ಜನರು ತಮ್ಮ ಸ್ವಂತ ಅನುಭವದಲ್ಲೇ ಒಂದು ಘೋಷಣೆಯಿಂದ ಆಕರ್ಷಿತರಾಗಿ ಸ್ವಯಂಪ್ರೇರಿತವಾಗಿಯೇ ಚಳುವಳಿಗೆ ಮುಂದಾಗುತ್ತಾರೆ, ಇದು ಅವರ ರಾಜಕೀಯ ಡಿಎನ್ಎಯಲ್ಲಿ ಅಚ್ಚಾಗಿರುತ್ತದೆ ಎನ್ನುವ ಸಾಮಾನ್ಯ ಚಳುವಳಿಯ ಪಾಠವನ್ನು ಸ್ವತಃ ಇಂತಹ ಒಂದು ಚಳುವಳಿಯಿಂದ ಬಂದವರೂ ಮರೆಯುತ್ತಿದ್ದಾರೆ. ಭ್ರಷ್ಟಾಚಾರ–ವಿರೋಧಿ ಆಂದೋಲನ ಮತ್ತು ಲೋಕಪಾಲ್ ಮಸೂದೆಯ ಘೋಷಣೆ ದೆಹಲಿಯ ಸಾವಿರಾರು ನಾಗರಿಕರನ್ನು ಮತ್ತು ಭಾರತದ ವಿವಿಧ ಭಾಗಗಳ ಜನರನ್ನು ರಾಮಲೀಲಾ ಮೈದಾನದಲ್ಲಿ ಅನಿರ್ದಿಷ್ಟ ಧರಣಿಗೆ ಕರೆತಂದಿತ್ತು ಎಂಬುದನ್ನು ಎ.ಎ.ಪಿ. ಮರೆಯಬಾರದು. ಭಾರದ್ವಾಜ್ ಅವರು ಶಾಹೀನ್‌ಬಾಗ್‌ನ ಬಗ್ಗೆ ಹೇಳಿದಂತೆ, ಆ ಸಮಯದಲ್ಲಿ ಶೀಲಾ ದೀಕ್ಷಿತ್ ಅವರ ನೇತೃತ್ವದ ದೆಹಲಿ ಸರಕಾರವನ್ನು ಅಸ್ಥಿರಗೊಳಿಸಲು ಲೋಕಪಾಲ್ ಚಳುವಳಿಯನ್ನೂ ಸಹ ಬಿಜೆಪಿಯೇ ಸೃಷ್ಟಿಸಿತ್ತು ಎಂದು ಹೇಳಬಹುದೇ? ಹೀಗೆ ಆರೋಪಿಸುವುದು ಅಸಂಬದ್ಧ, ಮತ್ತು ಜನಚಳುವಳಿಗೆ ಮತ್ತು ಎ.ಎ.ಪಿ ಜನನಕ್ಕೆ ಮಾಡುವ ಅವಮಾನ. ಅದೇ ರೀತಿಯಲ್ಲಿ ಶಾಹೀನ್‌ಬಾಗ್‌ನ ಪ್ರತಿಭಟನಾಕಾರರು ಬಿಜೆಪಿಯ ದಾಳಗಳು ಎಂದು ಆರೋಪಿಸುವುದು ಕೂಡ.
