್ಞಾನದಲ್ಲಿ ಆದ ಹೊಸ ಆವಿಷ್ಕಾರಗಳ ಲಾಭ ಪಡೆದು ಕೈಗಾರಿಕಾ ಉತ್ಪಾದನೆ, ಶ್ರಮವಿಭಜನೆ ಮತ್ತು ಹೆಚ್ಚುವರಿ ಮೌಲ್ಯದ ಸಂಚಯ ಪ್ರಾರಂಭವಾಯಿತು. ಬಂಡವಾಳ ವರ್ಗದ ಜೊತೆ ಜೊತೆಯಲ್ಲೇ ಕಾರ್ಮಿಕವರ್ಗವೂ ಹುಟ್ಟಿಕೊಂಡಿತು. ಸರಕು ವ್ಯಾಪಾರದ ಹೊಸ ಮಾರ್ಗಗಳು, ಸರಕು ಸಾಗಾಣಿಕಾ ಸಾಧನಗಳು, ವಸಾಹತುಗಳು, ಜಾಗತಿಕ ಮಾರುಕಟ್ಟೆಯ ಉದಯ ಮುಂತಾದ ವಸ್ತುಸ್ಥಿತಿಗಳು ಉಂಟಾದವು, ಉತ್ಪಾದನಾ ಸಾಧನಗಳು ಮತ್ತು ಶ್ರಮ ಸಂಬಂಧಗಳು ಮತ್ತಷ್ಟು ಬದಲಾವಣೆಗಳಿಗೆ ಒಳಗಾಗುತ್ತಾ ಬಂಡವಾಳವಾದಿ ಸಂಬಂಧಗಳಲ್ಲೂ ವೈರುಧ್ಯಗಳು ಕಾಣಿಸಿಕೊಂಡವು. ೨೦ನೇ ಶತಮಾನಕ್ಕೆ ಬರುವ ಹೊತ್ತಿಗೆ ತಂತ್ರಜ್ಞಾನ ಮತ್ತು ಉತ್ಪಾದನಾ ಸಂಬಂಧಗಳಲ್ಲಿ, ಹಿಂದೆಂದಿಗಿಂತಲೂ ಕ್ಷಿಪ್ರಗತಿಯಲ್ಲಿ ಕಾಣಿಸಿಕೊಂಡ ಬದಲಾವಣೆಗಳು, ಅವು ಹುಟ್ಟಿಸಿದ ವೈರುಧ್ಯಗಳು ಸಮಾಜವಾದಿ ವ್ಯವಸ್ಥೆಗೆ ಬದಲಾಗಬೇಕಾದ ಅಗತ್ಯವನ್ನು ಸೃಷ್ಟಿಸಿದವು. ಹೀಗೆ ಹೊಸ ವ್ಯವಸ್ಥೆಗೆ ಜಾಗಕೊಟ್ಟು ತಾನು ಚರಿತ್ರೆಯಲ್ಲಿ ಮರೆಯಾಗಬೇಕಾದಾಗ ಮಾತ್ರ ಬಂಡವಾಳಶಾಹಿಯು ತನ್ನ ಕ್ರಾಂತಿಕಾರಕ ಗುಣಗಳನ್ನು ಕಳೆದುಕೊಂಡು ಸಮಾಜವಾದವನ್ನು ವಿರೋಧಿಸಿತು. ಹೇಗಾದರೂ ಸರಿ, ಏನೇ ಬದಲಾವಣೆಯಾದರೂ ಸರಿ, ತಾನು ವಿರೋಧಿಸುವ ಸಮಾಜವಾದಿ ವ್ಯವಸ್ಥೆಯು ಪ್ರತಿಪಾದಿಸುವ ಸುಧಾರಣೆಗಳನ್ನು ಅಳವಡಿಸಿಕೊಂಡಾದರೂ ಸರಿ, ಬಂಡವಾಳಶಾಹಿ ವ್ಯವಸ್ಥೆಯ ಮೂಲಸ್ವರೂಪ ಬದಲಾಗದಂತೆ ನೋಡಿಕೊಳ್ಳಲು ತನ್ನ ಎಲ್ಲ ಶಕ್ತಿಯನ್ನೂ ವಿನಿಯೋಗಿಸಿತು. ಅಂದರೆ, ಶ್ರಮಶೋಷಣೆಯ ಹೆಚ್ಚುವರಿ ಮೌಲ್ಯದ ಉತ್ಪಾದನೆಯನ್ನು ಹಾಗೇ ಉಳಿಸಿಕೊಳ್ಳಬೇಕು, ಶ್ರಮಿಕರ ಸಮಾಜವಾದಿ ವ್ಯವಸ್ಥೆ ಎಂದಿಗೂ ಬರಬಾರದು ಎಂಬ ನಿಲುವನ್ನು ತಾಳುತ್ತಾ ಬಂದಿತು. ಈ ಕ್ಷಣದಲ್ಲೂ ಬಂಡವಾಶಾಹಿಯ ರಾಜಕೀಯ ನಿಲುವು ಇದೇ ಆಗಿದೆ. ಈ ಪ್ರತಿಗಾಮಿ ಹೋರಾಟದ ಫಲವಾಗಿ ಆಧುನಿಕ ಬಂಡವಾಳವು ದಿನ ದಿನವೂ ಹೊಸ ಹೊಸ ರೂಪಗಳನ್ನು ತಾಳುತ್ತಾ, ಅತ್ಯಂತ ಸಂಕೀರ್ಣವೂ, ಮಹಾ ವಿಕೃತವೂ, ತೀವ್ರ ರೋಗಗ್ರಸ್ತವೂ ಆಗುತ್ತಾ ತನ್ನ ವೈರುಧ್ಯಗಳನ್ನು ವಿಶ್ವವ್ಯಾಪಿಯಾಗಿಸಿದೆ. ದೇಹದ ಯಾವುದೋ ಒಂದು ಭಾಗಕ್ಕೆ ತಗುಲಿದ ಕ್ಯಾನ್ಸರ್ ಕಾಯಿಲೆಯನ್ನು ಅದುಮಿಡುತ್ತಾ ಹೋದಂತೆ ಅದು ದೇಹವಿಡೀ ವ್ಯಾಪಿಸಿ ವ್ಯಕ್ತಿಯ ಅವಸಾನವನ್ನು ತರುವಂತೆ, ಬಂಡವಾಳಶಾಹಿಯ ಅದುಮಿಟ್ಟ ವೈರುಧ್ಯಗಳು ವಿಶ್ವಮಟ್ಟದಲ್ಲಿ ಜೀವಸಂಕುಲದ ಅಸ್ತಿತ್ವನ್ನೇ ಅಪಾಯಕ್ಕೆ ಒಡ್ಡಿದೆ. ಇದನ್ನೇ ಬಿಡಿ ಬಿಡಿಯಾಗಿ, ಆರ್ಥಿಕ ಕುಸಿತ ಮತ್ತು ಬಿಕ್ಕಟ್ಟುಗಳು, ಹಣದುಬ್ಬರ, ನಿರುದ್ಯೋಗ ಹಾಗೂ ಶ್ರಮಿಕ ಸಂಬಂಧಿ ಕಷ್ಟ-ನಷ್ಟಗಳು, ಕಾರ್ಮಿಕರ ವಲಸೆ, ರಾಜಕೀಯ ಕ್ಷೋಭೆಗಳು ಪರಿಸರ ನಾಶ, ಭೂಮಿಯ ತಾಪಮಾನದ ಹೆಚ್ಚಳ, ಅತಿವೃಷ್ಟಿ ಮತ್ತು ಅನಾವೃಷ್ಟಿಗಳು, ಸಾಂಕ್ರಾಮಿಕ ರೋಗಗಳ ಹಾವಳಿ ಮುಂತಾಗಿ ಹೆಸರಿಸಲಾಗುತ್ತಿದೆ. ವಾಸ್ತವವಾಗಿ ರೋಗಗ್ರಸ್ತವಾಗಿರುವ ಬಂಡವಾಳವಾದವೇ ಒಂದು ಮನುಕುಲಕ್ಕೆ ತಗುಲಿರುವ ಒಂದು ಮಹಾರೋಗವಾಗಿ ಪರಿಣಮಿಸಿದೆ.

