ಮೋದಿ ಸರಕಾರದ ಮೊದಲ ವಾರ್ಷಿಕೋತ್ಸವ ಆರಂಭವಾಗಿದೆ. ಪ್ರಧಾನ ಮಂತ್ರಿಗಳು ತಮ್ಮ ಅಭೂತಪೂರ್ವ ವಿದೇಶಿ ಭೇಟಿಗಳಲ್ಲಿ ಅನಿವಾಸಿ ಭಾರತೀಯರಿಗೆ ಅಬ್ಬರದ ಮಾತುಗಳನ್ನು ಉಣಬಡಿಸುವ ಕಲೆಯನ್ನು ಪರಿಪೂರ್ಣಗೊಳಿಸಿಕೊಂಡಿದ್ದಾರೆ. ಈಗ ಆರೆಸ್ಸೆಸ್/ಬಿಜೆಪಿ ಭಾರತೀಯ ಜನತೆಗೆ ಇದೇ ರೀತಿ ಪುಡಾರಿ ಮಾತುಗಳನ್ನು ಉಣಬಡಿಸುವುದರಲ್ಲಿ ತೊಡಗಲಿದ್ದಾರೆ. ಆದರೆ ಪ್ರಚಾರದಿಂದ ಎಂದೂ ಹೊಟ್ಟೆ ತುಂಬಿಲ್ಲ, ತುಂಬುವುದೂ ಇಲ್ಲ ಎಂದು ಈ ಬಿಜೆಪಿ ಸರಕಾರಕ್ಕೆ ಹೇಳಬೇಕಾಗಿದೆ.
ಈ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಒಂದು ವರ್ಷ ಪೂರೈಸಿದುದರ ಅಧಿಕೃತ ಆಚರಣೆಗಳು ಆರಂಭವಾಗಿವೆ; ಪ್ರಧಾನ ಮಂತ್ರಿ ಮೋದಿಯವರು ಮಥುರಾದಲ್ಲಿ ಮಾಧ್ಯಮಗಳ ಕೋಲ್ಮಿಂಚುಗಳ ನಡುವೆ ಇವನ್ನು ಆರಂಭಿಸಿದ್ದಾರೆ. ದೇಶದ ಉದ್ದಗಲಕ್ಕೂ 200 ಸಾರ್ವಜನಿಕ ಸಭೆಗಳನ್ನು ನಡೆಸುವುದಾಗಿ ಬಿಜೆಪಿ ಪ್ರಕಟಿಸಿದೆ. ಎಲ್ಲ ಕೇಂದ್ರ ಮಂತ್ರಿಗಳು ತಲಾ ಮೂರು ಸಾರ್ವಜನಿಕ ಸಭೆಗಳನ್ನು ಮತ್ತು ಮೂರು ಪತ್ರಿಕಾ ಸಮ್ಮೇಳನಗಳನ್ನು ನಡೆಸುತ್ತಾರೆ ಎಂದು ಹೇಳಲಾಗಿದೆ. ಅಂದರೆ ದೇಶದ ಉದ್ದಗಲಕ್ಕೂ 200ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳು ಮತ್ತು ಪತ್ರಿಕಾ ಸಮ್ಮೇಳನಗಳು ನಡೆಯಲಿವೆ.
ಇವಲ್ಲದೆ ಇತರ ಆರೆಸ್ಸೆಸ್/ಬಿಜೆಪಿ ಮುಖಂಡರು 200 ಸಭೆಗಳನ್ನು ನಡೆಸಬಹುದು. ಪ್ರಧಾನ ಮಂತ್ರಿಗಳು ತಮ್ಮ ಅಭೂತಪೂರ್ವ ವಿದೇಶಿ ಭೇಟಿಗಳಲ್ಲಿ ಅನಿವಾಸಿ ಭಾರತೀಯರಿಗೆ ಅಬ್ಬರದ ಮಾತುಗಳನ್ನು ಉಣಬಡಿಸುವ ಕಲೆಯನ್ನು ಪರಿಪೂರ್ಣಗೊಳಿಸಿಕೊಂಡಿದ್ದಾರೆ. ಈಗ ಆರೆಸ್ಸೆಸ್/ಬಿಜೆಪಿ ಭಾರತೀಯ ಜನತೆಗೆ ಇದೇ ರೀತಿ ಪುಡಾರಿ ಮಾತುಗಳನ್ನು ಉಣಬಡಿಸುವುದರಲ್ಲಿ ತೊಡಗಲಿದ್ದಾರೆ.