ಬೃಂದಾ ಕಾರಟ್
ಒಂದು ಪ್ರತಿಭಟನೆಯನ್ನು ಕೀಳಾಗಿಸಲು ಮತ್ತು ರಾಕ್ಷಸೀಯವೆಂದು ಚಿತ್ರಿಸಲು ಅನೇಕ ಹಾದಿಗಳಿವೆ. ಆದರೆ ಶಾಹಿನ್‌ಬಾಗ್ ಪ್ರತಿಭಟನೆಗಳನ್ನು ಗುರಿಮಾಡಿರುವುದಂತೂ ಅಸಹ್ಯಕಾರಿಯಾಗಿದೆ. ಇಂತಹ ಇತ್ತೀಚಿನ ಸುತ್ತು ಎಂದರೆ, ಇತ್ತೀಚಿಗೆ ಆಮ್ ಆದ್ಮಿ ಪಕ್ಷ(ಎ.ಎ.ಪಿ.)ದ ಮುಖ್ಯ ವಕ್ತಾರ ಮತ್ತು ಶಾಸಕರಾದ ಸೌರಭ್ ಭರದ್ವಾಜ್ ಅವರ ಅನಿರೀಕ್ಷಿತ ಹೇಳಿಕೆ. ಪ್ರತಿಭಟನೆಯ ನಾಯಕರು ಎಂದು ಹೇಳಿಕೊಳ್ಳುವ ಸ್ಥಳೀಯ ನಿವಾಸಿಗಳ ಒಂದು ಗುಂಪನ್ನು ಬಿಜೆಪಿಗೆ ಸೇರಿಸಿಕೊಂಡುದಕ್ಕೆ ಪ್ರತಿಕ್ರಿಯಿಸುತ್ತಾ, ಸಂಪೂರ್ಣ ಶಾಹೀನ್‌ಬಾಗ್ ಪ್ರತಿಭಟನೆಯು ದೆಹಲಿಯ ಚುನಾವಣಾ ಪ್ರಚಾರಕ್ಕೆ ಕೋಮುವಾದಿ ರೂಪ ಕೊಡಲು ಬಿಜೆಪಿಯವರಿಂದ ರೂಪಿಸಿದ ತಂತ್ರವಾಗಿದೆ ಎಂದು ಭಾರದ್ವಾಜ್ ಸಾರಿದ್ದಾರೆ. “ನಿಜ, ಅದು ಪ್ರಜಾಪ್ರಭುತ್ವಕ್ಕಾಗಿ ನಡೆಯುತ್ತಿರುವ ಪ್ರತಿಭಟನೆ ಎಂದು ನಂಬಿ ಪ್ರಜಾಪ್ರಭುತ್ವದ ಪರವಾಗಿರುವ ಅನೇಕರು ಪ್ರತಿಭಟನೆಯಲ್ಲಿ ಸೇರಿಕೊಂಡರು. ಆದರೆ ಅವರ ನಂಬಿಕೆಗೆ ದ್ರೋಹ ಬಗೆಯಲಾಯಿತು. ಏಕೆಂದರೆ ಆ ಪ್ರತಿಭಟನೆಯು ಬಿಜೆಪಿಯವರಿಂದ ಸೃಷ್ಟಿಯಾದದ್ದು ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಪತ್ರಿಕಾ ಗೋಷ್ಠಿಯಲ್ಲಿ ಶಾಸಕ ಸೌರಭ ಭಾರದ್ವಾಜ ಹೇಳಿದ್ದಾರೆ. ಬಿಜೆಪಿಯದ್ದು ಬೂಟಾಟಿಕೆಯೆಂಬುದರಲ್ಲಿ ಸಂದೇಹವೇನಿಲ್ಲ. ಆದರೆ ಅದರ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುವ ಭರದಲ್ಲಿ ಈತ ಶಾಹೀನಬಾಗ್‌ನ ವಿರುದ್ಧ ಬಿಜೆಪಿಯ ಜತೆ ನಿಂತಂತಾಗಿದೆ. ಈ ರೀತಿಯ ಹೇಳಿಕೆ ನೀಡುವ ಮೊದಲು, ಬಿಜೆಪಿಗೆ ಸೇರಿದ ಆ ಜನಗಳು ಯಾರು ಎಂದು ಆ ಪ್ರದೇಶದ ತಮ್ಮದೇ ಶಾಸಕ ಸಹಯೋಗಿಯಿಂದ ಸತ್ಯವನ್ನು ಕಂಡುಹಿಡಿಯಬೇಕಿತ್ತು. ಹಾಗೇನಾದರೂ ಮಾಡಿದ್ದರೆ ಅವರು ಈ ಮಂದಿ ಯಾವುದೇ ರೀತಿಯಲ್ಲಿ ಕಲ್ಪಿಸಿಕೊಂಡರೂ ಶಾಹೀನಬಾಗ್ ಪ್ರತಿಭಟನೆಯ “ನಾಯಕರು” ಆಗಿರಲಿಲ್ಲ ಮತ್ತು ಅಲ್ಲಿನ ನಿವಾಸಿಗಳು ದೃಢೀಕರಿಸಿದಂತೆ ಆ ಚಳುವಳಿಯ ಪರಿಧಿಯಲ್ಲಿಯೂ ಇರಲಿಲ್ಲ ಎಂಬುದು ಗೊತ್ತಾಗುತ್ತಿತ್ತು.