ʻಈ ವಿಶ್ವವು ಪರಿಸರನಾಶ, ಭೂತಾಪದ ಹೆಚ್ಚಳ ಮುಂತಾದ ಕಾರಣಗಳಿಂದಾಗಿ ಮೊದಲು ನಾಶವಾಗುತ್ತದೆಯೋ ಅಥವಾ ಬಂಡವಾಳಶಾಹಿ ವ್ಯವಸ್ಥೆಯಿಂದಾಗಿ ಮೊದಲು ನಾಶವಾಗುತ್ತದೆಯೋ ಹೇಳಲಾಗದುಎಂಬ ಸ್ಟೀಫನ್ ಹಾಕಿನ್ಸ್ ಮಾತು ಬಂಡವಾಳಶಾಹಿ ವ್ಯವಸ್ಥೆಯು ತಲುಪಿರುವ ಗಂಭೀರ ರೋಗ ಸ್ಥಿತಿಯನ್ನು ಬಿಂಬಿಸುತ್ತದೆ. ಇದನ್ನು ನಮ್ಮ ಸಹಜೀವಿಗಳಿಗೆ ಜರೂರಾಗಿ ಅರ್ಥಮಾಡಿಸುವ ಹೊಣೆ ನಮ್ಮೆಲ್ಲರ ಮೇಲೆ ಇದೆ.