ನಿಜಕ್ಕೂ, ಅನಿಷ್ಟಕಾರಿ ಸಂಕೇತಗಳು
ಪ್ರಧಾನ ಮಂತ್ರಿಗಳು ಈ ಪ್ರಚಾರವನ್ನು ಆರಂಭಿಸಲು ಮಥುರಾವನ್ನು ಆರಿಸಿ ಕೊಂಡಿರುವುದು ಒಂದು ಅಮಾಯಕ ಕೆಲಸವೇನೂ ಅಲ್ಲ. ಅದರಲ್ಲಿ ದೇಶದೆಲ್ಲೆಡೆ ಕೋಮುವಾದಿ ಭಾವೋದ್ವೇಗಗಳನ್ನು ಹರಡಿಸುವ ಗಂಭೀರ ಅಪಾಯಗಳು ತುಂಬಿವೆ. ಆರೆಸ್ಸೆಸ್/ಬಿಜೆಪಿಯವರು ತಾವು ರಾಮಜನ್ಮಸ್ಥಾನ(ಅಯೋಧ್ಯೆ), ಕೃಷ್ಣಜನ್ಮಸ್ಥಾನ(ಮಥುರಾ) ಮತ್ತು ಕಾಶಿ ವಿಶ್ವನಾಥ ದೇವಸ್ಥಾನ(ಬನಾರಸ್) ಇವು ಮೂರನ್ನು `ವಿಮೋಚನೆ’ಗೊಳಿಸುತ್ತೇವೆ ಎಂದು ಹೇಳುತ್ತಾ ಬಂದಿರುವುದನ್ನು ನೆನಪಿಸಿಕೊಳ್ಳಿ. ಸಂದರ್ಭಕ್ಕೆ ಸೂಕ್ತವೆನ್ನುವಂತೆ ಸ್ಥಳೀಯ ಬಿಜೆಪಿ ಸಂಸದೆ ಹೇಮಾಮಾಲಿನಿ ಪ್ರಧಾನಿ ಮೋದಿಯವರಿಗೆ ಕೃಷ್ಣನ ಮೂರ್ತಿಯನ್ನು ಕೊಟ್ಟರು.
ಅಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನ ಕಟ್ಟುವ ಪ್ರಚಾರ ಶತಮಾನಗಳಷ್ಟು ಹಳೆಯದಾದ ಬಾಬ್ರಿ ಮಸೀದಿ ಧ್ವಂಸಕ್ಕೆ ಹಾದಿ ಮಾಡಿ ಕೊಟ್ಟಿತು. ಮತ್ತು ದೇಶದೆಲ್ಲೆಡೆಯಲ್ಲಿ ಸಾವಿರಾರು ಜೀವಗಳ ಬಲಿ ಪಡೆದ, ಈಗಲೂ ದೇಶದ ಧಾರ್ಮಿಕ ಅಲ್ಪಸಂಖ್ಯಾತರ ನಡುವೆ ಅಭದ್ರತೆಯ ಆಳವಾದ ಭಯವನ್ನು ಬೆಳೆಸುತ್ತಲೇ ಇರುವ ಒಂದು ದುಷ್ಟ ಕೋಮುವಾದಿ ವಿಷವನ್ನು ಹರಿಯ ಬಿಟ್ಟಿತು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಪ್ರಧಾನ ಮಂತ್ರಿಗಳು ತಮ್ಮ ರಾಜ್ಯವಾದ ಗುಜರಾತಿನ ಕ್ಷೇತ್ರವನ್ನು ಬಿಟ್ಟು ಬನಾರಸ್ ಕ್ಷೇತ್ರವನ್ನು ಉಳಿಸಿಕೊಂಡರು. ಈಗ ಒಂದು ವರ್ಷ ಮುಗಿಸಿದ್ದನ್ನು ಆಚರಿಸುವ ಕಾರ್ಯಕ್ರಮವನ್ನು ಮಥುರಾದಿಂದ ಆರಂಭಿಸಲಾಗಿದೆ. ಇವೆಲ್ಲ ನಿಜಕ್ಕೂ, ಅನಿಷ್ಟಕಾರಿ ಸಂಕೇತಗಳು.