ಎ.ಎ.ಪಿ.ಯಲ್ಲಿರುವ ಸ್ವತಃ ಭಾರದ್ವಾಜ್ ಮತ್ತು ಸಹೋದ್ಯೋಗಿಗಳೆಲ್ಲರೂ ಒಂದು ಸಾಮೂಹಿಕ ಚಳುವಳಿಯ ರಾಜಕೀಯ ಉತ್ಪನ್ನಗಳು. ಆದರೂ, ಇವರೇ ಜನರು ತಮ್ಮ ಸ್ವಂತ ಅನುಭವದಲ್ಲೇ ಒಂದು ಘೋಷಣೆಯಿಂದ ಆಕರ್ಷಿತರಾಗಿ ಸ್ವಯಂಪ್ರೇರಿತವಾಗಿಯೇ ಚಳುವಳಿಗೆ ಮುಂದಾಗುತ್ತಾರೆ, ಇದು ಅವರ ರಾಜಕೀಯ ಡಿಎನ್ಎಯಲ್ಲಿ ಅಚ್ಚಾಗಿರುತ್ತದೆ ಎನ್ನುವ ಸಾಮಾನ್ಯ ಚಳುವಳಿಯ ಪಾಠವನ್ನು ಮರೆಯುತ್ತಿದ್ದಾರೆ. ಭ್ರಷ್ಟಾಚಾರ-ವಿರೋಧಿ ಆಂದೋಲನ ಮತ್ತು ಲೋಕಪಾಲ್ ಮಸೂದೆಯ ಘೋಷಣೆ ದೆಹಲಿಯ ಸಾವಿರಾರು ನಾಗರಿಕರನ್ನು ಮತ್ತು ಭಾರತದ ವಿವಿಧ ಭಾಗಗಳ ಜನರನ್ನು ರಾಮಲೀಲಾ ಮೈದಾನದಲ್ಲಿ ಅನಿರ್ದಿಷ್ಟ ಧರಣಿಗೆ ಕರೆತಂದಿತ್ತು ಎಂಬುದನ್ನು ಎ.ಎ.ಪಿ. ಮರೆಯಬಾರದು.
ಕುಖ್ಯಾತ ಕಪಿಲ್ ಮಿಶ್ರ ಸೇರಿದಂತೆ ಬಿಜೆಪಿಯಲ್ಲಿದ್ದ ಹಲವರು ಎ.ಎ.ಪಿ. ಸೇರಿದರು ಮತ್ತು ಅವರಿಗೆ ಟಿಕೆಟ್ ಕೂಡ ನೀಡಲಾಯಿತು. ಭಾರದ್ವಾಜ್ ಅವರು ಶಾಹೀನ್‌ಬಾಗ್‌ನ ಬಗ್ಗೆ ಹೇಳಿದಂತೆ, ಆ ಸಮಯದಲ್ಲಿ ಶೀಲಾ ದೀಕ್ಷಿತ್ ಅವರ ನೇತೃತ್ವದ ದೆಹಲಿ ಸರಕಾರವನ್ನು ಅಸ್ಥಿರಗೊಳಿಸಲು ಲೋಕಪಾಲ್ ಚಳುವಳಿಯನ್ನೂ ಸಹ ಬಿಜೆಪಿಯೇ ಸೃಷ್ಟಿಸಿತ್ತು ಎಂದು ಹೇಳಬಹುದೇ? ಹೀಗೆ ಆರೋಪಿಸುವುದು ಅಸಂಬದ್ಧ, ಮತ್ತು ಜನಚಳುವಳಿಗೆ ಮತ್ತು ಎ.ಎ.ಪಿ ಜನನಕ್ಕೆ ಮಾಡುವ ಅವಮಾನ. ಅದೇ ರೀತಿಯಲ್ಲಿ ಶಾಹೀನ್‌ಬಾಗ್‌ನ ಪ್ರತಿಭಟನಾಕಾರರು ಬಿಜೆಪಿಯ ದಾಳಗಳು ಎಂದು ಆರೋಪಿಸುವುದು ಕೂಡ.