ಸೂಕ್ಷ್ಮಾಣು ಜೀವಿಗಳಿಂದ ಹಿಡಿದು, ಬಹುಕೋಶ ಜೀವಿಗಳು ಮತ್ತು ಸಸ್ಯಗಳೂ ಸೇರಿದಂತೆ ಪ್ರತಿಯೊಂದು ಜೀವಿಯ ಅಸ್ತಿತ್ವಕ್ಕೂ ಆಹಾರ ಮತ್ತಿತರ ಸ್ವಾಭಾವಿಕ ಅಂಶಗಳ ಲಭ್ಯತೆಯೇ ಆಧಾರ. ಅವಿಲ್ಲದೆ ಜೀವ ಜಗತ್ತಿನ ಅಸ್ತಿತ್ವವಿಲ್ಲ. ಮನುಷ್ಯರಲ್ಲಿ ಇವುಗಳ ಜೊತೆಗೆ ನೈಸರ್ಗಿಕ ವಸ್ತುಗಳನ್ನು ಬಳಸಿ, ಪರಿವರ್ತಿಸಿ, ತನ್ನ ಮೆದುಳು-ಮೈಬಲಗಳ, ಅಂದರೆ ಶ್ರಮದ ಸಹಾಯದಿಂದ ಆವಿಷ್ಕರಿಸಿ ಸೃಷ್ಟಿಸಿದ ಜೀವನಾಧಾರಗಳು ಅವರ ಅಸ್ತಿತ್ವದ ಆಧಾರ. ಪ್ರತಿಯೊಬ್ಬ ಮನುಷ್ಯನೂ, ಇತರ ಜೀವಿಗಳಂತೆ, ತನ್ನ ಅಸ್ತಿತ್ವಕ್ಕೆ ತನ್ನ ಶ್ರಮವನ್ನು ಹಾಕಬೇಕಾದ್ದು ಅನಿವಾರ್ಯ. ಮನುಷ್ಯರು ಮೊದಲಿನಿಂದಲೂ ಸಾಮುದಾಕ ವಿಧಾನದಲ್ಲಿ ಬದುಕುತ್ತಾ, ಸ್ವಾಭಾವಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೊಸ ಹೊಸ ಸಾಧನಗಳನ್ನು ಸೃಷ್ಟಿಸಿಕೊಳ್ಳುತ್ತಾ ಬಂದಿದ್ದಾರೆ. ಈ ಹೊಸ ಸಾಧನಗಳ ಸೃಷ್ಟಿಯಿಂದಾಗಿ ಹೊಸ ಹೊಸ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೊಸ ಸಂಬಂಧಗಳನ್ನು ಸೃಷ್ಟಿಸಿಕೊಳ್ಳುತ್ತಾ ಸಾಮಾಜಿಕ ವ್ಯಕ್ತಿಗಳಾಗಿದ್ದಾರೆ.

ಆದರೆ ತಾನು ಶ್ರಮ ಹಾಕದೆ ದುರ್ಬಲರ ಶ್ರಮದಿಂದ ಬದುಕಬಹುದೆಂಬ ಶೋಷಣೆಯ ಸಂಬಂಧವು ಗುಲಾಮ ಸಮಾಜದಿಂದಲೂ ಉಳಿದುಕೊಂಡು ಬಂದಿದೆ. ಇದು ಮೂಲಭೂತವಾಗಿ ಅನೈಸರ್ಗಿಕವೂ, ಅತಾರ್ಕಿಕವೂ, ಆದ ಸಂಬಂಧ. ಮನುಷ್ಯರಲ್ಲಿ ಅತ್ಯುನ್ನತ ಮಟ್ಟಕ್ಕೆ ವಿಕಾಸಗೊಂಡಿರುವ ವೈಚಾರಿಕತೆಗೆ ನಿಲುಕದ ಸಂಬಂಧ. ಒಂದು ಜೀವಿಯು ಮತ್ತೊಂದು ಜೀವಿಯನ್ನು ಕೊಂದು ಬದುಕುವುದು ನಿಸರ್ಗದಲ್ಲಿ ಸಹಜವಾದದ್ದು. ಮನುಷ್ಯರಲ್ಲಿ, ಕ್ರಿಮಿ, ಕೀಟ, ಸಸ್ಯ ಮತ್ತು ಪ್ರಾಣಿಗಳನ್ನು ತಿಂದು ಬದುಕುವುದು ಸಹಜ, ಸ್ವಾಭಾಮಿಕ ಮತ್ತು ಅಸ್ತಿತ್ವದ ದೃಷ್ಟಿಯಿಂದ ತಾರ್ಕಿಕವಾದದ್ದು ಮತ್ತು ನಾಗರಿಕವಾದದ್ದು. ಮತ್ತು ಮೈ-ಮೆದುಳಿನ ಸ್ವಾಸ್ಥ್ಯದ ನಿರ್ವಚನೆಯ ಪ್ರಕಾರ ಆರೋಗ್ಯಕರವಾದದ್ದು. ಈ ನಿರ್ವಚನೆಯ ಆಧಾರದಿಂದಲೇ ಹೇಳುವುದಾದರೆ ಇದರ ತಲೆಕೆಳಗಾದ ಸ್ಥಿತಿ ಮೃಗೀಯವಾದದ್ದು ಮತ್ತು ಅನಾರೋಗ್ಯದ್ದು. ಹುಲಿಗಳು ಮನುಷ್ಯರನ್ನು ಕೊಂದು ತಿಂದರೆ ಅವನ್ನು ನರಭಕ್ಷಕ ಎನ್ನುತ್ತೇವೆ. ನಾವು ತಿಂದ ಹುಲ್ಲು ಬೀಜಗಳು, ಸೊಪ್ಪು ಸದೆಗಳು ಜೀರ್ಣವಾಗುವ ಬದಲು ಪ್ರಾಣಕ್ಕೇ ಅಪಾಯವನ್ನು ಉಂಟುಮಾಡಿದರೆ, ಅವನ್ನು ಜೀವಮಾರಕ ವಿಷಸಸ್ಯಗಳು ಎನ್ನುತ್ತೇವೆ. ಕೋವಿಡ್‌ನಂಥ ಸೂಕ್ಷ್ಮಾಣುಗಳು ಮೈಯೊಳಗೆ ಸೇರಿಕೊಂಡು ಅಸ್ವಸ್ಥತೆಯನ್ನು ಉಂಟುಮಾಡಿದರೆ ಅವನ್ನು ರೋಗಕಾರಕ ಸೂಕ್ಷ್ಮಾಣುಗಳು ಎಂದು ಅವುಗಳಿಂದ ರಕ್ಷಣೆ ಪಡೆಯಲು ಔಷಧಗಳನ್ನು ಸಂಶೋಧಿಸುತ್ತೇವೆ. ಮನುಷ್ಯರು ಮನುಷ್ಯರ ಅಸ್ತಿತ್ವಕ್ಕೆ ಪೂರಕವಾಗಿ ನಡೆದುಕೊಂಡರೆ ಮಾನವೀಯತೆ ಎಂದೂ ಅದಕ್ಕೆ ವಿರುದ್ಧವಾಗಿ ವರ್ತಿಸಿದರೆ ಅಮಾನವೀಯತೆ ಎಂದೂ ಹೇಳುತ್ತೇವೆ. ಮನುಷ್ಯರು ಮನುಷ್ಯರನ್ನೇ ತಿಂದರೆ ನರಮಾಂಸ ಭಕ್ಷಕ ಅನಾಗರಿಕರೆನ್ನುತ್ತೇವೆ.