ಮಾಧ್ಯಮಗಳ ವಿಶ್ವಾಸಾರ್ಹತೆಯ ಪ್ರಶ್ನೆ
ಎಲ್ಲ ರೀತಿಯ ಮಾಧ್ಯಮಗಳಲ್ಲಿ ಬಹುವರ್ಣಗಳ ಜಾಹೀರಾತುಗಳ ಮಹಾಪೂರ ಸರಕಾರ ಹೇಳಿದ್ದನ್ನೆಲ್ಲ ತಲೆಬಾಗಿ ಸ್ವೀಕರಿಸುವ, ಮಾಧ್ಯಮ ಭಟ್ಟಂಗಿತನದ ಮಟ್ಟಕ್ಕೆ ಏರಿದೆ. ಹೀಗಿರುವಾಗ ಈ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಮೊದಲ ವರ್ಷವನ್ನು ಉಚ್ಚ ಶ್ರೇಣಿಯಲ್ಲಿ ಪಾಸು ಮಾಡಿದೆ (ಟೈಂಸ್ ಆಫ್ ಇಂಡಿಯಾ) ಎಂದು ಮಾಧ್ಯಮ ಸರ್ವೆಗಳು ಸಾರಿರುವುದರಲ್ಲಿ ಆಶ್ಚರ್ಯವೇನಿಲ್ಲ. ಯಾರಾದರೂ ಪರೀಕ್ಷೆಗೆ ಕೂತರೆ ಮಾತ್ರ ಮಾರ್ಕ್‌ಗಳನ್ನು ಕೊಡಬಹುದು. ಇಲ್ಲಿ ಮಾಧ್ಯಮಗಳು ಈ ಸರಕಾರ ಯಾವ ಪರೀಕ್ಷೆಯನ್ನೂ ತಗೊಳ್ಳದೇ ಇದ್ದರೂ ಉದಾರವಾಗಿ ಮಾರ್ಕ್‌ಗಳನ್ನು ಕೊಟ್ಟಿವೆ.
ಮಾಧ್ಯಮಗಳು ಉಣಿಸಿದ, ಮಾಧ್ಯಮಗಳು ಪೋಷಿಸಿದ `ಜನಪ್ರಿಯತೆ’ಯ ಪ್ರಭಾವವನ್ನು ಕಂಡ ಪ್ರಮುಖ ಕಾರ್ಪೊರೇಟ್‌ಗಳು ಮಾಧ್ಯಮ ಕಂಪನಿಗಳ ಒಡೆತನ ಪಡೆಯಲು ಪರದಾಡುತ್ತಿದ್ದರೆ ಅದಕ್ಕೆ ಅಚ್ಚರಿ ಪಡಬೇಕಾಗಿಲ್ಲ. ಮಾಧ್ಯಮಗಳನ್ನು ಕಾರ್ಪೊರೇಟ್‌ಗಳು ವಹಿಸಿಕೊಳ್ಳುವುದು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳಲಿಕ್ಕಾಗಿ. ಆದರೆ ಕಾರ್ಪೊರೇಟ್‌ಗಳು ತಮ್ಮ ಭಟ್ಟಂಗಿತನದ ಉದ್ದೇಶ ಈಡೇರಿಕೆಗೆ ಮಾಧ್ಯಮಗಳ ಮೇಲೆ ಹತೋಟಿ ಪಡೆಯಲು ಧಾವಿಸಿದರೆ ಆಗ ಪ್ರಶ್ನೆ ಏಳುವುದು ಮಾಧ್ಯಮಗಳ ವಿಶ್ವಾಸಾರ್ಹತೆಯ ಮೇಲೆಯೇ.