ಇಲ್ಲ, ಶಾಹಿನ್ ಬಾಗ್ ಖಂಡಿತವಾಗಿಯೂ ಬಿಜೆಪಿ ಸೃಷ್ಟಿಸಿದ್ದಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಪಾಸು ಮಾಡಿಸಿಕೊಂಡದ್ದು ಮತ್ತು ಅದನ್ನನುಸರಿಸಿ ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಯ ‘ಕ್ರೊನೋಲೊಜಿ” ಬಗ್ಗೆ ಅಮಿತ್ ಶಾ ಅವರ ಘೋಷಣೆಯಿಂದ ಒಂದಿಡೀ ಸಮುದಾಯದಲ್ಲಿ ಉಂಟಾದ ಒಂದು ಆಳವಾದ, ನ್ಯಾಯಸಮ್ಮತವಾದ ಮತ್ತು ವ್ಯಾಪಕ ಆತಂಕವನ್ನು ಈ ಪ್ರತಿಭಟನೆ ಬಿಂಬಿಸುತ್ತದೆ ಎಂಬುದು ಇದನ್ನು ದೂರದಿಂದಲಾದರೂ ನೋಡುತ್ತಿರುವ ಎಲ್ಲರಿಗೂ ಗೊತ್ತೇ ಇದೆ. ಶಾಹೀನ್‌ಬಾಗ್‌ನ ಧೈರ್ಯಶಾಲಿ ಮಹಿಳೆಯರು ತಮ್ಮ ಧರಣಿಯ ಮೂಲಕ ಲಕ್ಷಾಂತರ ಜನರ ಹೃದಯಗಳನ್ನು ಮಿಡಿದಿದ್ದಾರೆ.
ಆದ್ದರಿಂದ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ದಬ್ಬಾಳಿಕೆಯ ವಿರುದ್ಧ ಎಂದು ಆರಂಭವಾದ ಪ್ರತಿಭಟನೆ (ಈ ಪ್ರದೇಶದ ಅನೇಕ ಕುಟುಂಬಗಳು ಜಾಮೀಯಾದಲ್ಲಿ ಅಧ್ಯಯನ ಮಾಡುತ್ತಿರುವುದರಿಂದ), ದಶಕಗಳಲ್ಲಿ ಕಂಡಿರದಂತಹ ಅತೀ ದೊಡ್ಡ ಮಹಿಳಾ ನೇತೃತ್ವದ ನಿರಂತರ ಪ್ರತಿಭಟನೆಯಾಗಿ ಬೆಳೆಯಿತು, ಭಾರತದಾದ್ಯಂತ ಪ್ರತಿಧ್ವನಿಸಿತು. ಜನರು ಅದರಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಕಾರಣ, ಭಾರತದ ನಾಗರಿಕರಾಗಿ ತಮ್ಮ ಅಸ್ತಿತ್ವವು ನೇರವಾಗಿ ಭಾರತದ ಸಂವಿಧಾನದೊಂದಿಗೆ ತಳುಕು ಹಾಕಿಕೊಂಡಿದೆ ಎಂಬುದರ ಆಳವಾದ ಪರಿಜ್ಞಾನ ಅವರಲ್ಲಿ ಮೂಡಿತ್ತು. ಎಲ್ಲಾ ಕಡೆ ರಾಷ್ಟ್ರಧ್ವಜವನ್ನು ಹಾರಿಸಲಾಯಿತು, ಯುವ ಸಮುದಾಯದಿಂದ ಸಂವಿಧಾನದ ಓದು ಶುರುವಾಯಿತು ಮತ್ತು ಸಂವಿಧಾನದ ಕುರಿತು ನಡೆಯುವ ಸಭೆಗಳನ್ನು ಜನರು ಗಮನವಿಟ್ಟು ಆಲಿಸಿದರು. ಸ್ವತಂತ್ರ ಭಾರತದಲ್ಲಿನ ಚಳುವಳಿಗಳ ಏರಿಳಿತಗಳಲ್ಲಿನ ಒಂದು ಮಹತ್ವದ ಕ್ಷಣವೆಂದರೆ “ಜಾತ್ಯತೀತತೆ”, “ಪ್ರಜಾಪ್ರಭುತ್ವ”, “ಸಮಾನ ಪೌರತ್ವ ಹಕ್ಕುಗಳು” ಎಂಬ ಪದಗಳು ಪ್ರತಿದಿನ ಮಾಡುವ ಅಸಂಖ್ಯಾತ ಭಾಷಣಗಳಲ್ಲಿ ಪುನರಾವರ್ತನೆಗೊಳ್ಳುತ್ತಿದ್ದುದು. ಶಾಹಿನ್‌ಬಾಗ್ ಪ್ರತಿಭಟನೆಯಿಂದ ಪ್ರೇರೇಪಿತಗೊಂಡು ದೇಶಾದ್ಯಂತ ನೂರಕ್ಕೂ ಹೆಚ್ಚು ಇದೇ ಮಾದರಿಯ ಮಹಿಳಾ ನೇತೃತ್ವದ ಪ್ರತಿಭಟನೆಗಳು ನಡೆದವು.