ಪ್ರಾಚೀನ ಅನಾಗರಿಕ ಸಮಾಜ, ಬರ್ಬರ ಸಮಾಜ, ಬುಡಕಟ್ಟು ಸಮಾಜ ಮತ್ತು ಗುಲಾಮೀ ಸಮಾಜಗಳಲ್ಲಿದ್ದ, ಅನಾಗರಿಕತೆ, ಬರ್ಬರತೆ, ಹಿಂಸೆ, ಕ್ರೌರ್ಯ ಮತ್ತು ಮೌಢ್ಯಗಳು ಇಂದಿನ ಸಮಾಜದಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಅವುಗಳ ಮೂಲ ರೂಪಗಳನ್ನು ಬಂಡವಾಳಶಾಹಿ ವ್ಯವಸ್ಥೆಯು ಮಾರ್ಪಡಿಸಿದೆ. ಅದು ಈ ವಿಷಯಗಳಲ್ಲಿ ಕಾನೂನು ಚೌಕಟ್ಟಿನೊಳಗಿನ ತಾರ್ಕಿಕತೆ ಮತ್ತು ವೈಚಾರಿಕತೆಗಳ ನಾಗರಿಕ ಸಮಾಜವಾಗಿ ವಿಕಾಸಗೊಂಡಿದೆ. ಆದರೆ ಶ್ರಮಶೋಷಣೆಯ ವಿಷಯದಲ್ಲಿ ಮಾತ್ರ ಹಿಂದಿನ ವ್ಯವಸ್ಥೆಗಳ ಅನೈಸರ್ಗಿಕ, ಅತಾರ್ಕಿಕ ಮತ್ತು ವೈಚಾರಿಕವಲ್ಲದ ಹಳೆಯ ಸಂಬಂಧಗಳನ್ನೇ ಅದು ಈಗಲೂ ಮುಂದುವರೆಸಿಕೊಂಡು ಬಂದಿದೆ. ಒಂದೇ ವ್ಯತ್ಯಾಸವೆಂದರೆ, ಹಿಂದಿದ್ದ ನೇರ ದೈಹಿಕ ಮತ್ತು ಮಾನಸಿಕ ಕ್ರೌರ್ಯಗಳ ಬಲಾತ್ಕಾರದ ಬದಲು, ಕಾನೂನು ರೂಪದ ಬಲಾತ್ಕಾರ, ನಿರ್ಬಂಧಗಳಿಂದ ಬಲಿಷ್ಠರು ದುರ್ಬಲರ ಅಸ್ತಿತ್ವವನ್ನು ನಿಯಂತ್ರಿಸಬಹುದಾದ ಶ್ರಮಸಂಬಂಧವನ್ನು ಗಟ್ಟಿಗೊಳಿಸಿದೆ. ಶ್ರಮಶೋಷಣೆಯನ್ನು ತಂತ್ರಜ್ಞಾನದ ಸಹಾಯದಿಂದ ಅತ್ಯಂತ ಜಟಿಲವೂ, ಸೂಕ್ಷ್ಮವೂ, ವಿಶ್ವವ್ಯಾಪಿಯೂ ಆಗುವಂತೆ ಮಾಡಿದೆ. ಅದನ್ನು ಬದಲಿಸುವ ಎಲ್ಲ ಯೋಚನೆ, ಯತ್ನಗಳನ್ನೂಅಮಾನುಷವಾಗಿ ಹತ್ತಿಕ್ಕುತ್ತಾ ಬರುತ್ತಿದೆ.

