ಪಿರವಿ, ಸ್ವಾಹಂ, ವಾನಪ್ರಸ್ಥಂ ಸಿನಿಮಾ ನಿರ್ದೇಶಕ ಶಾಜಿ ಕರುಣ ನಿಧನ

‘ಪಿರವಿ, ಸ್ವಾಹಂ, ವಾನಪ್ರಸ್ಥಂ’ನಂತಹ ಮಹತ್ವದ ಸಿನಿಮಾಗಳನ್ನು ನಿರ್ದೇಶಿಸಿದ ಶಾಜಿ ಕರುಣ್ 73ನೆ ವಯ‌ಸ್ಸಿನಲ್ಲಿ ನಿಧನರಾಗಿದ್ದಾರೆ.

ಮೂರು ಸಿನಿಮಾಗಳ ಕಥಾವಸ್ತು ಬೇರೆಯಾಗಿದ್ದರು‌ ಸಹ ಸದಾ ದ್ವಂದ್ವ , ಅಸ್ಥಿರತೆಯಲ್ಲಿ ತೊಳಲಾಡುವ ಮನುಷ್ಯರ‌ ಬದುಕು, ಇದರಿಂದ ಉಂಟಾಗುವ ಕ್ಷೋಭೆ ಮತ್ತು ‘ಇದಕ್ಕಾಗಿ ಮಾನವರಾಗಿ ಹುಟ್ಟಬೇಕಿತ್ತೆ’ ಎನ್ನುವ ಪ್ರಶ್ನೆ ಸಾಮಾನ್ಯ ಎಳೆಯಾಗಿ ಹೆಣೆದುಕೊಂಡಿದೆ. ಕ್ಲಿಷ್ಟ, ಜಟಿಲ ಕಥನವನ್ನು ಆದಷ್ಟು ಸರಳೀಕರಣಗೊಳಿಸುವ ಮತ್ತು ಪರಿಣಾಮಕಾರಿಯಾಗಿ ಪ್ರಯೋಗಿಸುವ ಶಾಜಿಯವರ ಸಾಮರ್ಥ್ಯ ಒಂದು ಪಾಠವೂ ಹೌದು. ಸಿನಿಮಾಟೋಗ್ರಾಫರ್ ನಿರ್ದೇಶಕರಾದರೆ ಈ ಸಾಧ್ಯತೆಗಳು ಜಾಸ್ತಿ ಎನ್ನುವುದಕ್ಕೆ ಶಾಜಿ ಒಂದು ಉದಾಹರಣೆ.

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಕೇರಳದ ವಿದ್ಯಾರ್ಥಿ ರಾಜನ್ ನಿಗೂಢವಾಗಿ ನಾಪತ್ತೆಯಾಗುವ ನೈಜ ಘಟನೆಯನ್ನು ಆಧರಿಸಿದ ‘ಪಿರವಿ’ ಸಿನಿಮಾದ ರಾಘವನ್ ಚೆಕ್ಯಾರ್ ಕುಟುಂಬ ಕಣ್ಮರೆಯಾದ ಮಗನಿಗಾಗಿ ಕಡೆಯವರೆಗೂ ಕಾಯುತ್ತಾ ಛಿದ್ರಗೊಂಡ ಸ್ಥಿತಿಯಲ್ಲಿದೆ

ಇದನ್ನು ಓದಿ:ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆ ಸಂಪೂರ್ಣ ನಿಷೇಧ

ಮಗ ರಘುವಿನ ಹುಡುಕಾಟದಿಂದ ಶುರುವಾಗಿ ಕಡೆಗೆ ಅವನ ಕತೆ ಮುಗಿದಂತಿದೆ ಎನ್ನುವ ವಾಸ್ತವ ಅರಿವಾಗುವ ಕ್ಲೈಮ್ಯಾಕ್ಸ್ ನಡುವಿನ ಕಥನ ಮಹಾ ಯಾತನೆಯದು. ಕ್ಲೈಮ್ಯಾಕ್ಸ್ ನಲ್ಲಿ ಮತಿಭ್ರಮಣೆಗೊಂಡ ಚೆಕ್ಯಾರ್ ‘ರಘು ಬಂದ’ ಎಂದು ಬಡಬಡಿಸುವುದು, ವಾಸ್ತವ ಗೊತ್ತಿದ್ದರೂ ಈಗ ತಾನೆ ಸುದ್ದಿ ತಿಳಿಯಿತು ಎಂಬಂತೆ ದಿಗ್ಭ್ರಾಂತಿಗೊಂಡ ಮಗಳು ಮಾಲತಿ, ಎಲ್ಲವೂ ಅಯೋಮಯದ ಭ್ರಾಂತಿಯಲ್ಲಿರುವ ಕಾಯಿಲೆ ಪೀಡಿತ ಹೆಂಡತಿ, ಮನೆ ಒಳಗಿನ ಈ ತಲ್ಲಣಗಳನ್ನು ತನ್ನೊಳಗೆ ತುಂಬಿಕೊಂಡಂತಿರುವ ನದಿಯ ನೀರವತೆ ಇದೆಲ್ಲ ಒಳಗೊಂಡ ಇಡೀ ದೃಶ್ಯದ ಬೆಚ್ಚಿಬೀಳಿಸುವ ಗುಣ ನಮ್ಮನ್ನು ಕ್ಷೋಭೆಗೊಳಿಸುತ್ತದೆ.