ಪ್ರತಿಭಟನೆಯ ಮತ್ತೊಂದು ಪ್ರಮುಖ ಲಕ್ಷಣವೆಂದರೆ, ಸಮುದಾಯದ ಮೂಲಭೂತವಾದಿ ಶಕ್ತಿಗಳು ಈ ಸಮಸ್ಯೆಯ ದಾರಿ ತಪ್ಪಿಸಿ ಹಿಂದೂ ಮುಸ್ಲಿಂ ವಿರೋಧಿ ಭಾವವನ್ನು ಬಿತ್ತಲು ಪ್ರಯತ್ನಿಸಿದರೂ ಶಾಹಿನ್ ಬಾಗ್ ಮತ್ತು ಇತರ ಚಳುವಳಿಗಳ ಸ್ಥಳದಲ್ಲಿನ ಮಹಿಳೆಯರು ಕೋಮು ವಿಭಜಕ ಭಾಷಣಗಳನ್ನು ಮಾಡಲು ತಮ್ಮ ವೇದಿಕೆಗಳಲ್ಲಿ ಎಂದಿಗೂ ಅನುಮತಿ ನೀಡಲಿಲ್ಲ. ಮತ್ತೊಂದು ಪ್ರತಿಭಟನಾ ಸ್ಥಳದಲ್ಲಿ, ಭಾಷಣಕಾರರೊಬ್ಬರು “ಸಮುದಾಯವನ್ನು ಸಜ್ಜುಗೊಳಿಸುವ” ಕುರಿತು ಮಾತನಾಡುವಾಗ ಅಲ್ಲಿನ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನಾನೇ ಸಾಕ್ಷಿಯಾಗಿದ್ದೆ. ಆಕ್ಷೇಪಿಸಿದ ಮಹಿಳೆ “ಇದು ಕೇವಲ ಒಂದು ಸಮುದಾಯಕ್ಕೆ ಮಾತ್ರವಲ್ಲ, ಎಲ್ಲಾ ಭಾರತೀಯರಿಗಾಗಿ ಇರುವುದು” ಎಂದು ಪ್ರತಿಕ್ರಿಯಿಸಿದ್ದರು. ಭಾರತದ ಸ್ವಾತಂತ್ರ್ಯದ ನಂತರ, ಸಮುದಾಯಗಳ ಒಳಗಿನ ಮೂಲಭೂತವಾದಿ ಶಕ್ತಿಗಳು ಮಹಿಳೆಯರನ್ನು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುವುದಕ್ಕೆ ನಾವು ಸಾಕ್ಷಿಯಾಗಿದ್ದೇವೆ.
ರಾಜಕೀಯ ಯಶಸ್ಸಿನ ಏಣಿಯನ್ನು ಏರಲು ಹಿಂದುತ್ವ ಬಲಪಂಥೀಯ ಮಹಿಳೆಯರು ಕೋಮು ದ್ವೇಷವನ್ನು ಹುಟ್ಟು ಹಾಕಲು, ಹೆಚ್ಷಿಸಲು ಮುಂದಾಗಿದ್ದನ್ನು ನಾವು ನೋಡಿದ್ದೇವೆ. ಇವರ ಪಡಿಯಚ್ಚಿನಂತೆ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಮಹಿಳೆಯರೂ ಸಹ ದ್ವೇಷದ ಭಾಷೆ ಮಾತಾಡುತ್ತಿರುವುದನ್ನು ನೋಡಿದ್ದೇವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಶಾಹಿನ್‌ಭಾಗ್ ಪ್ರತಿಭಟನೆಯು ಮುಸ್ಲಿಂ ಮಹಿಳೆಯರ ನೇತೃತ್ವದಲ್ಲಿನ ಜಾತ್ಯಾತೀತ, ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತವಾಗಿ ನಡೆದ ಅಖಿಲ ಭಾರತ ಪ್ರತಿಭಟನೆಯಾಗಿದೆ.