ಬಂಡವಳಿಗನು, ಬಂಡವಾಳದ ವ್ಯಕ್ತಿರೂಪ ಎಂದು ಹೇಳುವಂತೆ ಇನ್ನೊಂದು ಕೊನೆಯಿಂದ ಬಂಡವಾಳಶಾಹಿಯು ಬಂಡವಳಿಗನ ವ್ಯವಸ್ಥೆಯ ರೂಪ ಎಂದು ಹೇಳಬಹುದು. ಹೇಗೇ ಆದರೂ ಇವುಗಳ ಮೂಲ ಸ್ವರೂಪದಲ್ಲೇ ಇರುವ ಅವೈಚಾರಿಕತೆ, ಅತಾರ್ಕಿಕತೆ, ತಲೆಕೆಳಗು ದೃಷ್ಟಿಕೋನ, ಅಸ್ವಾಭಾವಿಕತೆ ಮತ್ತು ರೋಗಗ್ರಸ್ತ ಸ್ಥಿತಿಗಳಲ್ಲೇನೂ ವ್ಯತ್ಯಾಸವಾಗುವುದಿಲ್ಲ. ಅಂದರೆ ಬಂಡವಳಿಗನಿಗೆ ಅಂಟಿದ ರೋಗವನ್ನು ಅವನ ವ್ಯಕ್ತಿಮಟ್ಟದ ಕಾಯಿಲೆಯ ಸ್ಥಿತಿ ಎನ್ನುತ್ತೇವೆ. ಬಂಡವಾಳಶಾಹಿ ವ್ಯವಸ್ಥೆಗೆ ಅಂಟಿದ ರೋಗವನ್ನು ವ್ಯವಸ್ಥೆ ಮಟ್ಟದ ಕಾಯಿಲೆಯ ಸ್ಥಿತಿ ಎನ್ನುತ್ತೇವೆ. ಅಷ್ಟೇ ವ್ಯತ್ಯಾಸ.

ಉಪಯೋಗ ಮೌಲ್ಯಕ್ಕಾಗಿ ವಸ್ತುಗಳ ತಯಾರಿಕೆ ಮತ್ತು ಅವುಗಳ ವಿನಿಮಯವು ಸ್ವಾಭಾವಿಕವಾದುದು. ವ್ಯಾಪಾರಕ್ಕಾಗಿ ಅಂದರೆ ಮಾರುವುದಕ್ಕಾಗಿ ಶ್ರಮಿಕರ ಕೈಲಿ ತಯಾರು ಮಾಡಿಸುವ ಮತ್ತು ಹಣದ ಮೂಲಕ ಸರಕುಗಳನ್ನು ವಿನಿಮಯ ಮಾಡಿಕೊಳ್ಳುವ ಕ್ರಮವು ಅಸ್ವಾಭಾವಿಕವಾದುದು. ಹಾಗೆಯೇ ತನ್ನ ಸ್ವಂತ ಶ್ರಮದಿಂದ ವಸ್ತುಗಳನ್ನು ತಯಾರಿಸಿಕೊಳ್ಳುವುದು ಸ್ವಾಭಾವಿಕವಾದುದು. ಆದರೆ ತನ್ನ ಸ್ವಂತ ಶ್ರಮ ಹಾಕದೆ, ಇತರರ ಶ್ರಮವನ್ನು ಶೋಷಿಸಿ ಬದುಕುವುದು ಅಸ್ವಾಭಾವಿಕವಾದುದು. ವಸ್ತುಗಳನ್ನು ಜೀವನಾಧಾರಕ್ಕೆ ಪೂರಕವಾಗಿ ಸಂಗ್ರಹಿಸುವುದು ಸ್ವಾಭಾವಿಕವಾದುದು ಮತ್ತು ಅದಕ್ಕೂ ಸ್ವಾಭಾವಿಕವಾದ ಮಿತಿಯಿದೆ. ಆದರೆ ವಸ್ತುಗಳನ್ನು ತಯಾರಿಸದೆಯೇ ಅಥವಾ ತಯಾರಿಸುವ ಮೊದಲೇ ಅವುಗಳ ವಿನಿಮಯ ಮೌಲ್ಯವನ್ನು ಹಣದ ರೂಪಕ್ಕಿಳಿಸಿ ಹಣವನ್ನು ಸಂಗ್ರಹಿಸುವುದು ಅಸ್ವಾಭಾವಿಕವಾದುದು. ಹಣದ ಸಂಗ್ರಹಣೆಗೆ ಮಿತಿಯಿಲ್ಲ. ಅದು ಅಸ್ವಾಭಾವಿಕ ಮತ್ತು ಅತಾರ್ಕಿಕ ಮಾತ್ರವಲ್ಲ, ಮಿತಿ ಮೀರಿದ ಸ್ಥಿತಿಯಲ್ಲಿ ಸಮಾಜದ ಅನಾರೋಗ್ಯಕರ ಸ್ಥಿತಿಯೂ ಹೌದು.

