- ದೆಹಲಿ ಪೊಲೀಸರಿಗೆ ಫೇಸ್‌ಬುಕ್‌ನ ಇಂಡಿಯಾದ ಉನ್ನತ ಅಧಿಕಾರಿ ಅಂಕಿ ದಾಸ್ ದೂರು
ನವದೆಹಲಿ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಮುಖಂಡರ ದ್ವೇಷ ಭಾಷಣಗಳ ವಿಚಾರದಲ್ಲಿ ಫೇಸ್‌ಬುಕ್ ಮೌನ ವಹಿಸಿದೆ ಎಂಬ ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯ ವರದಿಯ ಹಿನ್ನೆಲೆಯಲ್ಲಿ ತಮಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಫೇಸ್‌ಬುಕ್ ಇಂಡಿಯಾದ ಉನ್ನತ ಸಾರ್ವಜನಿಕ ನೀತಿ ಕಾರ್ಯನಿರ್ವಾಹಕ ಅಧಿಕಾರಿ ನವದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಫೇಸ್‌ಬುಕ್‌ನ ಇಂಡಿಯಾದ ಉನ್ನತ ಅಧಿಕಾರಿಯಾಗಿರುವ ಅಂಕಿ ದಾಸ್ ಅವರು ದೆಹಲಿ ಪೊಲೀಸರಿಗೆ ಸೋಮವಾರ ದೂರು ನೀಡಿದ್ದು, ‘ಆನ್‌ಲೈನ್‌ನಲ್ಲಿ ಕೆಲವರು ತಮ್ಮ ರಾಜಕೀಯ ಸಂಬಂಧಗಳ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ನಿಂದಿಸುತ್ತಿದ್ದಾರೆ,’ ಎಂದು ಆರೋಪಿಸಿದ್ದಾರೆ.
‘ಬಿಜೆಪಿಯ ಒಬ್ಬ ಮುಖಂಡ ಮತ್ತು ಇತರ ಮೂವರ ದ್ವೇಷ ಭಾಷಣದ ಬಗ್ಗೆ ‘ಫೇಸ್‌ಬುಕ್ ಇಂಡಿಯಾ’ ಮೌನ ವಹಿಸಿದೆ. ತನ್ನ ವ್ಯಾಪಾರಕ್ಕೆ ಯಾವುದೇ ಹಾನಿ ಆಗದಿರಲಿ ಎಂಬುದೇ ಇದಕ್ಕೆ ಕಾರಣ. ಫೇಸ್‌ಬುಕ್ ಭಾರತದ ಸಾರ್ವಜನಿಕ ನೀತಿ, ನಿರ್ದೇಶಕಿ ಅಂಕಿ ದಾಸ್ ಅವರು ಈ ವಿಚಾರವಾಗಿ ತಮ್ಮ ಸಿಬ್ಬಂದಿಯ ಮೇಲೆ ಒತ್ತಡ ಹೇರುತ್ತಿದ್ದರು,’ ಎಂದು ಅಮೆರಿಕದ ‘ವಾಲ್‌ಸ್ಟ್ರೀಟ್ ಜರ್ನಲ್’ ಭಾನುವಾರ ಮುಖಪುಟದಲ್ಲಿ ವರದಿ ಮಾಡಿತ್ತು. ಇದೇ ವಿಚಾರವಾಗಿ ತಮಗೆ ಬೆದರಿಕೆಗಳು ಬರುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ನಿರಂತರವಾದ ಬೆದರಿಕೆ, ಕಿರುಕುಳದಿಂದಾಗಿ ತೊಂದರೆಗೀಡಾಗಿದ್ದೇನೆ’ ಎಂದು ದಾಸ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ಹಿಂದೂ ಪತ್ರಿಕೆ ವರದಿ ಮಾಡಿದೆ.