ನಾನು ನನ್ನ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಹಯೋಗಿಗಳು ಅನೇಕ ಸಂದರ್ಭಗಳಲ್ಲಿ ನಮ್ಮ ಸೌಹಾರ್ದವನ್ನು ವ್ಯಕ್ತಪಡಿಸಲು ಶಾಹಿನ್‌ಬಾಗ್‌ಗೆ ಹೋಗಿದ್ದೇವೆ. ಇಂತಹ ಮೊದಲ ಭೇಟಿ ಧರಣಿ ಆರಂಭದ ಮೊದಲ ದಿನಗಳಲ್ಲೇ ನಡೆದಿತ್ತು. ನಾವು, ಈ ಸ್ಥಳದ ಸಾಮಾನ್ಯ ಮಹಿಳೆಯರು ಆತ್ಮವಿಶ್ವಾಸದಿಂದ ಸಂಘಟನೆಯ ಕೇಂದ್ರಕ್ಕೆ ಬಂದ ಪರಿವರ್ತನೆಯನ್ನು ನೋಡಿದ್ದೇವೆ. ಇಂತಹ ಬದಲಾವಣೆಯನ್ನು ವಿವಿಧ ರಾಜಕೀಯ ಬಣ್ಣಗಳ ಅನೇಕರಿಗೆ ನಂಬಲು ಕಷ್ಟವಾಗುತ್ತಿದೆ. ಬಿಜೆಪಿ ಮೊದಲಿಂದಲೂ ಈ ಮಹಿಳೆಯರು ಪುರುಷರ ಕೈಗೊಂಬೆಗಳಾಗಿದ್ದಾರೆ ಎಂಬ ಸಿದ್ಧಾಂತವನ್ನು ಮೊದಲಿನಿಂದಲೂ ಹರಡುತ್ತಲೇ ಬಂದಿದೆ. ಇತ್ತೀಚೆಗೆ ನ್ಯಾಯಾಲಯದ ವಿಚಾರಣೆಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿನ ಮಹಿಳೆಯರ ಸ್ಥಿತಿ ಹೇಗಿದೆ ಎಂದರೆ “ ಪ್ಯಾಲೆಸ್ಟೈನ್‌ನಲ್ಲಿ ಇದ್ದಂತೆ, ಮಹಿಳೆಯರು ಮತ್ತು ಮಕ್ಕಳನ್ನು ಪುರುಷರು ತಮ್ಮ ಮುಂದೆ ನಿಲ್ಲಿಸಿದಂತೆ ಇದೆ” ಎಂಬ ಇಂತಹದೇ ಅತಿರೇಕದ, ಅಜ್ಞಾನದ ಮಾತುಗಳನ್ನು ಹೇಳುತ್ತ ಸಂಘ ಪರಿವಾರದ ಅರ್ಜಿದಾರರೊಬ್ಬರು ವಾದಿಸುವುದನ್ನು ಕೇಳಿ ಆಶ್ಚರ್ಯವಾಯಿತು. ಈ ಸಂದರ್ಭದಲ್ಲಿ ಅವರು ನ್ಯಾಯಾಲಯದಿಂದ ತೀವ್ರ ಗದರಿಕೆಯನ್ನು ಎದುರಿಸಬೇಕಾಯಿತು. ಆದರೆ ಮಹಿಳೆಯರಿಗೆ ಒಂದು ಸ್ವತಂತ್ರ ಅಸ್ತಿತ್ವ ಇದೆ ಎಂದು ಗುರುತಿಸಲು ಸಾಧ್ಯವಾಗದಿರುವುದು ಪಿತೃಪ್ರಧಾನ ವ್ಯವಸ್ಥೆಗೆ ತಟ್ಟಿರುವ ಶಾಪವಾಗಿದೆ. ಇಂತಹ ಸಂಕುಚಿತ ಚಿಂತನೆಯನ್ನು ಎ.ಎ.ಪಿ. ವಕ್ತಾರರು ಪ್ರತಿಧ್ವನಿಸಿದ್ದು ದುರದೃಷ್ಟಕರ.