ವಸ್ತುಗಳನ್ನು ಬಳಸುವಾಗ ಅದಕ್ಕೊಂದು ಸ್ವಾಭಾವಿಕ ಮಿತಿಯಿದೆ. ಅದಕ್ಕೂ ಬಂಡವಾಳಶಾಹಿ ವ್ಯವಸ್ಥೆಯು ನಿರ್ವಚಿಸುವ ಮಾನಸಿಕ ಆರೋಗ್ಯ ಎಂಬುದಕ್ಕೂ ಸಂಬಂಧವಿದೆ. ಮನುಷ್ಯರ ಜೀವನಾಧಾರ ಅಗತ್ಯಗಳ ಅಳತೆಗೋಲನ್ನು ಬಳಸಿ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಎಂಥಾ ಹೊಟ್ಟೆಬಾಕನೂ ಒಂದುಸಲಕ್ಕೆ ತನ್ನ ಹೊಟ್ಟೆ ತುಂಬುವಷ್ಟು ತಿನ್ನಬಹುದು. ಆದರೆ, ಎಷ್ಟು ತಿಂದರೂ ಹೊಟ್ಟೆ ತುಂಬದಿದ್ದರೆ, ಅದು ಅನಾರೋಗ್ಯ ಸ್ಥಿತಿ. ಮಾನಸಿಕ ಅಸ್ವಸ್ಥತೆ. ತುಂಬಾ ಮೆತ್ತನೆಯ ಹಾಸಿಗೆಬೇಕೆಂದು ಎರಡು-ಮೂರು ಅಡಿ ಎತ್ತರದ ಹಾಸಿಗೆಯ ಮೇಲೆ ಮಲಗಿ ನಿದ್ರಿಸಿದರೆ ಅದು ಆರೋಗ್ಯ ಸ್ಥಿತಿ. ವಿಶ್ವದಲ್ಲೇ ಅತ್ಯಂತ ದೊಡ್ಡ ಹಾಸಿಗೆ ಬೇಕೆಂದು ಟನ್‌ಗಟ್ಟಲೆ ಮೆತ್ತೆಯನ್ನು ಬಳಸಿ ಹಾಸಿಗೆಯ ಗುಡ್ಡದ ಮೇಲೆ ಮಲಗಿದರೆ, ಅಥವಾ ಲಕ್ಷಾಂತರ ರೂಪಾಯಿ ಬೆಲೆಕೊಟ್ಟು ತಂದ ಹಾಸಿಗೆಯ ಮೇಲೆ ಮಲಗಿದರೆ, ನಿದ್ದೆ ಬರಲಿ, ಬಿಡಲಿ ಅದು ಅಸ್ವಸ್ಥ-ಅನಾರೋಗ್ಯ ಸ್ಥಿತಿಯೇ. ಹತ್ತಿ ಸಾಗಾಣಿಕೆಯ ಕಾರ್ಮಿಕರು ಸರಕು ವಾಹನಗಳ ಹತ್ತಿ ಮೂಟೆಗಳ ಮೇಲೆಯೇ ಅನಿವಾರ್ಯವಾಗಿ ಮಲಗಿ ನಿದ್ರಿಸಬಹುದು. ಬಡವರು ಗತಿಲ್ಲದೆ ಚಾಪೆಯ ಮೇಲೆ ಮಲಗಬಹುದು. ಭಿಕ್ಷುಕರು ಹರಕು ಗೋಣೀಚೀಲದ ಮೇಲೆ, ವೃತ್ತಪತ್ರಿಕೆಗಳ ಮೇಲೆ ಮಲಗಬಹುದು. ಅವರದ್ದು ಅನಿವಾರ್ಯ ಸ್ಥಿತಿಯೇ ಹೊರತು, ಮಾನಸಿಕ ಅನಾರೋಗ್ಯದ ಸ್ಥಿತಿಯಲ್ಲ. ಹಾಗೆಯೇ ಒಂದು ಕುಟುಂಬದಲ್ಲಿ ಅನೇಕ ಮಂದಿ ಸದಸ್ಯರಿರುವ ಭವನದಲ್ಲಿ ಅವರಿಗೆ ಅನುಗುಣವಾದ ಸೌಲಭ್ಯಗಳೂ, ಅಂತಸ್ತುಗಳೂ, ಕೊಠಡಿಗಳೂ ಇದ್ದರೆ ಅದೇನೂ ಮನೆಯೊಡೆಯನ ಅಸ್ವಸ್ಥತೆಯ ಲಕ್ಷಣವಲ್ಲ. ಆದರೆ ಸಾವಿರಾರು ಜೋಪಡಿಗಳ ಮಧ್ಯೆ ನೂರಾರು ಅಂತಸ್ತಿನ ಭವನದಲ್ಲಿ ನೂರಾರು ಸೇವಕರೊಂದಿಗೆ ವಾಸಿಸುವ ಬಂಡವಳಿಗರ ಮನಸ್ಸಿನ ಸ್ವಾಸ್ಥ್ಯ ಎಂಥದ್ದು? ಬಂಡವಾಳ ವ್ಯವಸ್ಥೆಯಲ್ಲಿ ಮಾತ್ರ ಇಂಥ ಅಸ್ವಸ್ಥತೆ ಸಾಧ್ಯ.