ಬಹುಶಃ ಇದರಿಂದಲೇ ಈ ಸರಕಾರದ ಮೊದಲ ವಾರ್ಷಿಕೋತ್ಸವವನ್ನು ಹಾಡಿ ಹೊಗಳುವ ಮುಖಪುಟದ ತಲೆಬರಹ ಮತ್ತು ಅದೇ ಮುದ್ರಣ ಮಾಧ್ಯಮದ ಪ್ರಮುಖ ಸಂಪಾದಕೀಯದ ನಡುವೆ ಇರುವ ದ್ವಂದ್ವವನ್ನು ಅರ್ಥಮಾಡಿಕೊಳ್ಳಬಹುದು ಸ್ಯಾಂಪಲ್ಲಿಗೆ, ಅದೇ ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಸಂಪಾದಕೀಯ ಟಿಪ್ಪಣಿಗಳನ್ನು ನೋಡಿ: ……ಎನ್‌ಡಿಎ ಸರಕಾರ ಒಂದು ವರ್ಷ ಪೂರೈಸಿರುವಾಗಲೇ ಭಾರತೀಯ ಆರ್ಥಿಕ ನಿಜವಾಗಿ ಸುಧಾರಿಸಿಕೊಂಡಿದೆಯೇ ಎಂದು ಹೇಳುವುದು ಕಷ್ಟ. ರಫ್ತುಗಳು ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿ ಏರಿಕೆ ಇಲ್ಲ. 2014ರಲ್ಲಿ ಮೇಲಕ್ಕೆ ನೆಗೆದ ಶೇರು ಸೂಚ್ಯಂಕ ಮತ್ತೆ ಕೆಳಮುಖ ಮಾಡಿದೆ. ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಿಲ್ಲ. ಈ ಕೊನೆಯದ್ದು ನಿರ್ಣಾಯಕ, ಏಕೆಂದರೆ ಪ್ರತಿವರ್ಷ 1 ಕೋಟಿ ಹೊಸ ಕಾರ್ಮಿಕರು ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸುತ್ತಾರೆ ಇತ್ಯಾದಿ, ಇತ್ಯಾದಿ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಹೇಳುತ್ತದೆ: ಸರಕಾರ ಯಾವುದೇ ವ್ಯವಸ್ಥಿತ ಅಥವ ದೀರ್ಘಕಾಲೀನ ಯೋಜನೆಯ ಪ್ರಕಾರ ಕೆಲಸ ಮಾಡುವಂತೆ ಕಾಣುತ್ತಿಲ್ಲ. ಮುಂದುವರೆದು ಅದು, ಸರಕಾರ ಒಮ್ಮುಖದ ಸಂಪರ್ಕ ಪ್ರಚಾರದ ಮೂಲಕ ಜನತೆಗೆ ನೇರವಾಗಿ ಮನವಿ ಮಾಡಿ ಟೀಕಾಕಾರರು ಮತ್ತು ವಿರೋಧಿಗಳನ್ನು ದಾಟಿ ಹೋಗಲು ಪ್ರಯತ್ನಿಸುವ ಬದಲು ಸಂಸತ್ತಿನಲ್ಲಿ ಒಂದು ಒಮ್ಮತವನ್ನು ತರಲು ರಾಜ್ಯತಂತ್ರವನ್ನು ಬಳಸಬೇಕು ಎನ್ನುತ್ತದೆ.