ಶಾಹೀನ್‌ಬಾಗ್‌ಕ್ಕಿಂತ ಬಹಳ ಮುಂಚೆಯೇ ದೆಹಲಿಯನ್ನು ಧ್ರುವೀಕರಿಸಲು ಬಿಜೆಪಿ ಪ್ರಯತ್ನಿಸಿತ್ತು. ಮಹಿಳೆಯರು ಮತ್ತು ಶಾಹೀನ್‌ಬಾಗ್‌ನ ನಿವಾಸಿಗಳು ಸೇರಿದಂತೆ ದೆಹಲಿಯ ಜನರು ಬಿಜೆಪಿಯನ್ನು ಹಿಮ್ಮೆಟ್ಟಿಸಿದರು. ಇವತ್ತು ಸಿಎಎ ವಿರೋಧಿ ಪ್ರತಿಭಟನೆಗಳನ್ನು ಈಶಾನ್ಯ ದೆಹಲಿಯಲ್ಲಿನ ಕೋಮು ಹಿಂಸಾಚಾರದೊಂದಿಗೆ ಜೋಡಿಸಲು ದೆಹಲಿ ಪೋಲಿಸರು ಒಂದು ಘಟನಾವಳಿಯನ್ನು ಉತ್ಪಾದಿಸುತ್ತಿದ್ದಾರೆ. ಶಾಹೀನ್‌ಬಾಗ್ ಪ್ರತಿಭಟನೆಯ ಮುಖವಾಯಿತು. ಯಾವುದೋ ಕಾರಣಕ್ಕಾಗಿ ತಮ್ಮನ್ನು ಸೇರಿಕೊಂಡವರನ್ನು ತಮ್ಮ ಸುಳ್ಳು ಕಥನಗಳಲ್ಲಿ ಸಾಕ್ಷಿಗಳಾಗಿ ಬಳಸುವುದು ಬಿಜೆಪಿಯವರಿಗೆ ಸಾಧ್ಯವಾಗದ ಸಂಗತಿಯೇನೂ ಅಲ್ಲ. ಅದೇನೆ ಇರಲಿ, ಭಾರದ್ವಾಜ ಶಾಹೀನ್‌ಬಾಗ್ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆಗಳಿಗಾಗಿ ಅವರಿಗೆ ವಿಷಾದ ವ್ಯಕ್ತಪಡಿಸಬೇಕು. ಬಿಜೆಪಿಯ ಕೋಮುವಾದಿ ಇಬ್ಬಂದಿತನಕ್ಕೆ ಬೇರೆ ಸಾಕಷ್ಟ್ಟು ಪುರಾವೆಗಳಿವೆ. ಅದಕ್ಕಾಗಿ ಶಾಹೀನ್‌ಬಾಗ್ ಪ್ರತಿಭಟನೆಯ ಮೇಲೆ ಗುರಿಯಿಡಬೇಕಾಗಿಯೇನೂ ಇಲ್ಲ.
ಇಲ್ಲ, ಶಾಹಿನ್ ಬಾಗ್ ಖಂಡಿತವಾಗಿಯೂ ಬಿಜೆಪಿ ಸೃಷ್ಟಿಸಿದ್ದಲ್ಲ. ಭಾರದ್ವಾಜ್ ಶಾಹಿನ್ ಬಾಗ್ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆಗಳಿಗಾಗಿ ಅವರಿಗೆ ವಿಷಾದ ವ್ಯಕ್ತಪಡಿಸಬೇಕು. ಬಿಜೆಪಿಯ
ಕೋಮುವಾದಿ ಇಬ್ಬಂದಿತನಕ್ಕೆ ಬೇರೆ ಸಾಕಷ್ಟು ಪುರಾವೆಗಳಿವೆ. ಅದಕ್ಕಾ ಶಾಹಿನ್ ಬಾಗ್ ಪ್ರತಿಭಟನೆ ಮೇಲೆ ಗುರಿಯಿಡಬೇಕಾಗಿಯೇನೂ ಇಲ್ಲ.
ಅನು: ಲವಿತ್ರ ವಿ.