ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಯ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯತನವನ್ನು ಖಂಡಿಸಿ ಹಾಗೂ ಪಿಯುಸಿ ಪರೀಕ್ಷಾ ಮರು ಮೌಲ್ಯಮಾಪನದ ಶುಲ್ಕ ಇಳಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮೇ 21 ರಂದು ಹಾವೇರಿ ನಗರದ ತಹಶೀಲ್ದಾರ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಎಸ್‌ಎಫ್‌ಐ ಹಾವೇರಿ ಜಿಲ್ಲಾ ಅಧ್ಯಕ್ಷರಾದ ರೇಣುಕಾ ಕಹಾರ ಮಾತನಾಡಿ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವೂ ಕಳೆದ ಮೂರು ದಿನಗಳ ಹಿಂದೆ ಬಂದಿದ್ದು ಫಲಿತಾಂಶವು ಸಾಕಷ್ಟು ಗೊಂದಲಗಳಿಂದ ಕೂಡಿದ್ದು, ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಪರೀಕ್ಷಾ ಫಲಿತಾಂಶ ಮತ್ತು ಕಾಲೇಜುಗಳಿಗೆ ಬಂದಿರುವ ಪರೀಕ್ಷಾ ಫಲಿತಾಂಶದ ಪ್ರತಿಯಲ್ಲಿನ ಅಂಕಗಳಲ್ಲಿ ಕೂಡ ಸಾಕಷ್ಟು ವ್ಯತ್ಯಾಸಗಳಿವೆ. ಒಂದೊಂದು ವೆಬ್‌ಸೈಟ್‌ನಲ್ಲಿಯೂ ಕೂಡಾ ಒಂದೊಂದು ತರಹದ ಫಲಿತಾಂಶ ಪ್ರಕಟಗೊಂಡಿದೆ ಎಂದು ಟೀಕಿಸಿದರು. ಫಲಿತಾಂಶದ ದಿನದಿಂದಲೇ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೂ ಕೂಡಾ ಸಚಿವರು, ಶಿಕ್ಷಣ ಇಲಾಖೆಯ ಜವಾಬ್ದಾರಿಯುತ ಅಧಿಕಾರಿಗಳು ಈ ಕುರಿತು ಮಾತನಾಡದೆ ಬೇಜಾವಬ್ದಾರಿಯನ್ನು ಪ್ರದರ್ಶಿಸುತ್ತಿರುವುದು ಸರಿಯಲ್ಲ. ಪರೀಕ್ಷೆಗೆ ಹಾಜರಾಗಿದ್ದ ಸಾಕಷ್ಟು ವಿದ್ಯಾರ್ಥಿಗಳ ಫಲಿತಾಂಶವೂ ಕೂಡ ಇದುವರೆಗೂ ಪ್ರಕಟಗೊಂಡಿಲ್ಲ. ಮರು ಮೌಲ್ಯಮಾಪನಕ್ಕೆ, ಉತ್ತರ ಪತ್ರಿಕೆ ನಕಲು ಪ್ರತಿಗೆ ಶುಲ್ಕ ಏರಿಕೆ ಮಾಡಿದ್ದು ವಿದ್ಯಾರ್ಥಿಗಳ ಮೇಲೆ ಮತ್ತಷ್ಟು ಹೊರೆ ಹಾಕುವುದರ ಜೊತೆಗೆ ಶಿಕ್ಷಣ ಇಲಾಖೆಯ ಮೇಲೆ ವಿದ್ಯಾರ್ಥಿಗಳು ಇಟ್ಟಿರುವ ವಿಶ್ವಾಸವನ್ನು ಶಿಕ್ಷಣ ಇಲಾಖೆಯೇ ಕಳೆದುಕೊಳ್ಳುತ್ತಿದೆ. ಪೂರಕ ಪರೀಕ್ಷೆ, ಮರು ಮೌಲ್ಯಮಾಪನ, ಉತ್ತರ ಪತ್ರಿಕೆಯ ನಕಲು ಪ್ರತಿಯ ಶುಲ್ಕಗಳನ್ನು ಇಳಿಕೆ ಮಾಡಬೇಕು, ಶೈಕ್ಷಣಿಕ ಪ್ರಗತಿಗೆ ಅನುಕೂಲಕರವಾದ ನೀತಿಗಳನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಜಾರಿಗೊಳಿಸಬೇಕು, ಕೂಡಲೇ ಸರ್ಕಾರ ಪರೀಕ್ಷಾ ಫಲಿತಾಂಶದಲ್ಲಿನ ಗೊಂದಲಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.