ಸಾಮಾನ್ಯ ಮನುಷ್ಯನೊಬ್ಬನ ಆದಾಯವು ಅವನ ಅಗತ್ಯಗಳನ್ನು ಪೂರೈಸಲು ಸಾಕಾಗುವಷ್ಟು ಇರಬೇಕಾದ್ದು ಒಂದು ಅಪೇಕ್ಷಿತವಾದ ಸಾಮಾನ್ಯ ವಸ್ತುಸ್ಥಿತಿ. ಕೆಳ ಮಧ್ಯಮವರ್ಗ ಮತ್ತು ಮಧ್ಯಮ ವರ್ಗದ ಕುಟುಂಬದ ಆದಾಯವು ಅವರ ಕುಟುಂಬಗಳ ಅವಶ್ಯಕತೆಗಳಿಗಿಂತ ಎಷ್ಟೋಪಟ್ಟು ಹೆಚ್ಚಿಗೆ ಇದ್ದರೂ ಯಾರೂ ಅವರನ್ನು ಅಸ್ವಸ್ಥ ಮನಸ್ಸಿನವರು ಎನ್ನುವುದಿಲ್ಲ. ವಸ್ತುಗಳ ತಯಾರಿಕೆಯಲ್ಲಿ ಒಂದು ಸರಾಸರಿ ಸಾಮಾಜಿಕ ಶ್ರಮಕಾಲವಿರುವಂತೆ, ಅದನ್ನಾಧರಿಸಿದ ಮೌಲ್ಯಕ್ಕೂ, ಮಾರುಕಟ್ಟೆಯ ಬೆಲೆಯಲ್ಲಿಯೂ ಒಂದು ಸರಾಸರಿ ಸಾಮಾಜಿಕ ಮಿತಿಯ ನಿರ್ಣಯ ಸಾಧ್ಯ. ಅದರಿಂದಾಗಿ ವ್ಯಕ್ತಿಯ ಸ್ವಸ್ಥತೆ ಅಥವಾ ಅಸ್ವಸ್ಥತೆಯನ್ನು ಅಂದಾಜು ಮಾಡಬಹುದು. ಅದೇ ರೀತಿ, ಅಗತ್ಯಕ್ಕೆ ಬೇಕಾದಷ್ಟನ್ನು ಖರ್ಚುಮಾಡಿ ಉಳಿದ ಹಣವನ್ನು ಭವಿತವ್ಯದ ನಿಧಿಯನ್ನಾಗಿ ಕೂಡಿಟ್ಟರೆ ಅದನ್ನು ಜಾಣತನ ಎನ್ನುತ್ತಾರೆಯೇ ಹೊರತು ಮಾನಸಿಕ ಅಸ್ವಸ್ಥತೆ ಎನ್ನುವುದಿಲ್ಲ. ಆದರೆ ಒಬ್ಬ ಬಂಡವಳಿಗನ ಆದಾಯ ಮತ್ತು ಖರ್ಚುಗಳು ಇಂಥ ಯಾವ ಮಿತಿಗೂ ಒಳಪಡದೆ, ಕೋಟ್ಯಾಧೀಶನಾಗಿದ್ದರೂ, ಕೋಟಿಗಟ್ಟಲೆ ಹಣವನ್ನು ವಿವಿಧ ರೂಪಗಳಲ್ಲಿ, ವಿವಿಧ ಕಡೆಗಳಲ್ಲಿ, ಕಾನೂನು ಸಮ್ಮತವಾಗಿ ಅಥವಾ ಕಪ್ಪುಹಣವನ್ನಾಗಿ ಕೂಡಿಟ್ಟರೆ ಅದರ ಹಿಂದಿರುವ ಮನಸ್ಥಿತಿಯನ್ನು ಆರೋಗ್ಯಕರ ಮನಸ್ಥಿತಿ ಎನ್ನಬಹುದೆ? ಆಸ್ತಿಯ ವಿಷಯದಲ್ಲಿಯೂ ಇಂಥದೇ ಮನಸ್ಥಿತಿ ಇದ್ದರೆ ಅದು ಸ್ವಸ್ಥ ಮನಸ್ಸಿನ ಲಕ್ಷಣವೆ? ಒಬ್ಬ ಉದ್ಯಮಿಯು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಪಡೆಯಲು ಅಥವಾ ಇರುವ ಮಟ್ಟದಿಂದ ಮೇಲಕ್ಕೇರಲು, ಅಥವಾ ನಿರುದ್ದೇಶದಿಂದ ಮತ್ತಷ್ಟು ಕೋಟಿಗಳನ್ನು ಸಂಪಾದಿಸಲು ಯತ್ನಿಸುತ್ತಿದ್ದರೆ ಅಂಥ ಬಂಡವಳಿಗನ, ಅಥವಾ ಬಂಡವಾಳವಾದಿ ವ್ಯವಸ್ಥೆಯು ಅಸ್ವಸ್ಥ-ರೋಗಗ್ರಸ್ತ ಎನ್ನದೆ ಇರಲಾಗುತ್ತದೆಯೇ?