ಏಶ್ಯನ್ ಏಜ್ ಹೇಳುತ್ತದೆ: “…ಸಮಾಜದ ಪ್ರತಿಯೊಂದು ವಿಭಾಗದಲ್ಲಿ ಭಾರೀ ಸದ್ದು ಮಾಡಿದ ಭರವಸೆಗಳು ನಿರೀಕ್ಷೆಗಳನ್ನು ಮುಗಿಲೆತ್ತರಕ್ಕೆ ಏರಿಸಿದ ನಂತರ ಅದರ ಈಡೇರಿಕೆ ಸಪ್ಪೆಯಾಗಿ ಬಿಟ್ಟಿದೆ ಮತ್ತು ಸರಕಾರ ಅದರ ಕೆಲವು ಪ್ರಮುಖ ಬೆಂಬಲಿಗರಿಂದಲೇ ವಿಮರ್ಶಾತ್ಮಕ ಪರೀಕ್ಷಣೆಗೆ ಒಳಗಾಗಿದೆ, ಅವರು ಈ ಸರಕಾರ ದಿಶಾಹೀನವಾಗಿದೆ ಎಂದು ಆಪಾದಿಸುತ್ತಾರೆ.
ಮುಂದುವರೆದು ಅದು ಹೇಳುತ್ತದೆ: ಕೃಷಿ ವಲಯ ದೇಶದ ಉದ್ದಗಲಕ್ಕೂ ತೀವ್ರ ಸಂಕಟದಲ್ಲಿದೆ. ಕಾರ್ಪೊರೇಟ್ ವಲಯ, ಅದರಲ್ಲೂ ಸರಕಾರ ಯಾರನ್ನು ಸಂತುಷ್ಟಗೊಳಿಸಲು ಹತಾಶ ಪ್ರಯತ್ನ ನಡೆಸುತ್ತಿದೆಯೋ, ಆ ದೊಡ್ಡ ವ್ಯವಹಾರಸ್ಥರು ಗೊಣಗಾಟ ಆರಂಭಿಸಿದ್ದಾರೆ.”
ಇಕನಾಮಿಕ್ ಟೈಮ್ಸ್ ಕೂಡ ಹೇಳುತ್ತದೆ: ಭಿನ್ನಮತವನ್ನು ಒಂದು ವಿಶಾಲ ಆಧಾರದ ನಿರ್ಣಯ ಕೈಗೊಳ್ಳಲು ಸಿಕ್ಕಿರುವ ಮಾಹಿತಿಗಳು ಎಂದು ಬಗೆಯುವ ಬದಲು ಅವು ವಿಶ್ವಾಸಘಾತದ ವಿವಿಧ ಛಾಯೆಗಳನ್ನು ಪಡಕೊಳ್ಳುತ್ತಿವೆ. ಪ್ರತಿಪಕ್ಷಗಳನ್ನು ಎದುರಿಸುವುದಷ್ಟೇ ಅಲ್ಲ, ಸಂವಾದದಲ್ಲಿ ತೊಡಗಿಸಬೇಕಾಗಿದೆ. ಇವು ಮುಂದಿನ ನಾಲ್ಕು ವರ್ಷಗಳ ಅಜೆಂಡಾದಲ್ಲಿ ಸೇರಬೇಕಾಗಿದೆ. ಮತದಾರರಿಗೆ ವಾರ್ಷಿಕ ಲೆಕ್ಕಾಚಾರಗಳೇನೂ ಬೇಕಿಲ್ಲ.
ಇಂತಹ ಭಾವನೆಗಳನ್ನೇ ಪ್ರತಿಧ್ವನಿಸುತ್ತ, ಬಿಸಿನೆಸ್ ಸ್ಟಾಂಡರ್ಡ್ ಸಂಪಾದಕೀಯ ಹೀಗೆ ಕೊನೆಗೊಳ್ಳುತ್ತದೆ: ಈ ಸರಕಾರದ ಮಂತ್ರಿಗಳು ಕಳೆದ ವರ್ಷದಿಂದ ಕಲಿಯುವುದು ಒಳ್ಳೆಯದು, ಆಮೂಲಕ ಮೇ 26, 2016 ರಂದು ಪ್ರಚಾರ ಕೋಲ್ಮಿಂಚುಗಳ ಅಗತ್ಯವಿಲ್ಲದಂತೆ ಮಾಡಬೇಕು.