ಸನ್ನಿ ಜೋಸೆಫ್ ಅವರ ಛಾಯಾಗ್ರಹಣ ಸಿನಿಮಾದ ಚಿತ್ರಕತೆಯೊಂದಿಗೆ ಬೆರೆತು ಹೋದಂತಿತ್ತು.

ಇದನ್ನು ಓದಿ:ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆ ಸಂಪೂರ್ಣ ನಿಷೇಧ

ವಿದ್ಯಾರ್ಥಿಗಳಾಗಿದ್ದಾಗ ನೋಡಿದ ಈ ಸಿನಿಮಾ ಕುರಿತು ನಡೆಸಿದ ಚರ್ಚೆ, ಉದ್ದೇಶಪೂರ್ವಕ ಮೆಲೋಡ್ರಾಮಾ ಎಂದು ವಾಗ್ವಾದ ಮಾಡಿದ್ದು ಮತ್ತು ಇದು ತುರ್ತುಪರಿಸ್ಥಿತಿಯ ದೌರ್ಜನ್ಯದ ಕತೆ ಎಂದು ಆಗಿನ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ಟೀಕಿಸಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದಂತಿದೆ.

‘ಸ್ವಾಹಂ’ ಸಿನಿಮಾದ ಪ್ರೊಟಗಾನಿಸ್ಟ್ ಅನ್ನಪೂರ್ಣಳ ಬದುಕು ಸಹ ಹೋರಾಟವೇ.

ಆಕೆಯ ಮಗನ ಸಾವು ಬದುಕನ್ನು ಮತ್ತಷ್ಟು ಕಗ್ಗಂಟುಗೊಳಿಸಿದರೆ ಮನೆಯಲ್ಲಿ ಮಗಳು ತಾಯಿ ಮತ್ತು ಸಹೋದರನಿಗೆ ಕಾಯುತ್ತಿರುವ ಅಸಂಗತ ಕ್ಲೈಮ್ಯಾಕ್ಸ್ ಪಿರವಿಯಲ್ಲಿ ಕಂಡೂ ಕಾಣದಂತಿದ್ದ ಅಬ್ಸರ್ಡಿಟಿಯನ್ನು ಇಲ್ಲಿ ಢಾಳಾಗಿ ನಿರೂಪಿಸುತ್ತದೆ. ಸಿನಿಮಾ ಕಲಾ ಮೀಮಾಂಸೆಗೆ ಉತ್ತಮ ಉದಾಹರಣೆ ‘ಸ್ವಾಹಂ’.

ಶಾಜಿಯವರ ಮಹತ್ವಾಕಾಂಕ್ಷಿ ಸಿನಿಮಾ ‘ವಾನಪ್ರಸ್ಥಂ’ನಲ್ಲಿ ಕಥಕ್ಕಳಿ ಕಲಾವಿದ ಕುಂಜಿಕುಟ್ಟನ್ ನ ‘ನಾನು ಯಾರು’ ಎನ್ನುವ ಅಸ್ತಿತ್ವದ ಪ್ರಶ್ನೆ ಚಿತ್ರಕತೆಯ ಆತ್ಮದಂತಿದೆ.

ಕೆಳಸ್ತರ ಜಾತಿಯ ಕುಂಜಿಕುಟ್ಟನ್ ಮಗನಾಗಿ ಮತ್ತು ತಂದೆಯಾಗಿ ಅಧಿಕೃತತೆಯನ್ನು ನಿರಾಕರಿಸಲ್ಪಡುತ್ತಾನೆ.

ಇಂತಹ ಗುರುತಿಲ್ಲದ ಆಸ್ತಿತ್ವದ ಪ್ರಶ್ನೆಯನ್ನು ಸಮಾಜೋ- ಸಾಂಸ್ಕೃತಿಕ ಬಿಕ್ಕಟ್ಟಾಗಿ ನೋಡದೆ ಕೇವಲ ಕಲಾವಿದನೊಬ್ಬನ ವ್ಯಕ್ತಿಗತ ಅಸ್ಮಿತೆಯನ್ನು ಮಾತ್ರ ಪರಿಗಣಿಸಿರುವುದು‌ ಈ ಸಿನಿಮಾದ ಮಿತಿ. ಶೋಷಿತ ಜಾತಿಯ ಕಲಾವಿದ ಗೋಚರ ಮತ್ತು ಅಗೋಚರ ಜಾತೀಯತೆಗೆ ಒಳಗಾಗುವ ಕಥನವನ್ನು ಕೈಬಿಡುವುದರ ಮೂಲಕ ಶಾಜಿ ಉತ್ತಮ ಅವಕಾಶ ಕಳೆದುಕೊಂಡರು.

ಇದರಾಚೆಗೂ ‘ವಾನಪ್ರಸ್ಥಂ’ ಮಹತ್ವದ ಪ್ರಯೋಗ. ಸಂತೋಷ್ ಶಿವನ್ ಅವರ ಛಾಯಾಗ್ರಹಣ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿತು.

ಸೂಕ್ಷ್ಮ ಸಂವೇದನೆಯ ಶಾಜಿ ‘ಕೇರಳ ಸರ್ಕಾರದ ಚಲನಚಿತ್ರ ನಿಗಮ’ದ ಅಧ್ಯಕ್ಷರಾಗಿದ್ದಾಗ ವರದಿಯಾದ ವಿವಾದಗಳು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು.

Donate Janashakthi Media

Leave a Reply

Your email address will not be published. Required fields are marked *