ಬಂಡವಾಳ ಮತ್ತು ಬಂಡವಳಿಗರ ಅಸ್ವಸ್ಥ, ರೋಗಗ್ರಸ್ತ ಸ್ಥಿತಿಯನ್ನು ವಿವರಿಸಲು ಇಂಥ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ.

ಒಟ್ಟಿನಲ್ಲಿ ಅಸ್ವಸ್ಥ ವ್ಯವಸ್ಥೆಯಾದ ಬಂಡವಾಳಶಾಹಿಯ ವ್ಯಕ್ತಿರೂಪಗಳಾದ ಅಸ್ವಸ್ಥ ಮನಸ್ಸಿನ ಬಂಡವಳಿಗರ    ಜೀವನ ದೃಷ್ಟಿಯನ್ನು ಸ್ವಸ್ಥ, ವೈಚಾರಿಕ, ತಾರ್ಕಿಕ ಮತ್ತು ಆರೋಗ್ಯಕರ ಮನಸ್ಸಿನ ಸಮಾಜವಾದಿ ಜೀವನದೃಷ್ಟಿಗೆ ಉಪದೇಶಗಳಿಂದ, ಹೃದಯ ಪರಿವರ್ತನೆಯಿಂದ ಬದಲಿಸುವುದು ಸಾಧ್ಯವೆ? ಸಾಧ್ಯ ಎಂದಾದರೆ ಹಾಗೆ ಮಾಡುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದೆ. ಹಾಗಿಲ್ಲದಿದ್ದರೆ ಕಾರ್ಲ್‌ ಮಾರ್ಕ್ಸ್ ೧೭೦ ವರ್ಷಗಳ ಹಿಂದೆಯೇ ಹೇಳಿದಂತೆ ಬಂಡವಾಳಶಾಹಿಯನ್ನು ಕೆಳಗಿಳಿಸಿ ಅಧಿಕಾರ ಪಡೆಯುವುದೊಂದೇ ಸಮಾಜವಾದದಲ್ಲಿ ನಂಬಿಕೆ ಇರುವ ಎಲ್ಲರಿಗೂ ಈಗ ಉಳಿದಿರುವ ದಾರಿ.

ಬಂಡವಾಳಶಾಹಿ ವ್ಯವಸ್ಥೆಯು, ಈ ಡಿಜಿಟಲ್ ಯುಗದಲ್ಲಿ ಅಧಿಕಾರದ ಕೇಂದ್ರೀಕರಣ ಮಾತ್ರವಲ್ಲ, ಬದುಕಿಗೆ ಸಂಬಂಧಿಸಿದ ಎಲ್ಲವನ್ನೂ ಕೇಂದ್ರೀಕರಿಸುತ್ತಾ ತನ್ನ ಬಿಗಿಮುಷ್ಟಿಯಲ್ಲಿ ಇರಿಸಿಕೊಳ್ಳಲು ಹವಣಿಸುತ್ತಿದೆ. ‘ಈ ವಿಶ್ವವು ಪರಿಸರನಾಶ, ಭೂತಾಪದ ಹೆಚ್ಚಳ ಮುಂತಾದ ಕಾರಣಗಳಿಂದಾಗಿ ಮೊದಲು ನಾಶವಾಗುತ್ತದೆಯೋ ಅಥವಾ ಬಂಡವಾಳಶಾಹಿ ವ್ಯವಸ್ಥೆಯಿಂದಾಗಿ ಮೊದಲು ನಾಶವಾಗುತ್ತದೆಯೋ ಹೇಳಲಾಗದು’ ಎಂಬ ಸ್ಟೀಫನ್ ಹಾಕಿನ್ಸ್ ಮಾತು ಬಂಡವಾಳಶಾಹಿ ವ್ಯವಸ್ಥೆಯು ತಲುಪಿರುವ ಗಂಭೀರ ರೋಗ ಸ್ಥಿತಿಯನ್ನು ಬಿಂಬಿಸುತ್ತದೆ.

ಇದನ್ನು ನಮ್ಮ ಸಹಜೀವಿಗಳಿಗೆ ಜರೂರಾಗಿ ಅರ್ಥಮಾಡಿಸುವ ಹೊಣೆ ನಮ್ಮೆಲ್ಲರ ಮೇಲೆ ಇದೆ.

 

 

 

 

 

 

Donate Janashakthi Media

Leave a Reply

Your email address will not be published. Required fields are marked *