ದಿ ಹಿಂದು ಪತ್ರಿಕೆ ಹೇಳುತ್ತದೆ: ಮೊದಲ ವಾರ್ಷಿಕದಂದು ಕೆಲವು ಭರವಸೆಗಳು ಪ್ರಸ್ತಾವಗಳಾಗಿಯೇ ಉಳಿದುಕೊಳ್ಳುತ್ತವೆ, ಮತ್ತು ಇತರ ಹಲವು ಬಹಳ ದೂರದ್ದಾಗಿ ಕಾಣುತ್ತವೆ, ಮುಂದಿನ ನಾಲ್ಕು ವರ್ಷಗಳಲ್ಲಿ ಅವುಗಳು ಫಲಕಾರಿಯಾಗುವ ಅವಕಾಶಗಳೇನೂ ಇಲ್ಲ. ಈ ಸಂಪಾದಕೀಯ ಹೀಗೆ ಕೊನೆಗೊಳ್ಳುತ್ತದೆ: ರಾಜಕೀಯ ಲೆಕ್ಕಪತ್ರದಲ್ಲಿ ಎಲ್ಲವನ್ನೂ ಸೇರಿಸಿದಾಗ ಜಮಾ ಕಾಲಂಗಿಂತ ಖರ್ಚಿನ ಕಾಲಂ ಉದ್ದವಾಗಿ ಕಾಣುತ್ತದೆ.
ಈ ಗೌರವಾನ್ವಿತ ಸಂಪಾದಕರುಗಳು ಸ್ವಲ್ಪ ಮಟ್ಟಿನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಇವೆಲ್ಲ, ಭಾರೀ ಹಣತೆತ್ತ ಜಾಹೀರಾತುಗಳ ಮಹಾಪೂರದ ನಡುವೆ ಈ ’ನಾಲ್ಕನೇ ಸ್ತಂಭ’ದ ನಲುಗಿ ಹೋದ ವಿಶ್ವಾಸಾರ್ಹತೆಯ ಎದುರು ಬಹಳ ಕಡಿಮೆಯೇ ಆಗಿ ಕಾಣುತ್ತದೆ.
ಪ್ರಚಾರದಿಂದ ಎಂದೂ ಹೊಟ್ಟೆ ತುಂಬಿಲ್ಲ, ತುಂಬುವುದೂ ಇಲ್ಲ ಎಂದು ಈ ಬಿಜೆಪಿ ಸರಕಾರಕ್ಕೆ ಹೇಳಬೇಕಾಗಿದೆ. ಅದನ್ನು ಜನತೆಯನ್ನು ಅಣಿನರೆಸಿ ಅವರ ಸಂಖ್ಯೆಯ ಬಲದಿಂದಲೇ ಹೇಳಬೇಕಾಗುತ್ತದೆ. ಪ್ರಸಕ್ತ ವಾಸ್ತವತೆಯೂ ಹೊಟ್ಟೆಗಳನ್ನು ತುಂಬಿಸುತ್ತಿಲ್ಲವಾದ್ದರಿಂದ ಈ ಸರಕಾರ ತನ್ನ ಜನ-ವಿರೋಧಿ ಧೋರಣೆಗಳನ್ನು ಕೈಬಿಡುವಂತಹ ಮತ್ತು ಕೋಮುಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದಕ್ಕೆ ಪೋಷಣೆಯನ್ನು ನಿಲ್ಲಿಸುವಂತಹ, ನಮ್ಮ ಗಣತಂತ್ರದ ಜಾತ್ಯಾತೀತ ಪ್ರಜಾಸತ್ತಾತ್ಮಕ ಬುನಾದಿಯನ್ನೇ ನಿರಾಕರಿಸದಂತಹ ಬಲವಂತಕ್ಕೆ ಒಳಪಡಿಸಬೇಕಾಗಿದೆ.